ಆರೋಗ್ಯ ಕ್ಷೇತ್ರದ ಗರಿಮೆ, ಉದ್ಯಮ ಲೋಕದ ಹಿರಿಮೆ - ನಿತ್ಯ 600 ರೋಗಿಗಳಿಗೆ ಸೇವೆ ನೀಡುತ್ತಿರೋ ಗರಿಮಾ ತ್ರಿಪಾಠಿ

ಟೀಮ್​ ವೈ.ಎಸ್​. ಕನ್ನಡ

0

ಗರಿಮಾ ತ್ರಿಪಾಠಿ, ಆರೋಗ್ಯ ಸಂಸ್ಥೆಯೊಂದರ ಒಡತಿ, ಪ್ರತಿನಿತ್ಯ 600ಕ್ಕೂ ಹೆಚ್ಚು ರೋಗಿಗಳಿಗೆ ಅವರು ನೆರವಾಗುತ್ತಿದ್ದಾರೆ. ಆದ್ರೆ ಅವರ ಶಿಕ್ಷಣ ಮತ್ತು ಹಿಂದಿನ ಅನುಭವಗಳಿಗೂ, ಈಗ ಮಾಡುತ್ತಿರುವ ಕೆಲಸಕ್ಕೂ ಯಾವುದೇ ನಂಟಿಲ್ಲ. ಗರಿಮಾ ಭಾರತದ ಖ್ಯಾತ ವಿಶ್ವವಿದ್ಯಾನಿಲಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಬಳಿಕ ಹಾರ್ವರ್ಡ್ ವಿವಿಯಲ್ಲಿ ಪಿಂಗಾಣಿ ಬಗ್ಗೆ ಅಧ್ಯಯನಕ್ಕೆ ಮುಂದಾಗ್ತಾರೆ. ವಿಶ್ವದ ಇತಿಹಾಸದ ನಿಧಿಯಾಗಿರುವ ಲಲಿತಕಲಾ ಮ್ಯೂಸಿಯಂನಲ್ಲಿ ಹೆಚ್ಚಿನ ಶಿಕ್ಷಣ ಪಡೆದ ಗರಿಮಾ, ಡಿಲೊಯ್ಟ್ ಕನ್ಸಲ್ಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನಲ್ಲಿ ಬ್ಯುಸಿನೆಸ್ ಎನಾಲಿಸ್ಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಗರಿಮಾ ಹುಟ್ಟಿ ಬೆಳೆದಿದ್ದೆಲ್ಲ ಉತ್ತರ ಪ್ರದೇಶದಲ್ಲಿ. ಎಂಜಿನಿಯರಿಂಗ್ ಪದವಿ ಪಡೆದಿದ್ದು ಐಐಟಿ ಕಾನ್ಪುರದಲ್ಲಿ. ಕಾರ್ಪೊರೇಟ್ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೆಂಬುದೇ ಅವರ ಆಸೆಯಾಗಿತ್ತು. ಆದ್ರೆ ಅವರಲ್ಲಿದ್ದ ಮತ್ತಷ್ಟು ಆಸಕ್ತಿಗಳು ಗರಿಗೆದರಲಾರಂಭಿಸಿದ್ದವು, ಕೆಲಸದಿಂದ ಒಂದು ಬ್ರೇಕ್ ತೆಗೆದುಕೊಂಡು ಬೇರೆ ಏನನ್ನಾದ್ರೂ ಮಾಡಬೇಕೆಂಬ ಹಂಬಲ ಹೆಚ್ಚಾಗಿತ್ತು. ``ಪಿಂಗಾಣಿಗಳು ನಮ್ಮ ಇತಿಹಾಸದ ಬಗ್ಗೆ ಬಹಳಷ್ಟು ವಿಷಯಗಳನ್ನು ಬಿಚ್ಚಿಡುತ್ತವೆ. ಇದು ಅತ್ಯಂತ ಪುರಾತನವಾದ ಕಲೆ, ನನಗೆ ಮೊದಲಿನಿಂದಲೂ ಕಲೆಯ ಇತಿಹಾಸದ ಬಗ್ಗೆ ಆಸಕ್ತಿಯಿತ್ತು. ಡಿಲೊಯ್ಟ್‍ನಲ್ಲಿ ಉದ್ಯೋಗ ತ್ಯಜಿಸಿದ ನಾನು, ಬೋಸ್ಟನ್‍ನ ಎಸ್‍ಎಂಎಫ್‍ಎ ಮತ್ತು ಹಾರ್ವರ್ಡ್ ಸೆರಾಮಿಕ್ಸ್‍ನಲ್ಲಿ ಇತಿಹಾಸದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಮುಂದಾದೆ. ಅಲ್ಲಿ ನನಗೆ ಅತ್ಯಂತ ಸಮೃದ್ಧವಾದ ಅನುಭವವಾಯ್ತು, ಬೋಸ್ಟನ್‍ನಲ್ಲಿ ಮಹಾನ್ ಬೋಧಕರು, ಉದ್ಯಮಿಗಳು, ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರಿದ್ದಾರೆ. ಕೇಂಬ್ರಿಡ್ಜ್ ಮಸಾಚ್ಯೂಸೆಟ್ಸ್‍ನ ಸೆರಾಮಿಕ್ ಸ್ಟೂಡಿಯೋದಲ್ಲಿ ಕೂಡ ನಾನು ಪಾಠ ಮಾಡಿದ್ದೇನೆ. ಆ ದಿನಗಳು ನನಗೆ ಅತ್ಯಂತ ಸಂತೋಷವನ್ನ ಕೊಟ್ಟಿವೆ. ಆದ್ರೆ ಭಾರತದೆಡೆಗಿನ ಸೆಳೆತ, ಹೆತ್ತವರು, ಇಲ್ಲಿನ ಆಹಾರ ಮತ್ತು ಆರೋಗ್ಯ ನನ್ನನ್ನು ಮತ್ತೆ ತಾಯ್ನಾಡಿಗೆ ಕರೆತಂದಿದೆ'' ಎನ್ನುತ್ತಾರೆ ಗರಿಮಾ.

ಭಾರತ ಕರೆಯುತ್ತಿದೆ...

ಮನೆಯಿಂದ ದೂರವಿದ್ದ ಸಂದರ್ಭದಲ್ಲೇ ಗರಿಮಾಗೆ ಆರೋಗ್ಯದ ಮಹತ್ವದ ಅರಿವಾಗಿತ್ತು. ಡಿಜಿಟಲ್ ಕ್ರಾಂತಿಯ ಹೊರತಾಗಿಯೂ ಭಾರತದಲ್ಲಿ ವಯಸ್ಸಾದ ಹೆತ್ತವರಿಗೆ ಸರಿಯಾದ ಚಿಕಿತ್ಸೆ, ಆರೋಗ್ಯ ಕಾಪಾಡಿಕೊಳ್ಳುವ ವ್ಯವಸ್ಥೆಗಳು ಸಿಗುತ್ತಿಲ್ಲ ಅನ್ನೋದು ಅವರ ಅಳಲು. ಗರಿಮಾ ಅವರ ಜೊತೆಗಿರಿವ ಸಹ ಸಂಸ್ಥಾಪಕರೆಲ್ಲ ಮನೆಯಿಂದ ದೂರವಿದ್ರು, ಅನಾರೋಗ್ಯದಿಂದ ಬಳಲಿದ ಹೆತ್ತವರ ಬಗ್ಗೆ ಸೂಕ್ತ ಕಾಳಜಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಅನ್ನೋ ನೋವು ಅವರಲ್ಲೂ ಇತ್ತು. ಪ್ರಸ್ತುತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಇದೆ. ನಿಮ್ಮ ಮನೆಗೆ ಬಂದು ನಿಮ್ಮ ಪ್ರೀತಿ ಪಾತ್ರರ ಆರೈಕೆ ಮಾಡುವ ನರ್ಸ್‍ಗಳು ಹಾಗೂ ಅಟೆಂಡೆಂಟ್‍ಗಳ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸುವುದಿಲ್ಲ. ಅವರು ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎಂದಾದಲ್ಲಿ ಅವರನ್ನು ಬದಲಾಯಿಸುವ ಸೌಲಭ್ಯವಿಲ್ಲ. ಜೊತೆಗೆ ಬೆಲೆ ನಿಗದಿಯಲ್ಲೂ ಸ್ಪಷ್ಟತೆ ಇಲ್ಲದೇ ಇರುವುದರಿಂದ ಜನರಿಗೆ ಅನಾನುಕೂಲವಾಗ್ತಿದೆ ಅನ್ನೋದು ಗರಿಮಾ ಅವರ ಅಭಿಪ್ರಾಯ.

ಇದನ್ನು ಓದಿ

ಹೊಸ ದಾಖಲೆಯತ್ತ ಸ್ಟಾರ್ ಶೆಫ್ ಗೇಮ್ : ಇದು ಅಡುಗೆ ಭಟ್ಟರ ಆಟ..!

ಸದ್ಯ ಕೇರ್-24ನ ಸಿಇಓ ಆಗಿರುವ ವಿಪಿನ್ ಪಾಠಕ್, ಮನೆಯಲ್ಲೇ ಆರೋಗ್ಯ ಸೇವೆ ನೀಡುವ ಹೊಸ ಪರಿಕಲ್ಪನೆಯನ್ನು ಬಿಚ್ಚಿಟ್ರು. ಇದರ ಪ್ರತಿಫಲವೇ ಗರಿಮಾ ತ್ರಿಪಾಠಿ ಅವರ ಕೇರ್-24 ಸಂಸ್ಥೆ. ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ವೃತ್ತಿಪರ ಮತ್ತು ವಿಶ್ವಾಸಾರ್ಹ ಸೇವೆ ನೀಡುವುದೇ ಕೇರ್-24ನ ಉದ್ದೇಶ. ಪ್ರೀತಿಪಾತ್ರರ ಅನಾರೋಗ್ಯದಿಂದ ನಮ್ಮ ಕುಟುಂಬ ಒತ್ತಡದಲ್ಲಿದ್ದಾಗ ಇಂತಹ ಸೇವೆಗಳ ಅಗತ್ಯವಿರುತ್ತದೆ ಎನ್ನುತ್ತಾರೆ ಗರಿಮಾ. ಸ್ಟಾರ್ಟ್‍ಅಪ್ ಜಗತ್ತಿಗೆ ಎಂಟ್ರಿ ಕೊಡಲು ಮುಂದಾದ ಗರಿಮಾ ಅವರ ನಿರ್ಧಾರದ ಬಗ್ಗೆ ಆರಂಭದಲ್ಲಿ ಸ್ನೇಹಿತರು ಮತ್ತು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದರು. ಆರಾಮದಾಯಕವಾಗಿರುವ ಕಾರ್ಪೊರೇಟ್ ಉದ್ಯೋಗವನ್ನೇ ಮುಂದುವರಿಸುವಂತೆ ಸೂಚಿಸಿದ್ರು. ಆದ್ರೆ ಕೇರ್-24 ಗರಿಮಾ ಮತ್ತವರ ಸಂಸ್ಥಾಪಕ ತಂಡದ ಸಹಜ ಆಯ್ಕೆಯಾಗಿತ್ತು.

ಭಾರತೀಯ ಸಮಸ್ಯೆಗೆ ಪರಿಹಾರ ಹುಡುಕುತ್ತ...

ಅನುಭವಿ ವೈದ್ಯಕೀಯ ವೃತ್ತಿಪರರನ್ನು ಒಂದೆಡೆ ಸೇರಿಸಲಾಗಿದೆ. ಕೇರ್ 24ನಲ್ಲಿ ಮನೆಗಳಲ್ಲೇ ವಿಶ್ವದರ್ಜೆಯ ವೈದ್ಯಕೀಯ ಸೇವೆಯನ್ನು ಒದಗಿಸಲಾಗಿತ್ತದೆ. ವಾರದ ಏಳೂ ದಿನಗಳು, ದಿನದ 24 ಗಂಟೆಗಳೂ ಈ ಸೇವೆ ಲಭ್ಯವಿದೆ. ನರ್ಸ್‍ಗಳು, ಅಟೆಂಡರ್‍ಗಳು, ಪ್ರಮಾಣಿತ ಫಿಸಿಯೋ ಥೆರಪಿಸ್ಟ್‍ಗಳು ತಮ್ಮ ಪುನರ್ವಸತಿ ಪ್ರಕ್ರಿಯೆ ಮೂಲಕ ಜನರಿಗೆ ನೆರವಾಗುತ್ತಾರೆ. ಮೇಲ್ವಿಚಾರಣೆ ಮತ್ತು ಮುಖ್ಯ ಲಕ್ಷಣಗಳ ರೆಕಾರ್ಡಿಂಗ್, ಇಂಜೆಕ್ಷನ್, ಔಷಧ, ಅಭಿದಮನಿ ಮಿಶ್ರಣ, ಶಸ್ತ್ರಚಿಕಿತ್ಸೆ ನಂತರದ ಆರೈಕೆ, ಗಾಯದ ಆರೈಕೆ ಇವೆಲ್ಲವುಗಳ ಬಗ್ಗೆ ನರ್ಸ್‍ಗಳಿಗೆ ತರಬೇತಿ ನೀಡಲಾಗುತ್ತದೆ. ಅವರು ರೋಗಿಗಳಿಗೆ ಧೈರ್ಯ ತುಂಬುವ ಮೂಲಕ ಭಾವನಾತ್ಮಕ ನೆರವನ್ನು ಕೂಡ ನೀಡುವುದು ವಿಶೇಷ. ಫಿಸಿಯೋ ಥೆರಪಿಸ್ಟ್‍ಗಳು ಕೂಡ ತುರ್ತು ಸಂದರ್ಭಗಳನ್ನು ಎದುರಿಸಲು ಸಮರ್ಥರಾಗಿರುತ್ತಾರೆ. ರೋಗಿಗಳ ದೈನಂದಿನ ಕಾರ್ಯ, ಅವರ ಅನಾರೋಗ್ಯದ ಬಗ್ಗೆ ಸಂಪೂರ್ಣ ವಿವರವನ್ನು ಕೇರ್ ಟೇಕರ್‍ಗಳು ತಿಳಿದುಕೊಂಡಿರುತ್ತಾರೆ. ಮನೆಯಿಂದ ದೂರವಿರುವವರು ತಮ್ಮ ಪೋಷಕರ ಆರೈಕೆಗಾಗಿ ಇರವನ್ನು ಬಳಸಿಕೊಳ್ಳಬಹುದು.

ನರ್ಸ್‍ಗಳು, ಅಟೆಂಡೆಂಟ್‍ಗಳು ಮತ್ತಿ ಫಿಸಿಯೋಥೆರಪಿಸ್ಟ್‍ಗಳಿಗಾಗಿ ಗ್ರಾಹಕರು ಬುಕ್ಕಿಂಗ್ ಕೂಡ ಮಾಡಬಹುದು. ಯಾರು ಬರ್ತಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಬಹುದು. ಪುರುಷ ಅತವಾ ಮಹಿಳೆ, ಸಸ್ಯಾಹಾರಿ ಅಥವಾ ಮಾಂಸಾಹಾರಿ ಹೀಗೆ ತಮ್ಮ ಆದ್ಯತೆಗಳನ್ನು ಕೂಡ ಅವರು ಬುಕ್ಕಿಂಗ್ ಸಂದರ್ಭದಲ್ಲಿ ನಮೂದಿಸಬಹುದು. ಇಲ್ಲಿ ಎಲ್ಲವೂ ಪಾರದರ್ಶಕವಾಗಿದ್ದು, ಇದೊಂದು ಮುಕ್ತ ವ್ಯವಸ್ಥೆ ಎನ್ನುತ್ತಾರೆ ಗರಿಮಾ.

ಕೇರ್-24ನಲ್ಲಿ ಅತ್ಯಂತ ತ್ವರಿತವಾದ ಸೇವೆ ಲಭ್ಯವಿದೆ. 30 ನಿಮಿಷಗಳೊಳಗೆ ಗ್ರಾಹಕರಿಗೆ ಅಪಾಯಿಂಟ್‍ಮೆಂಟ್ ದೃಢಪಡಿಸುವ ಫೋನ್ ಕರೆ ಬರುತ್ತದೆ. ``ವಿಶ್ವಾಸಾರ್ಹ ಮತ್ತು ನುರಿತ ಸಿಬ್ಬಂದಿಯನ್ನು ಗಳಿಸುವುದೇ ಆರಂಭಿಕ ಸವಾಲಾಗಿತ್ತು, ಸಮಯದ ಜೊತೆ ಜೊತೆಗೆ ನಾವು ಬಹಳಷ್ಟು ವಿಷಯಗಳನ್ನು ಕಲಿತಿದ್ದೇವೆ, ಈಗ ನಮ್ಮ ಕೇರ್‍ಗಿವರ್‍ಗಳನ್ನು ಕಳುಹಿಸುವ ಮುನ್ನ 7 ಹಂತದ ಪ್ರಕ್ರಿಯೆ ಇರುತ್ತದೆ'' ಅಂತಾ ಗರಿಮಾ ಮಾಹಿತಿ ನೀಡಿದ್ದಾರೆ.

ತಂತ್ರಜ್ಞಾನಕ್ಕೆ ಆದ್ಯತೆ...

ಕೇರ್-24 ಕಾರ್ಯಾಚರಣೆ ಮತ್ತು ಸೇವೆಯನ್ನು ಸರಳೀಕರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಹಾಗೂ ವಿಶ್ವಾಸಾರ್ಹ ಅನುಭವ ಒದಗಿಸುವುದರ ಜೊತೆಗೆ ಲಾಭವನ್ನು ಹೆಚ್ಚಿಸಿಕೊಳ್ಳಲು ತಂತ್ರಜ್ಞಾನ ನೆರವಾಗುತ್ತಿದೆ ಅನ್ನೋದು ಗರಿಮಾ ಅವರ ಅನುಭವದ ಮಾತು. ಪ್ರತಿನಿತ್ಯ ಕೇರ್-24 500ಕ್ಕೂ ಹೆಚ್ಚು ರೋಗಿಗಳಿಗೆ ಅಗತ್ಯ ಸೇವೆ ನೀಡುತ್ತಿದೆ, ಪ್ರತಿ ತಿಂಗಳು 600ಕ್ಕೂ ಹೆಚ್ಚು ನರ್ಸ್‍ಗಳು ಮತ್ತು ಫಿಸಿಯೋಥೆರಪಿಸ್ಟ್‍ಗಳಿಗೆ ಸಂಪಾದನೆಗೆ ನೆರವಾಗುತ್ತಿದೆ.

ಗರಿಮಾ ತ್ರಿಪಾಠಿ ಅವರಿಗೆ ಉದ್ಯಮಶೀಲನೆ ನಿರಂತರ ಸುಧಾರಣೆ ಮತ್ತು ಸಾಧಿಸುವ ಒಂದು ಪ್ರಕ್ರಿಯೆ. ಉದ್ಯಮಿಯಾಗಬೇಕು ಎಂದು ಹಂಬಲಿಸುವುದಲ್ಲ, ಬದಲಾಗಿ ನಿಮ್ಮ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟು ಅದನ್ನು ಸಾಕಾರಗೊಳಿಸುವುದು ಮುಖ್ಯ ಅನ್ನೋದು ಗರಿಮಾ ಅವರ ಸಲಹೆ. ``ವಿಶೇಷವಾಗಿ ಮಹಿಳೆಯರಿಗೆ ಸದ್ಯ ದೇಶದಲ್ಲಿ ಉದ್ಯಮಶೀಲತೆಯ ಅವಕಾಶ ಅತ್ಯುತ್ತಮವಾಗಿದೆ. ಮಹಿಳಾ ಉದ್ಯಮಿಗಳ ಸಾಮಥ್ರ್ಯದ ಬಗ್ಗೆ ಜನರು ಕೂಡ ನಂಬಿಕೆ ಇಟ್ಟಿದ್ದಾರೆ. ಸ್ನೇಹಿತರು, ಕುಟುಂಬದವರು ಮತ್ತು ಹೂಡಿಕೆದಾರರಿಂದ ನಮಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಹೆಚ್ಚುತ್ತಿರುವ ಮಹಿಳಾ ಉದ್ಯಮಿಗಳ ಸಂಖ್ಯೆ ಕೂಡ ಇಡೀ ವಲಯದಲ್ಲೇ ಆತ್ಮವಿಶ್ವಾಸ ಮೂಡಿಸಿದೆ ಎನ್ನುತ್ತಾರೆ ಗರಿಮಾ. ಇವರೊಬ್ಬ ಬಹುಮುಖ ಪ್ರತಿಭೆ. ಸೆರಾಮಿಸ್ಟ್ ಆಗಿ, ಎಂಜಿನಿಯರ್ ಆಗಿ , ಉದ್ಯಮಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಈಗ ಪ್ರತಿದಿನ 600ಕ್ಕೂ ಹೆಚ್ಚು ರೋಗಿಗಳಿಗೆ ನೆರವಾಗುತ್ತಿರುವುದು ನಿಜಕ್ಕೂ ಗರಿಮಾ ತ್ರಿಪಾಠಿ ಅವರ ಪಾಲಿಗೆ ಗರಿಮೆಯೇ ಸರಿ.

ಇದನ್ನು ಓದಿ:

ಅಂದು ಹೊಟೇಲ್​​ ಕಾರ್ಮಿಕ- ಇಂದು ಜನರ ಹೆಬ್ಬಯಕೆ ತೀರಿಸೋದೇ ದೊಡ್ಡ ಕಾಯಕ- ಇದು ಹೋಳಿಗೆ ಮನೆಯ ಕಥೆ

ಮಾನವ ತ್ಯಾಜ್ಯಕ್ಕೂ ಡಿಮ್ಯಾಂಡ್ ಇದೆ- ಇಂಗ್ಲೆಂಡ್​​ನಲ್ಲಿ ಹ್ಯೂಮನ್ ವೇಸ್ಟ್​​ನಿಂದ ಚಲಿಸುತ್ತದೆ ಬಯೋ ಬಸ್

ಇಳಿವಯಸ್ಸಿನ ಉತ್ಸಾಹಕ್ಕೆ ಉಡುಗೊರೆಯಾಯ್ತು Ask Chitvish

ಲೇಖಕರು: ಬಿಂಜಲ್ ಶಾ
ಅನುವಾದಕರು: ಭಾರತಿ ಭಟ್

Related Stories

Stories by YourStory Kannada