ಜೈಲುಗಳಿಗೆ ಹೈಟೆಕ್ ಟಚ್ ನೀಡಿದ ಜೈಲು ಹಕ್ಕಿ ಈ ಟೆಕ್ಕಿ

ವಿಶಾಂತ್​

ಜೈಲುಗಳಿಗೆ ಹೈಟೆಕ್ ಟಚ್ ನೀಡಿದ ಜೈಲು ಹಕ್ಕಿ ಈ ಟೆಕ್ಕಿ

Thursday December 31, 2015,

3 min Read

ಏನಾದ್ರೂ ಸಾಧಿಸಬೇಕು ಅನ್ನೋ ಛಲ ಇರೋರಿಗೆ ಯಾವ ಪರಿಸ್ಥಿತಿಯಲ್ಲಿದ್ದರೇನು ಅಥವಾ ಎಲ್ಲಿದ್ದರೇನು? ತಮ್ಮ ಗುರಿಯನ್ನು ಮುಟ್ಟೇ ಮುಟ್ಟುತ್ತಾರೆ. ಈಗ ಅಂತದ್ದೇ ವ್ಯಕ್ತಿ ಕುರಿತ ಚಿತ್ರಣ ನಾವು ನಿಮಗೆ ಈ ಯುವರ್‍ಸ್ಟೋರಿಯಲ್ಲಿ ಹೇಳ್ತಿದ್ದೇವೆ.

image


ಈತ ಅಮಿತ್ ಕುಮಾರ್ ಮಿಶ್ರಾ

ಅಮಿತ್ ಕುಮಾರ್ ಮಿಶ್ರಾ. ಗುರ್‍ಗಾವ್ ಮೂಲದ ಸಾಫ್ಟ್​​ವೇರ್ ಎಂಜಿನಿಯರ್. 2011ರಲ್ಲಿ ಅವರ ಮದುವೆಯಾಯ್ತು. ಆದ್ರೆ ವಿವಾಹವಾದ ಎರಡೇ ವರ್ಷಗಳಲ್ಲಿ ಅಂದ್ರೆ 2013ರಲ್ಲಿ ಅವರ ಪತ್ನಿ ಕಾರಣಾಂತರಗಳಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡುಬಿಟ್ರು. ಮಗಳ ಸಾವಿಗೆ ವರದಕ್ಷಿಣ ಕಿರುಕುಳ ಕೊಡುತ್ತಿದ್ದ ಪತಿಯೇ ಕಾರಣ ಅಂತ ಆಕೆಯ ಮನೆಯವರು ಅಮಿತ್ ವಿರುದ್ಧ ದೂರು ದಾಖಲಿಸಿದ್ರು. ಹೀಗಾಗಿ ಅಮಿತ್ ಕುಮಾರ್ ಮಿಶ್ರಾ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಯ್ತು. ಹೀಗೆ 13 ತಿಂಗಳ ಕಾಲ ಅಮಿತ್ ಸೆರೆವಾಸ ಅನುಭವಿಸಬೇಕಾಯ್ತು. ಜೊತೆಗೆ ಅಮಿತ್ ಪೋಷಕರೂ ಕೂಡ 3 ತಿಂಗಳು ಕಾರಾಗೃಹದಲ್ಲಿ ಬಂಧಿಯಾಗಿದ್ದರು.

image


ಅಮಿತ್ ಪ್ರಕಾರ ಪತ್ನಿ ಸಾವಿಗೆ ಅವರು ಕಾರಣ ಅಲ್ಲವಂತೆ. ಹೀಗಾಗಿಯೇ ಮಾಡದ ತಪ್ಪಿಗೆ ಜೈಲು ಸೇರಿದ ನೋವಿದ್ದರೂ, ಅವರು ಸುಮ್ಮನೆ ಕೂರಲಿಲ್ಲ. ಬದಲಿಗೆ ಮೂಲತಃ ಸಾಫ್ಟ್​​ವೇರ್ ಎಂಜಿನಿಯರ್ ಆಗಿದ್ದ ಅವರು ಜೈಲಿನ ವ್ಯವಸ್ಥೆಯಲ್ಲಿರುವ ನ್ಯೂನ್ಯತೆಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ಆ ತಂತ್ರಜ್ಞಾನ ಅಳವಡಿಸುವ ಮೂಲಕ ಲೋಪದೋಷಗಳನ್ನು ಸರಿಪಡಿಸಬಹುದು ಅನ್ನೋ ಐಡಿಯಾ ಹೊಳೆಯಿತು. ಹೀಗೆ ಅವರಲ್ಲಿದ್ದ ಸಾಫ್ಟ್​​ವೇರ್ ಎಂಜಿನಿಯರ್ ತಕ್ಷಣ ಕಾರ್ಯಪ್ರವೃತ್ತನಾದ. ನೋಡ ನೋಡುತ್ತಿದ್ದಂತೆಯೇ ತನ್ನಂತೆಯೇ ಚೆನ್ನಾಗಿ ಓದಿಕೊಂಡಿದ್ದ ಕೆಲ ಸಮಾನ ಮನಸ್ಕ ಖೈದಿಗಳೊಂದಿಗೆ ಸೇರಿ ‘ಫೀನಿಕ್ಸ್’ ಎಂಬ ಒಂದು ಸಾಫ್ಟ್​​ವೇರ್‍ಅನ್ನು ಅಭಿವೃದ್ಧಿಪಡಿಸಿಯೇಬಿಟ್ಟರು. ಆ ಮೂಲಕ ಜೈಲಿನ ನಿರ್ವಹಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು.

ಫೀನಿಕ್ಸ್ ಕೆಲಸವೇನು?

‘ಏನ್ ನಡೀತಿದೆ ಅನ್ನೋ ಅರಿವಿಗೆ ಬರುವ ಮುಂಚೆಯೇ ನನ್ನನ್ನು ಪೊಲೀಸರು ಜೈಲಿಗೆ ಕಳುಹಿಸಲಾಗಿತ್ತು. ಮೊದಲ ಮೂರು ತಿಂಗಳು ಯಾವುದೇ ರೀತಿಯ ಕಾನೂನು ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ನಾನು ಆ ದಿನಗಳಲ್ಲಿ ತುಂಬಾ ಗೊಂದಲದಲ್ಲಿದ್ದೆ. ದಿನಗಳು ಕಳೆದಂತೆ ನನಗೆ ಬೇರೆ ಖೈದಿಗಳೂ ಪರಿಚಯವಾದರು. ಅವರಲ್ಲಿ ಹಲವರಿಗೆ ಅವರ ಕೇಸ್ ಯಾವ ಹಂತದಲ್ಲಿದೆ ಅನ್ನೋದೇ ಗೊತ್ತಿರಲಿಲ್ಲ. ಜೊತೆಗೆ ಕಾರಾಗೃಹ ಅಧಿಕಾರಿಗಳಿಗೂ ನೂರಾರು ಖೈದಿಗಳ ವಿಚಾರಣಾ ಪ್ರಕ್ರಿಯೆ ಕುರಿತು ಮಾಹಿತಿ ಇಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಹೀಗಾಗಿಯೇ ಅದಕ್ಕೇನಾದ್ರೂ ಒಂದು ಪರಿಹಾರ ಹುಡುಕಲೇಬೇಕು ಅಂತ ನಾನು ಯೋಚಿಸಿದೆ. ಅದರ ಪ್ರತಿಫಲವೇ ಫೀನಿಕ್ಸ್’ ಅಂತ ನೆನಪುಗಳನ್ನು ಸ್ಮರಿಸಿಕೊಳ್ತಾರೆ ಅಮಿತ್.

image


ಫೀನಿಕ್ಸ್​​ನಲ್ಲಿ ಪ್ರತಿಯೊಬ್ಬ ಖೈದಿಯ ಸಂಪೂರ್ಣ ಹಿನ್ನೆಲೆ, ಅಪರಾಧ ಪ್ರಕರಣಗಳು, ಶಿಕ್ಷೆ, ಸೆಕ್ಷನ್‍ಗಳು, ವಿಚಾರಣೆಯ ದಿನಾಂಕ, ಪ್ರಸ್ತುತ ಸ್ಥಿತಿ ಸೇರಿದಂತೆ ಪೂರ್ವಾಪರ ಮಾಹಿತಿಯನ್ನು ಸಂಗ್ರಹಿಸಿ ಇಡಲಾಗುತ್ತೆ. ಬಳಿಕ ಆತನ ಬೆರಳಚ್ಚಿನ ಮೂಲಕ ಆ ಮಾಹಿತಿಯನ್ನು ಪಡೆಯಬಹುದು. ಹೀಗೆ ಜೈಲು ಅಧಿಕಾರಿಗಳು ಪ್ರತಿಯೊಬ್ಬ ಖೈದಿಯ ವಿಚಾರಣಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ಇಷ್ಟು ಮಾತ್ರವಲ್ಲಿ ಸಾಮಾನ್ಯವಾಗಿ ಜೈಲುಗಳಲ್ಲಿ ಖೈದಿಗಳು ಟೂತ್ ಪೇಸ್ಟ್, ಸೋಪ್‍ನಂತೆ ಏನಾದ್ರೂ ವಸ್ತುಗಳನ್ನು ಖರೀದಿಸಲು, ಅಥವಾ ತಿಂಡಿ ತಿನಿಸು ಕೊಳ್ಳಲು ಕೂಪನ್‍ಗಳನ್ನು ನೀಡಲಾಗುತ್ತದೆ. ಆದ್ರೆ ಸಂಖ್ಯೆಗಳ ಆಧಾರದಲ್ಲಿ ಈ ಕೂಪನ್‍ಗಳನ್ನು ಪ್ರಿಂಟ್ ಮಾಡುವ ಕಾರಣ ಕೆಲವೊಮ್ಮೆ ತಮಗೆ ತಿಳಿಯದೆಯೇ ಖೈದಿಗಳು ಹೆಚ್ಚು ಖರ್ಚು ಮಾಡಿಬಿಡುತ್ತಿದ್ದರು. ಇದು ಬಡ ಜೈಲುವಾಸಿಗಳನ್ನು ಸಂಕಷ್ಟಕ್ಕೀಡು ಮಾಡುತ್ತಿತ್ತು. ಹೀಗಾಗಿಯೇ ಅಂಥವರಿಗೂ ಸಹಾಯವಾಗಲಿ ಎಂದು ಅಮಿತ್ ಕುಮಾರ್ ಮಿಶ್ರಾ ಅದಕ್ಕೂ ಒಂದು ಸರಳ ಉಪಾಯ ಹುಡುಕಿದ್ರು. ಪ್ರತಿ ತಿಂಗಳು ಖೈದಿಗಳ ಹಣ ಅವರ ಅಕೌಂಟ್ ಸೇರುತ್ತದೆ. ಅವರು ಏನೇ ಖರೀದಿಸಬೇಕು ಅಂದ್ರೂ ತಮ್ಮ ಬೆರಳಚ್ಚು ಗುರುತು ನೀಡಿದ್ರೆ ಸಾಕು. ಅವರು ಖರೀದಿಸಿದ ವಸ್ತುವಿನ ಹಣ ಅವರ ಅಕೌಂಟ್‍ನಿಂದಲೇ ನೇರವಾಗಿ ಕಡಿತಗೊಳ್ಳುತ್ತದೆ.

image


ಅಮಿತ್ ಮುಂದಿನ ಯೋಜನೆಗಳು?

ಹೀಗೆ ಜೈಲಿನಲ್ಲಿದ್ದುಕೊಂಡೇ ತಮ್ಮ ಅದ್ಭುತ ಪ್ರತಿಭೆ ಮೂಲಕ ಖೈದಿಗಳು ಹಾಗೂ ಜೈಲಿನ ಅಧಿಕಾರಿಗಳಿಂದ ಭೇಷ್ ಎನಿಸಿಕೊಂಡಿದ್ದರು ಅಮಿತ್. ಬಳಿಕ ಜುಲೈ 2014ರಲ್ಲಿ ಅವರ ಮೇಲಿನ ಎಲ್ಲಾ ಪ್ರಕರಣಗಳಿಂದಲೂ ಅಮಿತ್ ಖುಲಾಸೆಗೊಂಡ್ರು. ಜೈಲಿನಿಂದ ಹೊರಬಂದ ಬಳಿಕ ಮತ್ತೆ ಹೊಸ ಜೀವನ ಆರಂಭಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟರು. ಅದರಂತೆ ಇದೇ 2015ರ ಫೆಬ್ರವರಿಯಲ್ಲಿ ಇನ್ವೇಡರ್ ಟೆಕ್ನಾಲಜೀಸ್ ಎಂಬ ಕಂಪನಿ ಪ್ರಾರಂಭಿಸಿದ್ರು. ಆ ಮೂಲಕ ಫೀನಿಕ್ಸ್​ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಹರ್ಯಾಣಾ ರಾಜ್ಯದ ಎಲ್ಲಾ ಜೈಲುಗಳಿಗೆ ಪೂರೈಸಿದರು. ಕ್ರಮೇಣ ಫೀನಿಕ್ಸ್ ಕಾರ್ಯಕ್ಷಮತೆ ಮೆಚ್ಚಿ, ಅರುಣಾಚಲ ಪ್ರದೇಶ ರಾಜ್ಯವೂ ಅದನ್ನು ಪಡೆಯಲು ಮುಂದೆ ಬಂದಿದೆ. ಜೊತೆಗೆ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್ ಹಾಗೂ ಅಸ್ಸಾಂ ರಾಜ್ಯಗಳೊಂದಿಗೂ ಈ ಕುರಿತು ಮಾತುಕತೆಗಳು ನಡೆಯುತ್ತಿವೆ. ಅಷ್ಟೇ ಯಾಕೆ ಕೆಲವೇ ತಿಂಗಳ ಹಿಂದೆ ಜೈಲಿನಲ್ಲಿದ್ದ ಇದೇ ಅಮಿತ್ ಕುಮಾರ್ ಮಿಶ್ರಾ ಈಗ ಭೋಂಡ್ಸಿ ಜೈಲ್ ಆವರಣದ ಸರ್ಕಾರೀ ಕ್ವಾಟ್ರಸ್‍ನಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ತಮ್ಮ ತಂಡದೊಂದಿಗೆ ಜೈಲುಗಳು ಮತ್ತಷು ವ್ಯವಸ್ಥಿತವಾಗಿ ಕೆಲಸ ಮಾಡುವಂತಹ ಹೊಸ ತಂತ್ರಜ್ಞಾನ ಹಾಗೂ ಸಾಫ್ಟ್​​ ವೇರ್‍ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

image


ಇದೇ ಸೆಪ್ಟೆಂಬರ್ 17ರಂದು ಗೃಹ ಸಚಿವಾಲಯದಿಂದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಂದು ಪತ್ರ ಬಂದಿತ್ತು. ಕಾರಾಗೃಹ ವ್ಯವಸ್ಥೆಯನ್ನು ಸರಳವಾಗಿ ನಿರ್ವಹಿಸಲು ಸಹಕರಿಸುವ ಮೂರು ಸಾಫ್ಟ್​​ವೇರ್‍ಗಳನ್ನು ಬಳಸುವಂತೆ ಸೂಚಿಸಲಾಗಿತ್ತು. ಅದರಲ್ಲಿ ಖುದ್ದು ಜೈಲಿನಲ್ಲಿದ್ದ ಖೈದಿಗಳೇ ಸೇರಿ ಅಭಿವೃದ್ಧಿಪಡಿಸಿದ್ದ ಫೀನಿಕ್ಸ್ ಸಾಫ್ಟ್​​ವೇರ್ ಕೂಡ ಒಂದು.

ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಅಮಿತ್ ಅವರಿಗೆ ಕಳೆದು ಹೋದ ದಿನಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಅನ್ನೋದರ ಕುರಿತು ಈಗಲೂ ಗೊಂದಲದಲ್ಲಿದ್ದಾರೆ. ಹಾಗೇ ಸ್ವಂತ ಮಗನಂತೆ ಕಾಣುತ್ತಿದ್ದ ಅತ್ತೆ, ಮಾವ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಹೋಗುವಂತೆ ಮಾಡಿದ್ದನ್ನು ಈಗಲೂ ನಂಬೋಕ್ಕಾಗ್ತಿಲ್ಲ ಅಂತಾರೆ ಅವರು. ಈ ಕುರಿತು ಪ್ರಕರಣದ ತನಿಖೆ ನಡೆಸಿದ ತನಖಾಧಿಕಾರಿಯನ್ನೂ ಅಮಿತ್ ಭೇಟಿ ಮಾಡಿದ್ದರಂತೆ. ‘ನಿನ್ನ ತಪ್ಪಿಲ್ಲ, ಆದ್ರೆ ಸಮಯ, ಸಂದರ್ಭಗಳು ನಿನ್ನ ವಿರುದ್ಧವಾಗಿದ್ದವು’ ಅಂತ ಅವರು ಹೇಳಿದ್ರು ಅಂತ ಒಮ್ಮೆ ದೀರ್ಘವಾಗಿ ಉಸಿರಾಡುತ್ತಾರೆ ಅಮಿತ್.