ಹೂಡಿಕೆದಾರರಿಗೆ ಹುಲ್ಲು ಹಾಸಿನ ಸ್ವಾಗತ

ಟೀಮ್ ವೈ.ಎಸ್.ಕನ್ನಡ

ಹೂಡಿಕೆದಾರರಿಗೆ ಹುಲ್ಲು ಹಾಸಿನ ಸ್ವಾಗತ

Wednesday February 03, 2016,

4 min Read

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ-2016ರ ಪ್ರಮುಖ ಆಕರ್ಷಣೆ ಅಂದ್ರೆ ದೇಶದ ನಾನಾ ಭಾಗಗಳು ಹಾಗೂ ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಉದ್ಯಮಿಗಳು. ಕಾರ್ಯಕ್ರಮದಲ್ಲಿ ದಿಗ್ಗಜ ಉದ್ಯಮಿಗಳು ಪಾಲ್ಗೊಂಡಿರುವುದು ವಿಶೇಷ. ಅವರಿಗೆಲ್ಲ ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿಕೊಂಡಿವೆ. ಅಷ್ಟೇ ಅಲ್ಲ ಅದಕ್ಕೆ ಅಗತ್ಯವಾದ ಮೂಲಸೌಕರ್ಯವನ್ನು ಒದಗಿಸುವುದಾಗಿ ಭರವಸೆ ನೀಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಸಾಗಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ತತ್ವ ಹೂಡಿಕೆ ಸಮಾವೇಶದಲ್ಲಿ ಪ್ರತಿಧ್ವನಿಸಿದೆ.

image


ಟ್ರಾಫಿಕ್​ ಸಮಸ್ಯೆ ಪರಿಹರಿಸುವುದು ಸವಾಲು - ನಿತಿನ್​ ಗಡ್ಕರಿ

''ಕೇವಲ ಭಾರತ ಮಾತ್ರವಲ್ಲದೆ, ವಿವಿಧ ರಾಷ್ಟ್ರಗಳ ಉದ್ಯಮಿಗಳು ಹೂಡಿಕೆದಾರರನ್ನು ಒಂದೆಡೆ ಸೇರಿಸಿರುವುದು ಕರ್ನಾಟಕ ರಾಜ್ಯದ ಹೆಗ್ಗಳಿಕೆ'' ಅಂತಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಣ್ಣಿಸಿದ್ರು. ಬೆಂಗಳೂರನ್ನು ಕಾಡುತ್ತಿರುವ ಟ್ರಾಫಿಕ್ ಸಮಸ್ಯೆಯ ಬಗ್ಗೆ ಗಡ್ಕರಿ ಪ್ರಸ್ತಾಪಿಸಿದ್ರು. ''ಈ ಸಮಸ್ಯೆಯನ್ನು ಪರಿಹರಿಸುವುದು ನಿಜಕ್ಕೂ ಸವಾಲಿನ ಕೆಲಸ, ಆದ್ರೆ ಈ ನಿಟ್ಟಿನಲ್ಲಿ ನಾವು ಗಮನಹರಿಸುತ್ತೇವೆ. ಇದಕ್ಕೆ ಬೇಕಾದ ಎಲ್ಲ ರೀತಿಯ ನೆರವನ್ನೂ ಕರ್ನಾಟಕ ಸರ್ಕಾರಕ್ಕೆ ಕೇಂದ್ರ'' ಅಂತಾ ಭರವಸೆ ನೀಡಿದ್ರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವದಲ್ಲಿ ಮೋದಿ ಸರ್ಕಾರ ನಂಬಿಕೆ ಇಟ್ಟಿರುವುದಾಗಿ ಸ್ಪಷ್ಟಪಡಿಸಿದ್ರು. ಸದ್ಯ ಪ್ರತಿ ದಿನ 18 ಕಿಲೋ ಮೀಟರ್ ರಸ್ತೆ ನಿರ್ಮಾಣ ಮಾಡಲಾಗ್ತಿದೆ, ಮಾರ್ಚ್ ವೇಳೆಗೆ ಪ್ರತಿನಿತ್ಯ 30 ಕಿಲೋ ಮೀಟರ್ ರಸ್ತೆ ನಿರ್ಮಾಣದ ಗುರಿ ತಲುಪುವುದಾಗಿ ಅಭಯವಿತ್ತರು. ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ರು.

ಅಭಿವೃದ್ಧಿಯಲ್ಲಿ ತಾರತಮ್ಯವಿಲ್ಲ - ವೆಂಕಯ್ಯ ನಾಯ್ಡು

''ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ-ರಾಜ್ಯ ಎಂಬ ತಾರತಮ್ಯವಿಲ್ಲ, ರಾಜ್ಯಗಳು ಅಭಿವೃದ್ಧಿಯಾದ್ರೆ ದೇಶ ಅಭಿವೃದ್ಧಿಯಾದಂತೆ, ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯುತ್ತಮ ಸ್ಥಳ'' ಅಂತಾ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು. ''ಕರ್ನಾಟಕ ಸರ್ಕಾರ ಉದ್ಯಮಗಳಿಗೆ ನೀಡುವ ಎಲ್ಲ ಗ್ಯಾರಂಟಿಗಳಿಗೆ ಕೇಂದ್ರ ಸರ್ಕಾರ ಕೌಂಟರ್​ ಗ್ಯಾರಂಟಿ ಕೊಡುತ್ತದೆ. ಕರ್ನಾಟಕದ ಎಲ್ಲ ಪ್ರಯತ್ನಗಳಿಗೆ ಕೇಂದ್ರದ ಸಂಪೂರ್ಣ ಸಹಕಾರವಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಇರಬಹುದು. ಕಾಂಗ್ರೆಸ್​ ಮತ್ತು ಬಿಜೆಪಿ ಶತ್ರುಗಳಲ್ಲ, ರಾಜಕೀಯ ಭಿನ್ನಾಭಿಪ್ರಾಯ ಇರಬಹುದಷ್ಟೆ. ಆದರೆ ರಾಷ್ಟ್ರಾಭಿವೃದ್ಧಿಯ ವಿಷಯ ಬಂದಾಗ ಎಂದೂ ಪಕ್ಷಬೇಧ ಮಾಡುವುದಿಲ್ಲ, ಇದೇ ನಮ್ಮ ಪ್ರಧಾನಿ ಮೋದಿ ಅವರ ಉದ್ದೇಶ'' ಅಂತಾ ವೆಂಕಯ್ಯ ನಾಯ್ಡು ಹೇಳಿದ್ರು.

ಮೂಲಸೌಕರ್ಯಕ್ಕೆ ಒತ್ತು ನೀಡಿ - ರತನ್​ ಟಾಟಾ

ಇನ್ನು ಕರ್ನಾಟಕಕ್ಕೆ ರತನ್​ ಟಾಟಾ ಸೂಪರ್ ರೇಟಿಂಗ್ ಕೊಟ್ಟಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಲು ಮುಂದಾದ್ರೆ ಪ್ರತಿಯೊಬ್ಬರೂ ಕರ್ನಾಟಕದತ್ತ ಗಮನಹರಿಸಲೇಬೇಕು, ಇದು ತಮ್ಮ ಅನುಭವದ ಮಾತು ಅಂತಾ ರತನ್ ಟಾಟಾ ಶ್ಲಾಘಿಸಿದ್ರು. ಕರ್ನಾಟಕ ಅಪಾರ ಅವಕಾಶಗಳನ್ನು ಹೊಂದಿರುವಂತಹ ಸ್ಥಾನ. ಹಾಗಾಗಿ ಇಲ್ಲಿ ಹೂಡಿಕೆ ಮಾಡುವಂತೆ ಜಾಗತಿಕ ಮಟ್ಟದ ಉದ್ಯಮಿಗಳಲ್ಲಿ ರತನ್ ಟಾಟಾ ಮನವಿ ಮಾಡಿದ್ರು.

ಕರ್ನಾಟಕದ ಬೆಂಬಲಕ್ಕಿದೆ ಕೇಂದ್ರ ಸರ್ಕಾರ - ಅನಂತ್​ ಕುಮಾರ್

ಕೇಂದ್ರ ಸಚಿವ ಅನಂತ ಕುಮಾರ್ ಮಾತನಾಡಿ, ಕರ್ನಾಟಕದ ಪಾಲಿಗೆ ಇದು ಸುದಿನ ಎಂದ್ರು. ''ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ, ಮೋದಿ ನೇತೃತ್ವದ ಸರ್ಕಾರ ಕರ್ನಾಟಕದ ಬೆಳವಣಿಗೆಗೆ ಎಲ್ಲಾ ರೀತಿಯ ನೆರವನ್ನೂ ನೀಡಲಿದೆ'' ಎಂದು ಭರವಸೆ ನೀಡಿದ್ರು. ದೇಶದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಂದ ಸಿಗುವ ಗೊಬ್ಬರವನ್ನು ರೈತರಿಗೆ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಮಾಹಿತಿ ನೀಡಿದ್ರು. ಪ್ಲಾಸ್ಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ರು. ಈಗಾಗ್ಲೇ ಮಂಗಳೂರಿನಲ್ಲಿ ಒಂದು ಪೆಟ್ರೋ ಕೆಮಿಕಲ್​ ಘಟಕವಿದೆ. ಕರ್ನಾಟಕಕ್ಕೆ ಮತ್ತೊಂದು ಘಟಕ ನೀಡಲು ಸಿದ್ಧವಿದ್ದೇವೆ. ಸಿಎಂ ಸಿದ್ದರಾಮಯ್ಯ ಭೂಮಿ ಕೊಟ್ಟರೆ ಸಾಕು, 13 ಲಕ್ಷ ಮೆಟ್ರಿಕ್​ ಟನ್​ ಯೂರಿಯಾ ಘಟಕ ಸ್ಥಾಪನೆಗೆ ಕೇಂದ್ರ ಸಿದ್ಧವಿದೆ ಎಂದು ಘೋಷಣೆ ಮಾಡಿದ್ರು.

ಹುಬ್ಬಳ್ಳಿಯಲ್ಲಿ ಇನ್ಫೋಸಿಸ್​ ಕೇಂದ್ರ ಸ್ಥಾಪನೆ - ನಾರಾಯಣಮೂರ್ತಿ

ಕರ್ನಾಟಕ ಸರ್ಕಾರದ ಸಹಕಾರವಿಲ್ಲದೇ ಇನ್ಫೋಸಿಸ್ ಜನ್ಮ ತಳೆಯುವುದು ಅಸಾಧ್ಯವಾಗಿತ್ತು ಎಂದ ಎನ್.ಆರ್. ರಾಯಣಮೂರ್ತಿ, ಹಳೆ ನೆನಪುಗಳನ್ನು ಮೆಲುಕು ಹಾಕಿದ್ರು. ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ರು. ತಮ್ಮ ಉದ್ಯಮಕ್ಕೆ ಅಗತ್ಯವಾದ ಪ್ರೋತ್ಸಾಹ, ಸಹಕಾರ ಎಲ್ಲವೂ ಸಿಕ್ಕಿದ್ದರಿಂದ ಕರ್ನಾಟಕದಲ್ಲಿ ಈಗಾಗ್ಲೇ ಇನ್ಫೋಸಿಸ್ನ ಮೂರು ಕೇಂದ್ರ ಸ್ಥಾನಗಳಿವೆ. ಹುಬ್ಬಳ್ಳಿಯಲ್ಲಿ ನಾಲ್ಕನೇ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದ್ರು. ಯುವಜನತೆ ಬೆಂಗಳೂರಿನಲ್ಲಿ ನೆಲೆಸಲು ಹೆಚ್ಚು ಆಸಕ್ತಿ ತೋರಿಸುತ್ತಿರುವುದರಿಂದ, ಮಂಗಳೂರಿನಲ್ಲೂ ಮೂಲಸೌಕರ್ಯ, ಆರೋಗ್ಯ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಹೂಡಿಕೆಗೆ ಕರ್ನಾಟಕ ಬೆಸ್ಟ್​ - ಅಜೀಂ ಪ್ರೇಮ್​ಜಿ

ಇನ್ನು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್​ ಜಿ ಕೂಡ ತಮ್ಮ ಉದ್ಯಮವನ್ನು ಕರ್ನಾಟಕದಲ್ಲಿ ಇನ್ನಷ್ಟು ವಿಸ್ತರಿಸುವುದಾಗಿ ಅಭಯವಿತ್ತರು. ''ಹೂಡಿಕೆಗೆ ಕರ್ನಾಟಕ ಪ್ರಶಸ್ಥ ಸ್ಥಳ, ಮೂಲಸೌಕರ್ಯಗಳನ್ನು ಕಲ್ಪಿಸಲು ಹೆಚ್ಚು ಒತ್ತು ನೀಡಿದ್ದೇ ಆದಲ್ಲಿ ಕರ್ನಾಟಕ ದೇಶದಲ್ಲಿ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿರುವ ರಾಜ್ಯವಾಗಿ ಹೊರಹೊಮ್ಮಲಿದೆ'' ಎಂದು ಅಜೀಂ ಪ್ರೇಮ್​ ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ಏರೋಸ್ಪೇಸ್​ ರಿಸರ್ಚ್​ ಸೆಂಟರ್​ ಸ್ಥಾಪನೆ - ಅನಿಲ್​ ಅಂಬಾನಿ

''ಬೆಂಗಳೂರು ಹೊಸ ಹೊಸ ಪರಿಕಲ್ಪನೆಗಳ ತವರು, ಉದ್ಯಮ ಜಗತ್ತಿನಲ್ಲಿ ಅಳಿಸಲಾಗದಂತಹ ಹೆಜ್ಜೆ ಗುರುತನ್ನು ಕರ್ನಾಟಕ ಮೂಡಿಸಿದೆ'' ಎಂದು ರಿಲಯನ್ಸ್ ಗ್ರೂಪ್​ನ ಅನಿಲ್ ಅಂಬಾನಿ ಶ್ಲಾಘಿಸಿದ್ರು. ಏರೋಸ್ಪೇಸ್​ ಉದ್ಯಮಕ್ಕೆ ಕರ್ನಾಟಕ ಹೇಳಿ ಮಾಡಿಸಿದಂತಹ ಸ್ಥಳ ಎಂದ ಅವರು, ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಏರೋಸ್ಪೇಸ್ ರಿಸರ್ಚ್​ & ಡೆವಲಪ್​ಮೆಂಟ್​ ಸೆಂಟರ್​ ಆರಂಭಿಸುವುದಾಗಿ ಘೋಷಣೆ ಮಾಡಿದರು. 15000 ಏರೋಸ್ಪೇಸ್​ ಎಂಜಿನಿಯರ್​ಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದಾಗಿ ಅಭಯವಿತ್ತರು. ಕೇಂದ್ರದ ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ರು.

ಹೂಡಿಕೆಗೆ ಸಿದ್ಧ - ಸಜ್ಜನ್​ ಜಿಂದಾಲ್

ಇನ್ನು ಸಜ್ಜನ್​ ಜಿಂದಾಲ್​ ಮಾತನಾಡಿ ''ಇಪ್ಪತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು , ಅಧಿಕಾರಿಗಳು ಬದಲಾದರೂ ಕೈಗಾರಿಕಾ ನೀತಿ ಬದಲಾಗಿಲ್ಲ. ಈಗಾಗ್ಲೇ 60 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದೇವೆ. ಇನ್ನೂ 35 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆಗೆ ಸಿದ್ಧರಿದ್ದೇವೆ'' ಎಂದು ತಿಳಿಸಿದ್ರು. 

ವಿದ್ಯುತ್​ ಉತ್ಪಾದನೆಗಾಗಿ ಹೆಚ್ಚುವರಿ ಹೂಡಿಕೆ - ಗೌತಮ್ ಅದಾನಿ

ಗೌತಮ್​ ಅದಾನಿ ಕೂಡ ತಮ್ಮ ಸಂಸ್ಥೆಯ ಹತ್ತಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ರು. ''ಉಡುಪಿ ಪವರ್​ ಪ್ಲಾಂಟ್​ನ್ನು ವಿಸ್ತರಣೆ ಮಾಡಲಾಗುವುದು. ಸದ್ಯ 500 ಮೆಗಾವ್ಯಾಟ್​ ವಿದ್ಯುತ್​ ಉತ್ಪಾದನೆಯಾಗುತ್ತಿದೆ. ಇದನ್ನು 1600 ರಿಂದ 2000 ಮೆಗಾವ್ಯಾಟ್​ಗೆ ವಿಸ್ತರಣೆ ಮಾಡಲಾಗುವುದು. ಒಟ್ಟು 11500 ಕೋಟಿ ಬಂಡವಾಳ ಹೂಡಿಕೆ ಮಾಡುತ್ತೇವೆ. ಕಲ್ಲಿದ್ದಲು ಗಣಿಗಾರಿಕೆಗಾಗಿ 500 ಕೋಟಿ ರೂಪಾಯಿ ಮೀಸಲಿಡುತ್ತೇವೆ, ಈ ಕಾರ್ಯದಲ್ಲಿ 600 ಮಂದಿಗೆ ಉದ್ಯೋಗ ಕೂಡ ಲಭಿಸಲಿದೆ. 7000 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಸಾವಿರ ಮೆಗಾವ್ಯಾಟ್​ ವಿದ್ಯುತ್​ ಉತ್ಪಾದನೆಗಾಗಿ ಸೋಲಾ​ ಪ್ಲಾಂಟ್​​ಗಳನ್ನು ನಿರ್ಮಾಣ ಮಾಡಲಾಗುತ್ತದೆ'' ಅಂತಾ ಗೌತಮ್​ ಅದಾನಿ ಹೇಳಿದ್ರು. ಜೊತೆಗೆ ಬಂಡವಾಳ ಹೂಡಿಕೆಗೆ ಕರ್ನಾಟಕ ಯೋಗ್ಯ ಸ್ಥಳ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಒಟ್ಟಾರೆ ಮೂರು ದಿನಗಳ ಈ ಸಮಾವೇಶದಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ.