ಪೂಜೆ, ಹೋಮ, ಹವನಕ್ಕೊಂದು ಆನ್​​ಲೈನ್ ಸೈಟ್ "ಮಹೂರ್ತಮಜಾ"

ಕೃತಿಕಾ

0

ಇದು ಆನ್​ಲೈನ್​​ ಜಮಾನ. ಶಾಪಿಂಗ್​ನಿಂದ ಹಿಡಿದು ಈಟಿಂಗ್​ವರೆಗೆ ಎಲ್ಲವೂ ಆನ್​ಲೈನ್​ನಲ್ಲೇ ಮುಗಿದುಹೋಗುತ್ತದೆ. ಇನ್ನೂ ಸ್ವಲ್ಪ ಮುಂದೆ ಹೋಗಿರುವ ಯುವಕರ ತಂಡ ಪೂಜೆ, ಪುನಸ್ಕಾರ, ಹೋಮ, ಹವನಗಳಿಗೆಲ್ಲವೂ ಸಕಲ ವ್ಯವಸ್ಥೆ ಮಾಡುವ ವೆಬ್​​ಸೈಟ್ ಮತ್ತು ಆ್ಯಪ್ ಕೂಡ ಇದೆ. ನೀವು ಬೆರಳತುದಿಯಲ್ಲಿ ಬುಕ್ ಮಾಡಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಪೂಜಾರಿಯ ಸಮೇತ ಪೂಜಾ ಸಾಮಗ್ರಿಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ.

ಹಳ್ಳಿಗಳಲ್ಲಿ ಪೂಜೆ ಪುನಸ್ಕಾರ ಮಾಡಿಸಲು ಅರ್ಚಕರು, ಪೂಜಾ ವಸ್ತುಗಳು ಎಲ್ಲವೂ ಸುಲಭವಾಗಿ ಸಿಗುತ್ತವೆ. ಆದ್ರೆ ನಗರಗಳಲ್ಲಿ ಅಷ್ಟು ಸುಲಭವಾಗಿ ಅರ್ಚಕರಾಗಲೀ, ಪೂಜಾ ಸಾಮಗ್ರಿಗಳಾಗಲೀ ಸಿಗುವುದಿಲ್ಲ. ಪೂಜೆ ಸಾಮಗ್ರಿಗಳಿಗೆ ನಗರಗಳಲ್ಲಿನ ಬೀದಿ ಬೀದಿಯಲ್ಲಿ ಅಲೆಯಬೇಕು. ಒಂದು ಸಿಕ್ಕಿದ್ರೆ ಮತ್ತೊಂದು ಸಿಗೋದಿಲ್ಲ. ಒಂದು ವಸ್ತು ಒಂದು ಏರಿಯಾದಲ್ಲಿ ಸಿಕ್ಕರೆ ಮತ್ತೊಂದು ವಸ್ತುವಿಗೆ ಮತ್ತೊಂದು ಏರಿಯಾಗೆ ಅಲೆದಾಡಬೇಕು. ಇಂತಹ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಇಬ್ಬರು ಯುವಕರು ಪೂಜೆ, ಹೋಮ, ಹವನ ಎಲ್ಲಕ್ಕೂ ಅರ್ಚಕರಿಂದ ಹಿಡಿದು ಪೂಜಾ ಸಾಮಗ್ರಿಗಳು ನಿಮ್ಮ ಮನೆ ಬಾಗಿಲಿಗೆ ಬರುವ ಒಂದು ವೆಬ್ ಸೈಟ್ ಮತ್ತು , ಆ್ಯಪ್ ಅಭಿವೃದ್ದಿಪಡಿಸಿದ್ದಾರೆ. ನಗರದ ಜನರ ಸಮಸ್ಯೆಗಳಿಗೆ ಪರಿಹಾರ ಹುಡುವ ಪ್ರಯತ್ನವನ್ನು ‘ಮುಹೂರ್ತಮಜ’ ಕಂಪೆನಿ ಮಾಡುತ್ತಿದೆ. ಮಹಾರಾಷ್ಟ್ರದ ಯುವಕರಾದ ಸುಘೋಶ್‌ ಮತ್ತು ನಿಲೇಶ್‌ ‘ಮುಹೂರ್ತಮಜ’ ಕಂಪೆನಿ ಕಟ್ಟಿದ್ದಾರೆ. ಕಂಪೆನಿಗೆ ಪೂಜೆ ಪ್ಯಾಕೇಜ್‌ ನೀಡಿದರೆ ಸಾಕು ಪೂಜಾರಿಗಳನ್ನು ಬುಕ್‌ ಮಾಡುವುದರಿಂದ ಹಿಡಿದು ಪೂಜಾ ಸಾಮಗ್ರಿಗಳನ್ನು ಖರೀದಿಸಿ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸಿ ಕೊಡುತ್ತಾರೆ.

ಹಿಂದೂ ಸಂಪ್ರದಾಯದಲ್ಲಿ ದೇವರ ಮೇಲಿನ ನಂಬಿಕೆಯುಳ್ಳವರಿಗೆ ಕೊರತೆ ಇಲ್ಲ. ದೇವರು, ಭಕ್ತಿ, ಪೂಜೆ, ಹವನಗಳಿಗೆ ನಮ್ಮಲ್ಲಿ ಮಹತ್ವದ ಸ್ಥಾನವಿದೆ. ನಗರಗಳಲ್ಲಿಯೂ ಈ ನಂಬಿಕೆ ಹಾಗೆಯೇ ಉಳಿದುಕೊಂಡು ಬಂದಿದೆ. ಹೀಗಾಗಿಯೇ ಪೂಜೆ, ಹೋಮ ಹವನಗಳಿಗೆ ಇಲ್ಲಿ ಪ್ರಮುಖ ಸ್ಥಾನ. ನಗರಗಳಲ್ಲಿ ಹೋಮ, ಹವನ ನಡೆಸುವುದು ತುಸು ಕಷ್ಟ. ಯಾಕೆಂದರೆ ಸರಿಯಾದ ಸಮಯಕ್ಕೆ ಪೂಜಾರಿಗಳು, ಪಂಡಿತರು ಸಿಗುವುದಿಲ್ಲ! ಒಂದು ವೇಳೆ ಸಿಕ್ಕರೂ ಸಂಬಂಧಪಟ್ಟ ಪೂಜಾ ಸಾಮಗ್ರಿಗಳು ಸಕಾಲಕ್ಕೆ ದೊರೆಯುವುದಿಲ್ಲ. ಹಾಗಾಗಿ ಅಲೆದಾಟ ತಪ್ಪುವುದಿಲ್ಲ! ಎಲ್ಲವೂ ಒಂದೇ ಜಾಗದಲ್ಲಿ ಸಿಗುವ ವೇದಿಗೆ ಆನ್ ಲೈನ್ ನಲ್ಲಿದೆ. ಅದುವೇ www.muhurtmaza.com ವೆಬ್ ಸೈಟ್. ಜೊತೆಗೆ ಗೂಗಲ್ ಪ್ಲೇ ಸ್ಟೋರ್​​ ಮತ್ತು ಆ್ಯಪಲ್ ಐಒಎಸ್ ಸ್ಟೋರ್​ಗಳಲ್ಲಿ ಆ್ಯಪ್ ಅನ್ನು ಉಚಿತವಾಗಿ ಡೌನ್​​ಲೋಡ್ ಮಾಡಿಕೊಳ್ಳಬಹುದು.

" ಐದು ವರ್ಷಗಳ ಹಿಂದೆ ನಾನು ಮದುವೆ ಮಾಡಿಕೊಂಡೆ. ಆಗ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಬೇಕಿತ್ತು. ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದೆವು. ಅರ್ಚಕರನ್ನು ಹುಡುಕಿ, ಸಾಮಗ್ರಿ ಖರೀದಿಸಲು ನಮಗೆ ಒಂದು ವಾರ ಹಿಡಿಯಿತು. ಅದಕ್ಕಾಗಿ ನಾನು ಮತ್ತು ನನ್ನ ಪತ್ನಿ ಕೆಲಸಕ್ಕೆ ರಜೆ ಹಾಕಬೇಕಾಯಿತು. ಆಗ ಇಂತಹದ್ದೊಂದು ವೆಬ್ ಸೈಟ್ ಮಾಡುವ ಐಡಿಯಾ ಬಂತು. ನನ್ನ ಸ್ನೇಹಿತ ನೀಲೇಶ್ ಜೊತೆ ಸೇರಿ ಈ ಕಂಪನಿ ಆರಂಭಿಸಿದ್ದೇನೆ. ನಮ್ಮ ವೆಬ್ ಸೈಟ್ ಮತ್ತು ಆ್ಯಪ್ ನಲ್ಲಿ 140 ಕ್ಕೂ ಹೆಚ್ಚು ರೀತಿಯ ಪೂಜೆಗಳನ್ನು ಬುಕ್ ಮಾಡಬಹುದು" ಅಂತಾರೆ ‘ಮುಹೂರ್ತಮಜ’ ಕಂಪೆನಿಯ ಸಂಸ್ಥಾಪಕ ಸುಘೋಷ್.

ಸದ್ಯ ಈ ಸೇವೆ ಬೆಂಗಳೂರು, ಹೈದರಾಬಾದ್ ಮುಂಬೈ, ನಾಸಿಕ್‌, ನಾಗಪುರ, ಔರಂಗಾಬಾದ್, ಕೊಲ್ಲಾಪುರ ಮತ್ತು ಪುಣೆ ನಗರಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಸೇವೆಯನ್ನು ದೇಶದ ಎಲ್ಲ ನಗರಗಳಿಗೂ ವಿಸ್ತರಿಸುವ ಗುರಿಯನ್ನು ಸುಘೋಷ್ ಮತ್ತು ನೀಲೇಶ್ ಹೊಂದಿದ್ದಾರೆ.

ಗ್ರಾಹಕರು ತಮ್ಮ ಪೂಜಾ ಪ್ಯಾಕೇಜ್‌ ನೀಡಿದರೆ ಸಾಕು ಎಲ್ಲ ಕಾರ್ಯಗಳನ್ನು ಮುಹೂರ್ತಾಮಜ ತಂಡ ಮಾಡಿಕೊಡುತ್ತದೆ. ಗ್ರಾಹಕರು ನೆಮ್ಮದಿಯಾಗಿ ಪೂಜೆ ಮಾಡಬಹುದು. 1,000 ರೂಪಾಯಿಯಿಂದ ಹಿಡಿದು 30 ಸಾವಿರ ರೂಪಾಯಿವರೆಗಿನ ಪ್ಯಾಕೇಜ್‌ ಲಭ್ಯ. 300ಕ್ಕೂ ಹೆಚ್ಚು ಪಂಡಿತರು ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಹಕರು ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಬುಕ್‌ ಮಾಡಬಹುದು. ಒಟ್ಟಿನಲ್ಲಿ ಸುಘೋಶ್‌ ಮತ್ತು ನೀಲೇಶ್ ವಿಭಿನ್ನ ಹಾದಿ ಮೂಲಕ ಹೊಸ ಉದ್ಯಮ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Stories