ಬಡ ಉದ್ಯಮಿಗಳಿಗೆ "ಸೂಕ್ಷ್ಮ ಸಾಲ"-ಬಡತನವನ್ನೇ ಹೊಡೆದೋಡಿಸಲು "ಸಮೃದ್ಧಿ"ಯ ಕಾಲ

ಟೀಮ್​​ ವೈ.ಎಸ್​​.

ಬಡ ಉದ್ಯಮಿಗಳಿಗೆ "ಸೂಕ್ಷ್ಮ ಸಾಲ"-ಬಡತನವನ್ನೇ ಹೊಡೆದೋಡಿಸಲು "ಸಮೃದ್ಧಿ"ಯ ಕಾಲ

Friday November 06, 2015,

3 min Read

ಒಂದು ದೇಶದಲ್ಲಿ ಕಡುಬಡ ಉದ್ಯಮಿಗೆ ಸಹಾಯ ಮಾಡಲು ಕೈತುಂಬಾ ಕಾಸಿರಬೇಕೆಂದೇನೂ ಇಲ್ಲ. ಆದ್ರೆ ಅಲ್ಲಿ ಬಹುತೇಕ ಬಡವರಿಗೆ ಸಾಂಸ್ಥಿಕ ಸಾಲದ ವ್ಯವಸ್ಥೆಯೂ ಇಲ್ಲ. ಸಾಮಾಜಿಕ ಹೂಡಿಕೆದಾರರು ಹಾಗೂ ಉದ್ಯಮಿಯ ನಡುವೆ ಸಂವಹನ ಕಲ್ಪಿಸಲು ವೇದಿಕೆಯ ಅಗತ್ಯವಿದೆ. `ವಿ ಕೇರ್ ಇಂಡಿಯಾ' ಕೂಡ ಅದನ್ನೇ ಮಾಡುತ್ತಿದೆ. ಸಮೃದ್ಧಿ ಮೈಕ್ರೋ ಫೈನಾನ್ಸ್​​ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂಜು ಕುಮಾರ್ ಸೂಕ್ಷ್ಮಸಾಲದ ಬಗ್ಗೆ ಭಾರತದ ದೃಷ್ಟಿಕೋನವನ್ನು ಬದಲಾಯಿಸುವ ಇರಾದೆ ಹೊಂದಿದ್ದಾರೆ. ಜೊತೆಗೆ ನಿಜವಾಗಿಯೂ ಅಗತ್ಯವಿರುವವರಿಗೆ ನೆರವು ನೀಡುತ್ತಿದ್ದಾರೆ. `ವಿ ಕೇರ್ ಇಂಡಿಯಾ' ಕಳೆದ ವರ್ಷವಷ್ಟೇ ಸ್ಥಾಪನೆಯಾದ ಸಮೃದ್ಧಿಯ ಹೊಸ ಪ್ರಾಜೆಕ್ಟ್. ಜರ್ಮನ್ ಬ್ಯಾಂಕ್ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದೊಂದು ಆನ್‍ಲೈನ್ ವೇದಿಕೆ. www.wecareindia.org ನಲ್ಲಿ ಪಟ್ಟಿ ಮಾಡಲಾದ ಸಾಲಗಾರರಿಗೆ ಸಾಮಾಜಿಕ ಹೂಡಿಕೆದಾರರು ಸಣ್ಣ ಮೊತ್ತದ ಸಾಲ ನೀಡಲು ಸಯಾಯ ಮಾಡುತ್ತದೆ. ಗ್ರಾಮೀಣ ಪ್ರದೇಶದ ಸಣ್ಣ ವ್ಯಾಪಾರಿಗಳು, ಟೈಲರ್‍ಗಳು, ಅಂಗಡಿ ಮಾಲೀಕರು, ಜಾನುವಾರು ಸಾಕಣೆದಾರರಂಥ ಸಾಲಗಾರರನ್ನು ವೆಬ್‍ಸೈಟ್‍ನಲ್ಲಿ ಪಟ್ಟಿ ಮಾಡಲಾಗುತ್ತದೆ.

image


ಹೆಸರೇ ಸೂಚಿಸುವಂತೆ `ವಿ ಕೇರ್ ಇಂಡಿಯಾ' ನಿರ್ಗತಿಕ ಉದ್ಯಮಿಗಳ ಪಾಲಿನ ಆಶಾಕಿರಣ. ಸವಲತ್ತುಗಳೇ ಇಲ್ಲದೆ ಕಂಗಾಲಾಗಿರುವವರಿಗೆ ಸಹಾಯ ಮಾಡಬಯಸುವವರು ಅತೀ ಕನಿಷ್ಠ ಅಂದ್ರೆ ನೂರು ರೂಪಾಯಿ ಸಾಲವನ್ನು ಕೂಡ ಕೊಡಬಹುದು. ಆದ್ರೂ ಸಾಲಗಾರರು ವಾರ್ಷಿಕ ಶೇಕಡಾ 8ರಷ್ಟು ಬಡ್ಡಿ ಪಾವತಿಸುತ್ತಾರೆ. ಅದರಲ್ಲಿ ಶೇಕಡಾ 1ರಷ್ಟು ಹಣವನ್ನು ವೆಬ್‍ಸೈಟ್ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ. ಹೂಡಿಕೆದಾರರಿಗೆ ಸಾಲದ ಮೇಲೆ ಶೇಕಡಾ 3.5ರಷ್ಟು ಬಡ್ಡಿ ಸಿಗುತ್ತದೆ. ಉಳಿದ ಹಣವನ್ನು ಕಾರ್ಯಾಚರಣೆಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ. ಪೀರ್-ಪ್ರೆಶರ್ ಮಾದರಿಯನ್ನು `ವಿ ಕೇರ್ ಇಂಡಿಯಾ' ಅಳವಡಿಸಿಕೊಂಡಿದೆ. ಸಾಲಪಡೆದವರ ಪೈಕಿ ಓರ್ವ ಅದನ್ನು ಹಿಂದಿರುಗಿಸಲು ವಿಫಲರಾದ್ರೆ ಅವರ ಪರವಾಗಿ ಉಳಿದ ಸಾಲಗಾರರು ಅದನ್ನು ತುಂಬಿಕೊಡಬೇಕು. ಹಾಗಾದಲ್ಲಿ ಆ ತಂಡದ ಯಾರೊಬ್ಬರು ಕೂಡ ಮತ್ತೊಮ್ಮೆ ಸಾಲ ಪಡೆಯಲು ಅರ್ಹರಾಗಿರುವುದಿಲ್ಲ.

ಪ್ರತಿಯೊಬ್ಬ ಸಸ್ಯರಿಗೂ ಕಡ್ಡಾಯವಾಗಿ 5 ದಿನಗಳ ಕಾಲ ತರಬೇತಿ ಇರುತ್ತದೆ. ಪ್ರತಿಯೊಬ್ಬ ಸಾಲಗಾರರಿಗೂ ಆ ಪ್ರಕ್ರಿಯೆ, ಬಡ್ಡಿ ದರ ಹಾಗೂ ಮರುಪಾವತಿಯ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ. ತರಬೇತಿ ಬಳಿಕ ಪ್ರತಿಯೊಬ್ಬರ ಪ್ರೊಫೈಲ್ ಅನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ವಸತಿ ಸಮೀಕ್ಷೆ, ಬಡತನ ಮಟ್ಟ ನಿರ್ಣಯಿಸುವುದು, ಅವರ ಹೆಸರಲ್ಲಿ ಜಮಾ ಆಗಿದ್ದ ಹಣ, ಹಣಕಾಸಿನ ಅಗತ್ಯತೆಗಳನ್ನೆಲ್ಲ ಪರಿಶೀಲಿಸಿ ಅವರು ಅರ್ಹ ಎನಿಸಿದಲ್ಲಿ ಮಾತ್ರ ಸಾಲ ನೀಡಲಾಗುತ್ತದೆ. ಪಡೆದುಕೊಂಡ ಸಾಲವನ್ನು ತಂಡದ ಸದಸ್ಯರು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಮೇಲೂ `ವಿ ಕೇರ್ ಇಂಡಿಕಾ' ಕಣ್ಣಿಡಲಿದೆ. ಸಾಲ ಪಡೆದು 15 ದಿನಗಳೊಳಗೆ ಸಾಲ ಪಡೆದ ಉದ್ದೇಶದ ಪ್ರಗತಿ ಬಗ್ಗೆ ಸಾಲಗಾರರು ಮಾಹಿತಿ ನೀಡಬೇಕು. ಸಂಸ್ಥೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಹಾಗೂ ನಗರದ ಬಡ ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ. ಪುರುಷರಿಗಿಂತ ಸಮರ್ಪಕವಾಗಿ ಸಂಪನ್ಮೂಲಗಳನ್ನು ಬಳಸಿಕೊಂಡು ಮಹಿಳೆಯರು ಉತ್ಪಾದಕತೆಯನ್ನು ಹೆಚ್ಚಿಸಬೇಕೆಂಬುದು ಸಂಸ್ಥೆಯ ಉದ್ದೇಶ. ಇನ್ನು ಸಂಜು ಕುಮಾರ್ ಅವರಿಗೆ ಕೃಷಿ, ಸೂಕ್ಷ್ಮ ಸಾಲ, ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ 10 ವರ್ಷಗಳ ಅನುಭವವಿದೆ. ಅವರು ಅಮೆರಿಕದ ಸಾಂತಾ ಕ್ಲಾರಾ ವಿಶ್ವವಿದ್ಯಾನಿಲಯದಲ್ಲಿ ಕೃಷಿ ವಿಜ್ಞಾನ ಪದವಿ ಪಡೆದಿದ್ದಾರೆ.

image


ಪ್ರಾಜೆಕ್ಟ್​​ಗೆ ಬೇಕಾದ ಶೇಕಡಾ 80ರಷ್ಟು ನಿಧಿ `ವಿ ಕೇರ್ ಇಂಡಿಯಾ'ದ ಮಾತೃ ಸಂಸ್ಥೆಯಾದ ಸಮೃದ್ಧಿಯಿಂದ ಪೂರೈಕೆಯಾಗುತ್ತಿದೆ. ಉಳಿದ ಹಣವನ್ನು ಅಮೆರಿಕದ ಪಾಲುದಾರ ಸಂಸ್ಥೆ `ಆಶಾ' ಇಂದ ಪಡೆಯಲಾಗ್ತಿದೆ. ಸೂಕ್ಷ್ಮ ಸಾಲಸಂಘಗಳು ಬಹುತೇಕ ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಯಾಕಂದ್ರೆ ಬ್ಯಾಂಕ್‍ಗಳಿಂದ ಸಂಘ-ಸಂಸ್ಥೆಗಳಿಗೆ ನೆರವು ಸಿಗುತ್ತಿಲ್ಲ. ಆಂಧ್ರಪ್ರದೇಶದಲ್ಲಾದ ಬಿಕ್ಕಟ್ಟಿನ ಬಳಿಕ ಬ್ಯಾಂಕ್‍ಗಳು ಕೂಡ ಕಾದು ನೋಡುವ ತಂತ್ರ ಅನುಸರಿಸ್ತಿವೆ ಅನ್ನೋದು ಕುಮಾರ್ ಅವರ ಅಭಿಪ್ರಾಯ. ಅಂತರಾಷ್ಟ್ರೀಯ ಸಂಸ್ಥೆಗಳಾದ ಕಿವಾ, ಮೈಕ್ರೋಫಂಡ್ಸ್, ಕಿಟಾನಾದಂತಹ ಸಂಸ್ಥೆಗಳ ಯಶಸ್ಸಿನಿಂದ ಪ್ರೇರಿತರಾಗಿದ್ದ ಕುಮಾರ್ ಅವರ ಮನಸ್ಸಿನಲ್ಲಿ, ಯಾಕೆ ಅದೇ ಮಾದರಿಯನ್ನು ಭಾರತದಲ್ಲೂ ಅಳವಡಿಸಬಾರದೆಂಬ ಯೋಚನೆ ಮೂಡಿತ್ತು. ಇದಕ್ಕೆ ಅನುಮತಿ ಪಡೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಭಾರತದಲ್ಲಿ ವಿ ಕೇರ್ ಇಂಡಿಯಾದಂತಹ ಲಾಭರಹಿತ ಸಂಸ್ಥೆ ಇಲ್ಲದೇ ಇದ್ದಿದ್ರಿಂದ ಕುಮಾರ್ ಅಮೆರಿಕದ ಸಂಸ್ಥೆಯೊಡನೆ ಪಾಲುದಾರರಾಗಬೇಕಾಯ್ತು.

ಶಿಕ್ಷಣ ಹಾಗೂ ಆರೋಗ್ಯ ವಿಭಾಗದಲ್ಲೂ ಈ ಸಾಲದ ಯೋಜನೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಐವರ ತಂಡ ಕೆಲಸ ಮಾಡ್ತಿದೆ. ಹೂಡಿಕೆದಾರರಿಗೆ ವಿಸ್ತ್ರತ ಅವಕಾಶ ಕಲ್ಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯ ಸಮೃದ್ಧಿ ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಒಂದು ತಿಂಗಳಲ್ಲಿ 3000 ಮಂದಿ ವೆಬ್‍ಸೈಟ್‍ಗೆ ಭೇಟಿ ಕೊಟ್ಟಿದ್ದಾರೆ. 200 ಮಂದಿ ನೋಂದಣಿ ಕೂಡ ಮಾಡಿಸಿಕೊಂಡಿದ್ದಾರೆ. ಇನ್ನಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಕರ್ನಾಟಕದ ಉಳಿದ ಎಲ್ಲ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸಲು ಕುಮಾರ್ ಮುಂದಾಗಿದ್ದಾರೆ. ಕುಮಾರ್ ಅವರ ಪ್ರಕಾರ ಬಡವರು ಕೂಡ ಸಾಲ ಕೊಡಬಲ್ಲರು. ಚಿಕ್ಕ ಚಿಕ್ಕ ವ್ಯಾಪಾರದ ಮೂಲಕವೇ ಎಲ್ಲರೂ ಲಾಭ ಗಳಿಸುವಂತಾದ್ರೆ ಭಾರತದಲ್ಲಿ ಬಡತನವನ್ನು ಹೊಡೆದೋಡಿಸಬಹುದು ಅನ್ನೋದು ಕುಮಾರ್ ಅವರ ಆಶಾವಾದ.