ಯುವ ನಟರಿಗೆ ಹಾಟ್ ಫೇವರಿಟ್ ಆದ ಫಿಟ್ನೆಸ್ ಗುರು ಸೀನು ಮಾಸ್ಟರ್

ಟೀಮ್​ ವೈ.ಎಸ್​. ಕನ್ನಡ

1

ಸಿಕ್ಸ್​ಪ್ಯಾಕ್​ ಮಾಡಿಸಿಕೊಳ್ಳೋದು ಇತ್ತೀಚಿನ ಫ್ಯಾಷನ್​. ಕಾಲೇಜ್​ ಹುಡುಗರಿಂದ ಹಿಡಿದು ಕೂದಲು ಬೆಳ್ಳಗಾದವರ ತನಕ ಎಲ್ಲರಿಗೂ ದೇಹಸಿರಿ ಪ್ರದರ್ಶಿಸುವ ಆಸೆಯಂತೂ ಇದ್ದೇ ಇದೆ. ಆದ್ರೆ ಈ ಸಿಕ್ಸ್​ಪ್ಯಾಕ್​ ಅನ್ನೋದು ಅಷ್ಟು ಸುಲಭವಾಗಿ ಒಲಿದು ಬರುವುದಿಲ್ಲ. ಅದಕ್ಕಾಗಿ ಕಸರತ್ತುಗಳನ್ನು ನಡೆಸಲೇಬೇಕು. ಅದೂ ಒಂದೆರಡು ತಿಂಗಳಲ್ಲಿ ರಿಸಲ್ಟ್​ ಕೊಡುವ ಕಸರತ್ತುಗಳಲ್ಲ. ಬದಲಾಗಿ ವರ್ಷನುಗಟ್ಟಲೆ ಸರ್ಕಸ್​ ಮಾಡಬೇಕು. ಅದೂ ಕೂಡ ಒಂದು ಶಿಸ್ತಿನ ಗೆರೆಯೊಳಗೆ. ನಟನೆಯ ಫೀಲ್ಡ್​ನಲ್ಲಿರುವವರಿಗಂತೂ ಸಿಕ್ಸ್​ಪ್ಯಾಕ್​ ಇದ್ರೆ ಒಂಚೂರು ಹೆಚ್ಚೇ ಬೆಲೆ. ಸ್ಯಾಂಡಲ್​ವುಡ್​ನ ನಟರಿಗೂ ಈ ಖಯಾಲಿ ಇದೆ. ಸ್ಯಾಂಡಲ್​ವುಡ್​ ಇಂಡಸ್ಟ್ರಿಯ ನಟರಿಗೆ ಸಿಕ್ಸ್​ಪ್ಯಾಕ್​ ಹೇಳಿಕೊಡುವ ಗುರುವೊಬ್ಬರಿದ್ದಾರೆ. ಅವರ ಸಹಾಯದಿಂದಲೇ ಅದಷ್ಟೋ ನಟರು ಫಿಟ್​ಅಂಡ್​ ಫೈನ್​​ ಆಗಿಬಿಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಎಲ್ಲ ನವತಾರೆಯರು ಪಕ್ಕಾ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಸಾಕಷ್ಟು ಯುವ ನಟರು ಸಿಕ್ಸ್ ಪ್ಯಾಕ್ ಮಾಡಿಕೊಂಡು ಸ್ಕ್ರೀನ್ ಮೇಲೆ ಮಿಂಚುತ್ತಿದ್ದಾರೆ. ಇವರು ಸ್ಕ್ರೀನ್ ಮೇಲೆ ಸಿಕ್ಸ್ ಪ್ಯಾಕ್, ಫಿಟ್ ಆಗಿ ಮಿಂಚಲು ಕಾರಣ ಅವರ ಪರ್ಸನಲ್ ಟ್ರೈನರ್ ಎಂಬುದು ಇಲ್ಲಿ ವಿಶೇಷ. ನಟರ ದೇಹವನ್ನು ಕಟ್ಟು ಮಸ್ತಾಗಿ ರೂಪಿಸು ಟ್ರೈನರ್​ಗಳಲ್ಲಿ ಇತ್ತೀಚಿಗೆ ಕೇಳಿ ಬರುತ್ತಿರುವ ಹೆಸರು ಶ್ರೀನಿವಾಸ್​​ಗೌಡ.

ಹೌದು, ಕನ್ನಡದ ಸಾಕಷ್ಟು ಯುವ ನಟರಿಗೆ ಶ್ರೀನಿವಾಸ್​ಗೌಡ ಈಗ ಹಾಟ್ ಫೇವರಿಟ್​ ಆಗಿದ್ದಾರೆ. ಕದಿರೇನಹಳ್ಳಿಯ "ಮಸಲ್ ಮ್ಯಾಕನಿಕ್​"ಗೆ, ನೀವು ಬೆಳಗಿನ ಸಮಯದಲ್ಲಿ ಹೋದರೆ ಒಂದುಷ್ಟು  ನಟರು ಅಲ್ಲಿ ವರ್ಕ್ ಔಟ್ ಮಾಡುತ್ತಿರುತ್ತಾರೆ. ನಟರ ಬಾಯಲ್ಲಿ ಸೀನು ಮಾಸ್ಟರ್ ಎಂದೆ ಕರೆಸಿಕೊಳ್ಳುವ ಶ್ರೀನಿವಾಸ್ ಅವರ ಕೈಚಳಕ ಹೇಗಿದೆ ಅಂದ್ರೆ, ದಿನೇ ದಿನೇ ಅವರನ್ನು ಹುಡುಕಿಕೊಂಡು ಬರುವ ನಟರ ದಂಡು ಹೆಚ್ಚುತ್ತಲೇ ಇದೆ.

ಇದನ್ನು ಓದಿ: ಆಹಾರ ಉದ್ಯಮದಲ್ಲಿ ಕಳೆದು ಹೋಗಿದ್ದೇನು..?

ಯಾರು ಯಾರು ಬರುತ್ತಾರೆ..?

ಸೀನು ಮಾಸ್ಟರ್ ಕೈಯಲ್ಲಿ ಈಗಾಗಲೇ ಸಾಕಷ್ಟು ಮಂದಿ ಫಿಟ್ ಆಗಿದ್ದಾರೆ. ಸಿಕ್ಸ್​ಪ್ಯಾಕ್​ ಬೆಳೆಸಿಕೊಂಡಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಧನಂಜಯ್​, ಖಳ ನಟ ಉದಯ್, ಯುವ ನಟ ಅನಿಶ್ ತೇಜೇಶ್ವರ್, ಗಿರಗಿಟ್ಲೆ ಚಂದ್ರು, ರಾಕೇಶ್ ಅಡಿಗ, ಉದಯೋನ್ಮಖ ತಾರೆ ಪೂರ್ಣಚಂದ್ರ,  ಹೀಗೆ ಇನ್ನು ಅನೇಕರು ಶ್ರೀನಿವಾಸಗೌಡ ಅವರ ಕೈಚಳಕದಲ್ಲಿ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಒಬ್ಬ ನಟನಿಗೆ ತನ್ನ ದೇಹವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂಬ ಆಸಯಿದ್ದರೆ ಸೀನು ಮಾಸ್ಟರ್ ಬಳಿ ಹೋಗಬೇಕು ಎನ್ನುವ ಮಟ್ಟಿಗೆ ಅವರು ಫೇಮಸ್ ಆಗಿದ್ದಾರೆ.

ಕನ್ನಡ ಇಂಡಸ್ಟ್ರಿಯ ಫೇಮಸ್ ಜಿಮ್ ಟ್ರೈನರ್ ಪಾನಿ ಪೂರಿ ಕಿಟ್ಟಿ ಎಂದರೆ ತಪ್ಪಾಗಲಾರದು. ಅವರನ್ನು ಸ್ಪೂರ್ತಿಯಾಗಿರಿಸಿಕೊಂಡಿರುವ ಶ್ರೀನಿವಾಸ್ ಗೌಡ, ಸಾಕಷ್ಟು ಯವ ನಟರ ಫೇವರಿಟ್ ಜಿಮ್ ಟ್ರೈನರ್ ಆಗಿದ್ದಾರೆ.

" ನನ್ನ ದೇಹ ಇಷ್ಟೊಂದುದು ಹುರಿಗೊಳ್ಳಲು ಕಾರಣ ಸೀನು ಮಾಸ್ಟರ್. ಅವರ ಕೈಯಲ್ಲಿ ಒಂದು ಮ್ಯಾಜಿಕ್ ಇದೆ. ಅವರೊಬ್ಬ ಅದ್ಭುತ ಟ್ರೈನರ್. ನಮ್ಮನ್ನು ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವತ್ತ ಅದ್ಭುತವಾಗಿ ಮೋಟಿವೇಟ್ ಮಾಡುತ್ತಾರೆ. ಆ ಕಾರಣಕ್ಕಾಗಿ ಸಾಕಷ್ಟು ಮಂದಿ ಇವರ ಬಳಿ ಬರುತ್ತಾರೆ."
- ಧನಂಜಯ, ನಟ

ಅಂದಹಾಗೇ ಶ್ರೀನಿವಾಸ ಗೌಡ ಬಳಿ ಜಿಮ್​ ಕಲಿಯೋದಿಕ್ಕೆ ಬರುವವರು ಕೆಲವು ಕೆಲಸಗಳನ್ನು ಕಟ್ಟುನಿಟ್ಟಾಗಿ ಮಾಡಿಕೊಂಡೇ ಬರಬೇಕು. ಫಿಟ್​ನೆಸ್​ ಅಥವಾ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಇವರ ಬಳಿ ಯಾರೇ ಬಂದರೂ,  ಸೀನು ಮಾಸ್ಟರ್​ ಮೊದಲು ಅವರ ದೇಹವನ್ನು ವೈದ್ಯರ ಬಳಿ ಚೆಕ್ ಮಾಡಿಸುತ್ತಾರೆ. ಆ ನಂತರ ಅವರ ದೇಹದ ಮೆಟಬಾಲಿಸಂಗೆ ಅನುಗುಣವಾಗಿ ವ್ಯಾಯಾಮಗಳನ್ನು ಮಾಡಿಸುತ್ತಾರೆ. ಶ್ರೀನಿವಾಸಗೌಡ ಅವರ ಪ್ರಕಾರ ಸಿಕ್ಸ್ ಪ್ಯಾಕ್ ಬರಲು ವ್ಯಾಯಾಮ ಮಾಡುವುದಕ್ಕಿಂತ, ಡಯಟ್​ನ್ನು ಎಷ್ಟು ಪರಿಣಾಮಕಾರಿಯಾಗಿ ಮಾಡುತ್ತೀವೋ ಅಷ್ಟು ಚೆನ್ನಾಗಿ ಸಿಕ್ಸ್ ಪ್ಯಾಕ್ ಬರುತ್ತದೆ. ಶೇಕಡಾ 80ರಷ್ಟು ಡಯಟ್, ಶೇ20 ರಷ್ಟು ಜಿಮ್ ತಂತ್ರ ಅನುಸರಿಸಿದರೆ ಬಹಳ ಸುಲಭವಾಗಿ ಸಿಕ್ಸ್ ಪ್ಯಾಕ್ ಬರುತ್ತದೆ. ಇವರ ಬಳಿ ಬರುವ ಯಾವುದೇ ಸ್ಟೂಡೆಂಟ್ ಇವರಿಗೆ ತಿಳಿಯದೆ, ರೈಸ್​ ತಿಂದರೆ ಅದು ಅವರಿಗೆ ಗೊತ್ತಾಗುತ್ತದೆ, ಹಾಗಾಗಿ ಇವರ ಬಳಿ ರಿಸಲ್ಟ್ ಹೆಚ್ಚು.

" ನಟರಿಗೆ ಸಿಕ್ಸ್ ಪ್ಯಾಕ್ ಮಾಡಿಸುವುದರಲ್ಲಿ ನನ್ನದೇನು ಪಾತ್ರವಿಲ್ಲ. ಅದೆಲ್ಲವೂ ಅವರ ಪ್ರಯತ್ನಕ್ಕೆ ಸಂದ ಫಲ ಅದು. ಪ್ರತಿಯೊಬ್ಬರಿಗೂ ಫಿಟ್ನೆಸ್ ಕಾಪಾಡಿಕೊಳ್ಳುವ ಆಸೆ ಮನಸ್ಸಿನಿಂದ ಬಂದರೆ ಸಾಕು ಅವರ ದೇಹವನ್ನು ಸುಲಭವಾಗಿ ಹುರಿಗೊಳಿಸಬಹದು."
- ಶ್ರೀನಿವಾಸಗೌಡ, ಟ್ರೈನರ್

1999ರಲ್ಲಿ ಜಿಮ್​ಗೆ ಸೇರಿದ ಶ್ರೀನಿವಾಸ ಗೌಡ, 2003ರಲ್ಲಿ ಟ್ರೈನರ್ ಆದರು. ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ಸಾಕಷ್ಟು ಜನರಿಗೆ ಟ್ರೈನ್ಅಪ್ ಮಾಡುತ್ತಲೇ ಇದ್ದಾರೆ. ನಟರಾಗಲಿ, ಸಾಮಾನ್ಯ ಮನುಷ್ಯರಾಗಲಿ, ಯಾರಿಗೆ ಡೆಡಿಕೇಷನ್ ಇರುತ್ತದೋ ಅವರಿಗೆ ಮಾತ್ರ ನಾನು ಶಿಸ್ತಿನಿಂದ ಹೇಳಿಕೊಡುತ್ತೇನೆ ಎನ್ನುವ ಶ್ರೀನಿವಾಸಗೌಡರ ಜಿಮ್​ಗೆ ಇತ್ತೀಚಿನ ದಿನಗಳಲ್ಲಿ ನಟಿಯರಾದ ಸೋನು ಗೌಡ, ಕೆಂಡಸಂಪಿಗೆ ಖ್ಯಾತಿ ಮಾನ್ವಿತ ಹರೀಶ್, ನಿರ್ದೇಶಕ ಸೂರಿಯವರ ಪತ್ನಿ ಹೀಗೆ ಸಾಕಷ್ಟು ಮಹಿಳೆಯರು ಫಿಟ್​ನೆಸ್​ಗಾಗಿ ಬರುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಖಳ ನಟ ಅನಿಲ್ ಅವರ ಜಿಮ್​ನಲ್ಲಿ ಇನ್ಸ್​ಟ್ರಕ್ಟರ್ ಆಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ ಗೌಡ ಅವರ ಬಳಿ ನಿರ್ದೇಶಕರಾದ ವಿಕಾಸ್, ದುನಿಯಾ ಸೂರಿ ಸಹ ಬಂದು ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ನಟರು ಶೂಟಿಂಗ್ ಸಮಯದಲ್ಲಿದ್ದಾಗಲೂ, ಅಲ್ಲಿಗೇ ಹೋಗಿ ಸೀನು ಮಾಸ್ಟರ್​ ವ್ಯಾಯಾಮಗಳನ್ನು ಹೇಳಿಕೊಡುತ್ತಾರೆ. ಅದಕ್ಕಾಗಿ ಎಲ್ಲರಿಗೂ ಶ್ರೀನಿವಾಸಗೌಡ ಬದಲಾಗಿ ಪ್ರೀತಿಯ ಸೀನು ಮಾಸ್ಟರ್ ಆಗಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಸುವದರಲ್ಲಿ ಎಕ್ಸ್​ಪರ್ಟ್ ಆಗಿದ್ದಾರೆ.

ಇದನ್ನು ಓದಿ: 

1. ಕೇರಳದಲ್ಲಿ ಆನ್‌ಲೈನ್‌ ಮೂಲಕ ದಿನಬಳಕೆಯ ವಸ್ತುಗಳನ್ನು ಪೂರೈಸುವ ಸಂಸ್ಥೆ ಕಡಾ.ಇನ್

2. ಜಾಹೀರಾತು ಕ್ಷೇತ್ರದಲ್ಲಿ ಪಳಗಿ ತಮ್ಮದೇ ವೆಬ್‌ಸೈಟ್ ಆರಂಭಿಸಿದ ವಂದನಾ ಜೈನ್

3. ಗಡಿಯಾಚೆಗಿನ ಸಾಧನೆ- ಮಹಿಳಾ ಚಾಲಕರಿಗೆ ಸ್ಪೂರ್ತಿ ಈ ಮೂವರುRelated Stories