ಇಳಿವಯಸ್ಸಿನ ಶಿಕ್ಷಣ ಪ್ರೇಮಿ..!

ಟೀಮ್​ ವೈ.ಎಸ್​​.

0

ಕಾನ್ಸ್​​ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದ ಅವರು ಜೀವನದುದ್ದಕ್ಕೂ ಪ್ರಮಾಣಿಕತೆಯನ್ನ ಮೈಗೂಡಿಸಿಕೊಂಡಿದ್ದ ಆದರ್ಶ ವ್ಯಕ್ತಿ. ತಾನು ಚಿಕ್ಕ ಹುದ್ದೆಯಲ್ಲಿದ್ರೂ ಮಕ್ಕಳನ್ನ ಉನ್ನತ ಹುದ್ದೆಯಲ್ಲಿ ನೋಡಬೇಕೆಂಬ ಮಹದಾಸೆ ಅವರದ್ದಾಗಿತ್ತು. ಒಂದೊತ್ತಿನ ಊಟಕ್ಕೆ ಕೊರತೆಯಾದರೂ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡ ಶಿಕ್ಷಣ ಪ್ರಿಯ ಅವರು. ಇಷ್ಟೆಲ್ಲ ವರ್ಣನೆ ಮಾಡ್ತಾ ಇರೋದು ಬೇರಾರು ಬಗ್ಗೆಯೂ ಅಲ್ಲ ಕೆಲ ದಿನಗಳ ಹಿಂದೆ ನೆಲಮಂಗಲದಲ್ಲಿ ಕಳ್ಳರ ಕೈಯಿಂದ ಹತ್ಯೆಯಾದ ಪಿಎಸ್ ಜಗದೀಶ್ ಅವರ ತಂದೆ ಶ್ರೀನಿವಾಸಯ್ಯ ಅವರ ಬಗ್ಗೆ...

ಶ್ರೀನಿವಾಸಯ್ಯ ಅವರಿಗೆ ಐದು ಮಂದಿ ಮಕ್ಕಳು. ಜಗದೀಶ್, ಕನ್ನಿಕಾಂಬಿಕಾ, ಗಾಯತ್ರಿದೇವಿ, ಮೋಹನ್ ಕುಮಾರ್ ಹಾಗೂ ಈಶ್ವರ್. ಪಿಎಸ್ಐ ಆಗಿದ್ದ ಜಗದೀಶ್ ಬಿ.ಎ. ಎಲ್ಎಲ್​​ಬಿ ವಿದ್ಯಾಭ್ಯಾಸ ಮಾಡಿದ್ರು. ಕನ್ನಿಕಾಂಬಿಕಾ ಇಂಗ್ಲೀಷ್ ಲಿಟರೇಚರ್​​ನಲ್ಲಿ ಸ್ನಾತಕೋತ್ತರ ಪದವಿ, ಗಾಯತ್ರಿದೇವಿ ಎಂಎಸ್ಸಿ ಅಗ್ರಿ, ಮೋಹನ್ ಕುಮಾರ್ ಬಿಇ ಇನ್ ಸಿವಿಲ್ ಓದಿ ಒಳ್ಳೆಯ ಹುದ್ದೆಯಲ್ಲಿದ್ದಾರೆ. ಇನ್ನು ಕೊನೆಯ ಮಗ ಈಶ್ವರ್ ಬಿಇ ಇನ್ ಎಲೆಕ್ಟ್ರಿಕಲ್ ವಿದ್ಯಾಭ್ಯಾಸ ಮಾಡಿದ್ದು ಇನ್ನೂ ಉನ್ನತ ವಿದ್ಯಾಭ್ಯಾಸ ಮಾಡುವ ಚಿಂತನೆಯಲ್ಲಿದ್ದಾರೆ.

ಮಕ್ಕಳು ಎಷ್ಟೇ ಓದಿದ್ರು ಎಂದಿಗೂ ವಿದ್ಯಾಭ್ಯಾಸವನ್ನ ನಿಲ್ಲಿಸಬೇಡಿ ಅನ್ನೋದು ಶ್ರೀನಿವಾಸಯ್ಯ ಅವರ ಕಿವಿಮಾತು. ಜಗದೀಶ್ 2015ರಲ್ಲಿ ಕಾನ್ಸ್​​ಟೇಬಲ್ ಆಗಿದ್ದ ,2010ರಲ್ಲಿ ಪಿಎಸ್ಐ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಪಿಎಸ್ಐ ಆಗಿ ಹೆಗಲ ಮೇಲೆ ಎರಡು ಸ್ಟಾರ್ ಹಾಕಿಕೊಂಡದ್ದೇ ಉದಾಹರಣೆ. ಪಿಎಸ್ಐ ಆಗಿದ್ರೂ ಕೂಡ ವಿದ್ಯಾಭ್ಯಾಸ ನಿಲ್ಲಬೇಡ, ಇಷ್ಟಕ್ಕೆ ನೀನು ತೃಪ್ತಿಯಾಗ ಬೇಡ ಅಂತ ಪ್ರೋತ್ಸಾಯಿಸುತ್ತದ್ದರು ಶ್ರೀನಿವಾಸಯ್ಯ. ತಂದೆಯ ಮಾತನ್ನ ಶಿರಾಸವಹಿಸಿ ಪಾಲಿಸುತ್ತಿದ್ದ ಜಗದೀಶ್ ಕಳೆದ ತಿಂಗಳು ನಡೆದ ಕೆಎಎಸ್ ಪರೀಕ್ಷೆಯನ್ನೂ ಕೂಡ ಬರೆದಿದ್ರು.

ವಿದ್ಯಾಭ್ಯಾಸದ ಬಗ್ಗೆ ಶ್ರೀನಿವಾಸಯ್ಯ ಅವರಿಗೆ ಎಷ್ಟರ ಮಟ್ಟಿಗೆ ಹಪಹಪಿ ಇತ್ತು ಅಂದ್ರೆ, ಮಗ ಜಗದೀಶ್ ಕೈಹಿಡಿದು ಬಂದ ಸೊಸೆ ರಮ್ಯಾ ಅವರಿಗೂ ಒತ್ತಾಯ ಮಾಡಿ ಪದವಿ ಓದಿಸಿದ್ದಾರೆ. ಕಳೆದ ವರ್ಷವಷ್ಟೇ ರಮ್ಯಾ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದಾರೆ.

ಮಕ್ಕಳಿಗೆ ಸುಖದ ಅನುಭವ ಆದ್ರೇ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುತ್ತೆ ಅನ್ನೋದು ಶ್ರೀನಿವಾಸಯ್ನ ನಂಬಿಕೆ. ಜೀವನ ಪೂರ್ತಿ ಎಷ್ಟೇ ಕಷ್ಟ ಬಂದ್ರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದೇ ನೊಂಡಿಕೊಂಡವರು. ಮಕ್ಕಳಿಗೆ ಪುಸ್ತಕ ಬೇಕು ಟ್ಯೂಷನ್​​ಗೆ ಹೋಗಬೇಕು ಅಂದ್ರೆ ಸಾಲ ಮಾಡಿಯಾದ್ರು ಹಣ ಹೊಂದಿಸುತ್ತಿದ್ರು. ಜಗದೀಶ್ ಹುಟ್ಟೂರು ಮಲ್ಲಾಪುರ, ಡಾಬಸ್​​ಪೇಟೆಯಿಂದ ಸುಮಾರು 10 ಕಿಲೋಮೀಟರ್ ದೂರ ಇದೆ. ಇಷ್ಟು ದೂರ ಇದ್ರೂ, ಮಕ್ಕಳಿಗೆ ಒಂದು ಸೈಕಲ್ ಕೂಡ ಕೊಡಿಸಿಲ್ಲ. ಹೈವೇ ರಸ್ತೆಯವರೆಗೆ ಸುಮಾರು 6 ಕಿಲೋ ಮೀಟರ್ ನಡೆದುಕೊಂಡೇ ಹೋಗುತ್ತಿದ್ದ ಮಕ್ಕಳು ನಂತರ ಯಾವುದಾದ್ರೂ ಬಸ್​​ನಲ್ಲಿ ಡಾಬಸ್​​ಪೇಟೆಯ ಶಾಲೆ, ಕಾಲೇಜ್​​ಗಳಿಗೆ ಹೋಗುತ್ತಿದ್ದರು. ಮಕ್ಕಳಿಗೆ ಒಳ್ಳೆಯ ಬಟ್ಟೆ, ವಾಹನ ಹೀಗೆ ಐಷಾರಾಮಿ ವಸ್ತುಗಳ ಅನುಭವ ಸಿಕ್ಕಿದ್ದು ಅವರೇ ದುಡಿಯಲು ಶುರುಮಾಡಿದ ನಂತರ.

" ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಬೇಕು ಅನ್ನೋದೇ ನನ್ನ ಮಾವ ಶ್ರೀನಿವಾಸಯ್ಯ ಅವರ ಜೀವನ ಗುರಿಯಾಗಿತ್ತು. ಅದೇ ರೀತಿ ತನ್ನ ಐದೂ ಜನ ಮಕ್ಕಳಿಗೂ ಉನ್ನತ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಜಗದೀಶ್ ಸೇರಿದಂತೆ ಐವರು ಮಕ್ಕಳೂ ತಂದೆಯ ಮಾತಿಗೆ ಅಷ್ಟೇ ಬೆಲೆ ಕೊಟ್ಟು ವಿದ್ಯಾಭ್ಯಾಸ ಮಾಡಿದ್ರು. ಮಕ್ಕಳಿಗೆ ವರ್ಷಕ್ಕೆ ಒಂದೋ ಎರಡೋ ಜೊತೆ ಬಟ್ಟೆ ಕೊಡಿಸುತ್ತಿದ್ದ ಶ್ರೀನಿವಾಸಯ್ಯ ಪುಸ್ತಕ ಬೇಕು ಅಥಾವ ಟ್ಯೂಷನ್​​ಗೆ ಹೋಗಬೇಕು ಅಂದ್ರೇ ಎಲ್ಲಾದ್ರೂ ಸರಿ ಸಾಲ ಮಾಡಿಯಾದ್ರೂ ಹಣ ಹೊಂದಿಸಿಕೊಡ್ತಾ ಇದ್ರು. ಅದೇ ರೀತಿ ಎಲ್ಲಾ ಮಕ್ಕಳು ಅವರ ಆಸೆಯನ್ನ ಈಡೇರಿದ್ದಾರೆ. ಇಷ್ಟಾದ್ರೂ ಓದುವುದನ್ನ ಯಾವತ್ತಿಗೂ ನಿಲ್ಲಿಸಬೇಡಿ ಅನ್ನೋದು ನನ್ನ ಮಾವ ಶ್ರೀನಿವಾಸಯ್ಯ ಅವರ ಮಾತು" ಹೀಗಂತ ಅಳಿಯ ದಾಸೇಗೌಡ ತನ್ನ ಮಾವನ ಬಗ್ಗೆ ಹೇಳುತ್ತಾರೆ.

ಶ್ರೀನಿವಾಸಯ್ಯರ ಅವಿರತಶ್ರಮದಿಂದ ಮಕ್ಕಳೆಲ್ಲರೂ ಹೈ ಕ್ಲಾಸ್​​ ಉದ್ಯೋಗಿಯಾಗಿದ್ದಾರೆ. ಒಬ್ಬ ಮಗನನ್ನು ಕಳೆದುಕೊಂಡ ದು:ಖ ಇದ್ರೂ ನಾಲ್ವರಿಗೆ ವಿದ್ಯಾಭ್ಯಾಸ ಕೊಡಿಸಿದ ಸಂತಸ ಮತ್ತೊಂದೆಡೆ ಇದೆ. ಇಂತಹ ಶಿಕ್ಷಣ ಪ್ರೇಮಿಗಳು ಇದ್ದರೆ ಕರ್ನಾಟಕ ಭಾರತದಲ್ಲೇ ನಂಬರ್​ ವನ್​​​​​​​​​​​​​ ವಿದ್ಯಾರ್ಹತೆ ಹೊಂದಿದ ರಾಜ್ಯ ಅನ್ನೋ ಕೀರ್ತಿಗೆ ಸುಲಭವಾಗಿ ಪಾತ್ರವಾಗಬಹುದು.

Related Stories

Stories by YourStory Kannada