ಸಾಲುಮರದ ತಿಮ್ಮಕ್ಕ ಎಲ್ಲರಿಗೂ ಗೊತ್ತು... ಸಾಲು ಮರದ ತಿಮ್ಮಪ್ಪ ಗೊತ್ತಾ..?

ಕೃತಿಕಾ

ಸಾಲುಮರದ ತಿಮ್ಮಕ್ಕ ಎಲ್ಲರಿಗೂ ಗೊತ್ತು... ಸಾಲು ಮರದ ತಿಮ್ಮಪ್ಪ ಗೊತ್ತಾ..?

Monday November 09, 2015,

2 min Read

ಅನೇಕ ಕುಟುಂಬಗಳು ಸ್ವಾರ್ಥವಿಲ್ಲದೆ ಸಾಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯದ ಆರಂಭದಿಂದಲೂ ಇಲ್ಲೊಂದು ಕುಟುಂಬ ಸಾಲು ಮರಗಳನ್ನು ಬೆಳಸಿ, ಪೋಷಿಸಿಕೊಂಡು ಬಂದಿದೆ. ಮರಗಳನ್ನು ತಮ್ಮ ಮಕ್ಕಳಂತೆ ಸಾಕಿ, ಸಲುಹಿ, ಕಾಪಾಡಿಕೊಂಡು ಬಂದಿರುವ ಕುಟುಂಬ ಇರೋದು ಬೆಂಗಳೂರಿಗೆ ಕೇವಲ ೨೦ ಕೀ.ಮಿ ಹತ್ತಿರದಲ್ಲಿ ಇರುವ ಯಲಹಂಕದ ಚಲ್ಲಹಳ್ಳಿಯಲ್ಲಿ.

image


ಬೆಂಗಳೂರಿನ ಸೆರಗಲ್ಲೇ ಇರುವ ಚಲ್ಲಹಳ್ಳಿಯಲ್ಲಿ ಸಾಲು ಮರಗಳ ಬೆಳೆಸುತ್ತಿರೋದು ತಿಮ್ಮಪ್ಪ. ಇವರನ್ನು ಕೇವಲ ತಿಮ್ಮಪ್ಪ ಅಂತ ಕರೆದರೆ ಯಾರಿಗೂ ಗೊತ್ತಾಗುವುದಿಲ್ಲ. ಸಾಲು ಮರದ ತಿಮ್ಮಪ್ಪ ಅಂದ್ರೆ ಸಾಕು ಥಟ್ ಅಂತ ಗೊತ್ತಾಗಿಬಿಡುತ್ತದೆ. ದಶಕಗಳಿಂದ ಈ ತಿಮ್ಮಪ್ಪ ಹಾಗೂ ಕುಟುಂಬ ಸ್ವಾರ್ಥವಿಲ್ಲದೆ ಸಾಲು ಮರಗಳು, ಅರಣ್ಯ ಜೀವ ಸಂಕುಲವನ್ನ ಕಾಪಾಡಿಕೊಂಡು ಬರುತ್ತಿದೆ. ಸ್ವತಂತ್ರ ಬಂದ ನಂತರ ಮೈಸೂರು ರಾಜ್ಯ ಉದಯದ ಕಾಲದಲ್ಲಿ ಅಂದರೆ ೧೯೫೯-೬೦ರಲ್ಲಿ ತಿಮ್ಮಪ್ಪರ ತಂದೆ ಕೃಷ್ಣಯ್ಯರಿಗೆ ಮೈಸೂರು ಸರ್ಕಾರ ಚಲ್ಲಹಳ್ಳಿ ಬಳಿಯ ೨೮೦ ಎಕರೆ ಅರಣ್ಯ ಪ್ರದೇಶದಲ್ಲಿರುವ ಮರ, ಗಿಡಗಳನ್ನ ಉಳಿಸಿಕೊಂಡು ಹೋಗುವಂತೆ ಪತ್ರವನ್ನ ನೀಡಿತ್ತು. ಆರಂಭದಲ್ಲಿ ಕೃಷ್ಣಯ್ಯ ಅರಣ್ಯ ಸಂಪತ್ತನ್ನ ನೋಡಿಕೊಳ್ಳುವುದರ ಜೊತೆಗೆ ಸಾವಿರಾರು ಸಾಲು ಮರಗಳನ್ನ ನೆಟ್ಟು ಅರಣ್ಯವನ್ನು ಇನ್ನಷ್ಟು ಬೆಳೆಸಿದ್ದರು. ಅವರು ಸಾವನಪ್ಪಿದ ನಂತರದಲ್ಲಿ ಕೃಷ್ಣಯ್ಯನ ಮಗ ತಿಮ್ಮಪ್ಪ ಸಾವಿರಾರು ಸಾಲು ಮರಗಳಾಗಿ ನೆಟ್ಟು ಉಳಿಸಿಕೊಂಡು ಬರುತ್ತಿದ್ದಾರೆ. ತಿಮ್ಮಪ್ಪ ಅರಣ್ಯ ಸಂಕುಲವನ್ನ ರಕ್ಷಣೆ ಮಾಡುವ ಸಲುವಾಗಿ ಊರನ್ನ ಬಿಟ್ಟು ಕಾಡಿನಲ್ಲಿ ಬಂದು ವಾಸಿಸುತ್ತಿದ್ದಾರೆ. ಸಣ್ಣದಾದ ಗುಡಿಸಿಲಿನಲ್ಲಿ ಇದ್ದುಕೊಂಡು ನೂರಾರು ಮರಗಳನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ತಿಮ್ಮಪ್ಪನಿಗೆ ನೆಟ್ಟಿರುವ ಮರಗಳ ಮೇಲೆ ಇನ್ನಿಲದ ಮೋಹ, ಪ್ರೀತಿ, ಮಮತೆ. ಮರಗಳಿಗೇನಾದರೂ ಸ್ವಲ್ಪ ಗೆದ್ದಲು ಬಿದ್ದಿದ್ದರು ಅದನ್ನ ಬಿಡಿಸಿ, ಬೆಳೆಸುವವರೆಗೂ ನಿದ್ದೆ ಬರೋದಿಲ್ಲ. ಅದಲ್ಲದೆ ಒಂದು ಗಿಡಕ್ಕೆ ಏನಾದರು ಆದ್ರು, ಬೇರೆ ಗಿಡವನ್ನ ನೆಟ್ಟು ಪೋಷಿಸುವಂತಹ ಸ್ವಭಾವ ತಿಮ್ಮಪ್ಪರದ್ದು.

image


ನಮ್ಮ ತಂದೆಯವರ ಕಾಲದಿಂದಲೂ ನಮ್ಮ ಕುಟುಂಬದವರೆಲ್ಲರೂ ಕಾಡಿನ ಮಧ್ಯೆಯೇ ಬೆಳೆದಿದ್ದೇವೆ. ಗಿಡಗಳನ್ನು ನೆಡುವುದು, ಬೆಳೆಸುವುದು, ಹಾರೈಕೆ ಮಾಡುವುದು ಅಂದ್ರೆ ನಮಗೆ ಖುಷಿ ನೀಡುವ ಕೆಲಸ. ಕಾಡಿನಲ್ಲಿದ್ದುಕೊಂಡು ಮರಗಿಡಗಳನ್ನು ಉಳಿಸಿ ಬೆಳಸೋದು ನನಗೆ ಇಚ್ಟ. ಇದು ನಮ್ಮ ತಂದೆಯವರು ಕಲಿಸಿದ ಪಾಠ. ಅವರು ಹೇಳಿದ್ದನ್ನು ನಾನು ಇಂದಿಗೂ ಪಾಲಿಸಿಕೊಂಡು ಹೋಗುತ್ತಿದ್ದೇನೆ ಅಂತಾರೆ ಸಾಲುಮರದ ತಿಮ್ಮಪ್ಪ. ಇದರ ಜೊತೆಗೆ ತಿಮ್ಮಪ್ಪ ಮರಗಳನ್ನು ಕಡಿದು ಹಾಕುತ್ತಿರುವ ಇಂದಿನ ಜನರಿಗೆ ಬುದ್ದಿವಾದವನ್ನೂ ಹೇಳುತ್ತಾರೆ. ಮರಗಳಿದ್ದರೆ ಮನುಷ್ಯ, ಮನುಷ್ಯನಿದ್ದರೆ ಮರವಲ್ಲ. ಈ ಮಾತನ್ನ ನಾವೆಲ್ಲರೂ ತಿಳಿದುಕೊಳ್ಳಬೇಕು. ನಾವು ಮರಗಳನ್ನ ಕಡಿಯುತ್ತಾ ಹೋದ್ರೆ ಮಳೆ ನಮ್ಮಿಂದ ದೂರವಾಗುತ್ತೆ. ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುವ ದಿನ ದೂರವಿಲ್ಲ. ಇದನ್ನು ಈಗಿನ ಜನರು ಅರಿತು ಮರಗಳನ್ನು ಉಳಿಸಿ ಬೆಳದಬೇಕು ಅಂತಾರೆ.

image


ಇಲ್ಲಿರುವ ೨೮೦ ಎಕರೆಗೂ ಹೆಚ್ಚು ಅರಣ್ಯ ಸಂಪತ್ತನ್ನ ನೋಡಿಕೊಳ್ಳಬೇಕಾದದ್ದು ಅರಣ್ಯ ಇಲಾಖೆಯ ಕರ್ತವ್ಯ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ತಿಂಗಳಿಗೊಮ್ಮೆ ಇಲ್ಲಿಗೆ ಬಂದು ಹೊರಟು ಹೋದರೆ ಇತ್ತ ತಲೆಯನ್ನು ಹಾಕೋಲ್ಲ. ಯಾವೊಬ್ಬ ಅಧಿಕಾರಿಗಳು ಅರಣ್ಯ ಸಂಪತ್ತನ್ನ ಉಳಿಸುವ ನಿಟ್ಟಿನಲ್ಲಿ ಕೆಲಸವನ್ನ ನಿರ್ವಹಿಸುತ್ತಿಲ್ಲ. ಸಾಲು ಮರದ ತಿಮ್ಮಪ್ಪರ ಕುಟುಂಬವೇ ಅರಣ್ಯ ಸಂಪತ್ತನ್ನ ನೋಡಿಕೊಂಡು ಉಳಿಸಿಕೊಂಡು ಬರುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಹತ್ತಾರು ಭಾರಿ ಬೆಂಕಿ ಬಿದ್ದಾಗ ವನ್ಯ ಸಂಕುಲವನ್ನ ಕಾಪಾಡುವವರೇ ಇವರು. ಅರಣ್ಯದ ಸುತ್ತಮುತ್ತಲಲ್ಲಿ ಯಾವೊಬ್ಬ ಖಾಸಗಿ ವ್ಯಕ್ತಿಗಳು ಒತ್ತುವರಿಯನ್ನ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಅರಣ್ಯ ಪ್ರದೇಶದಲ್ಲಿ ಬೆಲೆ ಬಾಳುವಂತಹ ಮರಗಳಿದ್ದು, ಆಗಾಗ್ಗೆ ಮರಗಳ ಕಳ್ಳತನವು ನಡೆಯುತ್ತಿರುತ್ತದೆ. ಅಂತಹ ಮರಗಳ್ಳರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡುತ್ತಿರುತ್ತಾರೆ. ಅಲ್ಲದೆ ಮರಗಳನ್ನ ಕದಿಯುವ ಮಂದಿಗೆ ಬುದ್ದಿವಾದವನ್ನ ಹೇಳುವ ಕೆಲಸವನ್ನ ತಿಮ್ಮಪ್ಪ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಅರಣ್ಯದಲ್ಲಿನ ಗಿಡ ಮೂಲಿಕೆಗಳಿಂದ ಹಸುಗಳ, ಜನರ ಕೆಲವು ಖಾಯಿಲೆಗಳಿಗೆ ಔಷದಿಗಳನ್ನ ನೀಡಿ ಅದರಿಂದ ಬರುವಂತಹ ಅಲ್ಪಸ್ವಲ್ಪ ಹಣದಿಂದ ಜೀವನ ನಡೆಸುತ್ತಿದ್ದಾರೆ. ಇದೀಗ ತಿಮ್ಮಪ್ಪ ಆರ್ಥಿಕವಾಗಿ ಬಡತನದಿಂದ ಬೇಯುತ್ತಿದ್ದಾರೆ. ಅರಣ್ಯ ಪ್ರೇಮಿಯಂತೆ ಹೆಸುರವಾಸಿಯಾಗಿರುವ ಸಾಲು ಮರದ ತಿಮ್ಮಪ್ಪ ಇಷ್ಟೆಲ್ಲಾ ವನ್ಯ ಸಂಕುಲವನ್ನ ಉಳಿಸಿಕೊಂಡು ಬರುತ್ತಿದ್ದರು ಅರಣ್ಯ ಇಲಾಖೆಯಾಗಲಿ, ಸರ್ಕಾರವಾಗಲಿ ಇವರನ್ನ ಗುರುತಿಸಿಲ್ಲ. ಕೇವಲ ವನ್ಯ ಸಂಪತ್ತನ್ನ ಕಾಪಾಡಲೂ ತನ್ನ ಜೀವನವನ್ನೆ ಅರಣ್ಯದಲ್ಲಿ ಮುಡುಪಾಗಿಟ್ಟಿರುವ ತಿಮ್ಮಪ್ಪನಿಗೆ ಇದುವರೆಗೂ ಸರ್ಕಾರ, ಸಂಘಸಂಸ್ಥೆಗಳು ಗೌರವಿಸಿಲ್ಲವೆಂದರೇ ಬೆಸರದ ಸಂಗತಿ. ಸಾಲು ಮರದ ತಿಮ್ಮಕ್ಕನಿಗೆ ಸಿಕ್ಕಂತಹ ಪ್ರಾಶಸ್ತ್ಯ ತಿಮ್ಮಪ್ಪನಿಗೆ ಸಿಕ್ಕಿಲ್ಲ, ಇಂತಹ ಎಲೆಮರಿಕಾಯಿಯಂತೆ ಇರುವ ಇವರನ್ನ ಸರ್ಕಾರ ಗುರುತಿಸಿ ಗೌರವಿಸಬೇಕೆನ್ನುವುದು ಗ್ರಾಮಸ್ಥರ ಅನಿಸಿಕೆ.