ಭಾರತದ ಮೊದಲ ಮಂಗಳಮುಖಿ ಸುದ್ದಿ ವಾಚಕಿ ಪದ್ಮಿನಿ ಪ್ರಕಾಶ್..!

ಟೀಮ್​ ವೈ.ಎಸ್​. ಕನ್ನಡ

0

ಮಂಗಳಮುಖಿಯರಿಗೂ ಸಮಾಜದಲ್ಲಿ ಗೌರವಯುತವಾಗಿ ಬದುಕು ನಡೆಸುವ ಹಕ್ಕಿದೆ. ಇದನ್ನು ಎಲ್ಲರೂ ಗೌರವಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು , ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದಿದೆ. ಇದರಿಂದ ಸ್ಫೂರ್ತಿ ಪಡೆದ 32ರ ಹರೆಯದ ಪದ್ಮಿನಿ ಪ್ರಕಾಶ್ ಸುದ್ದಿ ವಾಚಕರಾಗಿ ಸುದ್ದಿಯಾಗಿದ್ದಾರೆ. ದೇಶದ ಮೊದಲ ತೃತೀಯ ಲಿಂಗಿ ಎಂಬ ಸುದ್ದಿ ವಾಚಕಿ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಈ ಮೂಲಕ ಧ್ವನಿ ಇರದ ಸಮುದಾಯದ ಧ್ವನಿಯಾಗಿ ಅವರು ಹೊರಹೊಮ್ಮಿದ್ದಾರೆ.

ಪದ್ಮಿನಿ ಬಾಲ್ಯ ಹೇಗಿತ್ತು..?

ಇತರ ತೃತೀಯ ಲಿಂಗಿಗಳಂತೆ ಪದ್ಮಿನಿ ಅವರ ಬಾಲ್ಯ ಕಾಲ ಸುಮಧುರವಾಗಿರಲಿಲ್ಲ. ಕಷ್ಟ ಕಾರ್ಪಣ್ಯಗಳಿಂದ ಕೂಡಿತ್ತು. ತಿರಸ್ಕಾರ, ನಿಂದನೆಗೆ ಅವರು ಗುರಿಯಾಗಿದ್ದರು. 13ರ ಚಿಕ್ಕಪ್ರಾಯದಲ್ಲಿ ಅವರು, ಕುಟುಂಬ ಸದಸ್ಯರು ಪದ್ಮಿನಿ ಅವರನ್ನು ನಿರ್ಲಕ್ಷ್ಯಿಸಿದರು. ಅವರನ್ನು ತಿರಸ್ಕರಿಸಿದರು. ಅವರ ಬದುಕು ಕಷ್ಟ ಕಾರ್ಪಣ್ಯಗಳ ಗೂಡಾಯಿತು. ಬಿಬಿಸಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪದ್ಮಿನಿ ಅವರು, ತಮ್ಮ ಬಾಲ್ಯ ಕಾಲದ ದಿನಗಳನ್ನು ಬಿಡಿಸಿಟಿದ್ದಾರೆ.

’ದೇಶಾದ್ಯಂತ ಸಂಚರಿಸಿದೆ. ದೂರ ಶಿಕ್ಷಣ ವ್ಯವಸ್ಥೆಯಡಿ ಬಿಕಾಂ ಶಿಕ್ಷಣಕ್ಕೆ ನೋಂದಾಯಿಸಿದ್ದೆ. ಆದರೆ ಆರ್ಥಿಕ ಸಂಕಷ್ಟದಿಂದ ಇದನ್ನು ಪೂರ್ತಿಗೊಳಿಸಲಾಗಿಲ್ಲ. ಬಳಿಕ ಭರತ ನಾಟ್ಯ ಅಭ್ಯಸಿಸಿದೆ. ತೃತೀಯ ಲಿಂಗಿಗಳ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಪ್ರಶಸ್ತಿ ಗೆದ್ದೆ . ಇದರಿಂದ ಆತ್ಮವಿಶ್ವಾಸ ಹೆಚ್ಚಾಯಿತು’ ಎನ್ನುತ್ತಾರೆ ಪದ್ಮಿನಿ.

ಬಳಿಕ ಟೆಲಿವಿಷನ್ ಧಾರಾವಾಹಿಯಲ್ಲಿ ಅಭಿನಯಿಸಿದ್ದೆ. ತೃತೀಯ ಲಿಂಗಿಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಧ್ವನಿ ಎತ್ತಿ, ಅವರ ನ್ಯಾಯ ಬದ್ಧ ಹಕ್ಕಿಗಾಗಿ ಹೋರಾಟ ನಡೆಸಿದೆ ಎನ್ನುತ್ತಾರೆ ಪದ್ಮಿನಿ.

ಟೆಲಿವಿಷನ್ ಸಂಸ್ಥೆಯೊಂದ ಸುದ್ದಿ ವಾಚಕಿಯಾಗುವುದು ಕೂಡ ಸುಲಭದ ಮಾತಾಗಿರಲಿಲ್ಲ. ಶಬ್ದಗಳ ಸ್ಪಷ್ಟ ಉಚ್ಚಾರ ಮತ್ತು ಪ್ರೇಕ್ಷಕರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಸಂದೇಹ ಕೂಡ ನನ್ನಲ್ಲಿ ಮನೆ ಮಾಡಿತ್ತು. ಆದರೆ ಸಹೋದ್ಯೋಗಿಗಳ ಬೆಂಬಲದಿಂದ ಎಲ್ಲ ಸಮಸ್ಯೆಗಳನ್ನು ನಿವಾರಿಸಿದೆ ಎನ್ನುತ್ತಾರೆ ಪದ್ಮಿನಿ. ನನ್ನ ಮೇಲೆ ನಂಬಿಕೆ ಇರಿಸಿ ಕೆಲಸ ಕೊಟ್ಟ ಲೋಟಸ್ ಚಾನೆಲ್ ನನ್ನ ಬದುಕಿನಲ್ಲಿ ಆಶಾ ಕಿರಣ ಮೂಡಿಸಿತು . ಇದು ಧನ್ಯತಾ ಭಾವದಿಂದ ಪದ್ಮಿನಿ ಹೇಳುವ ಮಾತು. ಇದೀಗ ಎಲ್ಲರ ಬೆಂಬಲದಿಂದ ಸಂಜೆ ಏಳು ಗಂಟೆಗೆ ಲೋಟಸ್ ಚಾನೆಲ್ ನಲ್ಲಿ ನಾನು ಸುದ್ದಿ ಓದುತ್ತಿದ್ದೇನೆ ಎಂದು ಹೇಳುತ್ತಾರೆ ಪದ್ಮಿನಿ.

ಪದ್ಮಿನಿ ಅವರ ಬದುಕು ಹಲವರ ಬದುಕಿಗೆ ಸ್ಫೂರ್ತಿ ನೀಡಿದೆ. ಸವಾಲುಗಳನ್ನು ಎದುರಿಸುವ ಆತ್ಮ ವಿಶ್ವಾಸ ನೀಡಿದೆ. ಸಂಕಿರ್ಣ ಸಮಸ್ಯೆಗಳಿಂದ ಬಳಲುತ್ತಿರುವ ತೃತೀಯ ಲಿಂಗಿಗಳಿಗೆ ಬದುಕು ಕಟ್ಟಿಕೊಡುವ ಭರವಸೆಯ ಬೆಳಕು ನೀಡಿದೆ.

ಅನುವಾದಕರು : ಎಸ್​ಡಿ

Related Stories

Stories by YourStory Kannada