ಕಾನನದಲ್ಲೊಬ್ಬಳು ಅಜ್ಞಾತ ಸುಂದರಿ ‘ಎರ್ಮಾಯಿ ಫಾಲ್ಸ್’

ನಿನಾದ

0

ಮಳೆಗಾಲ ಆರಂಭವಾದರೆ ಸಾಕು ಪ್ರಕೃತಿ ಮಾತೆಯ ಸೌಂದರ್ಯ ಇಮ್ಮಡಿಗೊಳ್ಳುತ್ತೆ. ಅಲ್ಲಲ್ಲಿ ಕಾಣ ಸಿಗುವ ಸಣ್ಣ ಪುಟ್ಟ ಝರಿಗಳು, ಜಲಪಾತಗಳ ಅಮೋಘ ಜಲರಾಶಿ,ಆಕೆಯ ಅಂದವನ್ನು ಹೆಚ್ಚಿಸಿ ನಿಸರ್ಗ ಪ್ರಿಯರ ಮನ ತಣಿಸುತ್ತಿವೆ. ಅಂತಹ ಜಲರಾಶಿಯನ್ನು ಒಳಗೊಂಡ ಜಲಪಾತವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ.

ಕರ್ನಾಟಕದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಎರ್ಮಾಯಿ ಅನೇಕರನ್ನು ತನ್ನತ್ತ ಸೆಳೆಯುತ್ತಿದೆ. ದಟ್ಟ ಕಾನನದ ನಡೆವೆ ಇರುವ ಪ್ರವಾಸಿ ತಾಣವಾಗುವತ್ತ ಹೆಜ್ಜೆ ಇಡುತ್ತಿದೆ. ಜಲಪಾತದಿಂದ ಬೀಳುವ ನೀರನ್ನು ಉಪಯೋಗಿಸಿಕೊಂಡು ವಿದ್ಯುತ್​​ ಉತ್ಪಾದಿಸುವವರೂ ಕೂಡ ಈ ಫಾಲ್ಸ್​​ನ ಅಕ್ಕಪಕ್ಕದಲ್ಲಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಸಮೀಪದ ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ರಮ್ಯ ವಾತವರಣದಲ್ಲಿರುವ ಈ ಜಲಪಾತ ಪ್ರಕೃತಿ ಮಾತೆಯ ಸುಂದರ ಸೃಷ್ಟಿ. ಸುಮಾರು 80 ಅಡಿ ಎತ್ತರದಿಂದ ಕಲ್ಲು ಬಂಡೆಗಳ ನಡುವೆ ನಾಚುತ್ತಾ ಬಳುಕುತ್ತಾ ಧುಮ್ಮುಕ್ಕಿ ಬರುವ ಎರ್ಮಾಯಿ ಫಾಲ್ಸ್​​ನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

ಎಳುವರೆ ಹಳ್ಳ ಎಂಬ ಸ್ಥಳ ಎರ್ಮಾಯಿ ಫಾಲ್ಸ್​​ನ ಉಗಮ ಸ್ಥಾನ. ಈ ಜಲಪಾತಕ್ಕೆ ಎರ್ಮಾಯಿ ಎಂಬ ಹೆಸರು ಬಂದಿರೋದರ ಹಿಂದೆಯೂ ಒಂದು ಇತಿಹಾಸವಿದೆ. ಹಿಂದೆ ಏಳು ಜನ ಯುವಕರು ಗದ್ದೆ ಉಳುಮೆ ಮಾಡಿ ಬಂದು ತಮ್ಮ ಎತ್ತುಗಳನ್ನು ಹಾಗೂ ಉಳುಮೆ ಸಾಧನಗಳನ್ನು ಈ ಜಾಗದಲ್ಲಿ ತೊಳೆಯುತ್ತಿದ್ದರಂತೆ. ಹೀಗೆ ಎತ್ತುಗಳನ್ನು ತೊಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಎತ್ತುಗಳು ಮಾಯವಾದವಂತೆ. ತುಳುವಿನಲ್ಲಿ ಎತ್ತಿಗೆ ಎರು ಎಂದು ಕರೆಯುತ್ತಾರೆ. ಹಾಗಾಗಿ ಎತ್ತುಗಳು ಮಾಯವಾದ ಜಾಗವನ್ನು “ಎರುಮಾಯಿ’ ಎಂಬ ಹೆಸರು ಬಂತು. ಆದರೆ ಜನರ ನಿತ್ಯ ಬಳಕೆಯಿಂದಾಗಿ ಅದುವೇ ಎರ್ಮಾಯಿ ಬದಲಾಯಿತು.

ಎರ್ಮಾಯಿ ಜಲಪಾತದಷ್ಟೇ ಸುಂದರವಾಗಿದೆ ಜಲಪಾತಕ್ಕೆ ಸಾಗುವ ದಾರಿ. ದಟ್ಟ ಅರಣ್ಯದ ನಡುವೆ ಸಣ್ಣ ಪುಟ್ಟ ಹಳ್ಳ, ತೊರೆ, ಕಾಲು ಸೇತುವೆಗಳನ್ನು ದಾಟುತ್ತಾ, ಪ್ರಬಲ ಶತ್ರುವಿನಂತೆ ಕಾಡುವ ಜಿಗಣೆಗಳಿಂದ ತಪ್ಪಿಸಿಕೊಳ್ಳುತ್ತಾ ಸಾಗುವಾಗ ಸಿಗುವ ಖುಷಿಯನ್ನು ಅನುಭವಿಸಿಯೇ ನೋಡಬೇಕು.ಅಲ್ಲಿ ಕಾಣ ಸಿಗುವ ಪ್ರಕೃತಿ ಮಾತೆಯ ಒಂದೊಂದು ದೃಶ್ಯಗಳೂ ಕೂಡ ಕಣ್ಣಲ್ಲಿ ಅಚ್ಚಳಿಯದೇ ಉಳಿಯುವಂತಹದ್ದು. ಇವುಗಳನ್ನು ನೋಡುತ್ತಾ ಸಾಗಿದರೆ ಆಯಾಸವೆಲ್ಲಾ ಮಾಯವಾಗಿ ಹೊಸ ಚೈತನ್ಯ ಮೂಡುತ್ತದೆ.

ಮಳೆ ಪ್ರಾರಂಭವಾಗುವ ಜೂನ್ ತಿಂಗಳಿನಿಂದ ಹಿಡಿದು ಏಪ್ರೀಲ್ ಮೇ ತಿಂಗಳವರೆಗೂ ಎರ್ಮಾಯಿ ತುಂಬಿ ಹರಿಯುತ್ತಾಳೆ. ಎರ್ಮಾಯಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮಂಗಳೂರು, ಮೈಸೂರು, ಬೆಂಗಳೂರು ಹೀಗೆ ಹೊರ ರಾಜ್ಯಗಳಿದಂಲೂ ಪ್ರವಾಸಿಗರು ಬರುತ್ತಾರೆ.ನವೆಂಬರ್ ಅಥವಾ ಡಿಸೆಂಬರ್ ತಿಂಗಳು ಇಲ್ಲಿಗೆ ಬರಲು ಸೂಕ್ತ ಕಾಲ.ಆದರೆ ಜಿಗಣೆ ಕಾಟ ಜಾಸ್ತಿ. ಹಾಗಾಗಿ ಅಗತ್ಯ ತಯಾರಿಯೊಂದಿಗೆ ಬಂದ್ರೆ ಉತ್ತಮ ಅನ್ನುತ್ತಾರೆ ಸ್ಥಳೀಯ ನಿವಾಸಿ ಪದ್ಮನಾಭ ಗೌಡ.

" ನಾನು ಅನೇಕ ಬಾರಿ ಜೋಗಕ್ಕೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿ ಆ ಜನ ಜಂಗುಳಿಯ ನಡುವೆ ನನಗೆ ಅಷ್ಟೊಂದು ಪ್ರಶಾಂತತೆ ಸಿಕ್ಕಿರಲಿಲ್ಲ. ಆದರೆ ಎರ್ಮಾಯಿ ಫಾಲ್ಸ್ ನಲ್ಲಿ ನನಗೆ ಅದು ದೊರೆತಿದೆ.ಜೊತೆಗೆ ಎರ್ಮಾಯಿ ಸುತ್ತಮುತ್ತಲಿನ ಹಚ್ಚ ಹಸುರಿನ ಪರಿಸರ ನನ್ನನ್ನು ಯಾವುದೋ ಹೊಸ ಲೋಕಕ್ಕೆ ಕೊಂಡೊಯ್ದ ಅನುಭವ ನೀಡುತ್ತದೆ" ಅನ್ನೋದು ಬೆಂಗಳೂರಿನಿಂದ ಆಗಮಿಸಿರುವ ಪ್ರವಾಸಿ ಅನ್ನಪೂರ್ಣ ಅವರ ಮಾತು.

ಎರ್ಮಾಯಿ ಕೇವಲ ಮನಸ್ಸಿಗೆ ಮುದ ನೀಡೋದು ಮಾತ್ರವಲ್ಲದೇ ಅಕ್ಕಪಕ್ಕದ ಮನೆಗಳನ್ನು ಬೆಳಗಿಸುತ್ತಿದೆ. ಇಲ್ಲಿ ಕಿರು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ವರ್ಷ ಪೂರ್ತಿ ಎರ್ಮಾಯಿ ಸುತ್ತಮುತ್ತಲಿನ ಮನೆಗಳಿಗೆ ವಿದ್ಯುತ್ ದೊರಕುತ್ತಿದೆ.ಜೊತೆಗೆ ನೀರೂ ಸಿಗುತ್ತಿದೆ. ಆ ಮೂಲಕ ನಾನು ಜೋಗಕ್ಕಿಂತೇನೂ ಕಡಿಮೆಯಲ್ಲ ಅಂತಾ ತೋರಿಸಿಕೊಟ್ಟಿದೆ ಎರ್ಮಾಯಿ ಫಾಲ್ಸ್.

ಎರ್ಮಾಯಿ ದಟ್ಟ ಕಾಡಿನೊಳಗಿದ್ದರೂ ಅಲ್ಲಿಗೆ ಸಾಗುವ ಹಾದಿ ಕಠಿಣವಾದದ್ದಲ್ಲ. ಪ್ರವಾಸಿಗರು ಬೆಳ್ತಂಗಡಿಗೆ ಬಂದು ಕಾಜೂರು ಕಡೆಗೆ ಸಾಗುವ ಬಸ್ ಏರಿ ಕಾಜೂರುನಲ್ಲಿ ಇಳಿದುಕೊಂಡು ಕಾಡು ದಾರಿಯಲ್ಲೇ 2 ಕಿ.ಮೀ. ಸಾಗಿದರೆ ಎರ್ಮಾಯಿ ಫಾಲ್ಸ್ ಮಡಿಲು ಸೇರಬಹುದು. ಇನ್ನು ತೆಪ್ಪ ಸವಾರಿಯ ಮಜಾ ಅನುಭವಿಸಬೇಕು ಅಂದುಕೊಂಡವರು ಬೆಳ್ತಂಗಡಿಯಿಂದ ಕೊಲ್ಲಿ ಎಂಬ ಜಾಗಕ್ಕೆ ಬಸ್ ಅಥವಾ ಖಾಸಗಿ ವಾಹನದ ಮೂಲಕ ಬಂದು ತೆಪ್ಪದಲ್ಲಿ ನದಿ ದಾಟಿಯೂ ಕಾಲುದಾರಿಯ ಮೂಲಕ ಜಲಪಾತ ತಲುಪಬಹುದು.ಇನ್ನು ದಿನೇ ದಿನೇ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರೋದರಿಂದ ಇಲ್ಲಿ ರೆಸಾರ್ಟ್, ಹೋಟೆಲ್ ಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ.

ಸದಾ ಆಫೀಸು, ಕಾಲೇಜು, ಕ್ಲಾಸ್ ಅಂತಾ ಕಳೆದು ಹೋಗಿ ಜಿಡ್ಡು ಗಟ್ಟಿ ಹೋಗಿರುವ ಮನಸ್ಸಿಗೆ ವಿರಾಮ ನೀಡ ಬಯಸುವ ನಿಸರ್ಗ ಪ್ರಿಯರಿಗೆ, ಯಾವುದಾದರೂ ಹೊಸ ಜಾಗಕ್ಕೆ ಹೋಗಿ ನಿಶ್ಯಬ್ದ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಳೆಯಬೇಕು ಅಂದುಕೊಂಡವರಿಗೆ ಎರ್ಮಾಯಿ ಫಾಲ್ಸ್ ಬೆಸ್ಟ್ ಪ್ಲೇಸ್. ಇತರ ಜೊತೆ ಇನ್ನು ಅನೇಕ ಪ್ರವಾಸಿಗಳು ಬೆಳ್ತಂಗಡಿ ಸುತ್ತಮುತ್ತಲೇ ಇರೋದರಿಂದ ಅದನ್ನು ಒಂದು ರೌಂಡ್ ನೋಡ್ಕೊಂಡು ಬರಬಹುದು.