ನಿರ್ಗತಿಕ ಮಕ್ಕಳ ಕಣ್ಣಲ್ಲಿ ಹೊಳಪು ಮೂಡಿಸಿದ `ಮ್ಯಾಜಿಕ್ ಬಸ್’

ಟೀಮ್​ ವೈ.ಎಸ್​. ಕನ್ನಡ

0


ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತಕ್ಕೆ ಬಡತನವನ್ನು ಮೆಟ್ಟಿ ನಿಲ್ಲೋದು ಅಷ್ಟು ಸುಲಭವಲ್ಲ. ತುತ್ತು ಅನ್ನ, ಮಾನ ಮುಚ್ಚಿಕೊಳ್ಳಲು ಬಟ್ಟೆ, ತಲೆ ಮೇಲೊಂದು ಸೂರಿಲ್ಲದ ಮಂದಿಯೇ ಜಾಸ್ತಿ. ಫುಟ್ಬಾತ್, ಕೊಳಚೆ ಪ್ರದೇಶಗಳಲ್ಲಿ ಅವರ ಜೀವನ ಸಾಗ್ತಾ ಇದೆ. ಆಟ-ಪಾಠದಲ್ಲಿ ಬಾಲ್ಯ ಕಳೆದು, ಸುಂದರ ಬದುಕು ರೂಪಿಸಿಕೊಳ್ಳಬೇಕಾಗಿದ್ದ ಮಕ್ಕಳು, ಅನ್ನಕ್ಕಾಗಿ ಅಲೆಯುತ್ತಿದ್ದಾರೆ. ಇಂತಹ ಬಡ ಹಾಗೂ ನಿರ್ಗತಿಕ ಮಕ್ಕಳ ಸಹಾಯಕ್ಕೆ ನಿಂತು ಅವರಿಗೆ ಓದು ಬರಹ ಕಲಿಸಿ, ಅವರ ಭವಿಷ್ಯವನ್ನು ಉಜ್ವಲ ಮಾಡುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಪರಿಚಯಿಸಿದ ಯೋಜನೆ ಈಗ ಸರ್ಕಾರದಿಂದ ಹಿಡಿದು ಇಡೀ ದೇಶದ ಮೆಚ್ಚುಗೆಗೆ ಕಾರಣವಾಗಿದೆ. ಸರ್ಕಾರೇತರ ಸಂಸ್ಥೆಗಳು ಕೂಡ ಇದೇ ಯೋಜನೆಯನ್ನು ಅನುಸರಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡ್ತಾ ಇವೆ. ಆಟ ಆಡುತ್ತಲೆ ಮಕ್ಕಳು ಶಿಕ್ಷಣ ಪಡೆಯುವ ಯೋಜನೆ ಇದಾಗಿದ್ದು, ಮನರಂಜನೆ ಹಾಗೂ ಶಿಕ್ಷಣ ಒಟ್ಟಿಗೆ ಸಿಗುತ್ತಿದೆ. ಬಡ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ತನ್ನ ಜೀವನವನ್ನು ಮುಡುಪಾಗಿಟ್ಟು, ಎಲ್ಲರ ಮೆಚ್ಚುಗೆಗೆ ಪಾತ್ರರಾರ ಆ ವ್ಯಕ್ತಿ ಮ್ಯಾಥ್ಯೂ ಸ್ಪೇಸಿ.

ಮ್ಯಾಥ್ಯೂ 1986ರಲ್ಲಿ ಭಾರತಕ್ಕೆ ಬಂದ್ರು. ಕೋಲ್ಕತ್ತಾದಲ್ಲಿ `ದಿ ಸಿಸ್ಟರ್ ಆಫ್ ಚಾರಿಟಿ ‘ ಸಂಸ್ಥೆಯಲ್ಲಿ ಸ್ವಯಂ ಸೇವಕರಾಗಿ ಕೆಲಸಕ್ಕೆ ಸೇರಿಸಿಕೊಂಡರು. ಪದವಿ ಪೂರ್ಣಗೊಳಿಸಿದ ನಂತರ ಉದ್ಯೋಗಕ್ಕಾಗಿ ಮ್ಯಾಥ್ಯೂ ಯುನೈಟೆಡ್ ಕಿಂಗ್ಡಮ್ ಗೆ ತೆರಳಿದ್ರು. ಅಲ್ಲಿ ಮ್ಯಾಥ್ಯೂ ಕೆಲಸ ಮೆಚ್ಚಿದ ಕಂಪನಿ ಅವರನ್ನು ಭಾರತಕ್ಕೆ ಕಳುಹಿಸಿಕೊಟ್ಟಿತು. ಕಾಕ್ಸ್ ಎಂಡ್ ಕಿಂಗ್ಸ್ ಕಂಪನಿಯ ಸಿಇಒ ಆಗಿ ಮ್ಯಾಥ್ಯೂ ಭಾರತಕ್ಕೆ ಬಂದ್ರು. ಈ ವೇಳೆ ಮ್ಯಾಥ್ಯೂ ವಯಸ್ಸು ಕೇವಲ 29. ಯಂಗ್ ಹಾಗೂ ಜೋಶ್ ವುಳ್ಳ ಅಧಿಕಾರಿಯಾಗಿದ್ದ ಮ್ಯಾಥ್ಯೂ ಭಾರತದಲ್ಲೂ ಬ್ರಿಟನ್ ಕಂಪನಿ ಕಾಕ್ಸ್ ಎಂಡ್ ಕಿಂಗ್ಸ್ ಕಂಪನಿಯ ಹೆಸರನ್ನು ಉನ್ನತ ಮಟ್ಟಕ್ಕೇರಿಸಿದ್ದರು.

ಗುರಿ ಬದಲಿಸಿದ ಆಟ

ರಗ್ಬಿ ಆಟ ಮ್ಯಾಥ್ಯೂ ಜೀವನದಲ್ಲಿ ಭಾರೀ ಬದಲಾವಣೆಗೆ ನಾಂದಿ ಹಾಡ್ತು. ರಗ್ಬಿ ಮ್ಯಾಥ್ಯೂ ಅವರ ಇಷ್ಟದ ಆಟವಾಗಿತ್ತು. ಅದರಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ನಂತರ ಇತರ ಕ್ರೀಡಾಪಟುಗಳ ಜೊತೆ ಮುಂಬೈ ನ ಪ್ರಸಿದ್ಧ ಫ್ಯಾಷನ್ ಸ್ಟ್ರೀಟ್ ಎದುರಿರುವ ಮೈದಾನದಲ್ಲಿ ಅಭ್ಯಾಸ ಮಾಡ್ತಾ ಇದ್ದರು. ಅವರ ಅಭ್ಯಾಸ ನೋಡಲು ಅಲ್ಲಿಗೆ ಮಕ್ಕಳು ಬರ್ತಾ ಇದ್ದರು. ಅವರೆಲ್ಲ ಫುಟ್ಬಾತ್ ನಲ್ಲಿ ವಾಸಿಸುವವರು. ಅವರಿಗೆ ಯಾವುದೇ ಮನೆ ಅಥವಾ ಅಪಾರ್ಟ್ ಮೆಂಟ್ ಇರಲಿಲ್ಲ. ಅಭ್ಯಾಸ ನೋಡಲು ಬಂದ ಮಕ್ಕಳು ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಆಟಗಾರರಿಗೆ ಚಪ್ಪಾಳೆ ತಟ್ಟಿ, ಸೀಟಿ ಹೊಡೆದು ಪ್ರೋತ್ಸಾಹ ನೀಡ್ತಾ ಇದ್ದರು. ಮ್ಯಾಥ್ಯೂ ಕೂಡ ಮಕ್ಕಳ ಈ ಉತ್ಸಾಹದಿಂದ ಖುಷಿಯಾಗ್ತಾ ಇದ್ದರು. ಕೆಲ ಸಮಯದ ನಂತರ ಮ್ಯಾಥ್ಯೂ ಮಕ್ಕಳನ್ನೂ ಆಟಕ್ಕೆ ಕರೆಯಲು ಶುರುಮಾಡಿದರು. ಮಕ್ಕಳು ಖುಷಿ ಖುಷಿಯಿಂದ ಆಡಲು ಬರ್ತಾ ಇದ್ದರು. ರಗ್ಬಿ ಆಟವನ್ನು ದೂರದಿಂದ ನೋಡ್ತಾ ಇದ್ದ ಮಕ್ಕಳಿಗೆ ಮ್ಯಾಥ್ಯೂ ಪ್ರೀತಿಯಿಂದ ಆಡುವ ಅವಕಾಶ ಸಿಗ್ತು.

ರಗ್ಬಿ ಆಡ್ತಾ ಆಡ್ತಾ ಮಕ್ಕಳಲ್ಲಿ ಧನಾತ್ಮಕ ಬದಲಾವಣೆಗಳಾದವು. ಅವರ ನಡೆ ನುಡಿ ಬದಲಾಗ್ತಾ ಬಂತು. ಪರಸ್ಪರ ಕಿತ್ತಾಡ್ತಾ ಇದ್ದ ಮಕ್ಕಳು ಹೊಂದಿಕೊಂಡು ಹೋಗುವುದನ್ನು ಕಲಿಯಲಾರಂಭಿಸಿದ್ದರು. ರಾಷ್ಟ್ರೀಯ ತಂಡದ ಆಟಗಾರರಿಂದಲೂ ಬಹಳಷ್ಟನ್ನು ಕಲಿಯುತ್ತಿದ್ದರು. ಇದು ಮ್ಯಾಥ್ಯೂ ಕ್ರಾಂತಿಕಾರಿ ಕಲ್ಪನೆಗೆ ನಾಂದಿಯಾಯ್ತು.

ಮ್ಯಾಜಿಕ್ ಬಸ್

ವಾರಾಂತ್ಯದಲ್ಲಿ ಮ್ಯಾಥ್ಯೂ ಒಂದು ಬಸ್ಸನ್ನು ಬಾಡಿಗೆಗೆ ಪಡೆಯಲು ಶುರು ಮಾಡಿದರು. ಬಸ್ ನಲ್ಲಿ ಗೊಂಬೆಗಳು, ಸಿಹಿ ತಿಂಡಿ ಹಾಗೂ ಮಕ್ಕಳಿಗೆ ಇಷ್ಟವಾಗುತ್ತಿದ್ದ ವಸ್ತುಗಳನ್ನು ಇಡ್ತಾ ಇದ್ದರು. ಬಸ್ ನಲ್ಲಿ ಕೊಳಚೆ ಪ್ರದೇಶಗಳಿಗೆ ಹೋಗ್ತಾ ಇದ್ದ ಮ್ಯಾಥ್ಯೂ ಈ ವಸ್ತುಗಳನ್ನು ಮಕ್ಕಳಿಗೆ ನೀಡ್ತಾ ಇದ್ದರು. ನಿರ್ಗತಿಕ ಹಾಗೂ ಫುಟ್ಬಾತ್ ನಲ್ಲಿ ವಾಸಿಸುವ ಮಕ್ಕಳನ್ನು ಪ್ರವಾಸಕ್ಕೆ ಕೂಡ ಕರೆದುಕೊಂಡು ಹೋಗ್ತಾ ಇದ್ದರು. ತುತ್ತು ಊಟ, ಬಟ್ಟೆಗಾಗಿ ಪರದಾಡುತ್ತಿದ್ದ ಮಕ್ಕಳು ಮ್ಯಾಥ್ಯೂ ಬಸ್ ಗಾಗಿ ಕಾಯ್ತಾ ಇದ್ದರು. ಇದೇ ಕಾರಣಕ್ಕೆ ಮ್ಯಾಥ್ಯೂ ಮಕ್ಕಳಿಗೆ ಅಚ್ಚುಮೆಚ್ಚಿನವರಾದ್ರು. ಇದೇ ಮುಂದೆ `ಮ್ಯಾಜಿಕ್ ಬಸ್’ ಆಗಿ ಉನ್ನತ ಕಾರ್ಯಕ್ಕೆ ಆಧಾರವಾಯ್ತು.

ಪ್ರತಿ ಭಾನುವಾರ ಮಾತ್ರ ಮಕ್ಕಳಿಗೆ ಖುಷಿ ಸಿಗುತ್ತದೆ. ಉಳಿದ ದಿನಗಳಲ್ಲಿ ಅವರು ಊಟ, ಬಟ್ಟೆಗಾಗಿ ಗಲ್ಲಿ ಗಲ್ಲಿ ಅಲೆಯಬೇಕು. ರಾತ್ರಿ ಮಲಗಲು ಅವರಿಗೆ ಜಾಗವಿಲ್ಲ. ಫುಟ್ಬಾತ್ ನಲ್ಲಿ ಮಲಗಿ ರಾತ್ರಿ ಕಳೆಯಬೇಕು. ಆಡಲು ಗೊಂಬೆಗಳಿಲ್ಲ. ರಾಕ್ಷಸರ ಕೈಗೆ ಸಿಕ್ಕಿ ಅನೇಕ ಮಕ್ಕಳು ಶೋಷಣೆಗೊಳಗಾಗುತ್ತಿದ್ದಾರೆ ಎಂಬ ವಿಷಯ ಮ್ಯಾಥ್ಯೂ ಅವರ ಚಿಂತೆಗೆ ಕಾರಣವಾಯ್ತು. ಮಕ್ಕಳಿಗೆ ವಾರದ ಎಲ್ಲಾ ದಿನ ಊಟ ಸಿಗಬೇಕು. ಅವರಿಗೊಂದು ಮನೆ ಬೇಕು. ಕೈನಲ್ಲೊಂದು ಕೆಲಸ ಇರಬೇಕೆಂದು ಆಲೋಚನೆ ಮಾಡಿದ ಮ್ಯಾಥ್ಯೂ ಕೆಲ ಕಾರ್ಪೋರೇಟ್ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ರು. ಕೆಲ ಮಕ್ಕಳಿಗೆ ಅಲ್ಲಿ ಉದ್ಯೋಗಕೊಡಿಸಿದ್ರು. ಆದರೆ ಶಿಸ್ತು, ಸೌಜನ್ಯ ಮತ್ತು ವೃತ್ತಿಪರತೆಯ ಕೊರತೆಯಿಂದಾಗಿ ಮಕ್ಕಳು ಬಹಳ ಕಾಲ ಅಲ್ಲಿ ಉಳಿಯಲಿಲ್ಲ.

ಈ ಅಗ್ನಿಪರೀಕ್ಷೆಯಿಂದ ಮ್ಯಾಥ್ಯೂ ಹೊಸ ಪಾಠ ಕಲಿತರು. ಕೊಳಚೆ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡದೆ ಅವರನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತರು. ತಮ್ಮ ಹಳೇ ನೀತಿಯನ್ನು ಮತ್ತೆ ಅನುಸರಿಸಲು ಮುಂದಾದ್ರು. ಆಟದ ಜೊತೆ ಪಾಠ ಕಲಿಸುವ ನಿರ್ಧಾರಕ್ಕೆ ಬಂದರು. 1999ರಲ್ಲಿ ಮ್ಯಾಜಿಕ್ ಬಸ್’ ಹೆಸರಿನ ಎನ್ ಜಿಓ ಆರಂಭಿಸಿದ್ರು. ನಂತರ 2001ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ಮ್ಯಾಜಿಕ್ ಬಸ್ ಮೇಲೆ ತಮ್ಮ ಸಂಪೂರ್ಣ ಗಮನ ಹರಿಸಿದ್ರು.

ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಅರ್ಧಕ್ಕೆ ಶಾಲೆ ಬಿಡುವುದನ್ನು ತಪ್ಪಿಸಲು ಮ್ಯಾಥ್ಯೂ ಮುಂದಾದರು. ಸರ್ಕಾರಿ ಶಾಲೆಗಳಲ್ಲಿ ಕ್ರೀಡೆ ಮೂಲಕ ಶಿಕ್ಷಣ ಕಲಿಸುವ ಬಗ್ಗೆ ಗಮನ ನೀಡಿದರು.` ಶಿಕ್ಷಣ-ನಾಯಕತ್ವ-ಸಂಪಾದಿಸು’ ಎಂಬ ಆಧಾರದ ಮೇಲೆ ಪಠ್ಯಕ್ರಮವೊಂದನ್ನು ಸಿದ್ಧಪಡಿಸಿದ್ರು. `ಒಂದು ಸಮಯದಲ್ಲಿ ಒಂದು ಕೆಲಸ’ ಎಂಬುದು ಅವರ ಘೋಷಣೆಯಾಗಿತ್ತು. ಮಕ್ಕಳಿಗೆ ಕಲಿಕೆ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಅವರಿಗೆ ಉದ್ಯೋಗ ಕೊಡಿಸುವುದೂ ಮ್ಯಾಥ್ಯೂ ಉದ್ದೇಶವಾಗಿತ್ತು.

ಮ್ಯಾಜಿಕ್ ಬಸ್ ಕಾರ್ಯಕ್ರಮದಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಶೇಕಡಾ 80ರಷ್ಟು ಹೆಚ್ಚಾಗಿದೆ. ಶೇಕಡಾ 98 ಬಾಲಕಿಯರು ಶಾಲೆಗೆ ಹೋಗ್ತಾ ಇದ್ದಾರೆ. ಮ್ಯಾಜಿಕ್ ಬಸ್ ಸಹಾಯದಿಂದ ಫುಟ್ಬಾತ್ ಹಾಗೂ ಕೊಳಚೆ ಪ್ರದೇಶದ ಮಕ್ಕಳು ಶಾಲೆ ಕಲಿತು, ಕೆಲಸ ಮಾಡುತ್ತಿದ್ದಾರೆ. ಮ್ಯಾಜಿಕ್ ಬಸ್ ಪ್ರೋಗ್ರಾಂ ಸುಮಾರು 19 ರಾಜ್ಯಗಳಲ್ಲಿ ಜಾರಿಯಲ್ಲಿದ್ದು, 3 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಇದರ ಉಪಯೋಗ ಪಡೆಯುತ್ತಿದ್ದಾರೆ. ಸ್ವಯಂ ಸೇವಾ ಸಂಸ್ಥೆಯ ಯುವಕರು ಮ್ಯಾಜಿಕ್ ಬಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದಾರೆ. ಕಾರ್ಪೋರೇಟ್ ಕಂಪನಿಗಳು ಮ್ಯಾಜಿಕ್ ಬಸ್ ಸಹಾಯಕ್ಕೆ ಬರ್ತಾ ಇವೆ.


ಲೇಖಕರು : ಪದ್ಮಾವತಿ ಭುವನೇಶ್ವರ್

ಅನುವಾದಕರು: ರೂಪಾ ಹೆಗಡೆ

Related Stories

Stories by YourStory Kannada