ಕಾಫಿ ಕಪ್ ಬಿಸಾಡಿ ಗಿಡ ನೆಡಿ- ಕ್ಯಾಲಿಫೋರ್ನಿಯಾದಲ್ಲಿ ಅಚ್ಚರಿಯ ಆವಿಷ್ಕಾರ

ಟೀಮ್​​ ವೈ.ಎಸ್​​.

0

ಕಪ್ ಎಂದಾಕ್ಷಣ ನಮಗೆ ನೆನಪಾಗೋದು ಕಾಫಿ, ಚಹಾ, ಜ್ಯೂಸ್, ಬಿಟ್ರೆ ನೀರು. ಇತ್ತೀಚೆಗಂತೂ ಪಿಂಗಾಣಿ ಕಪ್‍ಗಳಿಗಿಂತ ಹೆಚ್ಚಾಗಿ ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಕಪ್‍ಗಳೇ ಹೆಚ್ಚಾಗಿವೆ. ಹಾಗಾಗಿ ಈಗೇನಿದ್ರೂ ಪ್ಲಾಸ್ಟಿಕ್ ಕಪ್‍ಗಳ ಜಮಾನಾ. ಆದ್ರೆ ಕ್ಯಾಲಿಫೋರ್ನಿಯಾದ ಕಂಪನಿಯೊಂದು ಹೊಸ ಆವಿಷ್ಕಾರ ಮಾಡಿದೆ. ವಿಶ್ವವೇ ನಿಬ್ಬೆರಗಾಗುವಂಥ ಕಾಫಿ ಕಪ್‍ಗಳನ್ನ ತಯಾರಿಸಿದೆ. ಈ ಕಪ್‍ಗಳಿಂದ ಕಾಫಿ ಕುಡಿಯೋದಷ್ಟೇ ಅಲ್ಲ ಮರಗಳನ್ನೂ ಬೆಳೆಸಬಹುದು. ಅಚ್ಚರಿಯಾದ್ರೂ ಇದು ಸತ್ಯ.

ಹೌದು ಕ್ಯಾಲಿಫೋರ್ನಿಯಾದ `ರೆಡ್ಯೂಸ್..ರಿಯೂಸ್..ಗ್ರೋ' ಎಂಬ ಕಂಪನಿ ಇಂಥದ್ದೊಂದು ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಕಾಫಿ ಕಪ್‍ನಿಂದಲೇ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಸಾಕಾರಗೊಳಿಸಲಾಗಿದೆ. ಈ ಕಾಫಿ ಕಪ್‍ಗಳ ಸುತ್ತ ಬೀಜಗಳನ್ನು ಹುದುಗಿಸಿಡಲಾಗುತ್ತೆ. ಇದರಲ್ಲಿ ಕಾಫಿ, ಅಥವಾ ಟೀ ಕುಡಿದು ಸಹಜವಾಗಿಯೇ ಎಲ್ರೂ ಹೊರಗೆ ಬಿಸಾಡುತ್ತಾರೆ. ಆಗ ಈ ಕಪ್ ಮಣ್ಣಿನಲ್ಲಿ ಬೆರೆತು ಹೋಗುತ್ತೆ. ಕಪ್‍ನಲ್ಲಿದ್ದ ಬೀಜ ನೀರು ಮಣ್ಣಿನ ಜೊತೆ ಸೇರಿ ಮೊಳಕೆಯೊಡೆದು ಸಸಿಯಾಗುತ್ತೆ. ವೇಸ್ಟ್ ಎಂದು ಬಿಸಾಡಿದ ಕಪ್‍ನಿಂದ ಸುಂದರವಾದ ವೃಕ್ಷವೊಂದು ಮೈದಳೆಯುತ್ತದೆ. ವಿಶೇಷ ಅಂದ್ರೆ ಈ ಕಪ್‍ನಿಂದ ಗಿಡಗಳನ್ನು ಬೆಳೆಸೋದು ಹೇಗೆ ಅನ್ನೋ ಬಗ್ಗೆ ತಳದಲ್ಲಿ ಎಲ್ಲಾ ಮಾಹಿತಿಗಳನ್ನೂ ನೀಡಲಾಗಿದೆ.

ಅಲೆಕ್ಸ್ ಹೆನಿಗೆ ಅವರ ಮಾಸ್ಟರ್ ಪ್ಲಾನ್ ಇದು. ಕೈಯಿಂದಲೇ ಇವರು 200 ಬಗೆಯ ಮೂಲ ಮಾದರಿಗಳನ್ನು ಕೂಡ ತಯಾರಿಸಿದ್ರು. ಇದನ್ನ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೂಡ ಅವರು ಪ್ರಯತ್ನ ಮುಂದುವರಿಸಿದ್ದಾರೆ. ಪಾಲುದಾರರಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಈ ಉತ್ಪನ್ನದ ಬಗ್ಗೆ ಆಸಕ್ತರಾಗಿರುವ ಕಾಫಿ ಸ್ಟೋರ್‍ಗಳ ಜೊತೆ ಪಾಲುದಾರಿಕೆಗೆ ಚಿಂತನೆ ನಡೆಸಿದ್ದಾರೆ. ಬೇರೆ ಬೇರೆ ದೇಶಗಳಿಗೂ ಗಿಡ ಬೆಳೆಸುವ ಈ ಕಾಫಿ ಕಪ್‍ಗಳನ್ನು ಪರಿಚಯಿಸುವ ಉದ್ದೇಶ `ರೆಡ್ಯೂಸ್..ರಿಯೂಸ್..ಗ್ರೋ' ಸಂಸ್ಥೆಗಿದೆ. ಆದ್ರೆ ಅದಕ್ಕೂ ಮುನ್ನ ಈ ಯೋಜನೆಯನ್ನು ಸಂಪೂರ್ಣವಾಗಿ ಪರಿಪೂರ್ಣಗೊಳಿಸಲು ಅಲೆಕ್ಸ್ ಪರಿಶ್ರಮಪಡ್ತಿದ್ದಾರೆ.

ಈ ಕಪ್‍ಗಳನ್ನು ಮನೆಗೆ ಕೊಂಡೊಯ್ದು ನೆಡುವಂತೆ ಕಾಫಿ ಮಳಿಗೆಗಳು ಗ್ರಾಹಕರನ್ನು ಉತ್ತೇಜಿಸುತ್ತವೆ. ಇಲ್ಲವಾದಲ್ಲಿ ಕಾಫಿ ಕಪ್ ಗಿಡವಾಗಿ ಬೆಳೆದ ಮೇಲೆ ಅದನ್ನು ಕಾಫಿ ಮಳಿಗೆಗೆ ಕೂಡ ಗ್ರಾಹಕರು ಹಿಂದಿರುಗಿಸಬಹುದು. ಈ ಎರಡೂ ಅವಕಾಶಗಳು ಗ್ರಾಹಕರಿಗಿವೆ. ಕಾಫಿಯನ್ನು ಕಪ್‍ನಲ್ಲಿ ಹಾಕಿ ಸೇವಿಸುವುದರಿಂದ ಕಪ್‍ನ ಒಳಗಿರುವ ಬೀಜಕ್ಕೇನೂ ಸಮಸ್ಯೆಯಿಲ್ಲ. ಜೊತೆಗೆ ಕಾಫಿಯ ಬಿಸಿಯಿಂದಲೂ ಯಾವುದೇ ಸಮಸ್ಯೆ ಆಗೋದಿಲ್ಲ ಅಂತಾ ಅಲೆಕ್ಸ್ ಸ್ಪಷ್ಟಪಡಿಸಿದ್ದಾರೆ. ಕಪ್‍ಗೆ ಅಳವಡಿಸಿರುವ ಕಾಗದ ಬೀಜಕ್ಕೆ ತೊಂದರೆಯಾಗದಂತೆ ಕಾಪಾಡುತ್ತದೆ. ಅಷ್ಟೇ ಅಲ್ಲ ಬಿಸಿ ಬಿಸಿ ಕಾಫಿ ಜೊತೆಗೆ ಬೀಜಕ್ಕೆ ನೇರ ಸಂಪರ್ಕ ಕೂಡ ಇರುವುದಿಲ್ಲ. ಈ ಬಗ್ಗೆ ಕ್ಯಾಲಿಫೋರ್ನಿಯಾದಲ್ಲಿ ಅಲೆಕ್ಸ್ ನಡೆಸಿದ ಪ್ರಯೋಗ ಈಗಾಗಲೇ ಯಶಸ್ವಿಯಾಗಿದೆ. ಒಂದು ಕಾಫಿ ಕಪ್ ಕೊಂಡುಕೊಳ್ಳಿ, ಒಂದು ಗಿಡವನ್ನು ಬೆಳೆಸಿ ಅನ್ನೋದು `ರೆಡ್ಯೂಸ್..ರಿಯೂಸ್..ಗ್ರೋ' ಕಂಪನಿಯ ಟ್ಯಾಗ್‍ಲೈನ್. ವಿಶ್ವದ ಮೊಟ್ಟಮೊದಲ ನೆಡಬಹುದಾದಂಥಹ ಕಾಫಿ ಕಪ್ ಇದು.

ಈ ಕಾಫಿ ಕಪ್‍ಗಳು ನೀವು ತ್ಯಾಜ್ಯವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುತ್ತವೆ ಅನ್ನೋದು ಅಲೆಕ್ಸ್ ಹೆನಿಗೆ ಅವರ ವಿಶ್ವಾಸದ ನುಡಿ. ಈ ಕಪ್‍ಗಳಿಂದ ತ್ಯಾಜ್ಯದ ಮರುಬಳಕೆ ಜೊತೆಗೆ ನಗರಪ್ರದೇಶದಲ್ಲಿ ಕಾಡಿಲ್ಲದೆ ಸೊರಗಿರುವ ಜಾಗಗಳು ಕೂಡ ಹಸಿರಿನಿಂದ ನಳನಳಿಸಲಿವೆ. ಬಹುತೇಕ ಗ್ರಾಹಕರಿಗೆ ತಾವು ಕಾಫಿ ಹೀರಿದ ಮೇಲೆ ಆ ಕಪ್ ಎಲ್ಲಿ ಹೋಗುತ್ತದೆ ಎಂಬ ಕಲ್ಪನೆ ಇರುವುದಿಲ್ಲ. ಉದಾಹರಣೆಗೆ ಅಮೆರಿಕದಲ್ಲಿ ಪ್ರತಿವರ್ಷ 146 ಬಿಲಿಯನ್ ಕಾಫಿ ಕಪ್‍ಗಳು ಬಳಕೆಯಾಗುತ್ತವೆ. ಇವುಗಳನ್ನು ಮೂರ್ನಾಲ್ಕು ಬಾರಿ ಮರುಬಳಕೆ ಮಾಡಬಹುದಷ್ಟೆ. ಬಳಿಕ ಇವನ್ನು ಮಣ್ಣಲ್ಲಿ ಸೇರುತ್ತವೆ. ಪ್ರಮುಖವಾಗಿ ಕ್ಯಾಲಿಪೋರ್ನಿಯಾದ ಕಾಡು ಹೂಗಳಾದ ಕ್ಯಾಲಿಫೋರ್ನಿಯಾ ಪೊಪ್ಪಿ, ಡೆಸರ್ಟ್ ಬ್ಲೂಬೆಲ್, ಮತ್ತು ಬ್ಲೇಜಿಂಗ್ ಸ್ಟಾರ್‍ನ ಬೀಜಗಳನ್ನು ಕಪ್‍ಗಳಲ್ಲಿ ಅಳವಡಿಸಲಾಗಿದೆ.

ಕೆಲವು ಕಡೆಗಳಲ್ಲಿ `ರೆಡ್ಯೂಸ್..ರಿಯೂಸ್..ಗ್ರೋ' ಕಂಪನಿ ಡಸ್ಟ್​​ ಬಿನ್‍ಗಳನ್ನು ಇರಿಸಿದೆ. ಗ್ರಾಹಕರು ಕಾಫಿ ಕುಡಿದಾದ್ಮೇಲೆ ಅದನ್ನು ಬಿನ್‍ನಲ್ಲಿ ಹಾಕಬೇಕು. ಕಪ್‍ಗಳನ್ನೆಲ್ಲ ಸಂಗ್ರಹಿಸಿ ಸಂಸ್ಥೆಯ ಸಿಬ್ಬಂದಿಯೇ ಅದನ್ನು ಒಯ್ದು ನೆಡುತ್ತಾರೆ. ಇಲ್ಲವಾದಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸುತ್ತಾರೆ. ದಕ್ಷಿಣ ಅಮೆರಿಕ ಮತ್ತು ವಾಷಿಂಗ್ಟನ್‍ನಲ್ಲಿ ಈಗಾಗಲೇ ಕಪ್‍ಗಳಿಂದ ಗಿಡಗಳನ್ನು ಬೆಳೆಸಲಾಗಿದೆ. ಈ ಗಿಡಗಳು ಪ್ರತಿ ವರ್ಷ ಒಂದು ಟನ್‍ನಷ್ಟು ಇಂಗಾಲದ ಡೈ ಆಕ್ಸೈಡನ್ನು ವಾತಾವರಣದಿಂದ ಹೊರಹಾಕಲು ನೆರವಾಗುತ್ತವೆ. ವಿಶೇಷ ಅಂದ್ರೆ ಒಂದು ವೇಳೆ ಕಪ್‍ಗಳನ್ನು ಬಿಸಾಡಿದ್ರೆ ಅವು ಕೇವಲ 180 ದಿನಗಳೊಳಗೆ ಗೊಬ್ಬರವಾಗಿ ಮಾರ್ಪಡುತ್ತವೆ.

ಭಾರತದಲ್ಲೂ ಈ ಯೋಜನೆಯನ್ನು ಜಾರಿ ಮಾಡುವ ಚಿಂತನೆ ನಡೆಯುತ್ತಿದೆ. ಈ ಯೋಜನೆ ಸಫಲವಾದಲ್ಲಿ ತ್ಯಾಜ್ಯ ನಿರ್ವಹಣೆ ಕೂಡ ಸುಲಭವಾಗಲಿದೆ. ಜೊತೆಗೆ ಸುಲಭವಾಗಿ ಗಿಡಗಳನ್ನು ಕೂಡ ಬೆಳೆಸಬಹುದು. ಅಲೆಕ್ಸ್ ಹೆನಿಗೆ `ರೆಡ್ಯೂಸ್..ರಿಯೂಸ್..ಗ್ರೋ' ಸಂಸ್ಥೆಯ ಮೂಲಕ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ವಾತಾವರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಅಲೆಕ್ಸ್ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಇವರ ಈ ಪ್ರಯತ್ನ ಯಶಸ್ವಿಯಾಗ್ಲಿ, ಜಗತ್ತಿನಾದ್ಯಂತ ಗಿಡ ಬೆಳೆಸಬಲ್ಲ ಕಾಫಿ ಕಪ್‍ಗಳ ಬಳಕೆ ಪ್ರಾರಂಭವಾಗಲಿ ಅನ್ನೋದೇ ಪರಿಸರ ಪ್ರಿಯರ ಆಶಯ.

Related Stories