ಇವರದ್ದು ಕೇವಲ ಮಾತು ಮಾತ್ರವಲ್ಲ- ತಮಿಳುನಾಡಿನ ಈ ಹಳ್ಳಿಗಳಲ್ಲಿ ಪಟಾಕಿ ಸದ್ದೇ ಇಲ್ಲ..!

ಟೀಮ್​ ವೈ.ಎಸ್​. ಕನ್ನಡ

0

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಪರಿಸರಕ್ಕೆ ಉಂಟುಮಾಡಿದ ಹಾನಿಯಿಂದಾಗಿ ಇವತ್ತು ದೊಡ್ಡ ದೊಡ್ಡ ಸಂಕಷ್ಟಗಳು ಎದುರಾಗುತ್ತಿದೆ. ದೆಹಲಿಯಂತಹ ಮಹಾನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ ಉಸಿರಾಟ ನಡೆಸಲು ಕೂಡ ಕಷ್ಟವಾಗುವಂತಹ ಸ್ಥಿತಿ ಎದುರಾಗಿದೆ. ಆದ್ರೆ ತಮಿಳು ನಾಡಿನ ಈ 8 ಗ್ರಾಮಗಳು ಪರಿಸರದ ಬಗ್ಗೆ ಇಟ್ಟುಕೊಂಡಿರುವ ಕಾಳಜಿ ಎಲ್ಲರಿಗೂ ಮಾದರಿ.

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿರುವ 8 ಗ್ರಾಮಗಳು ಕಳೆದ 17 ವರ್ಷಗಳಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಹತ್ತಿರದಲ್ಲೇ ಪಕ್ಷಿಧಾಮ ಇರುವುದರಿಂದ ಇವರು ಪಟಾಕಿ ಸಿಡಿಸದೇ ಇರುವ ನಿರ್ಧಾರ ಮಾಡಿದ್ದಾರೆ. ವೆಲ್ಲೋಡೆ ಅನ್ನುವ ಪಕ್ಷಿಧಾಮದ ಸುತ್ತಮುತ್ತಲಿರುವ 8 ಗ್ರಾಮಗಳು ಪಟಾಕಿ ಸಿಡಿಸುವುದನ್ನು ಮರೆತೇ ಬಿಟ್ಟಿವೆ. ಪಟಾಕಿಯಿಂದ ಹೊರಬರುವ ಸದ್ದುಗಳು ಪಕ್ಷಿಗಳನ್ನು ಭಯಪಡಿಸುತ್ತವೆ. ಅವುಗಳು ಊರು ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ ಮತ್ತು ಪರಿಸರಕ್ಕೂ ಹಾನಿಯಾಗುತ್ತದೆ ಅನ್ನುವ ದೃಷ್ಟಿಯಿಂದ ಪಕ್ಷಿಧಾಮದ ಸುತ್ತಮುತ್ತ ಇರುವ ಗ್ರಾಮಸ್ಥರು ಪಟಾಕಿಗೆ ಗುಡ್ ಬೈ ಹೇಳಿದ್ದಾರೆ.

ವೆಲ್ಲೋಡೆ ಪಕ್ಷಿಧಾಮ 1996ರಲ್ಲಿ ಸ್ಥಾಪನೆಯಾಗಿತ್ತು. ಸುಮಾರು 80 ಹೆಕ್ಟೇರ್ ಪ್ರದೇಶದಲ್ಲಿ ಈ ಪಕ್ಷಿಧಾಮವಿದೆ. ಇದರ ಸುತ್ತಮುತ್ತಲಿರುವ 8 ಹಳ್ಳಿಗಳಲ್ಲಿ ಸುಮಾರು 750 ಕುಟುಂಬಗಳು ವಾಸ ಮಾಡುತ್ತಿವೆ. ಸೆಪ್ಟಂಬರ್ ನಿಂದ ಡಿಸೆಂಬರ್ ತನಕ ವೆಲ್ಲೊಡೆ ಪಕ್ಷಿಧಾಮಕ್ಕೆ ಹಲವು ಹಕ್ಕಿಗಳು ವಲಸೆ ಬರುತ್ತವೆ. ದೀಪಾವಳಿ ಹಬ್ಬ ಕೂಡ ಇದೇ ಸಮಯದಲ್ಲಿ ಬರುತ್ತದೆ. ಹೀಗಾಗಿ ಪಟಾಕಿ ಸಿಡಿಸಿದ್ರೆ ಹಕ್ಕಿಗಳ ಪ್ರಾಣಕ್ಕೆ ಅಪಾಯವಾಗುತ್ತದೆ ಅನ್ನುವ ದೃಷ್ಟಿಯಿಂದ ಈ ಗ್ರಾಮಸ್ಥರು ಪಟಾಕಿ ಸಿಡಿಸದೇ ಇರುವ ನಿರ್ಧಾರ ಕೈಗೊಂಡಿದ್ದಾರೆ. ತಲಕಾರೈ, ದೊಡ್ಡಕೊಂಬೈ, ಸೊಲಗಾನೈ, ಸುಂದಾಪುರ್, ಕಥಿರಿಮಲೈ, ಕಕ್ಕಾಯನುರ್ ಮತ್ತು ನಾಥಡಿ ಗ್ರಾಮಗಳು ಈ ಪಕ್ಷಿಧಾಮದ ಸುತ್ತಮುತ್ತಲಿವೆ. ಇದರ ಜೊತೆಗೆ ಸತ್ಯಮಂಗಲಂ ಮತ್ತು ಹಾಸನೂರು ಹುಲಿ ರಕ್ಷಿತಾರಣ್ಯ ಪ್ರದೇಶ ಕೂಡ ಈ ಗ್ರಾಮಗಳ ಹತ್ತಿರಕ್ಕಿದೆ. ಹೀಗಾಗಿ ಪಟಾಕಿ ಅಂದ್ರೆ ಈ ಊರಿನ ಜನಕ್ಕೆ ಅಲರ್ಜಿ.

ಇದನ್ನು ಓದಿ: ಒತ್ತಡವಿಲ್ಲದ ಕೆಲಸ- ಕೈ ತುಂಬಾ ಸಂಬಳ- ನೆಮ್ಮದಿಯಾಗಿ ಸಮಯ ಕಳೆಯುವ ಬಗ್ಗೆ ಯೋಚನೆ ಮಾಡಿ

ವೆಲ್ಲೊಡೆ ಪಕ್ಷಿಧಾಮಕ್ಕೆ ಸೆಪ್ಟಂಬರ್​ನಿಂದ ಡಿಸೆಂಬರ್ ನಡುವೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಹಲವು ಕಡೆಗಳಿಂದ ಪಕ್ಷಿಗಳು ವಲಸೆ ಬರುತ್ತವೆ. ಇದೇ ಸಮಯದಲ್ಲಿ ಪಕ್ಷಿಗಳ ಸಂತಾನಾಭಿವೃದ್ಧಿ ಕೂಡ ನಡೆಯುತ್ತಿರುತ್ತದೆ.

“ನಾವು ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದೆವು. ಆದ್ರೆ ಈ ಪಕ್ಷಿಧಾಮ ಆರಂಭವಾದ ದಿನದಿಂದ ಪಟಾಕಿ ಸಿಡಿಸುವುದನ್ನೇ ಬಿಟ್ಟಿದ್ದೇವೆ. ಬುದ್ಧಿವಂತರಾಗಿರುವ ಮನುಷ್ಯರಿಗೆ ಯೋಚನೆ ಮಾಡುವ ಶಕ್ತಿ ಇದೆ. ಮೂಕ ಪಕ್ಷಿಗಳಿಗೆ ಮತ್ತು ಪ್ರಾಣಿಗಳಿಗೆ ತೊಂದರೆ ಕೊಡಲು ನಮ್ಮ ಗ್ರಾಮಸ್ಥರು ಇಷ್ಟಪಡುವುದಿಲ್ಲ”
- ಚಿನ್ನಸ್ವಾಮಿ ಗೌಂಡರ್, ಪಕ್ಷಿಪ್ರಿಯ

ಪಕ್ಷಿಧಾಮದ ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿಗೆ ಬರುವ ಪಕ್ಷಿಗಳನ್ನು ತುಂಬಾ ಪ್ರೀತಿ ಮಾಡುತ್ತಾರೆ. ಇಲ್ಲಿನ ಮಕ್ಕಳು ಕೂಡ ಪಟಾಕಿ ಬಗ್ಗೆ ಆಸಕ್ತಿ ಹೊಂದಿಲ್ಲ. ಒಟ್ಟಿನಲ್ಲಿ ತಮಿಳುನಾಡಿನ ಈ ಗ್ರಾಮ ತನಗೆ ಗೊತ್ತೇ ಇಲ್ಲದೆ ಪರಿಸರದ ಸಂರಕ್ಷಣೆಯನ್ನು ಮಾಡುತ್ತಿದೆ.

ಇದನ್ನು ಓದಿ:

1. ಕನ್ನಡಿಗರನ್ನು ಬಡಿದೆಚ್ಚರಿಸಿದ ಕನ್ನಡ ಡಿಂಡಿಮ ವೀಡಿಯೋ

2. ಸಮುದ್ರ ಸ್ವಚ್ಛಗೊಳಿಸಲು ನೆದರ್ಲೆಂಡ್ ಯುವಕನ ಹೊಸ ಅನ್ವೇಷಣೆ

3. 200 ಗರ್ಭಿಣಿಯರ ಜೀವ ಉಳಿಸಿದ ಆಪತ್ಬಾಂಧವ..