ಮತ್ತೆ ಬಾಲ್ಯ ಬೆಸೆಯುವ ರೆಸ್ಟೋರೆಂಟ್-ನೆನಪುಗಳ ಬುತ್ತಿ ಬಿಚ್ಚುವ ತ್ರಿವಳಿ ಸಹೋದರಿಯರ ರೆಸ್ಟೋರೆಂಟ್

ಟೀಮ್​​ ವೈ.ಎಸ್​​.

ಮತ್ತೆ ಬಾಲ್ಯ ಬೆಸೆಯುವ ರೆಸ್ಟೋರೆಂಟ್-ನೆನಪುಗಳ ಬುತ್ತಿ ಬಿಚ್ಚುವ ತ್ರಿವಳಿ ಸಹೋದರಿಯರ ರೆಸ್ಟೋರೆಂಟ್

Wednesday November 04, 2015,

2 min Read

ಮೂವರು ಸಹೋದರಿಯರ ಸಾಹಸಗಾಥೆ ಇದು. ಹವ್ಯಾಸವನ್ನೇ ಉದ್ಯಮವನ್ನಾಗಿ ಬೆಳೆಸಿ ಜನರಿಗೆ ತಮ್ಮ ನೆನಪುಗಳನ್ನು ಮೆಲುಕು ಹಾಕಲು ವೇದಿಕೆಯೊಂದನ್ನು ಇವರು ಕಲ್ಪಿಸಿಕೊಟ್ಟಿದ್ದಾರೆ. ಅದು ಕೂಡ ಅವರಿಗಿಷ್ಟವಾದ ತಿಂಡಿ - ತಿನಿಸುಗಳ ಜೊತೆಗೆ ಅನುಭವಗಳನ್ನು ಹಂಚಿಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ. ಮೇಘನಾ ರಾಥೋಡ್, ಮೋಹಿತಾ ಶಾಹಿ, ಮೌಸಮಿ ಸಿಂಗ್ ಈ ಮೂವರು ಸಹೋದರಿಯರ ಕನಸಿನ ಕೂಸು `ಅವರ್ ಸ್ಟೋರಿ - ಬಿಸ್ಟ್ರೋ & ಟೀ ರೂಮ್' ಎಂಬ ರೆಸ್ಟೋರೆಂಟ್. ತ್ರಿವಳಿ ಸಹೋದರಿಯರ ಕೈ ರುಚಿ ಸವಿಯಲು ಗ್ರಾಹಕರಿಗೆ ಅದ್ಭುತ ಅವಕಾಶವಿದೆ. ರುಚಿಯಾದ, ಶುಚಿಯಾದ ತಿನಿಸುಗಳ ಜೊತೆಗೆ ಕನಸು, ಕಲ್ಪನೆ ಮತ್ತು ಅನುಭವಗಳನ್ನೂ ಬಿಚ್ಚಿಡಲು ಒಳ್ಳೆಯ ವೇದಿಕೆ ಈ ರೆಸ್ಟೋರೆಂಟ್.

image


ಕಟ್ಟಿಗೆ ಒಲೆಯಲ್ಲಿ ರೊಟ್ಟಿ ಸುಡುವ ಕಾಲ ಇದಲ್ಲ. ನಿಗಿ ನಿಗಿ ಕೆಂಡದಲ್ಲಿ ರುಚಿಯಾದ ಅಡುಗೆ ಮಾಡಿ ತಿನ್ನುವವರ ಸಂಖ್ಯೆಯಂತೂ ಕಡಿಮೆಯಾಗಿದೆ. ಇಗೇನಿದ್ರೂ ಓವನ್ ಜಮಾನಾ. ಹಾಗಾಗಿ ಆ ಎಲ್ಲ ಅದ್ಭುತ ಅನುಭವಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಈ ಮೂವರು ಸಹೋದರಿಯರು ಮಾಡ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ತಮ್ಮ ಬಾಲ್ಯವನ್ನು ಮೆಲುಕು ಹಾಕಲು ಗ್ರಾಹಕರಿಗೆ `ಅವರ್ ಸ್ಟೋರಿ - ಬಿಸ್ಟ್ರೋ & ಟೀ ರೂಮ್' ರೆಸ್ಟೋರೆಂಟ್ ಹೇಳಿ ಮಾಡಿಸಿದಂಥ ತಾಣ. ತಿನಿಸುಗಳ ಬಗೆಗಿರೋ ತಮ್ಮ ಪ್ರೀತಿಯನ್ನು ಹಂಚಿಕೊಂಡಿರುವ ಈ ಮೂವರು ಸಹೋದರಿಯರು ಗ್ರಾಹಕರಿಗೂ ಕೂಡ ಅವಕಾಶ ಮಾಡಿಕೊಟ್ಟಿದ್ದಾರೆ. ಮರೆತು ಹೋದ ತಿನಿಸುಗಳನ್ನೆಲ್ಲ ನೆನಪಿಸಿ, ಗ್ರಾಹಕರಿಗೆ ಉಣಬಡಿಸ್ತಿದ್ದಾರೆ.

ಚಿಕ್ಕವರಿದ್ದಾಗ ಜೋಕಾಲಿ ಆಡಿದ್ದು, ಮಾವಿನ ಮರವೇರಿ ಆಟವಾಡಿದ ನೆನಪು ಇವತ್ತಿಗೂ ಎಲ್ಲರಲ್ಲಿ ಹಸಿರಾಗಿದೆ. ನೀವು ದೆಹಲಿಯ ನೊಯ್ಡಾದಲ್ಲಿರೋ `ಅವರ್ ಸ್ಟೋರಿ - ಬಿಸ್ಟ್ರೋ & ಟೀ ರೂಮ್' ರೆಸ್ಟೋರೆಂಟ್‍ಗೆ ಬಂದ್ರೆ ಮತ್ತೆ ಬಾಲ್ಯಾವಸ್ಥೆಗೆ ಹೋಗಬಹುದು. ಪುಟಾಣಿಗಳಿದ್ದಾಗ ಮಾಡಿದ ತುಂಟಾಟಗಳನ್ನೆಲ್ಲ ಮಾಡಬಹುದು. ಯಾಕಂದ್ರೆ ರೆಸ್ಟೋರೆಂಟ್‍ನಲ್ಲಿ ಜೋಕಾಲಿ, ಮಾವಿನ ಮರ ಹೀಗೆ ಬಾಲ್ಯವನ್ನು ನೆನಪಿಸುವಂಥ ಎಲ್ಲವೂ ಇದೆ.

ಸಂಪ್ರದಾಯ ಪಾಲನೆ...

ಮೇಘನಾ ರಾಥೋಡ್, ಮೋಹಿತಾ ಶಾಹಿ ಮತ್ತು ಮೌಸಮಿ ಸಿಂಗ್​​ ಉತ್ತರ ಪ್ರದೇಶದ ಲಖ್ನೋ ಮೂಲದವರು. ಸಂಪ್ರದಾಯಸ್ಥ ರಜಪೂತ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ತಂದೆ ಕೃಷಿಕ, ತಾಯಿ ಹೌಸ್ ವೈಫ್. ಮನೆಯವರೆಲ್ಲ ಭೋಜನ ಪ್ರಿಯರು. ಹಾಗಾಗಿ ಮೇಘನಾಗೆ ಬಾಲ್ಯದಿಂದ್ಲೂ ಅಡುಗೆ ಮಾಡೋದಂದ್ರೆ ಸಿಕ್ಕಾಪಟ್ಟೆ ಇಷ್ಟ. ತಮ್ಮ 12ನೇ ವಯಸ್ಸಿನಿಂದ್ಲೇ ಮೇಘನಾ ಅಡುಗೆ ಮಾಡಲು ಶುರುಮಾಡಿದ್ರು. ಹೊಸ ಹೊಸ ಪಕ್ವಾನ್ನಗಳ ಪ್ರಯೋಗ ಮಾಡ್ತಿದ್ರು. ತಾವು ಮಾಡುವ ಪಾಕ ವಿಧಾನಗಳಲ್ಲಿ ನಿಖರತೆ ಇರಬೇಕು ಅನ್ನೋದು ಮೇಘನಾ ಅವರ ಆಸೆ. ಹಾಗಾಗಿಯೇ ಈ ರೆಸ್ಟೋರೆಂಟ್‍ನ ತಿನಿಸುಗಳೆಲ್ಲ ಫ್ರೆಶ್ ಹಾಗೂ ಸಖತ್ ಟೇಸ್ಟಿ.

ಈ ಮೂವರು ಒಡಹುಟ್ಟಿದವರು ಸ್ವಂತವಾಗಿ ಏನನ್ನಾದ್ರೂ ಮಾಡಬೇಕೆಂದು ಕನಸು ಕಂಡಿದ್ರು. ಸ್ವಾವಲಂಬಿಯಾಗಿ ಬದುಕಬೇಕೆಂದು ನಿರ್ಧಾರ ಮಾಡಿದ್ರು. ರೆಸ್ಟೋರೆಂಟ್ ಆರಂಭಿಸಬೇಕು ಅನ್ನೋದು ಮೇಘನಾರ ಕನಸಾಗಿತ್ತು. ಮೌಸಮಿ ಹಾಗೂ ಮೋಹಿತಾ ಅವರ ಕನಸನ್ನು ನನಸು ಮಾಡಲು ಜೊತೆಯಾಗಿದ್ದಾರೆ. ಇನ್ನೊಂದು ವರ್ಷದೊಳಗೆ ರೆಸ್ಟೋರೆಂಟ್ ಉದ್ಯಮದಲ್ಲಿ ಅಂದುಕೊಂಡ ಯಶಸ್ಸು ಲಭಿಸಲಿದೆ, ತಮ್ಮ ರೆಸಿಪಿಗಳು ಗ್ರಾಹಕರ ಮನಗೆಲ್ಲಲಿವೆ ಅನ್ನೋದು ಮೇಘನಾರ ವಿಶ್ವಾಸ. ಮೇಘನಾ `ಅವರ್ ಸ್ಟೋರಿ - ಬಿಸ್ಟ್ರೋ & ಟೀ ರೂಮ್' ರೆಸ್ಟೋರೆಂಟ್‍ನ ಡೈರೆಕ್ಟರ್. ಮೋಹಿತಾ ಪಬ್ಲಿಕ್ ರಿಲೇಶಲ್ ವೃತ್ತಿಯಲ್ಲಿದ್ದವರು. ಹಾಗಾಗಿ ರೆಸ್ಟೋರೆಂಟ್‍ನ ಬೇಕು ಬೇಡಗಳ ಬಗ್ಗೆ ಗಮನಹರಿಸ್ತಾರೆ. ಇನ್ನು ಮೌಸಮಿ, ರೆಸ್ಟೋರೆಂಟ್‍ನ ಸೃಜನಶೀಲ ವಲಯಗಳತ್ತ ಚಿತ್ತ ಹರಿಸಿದ್ದಾರೆ.

ಕಲಿಕೆಯ ರೇಖೆ...

ಸಮಯದ ಜೊತೆಗೆ ಸಾಗೋದು ಬಹುದೊಡ್ಡ ಸವಾಲು ಅನ್ನೋದು ತ್ರಿವಳಿ ಸಹೋದರಿಯರ ಅಭಿಪ್ರಾಯ. ಕಾಲಮಿತಿಯೊಳಗೆ ಕಾರ್ಯನಿರ್ವಹಿಸಲುವಲ್ಲಿ ಸಫಲರಾಗಿದ್ದೇವೆಂಬ ಸಂತಸ ಕೂಡ ಅವರಲ್ಲಿದೆ. ಉಳಿದ ನಗರಗಳಲ್ಲೂ ಇಂಥದ್ದೇ ರೆಸ್ಟೋರೆಂಟ್ ಆರಂಭಿಸಲು ಅವರು ಯೋಜನೆ ಹಾಕಿಕೊಂಡಿದ್ದಾರೆ. ಅವರ ನಿನ್ನೆಗಳ ಜೊತೆ ಜನರನ್ನು ಬೆಸೆಯಲು ಯಶಸ್ವಿಯಾಗಿದ್ದೇವೆಂಬ ಖುಷಿ ಅವರದ್ದು. ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಬಂದು ಆ ದಿನಗಳನ್ನು ಮೆಲುಕು ಹಾಕಲು ಇದೊಂದು ಬೆಸ್ಟ್ ಪ್ಲೇಸ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ನಾವು ಚಿಕ್ಕವರಿದ್ದಾಗ ಏನೇನು ಮಾಡಿದ್ವಿ ಅನ್ನೋದನ್ನೆಲ್ಲ ನೆನಪಿಸಿಕೊಳ್ಳಬಹುದು. ಆ ನೆನಪುಗಳನ್ನು ನಿಮ್ಮವರೊಡನೆ ಹಂಚಿಕೊಳ್ಳಬಹುದು. ರೆಸ್ಟೋರೆಂಟ್‍ನಲ್ಲಿ ಬಾಲ್ಯದ ಆಟ, ಪಾಠ, ತುಂಟಾಟ ನೆನಪಿಸುವಂಥ ಎಲ್ಲ ವಸ್ತುಗಳೂ ಇವೆ. ಆಡಿ ನಲಿದ ಆ ದಿನಗಳು ಇಲ್ಲಿ ಮತ್ತೆ ಮರುಳಿಸುತ್ತವೆ. ನಿಮ್ಮನ್ನು ನೀವು ಮತ್ತೊಮ್ಮೆ ಅರಿತುಕೊಳ್ಳಲು ಸಹಾಯ ಮಾಡುತ್ತವೆ.