ಅಮ್ಮನ ಕೈಯ್ಯಡುಗೆ ಸವಿಯುವ ಮನಸ್ಸಾಗಿದ್ಯಾ..? ಆನ್‍ಲೈನ್‍ನಲ್ಲೂ ಸಿಗುತ್ತೆ `ಮದರ್ಸ್ ರೆಸಿಪಿ'

ಟೀಮ್​ ವೈ.ಎಸ್​. ಕನ್ನಡ

ಅಮ್ಮನ ಕೈಯ್ಯಡುಗೆ ಸವಿಯುವ ಮನಸ್ಸಾಗಿದ್ಯಾ..? 	ಆನ್‍ಲೈನ್‍ನಲ್ಲೂ ಸಿಗುತ್ತೆ `ಮದರ್ಸ್ ರೆಸಿಪಿ'

Friday January 22, 2016,

2 min Read

`ಮದರ್ಸ್ ರೆಸಿಪಿ' ಹೆಸರು ಕೇಳಿದ್ರೇನೆ ಅಮ್ಮನ ಕೈಯ್ಯಡುಗೆ ನೆನಪಾಗುತ್ತೆ ಅಲ್ವಾ? ಅದೇ ರುಚಿ, ಶುಚಿ. ಅಮ್ಮ ವಾತ್ಸಲ್ಯದಿಂದ ನಿಮಗಿಷ್ಟವಾದ ತಿನಿಸುಗಳನ್ನ ಮಾಡಿ ಬಡಿಸಿದಂತೆ `ಮದರ್ಸ್ ರೆಸಿಪಿ' ಕೂಡ ಅದ್ಭುತವಾ ಟೇಸ್ಟ್ ಹೊಂದಿದೆ. ದೇಸಾಯಿ ಸಹೋದರರ ಮದರ್ಸ್ ರೆಸಿಪಿ ಈಗ ಆನ್‍ಲೈನ್ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. ಆಹಾರೋತ್ಪನ್ನಗಳನ್ನು ಮಾರಾಟ ಮಾಡಲು ಆನ್‍ಲೈನ್ ಮಳಿಗೆಯನ್ನು ಆರಂಭಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ತಲುಪುವ ಉದ್ದೇಶದಿಂದ ಮದರ್ಸ್ ರೆಸಿಪಿ ಆನ್‍ಲೈನ್ ಮಾರುಕಟ್ಟೆಗೆ ಪ್ರವೇಶ ಮಾಡಿದೆ. ಮದರ್ಸ್ ರೆಸಿಪಿಯ ಎಲ್ಲಾ ವಿಭಾಗದ ಉತ್ಪನ್ನಗಳಲ್ಲಿ ಬೇಕಾಗಿದ್ದನ್ನು ವೆಬ್‍ಸೈಟ್ ಮೂಲಕವೇ ಗ್ರಾಹಕರು ಖರೀದಿಸಬಹುದು. ಬಗೆಬಗೆಯ ಉಪ್ಪಿನಕಾಯಿ, ಹಪ್ಪಳ, ರೆಡಿ ಟು ಕುಕ್ ಗ್ರೇವಿ ಮಿಶ್ರಣಗಳು, ರೆಡಿ ಟು ಈಟ್ ಮೀಲ್ಸ್, ವೆರೈಟಿ ವೆರೈಟಿ ಚಟ್ನಿಗಳು ಹೀಗೆ ಎಲ್ಲವನ್ನೂ ಮದರ್ಸ್ ರೆಸಿಪಿ ವೆಬ್‍ಸೈಟ್ ಮೂಲಕ ಆರ್ಡರ್ ಮಾಡಬಹುದು.

image


ದಿನೇ ದಿನೇ ಇ-ಕಾಮರ್ಸ್ ವೇದಿಕೆಗಳಿಗೆ ಜನಪ್ರಿಯತೆ ಹೆಚ್ತಾ ಇದೆ. ಜನರು ಕೂಡ ಆನ್‍ಲೈನ್ ಖರೀದಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಲಭ್ಯವಿರುವ ಎಲ್ಲಾ ಬಗೆಯ ಉತ್ಪನ್ನಗಳು ಗ್ರಾಹಕರಿಗೆ ಸುಲಭವಾಗಿ ತಲುಪುವಂತೆ ಮಾಡಲು ಆನ್‍ಲೈನ್ ಮಳಿಗೆ ತೆರೆದಿದ್ದೇವೆ ಎನ್ನುತ್ತಾರೆ ದೇಸಾಯಿ ಬ್ರದರ್ಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಂಜಯ್ ದೇಸಾಯಿ. ಈ ಹೊಸ ಪ್ರಯತ್ನದಿಂದ ಇನ್ನೂ ಹೆಚ್ಚು ಗ್ರಾಹಕರನ್ನು ತಲುಪಬಹುದು. ತಮ್ಮ ಈ ಯತ್ನ ಯಶಸ್ವಿಯಾಗಲಿದೆ ಅನ್ನೋ ವಿಶ್ವಾಸ ಸಂಜಯ್ ದೇಸಾಯಿ ಅವರದ್ದು.

ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಲ್ಲಿನ ವಿಶಿಷ್ಟ ತಿನಿಸುಗಳು ಕೂಡ ಮದರ್ಸ್ ರೆಸಿಪಿಯಲ್ಲಿ ದೊರೆಯುತ್ತವೆ. ದೇಶದ ಎಲ್ಲಾ ಭಾಗಗಳಲ್ಲೂ ಈ ಪೋರ್ಟಲ್ ಲಭ್ಯವಿದೆ. ಆಯಾ ಭಾಗದ ದಿನಸಿ ಅಂಗಡಿಗಳು ಮತ್ತು ಆಧುನಿಕ ಮಳಿಗೆಗಳಲ್ಲಿ ದೊರೆಯದಂತಹ ವಿಶಿಷ್ಟ ಉತ್ಪನ್ನಗಳು ಮದರ್ಸ್ ರೆಸಿಪಿಯಲ್ಲಿ ದೊರೆಯುವುದು ವಿಶೇಷ. ಸೋರಿಕೆಯಾಗದಂತಹ, ಸುಲಭವಾಗಿ ಕೊಂಡೊಯ್ಯಬಲ್ಲ ಪೌಚ್‍ಗಳಲ್ಲಿ ಉತ್ಪನ್ನಗಳನ್ನು ಪ್ಯಾಕ್ ಮಾಡಲಾಗುತ್ತದೆ. ಪುಣೆಯಲ್ಲಿ `ಮದರ್ಸ್ ಡೈರಿಯ' ಮುಖ್ಯ ಗೋದಾಮಿದೆ. ಅಲ್ಲಿಂದಲೇ ಎಲ್ಲಾ ಕಡೆಗಳಿಗೆ ಉತ್ಪನ್ನಗಳನ್ನು ಕಳುಹಿಸಿಕೊಡಲಾಗುತ್ತದೆ. ಫೆಡೆಕ್ಸ್ ಕೊರಿಯರ್ ಮೂಲಕ 5-7 ದಿನಗಳೊಳಗಾಗಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ.

`ಬಿಗ್ ಬಾಸ್ಕೆಟ್', `ಗ್ರೊಫರ್ಸ್', `ಅಮೇಝಾನ್ ಡಾಟ್ ಇನ್', `ಅರಾಮ್‍ಶಾಪ್', `ಫಾರ್ಮ್ 2 ಕಿಚನ್', `ಮೈ ಗ್ರಾಹಕ್', `ಕ್ಯಾಲೆಂಡಾರ್ಡ್‍ರ್', `ಫ್ರೆಶ್‍ನ್‍ಡೈಲಿ' ಸೇರಿದಂತೆ ಒಟ್ಟು 18 ಇ-ಕಿರಾಣಿ ಆನ್‍ಲೈನ್ ಪೋರ್ಟಲ್‍ಗಳಲ್ಲಿ ಮದರ್ಸ್ ಡೈರಿಯ ರೆಸಿಪಿಗಳು ಲಭ್ಯವಿವೆ. ಆನ್‍ಲೈನ್ ಮಾರಾಟದಿಂದಾಗಿ ಮದರ್ಸ್ ಡೈರಿಯ ಸೇಲ್ಸ್ ಪ್ರಮಾಣ ಹೆಚ್ಚಿದೆ. ಆನ್‍ಲೈನ್ ಕ್ಷೇತ್ರಕ್ಕೆ ಪ್ರವೇಶಿಸುವ ಮೂಲಕ ಗ್ರಾಹಕರನ್ನು ಸಂಪರ್ಕಿಸಲು, ಅವರ ಸಲಹೆ ಸೂಚನೆಗಳು, ಉತ್ಪನ್ನಗಳ ಬಗ್ಗೆ ಫೀಡ್‍ಬ್ಯಾಕ್ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ ಅಂತಾ ಸಂಜಯ್ ದೇಸಾಯಿ ಖುಷಿಯಿಂದ ಹೇಳಿಕೊಂಡಿದ್ದಾರೆ. ಕಂಪನಿಯ ಬ್ರಾಂಡ್ ಅನ್ನೇ ನೆಚ್ಚಿಕೊಂಡಿರುವವರು ಆನ್‍ಲೈನ್ ಎಂಟ್ರಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇನ್ನಷ್ಟು ಗ್ರಾಹಕರನ್ನು ಸಂಪಾದಿಸಲು ಸಹ ಈ ಬೆಳವಣಿಗೆ ಸಹಾಯ ಮಾಡಿದೆ.

ಸದ್ಯ ಕಂಪನಿಯ ಒಟ್ಟು ಆದಾಯದಲ್ಲಿ ಆನ್‍ಲೈನ್ ಮಾರಾಟದ ಕೊಡುಗೆ ಸದ್ಯಕ್ಕೆ ಅಲ್ಪ ಮಾತ್ರ. ಮುಂದಿನ ದಿನಗಳಲ್ಲಿ ಆನ್‍ಲೈನ್ ಮಾರಾಟ ಇನ್ನಷ್ಟು ಜನಪ್ರಿಯವಾಗಲಿದ್ದು, ಮದರ್ಸ್ ರೆಸಿಪಿ ಕೂಡ ಭಾರೀ ಯಶಸ್ಸಿನ ನಿರೀಕ್ಷೆಯಲ್ಲಿದೆ. ನಿಮಗೂ ಅಮ್ಮನ ಕೈಯ್ಯಡುಗೆ ಸವಿಯುವ ಆಸೆಯಾದ್ರೆ ಮದರ್ಸ್ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಮನೆಯೂಟದಂತಹ ತಿನಿಸುಗಳನ್ನು ಟೇಸ್ಟ್ ಮಾಡಿ.

ಅನುವಾದಕರು: ಭಾರತಿ ಭಟ್​​