ಸೋಲನ್ನು ಮಣಿಸಿ ಮುನ್ನೆಡೆದ ಪೋಲಿಯೋ ಯುವಕನ ಸಾಹಸ ಕಥೆ

ಟೀಮ್​ ವೈ.ಎಸ್​. ಕನ್ನಡ

0


ದೆಹಲಿಯ ನಿವಾಸಿ 21 ವರ್ಷದ ತೇಜಸ್ವಿ ಶರ್ಮಾ ವ್ಯಕ್ತಿತ್ವ ನಿಮ್ಮನ್ನು ಬೆರಗುಗೊಳಿಸುತ್ತದೆ. ತೇಜಸ್ವಿ ಶರ್ಮಾ, ಪುರಾತನ ಯೋಗದಲ್ಲಿ ಪರಿಣಿತರು. ಅತ್ಯಂತ ಕಠಿಣವಾದ ಯೋಗಾಸನವನ್ನೂ ತೇಜಸ್ವಿ ಸುಲಭವಾಗಿ ಮಾಡ್ತಾರೆ. ತೇಜಸ್ವಿ 9 ತಿಂಗಳಿರುವಾಗಲೇ ಪೋಲಿಯೋ ಆವರಿಸಿಕೊಂಡ್ತು. ಎರಡೂ ಕಾಲುಗಳು ಶಕ್ತಿ ಕಳೆದುಕೊಂಡವು.ಆದ್ರೆ ಪೋಷಕರು ಮಾತ್ರ ಧೈರ್ಯಗೆಡಲಿಲ್ಲ. ಸೋಲನ್ನು ಸ್ವೀಕರಿಸಲಿಲ್ಲ. ಒಂದು ವರ್ಷ ವಯಸ್ಸಿನಲ್ಲಿಯೇ ತೇಜಸ್ವಿಗೆ ಯೋಗ ಕಲಿಸಲು ಶುರು ಮಾಡಿದರು. ಕಳೆದ ಕೆಲವು ವರ್ಷಗಳಲ್ಲಿ ತೇಜಸ್ವಿ ಯೋಗದಲ್ಲಿ ಎಷ್ಟು ಪರಿಣಿತಿ ಪಡೆದಿದ್ದಾರೆಂದರೆ, ಶೇಕಡಾ 69ರಷ್ಟು ಅಂಗವೈಕಲ್ಯವಿದ್ದರೂ, ಯೋಗ ಕ್ಷೇತ್ರದಲ್ಲಿ ಸಾಧಿಸಿ ತೋರಿಸಿದ್ದಾರೆ.

`ಮೋಸ್ಟ್ ಪ್ಲೆಕ್ಸಿಬಲ್ ಹ್ಯಾಡಿಕ್ಯಾಪ್ಟ್ ಯೋಗಾ ಚಾಂಪಿಯನ್ -2015’ ಎಂದು ಅಕ್ಟೋಬರ್ 28 ಬುಧವಾರ ವರ್ಡ್ ರೇಕಾರ್ಡ್ ನಲ್ಲಿ ತೇಜಸ್ವಿ ಹೆಸರು ಸೇರ್ಪಡೆಯಾಗಿದೆ. 2011ರಲ್ಲಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ವರ್ಡ್ ಕಪ್ ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 2012ರಲ್ಲಿ ಹಾಂಕಾಂಗ್ ನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಹಾಗೂ 2014ರಲ್ಲಿ ಚೀನಾದಲ್ಲಿ ಆಯೋಜಿಸಿದ್ದ ನಾಲ್ಕನೇ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಜಗತ್ಪ್ರಸಿದ್ಧ ದೆಹಲಿಯ ಜೆಎನ್ ಯು ಕಾಲೇಜಿನಲ್ಲಿ ಜರ್ಮನ್ ಭಾಷೆಯಲ್ಲಿ ಅಂತಿಮ ಡಿಗ್ರಿ ಓದುತ್ತಿರುವ ತೇಜಸ್ವಿ ಯುವರ್ ಸ್ಟೋರಿ ಜೊತೆ ತಾವು ನಡೆದು ಬಂದ ಹಾದಿಯನ್ನು ಬಿಚ್ಚಿಟ್ಟಿದ್ದಾರೆ.

`` ನನಗೆ 9 ತಿಂಗಳಾಗಿತ್ತು. ಆಗಷ್ಟೇ ನಾನು ನಡೆಯಲು ಕಲಿಯುತ್ತಿದ್ದೆ. ಆಗ ನನಗೆ ಪೊಲೀಯೋ ಬಂತು. ಅಪ್ಪ ವೈದ್ಯರ ಬಳಿ ತೋರಿಸಿದರು. ನನ್ನ ಕಾಲ ಮೇಲೆ ನಾನು ನಿಲ್ಲುವುದು ಅನುಮಾನ ಎಂದ ವೈದ್ಯರು ದೆಹಲಿ ವೈದ್ಯರಿಗೆ ತೋರಿಸುವಂತೆ ಹೇಳಿದ್ರು. ಅಖಿಲ ಭಾರತೀಯ ಆಯುರ್ ವಿಜ್ಞಾನ ಸಂಸ್ಥೆಯ ವೈದ್ಯರಿಗೆ ತೋರಿಸಿದರು. ಅಲ್ಲಿ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಯ್ತು.’’

ಶಸ್ತ್ರಚಿಕಿತ್ಸೆ ನಂತರ ಕಾಲಿನ ರಕ್ತ ಸಂಚಾರವನ್ನು ಸುಸೂತ್ರವಾಗಿಡಲು ತೇಜಸ್ವಿ ತಂದೆ ಒಂದು ವರ್ಷ ಇರುವಾಗಲೇ ಯೋಗ ತರಬೇತಿ ನೀಡಲು ಶುರುಮಾಡಿದರು.

ಒಂದು ಬಾರಿ ಯೋಗಾಭ್ಯಾಸ ಶುರುಮಾಡಿದ ತೇಜಸ್ವಿಗೆ ಅದರಲ್ಲಿ ಆಸಕ್ತಿ ಬೆಳೆಯಿತು. ಚಿಕ್ಕ ವಯಸ್ಸಿನಲ್ಲಿಯೇ ಯೋಗಾಭ್ಯಾಸ ಮಾಡಿದ್ದರಿಂದ ದೇಹ ಹೇಳಿದಂತೆ ಕೇಳಲಾರಂಭಿಸಿತು. ಐದು ವರ್ಷದ ವೇಳೆಗೆ ತೇಜಸ್ವಿ ಪ್ರತಿದಿನ 60-70 ಯೋಗದ ಆಸನಗಳನ್ನು ಮಾಡ್ತಾ ಇದ್ದರು.

`` ನನಗೆ ಐದು ವರ್ಷವಾಗ್ತಾ ಇದ್ದಂತೆ ನನ್ನ ಚಿಕ್ಕಪ್ಪ ನನ್ನನ್ನು ದೆಹಲಿಗೆ ಕರೆದುಕೊಂಡು ಹೋದರು. ನೋಯ್ಡಾ ಸೆಕ್ಟರ್ 82ರ ಮಹರ್ಷಿ ವಿದ್ಯಾ ಮಂದಿರಕ್ಕೆ ನನ್ನನ್ನು ಸೇರಿಸಿದರು. ಈ ಶಾಲೆಗೆ ಸೇರಿದ ನಂತರ ನಾನು ಯೋಗದಲ್ಲಿ ಮತ್ತಷ್ಟು ಕಲಿಯಲು ಸಾಧ್ಯವಾಯ್ತು. ಅಲ್ಲದೆ ಧ್ಯಾನ ಮಾಡುವುದನ್ನು ನಾನು ಕಲಿತೆ.’’

ಹೀಗೆ ಶಾಲೆಗೆ ಸೇರಿದ ಮೇಲೆ ಯೋಗವನ್ನು ಮತ್ತಷ್ಟು ಆಸಕ್ತಿಯಿಂದ ಕಲಿತ ತೇಜಸ್ವಿ ಜೊತೆ ಜೊತೆಯಲ್ಲಿಯೇ ಶಾಲೆ ವಿದ್ಯಾಭ್ಯಾಸವನ್ನೂ ಮುಂದುವರಿಸಿದರು.

ಯೋಗದ ವಿಷಯದಲ್ಲಿ ತೇಜಸ್ವಿನಿ ಶಾಲೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಆದರೆ ಅವರು ಅಂಗವೈಕಲ್ಯದ ಬಗ್ಗೆ ಸಹಪಾಠಿಗಳು ಅವಹೇಳನ ಮಾಡ್ತಾ ಇದ್ದರು. ಇದೇ ಸಮಯದಲ್ಲಿ ಶಾಲೆಯಲ್ಲಿ ಯೋಗ ಸ್ಪರ್ಧೆಯನ್ನು ಏರ್ಪಡಿಸಿತ್ತು.

ನನ್ನನ್ನು ಅವಹೇಳನ ಮಾಡುತ್ತಿದ್ದ ಸಹಪಾಠಿಗಳಿಗೆ ನನ್ನ ಸಾಮರ್ಥ್ಯ ತೋರಿಸಲು ಬಯಸಿದ್ದೆ. ನಾನು ಪಿಟಿಐ ಪ್ರವೀಣ್ ಶರ್ಮಾ ಅವರ ಪ್ರೇರಣೆಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡೆ. ನನ್ನ ಯೋಗದ ಬಲದಿಂದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.’’

ಇದರ ನಂತರ ತೇಜಸ್ವಿ ಹಿಂದಿರುಗಿ ನೋಡಲಿಲ್ಲ.ಮೊದಲು ಜಿಲ್ಲಾ ಮಟ್ಟದಲ್ಲಿ ಅವರಿಗೆ ಪ್ರೋತ್ಸಾಹ ಸಿಕ್ಕಿತು. ನಂತರ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ರು. ಯೋಗ ಸ್ಪರ್ಧೆಯಲ್ಲಿ ವಿಕಲಾಂಗ ಎನ್ನುವ ವಿಭಾಗ ಇರುವುದಿಲ್ಲ. ಸಾಮಾನ್ಯರ ಜೊತೆ ತೇಜಸ್ವಿ ಯೋಗದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇದು ಅವರಿಗೆ ಮತ್ತಷ್ಟು ಸ್ಪೂರ್ತಿ ನೀಡಿತು. ಮತ್ತಷ್ಟು ಉತ್ತಮ ಪ್ರದರ್ಶನಕ್ಕೆ ಪ್ರೇರಣೆ ನೀಡ್ತು.

ಕೆಲ ಸ್ಪರ್ಧೆಗಳಲ್ಲಿ ಜಯಗಳಿಸಿದ ನಂತರ ತಮ್ಮ ಕಲೆಯನ್ನು ಪ್ರದರ್ಶಿಸುವ ನಿರ್ಧಾರಕ್ಕೆ ಬಂದರು ತೇಜಸ್ವಿ. 2010ರಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಲಾತ್ಮಕ ಯೋಗವನ್ನು ತೇಜಸ್ವಿ ಪ್ರದರ್ಶಿಸಿದರು. ಕಲಾತ್ಮಕ ಯೋಗ ಪ್ರದರ್ಶನದಲ್ಲಿ 1.5 ನಿಮಿಷದಲ್ಲಿ ಸ್ಪರ್ಧಿ ಅತ್ಯುತ್ತಮ ಯೋಗಾಸನವನ್ನು ಪ್ರದರ್ಶಿಸಬೇಕು. ಸಂಗೀತಕ್ಕೆ ಅನುಸಾರವಾಗಿ ಯೋಗ ಪ್ರದರ್ಶಿಸಬೇಕು. ಮೊದಲ ಬಾರಿಗೆ ಅಷ್ಟು ದೊಡ್ಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ತೇಜಸ್ವಿ, ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಒಂದು ಬಾರಿ ಪದಕ ಗೆದ್ದ ನಂತರ ಕಲಾತ್ಮಕ ಯೋಗದಲ್ಲಿ ಮುಂದೆ ಸಾಗಲು ತೇಜಸ್ವಿ ನಿರ್ಧರಿಸಿದ್ರು. ನನ್ನಲ್ಲೊಂದು ಸಾಮರ್ಥ್ಯವಿದೆ ಎಂಬುದನ್ನು ಅರಿತ ತೇಜಸ್ವಿ, ಯೋಗವನ್ನೇ ವೃತ್ತಿಯನ್ನಾಗಿ ಸ್ವೀಕರಿಸಲು ತೀರ್ಮಾನಿಸಿದ್ರು.

ನಂತರ ಅವರು ಟಿವಿ ಶೋಗಳಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಇಂಡಿಯಾ ಗೋಟ್ ಟ್ಯಾಲೆಂಟ್ ಹಾಗೂ ಎಂಟರ್ ಟೈನ್ಮೆಂಟ್ ಕೇಲಿಯೇ ಕುಚ್ ಬಿ ಕರೇಗಾ’’ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಲ್ಲಿ ಯಶಸ್ವಿಯಾದರು. ಎರಡೂ ಶೋಗಳಲ್ಲಿ ಜಡ್ಜ್ ಹಾಗೂ ಪ್ರೇಕ್ಷಕರ ಮೆಚ್ಚಿಗೆ ಗಳಿಸುವಲ್ಲಿ ತೇಜಸ್ವಿ ಯಶಸ್ವಿಯಾದರು. ಅಲ್ಲದೆ ಶೋ ಮೂಲಕ ಸಾಕಷ್ಟು ಹೆಸರುಗಳಿಸಿದ್ರು. ಇಷ್ಟು ವರ್ಷಗಳ ಅಭ್ಯಾಸದ ನಂತರ ತೇಜಸ್ವಿಗೆ ಯೋಗದ ಕಠಿಣ ಭಂಗಿಗಳು ಮಕ್ಕಳ ಆಟದಂತಾಗಿವೆ. ಅವರೇ ಕೆಲವು ಭಂಗಿಗಳನ್ನು ಪರಿಚಯಿಸಿದ್ದಾರೆ. ಸಾಮಾನ್ಯ ವ್ಯಕ್ತಿಗೆ ಕಷ್ಟವಾಗುವ ಆಸನಗಳನ್ನು ಸರಳವಾಗಿ ಮಾಡಿ ತೋರಿಸ್ತಾರೆ ತೇಜಸ್ವಿ.

ಇದರ ನಂತರ 2011ರಲ್ಲಿ ದೆಹಲಿಯ ತಲಕಟೋರಾ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 2012 ರಲ್ಲಿ ಹಾಂಗ್ ಕಾಂಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಚಾಂಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸೆಪ್ಟೆಂಬರ್ 2014ರಲ್ಲಿ ಚೀನಾದ ಶಾಂಘೈನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅಂತಿಮ 6 ಸ್ಪರ್ಧೆಗಳಲ್ಲಿ ಒಬ್ಬರಾಗಿದ್ದ ಅವರು, ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಬೆಳ್ಳಿ ಪದಕ ಗಿಟ್ಟಿಸಿಕೊಂಡಿದ್ದಾರೆ.

ನಾನು ನಮ್ಮ ಸಾಮರ್ಥ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡು, ನಕಾರಾತ್ಮಕ ಅಂಶವನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಂಡರೆ ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಯೋಗ ಮಾಡಿ ರೋಗದಿಂದ ದೂರ ಇರಿ ಎನ್ನುತ್ತಾರೆ ತೇಜಸ್ವಿ.

ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ತೇಜಸ್ವಿ, ಸರ್ಕಾರ ಯೋಗವನ್ನು ಆಟವೆಂದು ಪರಿಗಣಿಸಿದೆ. ಆದರೆ ವಿಕಲಾಂಗರಿಗೆ ಪ್ರತ್ಯೇಕ ವಿಭಾಗ ಮಾಡಿಲ್ಲ. ಇದರಿಂದ ಸಾಕಷ್ಟು ವಿಕಲಾಂಗ ಯೋಗ ಪಟುಗಳಿಗೆ ಇದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ತೇಜಸ್ವಿ.


ಲೇಖಕರು: ನಿಶಾಂತ್ ಗೋಯೆಲ್

ಅನುವಾದಕರು: ರೂಪಾ ಹೆಗಡೆ