ಕಷ್ಟದ ದಿನಗಳನ್ನೇ ಶಕ್ತಿ ಮಾಡಿಕೊಂಡವರು- ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ...

ಟೀಮ್​​ ವೈ.ಎಸ್​. ಕನ್ನಡ

0

ನಾನು ಹುಟ್ಟಿದ್ದು ದಕ್ಷಿಣ ಕ್ಯಾಲಿಫೋರ್ನಿಯಾದ ಮಧ್ಯಮ ವರ್ಗದ ಕುಟುಂಬದಲ್ಲಿ. ನನ್ನ ತಂದೆ ಸೇಲ್ಸ್​​ ಮನ್ ಆಗಿದ್ದರು. ನನ್ನ ತಾಯಿ ಮನೆಯಲ್ಲೇ ಇದ್ದರು. ನಾವು ಐವರು ಮಕ್ಕಳು, ನಮ್ಮನ್ನು ನೋಡಿಕೊಳ್ಳುವುದೇ ಅಮ್ಮನ ಜವಾಬ್ದಾರಿ. ಇನ್ನೇನು ಬೇಕು ಕುಟುಂಬಕ್ಕೆ, ಎಲ್ಲವೂ ಸರಿಯಾಗಿಯೇ ಇದೆ ಅಲ್ವಾ???

ನನ್ನ ತಂದೆ ದೊಡ್ಡ ಕುಡುಕನಾಗಿದ್ದ, ಹೆಂಗಸರ ಚಾಳಿಯೂ ಇತ್ತು, ಪ್ರತಿದಿನ ಅಮ್ಮನನ್ನು ಮತ್ತು ನಮ್ಮನ್ನು ಹೊಡೆಯುತ್ತಿದ್ದ. ನಮ್ಮನ್ನು ರಕ್ಷಿಸಲು ಅಮ್ಮ ಸಾಕಷ್ಟು ಪ್ರಯತ್ನಿಸುತ್ತಿದ್ದರು, ಆದ್ರೆ ಅಪ್ಪನಿಂದ ಎಷ್ಟು ಭಯಭೀತರಾದ್ರು ಅಂದ್ರೆ ಅಮ್ಮ ಸುಮ್ಮನಾಗಿಬಿಟ್ಟರು. ಕ್ರಮೇಣ ಅಮ್ಮನಿಗೆ ಧೈರ್ಯ ಬಂತು. ಎಷ್ಟು ಧೈರ್ಯ ಅಂದ್ರೆ ಅಪ್ಪನನ್ನೇ ಮನೆಯಿಂದ ಹೊರಗೆ ಹಾಕಿದ್ರು. ವಿಚ್ಛೇದನ ಪಡೆದರು. ತಾವೇ ಕೆಲಸಗಳನ್ನು ಹುಡುಕಿಕೊಂಡು ಪ್ರತಿದಿನ ಮೂರು ಕೆಲಸಗಳನ್ನು ಮಾಡತೊಡಗಿದ್ರು. ಜೊತೆಗೆ ಸರ್ಕಾರದ ಸಹಕಾರವೂ ದೊರೆಯಿತು. ಆದ್ರೆ ಕೆಲವೇ ತಿಂಗಳಲ್ಲಿ ನಮ್ಮನ್ನು ಮನೆಯಿಂದ ಹೊರಗೆ ಹಾಕಲಾಯ್ತು. ಇದರಿಂದಾಗಿ ನನ್ನ ಸಹೋದರರೂ ಓದನ್ನು ಬಿಟ್ಟು ಕೆಲಸಕ್ಕೆ ಸೇರಿದ್ರು. ಕ್ರಮೇಣ ಕಷ್ಟಗಳು ಬಗೆಹರಿದವು.

ಗರ್ಭಧಾರಣೆ ಮತ್ತು ಶಿಕ್ಷಣ

ಸ್ವಲ್ಪ ಹಿಂದಕ್ಕೆ ಹೋಗೋಣ - ಆಗಷ್ಟೇ ಪ್ರೌಢ ಶಾಲೆ ಪ್ರವೇಶಿಸಿದ್ದ ನಾನು ಕೆಲವೇ ತಿಂಗಳಲ್ಲಿ ಗಭಿಣಿಯಾಗಿಬಿಟ್ಟಿದ್ದೆ. ಯಾರೊಂದಿಗೂ ದೈಹಿಕ ಸಂಪರ್ಕ ಬೆಳೆಸದಂತೆ ನನ್ನನ್ನು ಎಚ್ಚರಿಸಲಾಗಿತ್ತು, ಹಾಗೇನಾದ್ರೂ ಸಂಭೋಗ ಕ್ರಿಯೆ ನಡೆಸಿದ್ರೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದ್ದರು. ಆದ್ರೆ ಮುನ್ನೆಚ್ಚರಿಕಾ ಕ್ರಮಗಳೆಂದರೇನು? ಅದು ನನಗೆ ಗೊತ್ತಿರಲಿಲ್ಲ. ಅಲ್ಲದೇ ಕಾಂಡೋಮ್‍ಗಳು ಎಲ್ಲಿ ಸಿಗುತ್ತೆ ಅನ್ನೋದು ನನಗೆ ಗೊತ್ತಿರಲಿಲ್ಲ. ಅಲ್ಲದೇ ಅವನ್ನು ಖರೀದಿಸುವಷ್ಟು ಧೈರ್ಯವೂ ನನಗಿರಲಿಲ್ಲ. ಆದ್ರೆ ಒಂದು ದಿನ ನನಗೂ ನನ್ನ ಅಮ್ಮನಿಗೂ ದೊಡ್ಡ ಜಗಳವೇ ನಡೆದುಹೋಯ್ತು. ಅವರು ‘ಏನಾಗಿದೆ ನಿನಗೆ? ನೀನು ಗರ್ಭಿಣಿಯಾಗಿದ್ದೀಯಾ?’ ಅಂತ ಕೇಳಿದ್ರು. ನನಗೆ ಇದ್ದರೂ ಇರಬಹುದು ಅಂತ ಅನ್ನಿಸಿತಾದ್ರೂ, ‘ನನಗೆ ಗೊತ್ತಿಲ್ಲ’ ಎಂದು ಉತ್ತರಿಸಿದೆ. ತಡವಾಗುವುದಕ್ಕೂ ಮುನ್ನ ಹೌದೋ? ಇಲ್ಲವೋ? ಎಂಬುದನ್ನು ತಿಳಿದುಕೋ ಎಂದು ಅಮ್ಮ ಸಲಹೆ ನೀಡಿದ್ರು.

ಆಗಲೇ ನನ್ನಲ್ಲಿರುವ ಶಕ್ತಿಯ ಬಗ್ಗೆ ನನಗೆ ತಿಳಿಯಿತು. ನನ್ನನ್ನು ನಾನೇ ನೋಡಿಕೊಳ್ಳುವಷ್ಟು ಶಕ್ತಳಾಗಿದ್ದೇನೆ ಅನ್ನೋದು ಅರಿವಿಗೆ ಬಂತು. ಶಾಲೆಯನ್ನು ಅರ್ಧಕ್ಕೇ ಬಿಟ್ಟು ಮಗು ಹೆರವುದು ನನಗಿಷ್ಟ ಇರಲಿಲ್ಲ. ಹೀಗಾಗಿಯೇ ವೈದ್ಯಕೀಯ ಸಲಹೆ, ಸೌಲಭ್ಯಗಳನ್ನು ನೀಡುವ ಒಬ್ಬರನ್ನು ಸಂಪರ್ಕಿಸಿದೆ. ಆದ್ರೆ ಆಕೆ ನನಗೆ ಗರ್ಭಪಾತ ಮಾಡಿಸಲು ಹೇಳಿದಳು. ನನ್ನ ಕೈಯನ್ನು ನನ್ನ ಹೊಟ್ಟೆಯ ಮೇಲಿರಿಸಿ, ‘ಯಾವತ್ತೋ ಒಂದು ದಿನ ನಿನಗೆ ಮಗುವಿನ ತಾಯಿಯಾಗುವ ಆಸೆ ಬಂದೇ ಬರುತ್ತೆ. ಅದಕ್ಕೆ ಕಾಲ ಕೂಡಿ ಬರಬೇಕು. ಆದ್ರೆ ಈಗ ಅದಕ್ಕೆ ಸಕಾಲವಲ್ಲ’ ಅಂತ ಬುದ್ಧಿಮಾತು ಹೇಳಿದಳು.

ಮಹಿಳೆಯರ ಮೇಲಿನ ದೌರ್ಜನ್ಯ – ಒಂದು ಜಾಗತಿಕ ವಿದ್ಯಮಾನ

ಈಗ ಸ್ವಲ್ಪ ಮುಂದಕ್ಕೆ ಹೋಗೋಣ. ನನಗೆ ಒಳ್ಳೆಯ ಕೆಲಸವಿತ್ತು. ಸ್ವಯಂ-ಸುರಕ್ಷಿತವಾಗಿರುವ ಅನುಭವವಿತ್ತು. ಸಮಾಧಾನವಿತ್ತು, ಖುಷಿಯಾಗಿದ್ದು. ಆದ್ರೆ ಅದೊಂದು ರಾತ್ರಿ ಮನೆಗೆ ತಡವಾಗಿ ಬಂದೆ. ಅದ್ಹೇಗೆ ಆ ದುಷ್ಟ ಮನೆಯೊಳಗೆ ನುಗ್ಗಿದ್ದನೋ ಗೊತ್ತಿಲ್ಲ. ಕೊರಳಿಗೆ ಚಾಕುವನ್ನಿಟ್ಟು ಬೆದರಿಸಿ ನನ್ನ ಮೇಲೆ ಅತ್ಯಾಚಾರವೆಸಗಿದ. ಮಾನಸಿಕವಾಗಿ, ದೈಹಿಕವಾಗಿ ಜರ್ಝಳಿತಳಾಗಿದ್ದರೂ, ಆ ಅಗ್ನಿಪರೀಕ್ಷೆಯಲ್ಲೂ ನಾನು ಬದುಕುಳಿದೆ. ಆ ಘಟನೆ ನನ್ನನ್ನು ಮತ್ತಷ್ಟು ಬಲಶಾಲಿಯನ್ನಾಗಿಸಿತು. ನಾನು ಸಮಾಜದಲ್ಲಿ ಮಹಿಳೆಯರನ್ನು ಬೆಂಬಲಿಸಲು ಇದೂ ಒಂದು ಕಾರಣ.

ಈಗ ಇನ್ನೂ ಸ್ವಲ್ಪ ಮುಂದಕ್ಕೆ ಹೋಗೋಣ - ನಾನು ವಿದೇಶದಲ್ಲಿ ಓದುತ್ತಿದ್ದೆ. ಆಗ ಒಬ್ಬ ಅದ್ಭುತ ವ್ಯಕ್ತಿಯನ್ನು ಭೇಟಿಯಾದೆ. ನಾವು ಜೊತೆಯಲ್ಲೇ ಟರ್ಕಿ ಮತ್ತು ಭಾರತಕ್ಕೆ ಭೇಟಿ ನೀಡಿದ್ದೆವು. ಪ್ರೀತಿಸಿ ಇಬ್ಬರೂ ಮದುವೆಯಾದೆವು ಕೂಡ. ಕ್ರಮೇಣ ಪೀಸ್ ಕಾರ್ಪಸ್​​ನಲ್ಲಿ ಕೆಲಸಕ್ಕೆ ಸೇರಿದೆವು. ಹೊರಜಗತ್ತಿನೊಂದಿಗೆ ಅಷ್ಟಾಗಿ ಸಂಪರ್ಕವಿಲ್ಲದ ದ್ವೀಪದವೊಂದರಲ್ಲಿ, ಅಲ್ಲಿನ ಸ್ಥಳೀಯರಂತೆಯೇ ವಾಸಿಸತೊಡಗಿದೆವು. ನಾನು ಸ್ಥಳೀಯ ಮಹಿಳೆಯರೊಂದಿಗೆ ಕೆಲಸ ಮಾಡತೊಡಗಿದೆ. ಅಲ್ಲಿನ ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಹಾಗೂ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ತುಂಬಾ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದರು. ಮಕ್ಕಳು ವಿದ್ಯಾವಂತರಾಗಿ, ಒಳ್ಳೆಯ ಕೆಲಸಗಳಿಗೆ ಸೇರಿ, ನಮ್ಮ ಸಮುದಾಯದಲ್ಲಿ ಒಳ್ಳೆಯ ಬದಲಾವಣೆ ಅನ್ನೋ ಆಶಯ ಆ ತಾಯಂದಿರದು. ಫ್ರೀಡಾ ಎಂಬ 36 ವರ್ಷದ ಮಹಿಳೆ, ನೋಡಲು 60 ವರ್ಷದ ಅಜ್ಜಿಯಂತೆ ಕಾಣುತ್ತಿದ್ದಳು. 14 ವರ್ಷಕ್ಕೇ ಆಕೆಯ ಮದುವೆಯಾಗಿತ್ತು. ಅದುವರೆಗೆ ಬರೊಬ್ಬರಿ 15 ಬಾರಿ ಗರ್ಭಧರಿಸಿದ್ದಳು, ಆದ್ರೆ ಕೇವಲ 8 ಮಕ್ಕಳಷ್ಟೇ ಬದುಕುಳಿದಿದ್ದವು.

ಭಾರತದ ಕಥೆ

ನನ್ನ ಕೆಲಸಗಳೇ ಹಾಗೇ, ದೇಶ ವಿದೇಶಗಳನ್ನು ಸುತ್ತಬೇಕಿತ್ತು. ಅದರಂತೆ ಒಮ್ಮೆ ನಾನು ಮುಂಬೈಗೂ ಭೇಟಿ ನೀಡಿದ್ದೆ. ಆಗ ಲಿಂಗ ತಾರತಮ್ಯ ಹಾಗೂ ಹುಡುಗಿಯರು ಮತ್ತು ಮಹಿಳೆಯರನ್ನು ಕೀಳಾಗಿ ಕಾಣುವ ಹಲವು ಘಟನೆಗೆ ನಾನೂ ಸಾಕ್ಷಿಯಾಗಿದ್ದೆ. ಮುಂಬೈನಂತಹ ಮಹಾನಗರಿಗಳಲ್ಲಿರುವ ಹುಡುಗಿಯರು ಅಂತಹ ಸಮಸ್ಯೆಗಳನ್ನು ಅಷ್ಟಾಗಿ ಎದುರಿಸುವುದಿಲ್ಲ. ಆದ್ರೆ ಗ್ರಾಮೀಣ ಭಾಗದ ಮಹಿಳೆಯರು ಮತ್ತು ಹುಡುಗಿಯರಿಗಂತೂ ಅಂತಹ ಹಲವಾರು ಸಮಸ್ಯೆಗಳು ಪ್ರತಿದಿನ ಕಾಡುತ್ತಿವೆ. ಈ ಹುಡುಗಿಯರು ಶಾಲೆಗೆ ಹೋಗಲು ಇಷ್ಟಪಡುತ್ತಾರೆ. ಅವರ ಟೀಚರ್‍ಗಳು ಆ ಬಾಲಕಿಯರು, ಶಿಕ್ಷಕಿಯರಾಗುವಂತಹ ಅಥವಾ ಎಂಜಿನಿಯರ್ ಅಥವಾ ಗಣಿತಜ್ಞರಾಗುವ ಕನಸನ್ನು ಕಾಣುವಂತೆ ಮಾಡ್ತಾರೆ. ಆದ್ರೆ ಈ ಬಾಲಕಿಯರು ನಿಜವಾಗಿಯೂ ಆ ಕನಸನ್ನು ನನಸು ಮಾಡಿಕೊಳ್ತಾರಾ? ಅವರು ಅದೇ ರೀತಿ ಶಿಕ್ಷಣ ಮುಂದುವರೆಸಿ, ಅಭಿವೃದ್ಧಿ ಹೊಂದುತ್ತಾರಾ? ಅವರ ಕುಟುಂಬಕ್ಕೆ, ಸಮುದಾಯಕ್ಕೆ ಅಷ್ಟೇ ಯಾಕೆ ಇಡೀ ದೇಶಕ್ಕೇ ಒಳ್ಳೆಯ ಹೆಸರು ತರ್ತಾರಾ?

ಬಹುತೇಕ ಬಾಲಕಿಯರಿಗೆ ಆ ಕನಸುಗಳು ನನಸಾಗುವುದೇ ಇಲ್ಲ. ಆಕೆ ಪ್ರೌಢಾವಸ್ತೆ ಪ್ರವೇಶಿಸುತ್ತಿದ್ದಂತೆಯೇ ಆಕೆಯ ಪ್ರಪಂಚದ ಎಲ್ಲಾ ಬಾಗಿಲುಗಳೂ ಬಂದ್ ಆಗುತ್ತಾ ಬರುತ್ತವೆ. ಆಕೆಯನ್ನು ಶಾಲೆಯಿಂದ ಬಿಡಿಸಲಾಗುತ್ತೆ. ಮದುವೆ ಮಾಡಿಸಿ ಮನೆಯ ಕೆಲಸಗಳಿಗಷ್ಟೇ ಸೀಮಿತಗೊಳಿಸಲಾಗುತ್ತೆ. ತನ್ನ ಗ್ರಾಮದ ಗೆಳೆಯ, ಗೆಳತಿಯರನ್ನು ಭೇಟಿಯಾಗುವುದು, ಆಡುವುದು ಎಲ್ಲವನ್ನೂ ಆಕೆ ಹಠಾತ್‍ಆಗಿ ನಿಲ್ಲಿಸಬೇಕಾಗುತ್ತೆ. ಗಂಡಸಿನ ರಕ್ಷಣೆಯಿಲ್ಲದೆ ಆಕೆ ಹೊರಗೆ ಹೋಗುವುದು ದೊಡ್ಡ ತಪ್ಪು ಎಂಬಂತಾಗುತ್ತೆ. ಆಕೆ ತನ್ನ ಜೀವನದ ಕುರಿತು ಹಗಲುಗನಸು ಕಾಣವಂತೆಯೂ ಇರುವುದಿಲ್ಲ. ಬದಲಿಗೆ ಮನೆಯ ಕೆಲಸಗಳಲ್ಲೇ ಮುಗಿದುಹೋಗುತ್ತವೆ. ಅಷ್ಟರಲ್ಲೇ ಆಕೆ ಗರ್ಭಧರಿಸುತ್ತಾಳೆ. ಅಕಸ್ಮಾತ್ ಮಗುವಿಗೆ ಜನ್ಮನೀಡಿದಳು ಅಂತಾದ್ರೆ, ತಾಯಿಯಾಗಿ, ಮಗುವಿನ ಪೋಷಣೆಯ ಜವಾಬ್ದಾರಿ ಹೊರಬೇಕಾಗುತ್ತೆ. ಆಕೆ ತನ್ನ ಜೀವನದಲ್ಲಿ ಏನು ಮಾಡಬೇಕು, ಹೇಗೆ ಇರಬೇಕು, ಎಂಬುದನ್ನು ತಾನೇ ನಿರ್ಧರಿಸುವ ಶಕ್ತಿಯನ್ನೂ ಆಕೆ ಕಳೆದುಕೊಂಡಿರ್ತಾಳೆ. ಹೀಗಿರುವಾಗ ಯಾವ ಗುರಿ ಮುಟ್ಟಲು ತಾನೇ ಸಾಧ್ಯವಾದೀತು? ಯಾಕಂದ್ರೆ ತನ್ನ ಭವಿಷ್ಯವನ್ನು ನಿರ್ಧರಿಸುವ ಧ್ವನಿಯೂ ಆಕೆಯ ಬಳಿ ಇರುವುದಿಲ್ಲ.

ಜಾಗತಿಕ ಕಥೆ

ನನ್ನ ಕಥೆ, ಫ್ರೀಡಾ ಕಥೆ ಮತ್ತು ಭಾರತದ ಗ್ರಾಮೀಣ ಪ್ರದೇಶದ ಹುಡುಗಿಯರ ಕಥೆ ಎಲ್ಲವೂ ಒಂದಕ್ಕಿಂತ ಮತ್ತೊಂದು ಭಿನ್ನವಲ್ಲ. ಜಾಗತಿಕವಾಗಿ ಬಡ ಹಾಗೂ ಶ್ರೀಮಂತ ರಾಷ್ಟ್ರಗಳಲ್ಲೂ ಇಂತಹ ಕಥೆಗಳು ನಡೆಯುತ್ತಲೇಯಿರುತ್ತವೆ. ಮಹಿಳೆಯರಿಗೆ ತಮ್ಮ ಬದುಕಿನ ಮೇಲೆ ಹಿಡಿತವಿಲ್ಲದಿದ್ದರೆ, ಅವರಿಗೆ ತಾವು ಯಾವಾಗ ತಾಯಿಯಾಗಬೇಕು ಎಂಬುದರ ಕುರಿತು ನಿರ್ಧರಿಸಲೂ ಆಗದಿದ್ದರೆ, ಅವರು ಅತ್ಯಾಚಾರಕ್ಕೊಳಗಾಗುತ್ತಿದ್ದರೆ, ದೌರ್ಜನ್ಯಕ್ಕೊಳಗಾಗುತ್ತಿದ್ದರೆ, ಚಿಕ್ಕ ವಯಸ್ಸಿನಲ್ಲೇ ಅವರನ್ನು ಮದುವೆ ಮಾಡಿಕೊಂಡರೆ, ಅವರು ತಮ್ಮ ಮಕ್ಕಳ ಜೀವನವನ್ನು ರೂಪಿಸಲು ಸಾಧ್ಯವಾಗುವುದೇ ಇಲ್ಲ. ಇನ್ನು ಸಮುದಾಯ, ಸಮಾಜ ಹಾಗೂ ದೇಶವನ್ನು ಅವರು ಹೇಗೆ ತಾನೇ ಅಭಿವೃದ್ಧಿ ಮಾಡುತ್ತಾರಲ್ಲವೇ? ಇತ್ತೀಚಿನ ದಿನಗಳಲ್ಲಿ ಹೀಗೆ ನಾನಾ ರೂಪದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು ಎಂಬ ಧ್ವನಿಗೆ ಶಕ್ತಿ ದೊರೆಯುತ್ತಿದೆ. ಕೇವಲ ಮಹಿಳೆಯರು, ಬಾಲಕಿಯರಷ್ಟೇ ಅಲ್ಲ ಹುಡುಗರು ಮತ್ತು ಪುರುಷರಿಗೂ ಹಾಗೂ ಎಲ್ಲಾ ರಾಷ್ಟ್ರಗಳಲ್ಲೂ ಈ ಬದಲಾವಣೆ ಆಗಬೇಕಿದೆ. ಹಾಗೂ ಇದು ಪ್ರಾಯಪೂರ್ವ ಬಾಲಕಿಯರಿಂದಷ್ಟೇ ಸಾಧ್ಯ.

ಪ್ರಾಯಪೂರ್ವ ಬಾಲಕಿಯರ ಮೇಲೇಕೆ ಗಮನ ಹರಿಸಬೇಕು?

ನಾವಿಲ್ಲಿ ಹೆಚ್ಚಾಗಿ ಪ್ರಾಯಪೂರ್ವ ಬಾಲಕಿಯರ ಮೇಲೆ ಗಮನ ಹರಿಸಬೇಕು. ಯಾಕಂದ್ರೆ ಭಾರತದಲ್ಲಿ ಪ್ರತಿ 100 ಹುಡುಗಿಯರಲ್ಲಿ 12ನೇ ತರಗತಿ ಶಿಕ್ಷಣದವರೆಗೆ ತಲುಪಲು ಸಾಧ್ಯವಾಗೋದು ಕೇವಲ ಒಬ್ಬ ಬಾಲಕಿಗೆ ಮಾತ್ರ. ಹೆಣ್ಣುಮಕ್ಕಳು 18 ವರ್ಷವಾಗುವವರೆಗೂ ಮದುವೆ ಮಾಡುವಂತಿಲ್ಲ ಎಂಬ ಕಾನೂನಿದ್ದರೂ, ವಿಶ್ವದಲ್ಲೇ ಅತಿ ಹೆಚ್ಚು ಬಾಲವಧುಗಳು ಭಾರತದಲ್ಲಿದ್ದಾರೆ. 15 ರಿಂದ 19 ವರ್ಷಗಳ ನಡುವಿನ ಬಾಲಕಿಯರ ಸಾವಿಗೆ ಪ್ರಮುಖ ಕಾರಣಗಳಲ್ಲಿ ಹೆರಿಗೆ ಮತ್ತು ಪ್ರಸವವೇದನೆ ಕೂಡ ಒಂದು. ಹಾಗೇನಾದ್ರೂ ಭಾರತ ಶೇಕಡಾ 1 ಪ್ರತಿಶತಃದಷ್ಟು ಬಾಲಕಿಯರನ್ನು ಪ್ರೌಢಶಾಲೆ ಶಿಕ್ಷಣ ಪೂರೈಸುವಂತೆ ಮಾಡಿದ್ರೆ, ದೇಶದ ಜಿಡಿಪಿ 5.5 ಬಿಲಿಯನ್ ಡಾಲರ್‍ನಷ್ಟು ಏರಿಕೆಯಾಗುತ್ತಂತೆ. ಒಮ್ಮೆ ಅವರಿಗೆ ಕನಸು ಕಾಣುವ ಶಕ್ತಿ ಸಿಕ್ಕರೆ, ಹೆಚ್ಚೆಚ್ಚು ಹುಡುಗಿಯರು ಶಿಕ್ಷಕಿಯರಾಗುವ, ವಿಜ್ಞಾನಿಗಳಾಗುವ, ತಂತ್ರಜ್ಞರಾಗುವ ಕನಸು ಕಾಣಲು ಮತ್ತದನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗುತ್ತೆ.

ಪ್ರಾಯಪೂರ್ವ ಬಾಲಕಿಯರ ಶ್ರೇಯೋಭಿವೃದ್ಧಿಗೆ ಸರ್ಕಾರ, ಖಾಸಗೀ ಸಂಘ ಸಂಸ್ಥೆಗಳು ಮತ್ತು ನಾಗರೀಕ ಸಮಾಜವೂ ಶ್ರಮಿಸುತ್ತಿದೆ. ಪ್ರತಿ ವರ್ಷ ಅಕ್ಟೋಬರ್ 11ರಂದು ಅಂತಾರಾಷ್ಟ್ರೀಯ ಹೆಣ್ಣುಮಗು ದಿನಾಚರಣೆ ಆಚರಿಸಲಾಗುತ್ತಿದೆ. ಆ ಮೂಲಕ ಹೆಣ್ಣುಮಕ್ಕಳ ಸಾಮರ್ಥ್ಯ ಹಾಗೂ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.

ದಸರಾ ಎಂಬ ಲೋಕೋಪಯೋಗಿ ಸಂಸ್ಥೆಯೊಂದಿಗೆ ನಾನೀಗ ಕೆಲಸ ಮಾಡುತ್ತಿದ್ದೇನೆ. ಯುಎಸ್‍ಏಡ್, ಕಿಯಾವಾ ಟ್ರಸ್ಟ್, ಯುಕೆ ಫ್ಯಾಮಿಲಿ ಫೌಂಡೇಶನ್, ಪಿರಾಮಲ್ ಫೌಂಡೇಶನ್‍ಗಳೊಂದಿಗೆ ಸೇರಿ ದಸರಾ ಗರ್ಲ್ ಅಲಿಯನ್ಸ್ ಮೂಲಕ ಪೋಷಕರನ್ನು ಕಳೆದುಕೊಂಡ ಅಥವಾ ತಂದೆ-ತಾಯಿಯಿಂದ ದೂರವಾದ ಹೆಣ್ಣುಮಕ್ಕಳ ಪ್ರಗತಿಗಾಗಿ ಚಳವಳಿಯ ರೂಪ ಕೊಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಏಳ್ಗೆಗಾಗಿ, ಅವರ ಕುಟುಂಬದ ಅಭಿವೃದ್ಧಿಗಾಗಿ ಹಾಗೂ ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರಲು ಶ್ರಮಿಸುತ್ತಿರುವ ಸ್ವಯಂಸೇವಾ ಸಂಘಗಳಿಗೆ ಧನಸಹಾಯ ಮಾಡಲು ಅನಿವಾಸಿ ಭಾರತೀಯರನ್ನು ಸೆಳೆಯಲು ಇತ್ತೀಚೆಗಷ್ಟೇ ನಮ್ಮ ದಸರಾ ಫಿಲಾಂತ್ರೊಪಿ ಫೋರಮ್ ಮೂಲಕ ಲಂಡನ್ ಮತ್ತು ಸ್ಯಾನ್ ಫ್ರ್ಯಾನ್ಸಿಸ್ಕೋಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದೆವು.

ನನ್ನ ಜೀವನದ ಪಯಣ ನನಗೆ ಪ್ರಪಂಚವನ್ನು ಅನ್ವೇಷಿಸಲು ಮತ್ತು ಸಾಕಷ್ಟು ವಿಷಯಗಳನ್ನು ಕಲಿಯಲು ಸಹಾಯ ಮಾಡಿದೆ. ಹಾಗೇ ನಾನೂ ಈಗ ಒಂದು ಮುದ್ದಾದ ಗಂಡು ಮಗುವಿನ ತಾಯಿಯಾಗಿದ್ದೇನೆ. ನನಗೆ ತಿಳಿದ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ನೋಡಿ, ಅವರ ಕಥೆಗಳನ್ನು ಕೇಳಿ ನಾನೂ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ಅವರ ಆಸೆ ಆಕಾಂಕ್ಷೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಅಂತಹ ಬಾಲಕಿಯರು ಮತ್ತು ಮಹಿಳೆಯರ ಒಳಗಿರುವ ಶಕ್ತಿಯನ್ನು ಹೊರಬರುವಂತೆ ಮಾಡುವುದೇ ನನ್ನ ಕೆಲಸ ಮತ್ತು ಆಶಯವಾಗಿದೆ.

ಅನುವಾದಕರು: ವಿಶಾಂತ್​​​

Related Stories