ಚೆನ್ನೈ ಬಜಾರ್‍ನಲ್ಲಿ ನೀರೆಯರಿಗೆ ಸೀರೆ !

ಟೀಮ್​ ವೈ.ಎಸ್​​.

ಚೆನ್ನೈ ಬಜಾರ್‍ನಲ್ಲಿ ನೀರೆಯರಿಗೆ ಸೀರೆ !

Saturday October 17, 2015,

4 min Read

ಆನ್‍ಲೈನ್‍ನಲ್ಲಿ ಈಗ ಎಲ್ಲವೂ ಸಿಗುತ್ತೆ. ಕೂತಲ್ಲಿಂದಲೇ ಆರ್ಡರ್​​ ಮನೆ ಬಾಗಿಲಿಗೇ ಡೆಲಿವರಿ. ಅದೂ ಕೂಡ ಇನ್​ ಟೈಮ್​​ನಲ್ಲಿ. ಆದ್ರೆ, ಹತ್ತು-ಹದಿನೈದು ವರ್ಷಗಳ ಹಿಂದೆ ಈ ಕಾನ್ಸೆಪ್ಟೇ ಯಾರಿಗೂ ಗೊತ್ತಿರಲಿಲ್ಲ. ಅಂತಹ ಕಾಲಘಟ್ಟದಲ್ಲೇ ಹುಟ್ಟಿಕೊಂಡಿದ್ದು ಚೆನ್ನೈ ಬಜಾರ್ ! ಅದು 1998. ಚೈನ್ನೈಬಜಾರ್.ಕಾಂ ಹೆಸರಿನಲ್ಲಿ ಚೆನ್ನೈನ ಮಾರುಕಟ್ಟೆಯಲ್ಲಿ ದಿನಸಿ ಮತ್ತು ತರಕಾರಿಗಳನ್ನು ಮಾರಲಾರಂಭಿಸಿತ್ತು ಸಿ ಬಜಾರ್. ಸಾಗಾಟ ವೆಚ್ಚ ಮತ್ತು ತುಂಬಾ ವಿರಳ ಮೊಬೈಲ್ ಬಳಕೆಯಿಂದಾಗಿ ಲಾಭ ಬಂದರೆ ಅದೇ ಹೆಚ್ಚಾಗಿತ್ತು. 1999ರಲ್ಲಿ ಚೆನ್ನೈಬಜಾರ್‍ನ ಕಲ್ಪನೆಯನ್ನು ಬದಲಾಯಿಸಿ, ಗಿಫ್ಟ್ ಐಟಮ್ಸ್​​ಗಳನ್ನು ಮಾರಾಟ ಮಾಡುವ ಆನ್‍ಲೈನ್ ಸ್ಟೋರ್ ಆಗಿ ಬದಲಾಯಿಸಲಾಯಿತು.

ಸಿ ಬಜಾರ್ 2000ನೇ ಇಸವಿಯಲ್ಲಿ ಸೀರೆಗಳನ್ನು ಮಾರಾಟ ಮಾಡುವ ಮೊದಲ ಇ-ಕಾಮರ್ಸ್ ಸಂಸ್ಥೆಯಾಗಿ ಶುರುವಾಯಿತು. ಸೀರೆಗಳ ಮಾರಾಟ ಮಾಡುತ್ತಿರುವಾಗಲೇ ಜನ ಸಾಂಪ್ರದಾಯಿಕ ಉಡುಗೆಗಳನ್ನು ಇಷ್ಟಪಡುತ್ತಾರೆ. ಜಗತ್ತಿನಾದ್ಯಂತ ಪಸರಿಸಿರೋ ಭಾರತೀಯರು ತಮ್ಮ ತವರಿಗೆ ಉಡುಗೆಗಳನ್ನು ಬಯಸುತ್ತಾರೆ ಎನ್ನುವುದು ನಮ್ಮ ಗಮನಕ್ಕೆ ಬಂತು, ಎನ್ನುತ್ತಾರೆ ಸಿ ಬಜಾರ್‍ನ ಸಹ ಸಂಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ, ರಾಜೇಶ್ ನಹರ್.

image


2004ರಲ್ಲಿ ನಾವು ಸಂಪೂರ್ಣವಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಜಾಗತಿಕವಾಗಿ ಮಾರಲು ನಿರ್ಧರಿಸಿದೆವು. ಹೀಗಾಗಿ ಚೆನ್ನೈಬಜಾರ್.ಕಾಮ್ ಅನ್ನು ಸಿಬಜಾರ್. ಕಾಮ್ ಆಗಿ ಪರಿವರ್ತಿಸಿದೆವು. 2005ರಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಇಲ್ಲಿಂದಲೇ ಉಡುಗೆ ಉಡುಗೊರೆಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿದೆವು.

ಎಂಬಿಎ ಪದವಿ ಪಡೆಯುತ್ತಿರುವಾಗ ರಾಜೇಶ್ ನಹರ್, ರಿತೇಶ್ ಕಟಾರಿಯಾ ಮತ್ತು ಮತ್ತೊಬ್ಬ ಗೆಳೆಯರು ಒಬ್ಬರನ್ನೊಬ್ಬರು ಭೇಟಿ ಮಾಡಿದ್ದರು. ಆಗ, ಮೂವರಿಗೂ ಅಂತರ್ಜಾಲದಲ್ಲಿ ಸಮಾನ ಆಸಕ್ತಿ ಇರುವುದು ಕಂಡು ಬಂತು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಖರೀದಿ ಆಸಕ್ತಿಗಳ ಬಗ್ಗೆಯೂ ಮಾಹಿತಿ ಇತ್ತು. ಚೆನ್ನೈನಿಂದ ವಿದೇಶಕ್ಕೆ ಹೋಗಿರುವ ಜನರು, ಆನ್‍ಲೈನ್ ಮೂಲಕ ತಮ್ಮ ತವರಿನ ವಸ್ತುಗಳನ್ನು ಖರೀದಿಸಬಹುದು ಎನ್ನುವ ಊಹೆ ನಮ್ಮದಾಗಿತ್ತು.

2001ರ ಅಂತ್ಯದ ವೇಳೆಗೆ ರಾಜೇಶ್ ಬ್ರಿಟನ್‍ಗೆ ತೆರಳಿ ಅಲ್ಲಿ ಅಧ್ಯಯನ ನಡೆಸಿದರು. ಅಲ್ಲಿರುವ ಭಾರತೀಯರನ್ನು ಸಂಪರ್ಕಿಸಿ ಅವರ ಖರೀದಿ ಆಸಕ್ತಿಗಳು, ಆನ್‍ಲೈನ್ ಖರೀದಿ ವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಬಳಿಕ ದಕ್ಷಿಣ ಏಷ್ಯಾದ ಶಾಪ್‍ಗಳಲ್ಲಿ ತಮ್ಮ ಕ್ಯಾಟಲಾಗ್‍ಗಳನ್ನು ಪ್ರದರ್ಶಿಸುವಂತೆ ಒಪ್ಪಂದ ಮಾಡಿಕೊಂಡರು.

ವಹಿವಾಟಿನ ಅಭಿವೃದ್ಧಿ

ಸುಮಾರು 12 ಲಕ್ಷ ಮೂಲ ಬಂಡವಾಳದೊಂದಿಗೆ ಕಂಪನಿಯನ್ನು ಆರಂಭಿಸಲಾಯಿತು. 10 ವರ್ಷಗಳ ಸುದೀರ್ಘ ಅನುಭವದೊಂದಿಗೆ ಈಗ ಸಿಬಜಾರ್ ಏನಿಲ್ಲವೆಂದರೂ 25,000ಕ್ಕೂ ಹೆಚ್ಚು ಶೈಲಿಯ ಸಾಂಪ್ರದಾಯಿಕ ಉಡುಗೆಗಳನ್ನು ಮಾರಾಟ ಮಾಡುತ್ತಿದೆ. ಜಗತ್ತಿನ ಯಾವುದೇ ಮೂಲೆಗೂ ಚೆನ್ನೈನಿಂದ ಸರಬರಾಜು ಮಾಡಲಾಗುತ್ತದೆ.

ಆರಂಭದಲ್ಲಿ ಕೇವಲ 10 ಮಂದಿಯಷ್ಟೇ ಸಂಸ್ಥೆಯಲ್ಲಿದ್ದರು. ಈಗ 350ಕ್ಕೂ ಹೆಚ್ಚು ಫ್ಯಾಷನ್ ಡಿಸೈನರ್‍ಗಳು, ಡ್ರೆಸ್‍ಮೇಕರ್‍ಗಳು, ಪ್ರೋಗ್ರಾಮರ್‍ಗಳು, ಡಿಸೈನರ್‍ಗಳು, ಗ್ರಾಹಕ ಸೇವಾ ಅಧಿಕಾರಿಗಳು ಇದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಸಂಸ್ಥೆ ಉಡುಪುಗಳಿಂದಾಗಿಯೇ ಖ್ಯಾತಿ ಪಡೆದಿದೆ. 188 ರಾಷ್ಟ್ರಗಳಲ್ಲಿ ಸುಮಾರು 1 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ. ನಮ್ಮ ಬ್ರಾಂಡ್‍ಅನ್ನು ಮತ್ತಷ್ಟು ಶಕ್ತಿಶಾಲಿಯನ್ನಾಗಿಸಿ, ಎಲ್ಲಾ ರೀತಿಯ ಸಾಂಪ್ರದಾಯಿಕ ಉಡುಪುಗಳಿಗೆ ಒಂದೇ ಮಳಿಗೆಯಾಗಿ ಪರಿವರ್ತಿಸಬೇಕು. ಜಗತ್ತಿನಲ್ಲಿ ಭಾರತೀಯ ಫ್ಯಾಷನ್‍ಅನ್ನು ಪ್ರತಿನಿಧಿಸಬೇಕು ಎನ್ನುವುದು ನಮ್ಮ ಉದ್ದೇಶ ಎನ್ನುತ್ತಾರೆ ರಾಜೇಶ್.

ಕಳೆದ 5 ವರ್ಷಗಳಲ್ಲಿ ಸಿಬಜಾರ್ 60% ಬೆಳವಣಿಗೆ ಸಾಧಿಸಿದೆ. ಸಂಸ್ಥೆಯ ಸರಾಸರಿ ಆರ್ಡರ್ 13,000 ರೂಪಾಯಿಗಳಾಗಿವೆ. ದೇಶದಾದ್ಯಂತ ಸುಮಾರು 450 ಮಾರಾಟಗಾರರ ಬಲಿಷ್ಟ ಜಾಲವನ್ನು ಸೃಷ್ಟಿಸಿದ್ದೇವೆ. ಇದರಲ್ಲಿ ಟಾಪ್ ಡಿಸೈನರ್‍ಗಳು, ಬ್ರಾಂಡ್‍ಗಳು, ಚಿಲ್ಲರೆ ಮಾರಾಟಗಾರರು ಮತ್ತು ಗ್ರಾಮೀಣ ಕರಕುಶಲಕರ್ಮಿಗಳು ಸೇರಿದ್ದಾರೆ.

ನಮಗೆ ಬಾಹ್ಯ ಬಂಡವಾಳ ಪಡೆಯುವ ಯಾವುದೇ ಆಯ್ಕೆಗಳಿರಲಿಲ್ಲ. ಹೀಗಾಗಿ ನಾವು ಪ್ರತಿಸಲವೂ ಲಾಭ ಪಡೆಯುವುದಕ್ಕೆ ಮತ್ತು ಉದ್ಯಮವನ್ನು ಬೆಳೆಸುವುದರತ್ತ ಗಮನ ಹರಿಸುತ್ತಿದ್ದೆವು. 2005ರ ವೇಳೆಗೆ ನಾವು ಶೇಕಡಾ 5ರಷ್ಟು ಲಾಭ ಪಡೆಯುವಲ್ಲಿ ಸಫಲರಾಗಿದ್ದೆವು.

ಸಿ ಬಜಾರ್ ಭಿನ್ನ ಹೇಗೆ?

ನಮ್ಮಲ್ಲೇ ಇರುವ ಡಿಸೈನರ್‍ಗಳು ತಯಾರಿಸುವ ಎಕ್ಸ್‍ಕ್ಲೂಸಿವ್ ಡಿಸೈನ್‍ಗಳು ನಮ್ಮ ಟ್ರಂಪ್ ಕಾರ್ಡ್. ಕೋಲ್ಕತ್ತಾದಲ್ಲಿ ಈ ಡಿಸೈನ್‍ಗಳಿಗೆ ತಜ್ಞ ಕರಕುಶಲಕರ್ಮಿಗಳಿಂದ ಎಂಬ್ರಾಯಿಡರಿ ಮಾಡಿಸುತ್ತೇವೆ. ಗ್ರಾಹಕರ ಆಯ್ಕೆಗೆ ತಕ್ಕಂತೆ ನಾವು ಡಿಸೈನ್ ಮಾಡುತ್ತೇವೆ. ಪ್ರತಿದಿನ ಕನಿಷ್ಟ 3000 ಹೊಸ ಡಿಸೈನ್‍ಗಳನ್ನು ಸೇರಿಸುತ್ತಿದ್ದೇವೆ ಎನ್ನುತ್ತಾರೆ ರಾಜೇಶ್.

ನಾವು ಉತ್ಪಾದಕರಿಂದ ನೇರವಾಗಿ ಖರೀದಿಸುವುದರಿಂದ ಗ್ರಾಹಕರಿಗೆ 10-30 ಶೇಕಡಾ ಉಳಿತಾಯವಾಗುತ್ತಿದೆ ಎನ್ನುತ್ತಾರೆ ರಾಜೇಶ್.

2007ರಲ್ಲಿ ಭಾರತೀಯ ವಿವಾಹ ಉಡುಪುಗಳನ್ನು ಮಾರಾಟ ಮಾಡುವ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಹೋಂಇಂಡಿಯಾ. ಕಾಮ್ ಅನ್ನು ಸಿಬಜಾರ್ ಖರೀದಿಸಿತು. ಇದರಿಂದಾಗಿ ಹೈ-ಎಂಡ್ ವಧುವರರ ಉಡುಗೆಗಳು ಸೇರಿದಂತೆ ವೈವಿಧ್ಯಮಯ ವಿನ್ಯಾಸಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಯಿತು. ಅಷ್ಟೇ ಅಲ್ಲ ಈ ಸಂಸ್ಥೆ ತನ್ನದೇ ಆದ ಫ್ಯಾಷನ್ ಫ್ಯಾಕ್ಟರಿಯೊಂದನ್ನೂ ಸ್ಥಾಪಿಸಿತು.

ಮುಂದಿನ ಕೆಲ ವರ್ಷಗಳವರೆಗೆ ಪಾಶ್ಚಾತ್ಯ ಮಾರುಕಟ್ಟೆಯ ಮೇಲೆಯೇ ಗಮನ ಕೇಂದ್ರೀಕರಿಸಲು ಸಂಸ್ಥೆ ತೀರ್ಮಾನಿಸಿದೆ. ಭಾರತದ ಶ್ರೀಮಂತ ವಸ್ತ್ರಪರಂಪರೆಯನ್ನು ಜಗತ್ತಿಗೆ ಪರಿಚಯಿಸಲು ಮತ್ತು ಭಾರತೀಯ ಧಿರಿಸಿಗೆ ಜಾಗತಿಕ ಬ್ರಾಂಡ್ ಇಮೇಜ್ ಸೃಷ್ಟಿಸಲು ಪ್ರಯತ್ನಿಸುತ್ತಿದೆ.

ರಿತು ಕುಮಾರ್ ಸೇರಿದಂತೆ ಗ್ರಾಮೀಣ ಕರಕುಶಲ ಕರ್ಮಿಗಳ ಜೊತೆ ಕೆಲಸ ಮಾಡುತ್ತಾ ಪಾರಂಪರಿಕ ವಸ್ತ್ರವಿನ್ಯಾಸಗಳಿಗೆ ಪುನರುಜ್ಜೀವನ ನೀಡುತ್ತಿರುವ ವಿವಿಧ ವಿನ್ಯಾಸಕಾರರ ಜೊತೆ ಸಹಭಾಗಿತ್ವ ಹೊಂದು ಚಿಂತನೆಯಲ್ಲಿದೆ ಸಿಬಜಾರ್. ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಘೋಷಣೆಯು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾರತೀಯ ಉಡುಪಿಗಳ ಬಗ್ಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ವಿದೇಶಗಳಲ್ಲಿ ಭಾರತೀಯ ಉಡುಗೆಗಳನ್ನು ಮಾರುವ ಯಾವುದೇ ಶಾಪ್‍ಗಳಿಲ್ಲ. ಹೀಗಾಗಿ ಭಾರತೀಯ ಸಂದರ್ಭಗಳಿಗೆ, ಹಬ್ಬಹರಿದಿನಗಳಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರು ತಮ್ಮ ಸಾಂಪ್ರದಾಯಿಕ ಧಿರಿಸುಗಳನ್ನು ಖರೀದಿಸಿಲು ಸಿಬಜಾರ್ ಅನ್ನೇ ನೆಚ್ಚಿಕೊಂಡಿದ್ದಾರೆ.

ಭಾರತೀಯ ಸಾಂಪ್ರದಾಯಿಕ ಧಿರಿಸುಗಳನ್ನು ವಿದೇಶಗಳಲ್ಲಿ ಮಾರಾಟ ಮಾಡುವುದು ಆರ್ಥಿಕವಾಗಿಯೂ ಉತ್ತೇಜನಕಾರಿ. ವಿದೇಶಗಳಲ್ಲಿ ಇದಕ್ಕೆ ಭಾರೀ ಡಿಮ್ಯಾಂಡ್ ಇದೆ. ಇದು ಜಾಗತಿಕ ಮಟ್ಟದಲ್ಲಿ ಭಾರತೀಯ ಟೆಕ್ಸ್​​​ಟೈಲ್ಸ್​​ಗೆ ಬ್ರಾಂಡ್ ಸೃಷ್ಟಿಸಲಿದೆ ಎನ್ನುತ್ತಾರೆ ರಾಜೇಶ್.

2014ರ ನವೆಂಬರ್‍ನಲ್ಲಿ ಫೋರಮ್ ಸಿನಿರ್ಜಿಸ್‍ನಿಂದ ಸಂಸ್ಥೆ 50 ಕೋಟಿ ರೂಪಾಯಿ ಖಾಸಗಿ ಹೂಡಿಕೆಯನ್ನು ಪಡೆದಿದೆ. ಇನ್‍ವೆಂಟಸ್ ಕ್ಯಾಪಿಟಲ್ ಮತ್ತು ಓಜಾಸ್ ವೆಂಚರ್ ಸೇರಿದಂತೆ ಸಿಬಜಾರ್‍ನಲ್ಲಿ ಈವರೆಗೆ ಸುಮಾರು 150 ಕೋಟಿ ರೂಪಾಯಿ ಬಾಹ್ಯ ಬಂಡವಾಳ ಹೂಡಿಕೆಯಾಗಿದೆ.

ಮೇಕ್ ಇನ್ ಇಂಡಿಯಾ ಪ್ರಚಾರಾಂದೋಲನದ ಪರಿಣಾಮ ಸಂಸ್ಥೆಗೆ ವಿದೇಶದಲ್ಲೇ ಹೆಚ್ಚಿನ ವಹಿವಾಟು ಇದೆ. 90% ವಹಿವಾಟು ಸಾಗರದಾಚೆ ನಡೆಯುತ್ತಿರುವುದು ವಿಶೇಷ. ಭಾರತದ ವಿಚಾರಕ್ಕೆ ಬಂದರೆ, ಬಾಲಿವುಡ್ ಶೈಲಿಯ ಸಾಂಪ್ರದಾಯಿಕ ಧಿರಿಸುಗಳಿಗೆ ಬೇಡಿಕೆ ಇದೆ. ಬಾಲಿವುಡ್ ಸಿನಿಮಾ, ಧಾರವಾಹಿಗಳಲ್ಲಿ ನಟ-ನಟಿಯರು ಧರಿಸುವ ಸಾಂಪ್ರದಾಯಿಕ ಉಡುಗೆಗಳನ್ನು ಜನ ಧರಿಸಲು ಬಯಸುತ್ತಾರೆ.

ಲೆಹಂಗಾ, ಅನಾರ್ಕಲಿ ಉಡುಪುಗಳು ಮಾರಾಟ ಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆದಿವೆ. ಕಾಸ್ಮೋಪಾಲಿಟನ್ ಶೈಲಿಯ ಉಡುಪುಗಳಿಗೆ ಹೆಚ್ಚು ಬೇಡಿಕೆ ಇದೆ. ದೀಪಾವಳಿ ಮತ್ತು ಈದ್ ಅತಿ ಹೆಚ್ಚು ವ್ಯವಹಾರ ತರುವ ಸೀಸನ್ ಅಗಿದೆ ಎನ್ನುತ್ತಾರೆ ರಾಜೇಶ್.

image


ಮೌಖಿಕ ಪ್ರಚಾರ, ಡಿಜಿಟಲ್ ಕ್ಯಾಂಪೇನ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಫ್ಯಾಷನ್ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಿರುವುದರಿಂದ, ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತಿದೆ.

ಅಂತಾರಾಷ್ಟ್ರೀಯ ಸಾಂಪ್ರದಾಯಿಕ ಧಿರಿಸುಗಳ ಮಾರುಕಟ್ಟೆ ಸುಮಾರು 15,000 ಕೋಟಿ ಮೌಲ್ಯ ಹೊಂದಿದೆ. ಸಿಬಜಾರ್ ಇದರಲ್ಲಿ ಬಹುಪಾಲು ತನ್ನದಾಗಿಸಿಕೊಂಡಿದೆ.

ಸುಮಾರು 25 ದಶಲಕ್ಷ ಭಾರತೀಯರು ಸಾಗರದಾಚೆ ನೆಲೆಸಿದ್ದಾರೆ. ವಾರ್ಷಿಕ ಸರಾಸರಿ 40,000 ದಿಂದ 50,000 ಅಮೆರಿಕನ್ ಡಾಲರ್ ಸಂಪಾದಿಸುತ್ತಿದ್ದಾರೆ. ಮಾರಿಷಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ ಮತ್ತು ಈಶಾನ್ಯ ಏಷ್ಯಾ ರಾಷ್ಟ್ರಗಳಲ್ಲೂ ಉದ್ಯಮ ಆರಂಭಿಸಲು ಚಿಂತನೆ ನಡೆಸಿದ್ದೇವೆ ಎನ್ನುತ್ತಾರೆ ರಾಜೇಶ್.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 100 ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ, ಸಿಬಜಾರ್. ಪ್ರತಿವರ್ಷ ಸಿಬಜಾರ್ ಶೇಕಡಾ 100ರಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಮುಂದಿನ 5 ವರ್ಷಗಳಲ್ಲಿ 200-300 ಪ್ರತಿಶತ ಅಭಿವೃದ್ಧಿ ಸಾಧಿಸುವ ಗುರಿ ಹಾಕಿಕೊಂಡಿದೆ.

ಯುವರ್ ಸ್ಟೋರಿ ಜೊತೆ ಮಾತನಾಡುತ್ತಲೇ, ಹೊಸ ಉದ್ದಿಮೆದಾರರಿಗೆ ರಾಜೇಶ್ ಅವರು ಅಪರೂಪದ ಸಂದೇಶ, ಸಲಹೆಯನ್ನೂ ನೀಡುತ್ತಾರೆ.. “ನೀವು ಉದ್ಯಮ ಸ್ಥಾಪಿಸುವ ಕಾರಣವನ್ನು ಸರಿಯಾಗಿ ತಿಳಿದುಕೊಳ್ಳಿ. ರಿಸ್ಕ್ ತೆಗೆದುಕೊಳ್ಳಲು ರೆಡಿಯಾಗಿರಿ, ನಿಮ್ಮ ಸಹಸಂಸ್ಥಾಪಕರನ್ನು ಸರಿಯಾಗಿ ಆಯ್ಕೆ ಮಾಡಿ. ಉದ್ದೇಶಗಳ ಮೇಲೆ ಗಮನಹರಿಸಿ, ಅಡೆತಡೆಗಳನ್ನು ಮರೆತುಬಿಡಿ. ನಿಮ್ಮ 90% ಸಮಯವನ್ನು ಇಂದಿನ ಮತ್ತು ನಾಳೆ ಬರುವ ಅವಕಾಶಗಳ ಮೇಲೆ ವಿನಿಯೋಗಿಸಿ. ನಿನ್ನೆಯ ಸಮಸ್ಯೆಗಳ ಬಗ್ಗೆ ಚಿಂತಿಸಬೇಡಿ.”