ಇಕ್ಸಿಗೋ ಜೊತೆ ಕೈಜೋಡಿಸಿದ ಮೈಕ್ರೋಮ್ಯಾಕ್ಸ್

ಟೀಮ್​​ ವೈ.ಎಸ್​​. ಕನ್ನಡ

0

ಮೊಬೈಲ್ ಫೋನ್‍ಗಳನ್ನು ಉತ್ಪಾದಿಸುವ ಮೈಕ್ರೋಮ್ಯಾಕ್ಸ್ ಕಂಪನಿ ಪ್ರವಾಸ ತಾಣಗಳ ಕುರಿತ ವೆಬ್‍ಸೈಟ್ ಇಕ್ಸಿಗೋ (ixigo)ನಲ್ಲಿ ಹೂಡಿಕೆ ಮಾಡಿದೆ. ಇಕ್ಸಿಗೋ, ಪ್ರವಾಸಗಳ ಕುರಿತ ನೈಜ ಸಮಯದ ಮಾಹಿತಿ, ಖರ್ಚು- ವೆಚ್ಚ, ವಿಮಾನ, ರೈಲು, ಬಸ್, ಕ್ಯಾಬ್ ಮತ್ತು ಹೋಟೆಲ್‍ಗಳ ಲಭ್ಯತೆ, ಪ್ಯಾಕೇಜ್ ಟೂರ್ ಮತ್ತು ಪ್ರವಾಸೀತಾಣಗಳ ಕುರಿತು ಜನರಿಗೆ ಮಾಹಿತಿ ನೀಡುತ್ತದೆ, ಮತ್ತು ಬುಕಿಂಗ್ ಸೇವೆಯನ್ನೂ ಒದಗಿಸುತ್ತದೆ.

ಗುರ್‍ಗಾವ್ ಮೂಲದ ಇಕ್ಸಿಗೋ ಮೈಕ್ರೋಮ್ಯಾಕ್ಸ್​​​ನಿಂದ ಹರಿದು ಬರಲಿರುವ ಬಂಡವಾಳವನ್ನು ತನ್ನ ಉತ್ಪನ್ನದ ಅಭಿವೃದ್ಧಿಗೆ ಹಾಗೂ ತಂತ್ರಜ್ಞಾನಗಳನ್ನು ವಿಸ್ತರಿಸಿಕೊಳ್ಳಲು ಬಳಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಈ ಮೂಲಕ 25 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಪ್ರಮಾಣದ ಸೇವೆ ಒದಗಿಸುವ ಟ್ರಾವಲ್ ಏಜೆನ್ಸಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ಲ್ಯಾನ್ ಹಾಕಿಕೊಂಡಿದೆ. ಹೀಗೆ ಮೊಬೈಲ್ ಮೂಲಕವೇ ಪ್ರವಾಸಪ್ರಿಯರಿಗೆ ಅತ್ಯುತ್ತಮ ಸೇವೆ ಒದಗಿಸುವ ಅತ್ಯಂತ ವಿಸ್ತೃತ ವೇದಿಕೆ ಎನಿಸಿಕೊಳ್ಳುವ ಉದ್ದೇಶ ಇಕ್ಸಿಗೋ ಕಂಪನಿಯದು.

ಹೀಗೆ ಇಕ್ಸಿಗೋ ಕಂಪನಿಯಲ್ಲಿ ಬಂಡವಾಳ ಹೂಡುವ ಮೂಲಕ ಮೈಕ್ರೋಮ್ಯಾಕ್ಸ್ ಇನ್ನೂ ಹೆಚ್ಚಿನ ರೀತಿಯಲ್ಲಿ ಮೊಬೈಲ್ ಅಪ್ಲಿಕೇಶನ್ ಸೇವೆ ಒದಗಿಸುವ ಕಂಪನಿಳೊಂದಿಗೆ ಕೈಜೋಡಿಸುತ್ತಿದೆ. ಕೈಗೆಟುಕುವ ಬೆಲೆಯಲ್ಲಿ, ವಿನೂತನ ಉತ್ಪನ್ನಗಳ ಮೂಲಕ ಸೇವೆ ಒದಗಿಸುತ್ತಿದೆ. ಈ ಹಿಂದೆ ಗುರ್‍ಗಾವ್ ಮೂಲದ ಈ ಕಂಪನಿ ಹೆಲ್ತಿಫೈಮಿ (HealthifyMe) ಎಂಬ ಮೊಬೈಲ್ ಅಪ್ಲಿಕೇಶನ್‍ಗೂ ಬಂಡವಾಳ ಹೂಡಿತ್ತು.

ಈ ಬಂಡವಾಳ ಹೂಡಿಕೆ ಕುರಿತು ಮಾತನಾಡಿರುವ ಮೈಕ್ರೋಮ್ಯಾಕ್ಸ್ ಇನ್ಫಾರ್ಮೆಟಿಕ್ಸ್‍ನ ಸಹ-ಸಂಸ್ಥಾಪಕ ರಾಹುಲ್ ಶರ್ಮಾ, ‘ಮೊಬೈಲ್‍ನಂತಹ ಸಣ್ಣ ಸಾಧನಗಳ ಮೂಲಕ ವಿನೂತನ ಬಗೆಯ ಸೇವೆಗಳನ್ನು ಸರಳವಾಗಿ ನಮ್ಮ ಗ್ರಾಹಕರಿಗೆ ತಲುಪಿಸುವುದೇ ನಮ್ಮ ಉದ್ದೇಶ. ಈ ನಿಟ್ಟಿನಲ್ಲಿಯೇ ಇಕ್ಸಿಗೋ ಜೊತೆ ಕೈ ಜೋಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಕೆಲಸ ಮಾಡಿ, ಬೇಡಿಕೆಗೆ ತಕ್ಕಂತೆ ಕೇವಲ ಒಂದೇ ಬಟನ್ ಮೂಲಕ ಮೈಕ್ರೋಮ್ಯಾಕ್ಸ್ ಗ್ರಾಹಕರಿಗೆ ಅತ್ಯುತ್ತಮ ಪ್ರವಾಸಗಳ ಅನುಭವ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮುಂದಿನ ಕೆಲ ತಿಂಗಳಲ್ಲಿ ಇದೇ ರೀತಿಯ ಹಲವು ಸಹಭಾಗಿತ್ವ ಹಾಗೂ ಪಾಲುದಾರಿಕೆಯ ಘೋಷಣೆಗಳನ್ನು ಮಾಡಲಿದ್ದೇವೆ. ಈ ಮೂಲಕ ಪ್ರವಾಸೋದ್ಯಮ ವಲಯಕ್ಕೂ ಪದಾರ್ಪಣೆ ಮಾಡಲಿದ್ದೇವೆ’ ಅಂತಾರೆ.

ಕಳೆದ ತಿಂಗಳಷ್ಟೇ ಮೈಕ್ರೋಮ್ಯಾಕ್ಸ್ ಮುಂದಿನ ವರ್ಷ ಸುಮಾರು 20 ಸ್ಟಾರ್ಟಪ್‍ಗಳಲ್ಲಿ 5 ಲಕ್ಷ ಡಾಲರ್‍ನಿಂದ 2 ಕೋಟಿ ಡಾಲರ್‍ವರೆಗೂ ಹೂಡಿಕೆ ಮಾಡುವ ಕುರಿತು ಘೋಷಿಸಿತ್ತು. ಈ ನಿಟ್ಟಿನಲ್ಲಿ ಈಗಾಗಲೇ ಮೈಕ್ರೋಮ್ಯಾಕ್ಸ್ ಕಂಪನಿ ಎಮ್ & ಎ ತಂಡವನ್ನೂ ರಚಿಸಿದೆ. ಈ ತಂಡದ ಸದಸ್ಯರು ಭಾರತ ಮಾತ್ರವಲ್ಲ ಅಮೆರಿಕಾದ ಸಿಲಿಕಾನ್ ವ್ಯಾಲಿ, ಯೂರೋಪ್, ಇಸ್ರೇಲ್ ಸೇರಿದಂತೆ ಹಲವೆಡೆಗಳಲ್ಲಿ ಪ್ರಮುಖ ತಂತ್ರಜ್ಞಾನ ಮಾರುಕಟ್ಟೆಗಳ ಸ್ಟಾರ್ಟಪ್‍ಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅತ್ಯುತ್ತಮ ಉತ್ಪನ್ನಗಳನ್ನು ಹೊರತರಲು ಪ್ರಯತ್ನಿಸಲಾಗುತ್ತಿದೆ.

ಇಕ್ಸಿಗೋ ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಅಲೋಕ್ ಬಾಜ್‍ಪೈ, ಮೈಕ್ರೋಮ್ಯಾಕ್ಸ್ ಜೊತೆಗಿನ ಪಾಲುದಾರಿಕೆ ತಮ್ಮ ಕಂಪನಿಯನ್ನು ಬಲಪಡಿಸಲಿದೆ ಎಂದೇ ನಂಬಿದ್ದಾರೆ. ಅಲ್ಲದೇ ಮಧ್ಯಮ ವರ್ಗದ ಗ್ರಾಹಕರಿಗೆ ಮೊಬೈಲ್ ಟ್ರಾವಲ್ ಸೇವೆಯಲ್ಲಿ ಇಕ್ಸಿಗೋ ಕಂಪನಿಯನ್ನು ಮೊದಲ ಸ್ಥಾನಕ್ಕೇರಿಸುವ ಆಶಯ ಹೊಂದಿದ್ದಾರೆ ಅಲೋಕ್. ಮುಂದಿನ 12 ತಿಂಗಳಲ್ಲಿ ಇಕ್ಸಿಗೋ ಮೊಬೈಲ್ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆ ಅವರದು.

‘ಸದ್ಯ ಪ್ರತಿ ತಿಂಗಳು 50 ಲಕ್ಷಕ್ಕೂ ಹೆಚ್ಚು ಜನ ನಮ್ಮ ವೆಬ್‍ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‍ಗೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ಪ್ರತಿದಿನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್ ಮೂಲಕವೇ 2000ಕ್ಕೂ ಹೆಚ್ಚು ಗ್ರಾಹಕರು ವಿಮಾನಯಾನ, ಹೋಟೆಲ್ ರೂಮ್, ರೈಲು, ಬಸ್ ಟಿಕೆಟ್‍ಗಳನ್ನು ಬುಕ್ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿ ತಿಂಗಳು ಶೇಕಡಾ 15- 20& ಪ್ರತಿಶತಃ ಪ್ರಗತಿ ಕಾಣುತ್ತಿದ್ದೇವೆ.’ ಅಂತ ಹೇಳ್ತಾರೆ ಅಲೋಕ್ ಬಾಜ್‍ಪೈ.

ಈ ತಿಂಗಳಷ್ಟೇ ಇಕ್ಸಿಗೋ ಕಂಪನಿಯ ಎಲ್ಲಾ ಮೊಬೈಲ್ ಅಪ್ಲಿಕೇಶನ್‍ಗಳು ಡೌನ್‍ಲೋಡ್ ಆಗಿರುವ ಸಂಖ್ಯೆ 50 ಲಕ್ಷ ಮುಟ್ಟಿದೆ. ‘ಕ್ಯಾಬ್ಸ್ ನಮ್ಮ ಇತ್ತೀಚಿನ ಮೊಬೈಲ್ ಅಪ್ಲಿಕೇಶನ್. ಆದ್ರೆ ಈಗಾಗಲೇ ನಾವು ಪ್ರತಿದಿನ 600ಕ್ಕೂ ಹೆಚ್ಚು ಕ್ಯಾಬ್ ಬುಕಿಂಗ್‍ಗಳನ್ನು ಪಡೆಯುತ್ತಿದ್ದೇವೆ. ಈ ಸಂಖ್ಯೆಯೂ ಪ್ರತಿ ತಿಂಗಳು ದ್ವಿಗುಣಗೊಳ್ಳುತ್ತಿದೆ’ ಅಂತಲೂ ಇಕ್ಸಿಗೋ ಬಿಡುಗಡೆ ಮಾಡಿರುವ ಮತ್ತೊಂದು ಮೊಬೈಲ್ ಅಪ್ಲಿಕೇಶನ್ ಕುರಿತು ಹೇಳ್ತಾರೆ ಅಲೋಕ್ ಬಾಜ್‍ಪೈ.

ಮೈಕ್ರೋಮ್ಯಾಕ್ಸ್​​​ನ ಸಹಕಾರದೊಂದಿಗೆ ಇಕ್ಸಿಗೋ 30 ಕೋಟಿಗೂ ಹೆಚ್ಚು ಸ್ಮಾರ್ಟ್‍ಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ತನ್ನ ಟ್ರಾವೆಲ್ ಸರ್ವೀಸ್‍ಅನ್ನು ವಿಸ್ತರಿಸುವ ಉದ್ದೇಶ ಹೊಂದಿದೆ. ‘ಈ ಸಹಭಾಗಿತ್ವದೊಂದಿಗೆ ನಮ್ಮ ಮೊಬೈಲ್ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆ ಇನ್ನೊಂದು ವರ್ಷದಲ್ಲಿ ಐದು ಪಟ್ಟು ಬೆಳೆಯುತ್ತದೆ. ಶೇಕಡಾ 80ರಷ್ಟು ಪ್ರತಿಶತಃ ಪ್ರವಾಸ ಮತ್ತು ಸಾರಿಗೆ ಸೇವೆ ಮತ್ತು ಶೇಕಡಾ 50ರಷ್ಟು ಪ್ರತಿಶತಃ ವ್ಯವಹಾರ ಕೇವಲ ಮೊಬೈಲ್‍ಗಳಿಂದಲೇ ನಮಗೆ ಬರುತ್ತಿರುವುದು ವಿಶೇಷ’. ಅಂತ ಮತ್ತಷ್ಟು ಮಾಹಿತಿ ನೀಡ್ತಾರೆ ಅಲೋಕ್ ಬಾಜ್‍ಪೈ.

ಲೇಖಕರು: ಜೈವರ್ಧನ್​​​
ಅನುವಾದಕರು: ವಿಶಾಂತ್​​​

Related Stories