ಅಡುಗೆ, ದಿನಸಿ ಪದಾರ್ಥಗಳಿಗೊಂದು ಆನ್​​ಲೈನ್ ಸೈಟ್..!

ಕೃತಿಕಾ

0

ಈಗ ಎಲ್ಲವೂ ಆನ್ ಲೈನ್ ಜಮಾನ. ಏನು ಬೇಕಿದ್ದರೂ ಆನ್​ಲೈನ್​ನಲ್ಲೇ ಬುಕ್ ಮಾಡಿ ಮನೆ ಬಾಗಿಲಿಗೆ ತಲುಪಿಸುವ ಸೇವೆಗಳು ಹಲವಾರಿದೆ. ಸಿನಿಮಾಗೆ ಟಿಕೆಟ್, ಬಸ್ ಟಿಕೆಟ್, ರೈಲ್ವೇ ಟಿಕೆಟ್‌, ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ ಎಲ್ಲವೂ ಆನ್ ಲೈನ್​ . ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಬಹುತೇಕ ಮಂದಿ ಆನ್ ಲೈನ್ ಮೊರೆ ಹೋಗುತ್ತಿದ್ದಾರೆ. ಆದ್ರೆ ಮನೆಗೆ ಬೇಕಾದ ಅಡುಗೆ ಪದಾರ್ಥಗಳು, ದಿನಸಿ, ಧಾನ್ಯಗಳು, ಹಣ್ಣು, ತರಕಾರಿಗಳು, ಚಿಕನ್, ಮಟನ್ ಸೇರಿ ಎಲ್ಲವನ್ನೂ ಮನೆ ಬಾಗಿಲಿಗೆ ತಲುಪಿಸುವ ಆನ್​ಲೈನ್ ಸೈಟ್ ಇಂದು ಜನಪ್ರಿಯತೆ ಪಡೆಯುತ್ತಿದೆ. ಅದೇ ಬಿಗ್ ಬ್ಯಾಸ್ಕೆಟ್ ಡಾಟ್ ಕಾಮ್ (http://www.bigbasket.com) ಮೊಬೈಲ್ ಅಪ್ಲಿಕೇಶನ್ ಕೂಡ ಇದೆ. ಇನ್ನು ಮುಂದೆ ದಿನಸಿಗಾಗಿ ಪ್ರಯಾಸದಿಂದ ಕಿರಾಣಿ ಅಂಗಡಿಗೆ ಹೋಗಬೇಕಿಲ್ಲ. ಅದೇ ರೀತಿ ನೀವು ವಾರಾಂತ್ಯದ ಸಮಯವನ್ನು ದಿನಸಿ ಖರೀದಿಸಲೂ ವ್ಯಯಿಸಬೇಕಿಲ್ಲ. ಈಗೇನಿದ್ದರೂ ಬೆರಳ ತುದಿಯಲ್ಲಿ ಬುಕ್ ಮಾಡಿದ್ರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ನಿಮಗೆ ಬೇಕಾದ ಅಡುಗೆ ಸಾಮಗ್ರಿಗಳು, ದಿನಸಿ ಪದಾರ್ಥಗಳು, ಹಣ್ಣು ಹಂಪಲುಗಳು ಬಂದು ಬೀಳುತ್ತವೆ.

ಆನ್​​ಲೈನ್​​ ಮೂಲಕ ಏನೇನೆಲ್ಲ ಬುಕ್ ಮಾಡಿದ್ರೂ ಮನೆ ಬಾಗಿಲಿಗೆ ಬರುತ್ತವೆ. ಆದ್ರೆ ದಿನಸಿ ವಸ್ತುಗಳು, ಹಣ್ಣು, ತರಕಾರಿ, ರುಚಿಕರವಾದ ಊಟ ಎಲ್ಲವೂ ಒಂದೇ ಕಡೆ ಸಿಗುತ್ತಿರಲಿಲ್ಲ. ಆ ಕೊರತೆಯನ್ನು ಬಿಗ್ ಬ್ಯಾಸ್ಕೆಟ್ ನೀಗಿಸಿದೆ. ಮನೆಗೆ ದಿನಸಿ ಸಾಮಗ್ರಿಗಳು ಕೂಡಾ ಈ ರೀತಿ ಮನೆಬಾಗಿಲಿಗೆ ಬಂದು ಬೀಳುವಂತೆ ಏಕೆ ಮಾಡಬಾರದು ಎನ್ನುವ ಆಲೋಚನೆ ಬಿಗ್ ಬ್ಯಾಸ್ಕೆಟ್ ಮೂಲಕ ಕಾರ್ಯರೂಪಕ್ಕೆ ಬಂದಿದೆ. ಮೊದಲಿಗೆ ಫ್ಯಾಬ್ ಮಾರ್ಟ್ ಸೂಪರ್ ಮಾರುಕಟ್ಟೆಗಳನ್ನು ನಡೆಸುತ್ತಿದ್ದ ಹರಿ ಮೆನನ್‌ ಅವರು ಅವುಗಳೆಲ್ಲವನ್ನೂ ಆದಿತ್ಯ ಬಿರ್ಲಾ ಗ್ರೂಪ್ ಗೆ ಮಾರಾಟ ಮಾಡಿ ಆನ್ ಲೈನ್ ಮೂಲಕ ದಿನಸಿ ವಸ್ತುಗಳು, ಅಡುಗೆ ಪದಾರ್ಥಗಳು, ಹಣ್ಣು, ತರಕಾರಿ ಮತ್ತು ರುಚಿಕರವಾದ ಊಟ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ಆನ್​​ಲೈನ್ ಮೂಲಕ ನೀಡುವ ಕೆಲಸಕ್ಕೆ ಕೈ ಹಾಕಿತು.

2011 ರಲ್ಲಿ ಬೆಂಗಳೂರಿನಲ್ಲಿ ಬಿಗ್‌ಬ್ಯಾಸ್ಕೆಟ್‌ ಎಂಬ ಆನ್‌ಲೈನ್‌ ದಿನಸಿ ಶಾಪಿಂಗ್‌ ಸೇವೆ ಆರಂಭವಾಯಿತು. 2012ರ ವೇಳೆ ಏಳು ನಗರಗಳಲ್ಲಿ ನಮ್ಮದೇ ಆದ ಗೋದಾಮುಗಳನ್ನು ಹೊಂದಿದ್ದೆವು. ನಮ್ಮದೇ ದಾಸ್ತಾನು ಹೊಂದಿದ್ದ ಕಾರಣ ದಿನಸಿ ವಸ್ತುಗಳಿಗಾಗಿ ಇತರ ಸೂಪರ್‌ಮಾರ್ಕೆಟ್‌ಗಳನ್ನು ಅವಲಂಬಿಸುವ ಅಗತ್ಯ ಇರಲಿಲ್ಲ’ ಎಂದು ಮೆನನ್‌ ತಮ್ಮ ಕಂಪೆನಿಯ ಬಗ್ಗೆ ವಿವರಿಸುತ್ತಾರೆ.

ಮಾಂಸ, ಕಾಫಿ, ಬ್ರೆಡ್‌, ಪಾನಿಪುರಿ ಅಲ್ಲದೆ, ಚೊಕ್ಕವಾಗಿ ಹೆಚ್ಚಿಟ್ಟ ಶುದ್ಧ ತರಕಾರಿ ಕೂಡ ಈ ಬ್ರ್ಯಾಂಡ್‌ನಡಿ ಲಭ್ಯ. ಕೇವಲ ಒಂದು ಗಂಟೆಯೊಳಗೆ ಗ್ರಾಹಕರು ಬುಕ್ ಮಾಡಿದ ವಸ್ತುಗಳನ್ನು ಬಿಗ್ ಬ್ಯಾಸ್ಕೆಟ್ ತಂಡ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತದೆ. ಸದ್ಯ ಈ ಸೇವೆ ಪ್ರಸಕ್ತ ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಲಭ್ಯವಿದೆ. ಆದ್ರೆ ಒಂದು ಗಂಟೆಯೊಳಗೆ ವಸ್ತುಗಳನ್ನು ಮನೆಗೆ ತಲುಪಿಸುವ ‘ಎಕ್ಸ್‌ಪ್ರೆಸ್‌ ಡೆಲಿವರಿ’ ಗುರ್​ಗಾಂವ್‌ ನಗರದಲ್ಲಿ ಮಾತ್ರ ಲಭ್ಯವಿದೆ. ಇನ್ನು ಕೆಲವೇ ದಿನಗಳಲ್ಲಿ ಈ ವ್ಯವಸ್ಥೆಯನ್ನು ಎಲ್ಲ ಎಂಟು ನಗರಗಳಿಗೂ ವಿಸ್ತರಿಸುವ ಯೋಜನೆ ಬಿಗ್ ಬ್ಯಾಸ್ಕೆಟ್ ಸಂಸ್ಥಾಪಕ ಹರಿ ಮೆನನ್ ಅವರಿಗಿದೆ.

ಸದ್ಯಕ್ಕೆ ಬಿಗ್ ಬ್ಯಾಸ್ಕೆಟ್ ಸೇವೆ ಬೆಂಗಳೂರು, ಮುಂಬೈ, ದೆಹಲಿ ಮತ್ತು ಚೆನ್ನೈ ಸೇರಿದಂತೆ ಎಂಟು ನಗರಗಳಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ. ಈ ವರ್ಷಾಂತ್ಯದ ವೇಳೆಗೆ 20 ನಗರಗಳಿಗೆ ಬಿಗ್ ಬ್ಯಾಸ್ಕೆಟ್ ಸೇವೆ ವಿಸ್ತರಣೆಯಾಗಲಿದೆ. ಎಂಟು ನಗರಗಳಲ್ಲಿ ಸುಮಾರು ಎಂಟು ಲಕ್ಷ ಗ್ರಾಹಕರಿದ್ದಾರೆ. ಪ್ರತಿ ದಿನ ನಮಗೆ 26 ಸಾವಿರ ಆರ್ಡರ್ ಗಳು ಬರುತ್ತವೆ ಅಂತಾರೆ ಹರಿ ಮೆನನ್.

ಬಿಗ್ ಬ್ಯಾಸ್ಕೆಟ್ ಜೊತೆ ಇನ್ನೂ ಅನೇಕ ಸೈಟ್ ಗಳು ದಿನಸೀ ವಸ್ತುಗಳನ್ನು ಮಾರಾಟ ಮಾಡುತ್ತವೆ. ದಿನಸೀ ವಸ್ತುಗಳ ಆನ್ ಲೈನ್ ಮಾರುಕಟ್ಟೆ ದೇಶದಲ್ಲಿ ಶೇ 25% ನಷ್ಟು ಬೆಳವಣಿಗೆಯಾಗುತ್ತದೆ. ಜನರೂ ದಿನಸೀ ವಸ್ತುಗಳನ್ನು ಆನ್ ಲೈನ್ ನಲ್ಲಿ ಖರೀದಿಸುವ ಪರಿಪಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Related Stories