ಕಾಲೇಜು ಬಿಟ್ಟ ಯುವಕ ಕೋಟ್ಯಾಧೀಶ...ಹ್ಯಾಕರ್ ಆಗಿದ್ದವ ಯಶಸ್ವಿ ಉದ್ಯಮಿ..!

ಟೀಮ್​​ ವೈ.ಎಸ್​​.

ಕಾಲೇಜು ಬಿಟ್ಟ ಯುವಕ ಕೋಟ್ಯಾಧೀಶ...ಹ್ಯಾಕರ್ ಆಗಿದ್ದವ ಯಶಸ್ವಿ ಉದ್ಯಮಿ..!

Sunday October 25, 2015,

3 min Read

ಕಾಲೇಜು ಬಿಟ್ಟು ಕೋಟಿ ಗಳಿಸಿದ ಸಾಹಸಿ ಯುವಕನ ಯಶೋಗಾಥೆ ಇದು. ಶಶಾಂಕ್ ಚೌರೇ ಇಂದೋರ್‍ನ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. 13 ವರ್ಷದ ಈ ಬಾಲಕ ಕಂಪ್ಯೂಟರ್ ಜೊತೆ ಪ್ರೀತಿಯಲ್ಲಿ ಬಿದ್ದಾಗಲೇ ಬದುಕು ಬದಲಾಗಿತ್ತು. ರಾತ್ರಿಯಿಡೀ ವಿಡಿಯೋ ಗೇಮ್ಸ್ ಆಡ್ತಿದ್ದ ಶಶಾಂಕ್, ಪರೀಕ್ಷೆಗಳನ್ನು ಕೂಡ ಮಿಸ್ ಮಾಡಿಕೊಳ್ತಿದ್ರು. ಕೋಡಿಂಗ್ ಅನ್ನೋದು ಕೊಕೆನ್‍ನಂತಾಗಿ ಬಿಟ್ಟಿತ್ತು. ಹ್ಯಾಕಿಂಗ್‍ನಲ್ಲೂ ಶಶಾಂಕ್ ಎಕ್ಸ್​​ಪರ್ಟ್ ಆಗಿದ್ರು. ಒಂದು ಇ-ಮೇಲ್ ಅಕೌಂಟ್ ಹ್ಯಾಕ್ ಮಾಡಿದ್ರೆ ಕ್ರಾಕ್‍ಪಾಲ್ ಡಾಟ್ ಕಾಮ್, ಶಶಾಂಕ್‍ಗೆ 50 ಡಾಲರ್ ಕೊಡ್ತಾ ಇತ್ತು.

ವೈರಸ್...ಲೆಕ್ಕ ಮತ್ತು ಇಂಟರ್‍ಪೋಲ್

ಎಂಜಿನಿಯರಿಂಗ್ ಮೊದಲ ವರ್ಷ ಓದ್ತಾ ಇದ್ದ ಶಶಾಂಕ್ ಹ್ಯಾಕಿಂಗ್ ಬ್ಯುಸಿನೆಸ್ ಅನ್ನು ಮುಂದುವರಿಸಿದ್ರು. ಕೇವಲ 18 ನಿಮಿಷಗಳಲ್ಲಿ 40ಕ್ಕೂ ಹೆಚ್ಚು ಸರ್ಕಾರಿ ವೆಬ್‍ಸೈಟ್‍ಗಳು ಹಾಗೂ 100ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪನಿಗಳ ವೆಬ್‍ಸೈಟ್​​ನ್ನ ಶಶಾಂಕ್ ಹ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲ ವೈರಸ್ ಪತ್ತೆ ಮಾಡೋದ್ರಲ್ಲೂ ಶಶಾಂಕ್ ಹಿಂದೆ ಬೀಳಲಿಲ್ಲ. ಸೈಬರ್ ಭದ್ರತಾ ಸಲಹೆಗಾರರಾಗಿ ಇಂದೋರ್ ಪೊಲೀಸರ ಜೊತೆಗೂ ಶಶಾಂಕ್ ಕೆಲಸ ಮಾಡಿದ್ದಾರೆ. ಐಆರ್‍ಸಿ ಚಾಟ್ ನೆಟ್‍ವರ್ಕ್‍ನ ಸದಸ್ಯರಾಗಿದ್ದ ಶಶಾಂಕ್, ಅದರ ವಿಶೇಷತೆಗಳನ್ನೂ ಬಣ್ಣಿಸ್ತಾರೆ. ಇಂಟರ್‍ಪೋಲ್, ಎಫ್‍ಬಿಐ ಕೂಡ ಅದರ ಭಾಗವಾಗಿರೋದು ವಿಶೇಷ. ಆದ್ರೆ ಈ ಕೆಲಸ ತುಂಬಾ ಅಪಾಯಕಾರಿ ಹಾಗೂ ಒಳ್ಳೆಯದಲ್ಲ ಅನ್ನೋದು ಶಶಾಂಕ್‍ಗೆ ಅರಿವಾಯ್ತು. ಅಷ್ಟೇ ಅಲ್ಲ ಕಾಲೇಜಿಗೆ ಹೋಗುವುದರಲ್ಲೂ ಶಶಾಂಕ್‍ಗೆ ಆಸಕ್ತಿ ಇರಲಿಲ್ಲ. ಎಂಜಿನಿಯರಿಂಗ್ ಎರಡನೇ ವರ್ಷ ಶಶಾಂಕ್ ಕಾಲೇಜು ಬಿಟ್ರು. ಪೋಷಕರು ಶಶಾಂಕ್ ನಿರ್ಧಾರಕ್ಕೆ ಅಡ್ಡಿ ಬರಲಿಲ್ಲ.

image


ಕಾಲೇಜು ಬಿಟ್ಟ ಯುವಕ ವೆಬ್ ಸೆಕ್ಯೂರಿಟಿ ಎಕ್ಸ್​​ಪರ್ಟ್..

ನಮಗೆಲ್ಲಾ ಗೊತ್ತೇ ಇದೆ.. ಸ್ಟೀವ್ ಜಾಬ್ಸ್ ಅವ್ರನ್ನ ರೀಡ್ ಕಾಲೇಜಿನಿಂದ ಹೊರಹಾಕಲಾಗಿತ್ತು, ಆಮೇಲೆ ಅವರು ಆ್ಯಪಲ್ ಕಂಪನಿಯನ್ನು ಕಟ್ಟಿ ಬೆಳೆಸಿದ್ರು. ಹಾರ್ವರ್ಡ್ ವಿದ್ಯಾರ್ಥಿಯಾಗಿದ್ದ ಬಿಲ್ ಗೇಟ್ಸ್ ಕೂಡ ಕಾಲೇಜು ಬಿಟ್ಟು ಮೈಕ್ರೋಸಾಫ್ಟ್ ಕಂಪನಿ ಸ್ಥಾಪಿಸಿದ್ರು. ಫೇಸ್‍ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍ಬರ್ಗ್ ಕೂಡ ಕಾಲೇಜು ಬಿಟ್ಟು ಫೇಸ್‍ಬುಕ್ ಆರಂಭಿಸಿದ್ದು ಈಗ ಇತಿಹಾಸ. ಆದ್ರೆ ಭಾರತದಲ್ಲಿ ಕಾಲೇಜು ಬಿಡೋದು ಅಂದ್ರೆ ಕನಸು ಕಾಣೋ ವಿಚಾರವಲ್ಲ. ಕಾಲೇಜು ಬಿಟ್ಮೇಲೆ ಮುಂದೇನು ಅನ್ನೋ ಯೋಚನೆ ಶಶಾಂಕ್‍ರನ್ನು ಕಾಡಲಾರಂಭಿಸಿತ್ತು. ಕಾರ್ಪೊರೇಟ್ ಕಂಪನಿಗೆ ವೆಬ್ ಸೆಕ್ಯೂರಿಟಿ ಕನ್ಸಲ್ಟಂಟ್ ಆಗಿ ಹೋಗಲು ಅವರು ನಿರ್ಧರಿಸಿದ್ರು. ಇಂದೋರ್‍ನ ಖ್ಯಾತ ಕಂಪನಿಯೊಂದ್ರಲ್ಲಿ ಅವರಿಗೆ ಸಿಕ್ಕಿದ್ದು ಹ್ಯಾಕಿಂಗ್ ಕೆಲಸ. ಒಂದೂವರೆ ವರ್ಷ ಅಲ್ಲಿ ಕೆಲಸ ಮಾಡಿದ ಶಶಾಂಕ್‍ಗೆ ಬೇರೊಂದು ಕಂಪನಿಯಿಂದ ಒಳ್ಳೆ ಆಫರ್ ಸಿಕ್ಕಿತ್ತು. ಹೊಸ ಉದ್ಯೋಗಕ್ಕೆ ಸೇರಿ 45 ದಿನಗಳಾದ್ರೂ ಸಂಬಳವನ್ನೇ ಕೊಟ್ಟಿರ್ಲಿಲ್ಲ. ಆ ಕೆಲಸವನ್ನೂ ಬಿಟ್ಟಾಗ ಶಶಾಂಕ್ ಜೇಬಿನಲ್ಲಿದ್ದಿದ್ದು ಬರೀ 5000 ರೂಪಾಯಿ.

2009ರ ಫೆಬ್ರವರಿ 23ರಂದು ಶಶಾಂಕ್ ಕೆಲಸ ಬಿಟ್ರು. ಕೈಯಲ್ಲಿ ಕಾಸಿಲ್ಲ, ಡಿಗ್ರಿ ಕೂಡ ಇಲ್ಲ. ಆನ್‍ಲೈನ್‍ನಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ ಅವರಿಗೆ ಡಾಟಾ ಎಂಟ್ರಿಯೊಂದು ಸಿಕ್ಕಿತ್ತು. ರಾತ್ರಿಯಿಡೀ ಕೆಲಸ ಮಾಡಿದ ಶಶಾಂಕ್ 18 ಡಾಲರ್ ಸಂಪಾದಿಸಿದ್ರು. ಎಂಜಿನಿಯರ್ ಓದಿದ್ದ ಇನ್ನಿಬ್ಬರು ಸ್ನೇಹಿತರು ಕೂಡ ಶಶಾಂಕ್‍ಗೆ ಜೊತೆಯಾದ್ರು. ಕೆಲವೇ ದಿನಗಳಲ್ಲಿ ಅವರಿಗೂ ಕೆಲಸ ಸಿಕ್ಕಿದ್ರಿಂದ ಶಶಾಂಕ್ ಮತ್ತೆ ಒಂಟಿಯಾದ್ರು. 2009ರ ಅಕ್ಟೋಬರ್‍ನಲ್ಲಿ ಸಣ್ಣದೊಂದು ಟೀಂ ಕಟ್ಟಿಕೊಂಡು ಶಶಾಂಕ್ ಇಂಡಿಯಾ ಇನ್ಫೋಟೆಕ್ ಎಂಬ ಸಂಸ್ಥೆಯನ್ನು ಆರಂಭಿಸ್ತಾರೆ. ಇ-ಕಾಮರ್ಸ್ ವೆಬ್‍ಸೈಟ್ ಮೂಲಕ ಉತ್ಪನ್ನಗಳನ್ನ ಮಾರಾಟ ಮಾಡುವ ಕೆಲಸ ಆರಂಭವಾಯ್ತು. ಕೆಲಸದಲ್ಲಿ ಶಶಾಂಕ್ ಅದೆಷ್ಟು ಮುಳುಗಿ ಹೋಗಿದ್ದರೆಂದ್ರೆ ವಾರಪೂರ್ತಿ ಕಚೇರಿಯಲ್ಲೇ ಉಳಿದುಕೊಳ್ತಿದ್ರು.

10,000 ಎಸ್‍ಇಓ ಪ್ರಾಜೆಕ್ಟ್ ಯಶಸ್ವಿ

ಜೇಬಿನಲ್ಲಿ ಕೇವಲ 5000 ರೂಪಾಯಿ ಇಟ್ಟುಕೊಂಡು ಕೆಲಸಕ್ಕಾಗಿ ಅರಸಿದ್ದ ಶಶಾಂಕ್ ಈಗ ಕೋಟ್ಯಾಧೀಶ. ವರ್ಷಕ್ಕೆ 5 ಕೋಟಿ ರೂಪಾಯಿ ವಹಿವಾಟು ಮಾಡ್ತಿದ್ದಾರೆ. ಪ್ರತಿ ತಿಂಗಳು 300 ಪ್ರಾಜೆಕ್ಟ್​​​ ಗಳನ್ನು ಮಗಿಸ್ತಿದ್ದಾರೆ. 2014ರ ಫೆಬ್ರವರಿ ವರೆಗೆ ಇಂಡಿಯಾ ಇನ್ಫೋಟೆಕ್ ಕಂಪನಿ 10,000 ಪ್ರಾಜೆಕ್ಟ್​​​ ಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಸುಮಾರು 400 ಕ್ಲೈಂಟ್‍ಗಳನ್ನು ಸಂಸ್ಥೆ ಹೊಂದಿದೆ. ವಿಶೇಷ ಅಂದ್ರೆ ಕಂಪನಿಯ 2/3ರಷ್ಟು ವಹಿವಾಟು ಅಮೆರಿಕದಿಂದಲೇ ಆಗ್ತಿದೆ. ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ರೂ ಶಶಾಂಕ್ ಎದುರು ಹತ್ತಾರು ಸವಾಲುಗಳಿವೆ. ಜನರನ್ನು ಅತ್ಯಂತ ಸುಲಭವಾಗಿ ನಂಬ್ತೀನಿ ಅದೇ ನನ್ನ ದೊಡ್ಡ ಸಮಸ್ಯೆ ಅಂತಾರೆ ಶಶಾಂಕ್. ಪರಿಣಿತ ತಂಡದೊಂದಿಗೆ ತಾವು ಕೆಲಸ ಮಾಡ್ತಾ ಇದ್ದು, ಅನರ್ಹರನ್ನ ಒಂದು ದಿನವೂ ಸಹಿಸೊಲ್ಲ ಅನ್ನೋದು ಅವರ ನೇರ ನುಡಿ. ಬೆನ್ನಿಗೆ ಚೂರಿ ಹಾಕಿದ 7 ಜನರನ್ನು ಶಶಾಂಕ್ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತು ಹಾಕಿದ್ರು. ಮೊದಲು ದಿನದ 18 ಗಂಟೆ ಶಶಾಂಕ್ ಕೆಲಸ ಮಾಡ್ತಿದ್ರು. ಈಗಲೂ 8-10 ಗಂಟೆಗಳನ್ನು ಕಚೇರಿಯಲ್ಲೇ ಕಳೆಯುತ್ತಾರೆ.

ಶಶಾಂಕ್ ಅವರ ಈ ಯಶಸ್ಸು ನೆರೆಹೊರೆಯವರ ಬಾಯಿಮುಚ್ಚಿಸಿದೆ. ಸೂಪರ್ ಬೈಕ್‍ಗಳು, ಹೈಫೈ ಕಾರಲ್ಲಿ ಬರೋ ಶಶಾಂಕ್ ಅವ್ರನ್ನ ನೋಡಿ ಅಕ್ಕಪಕ್ಕದವರೆಲ್ಲ ಅಚ್ಚರಿಯ ಕಡಲಲ್ಲಿ ಮುಳುಗಿ ಹೋಗಿದ್ದಾರೆ.