ಲೆದರ್ ಐಟಮ್ಸ್ ಬಳಕೆಗೊಂದು ಹೊಸ ಐಡಿಯಾ..!

ಟೀಮ್ ವೈ.ಎಸ್.

0

“ನನಗೆ ಆಗ 23 ವರ್ಷ. ಅಮ್ಮನಿಗೆ ಯಾವಾಗಲೂ ಬೈಯ್ಯುತ್ತಿದ್ದೆ. ನನ್ನ ಜೀವನವನ್ನು ಸಂಪೂರ್ಣ ಹಾಳುಮಾಡಿಬಿಟ್ಟೆ. ನಿನ್ನ ಕಠಿಣ ಶಿಸ್ತಿನ ಕ್ರಮಗಳು ಮತ್ತು ಪ್ರತಿಕ್ಷಣ ಗಮನಿಸೋ ಕಣ್ಣುಗಳಿಂದಾಗಿ, ನನ್ನ ಬೆಳವಣಿಗೆಯ ದಿನಗಳನ್ನೆಲ್ಲಾ ಕಷ್ಟ ಪಟ್ಟು ಓದುವುದರಲ್ಲೇ ಕಳೆದೆ. ನನ್ನ ಗೆಳತಿಯರೆಲ್ಲಾ, ತರಗತಿಗಳಿಗೆ ಚಕ್ಕರ್ ಹೊಡೆದು, ಪಾರ್ಟಿ ಮಾಡುತ್ತಾ, ಮೋಜು ಮಸ್ತಿಯಲ್ಲಿ ಕಳೆಯುತ್ತಿದ್ದರು. ನಾನು ಅದನ್ನೆಲ್ಲಾ ಕಳೆದುಕೊಂಡೆ ಎಂದು ರೇಗಾಡುತ್ತಿದ್ದೆ.” ಎನ್ನುತ್ತಾರೆ ದಿ ಲೆದರ್ ಲಾಂಡ್ರಿಯ ಸಂಸ್ಥಾಪಕರಾದ ಮಲ್ಲಿಕಾ ಶರ್ಮಾ.

ಈಗ ನಾನು ಬೆಳೆದಿದ್ದೇನೆ. ನನ್ನ ಆಗಿನ ಯೋಚನೆಗಳಿಗೆಲ್ಲಾ ತದ್ವಿರುದ್ಧ ದಿಕ್ಕಿನಲ್ಲಿ ಈಗ ಯೋಚಿಸತೊಡಗಿದ್ದೇನೆ. ಅವತ್ತು ಅಮ್ಮನ ಶಿಸ್ತು, ಒಳ್ಳೆಯ ವಿದ್ಯಾರ್ಥಿನಿ ಎನ್ನಿಸಿಕೊಂಡ ಹೆಮ್ಮೆ ಎಲ್ಲವೂ, ನನ್ನ ಕೆಲಸಗಳ ಮೇಲೆ ಪ್ರಭಾವ ಬೀರಿವೆ. ನಾನು ಇವತ್ತು ಈ ಮಟ್ಟದಲ್ಲಿರಲು ಅದೇ ಕಾರಣ. ನಾನು ಈಗಲೂ ವಿದ್ಯಾರ್ಥಿಯಂತೆ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಅಭ್ಯಾಸ ಮಾಡುತ್ತೇನೆ. ಬಾಕಿ ಇರುವ ಕೆಲಸಗಳನ್ನು ಮುಗಿಸುತ್ತೇನೆ. ನಾನು ಮುಗಿಸಬೇಕಾಗಿರುವ ಕೆಲಸಗಳನ್ನು ಪಟ್ಟಿ ಮಾಡಿಕೊಳ್ಳುತ್ತೇನೆ. ಆ ದಿನ ಮುಗಿಸಬೇಕಾದ ಕೆಲಸಗಳ ನಿರ್ದಿಷ್ಟ ಗುರಿ ಹಾಕಿಕೊಳ್ಳುತ್ತೇನೆ. ಸರಿಯಾದ ವೇಳಾಪಟ್ಟಿ ಹಾಕಿಕೊಳ್ಳುತ್ತೇನೆ. ಸಿನ್ಸಿಯರ್ ಆಗಿ, ಸಕಾಲಕ್ಕೆ ಎಲ್ಲಾ ಕೆಲಸಗಳನ್ನು ಮುಗಿಸುತ್ತೇನೆ, ಎನ್ನುತ್ತಾರೆ ಮಲ್ಲಿಕಾ.

ತಾನು ಅತ್ಯುತ್ತಮ ವಿದ್ಯಾರ್ಥಿಯಾಗಿದ್ದಕ್ಕೆ ಈಗ ಅವರಲ್ಲಿ ಬೇಸರವಿಲ್ಲ. ಅವರ ಪ್ರಯತ್ನಗಳೆಲ್ಲ ವ್ಯರ್ಥವಾಗಿಲ್ಲ ಎನ್ನುವ ಖುಷಿ ಅವರಲ್ಲಿದೆ. ತನ್ನೆಲ್ಲಾ ಯಶಸ್ಸಿಗೆ ಅಮ್ಮನೇ ಕಾರಣ ಎಂದು ಅಮ್ಮನ ಶಿಸ್ತಿಗೆ ಫುಲ್ ಮಾರ್ಕ್ಸ್ ಕೊಡ್ತಾರೆ ಮಲ್ಲಿಕಾ.

ಲೆದರ್ ಲಾಂಡ್ರಿ ಎಂದರೇನು?

ಚರ್ಮದ ವಸ್ತುಗಳನ್ನು ಶುಚಿಗೊಳಿಸುವುದು ಸುಲಭದ ಕೆಲಸವಲ್ಲ. ಯಾರೂ ಚರ್ಮದ ಉತ್ಪನ್ನಗಳನ್ನು ತೊಳೆಯಲು ಹೋಗುವುದಿಲ್ಲ. ಇದನ್ನೇ ಗಮನದಲ್ಲಿಟ್ಟುಕೊಂಡು ಮಲ್ಲಿಕಾ ಅವರು ವೃತ್ತಿಪರವಾಗಿ ಚರ್ಮದ ಉತ್ಪನ್ನಗಳನ್ನು ಶುಚಿಗೊಳಿಸಿಕೊಡುತ್ತಾರೆ. ಚರ್ಮದ ಧಿರಿಸು, ವಸ್ತುಗಳು ಮತ್ತು ಶೂಗಳನ್ನು ಕ್ಲೀನಿಂಗ್, ಕಲರಿಂಗ್, ರೀ-ಫಿನಿಶಿಂಗ್, ಡಿಯೋಡರೈಸಿಂಗ್ ಮತ್ತು ರಿಪೇರಿ ಮಾಡಿ ಕೊಡುತ್ತಾರೆ.

ಮನೆಯಲ್ಲೇ ಇತ್ತು ವ್ಯಾಪಾರದ ವಾತಾವರಣ

ಮಲ್ಲಿಕಾ ತಂದೆ ಸ್ವಯಂ ಉದ್ಯೋಗಿ. 11 ವರ್ಷಗಳ ಕಾಲ ಬೇರೆಬೇರೆ ಕಡೆ ಕೆಲಸ ಮಾಡಿದ ಬಳಿಕ ಕೊನೆಗೆ ತಮ್ಮದೇ ಆದ ಉದ್ಯಮ ಸ್ಥಾಪಿಸಿದ್ದರು. ಕಳೆದ 25 ವರ್ಷಗಳಿಂದ ಅವರ ಉದ್ಯಮ ಯಶಸ್ವಿಯಾಗಿ ನಡೆಯುತ್ತಿದೆ. ಮಲ್ಲಿಕಾ ಕೂಡಾ ಅಪ್ಪನಿಂದಲೇ ಉದ್ಯಮದ ಎಬಿಸಿಡಿ ಕಲಿತಿದ್ದರು. ಅಪ್ಪವ ವ್ಯವಹಾರ ನೈಪುಣ್ಯತೆಯೇ ಮಗಳಿಗೆ ಸ್ಫೂರ್ತಿಯಾಗಿತ್ತು. ತಾಯಿ ಕೂಡಾ ನಾಲ್ಕು ಮಕ್ಕಳ ಪಾಲನೆ-ಪೋಷಣೆ ನಡುವೆಯೇ ಗಂಡನಿಗೆ ಹೆಗಲಾಗಿ ದುಡಿದಿದ್ದಳು. ಪತಿ ಕಷ್ಟಕ್ಕೆ ಸಿಲುಕಿದಾಗಲೆಲ್ಲಾ, ತಾನೇ ಮುಂದೆ ನಿಂತು ಸಂಸಾರ ನಡೆಸಿದ್ದಳು. ಮಲ್ಲಿಕಾ ಅದನ್ನೆಲ್ಲಾ ನೋಡಿಕೊಂಡೇ ಬೆಳೆದಿದ್ದರು. ಮಲ್ಲಿಕಾರ ಇಬ್ಬರು ಸೋದರಿಯರೂ ಉದ್ಯಮಿಗಳಾಗಿದ್ದಾರೆ. ಒಟ್ಟಿನಲ್ಲಿ ಇಡೀ ಕುಟುಂಬವೇ ಉದ್ಯಮಿಗಳ ಕುಟುಂಬವಾಗಿದೆ.

ಲೆದರ್ ಲಾಂಡ್ರಿ ಹುಟ್ಟಿಕೊಂಡಿದ್ದು ಹೇಗೆ?

ಅದು ಸುಮ್ಮನೇ ಹುಟ್ಟಿಕೊಂಡ ಐಡಿಯಾ. ಸಂಜೆ ವೇಳೆ ಕಾಫಿ ಕುಡಿಯುತ್ತಿದ್ದಾಗ, ಮಲ್ಲಿಕಾ ಸೋದರಿ ನೇಹಾ ಲೆದರ್ ಐಟಂಗಳಿಗೂ ಲಾಂಡ್ರಿ ಇರಬೇಕಿತ್ತು ಅಲ್ವಾ ಅಂತ ಹಾಗೇ ಸುಮ್ಮನೇ ಪ್ರಶ್ನಿಸಿದ್ದರು. ಅಷ್ಟೇ, ಅದರ ಬೆನ್ನ ಹಿಂದೆ ಬಿದ್ದ ಮಲ್ಲಿಕಾ, ತನ್ನ ಹೊಸ ಉದ್ಯಮ ಸ್ಥಾಪನೆಗೆ ಯೋಜನೆ ರೂಪಿಸಿಬಿಟ್ಟರು.

ಬ್ರಿಟನ್‍ನಲ್ಲಿ ಫೈನಾನ್ಸ್ ಮತ್ತು ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರೋ ಶರ್ಮಾ ಸೋದರಿಯರು, ಈ ಉದ್ಯಮದ ಬಗ್ಗೆ ಹೆಚ್ಚು ಸಮೀಕ್ಷೆ ನಡೆಸಿದರು. ಅದನ್ನು ಬೆಳೆಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದರು. ಅಷ್ಟೇ ಅಲ್ಲ, ಖುದ್ದು ಮಲ್ಲಿಕಾ ಅವರೇ ಲೆದರ್ ಕೇರ್ ಟೆಕ್ನಿಷಿಯನ್ ಆಗಿದ್ದರು. ಲೆದರ್ ಕೇರ್ ಸಂಸ್ಥೆಯೊಂದರಲ್ಲಿ ಕೆಲಸವನ್ನೂ ಮಾಡಿದ್ದರು. ಬ್ರಿಟನ್‍ನ ಎಲ್‍ಟಿಟಿ ಸಂಸ್ಥೆಯಲ್ಲಿ ಲೆದರ್ ಉತ್ಪನ್ನಗಳನ್ನು ಕ್ಲೀನ್ ಮಾಡುವುದು, ಕಲರ್ ಮಿಕ್ಸಿಂಗ್, ರಿಪೇರಿ ಸೇರಿದಂತೆ ಎಲ್ಲಾ ಕೆಲಸಗಳನ್ನು ಕಲಿತುಕೊಂಡಿದ್ದರು.

ದಿ ಲೆದರ್ ಲಾಂಡ್ರಿ ಸ್ಥಾಪನೆ ವಿಚಾರದಲ್ಲಿ ಸಾಕಷ್ಟು, ಸಂಶೋಧನೆ ಮತ್ತು ಯೋಜನೆಗಳನ್ನು ರೂಪಿಸಲಾಗಿತ್ತು. ಸಾಮಾನ್ಯವಾಗಿ ಗ್ರಾಹಕರು ತಮ್ಮ ಸಮೀಪದ ಲಾಂಡ್ರಿಗಳನ್ನು ಸಂಪರ್ಕಿಸುತ್ತಿದ್ದರು. ಅಲ್ಲಿಂದ ಬೇರೆ ನಗರಗಳಲ್ಲಿರುವ ಲೆದರ್ ಸಂಸ್ಥೆಗಳಿಗೆ ಉತ್ಪನ್ನಗಳ ರವಾನೆಯಾಗುತ್ತಿತ್ತು. ಅಲ್ಲಿಂದ ರಿಪೇರಿಯಾಗಿ ಬರಲು ತಿಂಗಳುಗಳೇ ಹಿಡಿಯುತ್ತಿದ್ದವು. ಸಿಕ್ಕಾಪಟ್ಟೆ ದುಬಾರಿ ಕೆಲಸವೂ ಆಗಿತ್ತು.” ಎನ್ನುತ್ತಾರೆ 26 ವರ್ಷ ವಯಸ್ಸಿನ ಯುವ ಉದ್ಯಮಿ ಮಲ್ಲಿಕಾ. ಅವರು ನಾಲ್ಕು ತಿಂಗಳ ಹಿಂದಷ್ಟೇ ಲೆದರ್ ಲಾಂಡ್ರಿ ಶುರು ಮಾಡಿದ್ದಾರೆ.

ಸ್ಥಳೀಯ ಸೇವಾದಾರರ ಸಂಪರ್ಕ

ಅದಾದ ಬಳಿಕ ಸ್ಥಳೀಯ ಸೇವಾದಾರರನ್ನು ಸಂಪರ್ಕಿಸಿದರು. ಎರಡು ಲಾಂಡ್ರಿ ಬ್ರಾಂಡ್‍ಗಳ ಜೊತೆ ಒಪ್ಪಂದ ಮಾಡಿಕೊಂಡ ಲೆದರ್ ಲಾಂಡ್ರಿ, ಅವರಿಗೆ ಬರುವ ಚರ್ಮೋತ್ಪನ್ನಗಳ ಕೆಲಸಗಳನ್ನು ಲೆದರ್ ಲಾಂಡ್ರಿಗೆ ನೀಡಲು ಆರಂಭಿಸಿದರು. ಆರಂಭದಲ್ಲಿ, ಸಾಧ್ಯವಾದಷ್ಟು ಲೆದರ್ ಬ್ರಾಂಡ್‍ಗಳ ಜೊತೆ ಒಪ್ಪಂದ ಮಾಡಿಕೊಂಡು, ಎಲ್ಲಾ ಮೆಟ್ರೋ ನಗರಗಳಲ್ಲಿ ಮನೆ ಬಾಗಿಲಿಗೆ ಸೇವೆ ಒದಗಿಸಬೇಕೆಂದು ಚಿಂತನೆ ಮಾಡಲಾಗಿತ್ತು. ಸಹಭಾಗಿತ್ವದಿಂದಾಗಿ, ವ್ಯವಹಾರ ವೃದ್ಧಿಯಾಗುತ್ತದೆ ಮತ್ತು ಆ ಬ್ರಾಂಡ್‍ಗಳಿಗೂ ಹೆಚ್ಚುವರಿ ಸೇವೆ ಕಲ್ಪಿಸುವ ಅವಕಾಶ ಸಿಗುತ್ತದೆ. ಈ ಮೂಲಕ ಎಲ್ಲಾ ಲೆದರ್ ಸೇವೆಗಳಿಗೆ ಒಂದೇ ವೇದಿಕೆ ಸೃಷ್ಟಿಸಬಹುದು ಎಂಬುದು ಮಲ್ಲಿಕಾ ನಂಬಿಕೆಯಾಗಿದೆ. ಭವಿಷ್ಯದಲ್ಲಿ ಚರ್ಮದ ಪೀಠೋಪಕರಣಗಳ ಕ್ಲೀನಿಂಗ್ ಮಾಡಿಕೊಡುವ ಉದ್ದೇಶವೂ ಸಂಸ್ಥೆಗಿದೆ.

“ಈ ಪರಿಕಲ್ಪನೆಯು ಭಾರತದಲ್ಲಿ ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ಭಾರತೀಯ ಗ್ರಾಹಕರ ಮನಸ್ಸೆಳೆಯಲು ಇನ್ನೂ ಕೆಲವು ಸಮಯ ಬೇಕಾದೀತು. ಜನರ ಆದಾಯ ಮಟ್ಟ ಹೆಚ್ಚಾಗುತ್ತಿದ್ದು, ಗ್ರಾಹಕ ಜಾಗೃತಿಯೂ ಹೆಚ್ಚುತ್ತಿದೆ. ಹೀಗಾಗಿ ಮುಂದೆ ಒಳ್ಳೆಯ ಭವಿಷ್ಯವಿದೆ.” ಎನ್ನುತ್ತಾರೆ ಮಲ್ಲಿಕಾ. ಭಾರತದಲ್ಲಿ ಇದೇನೂ ಹೊಸ ಐಡಿಯಾ ಅಲ್ಲ. ಈಗಾಗಲೇ ಕೆಲವರು ಈ ಸೇವೆ ನೀಡುತ್ತಿದ್ದಾರೆ. ಆದರೆ, ಮಲ್ಲಿಕಾ ವಿಧಾನ ಬೇರೆಯದ್ದಾಗಿದೆ.

ನಾನು, ಕಡಿಮೆ ಬೆಲೆಗೆ ಸೇವೆ ನೀಡಿ ಉಳಿದವರ ಜೊತೆಗೆ ಸ್ಪರ್ಧೆಗೆ ಇಳಿಯುತ್ತಿಲ್ಲ. ನನ್ನ ಗಮನವೆಲ್ಲಾ ನಾವು ಕೊಡುವ ಸೇವೆಯ ಗುಣಮಟ್ಟದಲ್ಲಿದೆ. ಸರಿಯಾದ ಸಮಯಕ್ಕೆ ಅತ್ಯುತ್ಕೃಷ್ಟ ಗುಣಮಟ್ಟದಲ್ಲಿ ಸೇವೆ ನೀಡುವುದಕ್ಕೆ ನಮ್ಮ ಆದ್ಯತೆ. ಸುಶಿಕ್ಷಿತ ಗ್ರಾಹಕರು, ಗುಣಮಟ್ಟಕ್ಕೆ ಆದ್ಯತೆ ಕೊಡುವಂತಹ ಗ್ರಾಹಕರನ್ನಷ್ಟೇ ನಾವು ಗುರಿಯಾಗಿಸಿಕೊಂಡಿದ್ದೇವೆ. ಎನ್ನುತ್ತಾರೆ ದೆಹಲಿ ಮೂಲದ ಮಲ್ಲಿಕಾ.

ತಾತನ ಕಾಲದ ಚರ್ಮದ ಉತ್ಪನ್ನಗಳನ್ನು ಶುಭ್ರಗೊಳಿಸಲು, ಕಲರಿಂಗ್ ಮಾಡಿಸಲು ಗ್ರಾಹಕರು ನವ್ಯೋದ್ಯಮವೊಂದನ್ನು ಸಂಪರ್ಕಿಸಿದಾಗ ಆಗುವ ಖುಷಿ ಅಷ್ಟಿಷ್ಟಲ್ಲ. ತನ್ನ ಕಾಲ ಮೇಲೆ ಗಟ್ಟಿಯಾಗಿ ನಿಂತುಕೊಂಡಿರುವ ಈ ನವ್ಯೋದ್ಯಮಿ ಮಲ್ಲಿಕಾ, ಓದುವುದು, ಪ್ರವಾಸ ಮಾಡುವುದನ್ನು ತುಂಬಾ ಇಷ್ಟ ಪಡುತ್ತಾರೆ. ಈಕೆ ಮಹಿಳಾವಾದಿ ಕೂಡಾ.

ಮಲ್ಲಿಕಾ ಟೆನ್ನಿಸ್ ಆಟವನ್ನೂ ಆಡುತ್ತಾರೆ. ದೆಹಲಿಯ ಐಐಹೆಚ್‍ಆರ್‍ನಿಂದ ಮಾನವಹಕ್ಕುಗಳ ಬಗ್ಗೆ ಸ್ನಾತಕೋತ್ತರ ಡಿಪ್ಲೋಮಾ ಪಡೆಯುತ್ತಿದ್ದಾರೆ.