ಮಾಡೆಲ್‍ನಿಂದ ಮಾದರಿ ಉದ್ಯಮಿಯಾದ ತಾರಾ ಶರ್ಮಾ ಸಲುಜಾ...

ಟೀಮ್​​ ವೈ.ಎಸ್​.ಕನ್ನಡ

ಮಾಡೆಲ್‍ನಿಂದ ಮಾದರಿ ಉದ್ಯಮಿಯಾದ ತಾರಾ ಶರ್ಮಾ ಸಲುಜಾ...

Friday November 27, 2015,

3 min Read

ನಟಿ ಕಮ್ ಮಾಡೆಲ್ ತಾರಾ ಶರ್ಮಾ ಸಲುಜಾ ನಿಮಗೆಲ್ಲಾ ಗೊತ್ತಿರಬಹುದು. ಆದ್ರೆ ಅವರೊಬ್ಬ ಬಹುಮುಖ ಪ್ರತಿಭೆ ಅನ್ನೋದು ಅದೆಷ್ಟೋ ಜನರಿಗೆ ತಿಳಿದಿಲ್ಲ. ತಾರಾ ಶರ್ಮಾ, ಒಬ್ಬ ಮಾಡೆಲ್, ನಟಿ ಜೊತೆಗೆ ಯಶಸ್ವಿ ಉದ್ಯಮಿಯೂ ಹೌದು. ತಾಯ್ತನ ಹಾಗೂ ಮಕ್ಕಳ ಬಗೆಗಿನ ಟಿವಿ ಶೋ ಒಂದನ್ನು ತಾರಾ ನಡೆಸ್ತಿದ್ದಾರೆ. ತಾಯ್ತನ ಅನ್ನೋದು ತಮ್ಮನ್ನು ಬಹುಕಾರ್ಯಗಳಲ್ಲಿ ಇನ್ನಷ್ಟು ನಿಪುಣಳನ್ನಾಗಿ ಮಾಡಿದೆ ಎನ್ನುತ್ತಾರೆ ತಾರಾ ಶರ್ಮಾ ಸಲುಜಾ. ಒತ್ತಡದ ನಡುವೆಯೂ ಅಪಾರ ಸಹನೆ, ನಿಗದಿತ ಸಮಯದಲ್ಲೇ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವ ಚುರುಕುತನ ಎಲ್ಲವೂ ತಾಯ್ತನದ ಕೊಡುಗೆ ಅಂತಾ ಹೆಮ್ಮೆಯಿಂದ ಹೇಳಿಕೊಳ್ತಾರೆ. ತಾಯಂದಿರು ಹಾಗೂ ಉದ್ಯಮಿಗಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿರ್ತಾರೆ. ಆದ್ರೂ ತಾಯ್ತನದ ಹೊಣೆಗಾರಿಕೆ ಹಾಗೂ ಉದ್ಯಮದ ಜವಾಬ್ಧಾರಿ ಎರಡನ್ನೂ ಸಂತೋಷವಾಗಿ ನಿಭಾಯಿಸ್ತಿದ್ದಾರೆ ತಾರಾ. ಇನ್ನು ಕೆಲ ವರ್ಷಗಳಲ್ಲಿ ಈ ಸ್ಥಿತಿ ಬದಲಾಗಬಹುದು, ಆದ್ರೆ ತಮಗೆ ಅವೆರಡೂ ಸೂಕ್ತ ಕ್ಷೇತ್ರ ಅನ್ನೋದು ತಾರಾ ಶರ್ಮಾ ಅವರ ಆತ್ಮವಿಶ್ವಾಸದ ನುಡಿ.

ಚಿಕ್ಕಂದಿನಿಂದಲೂ ತಾರಾ ಓದಿನಲ್ಲಿ ಚುರುಕಾಗಿದ್ರು. ವಿದ್ಯಾರ್ಥಿ ವೇತನದ ನೆರವಿನಿಂದ ಉನ್ನತ ವ್ಯಾಸಂಗಕ್ಕಾಗಿ ಇಟಲಿಗೆ ತೆರಳಿದ್ರು. ಆ ಸಮಯದಲ್ಲಿ ಮನೆಯ ನೆನಪುಗಳು ಅವರನ್ನು ಅತಿಯಾಗಿ ಕಾಡ್ತಾ ಇತ್ತು, ಆದ್ರೂ ಆ ಅನುಭವ ಮರೆಯಲಾಗದ್ದು ಎನ್ನುತ್ತಾರೆ ತಾರಾ. ಅಲ್ಲಿ 75 ದೇಶಗಳಿಂದ ಬಂದ ವಿದ್ಯಾರ್ಥಿಗಳಿದ್ರು. ಬೇರೆ ಬೇರೆ ರಾಷ್ಟ್ರಗಳ ಸಂಸ್ಕೃತಿ, ಆಚಾರ-ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಸೌಭಾಗ್ಯ ತಾರಾ ಅವರಿಗೂ ದಕ್ಕಿತ್ತು. ಇಟಲಿಯಲ್ಲಿ ಶಿಕ್ಷಣ ಪೂರೈಸಿದ ಬಳಿಕ ತಾರಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಬಿಎಸ್‍ಸಿ ಮ್ಯಾನೇಜ್‍ಮೆಂಟ್ ಪದವಿ ಪಡೆದಿದ್ದಾರೆ. ವಿದ್ಯಾಭ್ಯಾಸದ ನಂತರ ತಾರಾ ಸಿಟಿಬ್ಯಾಂಕ್ ಹಾಗೂ ಎಕ್ಸೆಂಚರ್‍ನಲ್ಲಿ ಕೆಲಸ ಮಾಡಿದ್ರು. ಆದ್ರೆ ಆ ಕಾರ್ಪೊರೇಟ್ ಉದ್ಯೋಗ ಹೆಚ್ಚು ದಿನ ತಾರಾ ಅವರನ್ನು ಹಿಡಿದಿಟ್ಟುಕೊಳ್ಳಲಿಲ್ಲ. ಹಕ್ಕಿಯಂತೆ ಸ್ವತಂತ್ರವಾಗಿ ಹಾರಲು ಬಯಸಿದ್ದ ಅವರು ಜಗತ್ತು ಸುತ್ತಲು ಹೊರಟ್ರು.

image


ತಾರಾ ಅವರ ತಂದೆ ಪ್ರತಾಪ್ ಶರ್ಮಾ ಒಬ್ಬ ಲೇಖಕ, ಜೊತೆಗೆ ನಾಟಕಕಾರರೂ ಆಗಿದ್ರು. ಹಾಗಾಗಿ ತಾರಾ ಮಾಡೆಲಿಂಗ್ ಹಾಗೂ ನಟನೆಯ ಕಡೆಗೆ ಆಕರ್ಷಿತರಾದ್ರು. ಆದ್ರೆ ಶೈಕ್ಷಣಿಕ ಹಾಗೂ ಕಾರ್ಪೊರೇಟ್ ಜಗತ್ತು ತಮಗೆ ಭದ್ರತೆಯ ಭಾವನೆ ಒದಗಿಸಿತ್ತು ಎನ್ನುತ್ತಾರೆ ತಾರಾ. ಹೃದಯದಲ್ಲಿ ಮಾತ್ರ ನಟನೆ ಹಾಗೂ ಸೃಜನಾತ್ಮಕ ಕೆಲಸಗಳ ಬಗ್ಗೆ ಹೆಚ್ಚು ಸೆಳೆತವಿತ್ತು. 2 ವರ್ಷ ಎಕ್ಸೆಂಚರ್‍ನಲ್ಲಿ ಕೆಲಸ ಮಾಡಿದ ತಾರಾ, ನಟನೆ ಹಾಗೂ ಮಾಡೆಲಿಂಗ್‍ನಲ್ಲಿ ಸಂಪೂರ್ಣ ತೊಡಗಿಸಿಕೊಂಡ್ರು. ತಾರಾ ಶರ್ಮಾ ಅವರಿಗೆ ಕೆಲ ಸಿನಿಮಾಗಳ ಆಫರ್ ಕೂಡ ಸಿಕ್ಕಿತ್ತು. ಕೆಲವು ಬಾಕ್ಸ್ ಆಫೀಸ್‍ನಲ್ಲಿ ಯಶಸ್ಸು ಕಂಡ್ರೆ, ಇನ್ನು ಕೆಲವು ಸೋತು ಹೋಗಿದ್ವು. ಆದ್ರೆ ಅದೆಲ್ಲ ಸಿನಿ ದುನಿಯಾದಲ್ಲಿ ಸಹಜ ಅನ್ನೋದು ತಾರಾ ಅವರ ಬಿಂದಾಸ್ ಮಾತು. ಒಂದು ಮಗುವಿನ ತಾಯಿಯಾದ ಬಳಿಕ ತಾರಾಗೆ ಯಾವುದೇ ಆಫರ್‍ಗಳು ಬರಲಿಲ್ಲ. " ನೀನು ಮಾಡಲಿಚ್ಛಿಸಿದ್ದು ಸಿಕ್ಕಿಲ್ಲ ಅಂತಾದ್ರೆ ಅದನ್ನು ಸೃಷ್ಟಿಸು, ಸದಾ ನಿನ್ನನ್ನು ನೀನು ಮರು ಶೋಧಿಸು'' ಎಂಬ ತಮ್ಮ ತಂದೆಯ ಮಾತು ಆಗ ತಾರಾಗೆ ಸತ್ಯ ಎನಿಸಿತ್ತು. ಜೊತೆಗೆ ತಾಯ್ತನದ ಮಧುರ ಅನುಭೂತಿ ಅವರನ್ನು ಆವರಿಸಿತ್ತು. ಕೊನೆಗೆ ಸ್ವಂತ ಟಿವಿ ಕಾರ್ಯಕ್ರಮವೊಂದನ್ನು ನಡೆಸಿಕೊಡಲು ತಾರಾ ನಿರ್ಧರಿಸಿದ್ರು.

ಅಡುಗೆ, ಸಿನಿಮಾ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಹತ್ತಾರು ಕಾರ್ಯಕ್ರಮಗಳನ್ನು ನಾವು ನೋಡ್ತಾನೇ ಇರ್ತೀವಿ. ತಾಯ್ತನ ಮತ್ತು ಪೋಷಕರ ಬಗೆಗಿನ ಟಿವಿ ಶೋಗಳು ಅಪರೂಪ. ಬಹುತೇಕ ಎಲ್ಲರೂ ಅಮ್ಮನಾಗುವ ಜವಾಬ್ಧಾರಿಯನ್ನೇ ನೆನೆಸಿಕೊಂಡು ಭಯಪಡ್ತಾರೆ. ಹಾಗಾಗಿ ಈ ಕುರಿತ ಟಿವಿ ಕಾರ್ಯಕ್ರಮ ನಡೆಸಲು ತಾರಾ ಮುಂದಾದ್ರು. ಸ್ನೇಹಿತರು ಹಾಗೂ ಇಂಡಸ್ಟ್ರಿಯವರಿಂದ ಸಲಹೆ ಪಡೆದ ತಾರಾ ಶರ್ಮಾ, ಪ್ರಾಯೋಜಕರು ಕೂಡ ಸಿಕ್ಕಿದ್ರಿಂದ ಟಿವಿ ಶೋ ಆರಂಭಿಸಿಯೇ ಬಿಟ್ರು. ಆದ್ರೆ ಕಾರ್ಯಕ್ರಮವನ್ನು ಕೇವಲ ಟಿವಿಗೆ ಸೀಮಿತವಾಗಿಡುವುದು ಬೇಡ ಅನ್ನೋದು ತಾರಾ ಅವರ ಪತಿ ರೂಪಕ್ ಸಲುಜಾ ಅವರ ಸಲಹೆ. ಹಾಗಾಗಿ ಅದನ್ನೆಲ್ಲ ತಾರಾ ಬ್ಲಾಗ್‍ನಲ್ಲೂ ಪ್ರಕಟಿಸಿದ್ರು. ಸೀಸನ್-2ನಲ್ಲಿ ತಾರಾ ಶರ್ಮಾ ಅವರ ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿದೆ. ಸೀಸನ್ -3 ಇಂಗ್ಲಿಷ್‍ನಲ್ಲೂ ಮೂಡಿಬಂದಿರುವುದು ವಿಶೇಷ. ಸೆಲೆಬ್ರಿಟಿಗಳು, ಸೆಲೆಬ್ರಿಟಿಗಳಲ್ಲದವರು ಹಾಗೂ ವಿಶೇಷ ಸೆಗ್ಮೆಂಟ್ ಮಾದರಿಯನ್ನು ಈ ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ. ಮಕ್ಕಳ ಬಗೆಗಿನ ಕಾಳಜಿ, ಅವರ ಅಗತ್ಯಗಳಿಗೆ ಸಂಬಂಧಿಸಿದ ವಿಚಾರಗಳು ಕೂಡ ಈ ಕಾರ್ಯಕ್ರಮದಲ್ಲಿವೆ.

image


ಮೊದಮೊದಲು ಮಕ್ಕಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಮಾತನಾಡಲು ಸೆಲೆಬ್ರಿಟಿಗಳು ಹಿಂದೇಟು ಹಾಕಿದ್ರು. ಆದ್ರೆ ಈಗ ಕಾಜೋಲ್, ಶಿಲ್ಪಾ ಶೆಟ್ಟಿ, ಮೇರಿ ಕೋಮ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. ತಾಯ್ತನದ ಜೊತೆಗೆ ತಮ್ಮ ವೃತ್ತಿ ಜೀವನದಲ್ಲಿನ ಏಳಿಗೆಯಿಂದ ತಾರಾ ಖುಷಿಯಾಗಿದ್ದಾರೆ. ತಾಯ್ತನ ಅವರ ಬದುಕನ್ನು ಬದಲಾಯಿಸಿಲ್ಲ, ಬದಲಾಗಿ ವ್ಯಕ್ತಿತ್ವವನ್ನು ಇನ್ನಷ್ಟು ಉತ್ಕøಷ್ಟಗೊಳಿಸಿದೆ. ತಾಯ್ತನ ತಾರಾ ಶರ್ಮಾ ಅವರ ಆದ್ಯತೆಯನ್ನು ಸ್ಪಷ್ಟಪಡಿಸಿದೆ, ಬಲವಾದ ಉದ್ದೇಶ ಮತ್ತು ಪ್ರಜ್ಞೆಯನ್ನು ಕೂಡ ಮೂಡಿಸಿದೆ. ಮಾಡೆಲಿಂಗ್‍ನಿಂದ ಶುರುವಾದ ಪಯಣ ತಾರಾ ಅವ್ರನ್ನು ಮಾದರಿ ಉದ್ಯಮಿಯನ್ನಾಗಿಸಿದೆ.

ಲೇಖಕರು: ಸಿಂಧೂ ಕಶ್ಯಪ್​​​

ಅನುವಾದ: ಭಾರತಿ ಭಟ್​​​​