ಕಲಾವಿದೆ, ಕ್ಯುರೇಟರ್ ಮತ್ತು ಉದ್ಯಮಿ : ಕಲೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಹುಮುಖ ಪ್ರತಿಭೆ

ಟೀಮ್​ ವೈ.ಎಸ್​. ಕನ್ನಡ

ಕಲಾವಿದೆ, ಕ್ಯುರೇಟರ್ ಮತ್ತು ಉದ್ಯಮಿ : ಕಲೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಹುಮುಖ ಪ್ರತಿಭೆ

Sunday February 21, 2016,

4 min Read

ದೆಹಲಿಯ ಛತ್ತರ್‍ಪುರ ಫಾರ್ಮ್ ರೆಸಿಡೆನ್ಸ್‍ನಲ್ಲಿರೋ ಸುರಭಿ ಮೋದಿ ಅವರ ಮನೆಯೊಳಕ್ಕೆ ಪ್ರವೇಶಿಸುತ್ತಿದ್ದಂತೆ ಎಂ.ಎಫ್.ಹುಸೇನ್ ಅವರ ಅದ್ಭುತ ಪೇಂಟಿಂಗ್ ಎಲ್ಲರ ಕಣ್ಸೆಳೆಯುತ್ತೆ. ಇನ್ನೂ ಎರಡು ಅದ್ಭುತಗಳು ಅಲ್ಲಿವೆ, ಮೊದಲನೆಯದು ಅರುಣ್ ಪಂಡಿತ್ ಅವರ `ಮಾ ಪರೇಶಾನ್ ಕ್ಯೂಂ ಹೋತಿ ಹೈ' ಹೆಸರಿನ ಮಹಿಳೆಯರ ಮೂರು ಸಹಜ ಗಾತ್ರದ ಶಿಲ್ಪಗಳ ಸೆಟ್. ಇನ್ನೊಂದು ಕೋಣೆಯಲ್ಲಿ ಅವರೇ ಖರೀದಿಸಿದ ಎಲ್ಲರನ್ನೂ ಬೆರಗುಗೊಳಿಸುವಂತಹ ಮತ್ತೊಂದು ಕಲೆಯಿದೆ. ಬ್ರಿಟಿಷ್ ಕಲಾವಿದ ಜಸ್ಪರ್ ಜೊಫೆ ಅವರು ಚಿತ್ರಿಸಿದ ಚೈನೀಸ್ ನಟಿ ಜಾಂಗ್ ಜಿಯಿ ಅವರ ಗುಲಾಬಿ ಮೊಗದ ಭಾವಚಿತ್ರ.

``ನಾನು ಯಾವಾಗಲೂ ಕಲೆಯ ಕಡೆಗೆ ಆಕರ್ಷಿತಳಾಗುತ್ತಿದ್ದೆ, ಅದು ಸುಂದರವಾಗೇ ಇರಬೇಕೆಂದೇನಿಲ್ಲ. ಆದ್ರೆ ನಮ್ಮ ಸಮಾಜದ ಬಗ್ಗೆ ಆಲೋಚಿಸುವ ಸವಾಲೊಂದನ್ನು ಅದು ಉತ್ಪತ್ತಿ ಮಾಡುತ್ತದೆ'' ಎನ್ನುತ್ತಾರೆ ಸುರಭಿ ಮೋದಿ.

 ಜೀವನಕ್ಕಿಂತ ದೊಡ್ಡದು, ಅಸಹಜವಾದದ್ದು, ಸುರಭಿ ಅವರ ಮೇಲ್ವಿಚಾರಣೆಯಲ್ಲಿರುವ ಪ್ರಾಜೆಕ್ಟ್. ಅಷ್ಟೇ ಅಲ್ಲ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ಸಾರ್ವಜನಿಕ ಕಲಾ ಹಬ್ಬ ಪಬ್ಲಿಕಾ. ಇತ್ತೀಚೆಗಷ್ಟೆ ದೆಹಲಿಯಲ್ಲಿ ನಡೆದ ಇಂಡಿಯಾ ಆರ್ಟ್ ಫೇರ್‍ನಲ್ಲಿ ಪಪ್ಲಿಕಾದ ಎರಡನೇ ಆವೃತ್ತಿ ಬಿಡುಗಡೆಯಾಗಿದೆ. ಅದರಲ್ಲಿ ಗಿಗಿ ಸ್ಕಾರಿಯಾ, ಅನಂತ್ ಮಿಶ್ರಾ, ಓವೈಸ್ ಹುಸೇನ್, ದೀಪ್‍ಜ್ಯೋತಿ ಕಲಿತಾ, ಕೃಷ್ಣ ಮುರಾರಿ, ತುಷಾರ್ ಜೋಗ್, ಜಾಸೋನ್ ಬಿಲ್ಬೋ, ಭುವಲ್ ಪ್ರಸಾದ್ ಮತ್ತು ರಕ್ತಿಮ್ ಪರಶರ್ ಅವರ ಕಲಾಕೃತಿಗಳಿವೆ. ಸಾಂಸ್ಕøತಿಕ ಸ್ಥಳಗಳು, ಮೆಟ್ರೊ ಸ್ಟೇಶನ್‍ಗಳು, ಉದ್ಯಾನವನಗಳು, ಶಾಪಿಂಗ್ ಮಾಲ್‍ಗಳು ಹೀಗೆ ನಗರದ ಸುಮಾರು 20 ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ಸ್ಥಾಪಿಸಲಾಗಿದೆ.

image


ಸಾರ್ವಜನಿಕರಿಗೆ ಕಲೆಯ ಪರಿಚಯ...

ಹಬ್ಬದ ಕಲ್ಪನೆಯನ್ನು ಸಾಂಪ್ರದಾಯಿಕ ಕಲಾಕರತಿಗಳಿಗೆ ಸೀಮಿತಗೊಳಿಸುವಿಕೆಯಿಂದ ತೆಗೆದು ಹಾಕಲು, ಅದು ಹೆಚ್ಹೆಚ್ಚು ಕಲಾಪ್ರೇಮಿಗಳನ್ನು ತಲುಪುವಂತೆ ಮಾಡಲು ಮತ್ತು ಬೇರಿನಿಂದಲೇ ಸಾಂಸ್ಕøತಿಕ ಬದಲಾವಣೆಯನ್ನು ಪ್ರೋತ್ಸಾಹಿಸಲು ಈ ಪ್ರಯತ್ನ ಎನ್ನುತ್ತಾರೆ 32ರ ಹರೆಯದ ಸುರಭಿ ಮೋದಿ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಶಾಂತಿ ಪಥ, ನಿಜಾಮುದ್ದೀನ್ ಬಸ್ತಿ, ನೆಹರು ಪಾರ್ಕ್, ಚಿಲ್ಡ್ರನ್ಸ್ ಪಾರ್ಕ್, ಸೆಲೆಕ್ಟ್ ಸಿಟಿ ವಾಕ್, ಡಿಎಲ್‍ಎಫ್ ಎಂಪೊರಿಯೊ, ಸೈಬರ್ ಹಬ್ ಗುರ್ಗಾಂವ್‍ನಲ್ಲಿ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಫೆಬ್ರವರಿ 29ರ ವರೆಗೂ ಸಾರ್ವಜನಿಕರು ಕಲಾಕೃತಿಗಳನ್ನು ವೀಕ್ಷಿಸಬಹುದು.

``ಭಾರತದಲ್ಲಿ ಕಲೆ ಮಾರುಕಟ್ಟೆ ಆರಂಭಿಕ ಹಂತದಲ್ಲಿ ಬೆದರಿಸುವಂತಿದೆ ಎಂದು ನನಗನಿಸಿತ್ತು. ಗ್ಯಾಲರಿ ಪ್ರವೇಶಕ್ಕೆ ಹಿಂದು ಮುಂದು ನೋಡುವಂತಾಗಿದೆ. ದೆಹಲಿಯ ಪ್ರಮುಖ ಗ್ಯಾಲರಿಗಳು ಮತ್ತು ಮ್ಯೂಸಿಯಂಗಳಿಗೆ ಆರ್ಥಿಕ ನೆರವು ಸಿಗುತ್ತಿಲ್ಲ. ಮನರಂಜನೆ ಅಂದ್ರೆ ಮಾಲ್‍ಗಳಲ್ಲಿ ಸಿನಿಮಾ ನೋಡುವುದು ಎಂಬಂತಾಗಿದೆ'' 

ಅನ್ನೋದು ಸುರಭಿ ಅವರ ಅಭಿಪ್ರಾಯ. ಕಲೆಯನ್ನು ಜನರಿಗೆ ತಲುಪಿಸುವುದು ಅವರ ಮೂಲ ಉದ್ದೇಶ. ಫ್ಲಡ್‍ಲೈಟ್ ಫೌಂಡೇಶನ್ `ಪಬ್ಲಿಕಾ' ಪ್ರದರ್ಶನವನ್ನು ಆಯೋಜಿಸಿದೆ. ಇದು ಸುರಭಿ ಮೋದಿ ಅವರೇ 3 ವರ್ಷಗಳ ಹಿಂದೆ ಆರಂಭಿಸಿದ, ಲಾಭರಹಿತ ಕಲಾವಿದರ ಮಾರ್ಗದರ್ಶನ ಮತ್ತು ನಿರ್ವಹಣೆ ಸಂಸ್ಥೆ. ಅವರ ಉದ್ಯಮ ಪ್ರಯತ್ನ ಎರಡು ಹಂತಗಳಲ್ಲಿ ನಡೆಯುತ್ತೆ. ಸಾರ್ವಜನಿಕ ಕಲೆಯ ನಿರ್ಮಾಪಕಿ ಮತ್ತು ನಿರೂಪಕಿಯಾಗಿರುವ ಸುರಭಿ, ಯುವ ಉದಯೋನ್ಮುಖ ಪ್ರತಿಭೆಗಳ ಸೃಜನಶೀಲ ಗುರು ಹಾಗೂ ಪ್ರವರ್ತಕರಾಗಿಯೂ ಗುರುತಿಸಿಕೊಂಡಿದ್ದಾರೆ. ಫ್ಲಡ್‍ಲೈಡ್ ಕಲಾವಿದರಿಗೆ ಸ್ಟುಡಿಯೋಗಳನ್ನು ಕೂಡ ಒದಗಿಸುತ್ತಿದೆ.

``ಕಲಾಕೃತಿಗಳನ್ನು ಅಭಿವೃದ್ಧಿಪಡಿಸಲು ಕಲಾವಿದರಿಗೆ ನಾವು ನೆರವಾಗುತ್ತೇವೆ, ಅವರ ಪ್ರತಿನಿಧಿಯಂತೆ ವರ್ತಿಸುತ್ತೇವೆ. ಗ್ಯಾಲರಿಗಳಿಗೆ ಸಂಪರ್ಕ ಕಲ್ಪಿಸುವುದು, ಕಲಾವಿದರ ವಸತಿ ಮತ್ತು ಕಮಿಷನ್ ಸಿಗುವಂತೆ ನೋಡಿಕೊಳ್ಳುತ್ತಿದ್ದೇವೆ. ಭವಿಷ್ಯದಲ್ಲಿ ಫ್ಲಡ್‍ಲೈಟ್ ತನ್ನ ಆನ್‍ಲೈನ್ ಗ್ಯಾಲರಿ ಮೂಲಕ ಕಲಾವಿದರು ಮತ್ತು ವಿನ್ಯಾಸಗಾರರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಿದೆ'' ಎನ್ನುತ್ತಾರೆ ಸುರಭಿ. 

ಯುವ, ಪ್ರತಿಭಾವಂತ ಕಲಾವಿದರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿರುವ ಫ್ಲಡ್‍ಲೈಟ್, ಕಲೆಯ ಬಗ್ಗೆ ಜಾಗೃತಿ ಮೂಡಿಸಲು ಪಣತೊಟ್ಟಿದೆ.

ಶಿಲ್ಪಕಲೆಗೆ ಸ್ವಂತ ಮಾರ್ಗ...

``ಸ್ಕೂಲ್‍ನಲ್ಲಿ ನಾನು ಆಲ್‍ರೌಂಡರ್ ಆಗಿದ್ದೆ. ಡ್ರಾಯಿಂಗ್ ಸ್ಪರ್ಧೆಗಳಲ್ಲಿ ಗೆಲುವು ನನ್ನದೇ ಆಗಿತ್ತು'' 

 ಕಾಮರ್ಸ್ ಪದವಿ ಪಡೆದಿರುವ ಸುರಭಿ ನವದೆಹಲಿಯ ಐಎಂಐನಲ್ಲಿ ಎಂಬಿಎ ಮಾಡಿದ್ದಾರೆ. ತಮ್ಮ ತಂದೆಯ ಉದ್ಯಮ ಸೇರಿಕೊಂಡ ಸುರಭಿ ಅಲ್ಲೇ ಫುಲ್ ಟೈಮ್ ಕೆಲಸ ಮಾಡಲಾರಂಭಿಸಿದ್ರು. ಸ್ಟಿಕ್ ಪೆನ್ಸ್ ಲಿಮಿಟೆಡ್‍ನಲ್ಲಿ ದೃಶ್ಯ ವಾಣಿಜ್ಯೀಕರಣದ ಬಗ್ಗೆ ಅವರು ತಿಳಿದುಕೊಂಡ್ರು. ಅವರೊಬ್ಬ ಉತ್ತಮ ಸಂಧಾನಕಾರರು, 23ರ ಹರೆಯದಲ್ಲೇ ಸ್ಟಿಕ್ ಪೆನ್ ಅನ್ನು ಬಿಗ್ ಬಝಾರ್, ವಾಲ್‍ಮಾರ್ಟ್‍ನಂಹ ಜಾಗಕ್ಕೆ ತಂದು ನಿಲ್ಲಿಸಿದ್ದು ಅವರ ಹೆಗ್ಗಳಿಕೆ. ಮಾರ್ಕೆಟಿಂಗ್ ವೃತ್ತಿಯಲ್ಲಿ ಪಳಗಿದ್ರೂ, ಸುರಭಿ ಕಲಾರಾಧಕರು. ಕಲೆ ಅವರಿಗೆ ಒಲಿದಿತ್ತು. ತ್ರಿವೇಣಿ ಕಲಾ ಸಂಗಮದಲ್ಲಿ, ಸರೋಜ್ ಜೈನ್ ಅವರಿಂದ ಸುರಭಿ ಶಿಲ್ಪಕಲೆ ಬಗ್ಗೆ ಅಧ್ಯಯನ ಮಾಡಿದ್ರು. ಬಿಡುವಿನ ಸಮಯದಲ್ಲೆಲ್ಲ ಆಯಿಲ್ ಪೇಂಟಿಂಗ್ ಮಾಡುತ್ತಿದ್ರು. ಸುರಭಿ ಅವರ ಪತಿ ಕರಣ್ ಮೋದಿ, ಲಂಡನ್ ಬ್ಯುಸಿನೆಸ್ ಆಫ್ ಸ್ಕೂಲ್‍ನಲ್ಲಿ ಅಧ್ಯಯನಕ್ಕೆ ತೆರಳಿದ್ರು. ಆ ಸಮಯದಲ್ಲಿ ಕೂಡ ಸುರಭಿ ಕೈಕಟ್ಟಿ ಕೂರಲಿಲ್ಲ.

image


2011ರಲ್ಲಿ ಲಂಡನ್‍ನಲ್ಲೇ ಸುರಭಿ ಆರ್ಟ್ ಹಿಸ್ಟರಿ ಮಾಸ್ಟರ್ಸ್ ಪ್ರೋಗ್ರಾಮ್ ಸೇರಿಕೊಂಡ್ರು. 2012ರ ಆಗಸ್ಟ್‍ನಲ್ಲಿ ಲಂಡನ್‍ನಿಂದ ಮರಳಿದ ಸುರಭಿ, ತಮ್ಮ ಕಲಾಭ್ಯಾಸಕ್ಕೆ ಇನ್ನಷ್ಟು ಪ್ರೋತ್ಸಾಹಿಸಲು ಬಯಸಿದ್ದರು. ಕಲೆಯಲ್ಲೂ ಶಿಕ್ಷಣ ತರುವ ಬಗ್ಗೆ ಏನಾದ್ರೂ ಪ್ರಯತ್ನ ಮಾಡಬೇಕೆನಿಸಿತ್ತು. ಯುವ ಕಲಾವಿದರಿಗೆ ನೆರವಾಗಲೆಂದೇ ಫ್ಲಡ್‍ಲೈಟ್ ಫೌಂಡೇಶನ್ ಆರಂಭಿಸಿದ್ರು. ಸುರಭಿ, `ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಶನ್ ಆಪ್ ಫೈನ್ ಆಟ್ರ್ಸ್'ನ ಸಲಹಾ ಸಮಿತಿಯಲ್ಲಿದ್ದಾರೆ. ಉದ್ಯಮ ಮತ್ತು ವಿಶ್ವವಿದ್ಯಾನಿಲಯಗಳ ನಡುವೆ ಕೊಂಡಿಗಳನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.

ಸುರಭಿ ಮೋದಿ ಅವರ ಮನೆ ಕಲಾಕೃತಿಗಳ ಸಂಗಮ. ಕಲೆಯ ಬಗೆಗಿನ ಪುಸ್ತಕಗಳು, ಸಿಲಿಕೊನ್‍ನಿಂದ ಮಾಡಿದ ಮಾನವನ ತಲೆಯ ಶಿಲ್ಪ ನಮ್ಮನ್ನು ಆಕರ್ಷಿಸುತ್ತವೆ. ಸ್ಲೊಥ್ ಹೆಸರಿನ ಕಲಾಕೃತಿ ಏಳು ಪ್ರಾಣಾಂತಿಕ ಪಾಪಗಳ ಬೈಬಲ್ ಸಂದೇಶವನ್ನು ಸಾರುತ್ತದೆ. ಇದು ಮಾನವನ ಆಲಸ್ಯ ಮತ್ತು ನಿರುದ್ಯೋಗವನ್ನೂ ಪ್ರತಿನಿಧಿಸುತ್ತದೆ. 2013 ಮತ್ತು 2014ರಲ್ಲಿ 2 ಬಾರಿ ಸುರಭಿ ಕಲಾ ಪ್ರದರ್ಶನ ಏರ್ಪಡಿಸಿದ್ದರು. ಪಬ್ಲಿಕಾದಲ್ಲಿ ತಾವು ಕೂಡ ಕೆಲಸ ಮಾಡಬೇಕು ಅನ್ನೋದು ಅವರ ಆಸೆ. 9 ತಿಂಗಳ ಪುಟ್ಟ ಕಂದನ ತಾಯಿಯಾಗಿ, ಉದ್ಯಮಿಯಾಗಿ ಅವರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

image


2011ರಲ್ಲಿ ಒಲಿಂಪಿಯಾ ಆರ್ಟ್ ಫೇರ್ ಮೇಲ್ವಿಚಾರಣೆಯ ಅವಕಾಶ ಕೂಡ ಅವರಿಗೆ ಲಭಿಸಿತ್ತು. ಲಂಡನ್ ಮೂಲದ ಈ ಸಂಸ್ಥೆ ಆಟ್ರ್ಸ್ ಫಾರ್ ಇಂಡಿಯಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. 2013ರಲ್ಲಿ ಪಬ್ಲಿಕಾದ ಮೊದಲ ಆವೃತ್ತಿ ಬಿಡುಗಡೆಯಾದ್ರೆ, 2014ರ ಎಪ್ರಿಲ್‍ನಲ್ಲಿ ಎರಡನೇ ಆವೃತ್ತಿ ಹೊರಬಂದಿದೆ. ಬ್ಯೂಟಿ ಇನ್ ದಿ ಬೀಸ್ಟ್ ಹೆಸರಿನ ಕಾರ್ಯಕ್ರಮದ ಮೇಲ್ವಿಚಾರಣೆ ಹೊಣೆಯನ್ನು ಸುರಭಿ ಹೊತ್ತುಕೊಂಡಿದ್ರು.

ಪ್ರತಿಭೆಗಳ ಶೋಧ...

ಪ್ರತಿಭಾವಂತ ಯುವ ಪ್ರತಿಭೆಗಳನ್ನು ಹುಡುಕುವಲ್ಲಿ ಫ್ಲಡ್‍ಲೈಟ್ ಯಶಸ್ವಿಯಾಗಿದೆ. ಭುವಲ್ ಪ್ರಸಾದ್ ಕೂಡ ಅವರಲ್ಲೊಬ್ಬರು. ತಮ್ಮ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಅವರು ಮಾಡಿದ್ದು ಫ್ಲಡ್‍ಲೈಟ್‍ನಲ್ಲೇ. 2015ರಲ್ಲಿ ನಡೆದ ಬೀಜಿಂಗ್ ಬಿನ್ನೇಲ್‍ನಲ್ಲೂ ಅವರು ಪಾಲ್ಗೊಂಡಿದ್ರು. ಮುಂದಿನ ವರ್ಷ ಜರ್ಮನಿಯಲ್ಲಿ ನಡೆಯಲಿರೋ ಏಕವ್ಯಕ್ತಿ ಪ್ರದರ್ಶನಲ್ಲಿ ಭುವಲ್ ಪಾಲ್ಗೊಳ್ಳಲಿದ್ದಾರೆ. ಅನಂತ್ ಮಿಶ್ರಾ, ರಾಮ್ ದೊಗ್ರೆ, ಸೀತಾಂಶು ಮೌರ್ಯ ಹಾಗೂ ಅಭಿಷೇಕ್ ಪಾಠಕ್ ಕೂಡ ಫ್ಲಡ್‍ಲೈಟ್‍ನ ಭಾಗವಾಗಿದ್ದಾರೆ.

ಶೈಕ್ಷಣಿಕ ಪ್ರಭಾವ ಸುರಭಿ ಅವರ ಪ್ರಯತನ್ದ ಮೂಲಭೂತ ಆಧಾರ ಸ್ತಂಭ. ಆರ್ಟ್ ರೀಚ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಪಬ್ಲಿಕಾ ಕಾರ್ಯ ನಿರ್ವಹಿಸುತ್ತಿದೆ. ಆರ್ಟ್ ರೀಚ್, ಅನಾಥ ಮಕ್ಕಳಿಗಾಗಿ ಆಟ್ರ್ಸ್ ಪ್ರಾಜೆಕ್ಟ್‍ಗಳನ್ನು ನಡೆಸುತ್ತಿದೆ. ಇನ್ನು ಸೇಫ್ ಎಜುಕೇಟ್, ಲೈವ್ ಪೇಂಟಿಂಗ್‍ಗೆ ಬೇಕಾದ ಮೊಬೈಲ್ ಕಂಟೈನರ್ ಸ್ಕೂಲ್ ಅನ್ನು ನಡೆಸುತ್ತಿದೆ. ಕಲಾವಿದ ಭುವಲ್ ಪ್ರಸಾದ್ ಅವರ ನಿವಾಸದಲ್ಲೇ ಶಾಲೆ ನಡೆಸಲಾಗುತ್ತಿದೆ. ಜನರು ತಮಗಿಷ್ಟವಾದ ಕಲಾಕೃತಿಗೆ ವೋಟ್ ಮಾಡಲು ಪ್ರೋತ್ಸಾಹಿಸುವ ಕಾರ್ಯಕ್ಕೆ ಪಬ್ಲಿಕಾ ಕೈಹಾಕಿದೆ. ಆ ಕಲಾಕೃತಿಯನ್ನು ನಗರಕ್ಕೆ ಕೊಡುಗೆಯಾಗಿ ನೀಡಲಾಗುತ್ತದೆ, ಒಂದು ವರ್ಷ ಅದನ್ನು ಪ್ರದರ್ಶಿಸುವ ಮೂಲಕ ಕಲೆಗೆ ಇನ್ನಷ್ಟು ಪ್ರೋತ್ಸಾಹ ನೀಡುವುದು ಪಬ್ಲಿಕಾದ ಕನಸು.

ಭವಿಷ್ಯದಲ್ಲಿ ಪಬ್ಲಿಕಾಗೆ ಶಾಶ್ವತ ಸ್ಥಾನವನ್ನು ಕಂಡುಕೊಳ್ಳಬೇಕು ಅನ್ನೋದೇ ಸುರಭಿ ಅವರ ಮುಂದಿರುವ ಗುರಿ. ``ಸದ್ಯ ನಾವು ಒಂದು ತಿಂಗಳ ಕಾಲ ಕಲಾ ಹಬ್ಬವನ್ನು ಆಯೋಜಿಸುತ್ತಿದ್ದೇವೆ. ಇ ಕಲಾಕೃತಿಗಳಿಗೆ ಮಾಲ್‍ಗಳು, ವಿಮಾನ ನಿಲ್ದಾಣಗಳು, ಹೋಟೆಲ್‍ಗಳು ಸೇರಿದಂತೆ ವಿವಿಧೆಡೆ ಶಾಶ್ವತ ಸ್ಥಾನ ಸಿಗಬೇಕು'' ಎನ್ನುವ ಮೂಲಕ ಸುರಭಿ ತಮ್ಮಾಸೆಯನ್ನು ವ್ಯಕ್ತಪಡಿಸ್ತಾರೆ. ತನ್ನ ಎರಡನೇ ಆವೃತ್ತಿಯ ಮೂಲಕ ಈ ಕನಸನ್ನೂ ಪಬ್ಲಿಕಾ ಸದ್ಯದಲ್ಲೇ ನನಸು ಮಾಡಿಕೊಳ್ಳಲಿದೆ.

ಲೇಖಕರು: ಪೂನಂ ಗೋಯೆಲ್

ಅನುವಾದಕರು: ಭಾರತಿ ಭಟ್