ಎಲ್ಲರಂತಲ್ಲ ಈ ಕಾರ್ತಿಕ್​​...!

ವಿಶಾಂತ್​​

0

ಯಶಸ್ಸು ಅನ್ನೋದು ಯಾರಿಗೆ ಎಲ್ಲಿ ಸಿಗುತ್ತೆ ಅನ್ನೋದು ಗೊತ್ತಾಗಲ್ಲ. ಆದ್ರೆ ಛಲ ಬಿಡದೆ, ಕಷ್ಟ ಪಟ್ಟು ಗುರಿಯತ್ತ ಸಾಗಿದ್ರೆ, ಸಕ್ಸಸ್ ಅನ್ನೋದು ಕಟ್ಟಿಟ್ಟ ಬುತ್ತಿ. ಹಾಗೇ ಬಾಲ್ಯದಲ್ಲಿ ನೂರೆಂಟು ಕನಸು ಕಾಣ್ತೀವಿ. ಆದ್ರೆ ಅದನ್ನು ನನಸು ಮಾಡಿಕೊಳ್ಳೋಕೆ ಆಗೋದು ಕಷ್ಟ ಸಾಧ್ಯ. ಆದ್ರೆ ಇಲ್ಲೊಬ್ಬರು ತಾವು ಬಾಲ್ಯದಲ್ಲಿ ಕಂಡ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಹಲವು ಕ್ಷೇತ್ರಗಳಲ್ಲಿ ದುಡಿದು, ಕೊನೆಗೆ ಎಲ್ಲವನ್ನೂ ಬಿಟ್ಟು ಕನಸಿನ ಬೆನ್ನು ಹತ್ತಿ, ಇವತ್ತು ಅದನ್ನು ನನಸು ಮಾಡಿಕೊಂಡಿದ್ದಾರೆ. ಈಗ ಅದೇ ಕ್ಷೇತ್ರದಲ್ಲಿ ಅದ್ಭುತ ಯಶಸ್ಸು ಕಾಣುತ್ತಾ ಮುನ್ನುಗ್ಗುತ್ತಿದ್ದಾರೆ.

ಇವರು ಕಾರ್ತಿಕ್ ಮಳ್ಳೂರು

ಹೆಸರು ಕಾರ್ತಿಕ್ ಮಳ್ಳೂರ್. ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗಳೂರು. ಮೊದಲಿಂದಲೂ ಗ್ರಾಫಿಕ್ಸ್ ಅಂದ್ರೆ ಇಷ್ಟ, ಕ್ಯಾಮರಾ ಅಂದ್ರೆ ಎಲ್ಲಿಲ್ಲದ ಪ್ರೀತಿ. ಮಕ್ಕಳೆಲ್ಲಾ ಕ್ರಿಕೆಟ್ ಆಡಲು ಬ್ಯಾಟ್- ಬಾಲ್ ಹಿಡಿದು ಮೈದಾನಕ್ಕೆ ಓಡಿದ್ರೆ, ಕಾರ್ತಿಕ್ ಮಾತ್ರ ಪೆನ್ಸಿಲ್- ಪೇಪರ್ ಹಿಡಿದು ತಮ್ಮ ಪಾಡಿಗೆ ತಾವು ಪೆನ್ಸಿಲ್ ಸ್ಕೆಚ್ ಮಾಡುತ್ತಿದ್ದರಂತೆ. ಇವರನ್ನು ನೋಡಿದ ಪಕ್ಕದ ಮನೆಯವರೊಬ್ಬರು ಇವರನ್ನು ತಮ್ಮ ಮನೆಗೇ ಕರೆದುಕೊಂಡು ಹೋಗಿ ಪೇಜ್ ಮೇಕರ್ ಹಾಗೂ ಕೋರಲ್ ಡ್ರಾಯಿಂಗ್‍ಗಳನ್ನು ಹೇಳಿಕೊಟ್ಟರಂತೆ. ಹೀಗೆ 1992ರಲ್ಲಿ ತುಂಬಾ ಜನ ಕಂಪ್ಯೂಟರ್‍ಅನ್ನೇ ನೋಡಿರಲಿಲ್ಲ, ಆದ್ರೆ ಆಗಿನ್ನೂ 4ನೇ ತರಗತಿಯಲ್ಲಿದ್ದ ಕಾರ್ತಿಕ್ ಕಂಪ್ಯೂಟರ್ ಗ್ರಾಫಿಕ್ಸ್ ಕಲಿತು ಸೈ ಎನಿಸಿಕೊಂಡಿದ್ದರಂತೆ. ಕ್ರಮೇಣ ಅವರಿಗೆ ಆರನೇ ತರಗತಿಯಲ್ಲಿರುವಾಗ ಅವರ ತಂದೆ ಕಾರ್ತಿಕ್‍ಗೆ ಒಂದು ಕ್ಯಾಮರಾ ಕೊಡಿಸಿದ್ರಂತೆ. ಅದಾಗಲೇ ಗ್ರಾಫಿಕ್ಸ್​​ನಲ್ಲಿ ನಿಪುಣತೆ ಹೊಂದಿದ್ದ ಕಾರ್ತಿಕ್ ಆರನೇ ತರಗತಿಯಲ್ಲಿ ಫೋಟೋ ನೆಗಟಿವ್ ಡೆವೆಲಪ್ ಮಾಡಿ ಪ್ರಿಂಟ್ ಕೂಡ ಮಾಡುವುದನ್ನು ಕಲಿತಿದ್ದರಂತೆ.

3 ವರ್ಷಗಳಲ್ಲಿ 3 ಕೆಲಸ

ಕ್ರಮೇಣ ಕಾಲೇಜ್ ಸೇರಿದ ಕಾರ್ತಿಕ್‍ಗೆ ಓದಿಗಿಂತ ಹೆಚ್ಚಾಗಿ ಕಂಪ್ಯೂಟರ್ ಮತ್ತು ಕ್ಯಾಮರಾಗಳೇ ಸೆಳೆಯುತ್ತಿದ್ದವು. ಹೀಗಾಗಿಯೇ ಕಾಲೇಜ್ ಶಿಕ್ಷಣ ಮುಗಿಯುತ್ತಲೇ 2004ರಲ್ಲಿ ಸೌಂದರ್ಯ ಆ್ಯಡ್ ಏಜೆನ್ಸಿಗೆ ಕೆಲಸಕ್ಕೆ ಸೇರಿದ್ರು. ‘ಯಾವುದೇ ಕೋರ್ಸ್ ಮಾಡಿರಲಿಲ್ಲವಾದ್ರೂ, ನಾನು ಮಾಡಿದ್ದ ಕೆಲ ಪ್ರಾಜೆಕ್ಟ್​​ಗಳನ್ನು ನೋಡಿಯೇ ನನಗೆ ಮೊದಲ ಕೆಲಸ ದೊರೆಯಿತು. ಅದರಿಂದ ನನ್ನ ಆತ್ಮವಿಶ್ವಾಸ ಹತ್ತು ಪಟ್ಟು ಹೆಚ್ಚಾಗಿತ್ತು. ಹೀಗಾಗಿಯೇ ಆ ಕೆಲಸ ಬಿಟ್ಟು ಬೇರೆ ಕೆಲಸ ಸೇರಲು ನಿರ್ಧರಿಸಿ, ಹೊಸ ಕೆಲಸಕ್ಕೆ ಹುಡುಕಾಟ ನಡೆಸತೊಡಗಿದೆ. ಆದ್ರೆ ಡಿಪ್ಲೋಮಾ ಮುಗಿಸಿದ್ದ ನಾನು ಡಿಗ್ರಿ ಮಾಡಿಲ್ಲ ಅಂತ ಎಲ್ಲೂ ಕೆಲಸ ಸಿಗಲಿಲ್ಲ. ಹೀಗಾಗಿ ಹೆಚ್‍ಪಿ ಕಂಪನಿಯಲ್ಲಿ ಟ್ರಾನ್ಸ್​​ಪೋರ್ಟ್ ಕೋ-ಆರ್ಡಿನೇಟರ್ ಆಗಿ ಸೇರಿಕೊಳ್ಳಬೇಕಾಯ್ತು’ ಅಂತ ಹಳೆಯ ನೆನಪುಗಳನ್ನು ಸ್ಮರಿಸಿಕೊಳ್ತಾರೆ ಕಾರ್ತಿಕ್. ಕ್ರಮೇಣ ಕೆಲ ತಿಂಗಳ ಬಳಿಕ ಆ ಕೆಲಸವನ್ನೂ ಬಿಟ್ಟ ಕಾರ್ತಿಕ್ ಎಚ್‍ಡಿಎಫ್‍ಸಿ ಲೈಫ್ ಇನ್ಶೂರೆನ್ಸ್​​​ನಲ್ಲಿ ಏಜೆಂಟ್‍ಆಗಿ ಕೆಲಸಕ್ಕೆ ಸೇರಿದ್ರು. ಬ್ಯಾಂಕ್ ಐಆರ್‍ಡಿಎಮ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಪಾಸ್ ಆದ್ರೂ, ಅಲ್ಲಿ ಹಿರಿಯ ಅಧಿಕಾರಿ ಲಂಚ ಕೇಳಿದ ಪರಿಣಾಮ ಆ ಕೆಲಸವನ್ನೂ ತೊರೆದರು ಕಾರ್ತಿಕ್.

ಸ್ವಂತ ಉದ್ಯಮದಲ್ಲಿ ಯಶಸ್ಸು

ಹೀಗೆ ಮೂರು ವರ್ಷಗಳಲ್ಲಿ ಮೂರು ಕೆಲಸಗಳನ್ನು ತೊರೆದಿದ್ದ ಕಾರ್ತಿಕ್‍ಗೆ, ಸ್ವಂತ ತಾನೇ ಏನಾದ್ರೂ ಮಾಡಬೇಕು ಅನ್ನೋ ಛಲ ಬಂದಿತ್ತು. 2007ರಲ್ಲಿ ತಂದೆಯ ಸಹಾಯದೊಂದಿಗೆ ಎಲೆಕ್ಟ್ರಾನಿಕ್ ಸೆಕ್ಯುರಿಟಿ ಸಿಸ್ಟಮ್‍ಗಳ ಡಿಸ್ಟ್ರಿಬ್ಯೂಷನ್ ಪ್ರಾರಂಭಿಸಿದ್ರು. ಸುಮಾರು ಒಂದು ವರ್ಷ ಹಗಲು- ಇರುಳೆನ್ನದೆ ಕಾರ್ತಿಕ್ ಕೆಲಸ ಮಾಡಿದ್ರು. ಈ ಮೂಲಕ ಕರ್ನಾಟಕ ಮಾತ್ರವಲ್ಲ ಮುಂಬೈ ಮತ್ತು ತಿರುಪತಿಗೂ ಕಂಪನಿ ತನ್ನ ಕಾರ್ಯಾಚರಣೆ ವಿಸ್ತರಿಸಿತು. ಹೀಗೆ ಪ್ರಾರಂಭವಾದ ಕೇವಲ ಒಂದು ವರ್ಷದಲ್ಲೇ ಕಾರ್ತಿಕ್ ಅವರ ಕಂಪನಿ ಬೆಂಗಳೂರಿನ ಟಾಪ್ ಹತ್ತು ಕಂಪನಿಗಳ ಸಾಲಿಗೆ ಸೇರಿತ್ತು. ಅದರ ನಡುವೆಯೇ ಕಾರ್ತಿಕ್ ಯುನೈಟೆಡ್ ಇನ್ಸ್‍ಟಿಟ್ಯೂಟ್ ಆಫ್ ಬೆಲ್ಜಿಯಮ್‍ನಲ್ಲಿ ಎಂಬಿಎ ಪದವಿ ಮುಗಿಸಿದರು.

ಕ್ಯಾಮರಾ ಕೈಗೆ ಬಂತು, ಕನಸು ನನಸಾಯ್ತು

ಈ ಎಲ್ಲಾ ಸಂದರ್ಭದಲ್ಲೂ ಮನಸ್ಸಿನಲ್ಲೇ ಕ್ಯಾಮರಾಪ್ರೇಮವನ್ನು ಪೋಷಿಸುತ್ತಾ ಬಂದಿದ್ದ ಕಾರ್ತಿಕ್ 2009ರಲ್ಲಿ ಒಂದು ಕ್ಯಾಮರಾ ಖರೀದಿಸಿದ್ರು, ಫೋಟೋಗ್ರಫಿಯನ್ನೂ ಮಾಡತೊಡಗಿದ್ರು. ಈ ಮೂಲಕ ಮತ್ತೆ ತಮ್ಮ ಹಳೆಯ ಪ್ಯಾಷನ್‍ಗೆ ಮರುಜೀವ ನೀಡಿದ್ರು. ಹೀಗೆ ಕ್ಯಾಮರಾ ಕೈಗೆ ಬರುತ್ತಿದ್ದಂತೆಯೇ, ತಮ್ಮ ಬ್ಯುಸಿನೆಸ್ ಮೇಲೆ ಅವರು ಇಂಟರೆಸ್ಟ್ ಕಳೆದುಕೊಂಡ್ರು. ಜೊತೆಗೆ ಫುಲ್ ಟೈಮ್ ಫೋಟೋಗ್ರಫಿಗೆ ಧುಮುಕಿಬಿಟ್ಟರು ಕಾರ್ತಿಕ್. ಹಲವರ ಪರಿಚಯವಾಗಿ ಕಾರ್ತಿಕ್, ಕಿರುಚಿತ್ರ ಹಾಗೂ ಜಾಹೀರಾತುಗಳನ್ನು ಮಾಡತೊಡಗಿದ್ರು. ಜೊತೆಗೆ ಕನ್ನಡ ಚಿತ್ರವೊಂದರಲ್ಲಿ ಎರಡನೇ ನಾಯಕನಾಗಿ ನಟಿಸುವ ಅವಕಾಶವೂ ಅವರಿಗೆ ದೊರೆಯಿತು. ಕ್ರಮೇಣ ‘ಫ್ರೆಂಡ್ಸ್ ಇನ್ ಎ ಟ್ರ್ಯಾಪ್’ ಎಂಬ ಕಿರುಚಿತ್ರವನ್ನು ನಿರ್ಮಿಸಿ, ನಟಿಸಿದ್ರು ಅವರು. ಬಳಿಕ ‘ನಿರಂತರ’ ಎಂಬ ಕನ್ನಡ ಕಿರುಚಿತ್ರ, ದಕ್ಷಿಣ ಭಾರತ ಕಿರುಚಿತ್ರ್ಯೋತ್ಸವಗಳ ಪ್ರಶಸ್ತಿ ಪಡೆದಿರುವ ‘ಪಣಂ’ ಎಂಬ ತಮಿಳು ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಅನುಭವ ಪಡೆದ್ರು ಕಾರ್ತಿಕ್. ‘ಮನ್ಸು’ ಎಂಬ ಕಿರುಚಿತ್ರದ ಮೂಲಕ ಕಾರ್ತಿಕ್ ಛಾಯಾಗ್ರಹಣವನ್ನೂ ಪ್ರಾರಂಭಿಸಿದ್ರು. ‘‘ತಿಗರಿ’ ಎಂಬ ತಮಿಳು ಕಿರುಚಿತ್ರಕ್ಕೆ ಅದ್ಭುತವಾದ ರೆಸ್ಪಾನ್ಸ್ ದೊರೆಯಿತು, ಜೊತೆಗೂ ನನಗೂ ಒಳ್ಳೊಳ್ಳೆ ಅವಕಾಶಗಳು ಬರತೊಡಗಿದವು’ ಅಂತ ಹೇಳಿಕೊಳ್ಳುತ್ತಾರೆ ಕಾರ್ತಿಕ್.

ಬಳಿಕ ‘ಸುನೋನಾ’ ಎಂಬ ಕಿವುಡ ಮತ್ತು ಮೂಕ ವ್ಯಕ್ತಿಯ ಕುರಿತ ಅಂತಾರಾಷ್ಟ್ರೀಯ ಡಾಕ್ಯುಮೆಂಟರಿಗೂ ಒಳ್ಳೆ ರೆಸ್ಪಾನ್ಸ್ ದೊರೆಯಿತು. ‘ಯೂನಿಫಾರ್ಮ್’ ಎಂಬ ಕಿರುಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯ ಗರಿ ಸಿಕ್ಕಿತು. ‘ಬೋಂಡಾ ಸೂಪ್’, ‘ಕಬ್ ತಕ್’ ಸೇರಿದಂತೆ 24 ಕಿರುಚಿತ್ರಗಳನ್ನು ಮಾಡಿದ್ದಾರೆ ಕಾರ್ತಿಕ್. ಜೊತೆಗೆ ಚಲನಚಿತ್ರಗಳಲ್ಲೂ ತಮ್ಮ ಕ್ಯಾಮರಾ ಕೈಚಳಕ ತೋರುತ್ತಿರುವ ಅವರು, ‘ನಾನು ನನ್ನ ಕವಿತೆ’, ‘ಚಿರವಾದ ನೆನಪು’, ‘ದಂಡ್’ (2015ರಲ್ಲಿ 100 ದಿನ ಪೂರೈಸಿದ ತುಳು ಚಿತ್ರ. ಆಸ್ಟ್ರೇಲಿಯಾ, ದುಬೈ, ಬ್ರಿಟನ್‍ಗಳಲ್ಲೂ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ. ಬಿಬಿಸಿ ಚಾನಲ್‍ನಲ್ಲೂ ಚಿತ್ರದ ಹಾಡುಗಳು ಬಿತ್ತರಗೊಂಡಿವೆ), ‘ಕೋಮಾ’... ಹೀಗೆ ನಾಲ್ಕು ಚಲನಚಿತ್ರಗಳಿಗೆ ಕ್ಯಾಮರಾ ಹಿಡಿದಿದ್ದಾರೆ ಕಾರ್ತಿಕ್. ‘*121#’ ಎಂಬ ಮತ್ತೊಂದು ಕನ್ನಡ ಚಿತ್ರ ಸೇರಿದಂತೆ ಹಿಂದಿ ಸಿನಿಮಾದಿಂದಲೂ ಕಾರ್ತಿಕ್‍ಗೆ ಅವಕಾಶಗಳು ಅರಸಿ ಬಂದಿವೆ. ಇಂತಹ ಕಾರ್ತಿಕ್ ಮೈಸೂರ್ ಸ್ಯಾಂಡಲ್ ಕಾರ್ಬೊಲಿಕ್ ಸೋಪ್ ಜಾಹೀರಾತಿನಲ್ಲೂ ಕೆಲಸ ಮಾಡಿರೋದು ವಿಶೇಷ.

ಹೀಗೆ ಕಾರ್ತಿಕ್ ಗ್ರಾಫಿಕ್ ಡಿಸೈನರ್‍ಆಗಿ, ಲೈಫ್ ಇನ್ಶೂರೆನ್ಸ್ ಏಜೆಂಟ್ ಆಗಿ, ಟ್ರಾನ್ಸ್‍ಪೋರ್ಟ್ ಕೋಆರ್ಡಿನೇಟರ್‍ಆಗಿ.. ಕೆಲಸಗಳನ್ನು ಮಾಡಿ ಕೊನೆಗೆ ಈಗ ತಮ್ಮ ಕನಸಿನ ಬೆನ್ನು ಹತ್ತಿದ್ದಾರೆ. ಈ ಮೂಲಕ ಅದರಲ್ಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್.

Related Stories