ಸ್ಮೈಲೀಸ್ ಇಂಡಿಯಾದ ಸಮಾಜಮುಖಿ ಸೃಜನಾತ್ಮಕ ಕಾರ್ಯಸಾಧನೆ

ಟೀಮ್​​ ವೈ.ಎಸ್​​​.

0

ವಿಷ್ಣುಸೋಮನ್ ಶಾಲಾದಿನಗಳಲ್ಲೇ ಸೃಜನಶೀಲ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಅಭಿಲಾಷೆ ಹೊಂದಿದ್ದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿಕೊಂಡಿದ್ದರೂ ಅವರು ಸ್ಮೈಲೀಸ್ ಇಂಡಿಯಾ ಎಂಬ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಹಾಗೂ ಕ್ರೀಡೆಯನ್ನು ಪ್ರೋತ್ಸಾಹಿಸುವ ಎನ್‌ಜಿಓ ಒಂದನ್ನು ಸ್ಥಾಪಿಸಿದರು. ತಮ್ಮ ಪ್ಯಾಶನ್‌ನ ಅನಾವರಣಗೊಳಿಸಲು ಈ ಎನ್‌ಜಿಓ ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತದೆ. ಶಾಲಾದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ತಮ್ಮ ಹವ್ಯಾಸವಾಗಿತ್ತು. ಇಲ್ಲೇ ತಮ್ಮ ಪ್ಯಾಶನ್‌ ಗೆ ಮೊದಲ ವೇದಿಕೆ ದೊರಕಿದ್ದು. ಭೂಮಿಯಂತಹ ಸಂಘಟನೆಗಳು, ದುಬೈನ ಕೆಲವು ಸಂಘಟನೆಗಳು ತಮ್ಮ ಐಡಿಯಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ವೇದಿಕೆ ಒದಗಿಸಿದವು ಎನ್ನುತ್ತಾರೆ ವಿಷ್ಣು ಸೋಮನ್.

2011ರಲ್ಲಿ ಭಾರತಕ್ಕೆ ವಾಪಸಾದ ವಿಷ್ಣು ತಮ್ಮದೇ ಆದ ಒಂದು ತಂಡವನ್ನು ಕಟ್ಟಿದರು. ಪ್ರಸ್ತುತ, ಎನೇಬ್ಲ್ ಇಂಡಿಯಾ ಎಂಬ ಸಂಸ್ಥೆಗೆ ವಾಲಂಟೀರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಷ್ಣು ಎನೇಬ್ಲ್ ಸಂಸ್ಥೆಯ ವಾಲಂಟೀರ್ ಮತ್ತು ಇಂಟರ್ನ್‌ಶಿಪ್ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಯೋಜನೆ

“ಸಮಾಜದಲ್ಲಿ ಕೆಳಮಟ್ಟದಲ್ಲಿರುವ ಸಮುದಾಯಕ್ಕೂ ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ತಂತ್ರಜ್ಞಾನವನ್ನು ತಲುಪಿಸುವುದು ಮತ್ತು ಈ ವರ್ಗದ ಜನರಿಗೆ ತಮ್ಮ ಪ್ಯಾಶನ್ ಕುರಿತು ತಿಳಿದುಕೊಳ್ಳುವುದು ಮತ್ತು ಪ್ರದರ್ಶಿಸಲು ಸಹಾಯ ಮಾಡುವುದು ಸಂಸ್ಥೆಯ ಗುರಿ. ಸಮಾಜದ ಪ್ರತಿಯೊಬ್ಬರಿಗೂ ತಮ್ಮ ಪ್ಯಾಶನ್ ಅನ್ನು ಪ್ರದರ್ಶಿಸಲು ಸಹಾಯ ಮಾಡುವುದು ಅತ್ಯಗತ್ಯ ಅಂಶ. ಹೀಗಾಗಿ ಜನರ ಪ್ಯಾಶನ್ ಅನ್ನು ನಮ್ಮ ಸಂಘಟನೆಯ ಟಾಸ್ಕ್‌ ಗಳ ಮೂಲಕ ಬೆಳಕಿಗೆ ತರುವ ಪ್ರಯತ್ನ ನಮ್ಮದು. ತಮ್ಮ ಭವಿಷ್ಯವನ್ನು ಈಗಾಗಲೇ ರೂಪಿಸಿಕೊಂಡಿರುವ ಅಥವಾ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಅವಕಾಶಕ್ಕಾಗಿ ಕಾಯುವ ಅನೇಕ ವಾಲಂಟೀರ್ಸ್ ನಮ್ಮ ಬಳಿ ಇದ್ದಾರೆ” ಎನ್ನುತ್ತಾರೆ

ಸಾಕಷ್ಟು ಮಂದಿ ವಾಲಂಟೀರ್ಸ್‌ ಅನ್ನು ಸೆಳೆದಿರುವ ಕೆಲವು ಆಸಕ್ತಿದಾಯಕ ಉಪಕ್ರಮಗಳು ಇಲ್ಲಿವೆ.

ಪೈಂಟ್ ಫಾರ್ ಎ ಕಾಸ್(ನಿರ್ದಿಷ್ಟ ಕಾರಣಕ್ಕಾಗಿ ಗೋಡೆಗಳಿಗೆ ಬಣ್ಣ ಬಳಿಯೋಣ): ಒಂದು ನಿರ್ದಿಷ್ಟ ವಿಚಾರವನ್ನು ಪ್ರಚಾರಪಡಿಸಲು ವಾಲಂಟೀರ್ಸ್ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು, ಗ್ರಂಥಾಲಯಗಳ ಗೋಡೆಗಳ ಮೇಲೆ ಪೈಂಟ್ ಮಾಡುತ್ತಾರೆ. ಗೋಡೆಗಳನ್ನು ರಕ್ಷಿಸುವುದು ಪ್ರಾಥಮಿಕ ಉದ್ದೇಶವಾದರೂ, ಪೈಂಟಿಂಗ್ ಮೂಲಕ ಒಂದು ನಿರ್ದಿಷ್ಟ ವಿಚಾರವನ್ನು ಪ್ರಚಾರಪಡಿಸಲು ಸಾಧ್ಯ ಎಂಬ ಕಾರಣದಿಂದ ಹೀಗೆ ಮಾಡಲಾಗುತ್ತದೆ.

ಲೆಟ್ಸ್ ರಿಸೈಕಲ್(ಮರುಬಳಕೆ ಮಾಡೋಣ): ತಂಡದ ಸದಸ್ಯರು ಮತ್ತು ಪರಿಣಿತರು ಮರುಬಳಕೆಯ ಕಾರ್ಯಾಗಾರಗಳನ್ನು ಏರ್ಪಡಿಸಿ ಆ ಮೂಲಕ ವಾಲಂಟೀರ್ಸ್ ಮತ್ತು ವಿದ್ಯಾರ್ಥಿಗಳಿಗೆ ಮರುಬಳಕೆಯ ಪ್ರಾಮುಖ್ಯತೆ ಮತ್ತು ವೇಸ್ಟ್ ಮ್ಯಾನೇಜ್‌ಮೆಂಟ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ.

ಸ್ಮೈಲ್ ಟಿವಿ: ಇಲ್ಲಿ ಉತ್ತಮ ಗುಣಮಟ್ಟದ ವಿಚಾರಗಳನ್ನು ತಿಳಿಸುತ್ತಾ ಎನ್‌ಜಿಓಗಳಿಗೆ ಸಹಕಾರ ನೀಡಲು ಹವ್ಯಾಸಿ ಛಾಯಾಗ್ರಾಹಕರು ವಾಲಂಟೀರ್ಸ್ ಆಗಿ ರಂಗಕ್ಕಿಳಿಯುತ್ತಾರೆ. ವೃತ್ತಿಪರ ಛಾಯಾಗ್ರಹಣ ಮತ್ತು ಚಲನಚಿತ್ರ ತಯಾರಿಕೆ ಇವು ದುಬಾರಿ ವಿಚಾರಗಳು. ಇಂಥ ಸೇವೆಗಳನ್ನು ಪಡೆಯಲು ಎನ್‌ಜಿಓಗಳು ಅಸಮರ್ಥವಾಗಿರುತ್ತವೆ. ಹೀಗಾಗಿ ಇಲ್ಲಿ ಹವ್ಯಾಸಿ ಛಾಯಾಗ್ರಾಹಕರಿಗೆ ವೇದಿಕೆ ಒದಗಿಸಲಾಗುತ್ತದೆ.

ಆ್ಯನುವಲ್ ಟಾಯ್ ಡ್ರೈವ್(ವಾರ್ಷಿಕ ಗೊಂಬೆ ಸಂಗ್ರಹ ಚಳುವಳಿ): ಇದೊಂದು ಹೊಸ ಕ್ರಮ. ಉತ್ತಮ ಸ್ಥಿತಿಯಲ್ಲಿರುವ ಗೊಂಬೆಗಳನ್ನು ಸಂಗ್ರಹಿಸುವ ಸ್ವಯಂಸೇವಕರು, ಆ ಗೊಂಬೆಗಳನ್ನು ಕೊಳಗೇರಿ ಪ್ರದೇಶದ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸುತ್ತಾರೆ. ಯಾವುದೇ ಸ್ವಯಂ ಸೇವಕ ತನ್ನದೇ ಆದ ಯೋಜನೆಯೊಂದಿಗೆ ಬರಬಹುದಾದ ಅವಕಾಶ ಇದೆ. ಅದನ್ನು ಜಾರಿಗೊಳಿಸುವ ಪ್ರಯತ್ನ ಸಂಸ್ಥೆಯದ್ದು. ಇಂತಹ ಕೆಲ ಹೊಸ ಐಡಿಯಾಗಳೆಂದರೆ ಐಸ್‌ಕ್ರೀಮ್ಸ್ ಆನ್ ಸ್ಟ್ರೀಟ್, ದೃಷ್ಟಿಹೀನರಿಗೆ ಮೇಕ್ ಓವರ್ ಮೇನಿಯಾ, ಅನಾಥಾಶ್ರಮಗಳಿಗೆ ಸಂಡೇ ಸಪ್ರೈಸ್ ಎಂಬ ಯೋಜನೆಗಳು.

ತಾಂಡವ್: ಒಂದು ವಿಶಿಷ್ಟ ನೃತ್ಯಹಬ್ಬ

ಅಂಧರು, ವಿಕಲ ಚೇತನರು, ಕಿವಿ ಕೇಳದವರು, ಮೂಕರು, ಬುದ್ಧಿಮಾಂದ್ಯರು ಇತ್ಯಾದಿ ಅಂಗವೈಕಲ್ಯತೆಗಳಿಂದ ಬಳಲುತ್ತಿರುವವರಿಗಾಗಿಯೇ ಇರುವುದು ತಾಂಡವ್ ನೃತ್ಯ ಹಬ್ಬ. ಇದರೊಂದಿಗೆ ಅನಾಥಾಲಯದ ಮಕ್ಕಳು, ಸಮಾಜದ ಕೆಳಸ್ತರದ ಪ್ರತಿಭಾವಂತರೂ ಈ ಹಬ್ಬದಲ್ಲಿ ಭಾಗವಹಿಸುತ್ತಾರೆ. ಅಲ್ಲದೇ ಸ್ವಯಂಸೇವಕರು ಅಂಧರಿಗೆ ಮಾರ್ಗದರ್ಶನ ಮಾಡುವುದು, ಕೇಳುವಿಕೆಯ ಸಮಸ್ಯೆ ಇರುವವರಿಗಾಗಿ ಸಂಕೇತಿಕ ಭಾಷೆಯ ಮೂಲಕ ಸಂಭಾಷಿಸುವ ಕೆಲಸಗಳನ್ನೂ ಸಹ ಮಾಡುತ್ತಾರೆ. ಅಲ್ಲದೇ ಸಂಗೀತದ ಲಯವನ್ನು ಗ್ರಹಿಸಲು ಸಂಗೀತದ ಸಂಯೋಜನೆಗಳ ಮೂಲಕ ಸಹಾಯ ಮಾಡುತ್ತಾರೆ.

ಈ ಹಬ್ಬವನ್ನು ಆಚರಿಸಲು ಎಲ್ಲಾ ಹಿನ್ನೆಲೆಗಳುಳ್ಳ ಜನರೂ ಬರುತ್ತಾರೆ. ಅಂಗವೈಕಲ್ಯತೆ ಹೊಂದಿರುವ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಒಂದು ಉತ್ತಮ ವೇದಿಕೆಯಾಗಿದೆ ಎನ್ನುತ್ತಾರೆ ವಿಷ್ಣು.

ಉತ್ತಮ ಸಮಾಜಕ್ಕಾಗಿ ಸೋಷಿಯಲ್ ಮೀಡಿಯಾ ಡೇ ಫಾರ್ ಗುಡ್ ಎಂಬ ಕಾರ್ಯಕ್ರಮವನ್ನೂ ಸಹ ಸ್ಮೈಲೀಸ್ ಇಂಡಿಯಾ ಆಯೋಜಿಸುತ್ತಿದೆ. ಬೆಂಗಳೂರಿನಲ್ಲಿರುವ ಸ್ವಯಂಸೇವಕರು, ಎನ್‌ಜಿಓಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಲು ಸಹಾಯ ಮಾಡುವ ಕಾರ್ಯಕ್ರಮ ಇದಾಗಿದೆ.

ಪರಿಣಾಮ

2014ರ ತಾಂಡವ್ ನೃತ್ಯ ಹಬ್ಬದಲ್ಲಿ ಸುಮಾರು 122 ಮಂದಿ ಸ್ವಯಂಸೇವಕರು 200ಕ್ಕೂ ಹೆಚ್ಚು ಮಕ್ಕಳಿಗೆ ಸಹಾಯ ಮಾಡಿದ್ದರು. ಮಕ್ಕಳು 7 ವಿಧದ ನೃತ್ಯ ಶೈಲಿಯನ್ನು ಪ್ರದರ್ಶಿಸಿದ್ದರು.

ತಾಂಡವ್, ಸ್ಮೈಲೀಸ್ ಇಂಡಿಯಾದ ಅತೀ ದೊಡ್ಡ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಮೂಲಕ ಸ್ವಯಂ ಸೇವಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಸ್ವಯಂಸೇವಕರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಅಷ್ಟೇನೂ ಇಷ್ಟಪಡದ ಸಂಸ್ಥೆ ದೇಶಾದ್ಯಂತ ಸ್ವಯಂಸೇವಕರನ್ನು ಸೃಷ್ಟಿಸಲು ಹೊರಟಿದೆ. ಹೀಗಾಗಿ ವಾಲಂಟೀರ್ ಫ್ಯಾಕ್ಟರಿ ಎಂಬ ಯೋಜನೆಯನ್ನು ಪರಿಚಯಿಸುವ ಪ್ರಯತ್ನದಲ್ಲಿದೆ. ಪ್ರತಿ ವರ್ಷವೂ 5000 ಸ್ವಯಂ ಸೇವಕರನ್ನು ತನ್ನೊಂದಿಗೆ ಸೇರಿಸಿಕೊಳ್ಳುವುದು ಸ್ಮೈಲೀಸ್ ಇಂಡಿಯಾದ ಗುರಿಯಾಗಿದೆ.

ಸ್ಮೈಲೀಸ್ ಇಂಡಿಯಾದ ತಂಡ

ವಿಷ್ಣು ಅವರನ್ನು ಹೊರತುಪಡಿಸಿ ಕೋರ್ ಟೀಮ್ ನಲ್ಲಿರುವ ಇತರ ಸದಸ್ಯರು, ರೇಜಿ, ವಿಶಾಲ್, ಅಪೂರ್ವ ಮತ್ತು ದಿವ್ಯ. “ರೇಜಿಯವರು ನಾಗಾಲ್ಯಾಂಡ್‌ನಲ್ಲಿ ಒಂದು ಶಾಲೆಯನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಸ್ಮೈಲೀ ಟಿವಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ನಾಗಾಲ್ಯಾಂಡ್‌ನಲ್ಲೂ ಕೆಲವು ಚಟುವಟಿಕೆಗಳನ್ನು ನಡೆಸಲು ಚಿಂತಿಸಲಾಗಿದೆ. ವಿಶಾಲ್ ಸೋಮನ್, ವಿಷ್ಣು ಅವರ ಸೋದರ. ಅವರೊಬ್ಬ ಸ್ವತಂತ್ರ ಛಾಯಾಗ್ರಾಹಕ, ಸ್ಮೈಲೀಸ್ ಸಂಸ್ಥೆಯ ಸಂಪೂರ್ಣ ಮಾಧ್ಯಮ ಕ್ಷೇತ್ರವನ್ನು ಅವರು ನೋಡಿಕೊಳ್ಳುತ್ತಿದ್ದಾರೆ. ಅಪೂರ್ವ ಒಬ್ಬ ಸ್ವಯಂಸೇವಕರಾಗಿದ್ದು, ಸಹಭಾಗಿತ್ವದ ಕಾರ್ಯಕ್ರಮಗಳನ್ನು ಆಯೋಜಿಸುವ ಜವಾಬ್ದಾರಿ ಹೊತ್ತಿದ್ದಾರೆ. ದಿವ್ಯಾ ಸಂಸ್ಥೆಯ ಅತೀ ಕಿರಿಯ ಸದಸ್ಯೆಯಾಗಿದ್ದು, ಕಾಲೇಜುಗಳಲ್ಲಿ ಕ್ಯಾಂಪೇನ್‌ಗಳನ್ನು ಮಾಡಲು ಸಿದ್ಧರಾಗುತ್ತಿದ್ದಾರೆ” ಎಂದು ವಿಷ್ಣು ಸದಸ್ಯರುಗಳ ಪಾತ್ರ ಮತ್ತು ಜವಾಬ್ದಾರಿಗಳನ್ನು ವಿವರಿಸುತ್ತಾರೆ.

ಕಚ್ಛಾವಸ್ತುಗಳನ್ನು ಒದಗಿಸುವ ಕಾರ್ಪೋರೇಟ್ ಸಂಸ್ಥೆಗಳ ಸಹಾಯ ಪಡೆಯುತ್ತಿರುವ ಸ್ಮೈಲೀಸ್ ಸಂಸ್ಥೆ ಕ್ರೌಡ್ ಫಂಡಿಂಗ್ ಮೂಲಕವೂ ಹಣ ಸಂಗ್ರಹಣೆ ಮಾಡುತ್ತಿದೆ. ಸರ್ಕಾರದೊಂದಿಗೆ ಸೇರಿ ಕೆಲವು ಕೆಲಸಗಳನ್ನು ಮಾಡುವ ಬಗ್ಗೆಯೂ ಚಿಂತಿಸಲಾಗುತ್ತಿದೆ.

ಸರಿಯಾದ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಸ್ವಯಂಸೇವಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ವಿಷ್ಣು ಅವರ ಮುಂದಿರುವ ಪ್ರಮುಖ ಸವಾಲಾಗಿದೆ. ವಿದ್ಯಾರ್ಥಿಗಳನ್ನು ಸ್ವಯಂಸೇವಕರನ್ನಾಗಿಸಿಕೊಳ್ಳುವ ಕುರಿತೂ ಸಹ ಚಿಂತಿಸಲಾಗುತ್ತಿದೆ. ವಿದ್ಯಾರ್ಥಿಗಳ ಆಸಕ್ತಿಯನ್ನು ಸೆಳೆಯುವುದಕ್ಕಾಗಿ ಇನ್ನಷ್ಟು ಚಟುವಟಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಕಾರಾತ್ಮಕವಾದ ಹಾಗೂ ಗುಣಮಟ್ಟದ ಜೀವನಶೈಲಿಯನ್ನು ಕಲ್ಪಿಸಿಕೊಡುವುದು ವಿಷ್ಣು ಅವರ ಕನಸಾಗಿದೆ. ಒಟ್ಟಿನಲ್ಲಿ ಸ್ಟೈಲೀಸ್​​​​​ ಹಲವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದೆ.

Related Stories