ನೀವು ಯಾವ ಹಿನ್ನೆಲೆಯಿಂದ ಬಂದಿದ್ದೀರಿ ಅನ್ನುವುದು ಮುಖ್ಯವಲ್ಲ-ಇದು ಪ್ರಿಯಾಂಕ ಕಥೆ

ಟೀಮ್​ ವೈ.ಎಸ್​​.

ನೀವು ಯಾವ ಹಿನ್ನೆಲೆಯಿಂದ ಬಂದಿದ್ದೀರಿ ಅನ್ನುವುದು ಮುಖ್ಯವಲ್ಲ-ಇದು ಪ್ರಿಯಾಂಕ ಕಥೆ

Monday October 26, 2015,

4 min Read

“ನನ್ನ ತಾಯಿ ನನ್ನ ಬಗ್ಗೆ ಸಾಕಷ್ಟು ಹೆಮ್ಮೆ ಇಟ್ಟುಕೊಂಡಿದ್ದಾರೆ. ಅವರ ಮಧ್ಯವಯಸ್ಸಿನಲ್ಲಿ ಮಗನ ಬದಲಿಗೆ ಮಗಳನ್ನು ಬೆಳೆಸುತ್ತಾ ಕಷ್ಟಪಡುತ್ತಿರುವುದನ್ನು ನೋಡಿ ಈ ಸಮಾಜದಿಂದ ಸಾಕಷ್ಟು ಟೀಕೆಯ ಮಾತುಗಳನ್ನು ಅವರು ಕೇಳಿದ್ದರು. ಆದರೂ ಇಂದು ಅವರು ಪ್ರತಿಯೊಬ್ಬರಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಇವಳು ನನ್ನ ಮಗಳು ಎಂದು.” ಇದು ಪ್ರಿಯಾಂಕ ಹೇಳಿರುವ ಮಾತುಗಳು.

16 ವರ್ಷದ ಪ್ರಿಯಾಂಕ ಪೂನಾದ ಕೆಳ ಆದಾಯದ ವರ್ಗದ ಎಪಿಫೆನಿ ಇಂಗ್ಲೀಷ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಬೇಸಿಗೆಯಲ್ಲಿ ಇಟಲಿಗೆ ತೆರಳುವ ಅವಕಾಶ ಪ್ರಿಯಾಂಕಗೆ ಲಭಿಸಿದೆ. ಇಟಲಿಯ ಏಡ್ರಿಯಾಟಿಕ್​​ನ ಯುನೈಟೆಡ್ ವರ್ಲ್ಡ್ ಕಾಲೇಜ್​​ನಲ್ಲಿ 2 ವರ್ಷದ ಕಲಿಕೆಯ ಅವಕಾಶವನ್ನು ಅವರು ಗಿಟ್ಟಿಸಿಕೊಂಡಿದ್ದಾರೆ. ಪ್ರಿಯಾಂಕ ಅಲ್ಲಿ ಇತಿಹಾಸ, ಗಣಿತಶಾಸ್ತ್ರ, ಜೀವಶಾಸ್ತ್ರ, ಹೈಯರ್ ಇಂಗ್ಲೀಷ್ ಹಾಗೂ ಇಟಾಲಿಯನ್ ಕಲಿಯುವ ಆಶಯ ಹೊಂದಿದ್ದಾರೆ.

image


ಜೀವನ ಪ್ರಿಯಾಂಕಾಗೆ ಸಾಕಷ್ಟು ತೊಡಕುಗಳನ್ನು ನೀಡಿತಾದರೂ ಹಿಂದೆ ಸರಿಯುವ ಸ್ವಭಾವ ಅವರದಲ್ಲ. ಅವರು ತಮ್ಮ ತಾಯಿಯೊಂದಿಗೆ ಬದುಕುತ್ತಿದ್ದಾರೆ. ಅವರ ತಂದೆ ಜೈಲಿನಲ್ಲಿದ್ದಾರೆ. ಒಂಟಿ ಮಹಿಳೆ ಮಗಳೊಂದಿಗೆ ಬದುಕುವ ಸ್ಥಿತಿ ಆರ್ಥಿಕವಾಗಿ ಹಿಂದುಳಿದ ಸಮುದಾಯದಲ್ಲಿ ನಿಜಕ್ಕೂ ದುರ್ಬರ.

ತನ್ನ ತಾಯಿಯ ತ್ಯಾಗದ ಬಗ್ಗೆ ಹೇಳಿಕೊಂಡಿರುವ ಪ್ರಿಯಾಂಕ, ನಾನು ಹುಟ್ಟಿದ ದಿನದಿಂದ ಇಲ್ಲಿಯವರೆಗೂ ಅಮ್ಮ ನನಗೆ ಯಾವ ಕೊರತೆ ಕಾಣಿಸದಂತೆ ಬೆಳೆಸಿದ್ದಾರೆ. ಕುಟುಂಬದ ಮುಖ್ಯಸ್ಥರಾದ ತಂದೆ ಜೈಲಿನಲ್ಲಿದ್ದಾಗ, ನನಗೆ ತಂದೆಯ ಕೊರತೆ ಕಾಣಿಸದಂತೆ ಬೆಳೆಸಿದರು. ತಾಯಿಯೇ ಎಲ್ಲಾ ಆಗಿ ಕುಟುಂಬವನ್ನು ನಿರ್ವಹಿಸಿದರು. ಯಾವುದೇ ನೆರವಿಲ್ಲದೇ ಏಕಾಂಗಿಯಾಗಿ ಸಮುದಾಯದ ಕೀಳು ಜನರ ಟೀಕೆಯ ಮಧ್ಯೆಯೂ ನನ್ನನ್ನು ಸಮರ್ಪಕವಾಗಿ ಬೆಳೆಸಿದರು ಅಂತ ಪ್ರಿಯಾಂಕ ಹೇಳಿಕೊಂಡಿದ್ದಾರೆ.

ಮಾಯಾ ಹಾಗೂ ಪ್ರಿಯಾಂಕರ ಸಂಪರ್ಕ:

2013ರಲ್ಲಿ ಟೀಚ್ ಫರ್ ಇಂಡಿಯಾ ಶೈಕ್ಷಣಿಕವಾಗಿ ಹೊಸ ಆಯಾಮದ ಕಲಿಕೆಗೆ ಮುಂದಾಗಿತ್ತು. ಇದೇ ಸಂದರ್ಭದಲ್ಲಿ ಟೀಚ್ ಫರ್ ಇಂಡಿಯಾ ವಿದ್ಯಾರ್ಥಿಗಳು ಹಾಗೂ ಬ್ರಾಡ್ವೇ ಆರ್ಟಿಸ್ಟ್​​ಗಳ ನಡುವೆ ಸಹಭಾಗಿತ್ವ ಹೊಂದಿದ ಮಾಯಾ ಅನ್ನುವ ಸಂಸ್ಥೆ ಹುಟ್ಟಿಕೊಂಡಿತು.

ಮಾಯಾ ಅನ್ನುವ ಸಂಸ್ಥೆ ತನ್ನದೇ ಆದ ಪ್ರತ್ಯೇಕ ಸಂಗೀತದ ಮಾದರಿಯೊಂದನ್ನು ಹೊಂದಿದೆ. ದಕ್ಷಿಣ ಭಾರತದ ಕುಟ್ಟಿ, ಇಂಡಿಯಾಗೋದ ಮಾತನಾಡುವ ಗಿಳಿ, ಅತೀಂದ್ರಿಯ ಶಕ್ತಿಯ ನೂಲುವ ಯಂತ್ರ, 9 ಹೆಡೆಗಳ ಸರ್ಪ ಸ್ಕಾ, ಮುಂತಾದ ವಿಶಿಷ್ಟ ಪಾತ್ರಗಳ ನಟನೆಯ ಪ್ರಯೋಗವೂ ಇದರಲ್ಲಿದೆ.

ಬ್ರಾಡ್ವೇನ ನಟ ನಿಕ್ ಡೆಲ್ಟನ್ ಜೊತೆ ಸಂಗೀತವನ್ನು ಸಹ ನಿರ್ದೇಶಿಸಿದ ಸನಾಯ ಬರೋಚಾ ಹೇಳಿರುವಂತೆ, ಇದೊಂದು ಪ್ರಯೋಗಾತ್ಮಕ ಪ್ರಯತ್ನ. ಅರ್ಥಿಕವಾಗಿ ಹಿಂದುಳಿದಿರುವ ಕಡಿಮೆ ಆದಾಯದ ಸಮುದಾಯಗಳ ವಿದ್ಯಾರ್ಥಿಗಳು, ಕಲೆಯ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದೇ ಇರುವವರನ್ನು ಆಯ್ದು ಅವರಿಗೇ ಸೂಕ್ತ ಕಲಿಕೆ ಹಾಗೂ ತರಬೇತಿ ನೀಡುವುದು ಸಂಸ್ಥೆಯ ಉದ್ದೇಶ. ಶೈಕ್ಷಣಿಕ ಸೌಕರ್ಯ ನೀಡುವ ಜೊತೆಯ ಕಲೆಯ ಜ್ಞಾನ ಮೂಡಿಸುವುದಕ್ಕಾಗಿ ಭಾರತದ ಬೇರೆ ಬೇರೆ ಭಾಗಗಳ ಕೆಳ ಸಮುದಾಯದ ಸುಮಾರು 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಮಕ್ಕಳಿಗೆ ಪರಿಚಯವೇ ಇಲ್ಲದ ಪ್ರಪಂಚವನ್ನು ಪರಿಚಯಿಸಿ ತರಬೇತಿ ನೀಡುವುದರಿಂದ ಅವರ ಸಾಮರ್ಥ್ಯ ಹಾಗೂ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಂತಾಗುತ್ತದೆ.

image


ಪ್ರಿಯಾಂಕ ಹಾಗೂ ಸನಯಾ:

ಪ್ರಿಯಾಂಕ ಕಲಿಯುತ್ತಿರುವ ಶಾಲೆಯಲ್ಲಿ 2009ರಿಂದಲೂ ಟೀಚ್ ಫರ್ ಇಂಡಿಯಾ ಈ ರೀತಿಯ ಫೆಲೋಶಿಪ್​​ಗಳನ್ನು ನೀಡುತ್ತಾ ಬಂದಿತ್ತು. ಪ್ರಿಯಾಂಕ ಈ ಕ್ಲಾಸ್ ರೂಂನ ವಿದ್ಯಾರ್ಥಿನಿಯಾಗಿರಲಿಲ್ಲ. ಆದರೂ ಅವರು ಮಾಯಾದ ಕಲ್ಪನೆಯ ಕಲೆ ಸ್ಕಾ ಪಾತ್ರವನ್ನು ಅಭಿನಯಿಸಲು ಹಾಗೂ ತಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಲು ಹೇಗೆ ಸಾಧ್ಯವಾಯಿತು ಅನ್ನುವುದು ಕೌತುಕದ ಪ್ರಶ್ನೆ.

ನಿಧಾನಗತಿಯಲ್ಲಿ ಆದ್ಯತೆ

ಶಾಲೆಯಲ್ಲಿ ಪ್ರಿಯಾಂಕ ಅಭಿನಯಿಸುವುದನ್ನು ಗಮನಿಸಿದ್ದ ಶಾಲೆಯ ಶಿಕ್ಷಕ ಅಹೋನಾ ಕೃಷ್ಣ ಟೀಚ್ ಫರ್ ಇಂಡಿಯಾದ ಆಡಿಷನ್​​ಗೆ ಹೋಗಲು ಸಲಹೆ ನೀಡಿದ್ದರು. “ಅಹೋನಾ ದೀದಿ (ಆ ಶಾಲೆಯಲ್ಲಿ ಶಿಕ್ಷಕರನ್ನು ಭಯ್ಯಾ ಎಂದೂ ಶಿಕ್ಷಕಿಯರನ್ನು ದೀದಿ ಎಂದೂ ಕರೆಯಲಾಗುತ್ತದೆ) ನನಗೆ ರಾತ್ರಿ 11 ಗಂಟೆಗೆ ಆಡಿಷನ್​​ಗೆ ತೆರಳಲು ತಿಳಿಸಿದರು. ಮರುದಿನ ನಾನು ಆಡಿಷನ್​​ಗೆ ತೆರಳಿದೆ. ನನ್ನ ತಾಯಿ, ನಾನು ನಾಟಕಗಳಲ್ಲಿ ಅಭಿನಯಿಸುವುದನ್ನು ನೋಡಲು ಇಚ್ಛಿಸುತ್ತಿದ್ದರು. ಹಾಗಾಗಿ ನಾಟಕವೆಂದು ನಾನು ಆಡಿಷನ್​​ನಲ್ಲಿ ಅಭಿನಯಿಸಲು ಒಪ್ಪಿದೆ. 320 ಮಕ್ಕಳ ಆ ಆಡಿಷನ್​​ನಲ್ಲಿ ಅಂತಿಮವಾಗಿ 30 ಮಕ್ಕಳನ್ನು ಆಯ್ಕೆಮಾಡಲಾಯಿತು. ಮಾಯಾದೊಂದಿಗಿನ ಈ ಪಯಣದಲ್ಲಿ ಮಾರ್ಗದರ್ಶಕರು ಸಾಕಷ್ಟು ಪ್ರೋತ್ಸಾಹ ನೀಡಿದ್ದರು” ಅಂತ ಪ್ರಿಯಾಂಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪರಿಣಾಮ:

ಶಾಲೆಯಲ್ಲಿ ನಡೆಯುತ್ತಿದ್ದ ತರಬೇತಿಯನ್ನು ಗಮನಿಸಿಕೊಳ್ಳುವ ಸನಯಾ ಮಾಯಾದ ಕಾರ್ಯವೈಖರಿಯನ್ನು ವಿವರಿಸಿದ್ದಾರೆ. ಮಾಯಾದ ಕಾರ್ಯಚಟುವಟಿಕೆ ಕೇವಲ ಶೈಕ್ಷಣಿಕ ವಿಭಾಗಕ್ಕೆ ಸೀಮಿತವಾಗದೇ, ಪಠ್ಯೇತರ ಚಟುವಟಿಕೆಗಳನ್ನೂ ಪ್ರೋತ್ಸಾಹಿಸುವ ಇಂಟಿಗ್ರೇಟೆಡ್ ಕಲಿಕೆಗೆ ಆದ್ಯತೆ ನೀಡಲಾಗುತ್ತದೆ. ಉದಾಹರಣೆಗೆ ಸಂಗೀತ ಅಥವಾ ನೃತ್ಯ ಹೇಳಿಕೊಡುವ ಸಂದರ್ಭದಲ್ಲಿ ಮಾಯಾದ ಶಿಕ್ಷಕರು ಅದರ ಜೊತೆಯಲ್ಲಿಯೇ ಅದಕ್ಕೆ ಸಂಬಂಧಪಟ್ಟ ಚರಿತ್ರೆ ಹಾಗೂ ಬೆಳೆದುಬಂದ ದಾರಿಯನ್ನು ಅವಲೋಕಿಸುತ್ತಾರೆ. ಹೀಗಾಗಿ ಮಾಯಾದ ವಿದ್ಯಾರ್ಥಿಗಳು ಈ ದೇಶದ ಟಿಎಫ್ಐ ವಿದ್ಯಾರ್ಥಿಗಳಿಗಿಂತ ಶೇ 80 ರಷ್ಟು ಅತ್ಯುತ್ತಮ ನಿರ್ವಹಣೆ ತೋರುತ್ತಾರೆ ಅನ್ನುವುದು ಸನಯಾ ನೀಡಿರುವ ಮಾಹಿತಿ.

ವಿದ್ಯಾರ್ಥಿಗಳ ಸ್ವಭಾವದಲ್ಲಿಯೇ ಬದಲಾವಣೆ ಸಾಧ್ಯ:

ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಹೊಂದುವುದು, ಶೈಕ್ಷಣಿಕ ಪ್ರಗತಿ ಹಾಗೂ ಹೊಸ ವಿಷಯಗಳ ಕಲಿಕೆಯೊಂದಿಗೆ ಮಾಯಾದಲ್ಲಿ ಕಲಿಯುವ ವಿದ್ಯಾರ್ಥಿಗಳ ಅಂತರಂಗದ ಸ್ವಭಾವಗಳಲ್ಲೂ ಸಾಕಷ್ಟು ಬದಲಾವಣೆ ಸಾಧ್ಯವಾಗುತ್ತದೆ ಅನ್ನುವುದು ಸನಯಾರ ಅಭಿಪ್ರಾಯ. ಮೋಹಿತ್ ಅನ್ನುವ ವಿದ್ಯಾರ್ಥಿಯ ಉದಾಹರಣೆ ನೀಡುತ್ತಾ, ಆ ವಿದ್ಯಾರ್ಥಿಯ ಸಮುದಾಯದಲ್ಲಿ ಬಹುತೇಕರು ರೌಡಿಗಳು ಅಥವಾ ಗೂಂಡಾಗಳಂತಿದ್ದವರೇ ಆಗಿದ್ದರು. ಮೊದಮೊದಲು ಮೋಹಿತ ಸಹ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದ. ಆದರೆ ಮಾಯಾದ ಕಲೆಯ ಕಲಿಕೆ ಅವರ ಸ್ವಭಾವವನ್ನೇ ಬದಲಾಯಿಸಿತು ಅಂತ ಸನಯಾ ಹೇಳಿದ್ದಾರೆ. ಅವರು ಪ್ರಿಯಾಂಕರಲ್ಲಿಯೂ ಇಂತಹದ್ದೇ ಬದಲಾವಣೆಗಳನ್ನು ಗುರುತಿಸಿದ್ದಾರೆ.

ಅವರು ಮೊದಲ ಬಾರಿಗೆ ಪ್ರಿಯಾಂಕರನ್ನು ನೋಡಿದಾಗ, ಪ್ರಿಯಾಂಕ ಅಭದ್ರಿತ, ಮುಜುಗರ ಹಾಗೂ ಹಿಂಜರಿಕೆಯ ಗುಣ ಹೊಂದಿದ್ದರು. ಸಾಮಾಜಿಕವಾಗಿ ಕೆಳಗಿರುವ ಹಾಗೂ ಕಡಿಮೆ ಆದಾಯದ ಕುಟುಂಬದ ಹಿನ್ನೆಲೆ ಹಾಗೂ ಅವರ ಕುಟುಂಬದ ಸ್ಥಿತಿ ಅವರಿಗೆ ಕೀಳರಿಮೆ ಮೂಡಿಸಿತ್ತು. ನಿಧಾನವಾಗಿ ಮಾಯಾದ ಕಲಿಕೆ ಅವರಲ್ಲಿ ಪ್ರಬುದ್ಧ ಮನಸ್ಥಿತಿ, ಧೈರ್ಯ ಹಾಗೂ ನೈತಿಕ ಸ್ಥೈರ್ಯಗಳನ್ನು ಬೆಳೆಸಿ ಆತ್ಮವಿಶ್ವಾಸ ತಂದುಕೊಟ್ಟಿತು. ಮಾಯಾದಲ್ಲಿ ಪ್ರಿಯಾಂಕರಲ್ಲಿ ಅಡಗಿದ್ದ ಸುಪ್ತ ಪ್ರತಿಭೆಗಳು ಬಹಿರಂಗವಾದವು. ಈಗ ಪ್ರಿಯಾಂಕ ಸ್ವತಂತ್ರ್ಯವಾಗಿ ಹಾಗೂ ತಲೆ ಎತ್ತಿ ಹೆಮ್ಮೆ ಹಾಗೂ ಗೌರವಗಳಿಂದ ಬದುಕುವ ಸಾಮರ್ಥ್ಯ ಪಡೆದುಕೊಂಡಿದ್ದಾರೆ. ಮಾಯಾದ ವಿಶೇಷ ಕಲಿಕೆ ಜಗತ್ತನ್ನೇ ಬದಲಿಸಬಲ್ಲದು ಅನ್ನೋದು ಸನಯಾರ ಅಭಿಮತ.

image


ಪ್ರಿಯಾಂಕರ ಶಾಲೆ, ಸಂಗೀತ ಕಲಿಕೆ, ಶೈಕ್ಷಣಿಕ ಅವಕಾಶ, ವಿದೇಶಿ ಪ್ರಯಾಣದ ಅವಕಾಶ ಇವೆಲ್ಲವೂ ಒಂದಕ್ಕೊಂದು ಸಂಬಂಧಪಟ್ಟಿರುವಂತದ್ದಾ?

ಏಡ್ರಿಯಾಟಿಕ್​​ನ ಯುನೈಟೆಡ್ ವರ್ಲ್ಡ್ ಕಾಲೇಜ್​​ನಲ್ಲಿ ಫೆಲೋಶಿಪ್ ಕೊಡಿಸುವ ಮಾಯಾದ ಯೋಜನೆಯ ನಿಯಮದಲ್ಲಿ ಇವೆಲ್ಲವೂ ಇದೆ. ಪ್ರಿಯಾಂಕ ಇದಕ್ಕೆ ಸೇರಿಕೊಳ್ಳಲು ಸಾಕಷ್ಟು ಸಂಕೋಚ ವ್ಯಕ್ತಪಡಿಸಿದ್ದರು. ಕೊನೆಗೆ ಅವರ ಮಾರ್ಗದರ್ಶಕರಿಂದ ಪ್ರೋತ್ಸಾಹ ದೊರೆತ ಕಾರಣ ಮುಂದೆ ಬಂದರು. ಅಂತಿಮವಾಗಿ ಭಾರತದಿಂದ ಆಯ್ಕೆಯಾದ 120 ವಿದ್ಯಾರ್ಥಿಗಳ ಶಾರ್ಟ್​ಲಿಸ್ಟ್​​​ನಲ್ಲಿ ಪ್ರಿಯಾಂಕರ ಹೆಸರಿತ್ತು.

ಅನಂತ ಅವಕಾಶಗಳು

ನನ್ನ ಮೇಲೆ ನಾನು ವಿಶ್ವಾಸವಿಡುವುದನ್ನು ಕಲಿತೆ. ಆಗ ನನಗೆ ತಿಳಿಯಿತು ನನ್ನ ಮೇಲೆ ನಂಬಿಕೆ ಇಟ್ಟುಕೊಂಡ ಜನರೂ ಇದ್ದಾರೆ ಎಂದು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಿತು. ನಾನು ವಿದೇಶಕ್ಕೆ ಹೊರಡುವ ವಿಷಯ ತಿಳಿದ ನನ್ನ ಗೆಳತಿಯರೂ ಹೆಮ್ಮೆಪಟ್ಟುಕೊಂಡಿದ್ದಾರೆ. ಇದರಿಂದ ಒಂದು ವಿಷಯ ನನಗೆ ಅರಿವಾಗಿದೆ. ಯಾವುದೇ ಹಿನ್ನೆಲೆಯಿಂದ ಬಂದವರಿಗಾದರೂ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟುಕೊಂಡರೆ ಗುರಿ ಸಾಧಿಸುವುದು ಕಷ್ಟವಲ್ಲ. ಆ ಮಾತಿಗೆ ನಾನೊಂದು ಜೀವಂತ ಉದಾಹರಣೆ ಅಂತ ಪ್ರಿಯಾಂಕ ಹೆಮ್ಮೆಯಿಂದಲೇ ಹೇಳಿದ್ದಾರೆ.

ಪ್ರಿಯಾಂಕರನ್ನು 12ನೇ ತರಗತಿ ಮುಗಿಯುತ್ತಿದ್ದಂತೆ ಮದುವೆ ಮಾಡಲು ಅವರ ತಾಯಿ ಯೋಚಿಸಿದ್ದರು. ಆದರೆ ಪ್ರಿಯಾಂಕ ಇದನ್ನು ವಿರೋಧಿಸಿ ಅವರ ತಾಯಿಯ ಮನವೊಲಿಕೆ ಮುಂದಾಗಿದ್ದರು. ಮಾಯಾದಲ್ಲಿ ಕಲಿಯಲು ಆರಂಭಿಸಿದ ಮೇಲೆ ಅವರಿಗೆ ಮದುವೆ ಒಂದೇ ಅವರ ಸಮಸ್ಯೆಗಳಿಗೆ ಅಂತಿಮ ಆಯ್ಕೆಯಲ್ಲ ಅನ್ನುವುದು ಮನದಟ್ಟಾಯಿತು. ಆದರೆ ಅವರ ತಾಯಿಗೆ ಇದ್ದ ಚಿಂತೆಯೆಂದರೆ, ಮುಂದೆ ಪ್ರಿಯಾಂಕರನ್ನು ಯಾರು ನೊಡಿಕೊಳ್ಳುತ್ತಾರೆ ಅನ್ನುವುದು. ಈಗ ಆತ್ಮವಿಶ್ವಾಸದ ಗಣಿಯಾಗಿರುವ ಪ್ರಿಯಾಂಕ ಅವರ ತಾಯಿಯ ಮನಸಿನಲ್ಲಿ ತಾವು ಸ್ವತಂತ್ರ್ಯವಾಗಿ ಹಾಗೂ ಸಮರ್ಪಕವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಬದುಕಲು ಸಾಧ್ಯ ಅನ್ನುವ ನಂಬಿಕೆ ಮೂಡಿಸಿದ್ದಾರೆ.

ನಾನು ಸಮಾಜಕ್ಕೇ ಏನಾದರೂ ಕೊಡುಗೆ ನೀಡಲು ಇಚ್ಛಿಸುತ್ತೇನೆ. ಈಗ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇನೆ. ಒಬ್ಬಳು ಮನಶಾಸ್ತ್ರಜ್ಞೆಯಾಗಬೇಕು ಅನ್ನುವುದು ನನ್ನ ಕನಸು. ಮುಂದೆ ಸಕ್ರಿಯ ವೇಶ್ಯೆಯರು ಹಾಗೂ ಲೈಂಗಿಕ ಕಾರ್ಯಕರ್ತರ ಸಮುದಾಯದಲ್ಲಿ ಬೆಳಕು ಮೂಡಿಸಬೇಕು. ಅವರ ಮಕ್ಕಳಿಗೆ ಒಂದು ಉಜ್ವಲ ಭವಿಷ್ಯ ಕಲ್ಪಿಸಬೇಕು ಅನ್ನುವುದು ನನ್ನ ಆಶಯ ಅಂತ ತಮ್ಮ ಮಹತ್ವಾಕಾಂಕ್ಷೆ ಬಿಚ್ಚಿಟ್ಟಿದ್ದಾರೆ ಪ್ರಿಯಾಂಕ.