ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳು ಮತ್ತು ಇ-ಕಾಮರ್ಸ್ ನಡುವಿನ ಸಂಬಂಧ

ಟೀಮ್​​ ವೈ.ಎಸ್​​.ಕನ್ನಡ

ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳು ಮತ್ತು ಇ-ಕಾಮರ್ಸ್ ನಡುವಿನ ಸಂಬಂಧ

Friday November 27, 2015,

6 min Read

ಇ-ಕಾಮರ್ಸ್‌ ವ್ಯವಸ್ಥೆ ಬಂದ ನಂತರ ಅನೇಕ ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರುವ ಮೂಲಕ ಕಡಿಮೆ ಹೂಡಿಕೆಯಿಂದ ಹೆಚ್ಚು ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ ಇಂತಹ ಉದ್ಯಮಿಗಳು.

image


ಆನ್‌ಲೈನ್‌ ವ್ಯವಹಾರಕ್ಕೆ ಬಂದ ನಂತರ ಅಂದರೆ ಕಳೆದ ಐದು ವರ್ಷಗಳಲ್ಲಿ ತಮ್ಮ ಬದುಕು ಹೇಗೆ ಬದಲಾಗುತ್ತಿದೆ ಎಂಬುದನ್ನು ಅಹಮದಾಬಾದ್ ಮೂಲದ ಸೂರಜ್ ವಾಝಿರಾನಿ ಚೆನ್ನಾಗಿ ಗಮನಿಸಿದ್ದಾರೆ. ಸೂರಜ್ 12 ವರ್ಷಗಳ ಕಾಲ ಗುಜರಾತ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸ್ಟೋರ್‌ಗಳನ್ನು ನಡೆಸಿದ ಅನುಭವವಿರುವವರು. 2008ರಲ್ಲಿ ಇ-ಬೇ ಸಂಸ್ಥೆಯ ಮೂಲಕ ಆನ್‌ಲೈನ್ ರೀಟೇಲ್ ಮಾರುಕಟ್ಟೆಗೆ ಕಾಲಿಟ್ಟರು. ಅಂಗಡಿಯಲ್ಲಿ ಅಷ್ಟೇನೂ ಆದಾಯ ಬರದ ಕಾರಣ ಸೂರಜ್ ಅನಿವಾರ್ಯವಾಗಿ ಆನ್‌ಲೈನ್‌ ಮಾರುಕಟ್ಟೆಗೆ ಬರಲೇಬೇಕಾಯಿತು. ಆದರೆ 2010ರಲ್ಲಿ ಇ-ಕಾಮರ್ಸ್ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಗಮನಿಸಿದ ನಂತರ ತಮ್ಮ ಆಯ್ಕೆ ತಪ್ಪಲ್ಲವೆಂಬುದು ಅವರ ಅರಿವಿಗೆ ಬಂದಿತ್ತು.

ಹೀಗಾಗಿ ಸಣ್ಣದೇ ಆದರೂ ತಮ್ಮದೇ ಆದ ಇ-ಕಾಮರ್ಸ್ ವೆಬ್‌ಸೈಟ್‌ ಅನ್ನು ಆರಂಭಿಸಲು ನಿರ್ಧರಿಸಿದ ಸೂರಜ್ ನಂತರ ಫ್ಲಿಪ್‌ಕಾರ್ಟ್, ಸ್ನ್ಯಾಪ್‌ ಡೀಲ್ ಸಂಸ್ಥೆಯೊಂದಿಗೆ ಸೇರಿಕೊಂಡರು. ಸೂರಜ್ ಅವರ ಮೇನಿಯಾಕ್ ಸ್ಟೋರ್ 2013ರ ಆರ್ಥಿಕ ವರ್ಷದಲ್ಲಿ 7 ಕೋಟಿ, 2014ರ ಆರ್ಥಿಕ ವರ್ಷದಲ್ಲಿ 65 ಕೋಟಿ ಆದಾಯ ಪಡೆದಿದ್ದು, 2015ರ ಆರ್ಥಿಕ ವರ್ಷದಲ್ಲಿ 70 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ.

ಇ- ಕಾಮರ್ಸ್ ಉದ್ಯಮ ಈ ಮಟ್ಟಕ್ಕೆ ಬೆಳೆಯುತ್ತದೆ ಎಂಬ ನಿರೀಕ್ಷೆಯೇ ನನಗಿರಲಿಲ್ಲ. 2013ರ ಆರ್ಥಿಕ ವರ್ಷದಲ್ಲಿ 7 ಕೋಟಿ ರೂ. ಆದಾಯ ಗಳಿಸಿದೆವು ಎಂಬುದೇ ನಂಬಲಸಾಧ್ಯವಾದ ಅಂಶ ಎನ್ನುತ್ತಾರೆ ಸೂರಜ್. ಮೇನಿಯಾಕ್ ಸ್ಟೋರ್.ಕಾಮ್ ಈ ವರ್ಷದಲ್ಲಿ ಒಟ್ಟಾರೆ ಮಾರಾಟದಲ್ಲಿ ಶೇ.10ರಷ್ಟು ಪಾಲನ್ನು ಪಡೆದಿದೆ.

image


ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳು ಭಾರತದಲ್ಲಿ ಕಡಿಮೆಯೇನೂ ಇಲ್ಲ. ಭಾರತದಲ್ಲಿ ಇ- ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆರಂಭವಾದಂದಿನಿಂದ ಅವರು ಸಣ್ಣ ಮಟ್ಟದ ಉದ್ಯಮಿಗಳಿಗೆ ರಾಷ್ಟ್ರಮಟ್ಟದಲ್ಲಿ ವೇದಿಕೆ ಒದಗಿಸಿದೆ. ಮೈಕ್ರೋ ಉದ್ದಿಮೆಗಳ ಸಚಿವಾಲಯ ವರದಿ ಪ್ರಕಾರ ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳು ಭಾರತದಲ್ಲಿ ಸುಮಾರು 36 ಮಿಲಿಯನ್‌ನಷ್ಟಿವೆ. ಇಂತಹ ಉದ್ಯಮಗಳಿಂದ ಭಾರತದ 80 ಮಿಲಿಯನ್ ಜನರು ಉದ್ಯೋಗ ಕಂಡುಕೊಂಡಿದ್ದಾರೆ. ಜೀವನದ ದಾರಿ ಹುಡುಕಿಕೊಂಡಿದ್ದಾರೆ. ಒಟ್ಟು ದೇಶೀಯ ಉತ್ಪನ್ನಕ್ಕೆ ಇದರ ಕೊಡುಗೆ ಶೇ. 8 ರಷ್ಟಿದೆ ಎಂದು ಹೇಳಲಾಗಿದೆ. ಉತ್ಪಾದನಾ ಔಟ್‌ಪುಟ್ಗೆ ಶೇ.45 ರಷ್ಟು ಮತ್ತು ಶೇ.40ರಷ್ಟು ರಫ್ತು ಇದರಿಂದಲೇ ಆಗುತ್ತಿದೆ ಎಂದು ಹೇಳಲಾಗುತ್ತಿದೆ.

ಈಗ ಇ-ಕಾಮರ್ಸ್ ಮಾರ್ಕೆಟ್‌ ಪ್ಲೇಸ್ ಆರಂಭವಾದಂದಿನಿಂದ ಇಂತಹ ಮಿಲಿಯನ್‌ಗಟ್ಟಲೆ ಸಣ್ಣ ಉದ್ಯಮಗಳು ಆನ್‌ಲೈನ್ ಹಣಕಾಸು ವಹಿವಾಟದಲ್ಲಿ ಭಾಗಿಯಾಗುವ ಅವಕಾಶ ಪಡೆಯುವಂತಾಗಿದೆ. ಸ್ನ್ಯಾಪ್‌ಡೀಲ್ ನ ಕೆಪಿಎಂಜಿ ಇ-ಕಾಮರ್ಸ್ 2015ರ ಸಣ್ಣ ಹಾಗೂ ಮಧ್ಯಮ ಮಟ್ಟದ ಇ-ಕಾಮರ್ಸ್ ಉದ್ಯಮ ವಲಯದ ವರದಿಯ ಪ್ರಕಾರ ಭಾರತದಲ್ಲಿ 2020ರ ಒಳಗೆ 80 ಬಿಲಿಯನ್ ಡಾಲರ್ ಹಾಗೂ 2030ರ ಒಳಗೆ 300 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಇ-ಕಾಮರ್ಸ್ ವಲಯದ ಈ ಬೂಮ್‌ನಿಂದ ಸೂರಜ್‌ನಂತಹ ಅದೆಷ್ಟೋ ಸಣ್ಣ ಮಟ್ಟದ ಉದ್ಯಮಿಗಳಿಗೆ ಸಹಾಯವಾಗಿದೆ. ಸ್ನ್ಯಾಪ್‌ ಡೀಲ್‌ ನಂತಹ ಒಂದು ವೇದಿಕೆಯಲ್ಲೇ ಇಂತಹ 200,000 ಮಾರಾಟಗಾರರಿದ್ದಾರೆ. ಇಂತಹ ಖಾಸಗಿ ಸಂಸ್ಥೆಗಳು ಮಾರಾಟ ಕೊಡುಗೆ ಮಾಹಿತಿಗಳನ್ನು ಎಲ್ಲೂ ಪ್ರಕಟಿಸುವುದಿಲ್ಲ. ಹೀಗಾಗಿ ಸೂರಜ್‌ನಂತಹ ಎಷ್ಟು ಉದ್ಯಮಿಗಳು ಇ-ಕಾಮರ್ಸ್ ನಂತಹ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಸಮರ್ಪಕ ಮಾಹಿತಿ ದೊರೆಯುವುದಿಲ್ಲ. ಆದರೆ ಇಂತಹ ವೇದಿಕೆಗಳ ಮೂಲಕ ಸಣ್ಣ ಉದ್ಯಮಿಗಳು ಪ್ರಚಾರಕ್ಕೆ ಬರುತ್ತಿದ್ದಾರೆ ಎಂಬುದು ಮಾತ್ರ ಸತ್ಯವಾದ ವಿಚಾರ.

image


ಒಳ್ಳೆಯ ಕಾಲ ಬಂದೇ ಬರುತ್ತದೆ ಎಂಬುದು ಸತ್ಯವಾದ ಮಾತು

ಆನ್‌ಲೈನ್ ವೇದಿಕೆಯಡಿ ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರಕುತ್ತಿರುವುದು ಸಣ್ಣ ಉದ್ದಿಮೆದಾರರಿಗೆ ನಿಜಕ್ಕೂ ವರದಾನವಾಗಿ ಪರಿಣಮಿಸಿದೆ. ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಿಗಳು ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆಯನ್ನು ಬಳಸಿಕೊಳ್ಳಲು ಫ್ಲಿಪ್‌ಕಾರ್ಟ್‌, ಅಮೇಝಾನ್ ಮತ್ತು ಸ್ನ್ಯಾಪ್‌ಡೀಲ್‌ನಂತಹ ಸಂಸ್ಥೆಗಳು ಅವಕಾಶ ಮಾಡಿಕೊಟ್ಟಿವೆ.

ಆನ್‌ಲೈನ್‌ನಲ್ಲಿ ಮಾರಾಟ ಆರಂಭಿಸಲು ದೊಡ್ಡ ಮೊತ್ತದ ಹಣದ ಅವಶ್ಯಕತೆ ಇಲ್ಲ. ಮೊದಲ ದಿನದಿಂದಲೇ ನಿಮಗೆ ಗ್ರಾಹಕರು ದೊರೆಯಲು ಆರಂಭಿಸುತ್ತಾರೆ ಎನ್ನುತ್ತಾರೆ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್‌ಗಳ ಆನ್‌ಲೈನ್ ಮಾರುಕಟ್ಟೆ ಸ್ಮೈಲ್ ಡ್ರೈವ್ ಎಂಬ ಸಂಸ್ಥೆಯ ಸಹ ಸಂಸ್ಥಾಪಕ ಸಾಯಕ್ ಸಾಹು.

ಈ ಸಣ್ಣಮಟ್ಟದ ಹೂಡಿಕೆಯ ಮಾದರಿ ಅನೇಕ ಸಣ್ಣ ಆಫ್‌ಲೈನ್ ವಹಿವಾಟುದಾರರನ್ನು ಆಕರ್ಷಿಸುತ್ತಿದೆ. ಗೊಂಬೆಗಳ ಆಮದು ಮತ್ತು ವಿತರಣೆಯಲ್ಲಿ ತೊಡಗಿಕೊಂಡಿರುವ ಬೆಂಗಳೂರು ಮೂಲಕ ಮ್ಯಾಜಿಕ್ ವರ್ಕ್ಸ್ ಸಂಸ್ಥೆ ಎರಡು ವರ್ಷಗಳ ಹಿಂದೆಯೇ ಅಮೇಝಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿಕೊಂಡಿತ್ತು. ಇದು ವ್ಯವಸ್ಥೆಗೊಂದು ಸಮತಟ್ಟಾದ ಮೈದಾನವನ್ನು ಒದಗಿಸಿಕೊಡುತ್ತದೆ. ಅಂದರೆ ಇ-ಕಾಮರ್ಸ್‌ ವೇದಿಕೆಗಳೇ ಈ ಮೈದಾನಗಳುಗುತ್ತವೆ. ಇದರ ಮೂಲಕ ವ್ಯಾಪಾರಿಗಳನ್ನು ತಲುಪುವ ಇ-ಕಾಮರ್ಸ್ ವೇದಿಕೆಗಳು ತಮ್ಮ ವ್ಯವಸ್ಥೆಯೊಂದಿಗೆ ನೀವು ಇರಲೇಬೇಕೆಂಬ ಷರತ್ತನ್ನೂ ಸಹ ವಿಧಿಸುವುದಿಲ್ಲ ಎಂದು ಇ-ಕಾಮರ್ಸ್ ವೇದಿಕೆಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ ಮ್ಯಾಜಿಕ್ ವರ್ಕ್ಸ್ ಸಂಸ್ಥೆಯ ಮಾಲೀಕ ನೀಲೇಶ್. 2012ರಲ್ಲಿ ಆನ್‌ಲೈನ್‌ ಮಾರುಕಟ್ಟೆ ವಲಯಕ್ಕೆ ಬಂದ ನಂತರ ಮ್ಯಾಜಿಕ್ ವರ್ಕ್ಸ್ ಸಂಸ್ಥೆಯ ಆದಾಯ ಶೇ.20ರಷ್ಟು ಏರಿಕೆಯಾಗಿದೆ. ಕಳೆದ ಕೆಲ ವರ್ಷಗಳಿಂದ ಆನ್‌ಲೈನ್ ಮಾರಾಟ ಶೇ.40 ರಿಂದ 50ರಷ್ಟು ಏರಿಕೆ ಕಂಡಿದೆ. ಹಲವು ಆಫ್‌ಲೈನ್ ಮಾರಾಟಗಾರರು ಸಂಪೂರ್ಣವಾಗಿ ಆನ್‌ಲೈನ್ ಮಾರುಕಟ್ಟೆಗೆ ಪ್ರವೇಶಿಸಿದ್ದಾರೆ. ದೆಹಲಿ ಮೂಲದ ಲೈಫ್‌ ಲಾಂಗ್ ಎಂಬ ಗೃಹೋಪಯೋಗಿ ವಸ್ತುಗಳ ಬ್ರಾಂಡ್ ರೀಟೇಲರ್ಸ್‌ಗಳೊಂದಿಗಿನ ಸಮಸ್ಯೆಯಿಂದಾಗಿ ತನ್ನ ಕಾರ್ಯಚಟುವಟಿಕೆಗಳನ್ನು 1999ರಲ್ಲಿ ನಿಲ್ಲಿಸಿಬಿಟ್ಟಿತ್ತು. ಆದರೆ ಆನ್‌ಲೈನ್‌ ಮಾರುಕಟ್ಟೆ ವಲಯದ ಉಪಯೋಗಗಳನ್ನು ಕಂಡುಕೊಂಡ ಸಂಸ್ಥೆಯ ಮುಖ್ಯಸ್ಥ ಭರತ್ ಕಾಲಿಯಾ ಸೆಪ್ಟೆಂಬರ್‌ನಲ್ಲಿ ಮತ್ತೆ ತನ್ನ ಲೈಫ್‌ಲಾಂಗ್ ಸಂಸ್ಥೆಯನ್ನು ಆರಂಭಿಸಿದರು.

ಲೈಫ್‌ಲಾಂಗ್ ಸಂಸ್ಥೆಯ ಮಟ್ಟಿಗೆ ಹೇಳುವುದಾದರೆ ಸಾಂಪ್ರದಾಯಿಕ ಆಫ್‌ಲೈನ್ ಮಾರುಕಟ್ಟೆಗಿಂತ ಹೆಚ್ಚಿನ ಲಾಭವನ್ನು ಆನ್‌ಲೈನ್‌ ಮಾರುಕಟ್ಟೆ ಒದಗಿಸಿದೆ. ವಿತರಣೆಯ ವಲಯದ ಶೇ.40ರಷ್ಟು ವೆಚ್ಚವನ್ನು ಅವರು ಉಳಿಸಿದ್ದಾರೆ. ಹೀಗಾಗಿ ಲೈಫ್‌ಲಾಂಗ್ ಸಂಸ್ಥೆ ತನ್ನ ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಮಾರುತ್ತಿದೆ. ನಾವು ಮತ್ತೆ ಸಂಸ್ಥೆಯನ್ನು ರೀಲಾಂಚ್ ಮಾಡಿದ ಒಂದು ತಿಂಗಳಲ್ಲೇ ನಾವು ಗುರಿಯಿಟ್ಟಿದ್ದ ಮಟ್ಟವನ್ನು ನಾವು ತಲುಪಿದ್ದೆವು. ಅಲ್ಲದೇ ದೀಪಾವಳಿ ಸಮಯದಲ್ಲಿ ಮಾರಾಟದಿಂದ 1 ಕೋಟಿ ರೂ.ಗಳಿಸುವ ಗುರಿ ಹೊಂದಿದ್ದೆವು. ಆ ಗುರಿಯನ್ನು ನಾವು ತಲುಪಿದ್ದೇವೆ ಎನ್ನುತ್ತಾರೆ ಭರತ್ ಕಾಲಿಯಾ.

ಸಮಸ್ಯೆಗಳು

ಇ-ಕಾಮರ್ಸ್ ಮಾರುಕಟ್ಟೆ ವಲಯದ ಕಾರ್ಯವೈಖರಿ ಬಗ್ಗೆ ಅನೇಕ ಮಾರಾಟಗಾರರಿಗೆ ಸಂಪೂರ್ಣವಾದ ವಿಚಾರ ತಿಳಿದಿಲ್ಲ. ಕೆಲ ವ್ಯಾಪಾರಿಗಳು ಸಣ್ಣಮಟ್ಟದ ಮಾರಾಟಗಾರರಿಗೆ ಮಾತ್ರ ಆನ್‌ಲೈನ್ ಮಾರುಕಟ್ಟೆ ವೇದಿಕೆ ಒದಗಿಸುತ್ತಿದೆ ಎಂದು ದೂರಿದ್ದಾರೆ. ಇಂತಹ ಅಪವಾದಗಳಿಗೆ ಹೊರತಾಗಿರಲು ಮೇನಿಯಾಕ್ ಸ್ಟೋರ್‌ನಂತಹ ಸಂಸ್ಥೆಗಳು ತಮ್ಮದೇ ಆದ ಆನ್‌ಲೈನ್ ಮಾರುಕಟ್ಟೆ ಆರಂಭಿಸಲು ನಿರ್ಧರಿಸಿವೆ. ಇನ್ನೆರಡು ವಾರಗಳಲ್ಲಿ ತಮ್ಮ ವೆಬ್‌ಸೈಟ್ ಮುಖಾಂತರ ಹೊಸ ಮಾರಾಟಗಾರರಿಗಾಗಿ ಹೊಸ ಮಾರುಕಟ್ಟೆ ವಲಯವನ್ನು ನಿರ್ಮಿಸುತ್ತೇವೆ. ಆದರೆ ಇವುಗಳು ಸ್ನ್ಯಾಪ್‌ಡೀಲ್ ಅಥವಾ ಅಮೇಝಾನ್‌ನಷ್ಟು ದೊಡ್ಡದಲ್ಲ. ಉತ್ಪನ್ನಗಳಿಗೆ ಅವರು ನೀಡುವಷ್ಟು ರಿಯಾಯಿತಿ ದರವನ್ನು ನೀಡಲು ಸಾಧ್ಯವಿರದಿದ್ದರೂ ಉತ್ತಮ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ಸೂರಜ್ ಹೇಳುತ್ತಾರೆ. ಗ್ರಾಹಕರಿಂದ ನಿರಾಕರಿಸಲ್ಪಟ್ಟು ಹಿಂತಿರುಗಿಸಲ್ಪಟ್ಟ ಉತ್ಪನ್ನಗಳು ಹಾಗೂ ಓಪನ್ ಬಾಕ್ಸ್ ಉತ್ಪನ್ನಗಳೆಂದು ಪ್ರತ್ಯೇಕ ವಿಭಾಗಗಳನ್ನೂ ಮಾಡಲಾಗುವುದು. ಇಂತಹ ಉತ್ಪನ್ನಗಳು ನಿಜಕ್ಕೂ ಮಾರಾಟಗಾರರಿಗೆ ಸಮಸ್ಯೆಯಾಗಿರುತ್ತದೆ. ಇವುಗಳ ಮಾರಾಟದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಗ್ರಾಹಕರು ಉತ್ಪನ್ನವನ್ನು ಹಿಂದಿರುಗಿಸುವ ಬಗ್ಗೆ, ಬಳಸಿ ಹಿಂದಿರುಗಿಸಿದ್ದಾರೆ ಎಂಬ ಬಗ್ಗೆ, ಅಥವಾ ಪ್ಯಾಕೇಜ್ ತೆರೆದ ಬಳಿಕ ಅದನ್ನು ವಾಪಸ್ ಮಾಡುವುದರ ಬಗ್ಗೆ ವ್ಯಾಪಾರಿಗಳು ಆಗಾಗ್ಗೆ ದೂರುತ್ತಲೇ ಇರುತ್ತಾರೆ. ಆದರೆ ಗ್ರಾಹಕರಿಗೆ ಇಂತಹ ಸಂದರ್ಭಗಳಲ್ಲಿ ಮೊದಲು ನೀಡಿದ ಉತ್ಪನ್ನದ ಪರಿಸ್ಥಿತಿಯನ್ನು ಗಮನಿಸದೇ ಕೂಡಲೇ ಪರಿಹಾರ ನೀಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಒಮ್ಮೆ ಒಂದು ಉತ್ಪನ್ನಕ್ಕೆ ಒಬ್ಬನೇ ಗ್ರಾಹಕನಿಂದ ಹೊಸ ಬೇಡಿಕೆ ಬಂದರೆ, ನಾವು ಮತ್ತೆ ಅದೇ ಉತ್ಪನ್ನವನ್ನು ಕೂಡಲೇ ಕಳುಹಿಸಬೇಕಾಗುತ್ತದೆ. ಆದರೆ ಗ್ರಾಹಕ ಹಿಂತಿರುಗಿಸಿದ ಉತ್ಪನ್ನವನ್ನು ನಾವು ಪರೀಕ್ಷಿಸಲು ಸಮಯವೇ ದೊರಕುವುದಿಲ್ಲ. ಮೊದಲ ಬಾರಿಗೆ ಮಾರುಕಟ್ಟೆ ವಲಯಕ್ಕೆ ಕಮಿಷನ್ ನೀಡಬೇಕಾಗುತ್ತದೆ. ಆದರೆ ಶಿಪ್ಪಿಂಗ್ ದರಗಳನ್ನು ಮಾತ್ರ 2 ಬಾರಿ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ ಸ್ಮೈಲ್‌ ಡ್ರೈವ್‌ನ ಸಾಯಕ್.

image


ಇನ್ನು ಈ ವಲಯದ ಬಗ್ಗೆ ಇರುವ ಮತ್ತೊಂದು ಸಾಮಾನ್ಯ ಸಮಸ್ಯೆ ಎಂದರೆ ಮಾರುಕಟ್ಟೆ ವಲಯ ಆಗಾಗ್ಗೆ ತನ್ನ ಕಮಿಷನ್ ದರವನ್ನು ಬದಲಾಯಿಸುತ್ತಲೇ ಇರುತ್ತದೆ. ಇದು ಮಾರಾಟಗಾರರ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಅಸಮರ್ಪಕ ಹಣಕಾಸು ವಹಿವಾಟು ಮತ್ತೊಂದು ಸಮಸ್ಯೆ. ಸ್ನ್ಯಾಪ್‌ಡೀಲ್‌ನ ಕೆಪಿಎಂಜಿ ವರದಿ ತಿಳಿಸುವಂತೆ ವ್ಯಾಪಾರಿಗಳಲ್ಲಿ ಶೇ.41ರಷ್ಟು ಮಂದಿ ಬ್ಯಾಂಕ್‌ ಸಾಲ ಸೌಲಭ್ಯಗಳನ್ನು ಪಡೆದಿಲ್ಲ.

ಇತರರ ದೃಷ್ಟಿಕೋನ

ಇಂತಹ ಸಮಸ್ಯೆಗಳನ್ನು ಹೊರತುಪಡಿಸಿದರೆ, ಸಣ್ಣ ಉದ್ದಿಮೆದಾರರಿಗೆ ಆಫ್‌ಲೈನ್ ವಹಿವಾಟಿಗಿಂತ ಆನ್‌ಲೈನ್‌ ವಹಿವಾಟಿನಲ್ಲೇ ಹೆಚ್ಚಿನ ಲಾಭವಿದೆ. ಸಣ್ಣ ಉದ್ಯಮಿಗಳಿಗೆ ಹೊಲಿಸಿದರೆ ದೊಡ್ಡ ಉದ್ಯಮಿಗಳ ಸಮಸ್ಯೆ ಸಾಕಷ್ಟಿದೆ. ಮಾರುಕಟ್ಟೆಯ ಕಟ್ಟಕಡೆಯ ಉತ್ಪನ್ನಗಳನ್ನೂ ಸಹ ಇ-ಕಾಮರ್ಸ್ ವಲಯದ ಮೂಲಕ ಮಾರಬಿಡಬಹುದು. ಕೆಲವೇ ಕೆಲವು ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳು ಮಾತ್ರ ಗ್ರಾಹಕರಿಗೆ ಅಗತ್ಯವಿರುವ ಉತ್ಪನ್ನಗಳನ್ನು ಉತ್ಪಾದಿಸುತ್ತವೆ. ಬಹುಶಃ ಗ್ರಾಹಕರಿಂದ ಬಂದ ಬೇಡಿಕೆಗಳಿಗನುಸಾರವಾಗಿ ಗ್ರಾಹಕರು ಇಚ್ಛಿಸಿದ ವಿನ್ಯಾಸದ ಉತ್ಪನ್ನಗಳನ್ನು ಮಾತ್ರ ಉತ್ಪಾದಿಸುತ್ತಾರೆ. ಬಹುಶಃ ಇಂತಹ ಉತ್ಪನ್ನಗಳು ಇ-ಕಾಮರ್ಸ್ ಉದ್ಯಮಗಳಲ್ಲಿ ಬರುವುದೇ ಇಲ್ಲ ಎನ್ನುತ್ತಾರೆ ಕರ್ನಾಟಕ ಸಣ್ಣ ಮಟ್ಟದ ಕೈಗಾರಿಕೆಗಳ ಸಂಘಟನೆಯ ಅಧ್ಯಕ್ಷ ವಿ.ಕೆ.ದೀಕ್ಷಿತ್.

ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಿಗಳಿಗೆ ದೀರ್ಘಕಾಲಿಕ ಪರಿಹಾರ ನೀಡುವಲ್ಲಿ ಇ-ಕಾಮರ್ಸ್ ವಲಯ ಅಷ್ಟೇನೂ ಗಮನಾರ್ಹ ಕಾರ್ಯ ನಿರ್ವಹಿಸುವುದಿಲ್ಲ. ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಗಳಿಸಲು ಅಗತ್ಯವಿರುವ ಸಣ್ಣ ಮಟ್ಟದ ಪ್ರಚಾರವನ್ನೂ ಸಹ ಇವುಗಳು ನೀಡುವುದಿಲ್ಲ ಎನ್ನುತ್ತಾರೆ ಬಾಂಬೆ ಸಣ್ಣ ಮಟ್ಟದ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಂಕಿಮ್ ಡಿ ಮಿಸ್ತ್ರಿ. ಭಾರತ್ ಟ್ರೇಡರ್ಸ್‌ನ ನಿರ್ದೇಶಕರೂ ಆಗಿರುವ ಬಂಕಿಮ್ ಡಿ ಮಿಸ್ತ್ರಿ ಅವರು, ಪ್ರಿಂಟಿಂಗ್ ಮತ್ತು ಫಿಲ್ಮ್ ಪ್ರೋಸೆಸಿಂಗ್ ಉಪಕರಣಗಳ ಉತ್ಪಾದಕರು. ಬಹಳಷ್ಟು ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳು ಉತ್ಪಾದನೆ ಕಡೆ ಮಾತ್ರ ಗಮನಹರಿಸಿರುತ್ತವೆ. ಇವುಗಳ ಬ್ರಾಂಡ್‌ ನೇಮ್ ಪ್ರಚಾರ ಪಡಿಸುವಲ್ಲಿ ಗಮನಹರಿಸಿರುವುದಿಲ್ಲ. ಹೀಗಾಗಿ ಇವರ ಉತ್ಪನ್ನಗಳು ಆನ್‌ಲೈನ್ ಮಾರುಕಟ್ಟೆಗೆ ಬರುವಾಗ ಅದರ್ ಬ್ರಾಂಡ್ ಎಂಬ ವಿಭಾಗದಲ್ಲಿ ಸೇರಿಹೋಗುತ್ತವೆ. ಹೀಗಾಗಿ ಇಂತಹ ಉದ್ಯಮಗಳಿಗೆ ಕಡಿಮೆ ಪ್ರಚಾರ ದೊರಕುತ್ತದೆ. ಬಹಳಷ್ಟು ಸಣ್ಣ ಹಾಗೂ ಮಧ್ಯಮ ಮಟ್ಟದ ಉತ್ಪಾದಕರ ಉತ್ಪನ್ನಗಳಿಗೆ ಬಾರ್ ಕೋಡ್ ಇರುವುದಿಲ್ಲ. ಆದರೆ ಬಹುತೇಕ ಆನ್‌ಲೈನ್ ಮಾರುಕಟ್ಟೆ ವಲಯಕ್ಕೆ ಬಾರ್‌ಕೋಡ್ ಅತ್ಯಂತ ಅಗತ್ಯವಾದ ಅಂಶವಾಗಿರುತ್ತವೆ. ಇ-ಕಾಮರ್ಸ್ ವಲಯ ಕೇವಲ ಕಾರ್ಪೋರೇಟ್ ಬ್ರಾಂಡ್‌ಗಳಿಗಷ್ಟೇ ಲಾಭದಾಯಕ ಕೈಗಾರಿಕಾ ಉತ್ಪನ್ನಗಳಿಗೆ ಅಲ್ಲ. ಇ-ಕಾಮರ್ಸ್ ವಲಯದಲ್ಲಿ ಕಳೆದ 10 ವರ್ಷಗಳಲ್ಲಿ ಎಷ್ಟು ಹಣ ಹಾಕಲಾಗಿದೆಯೋ ಅದರಿಂದ ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳಿಗೆ ಅಷ್ಟೇನೂ ಲಾಭವಾಗಿಲ್ಲ. ಹೀಗಾಗಿ ಹಳೆಯ ಸಾಂಪ್ರದಾಯಿಕ ಮಾದರಿಯ ಮಾರ್ಕೆಟಿಂಗ್ ವಿಧಾನವನ್ನೇ ಅನುಸರಿಸುವುದು ಸೂಕ್ತ ಎನ್ನುವುದು ಬಂಕಿಮ್ ಡಿ ಮಿಸ್ತ್ರಿ ಅವರ ಅಭಿಮತ.

ಆದರೆ ವೇದಿಕೆಗಳು ಸಿಗುವುದು ನಿಜವಾದ ಸಮಸ್ಯೆಯೇ ಅಲ್ಲ. ಸಣ್ಣ ಹಾಗೂ ಮಧ್ಯಮ ಮಟ್ಟದ ಸಚಿವಾಲಯದ ಕರ್ನಾಟಕದಲ್ಲಿ 6 ಲಕ್ಷದಷ್ಟು ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳಿದ್ದು, ಅವುಗಳಲ್ಲಿ ಕೇವಲ 50,000 ಉದ್ಯಮಗಳಷ್ಟೇ ಆನ್‌ಲೈನ್‌ ವಹಿವಾಟಿನಲ್ಲಿ ತೊಡಗಿಕೊಂಡಿವೆ. ಕಡಿಮೆ ಮಟ್ಟದ ಅಂತರ್ಜಾಲ ವ್ಯವಸ್ಥೆ ಇ- ಕಾಮರ್ಸ್ ಕ್ಷೇತ್ರದ ಬೆಳವಣಿಗೆಯನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ನಿರ್ಬಂಧಿಸಿದೆ. ಆದರೆ ಇಂತಹ ಪ್ರದೇಶಗಳಲ್ಲೇ ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳು ಹೆಚ್ಚು ಚಾಲ್ತಿಯಲ್ಲಿರುತ್ತವೆ. ಇನ್ನು ದ್ವಿತೀಯ ಶ್ರೇಣಿಯ ನಗರಗಳಲ್ಲಿ ಕೇವಲ 4 ಗಂಟೆಗಳಷ್ಟು ಮಾತ್ರ ವಿದ್ಯುತ್ ಸೌಲಭ್ಯವಿರುತ್ತದೆ. ಹೀಗಾಗಿ ಹೇಗೆ ಇ- ಕಾಮರ್ಸ್ ಉದ್ಯಮಗಳು ಬೆಳೆಯಲು ಸಾಧ್ಯ?, ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಸಣ್ಣ ಮಟ್ಟದ ಉದ್ಯಮದಿಂದ ಉದ್ಯಮ ನಡೆಸುವ ಉದ್ದಿಮೆದಾರರಿಗೆ ಸಹಾಯ ಮಾಡಬೇಕಾದ ಅಗತ್ಯ ಇದೆ ಎನ್ನುತ್ತಾರೆ ಕರ್ನಾಟಕ ಸಣ್ಣ ಮಟ್ಟದ ಕೈಗಾರಿಕೆಗಳ ಸಂಘಟನೆಯ ಅಧ್ಯಕ್ಷ ವಿ.ಕೆ.ದೀಕ್ಷಿತ್.

ಲೇಖಕರು: ಅಥಿರಾ ಎ ನಾಯರ್​​​​

ಅನುವಾದಕರು: ವಿಶ್ವಾಸ್​​​​​