ನಿರಂಜನ ಅನ್ನೋ ಬರಹಗಾರನ ಬಗ್ಗೆ ನಿಮಗೆಷ್ಟು ಗೊತ್ತು..?

ವಿಶ್ವಾಸ್​ ಭಾರಾಧ್ವಾಜ್​​​

ನಿರಂಜನ ಅನ್ನೋ ಬರಹಗಾರನ ಬಗ್ಗೆ ನಿಮಗೆಷ್ಟು  ಗೊತ್ತು..?

Sunday November 08, 2015,

4 min Read

ಕಳಕುಂದ ಶಿವರಾಯ ಕನ್ನಡದ ಖ್ಯಾತ ಬರಹಗಾರ ನಿರಂಜನರಾಗಿದ್ದು ಕನ್ನಡ ಸಾರಸ್ವತ ಲೋಕದ ನಿಜ ಸುಕೃತ. ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಹಾಗೂ ಸಾಹಿತಿ ನಿರಂಜನರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳತ್ವ ವಹಿಸಿದ್ದ ವಿಚಾರವಾದಿ. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದ ನಿರಂಜನರು ಭೂಮಿ ಹೋರಾಟದ ಬಗ್ಗೆ ಬರೆದ ಕೆಲವು ಕಾದಂಬರಿಗಳು ಕನ್ನಡ ಸಾರಸ್ವತ ಲೋಕದ ಮೈಲಿಗಲ್ಲುಗಳೆಂದೇ ಗುರುತಿಸಿಕೊಂಡಿವೆ. ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ನಿರಂಜನರು, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ರಚಿಸಿದ್ದಾರೆ. ನಿರಂಜನರು ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಹಲವು ವರ್ಷಗಳ ಕಾಲ ಅಂಕಣಕಾರರಾಗಿದ್ದರು. ಯುವಕರಿಗಾಗಿ ಸುಮಾರು ೭ ಸಂಪುಟಗಳ ಜ್ಞಾನ ಗಂಗೋತ್ರಿ ಮತ್ತು ೨೫ ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳನ್ನು ನಿರಂಜನರ ಕೃತಿ ಕೃಷಿ ಒಳಗೊಂಡಿದೆ.

image


ಹುಟ್ಟು ಹಾಗೂ ಬದುಕು:

15ನೇ ಜೂನ್ ೧೯೨೪ರಲ್ಲಿ ಕುಕ್ಕೆ ಸುಬ್ರಹ್ಮಣ್ಯದ ಬಳಿಯ ಕಳಕುಂದ ಗ್ರಾಮದಲ್ಲಿ ಜನಿಸಿದ ನಿರಂಜನರ ಮೇಲೆ ತಾಯಿ ಚೆನ್ನಮ್ಮರ ಅಪಾರ ಪ್ರಭಾವವಿದೆ. ತಂದೆ ದೇವಸ್ಥಾನದಲ್ಲಿ ಶಾನುಭೋಗರಾಗಿದ್ದರು. ಅಲ್ಲಿ ಇವರ ಹೋಟೆಲ್ ಸಹ ಇತ್ತೆನ್ನುವ ಮಾಹಿತಿ ಇದೆ. ಆದರೆ ಅದರ ಯಾವ ಕುರುಹುಗಳೂ ಈಗ ಲಭ್ಯವಿಲ್ಲ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು ಮುಗಿಸಿದ ಅವರು, ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದರು. ನಿರಂಜನರ ಬಾಲ್ಯ ಮುಳ್ಳಿನ ಹಾದಿಯಲ್ಲಿ ಬರಿಗಾಲಿನಲ್ಲಿ ನಡೆದಂತೆ. ಹೆಜ್ಜೆ ಹೆಜ್ಜೆಗೂ ಸಂಕಟಪಟ್ಟು ನಡೆದ ನಿರಂಜನರು ಯಾರೂ ತಲುಪದ ಗಮ್ಯ ತಲುಪಿದರು.

ಯಾರಿಗೂ ಲಭ್ಯವಿಲ್ಲ ನಿರಂಜನರ ಖಾಸಗಿ ಬದುಕು

ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ದಿನಾಂಕ 5 ಫೆಬ್ರವರಿ ೧೯೫೬ರಂದು ಬೆಂಗಳೂರಿನ ವಿಶ್ವೇಶ್ವರಪುರದಲ್ಲಿರುವ ಸಜ್ಜನರಾವ್ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರದ್ದ್ದು ಅಂತರ್ಜಾತಿಯ ವಿವಾಹ. ಯಾರಿಗೂ ಲಭ್ಯವಿಲ್ಲ ನಿರಂಜನರ ಜೀವನದ ಕೆಲವು ವೈಯಕ್ತಿಕ ಬದುಕಿನ ಮಾಹಿತಿ ಅವರ ಮಿತ್ರ ಹೆಚ್.ಆರ್.ನಾಗೇಶರಾವ್ ಡೈರಿ ಉಲ್ಲೇಖಗಳಿಂದ ದೊರಕಿದೆ. ಅನುಪಮಾ-ನಿರಂಜನ ದಂಪತಿಗಳಿಗೆ ಸೀಮಂತಿನಿ ಮತ್ತು ತೇಜಸ್ವಿನಿ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಈ ಇಬ್ಬರೂ ಪೋಷಕರಂತೆಯೇ ಲೇಖಕರು ಅನ್ನುವುದು ವಿಶೇಷ.

image


ಸ್ವಾತಂತ್ರ್ಯ ಹೋರಾಟ ಹಾಗೂ ಪತ್ರಿಕೋದ್ಯಮ

ನಿರಂಜನರು ಹತ್ತು ವರ್ಷದವರಿದ್ದಾಗ ಸುಳ್ಯದಲ್ಲಿ ಗಾಂಧೀಜಿಯವರ ದರ್ಶನದಿಂದ ತಮ್ಮ ಬದುಕಿನ ಪರಿವರ್ತನೆ ಕಂಡರು. ಅಲ್ಲಿಂದ ಮುಂದೆ ಪುತ್ತೂರಿನಲ್ಲಿ ನೆಹರು ಅವರ ಭಾಷಣದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯದ ಹೋರಾಟಕ್ಕೆ ಅಧಿಕೃತವಾಗಿ ಕಾಲಿಟ್ಟರು. ಸಕ್ರಿಯ ಸ್ವಾತಂತ್ರ್ಯ ಹೋರಾಟದೊಂದಿಗೆ ಭೂಗತವಾಗಿ ಚಟುವಟಿಕೆ ನಡೆಸಿ ಪತ್ರಿಕೆಗಳನ್ನು ನಡೆಸಿದ್ದ ದಿಟ್ಟ ಕೀರ್ತಿ ಅವರಿಗೆ ಸಲ್ಲಬೇಕು. ೧೯೪೨ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ನಿರಂಜನರು ರಾಷ್ಟ್ರಬಂಧು ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದರು. ಬೆಂಗಳೂರು ಮೈಸೂರು ನಗರಗಳಲ್ಲಿ ನಿರಂಜನರು ಪೂರ್ಣಕಾಲಿಕ ಪತ್ರಕರ್ತರಾಗಿ ದುಡಿದ್ದಿದ್ದಾರೆ. ಬಸವರಾಜ ಕಟ್ಟೀಮನಿ, ಉಷಾ ಪತ್ರಿಕೆಯಲ್ಲಿ ಸಂಪಾದಕರಾಗಿದ್ದ ಸಂದರ್ಭದಲ್ಲಿ ಅದಕ್ಕೂ ಅವರು ನಿರಂತರ ಲೇಖನಗಳನ್ನು ಬರೆಯುತ್ತಿದ್ದರು. ಅಷ್ಟೇ ಅಲ್ಲ ಚಿತ್ರಗುಪ್ತ, ತಾಯಿನಾಡುವಿನಂತಹ ಪ್ರಸಿದ್ಧ ಪತ್ರಿಕೆಗಳಿಗೂ ನಿಯಮಿತವಾಗಿ ಕತೆ ಮತ್ತು ಲೇಖನಗಳನ್ನು ಬರೆಯುತ್ತಿದ್ದರು. ಜನಪ್ರಗತಿ ಪತ್ರಿಕೆಗೆ ಅವರು ತಮ್ಮ`ಕಾಲ್ಪನಿಕ' ಗೆಳತಿ`ಸಾಧನಾ'ಗೆ ಬರೆಯುತ್ತಿದ್ದ ಸಾಹಿತ್ಯಿಕ ಪತ್ರಗಳು ಸಾಧನ ಸಂಚಯ ಅಂಕಣವಾಗಿತ್ತು. ಮುಂದೆ ಪುಷ್ಪಹಾರ, ಸಾಧನಾ ಪುಸ್ತಕಗಳಾದವು. ಕರ್ಮವೀರ ವಾರಪತ್ರಿಕೆಗೆ ರಾಜಧಾನಿಯಿಂದ ಅಂಕಣ ಬರೆಯುತ್ತಿದ್ದ ನಿರಂಜನರು, ಪ್ರಜಾಮತ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದರು. ಕಮ್ಯೂನಿಸ್ಟ್ ಪಕ್ಷದ ಜನಶಕ್ತಿಯ ಸಂಪಾದಕರಾಗಿ ದುಡಿದ ಅವರು, ‘ತಾಯಿನಾಡು’ ಮತ್ತು ‘ಚಿತ್ರಗುಪ್ತ’ ಪತ್ರಿಕೆಗಳಿಗೆ ೫೦-೬೦ರ ದಶಕದಲ್ಲಿ ಪುಸ್ತಕ ವಿಮರ್ಶೆಗಳನ್ನು ಮಾಡುತ್ತಿದ್ದರು.

ರಂಗಮ್ಮನ ವಠಾರ "ವಠಾರ ಜೀವನವೆಂದರೆ ‘ಗಟಾರ’ ಜೀವನವಲ್ಲ" ಎಂಬುದನ್ನು ಬಿತ್ತರಿಸುವ ಶ್ರೇಷ್ಠ ಕೃತಿ ೨೭೪ ಪುಟಗಳ ಕೈ ಹೊತ್ತಿಗೆ. ಬೆಂಗಳೂರಿನಂತಹ ನಗರದಲ್ಲಿ, ಮಧ್ಯಮ ವರ್ಗದ ಜನರು ವಸತಿಗಾಗಿ ‘ಕಡಿಮೆ’ ಬಾಡಿಗೆಯ ವಠಾರಗಳನ್ನು ಅವಲಂಬಿಸಿ, ಎಂತಹ ಕಷ್ಟಗಳನ್ನೂ ನುಂಗಿಕೊಂಡು ಜೀವನ ನಡೆಸುತ್ತಿರುವುದನ್ನು ನಿರಂಜನರು ಹೃದಯಂಗಮವಾಗಿ ವಿವರಿಸಿದ್ದಾರೆ. ಇಂತಹ ದುರ್ಭರ ಸ್ಥಿತಿಯಲ್ಲೂ ಜೀವನದ ಕಹಿಯನ್ನು ಮರೆತು ತಮ್ಮ ಪ್ರೇಮದ ಬಾಳ್ವೆಯಿಂದ, ವಿನೋದ ರಸಿಕತೆಯಿಂದ ವಾತಾವರಣವನ್ನೇ ಆಹ್ಲಾದಗೊಳಿಸಬಹುದೆಂಬುದಕ್ಕೆ ಉತ್ತಮ ನಿದರ್ಶನವಾಗಿ ತೋರಿಸುತ್ತಾರೆ.

ಪ್ರಚಲಿತ ಜಗತ್ತಿನಲ್ಲಿ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ, ಪುಸ್ತಕ-ಪತ್ರಿಕಾ ಪ್ರಪಂಚಗಳಲ್ಲಿ, ಸುದ್ದಿಯ ವಿಶ್ವದಲ್ಲಿ ನಡೆದ ವಿವಿಧ ಘಟನೆಗಳನ್ನು, ವರದಿಗಳನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಿಂದ ವಿಮರ್ಶಿಸುವುದರಲ್ಲಿ, ವಿವೇಚಿಸುವುದರಲ್ಲಿ ನಿರಂಜನರು ಎತ್ತಿದ ಕೈ. ತಮ್ಮ ಕಲ್ಪನೆಯ ಪ್ರೇಯಸಿ ಸಾಧನಾಳಿಗೆ ಜನಪ್ರಗತಿಯ ಮೂಲಕ ಕಳಿಸಿ ಕೊಟ್ಟ ಮೇಘ ಸಂದೇಶದ ಆರಿಸಿದ ಸಂಗ್ರಹ ಪುಸ್ತಕವೇ ಆಯಿತು.

ಯಾವುದೇ ಕ್ಷೇತ್ರದಲ್ಲಿ ಅನ್ಯಾಯವಾಗಿರುವ ವರದಿಗಳು ಕಂಡು ಬಂದರೂ, ಅದರ ಬೆನ್ನು ಹತ್ತಿ ಮೂಲವನ್ನು ಶೋಧಿಸಿ, ನೋವಿನ ಆಳವನ್ನು ಚಿತ್ರಿಸುವುದರಲ್ಲಿ ನಿರಂಜನರು ಸಿದ್ಧಹಸ್ತರಾಗಿದ್ದರು. ಕುತೂಹಲಕರ, ಕೋಲಾಹಲಕರ ಪ್ರಸಂಗಗಳನ್ನೂ ಅವರು ಸುಂದರವಾಗಿ, ಸ್ವಾರಸ್ಯವಾಗಿ ವರ್ಣಿಸುವುದು ವಾಚಕರನ್ನು ಮಂತ್ರಮುಗ್ದರನ್ನಾಗಿಸುತ್ತಿತ್ತು. ತಮ್ಮ ಕೊನೆಯ ದಿನಗಳಲ್ಲಿ ಅಪಘಾತವೊಂದರಲ್ಲಿ ಮೂಳೆ ಮುರಿದುಕೊಂಡ ಪ್ರಸಂಗವನ್ನೂ ಅವರು ಅತ್ಯಂತ ಹಾಸ್ಯಪೂರ್ಣವಾಗಿ ಬರವಣಿಗೆಯಲ್ಲಿ ಕಟ್ಟಿಕೊಟ್ಟಿದ್ದರು.

ನಿರಂಜನರ ಸಾಹಿತ್ಯ ಕೃಷಿಯ ಸಮಗ್ರ ಪರಿಚಯ

ನಿರಂಜನರು ಒಟ್ಟು 25 ಕಾದಂಬರಿಗಳನ್ನು 11 ಕಥಾಸಂಕಲನಗಳು. 2 ಜೀವನ ವೃತ್ತಗಳನ್ನು ನಿರಂಜನರು ರಚಿಸಿದ್ದಾರೆ. ಇವಲ್ಲದೇ, ವ್ಯಕ್ತಿ ಚಿತ್ರ ಸಂಕಲನಗಳು, ರಾಜಕೀಯ ಲೇಖನಗಳು, ಭಾಷಾಂತರಗಳು, ಸಂಪಾದಿತ ಕೃತಿಗಳು ಹೀಗೆ ನಿರಂಜನರು ರಚಿಸಿದ ಸಾಹಿತ್ಯ ಕೃಷಿ ಅನೇಕ

ನಿರಂಜನರು ಹತ್ತು ಹಲವು ಸಾಮಾಜಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಭೂಮಿ ಹೋರಾಟಕ್ಕೆ ಸಂಬಂಧಿಸಿದ ಕಯ್ಯೂರು ಹೋರಾಟದ ಚಿರಸ್ಮರಣೆ, ಬನಶಂಕರಿ ಹಾಗೂ ಈಜಿಪ್ಟ್ ನೈಲ್ ನಾಗರೀಕತೆಯ ಪೆರೋ ಅಧಿಪತ್ಯದ ಮೊತ್ತಮೊದಲ ನಾಗರೀಕತೆಯ ಭೂಮಿ ಹೋರಾಟ ಮೃತ್ಯುಂಜಯ ಅತ್ಯುತ್ತಮ ಕಾದಂಬರಿಗಳೆಂದೇ ಓದುಗರ ಸ್ಮರಣೆಯಲ್ಲಿ ಉಳಿದಿವೆ. ನಿರಂಜನರ ಲೇಖನಿಯಲ್ಲಿ ವಿಮೋಚನೆ, ಬನಶಂಕರಿ, ಅಭಯ, ದೂರದ ನಕ್ಷತ್ರ ರಂಗಮ್ಮನ ವಠಾರ ಸೌಭಾಗ್ಯ, ಪಾಲಿಗೆ ಬಂದ ಪಂಚಾಮೃತ, ಚಿರಸ್ಮರಣೆ, ಏಕಾಂಗಿನಿ, ಕೊನೇ ನಮಸ್ಕಾರ, ಮಿಣುಕುಹುಳ, ವಿಲಾಸಿನಿ, ಕಲ್ಯಾಣಸ್ವಾಮಿ, ದೀಕ್ಷೆ, ನವೋದಯ ಅಂಜನ, ಐದು ಭಾಗಗಳಲ್ಲಿ ಬಿಡುಗಡೆಯಾದ ಟೀಪೂ, ತೊಟ್ಟಿಲು ತೂಗದ ಕೈ, ಹೆಣ್ಣಾಗಿ ಕಾಡಿತ್ತು ಮಾಯೆ, ಸ್ಮರಣೆಯೊಂದೇ ಸಾಲದೇ, ಬಂಗಾರದ ಜಿಂಕೆ, ಸ್ವಾಮಿ ಅಪರಾಂಬರ ಹಾಗೂ ಮೃತ್ಯುಂಜಯ ಮುಂತಾದ ಅತ್ಯದ್ಭುತ ಕಾದಂಬರಿಗಳು ರಚನೆಯಾಗಿವೆ.

ಕಾದಂಬರಿಗಳ ಜೊತೆ ನಿರಂಜನರು ಅನೇಕ ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ಸಂಧಿಕಾಲ, ರಕ್ತ ಸರೋವರ, ಅನ್ನಪೂರ್ಣಾ, ಕೊನೆಯ ಗಿರಾಕಿ, ಕಾತ್ಯಾಯಿನಿ, ವಾರದ ಹುಡುಗ ಇವರ ಪ್ರಮುಖ ಕಥಾ ಸಂಕಲನಗಳು. ನಿರಂಜನರ ಆತ್ಮೀಯ ಸ್ನೇಹಿತ ಹೆಚ್.ಆರ್.ನಾಗೇಶರಾವ್ ಅವರ ಪತ್ರ ಸಂಕಲನ ಸಂಗ್ರಹ ಮಾಡಿದ್ದಾರೆ. ಸಾಧನಾ ಹಾಗೂ ಪುಷ್ಪಹಾರ ನಿರಂಜನರು ಪತ್ರಿಕೆಗಳಿಗೆ ಬರೆದ ಅಮೂಲ್ಯ ಪತ್ರ ಸಂಕಲನಗಳು. ಐದು ನಿಮಿಷ ಹಾಗೂ ಕಾಲಕ್ಷೇಪ ನಿರಂಜನರ ಲೇಖನ ಸಂಕಲನಗಳು. ತಾಯಿ, ನೀತಿಕತೆಗಳು, ನನ್ನ ಬಾಲ್ಯ, ಮದುವಣಗಿತ್ತಿ ಅವರ ಭಾಷಾಂತರ ಬರಹ. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಸಂಧಿಕಾಲ ಕಥಾಸಂಕಲನ ಓದುಗರಿಗೆ ಲಭ್ಯವಿದೆ.

ನಿರಂಜನರನ್ನು ನಿರ್ಲಕ್ಷಿಸಿದೆಯೇ ಸಾಹಿತ್ಯ ಲೋಕ..?

ನಿರಂಜನರ ಸಾಹಿತ್ಯ ಕೃಷಿಗೆ ಸೋವಿಯತ್​​ಲೆಂಡ್​​ ನೆಹರೂ ಪ್ರಶಸ್ತಿ ಅರಸಿಕೊಂಡು ಬಂದಿದೆ. ಇದಲ್ಲದೇ ನಿರಂಜನರಿಗೆ ಕನ್ನಡ ಸಾಹಿತ್ಯದ ಹತ್ತು ಹಲವು ಪ್ರಶಸ್ತಿ, ಫಲಕ ಹಾಗೂ ಗೌರವಗಳು ದೊರಕಿವೆ. ರಾಜ್ಯ ಸರ್ಕಾರ ನೆನಪಿಸಿಕೊಳ್ಳದಿದ್ದರೂ ಪುತ್ತೂರಿನ ವಿವೇಕಾನಂದ ಕಾಲೇಜಿನ ಡಾ. ಶಿವರಾಮ ಕಾರಂತ ಅಧ್ಯಯನ ಪೀಠ ಕಳೆದ 13 ವರ್ಷಗಳಿಂದ ನಿರಂಜನರ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿ ನೀಡುತ್ತಿದೆ ಜೊತೆಗೆ ವಿಶೇಷ ಉಪನ್ಯಾಸಗಳನ್ನು ಆಯೋಜಿಸುತ್ತಿದೆ. ಸಾಹಿತ್ಯ ಪ್ರಪಂಚದಲ್ಲಿ ನಿರಂಜನರಂತಹ ಅದ್ವಿತೀಯ ಬರಹಗಾರರಿಗೆ ಸಿಗಬೇಕಿದ್ದ ಮಹತ್ತರ ಮನ್ನಣೆ ಸಿಗದೇ ಹೋಗಿದ್ದು ದೌರ್ಭಾಗ್ಯ. ಕನ್ನಡದ ಬಹುತೇಕ ಹೊಸ ಪೀಳಿಗೆಯ ಸಾಹಿತ್ಯಾಸಕ್ತರಿಗೆ ನಿರಂಜನರ ಪರಿಚಯವೇ ಇಲ್ಲದ್ದು ಬೇಸರದ ವಿಷಯ. ಆದರೆ ಅವರ ಸಾಹಿತ್ಯಗಳನ್ನು ಪರಿಚಯಿಸಿಕೊಡಬೇಕಾದ ಸಾಹಿತ್ಯ ಲೋಕ ಮಾತ್ರ ದಿವ್ಯ ಮೌನ ಧರಿಸಿ ಕುಳಿತಿದೆ.