ಸಾಹಸೋದ್ಯಮದ ಮಿಂಚು ನಿಲ್ಮಾ ದಿಲೀಪನ್-27ರ ಹರೆಯದಲ್ಲೇ ಅವಳಿ ಸಂಸ್ಥೆಗಳ ಒಡತಿ

ಟೀಮ್​ ವೈ.ಎಸ್​. ಕನ್ನಡ

ಸಾಹಸೋದ್ಯಮದ ಮಿಂಚು ನಿಲ್ಮಾ ದಿಲೀಪನ್-27ರ ಹರೆಯದಲ್ಲೇ ಅವಳಿ ಸಂಸ್ಥೆಗಳ ಒಡತಿ

Sunday January 10, 2016,

4 min Read

ಲೈಟ್ಸ್, ಕ್ಯಾಮೆರಾ, ಆ್ಯಕ್ಷನ್...ನಿಲ್ಮಾ ದಿಲೀಪನ್ ಅವರ ಕಿವಿಗೆ ಯಾವಾಗಲೂ ಅಪ್ಪಳಿಸ್ತಾ ಇದ್ದಿದ್ದು ಇದೇ ಧ್ವನಿ. ನಿರ್ಮಾಪಕಿಯಾಗಿರೋ ನಿಲ್ಮಾ ಹೊಡಿಬಡಿ ದಾಂಢಿಗ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಖ್ಯಾತ ತಮಿಳು ನಟ ಸೂರ್ಯ ಸೇರಿದಂತೆ ಹತ್ತಾರು ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದಾರೆ. ಇಂಟರ್ನೆಟ್‍ನಲ್ಲಿ ಭಾರೀ ಸದ್ದು ಮಾಡಿದ `ಅನು ಆಂಟಿ' ಅನ್ನೋ ಜನಪ್ರಿಯ ಮ್ಯೂಸಿಕ್ ವಿಡಿಯೋದ ಸೃಷ್ಟಿಕರ್ತೆ ಕೂಡ ಇವರೇ.

27ರ ಹರೆಯದ ನಿಲ್ಮಾ ಹುಟ್ಟಿದ್ದು ಕೇರಳದ ತ್ರಿಶೂರ್‍ನಲ್ಲಿ. ಆದ್ರೆ ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ನಿಲ್ಮಾ ಕಮ್ಯೂನಿಕೇಷನ್ ಪದವಿ ಪಡೆದಿದ್ದಾರೆ. ಈಗ ನಿಲ್ಮಾ ದಿಲೀಪನ್ ಒಬ್ಬ ನಿರ್ಮಾಪಕಿ ಹಾಗೂ `ಯೆಲ್ಲೋ ಅಂಬ್ರೆಲ್ಲಾ ಪ್ರೊಡಕ್ಷನ್ಸ್'ನ ಒಡತಿ. ಅಷ್ಟೇ ಅಲ್ಲ `ವಿತ್ ಲವ್ ನಿಲ್ಮಾ' ಎಂಬ ಈವೆಂಟ್ ಸ್ಟೈಲಿಂಗ್ ಕಂಪನಿಯೊಂದನ್ನು ಕೂಡ ಅವರು ನಡೆಸುತ್ತಿದ್ದಾರೆ.

image


2009ರ ಜೂನ್‍ನಲ್ಲಿ ಫಿಲ್ಮ್ ಪ್ರೊಡಕ್ಷನ್ ಹೌಸ್ ಸೇರಿದ್ದ ನಿಲ್ಮಾ, ನಿರ್ಮಾಪಕಿಯಾಗಿ ವೃತ್ತಿ ಬದುಕನ್ನು ಆರಂಭಿಸಿದ್ರು. ಕೇವಲ 6 ತಿಂಗಳಲ್ಲಿ ನಿಲ್ಮಾ ಆ ಕೆಲಸ ಬಿಟ್ಟುಬಿಟ್ರು. ಆದ್ರೆ ಕೈಕಟ್ಟಿ ಕೂರಲಿಲ್ಲ. 2010ರಲ್ಲಿ ಬೆಂಗಳೂರಿನ ಎಂವಿ ಪ್ರೊಡಕ್ಸನ್ಸ್ ಸೇರಿದ್ರು. ಅಲ್ಲಿ ನಾಲ್ಕು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ನಿಲ್ಮಾ ಅವರಿಗೆ ಜಗತ್ತು ಸುತ್ತುವ ಚಾನ್ಸ್ ಕೂಡ ಸಿಕ್ಕಿತ್ತು. ಆ ಸಮಯದಲ್ಲಿ ತಮಗಾದ ಅದ್ಭುತ ಅನುಭವಗಳನ್ನು ನಿಲ್ಮಾ ಖುಷಿಯಾಗಿ ನೆನಪಿಸಿಕೊಳ್ತಾರೆ. ``ಬೇರೆ ಬೇರೆ ದೇಶದವರೊಂದಿಗೆ ಕೆಲಸ ಮಾಡುತ್ತ ನಾನು ಕಲಿತಿದ್ದು ಅಪಾರ, ಎಲ್ರೂ ಸಮಯ ಪರಿಪಾಲಕರಾಗಿದ್ರಿಂದ ನನಗೆ ನಿದ್ದೆ ಮಾಡಲು ಕೂಡ ಸಮಯ ಸಿಗುತ್ತಿರಲಿಲ್ಲ. ನಾನು ಭೇಟಿ ಮಾಡಿದ ಬಹುತೇಕ ರಾಷ್ಟ್ರಗಳಲ್ಲಿ ಸಮಾನತೆಗೆ ಆದ್ಯತೆಯಿತ್ತು, ಅಲ್ಲಿ ಒಬ್ಬ ನಿರ್ದೇಶಕನಿಗೆ ಎಷ್ಟು ಗೌರವ ಕೊಡುತ್ತಾರೋ, ಒಬ್ಬ ಲೈಟ್ ಬಾಯ್‍ಗೆ ಕೂಡ ಅಷ್ಟೇ ಗೌರವ ನೀಡಲಾಗುತ್ತದೆ ಎನ್ನುತ್ತಾರೆ ನಿಲ್ಮಾ. ಹಾಗಾಗಿ ನಿಲ್ಮಾ ಕೂಡ ಶೂಟಿಂಗ್ ಸೆಟ್‍ನಲ್ಲಿ ಎಲ್ಲರನ್ನೂ ಸರಿಸಮಾನವಾಗಿ ಕಾಣುತ್ತಿದ್ರು.

ಈ ನಾಲ್ಕು ಅದ್ಭುತ ವರ್ಷಗಳ ಹೊರತಾಗಿಯೂ ನಿಲ್ಮಾರ ಮನಸ್ಸು ಮತ್ತೇನನ್ನೋ ಬಯಸುತ್ತಿತ್ತು. ನಾಯಕತ್ವದ ಗುಣ ಅವರಲ್ಲಿತ್ತು, ಹೊಸದೇನನ್ನಾದ್ರೂ ಮಾಡಬೇಕೆಂಬ ತುಡಿತವಿತ್ತು. ನಿರ್ವಹಣೆ, ಸಮನ್ವಯತೆ, ನಾಯಕತ್ವದ ಕೌಶಲ್ಯ ಅವರ ಹುಟ್ಟುಗುಣ ಅಂದ್ರೂ ತಪ್ಪಾಗಲಾರದು. ನಿಲ್ಮಾ ಅವರ ಮೊದಲ ಸಾಹಸೋದ್ಯಮ `ವಿತ್ ಲವ್ ನಿಲ್ಮಾ' ಆರಂಭವಾಗಿದ್ದು 2014ರ ಆಗಸ್ಟ್‍ನಲ್ಲಿ. ಅವರ ಸ್ನೇಹಿತೆಯರೆಲ್ಲ ಮದುವೆಯಾಗಿ, ತಾಯಿಯಾಗಿ ಬಡ್ತಿ ಪಡೆಯುತ್ತಿದ್ರು. ಆಗ ಅವರ ಮದುವೆ ಹಾಗೂ ಮಕ್ಕಳ ತೊಟ್ಟಿಲು ಶಾಸ್ತ್ರಕ್ಕೆಲ್ಲ ನಿಲ್ಮಾ ಅವರೇ ಡೆಕೊರೇಷನ್ ಮಾಡುತ್ತಿದ್ರು. ``ಜನರು ನನ್ನ ಕೆಲಸವನ್ನು ಗುರುತಿಸಿದ್ದು ಮಾತ್ರವಲ್ಲ, ಇಷ್ಟಪಟ್ಟರು. ಸ್ವಂತ ಸಂಸ್ಥೆಯನ್ನು ಆರಂಭಿಸಲು ಇದು ಆತ್ಮವಿಶ್ವಾಸ ಮೂಡಿಸಿತ್ತು'' ಎನ್ನುತ್ತಾರೆ ನಿಲ್ಮಾ. `ವಿತ್ ಲವ್' ಮೂಲಕ ನಿಲ್ಮಾ ಮಕ್ಕಳ ಬರ್ತಡೇ ಪಾರ್ಟಿ, ಮದುವೆಗಳು, ಬ್ಯಾಚುಲರ್ ಪಾರ್ಟಿ ಹಾಗೂ ಡಿನ್ನರ್ ಸೇರಿದಂತೆ ಹಲವು ಈವೆಂಟ್‍ಗಳನ್ನು ಆಯೋಜಿಸುತ್ತಾರೆ. ಕೇವಲ ಬೆಂಗಳೂರು ಮಾತ್ರವಲ್ಲ, ಬೇರೆ ಬೇರೆ ಸ್ಥಳಗಳಲ್ಲಿ ಕೂಡ ನಿಲ್ಮಾ ಈವೆಂಟ್‍ಗಳ ಹೊಣೆ ಹೊರುತ್ತಿದ್ದಾರೆ. ನಿಲ್ಮಾ ಅವರ ಪ್ರಕಾರ ಸದ್ಯ ಇಕೋ-ಫ್ರೆಂಡ್ಲಿ ಮದುವೆಗಳ ಟ್ರೆಂಡ್ ಶುರುವಾಗಿದೆ. ಕೆಲ ಗ್ರಾಹಕರು ಮದುವೆಯಲ್ಲಿ ಉಳಿದ ತಿನಿಸುಗಳನ್ನೆಲ್ಲ ಎನ್‍ಜಿಓಗಳಿಗೆ ಕೊಡುವಂತೆ ಮನವಿ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲ ಅತ್ಯಂತ ಕಡಿಮೆ ಪ್ಲಾಸ್ಟಿಕ್ ಬಳಕೆ, ಮರುಬಳಕೆಗೆ ಯೋಗ್ಯವಾದ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

ಆತ್ಮವಿಶ್ವಾಸದಿಂದ ಅವಳಿ ಉದ್ಯಮಗಳ ನಿರ್ವಹಣೆ...

``ಸ್ವಂತ ಕಂಪನಿಯೊಂದನ್ನು ಹೊಂದಬೇಕೆಂದು ನಾನು ಮೊದಲಿನಿಂದ್ಲೂ ಬಯಸಿದ್ದೆ, ಅದು ನನ್ನ ಮಗುವಿದ್ದಂತೆ, ಒಂದಲ್ಲ ಅವಳಿ ಮಕ್ಕಳ ತಾಯಿ ನಾನು'' ಎನ್ನುತ್ತ ನಗುತ್ತಾರೆ ನಿಲ್ಮಾ. ಅವರ ಎಲ್ಲಾ ಪ್ರಯತ್ನಕ್ಕೂ ಪೋಷಕರ ಬೆಂಬಲವಿತ್ತು. ಒಂದ್ಕಡೆ ಈವೆಂಟ್ ಮ್ಯಾನೇಜ್‍ಮೆಂಟ್ ಮತ್ತು ಡೆಕೋರೇಷನ್‍ನಲ್ಲಿ ಬ್ಯುಸಿಯಾಗಿದ್ರೂ ಪ್ರೊಡಕ್ಷನ್ ವಿಭಾಗದ ಬಗ್ಗೆ ಅವರಿಗಿದ್ದ ಪ್ರೀತಿ ಕಡಿಮೆಯಾಗಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಶೂಟಿಂಗ್‍ನಲ್ಲಿ ಭಾಗಿಯಾಗ್ತಿದ್ದ ನಿಲ್ಮಾ, ಆ ಅಸೈನ್‍ಮೆಂಟ್‍ಗಳನ್ನೂ ಮಾಡ್ತಾ ಇದ್ರು. ಸಿಕ್ಕಾಪಟ್ಟೆ ಆರ್ಡರ್‍ಗಳು ಬರ್ತಾ ಇದ್ದಿದ್ರಿಂದ ಹೊಸ ಕಂಪನಿಯನ್ನೇ ಆರಂಭಿಸೋಣ ಎಂಬ ಆಲೋಚನೆ ಅವರಿಗೆ ಬಂದಿತ್ತು. ಕೊನೆಗೆ 2014ರ ಡಿಸೆಂಬರ್‍ನಲ್ಲಿ ನಿಲ್ಮಾ ``ಯೆಲ್ಲೋ ಅಂಬ್ರೆಲ್ಲಾ ಪ್ರೊಡಕ್ಷನ್ಸ್'' ಆರಂಭಿಸಿದ್ರು. ಇದೊಂದು ಆ್ಯಡ್-ಫಿಲ್ಮ್ ಕಂಪನಿಯಾಗಿದ್ದು ಜಾಹೀರಾತು ಮತ್ತು ಪ್ರಮೋಷನಲ್ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ.

ನಿಲ್ಮಾ ಅದ್ಭುತ ನಿರ್ಮಾಪಕಿ, ಶೂಟಿಂಗ್‍ಗೆ ಸರಿಯಾದ ಸ್ಥಳಗಳ ಆಯ್ಕೆ, ಪಾತ್ರಗಳು ಮತ್ತು ಸಿಬ್ಬಂದಿಯನ್ನು ಹೊಂದಿಸುವುದರಲ್ಲಿ ಪಳಗಿದ್ದಾರೆ. ಅಕೌಂಟಿಂಗ್, ಮಾರ್ಕೆಟಿಂಗ್, ಬಿಲ್ಲಿಂಗ್ ಕೂಡ ಅವರದ್ದೇ ಜವಾಬ್ಧಾರಿ. ಸಹೋದ್ಯೋಗಿಗಳಾದ ಜೀನಾ, ನಾಗರಾಜ್, ಅಭಿನೀತ್ ಮತ್ತು ಪೋಷಕರು ನಿಲ್ಮಾಗೆ ಸಾಥ್ ಕೊಡ್ತಿದ್ದಾರೆ. ಯಾವುದೇ ಶೂಟಿಂಗ್ ಅಥವಾ ಈವೆಂಟ್‍ಗಳಲ್ಲಿ ಸಿಬ್ಬಂದಿ ಕೊರತೆ ಇದ್ರೆ ಪೋಷಕರೇ ಅವರಿಗೆ ನೆರವಾಗ್ತಾರಂತೆ. ಅವರ ಸಹಾಯವಿಲ್ಲದೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗ್ತಿರಲಿಲ್ಲ ಎನ್ನುತ್ತಾರೆ ನಿಲ್ಮಾ. ವಿಶೇಷ ಅಂದ್ರೆ ಟಿಡಿಎಸ್, ಸರ್ವೀಸ್ ಟ್ಯಾಕ್ಸ್‍ಗಳ ಬಗ್ಗೆ ನಿಲ್ಮಾಗೆ ವಿವರಿಸಿದ್ದು ಅವರ ತಾಯಿಯೇ. ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ತಮಗೆ ಅಕೌಂಟ್ಸ್ ಬಗ್ಗೆ ಗಂಧ ಗಾಳಿಯೂ ಇರಲಿಲ್ಲ ಎನ್ನುತ್ತಾರೆ ನಿಲ್ಮಾ.

ಪೇಂಟರ್‍ಗಳು, ಕಾರ್ಪೆಂಟರ್‍ಗಳು, ಲೈಟ್ ಬಾಯ್ಸ್, ಟೆಂಪೋ ಚಾಲಕರು, ಕ್ರಿಕೆಟರ್‍ಗಳು, ಸಿನಿಮಾ ತಾರೆಯರು, ಲೇಖಕರು, ಸಂಗೀತಗಾರರು ಹೀಗೆ ವಿಭಿನ್ನ ಜನರ ಜೊತೆ ನಿಲ್ಮಾ ಕಾರ್ಯನಿರ್ವಹಿಸುತ್ತಾರೆ. ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಕ್ರಿಕೆಟ್ ಕಲಿಗಳ ಜೊತೆ ಅವರು ಕೆಲಸ ಮಾಡಿದ್ದಾರೆ. ಕೇರಳ ಬ್ಲಾಸ್ಟರ್ಸ್ ಫುಟ್‍ಬಾಲ್ ತಂಡ, ಪ್ರಶಸ್ತಿ ವಿಜೇತ ಸಿನಿಮಾಟೋಗ್ರಾಫರ್ ಮನೋಜ್ ಲೋಬೊ ಅವರೊಂದಿಗೂ ನಿಲ್ಮಾ ಕಾರ್ಯ ನಿರ್ವಹಿಸಿರೋದು ವಿಶೇಷ. ಅವರ ನಿರ್ಮಾಣದ ಅದೆಷ್ಟೋ ಜಾಹೀರಾತುಗಳು ಮತ್ತು ಪ್ರಮೋಷನಲ್ ಫಿಲ್ಮ್‍ಗಳು ಹಿಟ್ ಆಗಿವೆ.

ಮುನ್ನಾ ಭಾಯಿ ಸ್ಟೈಲ್‍ನಲ್ಲಿ ಸವಾಲುಗಳಿಗೆ ಸೈ...

ಎರಡು ಉದ್ಯಮಗಳನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ಸೂಕ್ತ ಸಿಬ್ಬಂದಿಯ ಆಯ್ಕೆ ಕೂಡ ಬಹುದೊಡ್ಡ ಸವಾಲು. ಕೆಲಸ ಆಗಬೇಕಂದ್ರೆ ಕೆಲವೊಮ್ಮೆ ನೀವು ಒರಟಾಗಿ, ಆಕ್ರಮಣಖಾರಿಯಾಗಿ ವರ್ತಿಸಬೇಕಾಗುತ್ತೆ, ಅನುಭವದಿಂದ್ಲೇ ಇದೆಲ್ಲವನ್ನೂ ನಾನು ಕಲಿತಿದ್ದೇನೆ ಎನ್ನುತ್ತಾರೆ ನಿಲ್ಮಾ. ಸರಿಯಾದ ಸಮಯಕ್ಕೆ ಪೇಮೆಂಟ್ ಬರದೇ ಇದ್ರೆ ಮುನ್ನಾಭಾಯಿ ಸ್ಟೈಲಲ್ಲೇ ನಿಲ್ಮಾ ನೆನಪಿಸ್ತಾರಂತೆ. ಇನ್ನು ಉದ್ಯಮದಲ್ಲಿ ಹಣಕಾಸಿನ ಸಮಸ್ಯೆ ಕೂಡ ಇದ್ದಿದ್ದೇ. ನಿಗದಿತ ಸಮಯದಲ್ಲಿ ನಿರ್ಮಾಪಕರು ಹಣ ಸಂದಾಯ ಮಾಡುವಂತೆ ನೋಡಿಕೊಳ್ಳುವುದು ನಿಜಕ್ಕೂ ಪ್ರಯಾಸದ ಕೆಲಸ. ಕೆಲವೊಮ್ಮೆ ಗ್ರಾಹಕರು ಹಣ ಕೊಡದೇ ಇದ್ದಿದ್ದೂ ಇದೆ. ಆಗೆಲ್ಲ ನಿಲ್ಮಾ ಹೇಗಾದ್ರೂ ಮಾಡಿ ಹಣ ಹೊಂದಿಸುವಂತಹ ಅನಿವಾರ್ಯತೆ ಎದುರಾಗಿದೆ.

ಜೀವನ ಒಂದು ಮ್ಯಾರಥಾನ್‍ನಂತೆ...

ಎರಡು ಉದ್ಯಮ ಆರಂಭಿಸಬೇಕೆಂಬ ಉದ್ದೇಶ ನಿಲ್ಮಾ ಅವರಿಗೆ ಇರಲಿಲ್ಲ. ಇದೆಲ್ಲ ಅಚಾನಕ್ ಆಗಿ ಆಗಿದ್ದು ಎನ್ನುತ್ತಾರೆ ಅವರು. ನಿಲ್ಮಾ ಅವರ ದೈನಂದಿನ ಕೆಲಸವೇ ಈಗ ಉದ್ಯಮವಾಗಿ ಪರಿವರ್ತನೆಯಾಗಿದೆ. ನಿಲ್ಮಾ ಅವರ ದಿನಚರಿ ಆರಂಭವಾಗೋದು ಬೆಳಗಿನ ಜಾವ 4 ಗಂಟೆಯಿಂದ. ಶೂಟಿಂಗ್‍ಗೆ ಬೇಕಾದ ಸಾಮಾಗ್ರಿಗಳು, ಈವೆಂಟ್‍ಗಳ ಅಲಂಕಾರ ಸಾಮಾಗ್ರಿಗಳನ್ನು ಟ್ರಕ್‍ಗೆ ಲೋಡ್ ಮಾಡುವುದರಿಂದ ಕೆಲಸ ಶುರುವಾಗುತ್ತೆ. ಆದ್ರೆ ದಿನದ ಕೆಲಸ ಎಷ್ಟೊತ್ತಿಗೆ ಮುಗಿಯುತ್ತೆ ಅನ್ನೋದನ್ನು ಹೇಳೋದು ಅಸಾಧ್ಯ. ಯಾಕಂದ್ರೆ ನಿಲ್ಮಾ ತಮ್ಮ ಉದ್ಯಮದ ಯಶಸ್ಸಿಗಾಗಿ ಹಗಲು ರಾತ್ರಿ ಪರಿಶ್ರಮಪಡ್ತಿದ್ದಾರೆ. ಎಲ್ಲ ಧನಾತ್ಮಕ ಅವಕಾಶಗಳನ್ನು ಬಳಸಿಕೊಳ್ತಿದ್ದಾರೆ. ಮನಸ್ಸಿಗೆ ಸಂತೋಷ ಕೊಡುವ ಕೆಲಸವನ್ನು ಅವರು ಮಾಡ್ತಾರಂತೆ. ಎಲ್ಲವೂ ಒಂದು ಹಂತ ತಲುಪಿದ್ರೆ ಬದುಕು ಹಾಗೂ ಉದ್ಯಮ ಎರಡರ ಮಧ್ಯೆ ಸಮತೋಲನ ಕಾಪಾಡಬಹುದು ಅನ್ನೋದು ಅವರ ಅಭಿಪ್ರಾಯ.

ಭವಿಷ್ಯದ ಯೋಜನೆ...

ಒಂದು ದೊಡ್ಡ ಕಚೇರಿಯನ್ನು ಬಾಡಿಗೆಗೆ ಪಡೆದು ಅಲ್ಲಿ ರಂಗಪರಿಕರಗಳನ್ನೆಲ್ಲ ಜೋಡಿಸಿಡಲು ನಿಲ್ಮಾ ಯೋಜನೆ ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ ಮತ್ತೊಂದು ಕಂಪನಿಯನ್ನು ಆರಂಭಿಸುವ ಆಲೋಚನೆ ಕೂಡ ಅವರಿಗಿದೆ. ಈಗಿರುವ ಎರಡೂ ಸಂಸ್ಥೆಗಳ ವಹಿವಾಟು ಒಂದು ಹಂತಕ್ಕೆ ಬಂದಮೇಲೆ ಮೂರನೇ ಕಂಪನಿ ಆರಂಭಿಸುವುದು ಅವರ ಉದ್ದೇಶ. ಬಹುಮುಖ ಪ್ರತಿಭೆ ನಿಲ್ಮಾ ಅವರ ಉದ್ಯಮ ಬದುಕು ಯಶಸ್ವಿಯಾಗ್ಲಿ ಅನ್ನೋದೇ ಎಲ್ಲರ ಹಾರೈಕೆ.

ಲೇಖಕರು: ಡೀನಾ ಹ್ಯೂಬರ್ಟ್​

ಅನುವಾದಕರು: ಭಾರತಿ ಭಟ್​​