ಸಾಸಿವೆ ತೋಟದಲ್ಲಿ ಗುರಿ ತಲುಪುವ ಆಟ – ಸಾಧನೆ ಮಾಡಿದ ಬಾಲಕ ಈಗ ಸೂಪರ್​​ ಸ್ಟಾರ್​​​​

ಟೀಮ್​​ ವೈ.ಎಸ್​​.

0

ಹಸಿರು ನೆಲದಲ್ಲಿ ಹೆಸರು ಮಾಡಿದ ಬಾಲಕ ಆತ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿ, ದೇಶದ ಕೀರ್ತಿ ಪತಾಕೆ ಹಾರಿಸಿದ ಹುಡುಗ. ಗುರುವಿಲ್ಲದೆ ಪಾಠ ಕಲಿತು ಈಗ ಗುರಿ ತಲುಪುವತ್ತ ಹೆಜ್ಜೆ ಇಡುತ್ತಿದ್ದಾನೆ.

ಯಸ್. ಅದು ಬೇರೆ ಯಾರೂ ಅಲ್ಲ. ಉದಯೋನ್ಮುಖ ಗಾಲ್ಫ್ ಆಟಗಾರ ಶುಭಂ ಜಗಲನ್.

ಶುಭಂ, ಜುಲೈ 1, 2005 ರಂದು ಹರ್ಯಾಣದ ಪಾಣಿಪತ್ ಜಿಲ್ಲೆಯ ಇಸ್ರಾನಾ ಹಳ್ಳಿಯಲ್ಲಿ ಜನಿಸಿದ. ಅವನದ್ದು ಕುಸ್ತಿಪಟುಗಳು ಕುಟುಂಬವಾಗಿದ್ದು, ಶುಭಂ ತಂದೆ ಜಗ್ ಪಾಲ್ ಜಗ್ಲಾನ್ ಅನಕ್ಷರಸ್ಥರು. ಹಾಲು ಮಾರಿ ಜೀವನ ಸಾಗಿಸುತ್ತಾರೆ.

ಶುಭಂ ಸಿಕ್ಕ ಅವಕಾಶವನ್ನು ಬಳಸಿಕೊಂಡ. ಈತ ಗಾಲ್ಫ್ ಕಡೆಗೆ ಆಕರ್ಷಿತನಾಗಲು ಕಾರಣವಾಗಿದ್ದು ಎನ್​ಆರ್​​ಐ , ಗಾಲ್ಫ್ ಆಟಗಾರ ಕಪೂರ್ ಸಿಂಗ್. ಕಪೂರ್​​ ತಮ್ಮ ತವರು ಇಸ್ರಾನಾದಲ್ಲಿ ಗಾಲ್ಫ್ ಕೋರ್ಟ್ ಸ್ಥಾಪಿಸಲು ನಿರ್ಧರಿಸಿದ್ದರು. ಅದಕ್ಕಾಗಿ ಅವರು ಗ್ರಾಮಕ್ಕೆ ಬಂದಿದ್ದರು. ವಾಪಸ್ ಹೋಗುವ ವೇಳೆ ಶುಭಂ ಮನೆಯಲ್ಲಿಯೇ ಕಿಟ್ ಬಿಟ್ಟು ಹೋಗಿದ್ದರು.

ಆಗ ಐದು ವರ್ಷದವನಿದ್ದ ಶುಭಂ ಕಿಟ್ಟನ್ನು ಮುಟ್ಟಿದ್ದಲ್ಲದೇ, ಇಡೀ ದಿನ ಗ್ರಾಮದ ಸುತ್ತಮುತ್ತ ಗಾಲ್ಫ್ ಬಾಲನ್ನು ಹೊಡೆದಿದ್ದಾನೆ. ಸಾಸಿವೆ ಗದ್ದೆಯನ್ನೇ ಗಾಲ್ಫ್ ಕೋರ್ಟ್ ಮಾಡಿಕೊಂಡು ಪ್ರಾಕ್ಟೀಸ್ ಮಾಡಿದ್ದಾನೆ. ಗುರುವಿಲ್ಲದೆ ಕಲಿತ ಆತನಿಗೆ ಅಜ್ಜನ ಪ್ರೋತ್ಸಾಹ ಸಿಕ್ಕಿದೆ. ಯುಟ್ಯೂಬ್ ನಲ್ಲಿ ಗಾಲ್ಫ್ ಆಟದ ವಿಡಿಯೋ ನೋಡುತ್ತಲೇ ಆತ ಈ ಮಟ್ಟಕ್ಕೆ ಬೆಳೆದಿದ್ದಾನೆ.

ಈತನ ಪ್ರತಿಭೆಯನ್ನು ಗಮನಿಸಿದ ಕರ್ನಾಲ್ ನ ಮಧುಬನ್ ,ಗಾಲ್ಫ್ ತರಬೇತಿ ಪಡೆಯಲು ಅವಕಾಶ ನೀಡಿದೆ. ಭಾರತದ ಮಾಜಿ ಗಾಲ್ಫ್ ಆಟಗಾರ, ಕೋಚ್ ನೊನಿತಾ ಲಾಲ್ ಖುರೇಶಿ, ಶುಭಂ ಪ್ರತಿಭೆಯನ್ನು ಮೊದಲು ಗುರುತಿಸಿದರು. ಹರಿಯಾಣಾದ ಕೃಷಿ ನೆಲದಲ್ಲಿ ಆಟ ಕಲಿತ ಬಾಲಕ ಈಗ ದೇಶದ ಹೆಮ್ಮೆಯ ಪುತ್ರ.

ಎರಡು ವಾರಗಳಲ್ಲಿ ಈತ ಎರಡು ಪ್ರಮುಖ ಗಾಲ್ಫ್ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾ ನೆ. ಜುಲೈ 17,2015ರಲ್ಲಿ ಕ್ಯಾಲಿಫೋರ್ನಿಯಾದ ವೆಲ್ಕ್ ರೆಸಾರ್ಟ್ ಫೌಂಟೇನ್ ಕೋರ್ಸ್​ನಲ್ಲಿ ನಡೆದ ಪ್ರತಿಷ್ಠಿತ ಐಎಂಜಿ (ಇಂಟರ್ನ್ಯಾಷನಲ್ ಮ್ಯಾನೇಜ್​​ಮೆಂಟ್​​​ ಗ್ರೂಪ್) ಅಕಾಡೆಮಿ ಜೂನಿಯರ್ ವರ್ಲ್ಡ್ ಗಾಲ್ಫ್ ಚಾಂಪಿಯನ್​​​ಶಿಪ್​​ ಗೆದ್ದುಕೊಂಡಿದ್ದಾನೆ. ಹಿಂದಿನ ವರ್ಷ ಇದೇ ಪಂದ್ಯಾವಳಿಯ ರನ್ನರ್ ಅಪ್ ಆಗಿದ್ದ. ಲಾಸ್ ವೇಗಾಸ್​​ನಲ್ಲಿ ಜುಲೈ 23, 2015 ರಂದು ನಡೆದ IJGA (ಇಂಟರ್​​ನ್ಯಾಷನಲ್ ಜೂನಿಯರ್ ಗಾಲ್ಫ್ ಅಕಾಡೆಮಿ) ವರ್ಲ್ಡ್ ಸ್ಟಾರ್ಸ್ ಆಫ್ ಜೂನಿಯರ್ ಗಾಲ್ಫ್ ಪಂದ್ಯಾವಳಿಯಲ್ಲೂ ಕಿರೀಟ ಮುಡಿಗೇರಿಸಿಕೊಂಡಿದ್ದಾನೆ.

ಸದ್ಯ ದೆಹಲಿಯಲ್ಲಿ ವಾಸಿಸುತ್ತಿರುವ ಶುಭಂ, ಗಾಲ್ಫ್ ಪೌಂಡೇಶನ್ ಸಂಸ್ಥಾಪಕ, ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮಾಜಿ ಆಟಗಾರ, ಅರ್ಜುನ ಪ್ರಶಸ್ತಿ ಪುರಸ್ಕೃತ ಅಮಿತ್ ಲುತ್ರಾ ಬಳಿ ತರಬೇತಿ ಪಡೆಯುತ್ತಿದ್ದಾನೆ.

ಈ ಉದಯೋನ್ಮುಖ ಗಾಲ್ಫ್ ಆಟಗಾರ ದೇಶ ಮತ್ತು ವಿದೇಶ ಎರಡರಲ್ಲಿಯೂ ಇಲ್ಲಿಯವರೆಗೆ ಸುಮಾರು 100 ಪಂದ್ಯಾವಳಿಗಳನ್ನು ಗೆದ್ದಿದ್ದಾನೆ. 2012ರಲ್ಲಿ ನ್ಯೂಯಾರ್ಕ್ ಯುಎಸ್ ಕಿಡ್ ಚಾಂಪಿಯನ್​ಶಿಪ್ ಹಾಗೂ ನ್ಯೂ ಜರ್ಸಿ ಯುಎಸ್ ಕಿಡ್ ಚಾಂಪಿಯನ್​​ಶಿಪ್ ಗೆದ್ದಿದ್ದಾನೆ. ತನ್ನ 8ನೇ ವಯಸ್ಸಿನಲ್ಲಿ ಅಂದರೆ 2013ರಲ್ಲಿ ನಡೆದ ಪ್ರತಿಷ್ಠಿತ ಟೈಲರ್ ಮೇಡ್ ಅಡೀಡಸ್ ವಿಶ್ವ ಜೂನಿಯರ್ ಗಾಲ್ಫ್ ಟೂರ್ನಮೆಂಟ್ ಗೆದ್ದಿದ್ದು, ಶುಭಂ ವೃತ್ತಿಜೀವನದ ಮಹತ್ವದ ತಿರುವಾಯ್ತು.

2013ರಲ್ಲಿ ಶುಭಂ, ಎನ್​ಡಿಟಿವಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಮತ್ತು Margdarshan ಪ್ರಶಸ್ತಿ ಪಡೆದಿದ್ದಾನೆ.

ಈತನಿಗೆ ಮಾಜಿ ಗಾಲ್ಫ್ ಆಟಗಾರ ಸೇವೆ ಬಾಲೆಸ್ಟೆರೊಸ್ ಮತ್ತು ಗ್ಯಾರಿ ಪ್ಲೇಯರ್ ಅಚ್ಚುಮೆಚ್ಚಿನ ಆಟಗಾರರಾಗಿದ್ದು, ಟೈಗರ್ ವುಡ್ಸ್ ಮತ್ತು ಭಾರತದ ಗಾಲ್ಫರ್ ಶಿವ ಕಪೂರ್ ಅವರ ದೊಡ್ಡ ಅಭಿಮಾನಿ ಶುಭಂ.

ಅಮೆರಿಕಾದ ದಂತಕಥೆಯಾಗಿರುವ ಗಾಲ್ಫ್ ಆಟಗಾರ ಜ್ಯಾಕ್ ನಿಕ್ಲಾಸ್ ಸಾಧನೆಗಳನ್ನು ಅನುಕರಿಸಲು ಶುಭಂ ಬಯಸುತ್ತಾರೆ. ಜ್ಯಾಕ್ ತಮ್ಮ ಅವಧಿಯಲ್ಲಿ 18 ಪ್ರಮುಖ ಚಾಂಪಿಯನ್​ಶಿಪ್​​​ಗಳನ್ನು ಗೆದ್ದಿದ್ದರು. ಅವರ ದಾರಿಯಲ್ಲಿ ಸಾಗಬೇಕೆನ್ನುತ್ತಾನೆ ಶುಭಂ. ಈ ಚಿಕ್ಕ ಹುಡುಗನಿಗೆ ನಮ್ಮ ಕಡೆಯಿಂದಲೂ ಆಲ್​​ ದಿ ಬೆಸ್ಟ್​​..!