ಗೋ ರಕ್ಷಣೆ ಹೆಸರಲ್ಲಿ ಅಮಾನವೀಯತೆ..!

ಆಶುತೋಷ್, ಎಎಪಿ ನಾಯಕ 

ಗೋ ರಕ್ಷಣೆ ಹೆಸರಲ್ಲಿ ಅಮಾನವೀಯತೆ..!

Wednesday August 17, 2016,

3 min Read

ನಾನು ಆಗಿನ್ನೂ ಚಿಕ್ಕವನಿದ್ದೆ. ನಾವು ಆಗ ಐತಿಹಾಸಿಕ ನಗರಗಳಾದ ವಾರಣಾಸಿ ಮತ್ತು ಅಲಹಾಬಾದ್ ಮಧ್ಯೆ ಇರುವ ಮಿರ್ಜಾಪುರದಲ್ಲಿದ್ವಿ. ನನ್ನ ತಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ರು. ಪ್ರತಿದಿನ ಸಂಜೆ ಅವರ ಜವಾನ ನಮ್ಮ ಮನೆಗೆ ಬರ್ತಾ ಇದ್ದ, ಅವನಿಗೆ ಚಹಾ ಮತ್ತು ಬಿಸ್ಕತ್ತು ಕೊಡುವುದು ವಾಡಿಕೆ. ಆದ್ರೆ ಆತನ ಕಪ್ ಮತ್ತು ಪ್ಲೇಟ್ ವಿಭಿನ್ನವಾಗಿದ್ದವು. ನಾವು ಸ್ಟೀಲಿನ ತಟ್ಟೆ ಮತ್ತು ಲೋಟ ಬಳಸುತ್ತಿದ್ವಿ. ಅವನಿಗೆ ಪಿಂಗಾಣಿ ಪಾತ್ರೆಗಳಲ್ಲಿ ಕೊಡಲಾಗ್ತಿತ್ತು. ಅವುಗಳನ್ನು ನಮ್ಮ ಪಾತ್ರೆ ಜೊತೆಗೆ ಇಡುತ್ತಿರಲಿಲ್ಲ, ತೊಳೆದು ಪ್ರತ್ಯೇಕವಾಗಿ ಇಡಲಾಗುತ್ತಿತ್ತು. ನಾನಿನ್ನೂ ಚಿಕ್ಕವನಾಗಿದ್ರಿಂದ ಇದೊಂದು ದೊಡ್ಡ ವಿಷಯ ಅನ್ನೋದೇ ನನಗರ್ಥವಾಗ್ತಿರಲಿಲ್ಲ. ಒಂದು ದಿನ ಈ ಬಗ್ಗೆ ಅಮ್ಮನನ್ನು ಕೇಳಿದೆ.

ನನ್ನ ತಾಯಿ ಉತ್ತರಪ್ರದೇಶದ ಚಿಕ್ಕ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದವರು, ಅವರಿಗೆ ಓದುವುದು, ಬರೆಯುವುದು ಗೊತ್ತಿಲ್ಲ. ನನ್ನ ಪ್ರಶ್ನೆಗೆ ಅವರು ಮುಗ್ಧವಾಗಿ ಉತ್ತರಿಸಿದ್ರು - ಆತ ಎಸ್​ಸಿಎಸ್ಟಿಯವನಲ್ಲವೇ? ಅಂತಾ ನನ್ನನ್ನು ಕೇಳಿದ್ರು. ಆಗ ನನಗೇನೂ ಅರ್ಥವಾಗಲಿಲ್ಲ, ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಅಸ್ಪ್ರಶ್ಯತೆ ಎಂದು ಕರೆಸಿಕೊಳ್ಳುವ ಈ ಪುರಾತನ ಅಭ್ಯಾಸದ ಅರಿವಾಯ್ತು. ಆ ಜವಾನ ನಮ್ಮನ್ನೆಲ್ಲ ತುಂಬಾನೇ ಹಚ್ಚಿಕೊಂಡಿದ್ದ, ಆದ್ರೆ ನಮ್ಮ ಮನೆಯ ಪಾತ್ರೆಗಳನ್ನಾಗ್ಲಿ, ಆಹಾರವನ್ನಾಗ್ಲಿ ಮುಟ್ಟುತ್ತಿರಲಿಲ್ಲ, ತಾನು ಬಳಸಿದ ಕಪ್, ಪ್ಲೇಟ್​ಗಳನ್ನು ತಾನೇ ತೊಳೆದಿಡುತ್ತಿದ್ದ.

ಬರ್ತಾ ಬರ್ತಾ ನನ್ನ ಫ್ರೆಂಡ್ಸ್ ಸರ್ಕಲ್ ಕೂಡ ದೊಡ್ಡದಾಯ್ತು. ಗೆಳೆಯ, ಗೆಳತಿಯರೆಲ್ಲ ಮನೆಗೆ ಬರೋದು, ಹೋಗೋದು ಸರ್ವೇಸಾಮಾನ್ಯವಾಗಿಬಿಡ್ತು. ಆಗ ಅವರೆಲ್ಲ ಯಾವ ಜಾತಿ ಅನ್ನೋದನ್ನು ತಿಳಿದುಕೊಳ್ಳಲು ನನ್ನಮ್ಮನಿಗೆ ಸಾಧ್ಯವಾಗ್ತಿರಲಿಲ್ಲ. ಅವರಲ್ಲಿ ಓರ್ವ ಮುಸ್ಲಿಂ, ಮತ್ತು ಹಿಂದುಳಿದ ವರ್ಗದವರು ಕೂಡ ಇದ್ದರು. ಅದು ಗೊತ್ತಾದ್ರೂ ನನ್ನ ತಾಯಿ ಆಕ್ಷೇಪಿಸಲಿಲ್ಲ. ಎಲ್ಲರನ್ನೂ ಒಪ್ಪಿಕೊಂಡು ಆದರಿಸಿದ್ರು. ಇದರಿಂದ ಗೊತ್ತಾಗೋದು ಏನಂದ್ರೆ ಎಲ್ಲಾ ಮನೆಗಳಲ್ಲೂ ಅಸ್ಪ್ರಶ್ಯತೆಗೆ ಹೆಚ್ಚು ಆಯುಷ್ಯವಿಲ್ಲ ಅನ್ನೋದು. ಕಾಲ ಬದಲಾದಂತೆ ಪುರುಷರು, ಮಹಿಳೆಯರು ಎಲ್ಲರೂ ತಮ್ಮ ಸೂತ್ರನೇಮಗಳನ್ನು ಬಿಟ್ಟುಕೊಡಲೇಬೇಕು.

ನನ್ನಮ್ಮ ಬದಲಾಗಿದ್ದಾರೆ. ಆಕೆ ದಡ್ಡಿ ಹಾಗೂ ಧಾರ್ಮಿಕ ಮನೋಭಾವ ಉಳ್ಳವರು. ಆದ್ರೆ ನನ್ನ ತಂದೆ ಹಾಗಲ್ಲ, ಪದವೀಧರರು ಜೊತೆಗೆ ಸರ್ಕಾರಿ ಉದ್ಯೋಗದಲ್ಲಿದ್ದವರು. ಉದಾರ ಗುಣ ಹೊಂದಿದ್ದರೂ ನನ್ನ ತಾಯಿಯ ಆಚರಣೆಗಳಿಗೆ ಅಡ್ಡಿ ಬಂದವರಲ್ಲ. ಆದ್ರೀಗ ನನ್ನ ಸ್ನೇಹಿತರ ಜಾತಿಯ ಬಗ್ಗೆ ಅವರಿಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಈಗಲೂ ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಪೂಜೆ ಮುಗಿಸಿಯೇ ತಿಂಡಿ ತಿನ್ನುತ್ತಾರೆ. ಧಾರ್ಮಿಕ ಮಹತ್ವವುಳ್ಳ ದಿನಗಳಲ್ಲಿ ಉಪವಾಸ ಮಾಡ್ತಾರೆ. ಖಂಡಿತವಾಗ್ಲೂ ಇದು ನಮಗೆ ಪಾಠವಾಗಬಲ್ಲದು. ನನ್ನ ಪೋಷಕರು ಹಿಂದುಗಳು, ಧಾರ್ಮಿಕ ಮನೋಭಾವ ಉಳ್ಳವರು. ಆದ್ರೆ ಮತಾಂಧರಲ್ಲ. ಬದುಕಿನ ಮಾನ್ಯತೆ ಮತ್ತು ಜ್ಞಾನೋದಯದಿಂದ ಅವರು ಬದಲಾಗಿದ್ದಾರೆ. ಅವರ ಉದಾರ ಮೌಲ್ಯಗಳಿಗೆ ನಾನು ಬದ್ಧನಾಗಿರಬೇಕು. ಹಳೆಯ ಸಾಮಾಜಿಕ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಹಠ ಹಿಡಿದಿದ್ದರೆ ಏನಾಗುತ್ತಿತ್ತು ಎಂದು ನಾನು ಅಂಜುತ್ತೇನೆ.

ಗೋ ರಕ್ಷಕ ದಳದ ಕಾರ್ಯಕರ್ತರು ದಲಿತರನ್ನು ಥಳಿಸುವ ದೃಶ್ಯ ನೋಡಿ ಕಳೆದ ತಿಂಗಳು ನಾನು ವಿಚಲಿತನಾಗಿದ್ದೆ, ಅದು ನನ್ನ ಬಾಲ್ಯದ ನೆನಪುಗಳನ್ನು ಮರುಕಳಿಸಿತ್ತು. ಗೋ ರಕ್ಷಕ ದಳದ ಕಾರ್ಯಕರ್ತರ ಈ ಕೃತ್ಯ, ಆಳವಾಗಿ ಬೇರುಬಿಟ್ಟ ಪಕ್ಷಪಾತ ಮತ್ತು ದಲಿತರನ್ನು ಮಾನವ ಘನತೆಯಿಂದ ನೋಡಲು ಸಾಧ್ಯವಾಗದ ಮನಸ್ಥಿತಿಯ ಪರಿಣಾಮ. ಇದು ಹಸುಗಳನ್ನು ರಕ್ಷಿಸುವ ಉತ್ಸಾಹದ ಪ್ರತಿಬಿಂಬವಲ್ಲ. ಅವರಿಗೆ ನಿಜವಾದ ಕಳಕಳಿಯಿದ್ರೆ ಹೆದ್ದಾರಿಗಳಲ್ಲಿ ಸಾಯುತ್ತಿರುವ ಹಸುಗಳನ್ನು ರಕ್ಷಿಸ್ತಾ ಇದ್ರು. ಹಸುಗಳ ಪಾಲನೆ ಮತ್ತು ರಕ್ಷಣೆಗಾಗಿ ಸರ್ಕಾರಕ್ಕೆ ನೆರವಾಗುತ್ತಿದ್ರು. ದೇಶಾದ್ಯಂತ ಗೋಮಾಂಸ ನಿಷೇಧಿಸುವಂತೆ ಮೋದಿ ಸರ್ಕಾರವನ್ನು ಆಗ್ರಹಿಸುತ್ತಿದ್ರು. ಮೋದಿ ನಾಯಕತ್ವದಲ್ಲೂ, ಭಾರತ ಗೋಮಾಂಸ ರಫ್ತು ಮಾಡ್ತಿರೋ ವಿಶ್ವದ ನಂಬರ್ 1 ದೇಶ ಎನಿಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಅಸ್ಪ್ರಶ್ಯತೆ ಸಾವಿರಾರು ವರ್ಷಗಳಿಂದ ಹಿಂದು ಸಮಾಜದಲ್ಲಿ ಆಚರಣೆಯಲ್ಲಿರುವ ಕಡು ವಾಸ್ತವ ಅನ್ನೋದನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಸಮಾಜದಲ್ಲಿ ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ಯಾವ ಹಕ್ಕುಗಳೂ ಇಲ್ಲ, ಅವರನ್ನೆಂದೂ ಸಮಾಜದಲ್ಲಿ ಸಮಾನವಾಗಿ ನೋಡಿಲ್ಲ. ಇತ್ತೀಚಿನ ದಿನಗಳಲ್ಲೂ ಗುಲಾಮಗಿರಿ ಜೀವಂತವಾಗಿದೆ. ಅಸ್ಪ್ರಶ್ಯತೆ ಆಚರಿಸುತ್ತಿರುವವರು ಮತ್ತು ಅನುಭವಿಸುತ್ತಿರುವವರಿಬ್ಬರೂ ಧರ್ಮದ ಪರಿಪಾಲನೆ ಎಂಬ ಭಾವನೆಯಲ್ಲಿದ್ದಾರೆ. ಹಿಂದಿನ ಜನ್ಮದಲ್ಲಿ ಕೆಟ್ಟ ಕೆಲಸ ಮಾಡಿದ ಪ್ರತಿಫಲ ಉಣ್ಣುತ್ತಾರೆ, ಈ ಜನ್ಮದಲ್ಲಿ ಒಳ್ಳೆಯ ಕೆಲಸ ಮಾಡಿದ್ರೆ ಆ ಪಾಪಗಳೆಲ್ಲ ನಿವಾರಣೆಯಾಗುತ್ತೆ ಅನ್ನೋ ನಂಬಿಕೆಯಿದೆ. ಅಷ್ಟೇ ಅಲ್ಲ ಅವರು ಬ್ರಾಹ್ಮಣರಾಗುತ್ತಾರೆ ಎನ್ನಲಾಗುತ್ತೆ. ಆದ್ರೆ ಈ ಜನ್ಮದಲ್ಲಿ ಅವರು ನರಕ ಅನುಭವಿಸಬೇಕಾಗುತ್ತದೆ.

ಅಸ್ಪ್ರಶ್ಯತೆ ಮತ್ತು ಅಸಮಾನತೆ ತೊಡೆದುಹಾಕುವ ಬಗ್ಗೆ ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ಕಾನೂನಿನ ಪ್ರಕಾರ ಎಲ್ಲರೂ ಸರಿಸಮಾನರು, ಮೇಲ್ಜಾತಿಯವರಿಗಿರುವ ಎಲ್ಲ ಹಕ್ಕುಗಳು ದಲಿತರಿಗೂ ಇವೆ. ಆದ್ರೆ ಜಾತಿಯ ಆಧಾರದ ಮೇಲೆ ಸಮಾಜ ಒಡೆದಿದೆ. ಸಾವಿರಾರು ವರ್ಷಗಳ ಮನಸ್ಥಿತಿ ರಾತ್ರೋರಾತ್ರಿ ಬದಲಾಗಲು ಸಾಧ್ಯವಿಲ್ಲ. ಆದ್ರೆ ಸಂವಿಧಾನಾತ್ಮಕ ಸಮಾನತೆ ದಲಿತರ ಮನಸ್ಸುನ್ನು ಕಾಂತ್ರಿಕಾರಿಯಾಗಿ ಬದಲಾಯಿಸಿದೆ. ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿರುವ ಮಾನವೀಯ ಘನತೆ, ಮತ್ತು ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ಇದು ಮೇಲ್ಜಾತಿಯವರಿಗೆ ಇಷ್ಟವಾಗುತ್ತಿಲ್ಲ. ಪರಿಣಾಮ ಸಂಘರ್ಷ ಹೆಚ್ಚುತ್ತಿದೆ. ದಲಿತರಿಗೆ ಪಾಠ ಕಲಿಸುವ ನೆಪದಲ್ಲಿ ನಡೆಯುವ ಇಂತಹ ಕೃತ್ಯಗಳು ಜಾತಿ ಶ್ರೇಣಿಯಲ್ಲಿ ತಮ್ಮ ಐತಿಹಾಸಿಕ ಸ್ಥಾನ ತೋರ್ಪಡಿಸಿಕೊಳ್ಳುವ ಒಂದು ಪ್ರಯತ್ನ. ದಲಿತರನ್ನು ಹತ್ತಿಕ್ಕಲು ನಡೆಯುತ್ತಿರುವ ಪ್ರಯತ್ನ. ಪ್ರಜಾಪ್ರಭುತ್ವದಲ್ಲಿರುವ ಸಮರ್ಥನೀಯ ನಿಯಮಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರಯತ್ನವೂ ಹೌದು.

ನನ್ನ ಪೋಷಕರು ಕೂಡ ಸಾವಿರಾರು ವರ್ಷಗಳಷ್ಟು ಹಳೆಯ ಅಸ್ಪ್ರಶ್ಯತೆ ಆಚರಣೆಯ ಬಲಿಪಶುಗಳಾಗಿದ್ದಾರೆ. ಆದ್ರೆ ಅವರು ವಾಸ್ತವವನ್ನು ಎದುರಿಸಿ ಬದಲಾಗಿದ್ದಾರೆ. ಆಧುನಿಕತೆಗಾಗಿ ಅವರು ಹೋರಾಡಲಿಲ್ಲ. ಆದ್ರೆ ದಲಿತರ ಮೇಲೆ ಹಲ್ಲೆ ಮಾಡುತ್ತಿರುವವರು ಇಂದಿಗೂ ಅಸ್ಪ್ರಶ್ಯತೆ ಆಚರಣೆಯ ಪರಿಪಾಲಕರು. ಮನುಷ್ಯರನ್ನು ಮನುಷ್ಯರಂತೆ ನೋಡದ ಸಮಾಜದ ಅಮಾನವೀಯ ವರ್ತನೆಯ ರಕ್ಷಕರು ಅವರು. ಅವರು ಬದಲಾಗಲು ನಿರಾಕರಿಸುತ್ತಿದ್ದಾರೆ, ಆಧುನಿಕತೆಯ ಶತ್ರುಗಳಾಗಿದ್ದಾರೆ. ತಾವು ಹೋರಾಡಬೇಕು, ಹಿಂದುಳಿದ ವರ್ಗದವರನ್ನು ಸೋಲಿಸಬೇಕು ಎಂಬುದಷ್ಟೇ ಅವರ ಉದ್ದೇಶ. ಆದ್ರೆ ದಲಿತರಲ್ಲಿ ಆತ್ಮವಿಶ್ವಾಸವಿದೆ, ಅವರು ಪ್ರಬುದ್ಧರು ಮತ್ತು ಸಾಮಾಜಿಕ ದುಷ್ಟತೆಯ ವಿರುದ್ಧ ಒಂದಾಗಿದ್ದಾರೆ. ಸಮಾಜದಲ್ಲಿ ತಮ್ಮ ಸ್ಥಾನಮಾನಕ್ಕಾಗಿ ಹೋರಾಡಲು ಅವರಿಗೆ ನಾಚಿಕೆಯೇನಿಲ್ಲ.

ಇದನ್ನೂ ಓದಿ...

ತಾಯ್ತನದ ಹೊಸ್ತಿಲಲ್ಲಿದ್ದೀರಾ? ನಿಮಗಿದೆ ವರ್ಕ್ ಫ್ರಮ್ ಹೋಂ ಅವಕಾಶ..

ಉದ್ಯೋಗಕ್ಕೆ ರಾಜೀನಾಮೆ : ಗ್ರಾಮೀಣ ಶಾಲೆಗಳ ಅಭ್ಯುದಯಕ್ಕೆ ಬದುಕು ಮೀಸಲು - ''ನನ್ನ ಕಥೆ''