ಸ್ನೇಹಿತರ ಕನಸು - ಕೈಮಗ್ಗದ ಬಟ್ಟೆಗಳ ‘ಮಾಕು’ ಟೆಕ್ಸ್​​ಟೈಲ್ಸ್​

ಟೀಮ್​ ವೈ.ಎಸ್​. ಕನ್ನಡ

ಸ್ನೇಹಿತರ ಕನಸು - ಕೈಮಗ್ಗದ ಬಟ್ಟೆಗಳ ‘ಮಾಕು’ ಟೆಕ್ಸ್​​ಟೈಲ್ಸ್​

Tuesday November 24, 2015,

2 min Read

ಉದ್ಯಮ ಅನ್ನೋದು ಯುವಜನತೆಯ ಆಸಕ್ತಿಯ ಕ್ಷೇತ್ರ. ಕಾಲೇಜು ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕೆಲಸಕ್ಕಾಗಿ ಅಲೆದಾಡುವವರು ಒಂದಷ್ಟು ಜನರಾದ್ರೆ, ಹೊಸ ಉದ್ಯಮ ನಡೆಸುವತ್ತ ಹಲವರ ಗಮನ. ಹೊಸ ಚಿಂತನೆಯೊಂದಿಗೆ, ಹೊಸ ಕನಸುಗಳಿಗೆ ನೀರೆರೆದು ಪೋಷಿಸುವುದು ಖುಷಿಪಡುವ ವಿಚಾರವೇ. ಹಾಗಾಗಿಯೇ ಉದ್ಯಮದತ್ತ ಯುವಜನತೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಹೊಸದಾಗಿ ಏನಾದರೂ ಮಾಡಿ ಸಾಧಿಸಬೇಕು ಅನ್ನೋ ಛಲ ಯುವ ಜನತೆಯಲ್ಲಿ ಹೆಚ್ಚಾಗುತ್ತಿದೆ.

image


ಅವಕಾಶದ ಬದಲು ಅದೃಷ್ಟವನ್ನು ಸೃಷ್ಟಿಮಾಡಿಕೊಳ್ಳುವ ತವಕ ಇಂದಿನ ಯುವಜನತೆಗಿದೆ. ಇದೇ ರೀತಿ ಪುಟ್ಟ ಕನಸಿನೊಂದಿಗೆ ರೂಪುಗೊಂಡಿದ್ದು ‘ಮಾಕು ಟೆಕ್ಸ್​ಟೈಲ್ಸ್​’ ಕೈಮಗ್ಗದ ಬಟ್ಟೆಗಳ ಮಳಿಗೆ. ಇಬ್ಬರು ಯುವಕರ ಶ್ರಮ ಈ ಮಾಕು ಟೆಕ್ಸ್​ಟೈಲ್ಸ್​ ಹಿಂದಿದೆ. ಸಣ್ಣದಾಗಿ ರೂಪುಗೊಂಡ ಕೈಮಗ್ಗ ಬಟ್ಟೆಗಳ ಈ ಮಳಿಗೆ ಈಗ ಭಾರತದಲ್ಲಿ ಎಲ್ಲೆಡೆ ಪ್ರಸಿದ್ಧಿ ಹೊಂದಿದೆ.

ಕೇಂದ್ರ ಸರ್ಕಾರ ಕೈಮಗ್ಗ ಉತ್ಪನ್ನಗಳನ್ನು ಜನರ ನಡುವೆ ಹೆಚ್ಚು ಪ್ರಚುರಪಡಿಸಲು ಸಾಕಷ್ಟು ಪ್ರಯತ್ನ ಮಾಡ್ತಿದೆ. ನೇಕಾರರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಸತತ ಪ್ರಯತ್ನಗಳು ನಡೀತಾನೆ ಇವೆ. ಆದ್ರೆ ಪರಿಣಾಮಕಾರಿ ಬದಲಾವಣೆಗಳು ಮಾತ್ರ ಕಂಡು ಬಂದಿಲ್ಲ.

ಕಷ್ಟಪಟ್ಟು ಬಟ್ಟೆಗಳನ್ನು ಸಿದ್ಧಪಡಿಸುವ ನೇಕಾರರು ತೆರೆಮರೆಯ ಹಿಂದೆಯೇ ಉಳಿದಿದ್ದಾರೆ. ತಿಂಗಳುಗಟ್ಟಲೆ ಶ್ರಮವಹಿಸಿ ಕಷ್ಟಪಟ್ಟು ಬಟ್ಟೆಗಳನ್ನು ಸಿದ್ಧಪಡಿಸಿದ್ರೂ ಸೂಕ್ತ ಮಾರುಕಟ್ಟೆಯಿಲ್ಲ. ಸಿದ್ಧಪಡಿಸಿದ ಬಟ್ಟೆಗಳೆಲ್ಲವೂ ಹಾಗೆಯೇ ಉಳಿಯುವ ಕಾರಣ ನೇಕಾರರ ಜೀವನವೂ ಕಷ್ಟ.

ಅಹಮದಾಬಾದ್​ನ ಸಂತನು ದಾಸ್, ನೇಕಾರರ ಈ ಸಮಸ್ಯೆಗಳನ್ನು ಅರಿತಿದ್ದರು. ಹೀಗಾಗಿಯೇ ಕೈ ಮಗ್ಗದ ಬಟ್ಟೆಗಳನ್ನು ಜನಪ್ರಿಯಗೊಳಿಸಿ ನೇಕಾರರನ್ನು ಮೇಲೆತ್ತಲು ಏನಾದರೂ ಮಾಡಬೇಕೆಂದು ನಿರ್ಧರಿಸಿದ್ರು. ಸಂತನು ಅವರ ಕನಸುಗಳಿಗೆ ಸ್ನೇಹಿತ ಚಿರಾಗ್ ಗಾಂಧಿ ಕೂಡಾ ಸಾಥ್ ನೀಡಿದ್ರು. ಇಬ್ಬರ ಚಿಂತನೆಯ ಫಲವಾಗಿ ‘ಮಾಕು ಟೆಕ್ಸ್​ಟೈಲ್ಸ್​’ ರೂಪುಗೊಂಡಿತು.

‘ಮಾಕು ಟೆಕ್ಸ್​ಟೈಲ್ಸ್​’ ಬೆಳೆದು ನಿಂತ ರೀತಿ...

image


ವೈವಿಧ್ಯಮಯ, ಆಧುನಿಕ ಶೈಲಿಯ ಉಡುಪುಗಳು ಲಭ್ಯವಿರುವ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕೈಮಗ್ಗದ ಬಟ್ಟೆಗಳನ್ನು ಮಾರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕೈಮಗ್ಗದ ಬಟ್ಟೆಗಳನ್ನು ಜನರು ಇಷ್ಟಪಡುತ್ತಾರಾದರೂ ಅದರತ್ತ ಆಕರ್ಷಿತರಾಗಿ ಅದನ್ನು ಕೊಂಡುಕೊಳ್ಳಲು ಕಾರಣಗಳೂ ಬೇಕಿತ್ತು. ಹೀಗಾಗಿಯೇ ಸಂತನು ದಾಸ್ ಹಾಗೂ ಚಿರಾಗ್ ಗಾಂಧಿ ವಿನೂತನ ಯೋಜನೆ ಸಿದ್ಧಪಡಿಸಿದ್ರು.

ಕೈಮಗ್ಗದ ಬಟ್ಟೆಗಳನ್ನು ಪ್ರತ್ಯೇಕವಾಗಿ ಡಿಸೈನ್ ಮಾಡಿ ಪಶ್ಚಿಮ ಬಂಗಾಳ, ಕಛ್, ಗುಜರಾತ್ ನೇಕಾರರಿಂದ ಸಿದ್ಧಪಡಿಸಿದ್ರು. ಜನರು ಇಷ್ಟಪಡುವಂತೆ ಕೈಮಗ್ಗದ ಬಟ್ಟೆಗಳಿಗೆ ಮಾಡರ್ನ್ ಟಚ್ ನೀಡಲಾಯ್ತು. ನೇಕಾರರು ಸಿದ್ಧಪಡಿಸಿದ ಈ ಬಟ್ಟೆಗಳನ್ನು ಒಂದೇ ಸೂರಿನಡಿ ತಂದು ಮಾಕು ಟೆಕ್ಸ್​ಟೈಲ್ಸ್​ ಅನ್ನು ಶುರು ಮಾಡಲಾಯ್ತು. ಕೆಲವೇ ದಿನಗಳಲ್ಲಿ ಕೈಮಗ್ಗದ ಈ ಬಟ್ಟೆಗಳು ಬಿಸಿ ದೋಸೆಯಂತೆ ಮಾರಾಟವಾದ್ವು.

ಮಧ್ಯವರ್ತಿಗಳ ಕೆಲಸ ...

‘ಮಾಕು ಟೆಕ್ಸ್​ಟೈಲ್ಸ್​’ ರೂಪುಗೊಳ್ಳುವುದರ ಹಿಂದೆ ಸಂತನು ದಾಸ್ ಹಾಗೂ ಚಿರಾಗ್ ಗಾಂಧಿ ಸಾಕಷ್ಟು ಕೆಲಸ ಮಾಡಿದ್ದರು. ಇಲ್ಲಿ ಅವರಿಗಿದ್ದಿದ್ದು ನೇಕಾರರು ಹಾಗೂ ಮಾರುಕಟ್ಟೆಯ ನಡುವಿನ ಮಧ್ಯವರ್ತಿಗಳ ಕಾರ್ಯ. ಕೈಮಗ್ಗದ ಬಟ್ಟೆಯಲ್ಲೂ ಹೊಸ ಹೊಸ ಡಿಸೈನ್​ನ ಬಟ್ಟೆಗಳು ತಯಾರಾದ್ವು. ಹೊಸ ಯೋಜನೆಯಿಂದಾಗಿ ನೇಕಾರರ ಬೇಡಿಕೆಯೂ ಹೆಚ್ಚಾಯಿತು.

ಕೇವಲ ಅಂಗಡಿ, ಮಳಿಗೆಗಳಲ್ಲಿ ಮಾತ್ರವಲ್ಲದೆ ಕೈಮಗ್ಗ ಬಟ್ಟೆಗಳ ಪ್ರದರ್ಶನದಲ್ಲೂ ಉಡುಪುಗಳು ಮಾರಾಟಗೊಂಡವು. ಬೊಟಿಕ್​ಗಳಲ್ಲೂ ಕೈಮಗ್ಗದ ಬಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಮಾಕು ಟೆಕ್ಸ್​ಟೈಲ್ಸ್​ನಿಂದಾಗಿ ಕೈಮಗ್ಗದ ಬಟ್ಟೆಗಳಿಗೆ ಎಲ್ಲೆಡೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಯ್ತು.

ಬದಲಾವಣೆ ...

image


ಮಾರುಕಟ್ಟೆಯಲ್ಲಿ ನೇಕಾರರಿಗೆ ಮತ್ತು ಕೈಮಗ್ಗದ ಬಟ್ಟೆಗಳಿಗೆ ಡಿಮ್ಯಾಂಡ್ ಹೆಚ್ಚಾಯಿತು. ನೇಕಾರರಿಗೆ ಬೇಡಿಕೆ ಹೆಚ್ಚಿಸಬೇಕೆನ್ನುವ ಇಬ್ಬರು ಸ್ಬೇಹಿತರ ಕನಸು ಕೂಡ ನನಸಾಯಿತು. ಅವರು ರೂಪಿಸಿದ ಯೋಜನೆಯೂ ಯಶಸ್ವಿಯಾಗಿ ಉತ್ತಮ ಆದಾಯವೂ ಕೈ ಸೇರತೊಡಗಿತು. ಕೈಮಗ್ಗದ ಬಟ್ಟೆಗಳ ಹಲವು ಮಳಿಗೆಗಳು ತಲೆಯೆತ್ತತೊಡಗಿದವು.

ತಂದೆ-ತಾಯಿ ನೀಡಿದ ಹಣ ಮತ್ತು ಒಂದಷ್ಟು ಉಳಿತಾಯದ ಹಣದೊಂದಿಗೆ ಸ್ನೇಹಿತರು ಜೊತೆಯಾಗಿ ಆರಂಭಿಸಿದ ಟೆಕ್ಸ್​ಟೈಲ್ಸ್​ ಜನಪ್ರಿಯವಾಗಿದೆ. ಸದ್ಯ ತಿಂಗಳೊಂದಕ್ಕೆ 1 ಲಕ್ಷ ಆದಾಯವನ್ನು ಮಾಕು ಟೆಕ್ಸ್​ಟೈಲ್ಸ್​ ಗಳಿಸುತ್ತಿದೆ. ಮುಖ್ಯವಾಗಿ ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ನಡೆಯುವ ಕೈಮಗ್ಗ ಪ್ರದರ್ಶನದಲ್ಲಿ ಈ ಬಟ್ಟೆಗಳು ಹೆಚ್ಚು ಮಾರಾಟಗೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಮಾಕು ಟೆಕ್ಸ್​ಟೈಲ್ಸ್​ನ ಕೈಮಗ್ಗದ ಬಟ್ಟೆಗಳು ಸುದ್ದಿ ಮಾಡಿವೆ.

ಸದ್ಯ ಅಹಮದಾಬಾದ್ ಹಾಗೂ ಕೋಲ್ಕತ್ತಾದಲ್ಲಿ ಮಾಕು ಟೆಕ್ಸ್​ಟೈಲ್ಸ್​ನ ಶಾಖೆಗಳಿವೆ. ಈ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯನ್ನು ಸ್ನೇಹಿತರು ಹಾಕಿಕೊಂಡಿದ್ದಾರೆ.

ಲೇಖಕರು : ಜುಬಿನ್​ ಮೆಹ್ತಾ

ಅನುವಾದಕರು : ವಿನುತಾ