22 ವರ್ಷಕ್ಕೇ ಕೋಟ್ಯಾಧಿಪತಿಯಾದ !

ಟೀಮ್ ವೈ.ಎಸ್

0

14 ವರ್ಷ ವಯಸ್ಸಿನ ಮಕ್ಕಳು ಏನು ಮಾಡುತ್ತಾರೆ ಹೇಳಿ? ವಿಡಿಯೋ ಗೇಮ್ಸ್ ಆಡುತ್ತಲೋ, ಪಠ್ಯ ಚಟುವಟಿಕೆಯಲ್ಲೋ ಬ್ಯುಸಿ ಇರುತ್ತಾರೆ. ಆದರೆ ಇಂದೋರ್‍ನ ಇಶಾನ್ ವ್ಯಾಸ್, ವರ್ಡ್‍ಪ್ರೆಸ್‍ನ ಡಿಸೈನ್‍ಗಳಲ್ಲಿ ಕೈಯಾಡಿಸುತ್ತಿದ್ದ. ಅದೇ ಆತನಿಗೆ ಚೊಚ್ಚಲ ವೆಬ್‍ಸೈಟ್ ಡಿಸೈನ್ ಮಾಡೋ ಆಫರ್ ತಂದುಕೊಟ್ಟಿತ್ತು. 3,500 ರೂಪಾಯಿಗಳ ಆರ್ಡರ್ ಅದು.

ಅದು 2008. ಆಗ ವೆಬ್‍ಸೈಟ್ ಕ್ರೇಜ್ ಹೆಚ್ಚಾಗಿತ್ತು. ಕಂಪ್ಯೂಟರ್ ಇಲ್ಲದ ಕಂಪನಿಗಳೂ ತಮ್ಮದೊಂದು ವೆಬ್‍ಸೈಟ್ ಇರಲಿ ಅಂತ ಓಡಾಡುತ್ತಿದ್ದರು. 21 ವರ್ಷ ವಯಸ್ಸಾಗುತ್ತಿದ್ದಂತೆಯೇ, ಇಶಾನ್ ಆಸ್ಪ್ರಿಕಾಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ. ಶೂನ್ಯ ಬಂಡವಾಳದೊಂದಿಗೆ ಹುಟ್ಟಿದ ಈ ಸಂಸ್ಥೆ ಸಧ್ಯ 36 ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಹಾಲಿವುಡ್‍ನಲ್ಲಿ ಸ್ವಂತ ಕಚೇರಿ ಹೊಂದಿದೆ. ಸಂಸ್ಥೆಯ ಈಗಿನ ಮೌಲ್ಯ ಎಷ್ಟು ಗೊತ್ತಾ ? 2 ದಶಲಕ್ಷ ಅಮೆರಿಕನ್ ಡಾಲರ್ !. ಆಸ್ಪ್ರಿಕಾಟ್ ಸ್ಥಿರವಾಗಿ ತನ್ನ ವೆಬ್‍ಸೈಟ್ ಅಭಿವೃದ್ಧಿ ನೀತಿಗಳನ್ನು ಬದಲಾಯಿಸುತ್ತಲೇ ಬಂದಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಸಂಸ್ಥೆ ವಿನ್ಯಾಸ ಕ್ಷೇತ್ರದಲ್ಲಿ ಬಹುಪ್ರಸಿದ್ಧಿ ಪಡೆದಿದೆ.

ಟೀಮ್ ಆಸ್ಪ್ರಿಕಾಟ್
ಟೀಮ್ ಆಸ್ಪ್ರಿಕಾಟ್

ಡಿಜಿಟಲ್ ಉದ್ಯಮದಲ್ಲಿ ದೊಡ್ಡ ಕನಸು ಇಟ್ಟುಕೊಂಡು ಹುಟ್ಟಿದ ನವ್ಯೋದ್ಯಮವೇ ಆಸ್ಪ್ರಿಕಾಟ್. ಇದು ಹಲವು ವಿಧಗಳಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಮೊದಲನೆಯದ್ದಾಗಿ, ಆಸ್ಪ್ರಿಕಾಟ್ ಎಂದಿಗೂ ಕಾಪಿ-ಪೇಸ್ಟ್ ಡಿಸೈನ್‍ನಲ್ಲಿ ನಂಬಿಕೆ ಇಟ್ಟಿಲ್ಲ. ಪ್ರತಿ ವೆಬ್‍ಸೈಟ್‍ಗೂ ಹೊಸ ಡಿಸೈನ್ ರೂಪಿಸುತ್ತದೆ. ಗ್ರಾಹಕರಿಗೆ ಗೊತ್ತಿಲ್ಲದ ತಂತ್ರಜ್ಞಾನವನ್ನೂ ವಿವರಿಸಿ, ಅವರಿಗೆ ಬೇಕಾದ ರೀತಿಯಲ್ಲಿ ಕೇವಲ ಆರೇ ದಿನಗಳಲ್ಲಿ ವೆಬ್‍ಸೈಟ್ ರೂಪಿಸಿ ಕೈಗಿಡುವುದು ಸಂಸ್ಥೆಯ ವಿಶೇಷತೆ. “ನಾವು ಪ್ರತಿಸಲವೂ ರೆಸ್ಪಾನ್ಸಿವ್ ವೆಬ್‍ಸೈಟ್ ರೂಪಿಸಿದ್ದೇವೆ. ನಾವು ತಾಂತ್ರಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತೇವೆ. ಉದಾಹರಣೆಗೆ, ನಾವು ವೆಬ್‍ಸೈಟನ್ನು ಹಲವು ಡಿವೈಸ್‍ಗಳಲ್ಲಿ ಪರೀಕ್ಷೆ ಮಾಡುತ್ತೇವೆ. ಯಾವುದೇ ತಪ್ಪು ಇರದಂತೆ ಗಮನ ಹರಿಸುತ್ತೇವೆ. ತುಂಬಾ ಮುಖುವಾಗಿ, ಗೂಗಲ್ ಪುಟದಲ್ಲಿ ವೆಬ್‍ಸೈಟ್‍ನ ವೇಗ 80ಕ್ಕಿಂತ ಹೆಚ್ಚು ಇರುವಂತೆ ನೋಡಿಕೊಳ್ಳುತ್ತೇವೆ. ನಾವು ಒಂದೇ ವೆಬ್‍ಸೈಟ್‍ಅನ್ನು ನಕಲು ಮಾಡಿ ಮತ್ತೊಬ್ಬ ಗ್ರಾಹಕನಿಗೆ ಕೊಡುವುದಿಲ್ಲ.” ಎನ್ನುತ್ತಾರೆ ಇಶಾನ್.

ಎರಡನೆಯದಾಗಿ, ಆಸ್ಪ್ರಿಕಾಟ್ ತನ್ನದೇ ಅದ ವ್ಯವಸ್ಥೆ ಹೊಂದಿದೆ. “ಬಹುತೇಕ ನವ್ಯೋದ್ಯಮಗಳು ತಮ್ಮದೇ ಆದ ಪ್ರೊಸೆಸಸ್ ಮತ್ತು ಸಿಸ್ಟಂಗಳನ್ನು ಹೊಂದುವ ಯೋಚನೆ ಮಾಡುವುದಿಲ್ಲ. ನವ್ಯೋದ್ಯಮಿಯಾಗಿ ನಾನೂ ಕೂಡಾ ಅದೇ ತಪ್ಪನ್ನು ಮಾಡಿದ್ದೆ. ಆದರೆ, ನಾನು ಬಹುಬೇಗ ಆ ತಪ್ಪುಗಳನ್ನು ಗಮನಿಸಿದೆ. ಈಗ ನಮ್ಮ ಬಳಿ ಸ್ಟೆಲ್ಲಾರ್ ಪ್ರೋಸೆಸಸ್, ಆಟೋಮೇಷನ್ ಟೆಕ್ನಿಕ್‍ಗಳಿವೆ. ಹೀಗಾಗಿ ನಮ್ಮ ಕೆಲಸದಲ್ಲಿ ಗುಣಮಟ್ಟ ಕಾಪಾಡಿಕೊಂಡಿದ್ದೇವೆ.” ಎನ್ನುತ್ತಾರೆ ಇಶಾನ್.

ಸಂಸ್ಥಾಪಕ ಇಶಾನ್ ವ್ಯಾಸ್
ಸಂಸ್ಥಾಪಕ ಇಶಾನ್ ವ್ಯಾಸ್

ಕಂಪನಿಯೂ ಸೂಪರ್ ಸ್ಪೆಷಾಲಿಟಿ ಮಾರಾಟ ಮತ್ತು ಬೆಂಬಲಿತ ವ್ಯವಸ್ಥೆಯನ್ನು ಹೊಂದಿದೆ. ಉದಾಹರಣೆಗೆ, ಗ್ರಾಹಕರ ಇ-ಮೇಲ್‍ಗೆ 15 ನಿಮಿಷಗಳಲ್ಲಿ ಉತ್ತರಿಸದೇ ಹೋದರೆ, ಮಾರಾಟ ಪ್ರತಿನಿಧಿಗೆ ದಂಡ ವಿಧಿಸಲಾಗುತ್ತದೆ. ಹೀಗಾಗಿ, ಸಂಸ್ಥೆಯನ್ನು ಸಂಪರ್ಕಿಸುವ ಗ್ರಾಹಕರು ವಾಪಸ್ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ.

ಸಂಸ್ಥೆಯ ಮತ್ತೊಂದು ವಿಶೇಷತೆ ಎಂದರೆ, ಇಲ್ಲಿನ ನೌಕರರ ಪೈಕಿ 60% ಮಹಿಳೆಯರೇ ಇದ್ದಾರೆ. ಅಲ್ಲದೆ ಸಂಸ್ಥೆಯ ಆಯಕಟ್ಟಿನ ಹುದ್ದೆಗಳಲ್ಲೂ ಅವರೇ ಇದ್ದಾರೆ. ಈ ಅನುಪಾತದಲ್ಲಿ ಯಾವುದೇ ಬದಲಾವಣೆ ತರಲೂ ಸಂಸ್ಥೆ ಸಿದ್ಧವಿಲ್ಲ.

ಆತ ಸಿದ್ಧಾಂತ ಮೀರಿದ ಬ್ರಾಹ್ಮಣ ಹುಡುಗ

ಇಶಾನ್ ವ್ಯಾಸ್ ಹುಟ್ಟಿದ್ದು ಬ್ರಾಹ್ಮಣ ಕುಟುಂಬದಲ್ಲಿ. ಅವರ ತಂದೆ ಮದುವೆಯಾಗಿದ್ದು ತಡವಾಗಿ. ಹೀಗಾಗಿ, ಅಪ್ಪ ರಿಟೈರ್ಡ್ ಆಗುವ ವೇಳೆಗೆ ಇಶಾನ್ ಇನ್ನೂ ಯೌವ್ವನಕ್ಕೆ ಕಾಲಿಟ್ಟಿರಲಿಲ್ಲ. ಭವಿಷ್ಯವನ್ನು ಮನಗೊಂಡೇ ಆತನ ತಂದೆ, ಇಶಾನ್‍ನನ್ನು ಆದಷ್ಟು ಸ್ವತಂತ್ರವಾಗಿ ಬೆಳೆಯುವ ಹಾದಿಯಲ್ಲಿ ಮುನ್ನಡೆಸಿದ್ದರು.

“ನಾನು ಕ್ಲಾಸ್‍ರೂಂ ವಿದ್ಯಾರ್ಥಿಯಾಗಿರಲಿಲ್ಲ. ನಾನು ಉದ್ಯಮಕ್ಕೆ ಕಾಲಿಡಲು ಯೋಚಿಸುತ್ತಾ, ಹತ್ತನೇ ತರಗತಿಯಲ್ಲಿ ಗಣಿತವನ್ನೇ ಕೈಬಿಟ್ಟಿದ್ದೆ. ಹನ್ನೊಂದನೇ ತರಗತಿಗೆ ಹೋಗುತ್ತಿದ್ದಾಗ, 11 ತಿಂಗಳುಗಳನ್ನು ಸಂಸ್ಥೆಯೊಂದರಲ್ಲಿ ದುಡಿಯುತ್ತಾ ಕಳೆದಿದ್ದೆ. ಬಳಿಕ ಬಿಬಿಎಂ ಪದವಿ ಪಡೆಯಲು ಬೆಂಗಳೂರಿಗೆ ಹೋದೆ.” ಎಂದು ತಮ್ಮ ಜೀವನದ ಹಾದಿ ಸ್ಮರಿಸುತ್ತಾರೆ ಇಶಾನ್.

ಬೆಂಗಳೂರಿನಲ್ಲಿದ್ದಾಗಲೇ ಪ್ರಮುಖ ನ್ಯೂಸ್ ಪೋರ್ಟಲ್ ಒಂದರಲ್ಲಿ ಡಿಸೈನರ್ ಆಗಿ ಕೆಲಸ ಮಾಡಿದರು. ಅದೇ ಅವರಿಗೆ ನವ್ಯೋದ್ಯಮ ಸ್ಥಾಪಿಸಲು ಸ್ಪೂರ್ತಿಯಾಯಿತು. ತನ್ನಿಬ್ಬರು ಗೆಳೆಯರು, ಒಂದು ಲ್ಯಾಪ್‍ಟಾಪ್, ಮತ್ತು ಒಂದು ಡೆಸ್ಕ್ ಟಾಪ್ ಜೊತೆಗೆ ಒಂದು ರೂಪಾಯಿಯೂ ಇಲ್ಲದೆ 2013ರ ಜುಲೈನಲ್ಲಿ ಕಂಪನಿ ಸ್ಥಾಪಿಸಿಬಿಟ್ಟಿದ್ದರು ಇಶಾನ್. ಅಚ್ಚರಿಯೆಂದರೆ, ಕೇವಲ 20 ದಿನಗಳಲ್ಲೇ 1 ಲಕ್ಷ ರೂಪಾಯಿ ಮೌಲ್ಯದ ಆರ್ಡರ್ ಪಡೆದಿದ್ದರು.

“ನಾನು ನಮ್ಮ ಕುಟುಂಬಕ್ಕೆ ಎಷ್ಟು ಆಭಾರಿಯಾಗಿದ್ದರೂ ಸಾಲದು. ಕಾರಣ, ನಮ್ಮ ಸಮುದಾಯವು ವ್ಯಾಪಾರ ಮಾಡುವುದನ್ನು ಒಪ್ಪುವುದಿಲ್ಲ.” ಎನ್ನುತ್ತಾರೆ ಇಶಾನ್.

ಆರಂಭದಲ್ಲಿ ಬೇರೆ ಸವಾಲುಗಳೂ ಎದುರಾಗಿದ್ದವು. “ಜನ ಈಗಲೂ ಮತ್ತೊಬ್ಬರನ್ನು ಅವರ ವಯಸ್ಸಿನಿಂದ ಅಳೆಯುತ್ತಾರೆ. ನನ್ನ ವಹಿವಾಟು ಬೇರೆಯದ್ದೇ ಮಾದರಿಯದ್ದಾಗಿದೆ ಮತ್ತು ಎಲ್ಲರಿಗೂ ಸಂಬಳ ಕೊಡುವಷ್ಟು ಶಕ್ತನಾಗಿದ್ದೇನೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ತುಂಬಾ ಕಷ್ಟ ಪಟ್ಟಿದ್ದೇನೆ.” ಎನ್ನುತ್ತಾರೆ ಇಶಾನ್.

ಈಗ ವಯಸ್ಸು ಮತ್ತು ಸಂಖ್ಯೆಗಳತ್ತ ಗಮನಹರಿಸೋಣ. ಕೇವಲ 22 ವರ್ಷ ವಯಸ್ಸಿನ ಹುಡುಗ ಹುಟ್ಟಿಹಾಕಿದ ಈ ಡಿಜಿಟಲ್ ಉದ್ಯಮ, ಈಗಾಗಲೇ ವೈವಿಧ್ಯಮಯ ವಲಯಗಳಲ್ಲಿ ಸೇವೆ ಸಲ್ಲಿಸಿದೆ. ರಿಯಲ್ ಎಸ್ಟೇಟ್, ಆರೋಗ್ಯಸೇವೆ, ಉಡುಪು, ಮೊಬೈಲ್ ಅಪ್ಲಿಕೇಶನ್ ನವ್ಯೋದ್ಯಮಗಳು, ಸೇರಿದಂತೆ ಸಿಸ್ಕೋ, ಐಬಿಎಂ ಮತ್ತು ದುಬೈ ಏರ್‍ಶೋಗಳಿಗೆ ವೆಬ್‍ಸೈಟ್‍ಗಳನ್ನು ರೂಪಿಸಿಕೊಟ್ಟಿದೆ. ಇಂದೋರ್‍ನಲ್ಲಿ ಮುಖ್ಯಕಚೇರಿ ಹೊಂದಿರುವ ಆಸ್ಪ್ರಿಕಾಟ್ ಹಾಲಿವುಡ್‍ನಲ್ಲೂ ಕಚೇರಿ ಹೊಂದಿದ್ದು, ಅಂತಾರಾಷ್ಟ್ರೀಯ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಈ ನವ್ಯೋದ್ಯಮವು ವಿವಿಧ ಹೂಡಿಕೆದಾರರ ಜೊತೆ ಮಾತುಕತೆಯಲ್ಲಿದೆ. ಅಂದಾಜಿನ ಪ್ರಕಾರ ಕಂಪನಿಯ ಈಗಿನ ಮೌಲ್ಯ 2 ದಶಲಕ್ಷ ಡಾಲರ್.

“ಜನರು ತಾವೇನು ಮಾಡಬೇಕು ಎನ್ನುವುದರ ಬಗ್ಗೆ ಮಾತನಾಡುತ್ತಾರೆ ಮತ್ತು ಗಂಭೀರವಾಗಿ ಅದನ್ನು ಮಾಡುತ್ತಾರೆ. ನಾವು ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎನ್ನುವುದನ್ನು ಪರಿಶೀಲಿಸುತ್ತೇವೆ. ಜನರು ನೀಡಿರುವ ಸಲಹೆಗಳನ್ನು ಅಳವಡಿಸಲು ಹೋಗಿ ಸೋತಿರಬಹುದು. ಆದರೆ, ಅದೇ ಕೆಲಸವನ್ನು ಇನ್ನೂ ಉತ್ತಮ ರೀತಿಯಲ್ಲಿ ಮಾಡುವುದನ್ನು ಕಲಿತಿದ್ದೇವೆ.” ಎನ್ನುತ್ತಾರೆ ಇಶಾನ್.

ಮುಂದಿನ ಹಾದಿ

ಹೊಸತನದ ಬಗ್ಗೆ ಮಾತನಾಡುವ ಇಶಾನ್, ನಾವು ಎಂದಿಗೂ ಸಂಶೋಧನೆ ಮತ್ತು ಹೊಸ ಕ್ಷೇತ್ರಗಳನ್ನು, ಹೊಸ ವೇದಿಕೆಗಳನ್ನು ಎಲ್ಲರಿಗಿಂತ ಮುಂಚಿತವಾಗಿ ಬಳಸಿಕೊಳ್ಳುವುದರಲ್ಲಿ ನಂಬಿಕೆ ಇಟ್ಟಿದ್ದೇವೆ ಎನ್ನುತ್ತಾರೆ. “ ನಾವು ಈಗಾಗಲೇ ವೇರೇಬಲ್ ಗಳತ್ತ ಗಳತ್ತ ವಾಲುತ್ತಿದ್ದೇವೆ. ನಾವು ಈಗಾಗಲೇ ಆಪಲ್ ವಾಚ್ ಆಪ್ಸ್ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ಮುಂದಿನ ನಮ್ಮ ಗುರಿ ಆಕ್ಯುಲರ್ ವಿಆರ್,” ಎನ್ನುತ್ತಾರೆ ಇಶಾನ್.

ಈಗಾಗಲೇ 22 ಜನರ ಬಲಿಷ್ಟ ತಂಡವಿದೆ. ವರ್ಷಾಂತ್ಯದ ವೇಳೆಗೆ 100 ಜನರ ತಂಡ ಹೊಂದುವುದು ಸಂಸ್ಥೆಯ ಗುರಿ. “ ಮುಂದಿನ ವರ್ಷದ ವೇಳೆಗೆ 1000 ಉದ್ಯೋಗಿಗಳನ್ನು ಹೊಂದಬೇಕು. ಆಸ್ಪ್ರಿಕಾಟ್ ಭಾರತದಲ್ಲೇ ಅತಿ ದೊಡ್ಡ ಡಿಜಿಟಲ್ ಬ್ಯುಸಿನೆಸ್ ಕಂಪನಿಯಾಗಬೇಕು.” ಎಂದು ಇಶಾನ್ ಕನಸು ಹಂಚಿಕೊಳ್ಳುತ್ತಾರೆ.

“ಕಲೆಯಲ್ಲಿ ಯಾವುದೇ ರಾಜಿ ಇಲ್ಲ, ಆದರೆ ಬದುಕು ತುಂಬಾ ರಾಜಿಗಳಿಂದಲೇ ತುಂಬಿಕೊಳ್ಳುತ್ತದೆ,” ಎಂಬ ತತ್ವದಂತೆ ಸಂಸ್ಥೆ ಹಾದಿ ಸವೆಸುತ್ತಿದೆ. ಅಷ್ಟೇ ಏಕೆ, ಆಸ್ಪ್ರಿಕಾಟ್, ಕಲೆಯಂತೆಯೇ ಡಿಜಿಟಲ್ ಬ್ಯುಸಿನೆಸ್ ಅನ್ನು ಮುನ್ನಡೆಸುತ್ತಿದೆ.

Related Stories