ಹೂಡಿಕೆದಾರರಿಗೆ ಕರ್ನಾಟಕದಲ್ಲಿದೆ ಬಂಪರ್​ ಕೊಡುಗೆ - ಸಿಎಂ ಸಿದ್ದರಾಮಯ್ಯ ಅಭಯ

ಟೀಮ್​ ವೈ.ಎಸ್​.ಕನ್ನಡ

0

ಜಾಗತಿಕ ಹೂಡಿಕೆದಾರರನ್ನು ಒಂದೇ ವೇದಿಕೆಯಡಿ ತರುವತ್ತ ಚಿತ್ತ ಹರಿಸಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಏನೆಲ್ಲಾ ಕೊಡುಗೆಗಳನ್ನು ಕೊಡಬಹುದು ಅನ್ನೋ ಕುತೂಹಲ ಬಂಡವಾಳಗಾರರು, ಕೈಗಾರಿಕೋದ್ಯಮಿಗಳು, ವಿವಿಧ ರಾಷ್ಟ್ರಗಳಿಂದ ಬಂದ ರಾಯಭಾರಿಗಳು ಅತಿಥಿಗಳಲ್ಲಿ ಮನೆಮಾಡಿತ್ತು. ನಾವೀನ್ಯತೆಗೆ, ಹೊಸತನಕ್ಕೆ ಕರ್ನಾಟಕ ರಾಜ್ಯ ಹೇಗೆ ತೆರೆದುಕೊಳ್ಳುತ್ತಿದೆ ಅನ್ನೋದನ್ನು ಸಿಎಂ ಸಿದ್ದರಾಮಯ್ಯ ಹೂಡಿಕೆದಾರರ ಸಮಾವೇಶದಲ್ಲಿ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜ್ಯವೇ ದೇಶದ ಭವಿಷ್ಯ ಅಂತಾ ಅವರು ಬಣ್ಣಿಸಿದ್ದಾರೆ.

ವಿಶೇಷವಾಗಿ ಬೆಂಗಳೂರಿನಲ್ಲಿ ವಿವಿಧ ಉದ್ಯಮಗಳು ಮತ್ತು ಸ್ಟಾರ್ಟ್​ಅಪ್​ಗಳ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಗರ ಉದ್ಯಮಶೀಲತೆ ಬೆಳೆಯುವಂತೆ ನೋಡಿಕೊಂಡಿದೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನ ಕಂಪನಿಗಳು ಉಳಿದ ರಾಜ್ಯ ಹಾಗೂ ನಗರಗಳಿಗೆ ನಿಜಕ್ಕೂ ಮಾದರಿ ಎನ್ನುತ್ತಾರೆ ಸಿದ್ದರಾಮಯ್ಯ. ''ಇಲ್ಲಿ ನೆಮ್ಮದಿಯಾಗಿ, ಆರಾಮದಾಯಕವಾಗಿ, ಯಾವುದೇ ನಿರ್ಬಂಧಗಳಿಲ್ಲದೆ ಉದ್ಯಮವನ್ನು ಮುನ್ನಡೆಸುವಂತಹ ಪರಿಸರವನ್ನು ಸರ್ಕಾರ ನಿರ್ಮಾಣ ಮಾಡಿಕೊಡಲಿದೆ'' ಎಂದು ಅವರು ಭರವಸೆ ನೀಡಿದ್ದಾರೆ. ಉದ್ಯಮಗಳ ಬೆಳವಣಿಗೆ ಹಾಗೂ ಔದ್ಯಮಿಕ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಲು ಮುಕ್ತ ನೀತಿಗಳಲ್ಲಿ ತಾವು ನಂಬಿಕೆ ಇಟ್ಟಿರುವುದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

ಹೆಚ್ಚಿನ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಮತ್ತು ನಗರದಲ್ಲಿ ಟ್ರಾಫಿಕ್​ ಸಮಸ್ಯೆ ಪರಿಹರಿಸುವ ಬಗ್ಗೆ ಕೂಡ ಸಿದ್ದರಾಮಯ್ಯ ಸಲಹೆ ಸೂಚನೆಗಳನ್ನು ಪಡೆದುಕೊಂಡ್ರು. ಸಂಚಾರ ದಟ್ಟಣೆ ಸಮಸ್ಯೆಯಿಂದ ಮುಕ್ತಿ ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಕೇಂದ್ರದ ಸಹಕಾರದೊಂದಿಗೆ ಕೆಲವು ಯೋಜನೆಗಳನ್ನು ಕೂಡ ಹಮ್ಮಿಕೊಳ್ಳಲಿದೆ ಅಂತಾ ಮಾಹಿತಿ ನೀಡಿದ್ರು.

ಇನ್ನು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್​ ಕುಮಾರ್​, ಕರ್ನಾಟಕದಲ್ಲಿ 13 ಮೆಟ್ರಿಕ್​ ಟನ್​ ಸಾಮಥ್ರ್ಯದ ರಸಗೊಬ್ಬರ ಪ್ಲಾಂಟ್​ ಅನ್ನು ಸ್ಥಾಪಿಸುವುದಾಗಿ ಈಗಾಗ್ಲೇ ಅಭಯ ನೀಡಿದ್ದಾರೆ. ಕರ್ನಾಟಕ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. ಎಲ್ಲರ ಗಮನ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ವಲಯದ ಮೇಲಿದೆ. ಇನ್ನೊಂದೆಡೆ ಮಂಗಳೂರು, ಹುಬ್ಬಳ್ಳಿ, ಉಡುಪಿ, ಬೆಳಗಾವಿ, ಮೈಸೂರಿನಂತಹ ನಗರಗಳು ಕೂಡ ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ. ಇನ್ವೆಸ್ಟ್​ ಕರ್ನಾಟಕ ಸಮಾವೇಶದ ಮೂಲಕ ಕೃಷಿ ಹಾಗೂ ಉತ್ಪಾದನಾ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡುವುದರಲ್ಲಿ ಅನುಮಾನವಿಲ್ಲ.

ಇನ್ವೆಸ್ಟ್​ ಕರ್ನಾಟಕ -2016 ಸಮಾವೇಶದ ಮೊದಲ ದಿನದ ಅಂತ್ಯದ ವೇಳೆಗೆಲ್ಲಾ ಎಲ್ಲರಲ್ಲೂ ಸಕಾರಾತ್ಮಕತೆಯ ಭಾವನೆ ಗೋಚರಿಸಿದೆ. ಶೀಘ್ರದಲ್ಲೇ ಸರ್ಕಾರ ಬೆಂಗಳೂರಿನ ಟ್ರಾಫಿಕ್​ ಕಿರಿಕಿರಿಗೆ ಇತಿಶ್ರೀ ಹಾಡಲಿದೆ ಎಂಬ ಭರವಸೆ ಮೂಡಿದೆ. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಉಳಿದೆಡೆಗಳಲ್ಲೂ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನಹರಿಸಲಿದೆ ಎಂಬ ವಿಶ್ವಾಸ ಹೂಡಿಕೆದಾರರದ್ದು.

Related Stories