ಇ - ಕಾಮರ್ಸ್​ನಲ್ಲಿ ಕರ್ಮಶ್ಯದ ಕ್ರಾಂತಿ : ಇದು ಬಡತನದಲ್ಲಿ ಅರಳಿದ ಹೂವು

ಟೀಮ್​​ ವೈ.ಎಸ್​. ಕನ್ನಡ

0

ಬೆಳೆಯುತ್ತಿರುವ ಕುಟುಂಬವೊಂದು ಬಡತನದ ಬೇಗೆಯಲ್ಲಿ ಸಿಲುಕಿದ್ದರೆ, ಅಲ್ಲಿದ್ದವರಿಗೆಲ್ಲಾ ಸಹಜವಾಗೇ ಉಸಿರುಗಟ್ಟಿದ ಅನುಭವ ಆಗುತ್ತೆ. ಆ ಸ್ಥಿತಿಯಲ್ಲಿ ಬದುಕುವುದೇ ಕಷ್ಟವಾಗಿರುವಾಗ ಭವಿಷ್ಯದ ಬಗ್ಗೆ ಕನಸು ಕಾಣುವುದು ದೂರದ ಮಾತು. ಆದ್ರೆ ಇ ಕಾಮರ್ಸ್ ಬ್ಯುಸಿನೆಸ್ ನಲ್ಲಿ ಗಮನ ಸೆಳೆದಿರುವ ಸಿಯಾ ಉಮೇಶ್ ಇದಕ್ಕೆ ಅಪವಾದ. ಬಡತನದ ಬೇಗೆಯಲ್ಲೇ ಅರಳಿದ ಸಿಯಾ, ಇವತ್ತು ಎಲ್ಲಾ ಸವಾಲುಗಳನ್ನ ಮೀರಿನಿಂತಿದ್ದಾರೆ. ಸ್ವತಂತ್ರ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಸಿಯಾ ಉಮೇಶ್, ಹಿಂದೂಗಳ ವಿವಿಧ ಪೂಜೆಗಳಿಗೆ ಬೇಕಾದ ವಸ್ತುಗಳನ್ನ ಆನ್ ಲೈನ್ ನಲ್ಲೇ ಪೂರೈಸುವ ಮೂಲಕ ತನ್ನದೇ ಆದ ಅಸ್ಥಿತ್ವ ಕಂಡುಕೊಂಡಿದ್ದಾರೆ. ಇನ್ನಿಲ್ಲದ ರೀತಿ ಆರ್ಥಿಕ ಸಮಸ್ಯೆಗಳನ್ನ ಎದುರಿಸಿದ್ರೂ ಎಂದೂ ಕುಗ್ಗದ ಸಿಯಾ ಉಮೇಶ್ ಇವತ್ತು ಇ ಕಾಮರ್ಸ್ ನ ಅಚ್ಚರಿಯ ಉದ್ಯಮಿ.

ಬಡತನದಲ್ಲಿ ಅರಳಿದ ಹೂವು..

ಮೂವರು ಮಕ್ಕಳ ಪೈಕೆ ಸಿಯಾ ಉಮೇಶ್ ಕೊನೆಯ ಮಗಳು. ತೀರಾ ಆರ್ಥಿಕ ಸಂಕಷ್ಟದಿಂದಾಗಿ ಸಿಯಾಳ ಇಬ್ಬರು ಅಕ್ಕಂದಿರು ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡಬೇಕಾಯ್ತು. ಆದ್ರೆ ಅದೃಷ್ಟ ಎನ್ನುವ ಹಾಗೆ ಸಿಯಾಳ ವಿದ್ಯಾಭ್ಯಾಸಕ್ಕೆ ಆಕೆಯ ಅಮ್ಮ ಬೆಂಬಲ ನೀಡಿದ್ರು. ಅಂದು ವಿದ್ಯಾಭ್ಯಾಸ ಮುಂದುವರಿಸುವಂತೆ ಪ್ರೋತ್ಸಾಹ ನೀಡಿದ್ದೇ ಆಕೆಯ ಇಂದಿನ ಯಶಸ್ಸಿಗೆ ಮುನ್ನುಡಿ ಬರೆಯಿತು.

“ ನಾನಿವತ್ತು ಈ ಉನ್ನತ ಸ್ಥಾನದಲ್ಲಿ ನಿಲ್ಲಲು ನನಗೆ ಸಿಕ್ಕ ವಿದ್ಯಾಭ್ಯಾಸವೇ ಕಾರಣ, ಪ್ರತೀ ಮಗುವಿಗೂ ಬಾಲ್ಯದಲ್ಲಿ ಸಿಗುವ ಶಿಕ್ಷಣವೇ ದೊಡ್ಡ ಉಡುಗೊರೆ ಅನ್ನೋದು ನನ್ನ ನಂಬಿಕೆ ” ಎಂದು ಸಿಯಾ ಉಮೇಶ್ ವಿದ್ಯಾಭ್ಯಾಸದ ಮಹತ್ವವನ್ನ ವಿವರಿಸುತ್ತಾರೆ. ಇನ್ನು ಸಿಯಾ ಪ್ರೌಢಶಾಲಾ ಶಿಕ್ಷಣ ಮುಗಿಸಿದ್ರೂ ಆಕೆಯ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆ ಅಡ್ಡಿಯಾಗಿತ್ತು. ಹಾಗಂತ ಆಕೆ ಧೃತಿಗೆಡಲಿಲ್ಲ, ಯಾರಿಂದಲೂ ನೆರವು ಬಯಸಲಿಲ್ಲ. ಕ್ಲಾಸ್ ಮುಗಿದ ನಂತ್ರ ಸಂಜೆ ಹಾಗೂ ರಾತ್ರಿ ಹೊತ್ತು ಪಾರ್ಟ್ ಟೈಂ ಕೆಲಸ ಮಾಡಲು ಆರಂಭಿಸಿದ್ರು.. ಡಿಗ್ರಿ ಮುಗಿಸಿದ ನಂತ್ರ ಬೆಂಗಳೂರಿನ ಬಯೋಟೆಕ್ನಾಲಜಿ ಕಂಪೆನಿಯೊಂದಕ್ಕೆ ಸೇರಿಕೊಂಡ್ರು. ವೀಕೆಂಡ್ ಗಳಲ್ಲಿ ಮಂಗಳೂರಿಗೆ ಹೋಗಿ ಅಪ್ಪ ಅಮ್ಮನನ್ನ ನೋಡುತ್ತಿದ್ದರು. ಹೀಗಿರುವಾಗ 2010ರಲ್ಲಿ ಸಿಯಾ ಬದುಕಿಗೆ ತಿರುವು ಸಿಕ್ಕಿತು.. ಇದಕ್ಕಿದ್ದಂತೆ ಸಿಯಾ ತಂದೆ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದ್ರು. ಹೀಗಾಗಿ ಅನಿವಾರ್ಯವಾಗಿ ಬೆಂಗಳೂರಿನ ಕೆಲಸಕ್ಕೆ ಗುಡ್ ಬೈ ಹೇಳಿ ಮನೆಗೆ ಹೊರಡಬೇಕಾಯ್ತು.

“ ಕೆಲಸ ಬಿಟ್ಟು ಮನೆಗೆ ವಾಪಸ್ ಹೋಗುವಾಗ ನನ್ನ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅಲ್ಲದೆ ಬಯೋಟೆಕ್ ಎಂಜಿನಿಯರಿಂಗ್ ನಲ್ಲಿ ಡಿಗ್ರಿ ಪಡೆದಿದ್ದ ನನಗೆ ಮಂಗಳೂರಿನಂತ ಸಿಟಿಯಲ್ಲಿ ಅಷ್ಟಾಗಿ ಅವಕಾಶಗಳಿರಲಿಲ್ಲ. ಹೀಗಾಗಿ ಕೆಲವು ತಿಂಗಳು ನಿರುದ್ಯೋಗಿಯಾಗಿ ಕಾಲತಳ್ಳಬೇಕಾಯ್ತು. ಕೈ ಬರಿದಾಗಿತ್ತು. ನಯಾ ಪೈಸೆ ಇಲ್ಲದಿದ್ರೂ, ಏನಾದ್ರೂ ಬ್ಯುಸಿನೆಸ್ ಶುರುಮಾಡಲೇಬೇಕು ಅಂತ ನಿರ್ಧರಿಸಿದ್ದೆ ” ಅಂತ ಸಿಯಾ ತಮ್ಮ ಸಂಕಷ್ಟದ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ.

500 ರೂಪಾಯಿ ಬಂಡವಾಳದಲ್ಲಿ ಕಂಪನಿ ಶುರು..!

ಜಾಣ್ಮೆಯ ಹೆಜ್ಜೆ ಇಟ್ಟ ಸಿಯಾ ಕೇವಲ 500 ರೂಪಾಯಿ ಬಂಡವಾಳದೊಂದಿಗೆ ಕರ್ಮಶ್ಯ ಅನ್ನುವ ಹೆಸರಿನಲ್ಲಿ ಪುಟ್ಟ ಕಂಪನಿ ಶುರುಮಾಡಿಯೇ ಬಿಟ್ರು. ಪೂಜೆಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನ ಆಲ್ ಲೈನ್ ಮೂಲಕ ಒದಗಿಸುವ ಕಂಪನಿ ಕರ್ಮಶ್ಯ . ಭವಿಷ್ಯದಲ್ಲಿ ಇದನ್ನ ದೊಡ್ಡ ಮಟ್ಟದಲ್ಲಿ ಬೆಳೆಸುವ ಯೋಜನೆಯನ್ನ ಸಿಯಾ ಹೊಂದಿದ್ದರು. ಇದಕ್ಕಾಗಿ ಅವರು ಎನ್ ಆರ್ ಐಗಳ ನೆಟ್ ವರ್ಕ್ ಬೆಳೆಸಿದ್ರು. ಅಲ್ಲದೆ ಪೂಜೆಗೆ ಬೇಕಾಗಿರುವ ಉತ್ತಮ ಗುಣಮಟ್ಟದ ರುದ್ರಾಕ್ಷಿ ಮಾಲೆ, ಜೆಮ್ ಸ್ಟೋನ್ಸ್ ಗಳನ್ನ ಪೂರೈಸುವ ಮೂಲಕ ಕರ್ಮಶ್ಯ ಗಮನ ಸೆಳೆಯಿತು. ಅಲ್ಲದೆ ರಂಗೋಲಿ ಅಚ್ಚುಗಳು, ವಿವಿಧ ರೀತಿಯ ಯಂತ್ರಗಳು, ಮೂರ್ತಿಗಳು ಹಾಗೂ ಮಣಿದಾರಗಳನ್ನೂ ಗ್ರಾಹಕರಿಗೆ ಒದಗಿಸಲು ಆರಂಭಿಸಿತು. ಗ್ರಾಹಕರು ಬಯಸಿದ ವಸ್ತುಗಳನ್ನ ಹುಡುಕಿ ತರುವುದು, ಪ್ಯಾಕ್ ಮಾಡಿ ಡೆಲಿವರಿ ಮಾಡುವುದು ಸೇರಿದಂತೆ ಎಲ್ಲಾ ಕೆಲಸಗಳನ್ನೂ ಒನ್ ವುಮನ್ ಆರ್ಮಿಯಂತೆ ಸಿಯಾ ಒಬ್ಬಳೇ ಅಚ್ಚುಕಟ್ಟಾಗಿ ನಿರ್ವಹಿಸಿದ್ರು. ಹೀಗೆ ಸತತ ಆರು ತಿಂಗಳ ಕಾಲ ಕೆಲಸ ಮಾಡಿದ ಬಳಿಕ ಮೊದಲ ಉದ್ಯೋಗಿಯನ್ನ ನೇಮಕ ಮಾಡಿಕೊಂಡ್ರು.

“ ಮೊದಲ ಆರು ತಿಂಗಳ ಕಾಲ ನಾನು ದಿನದಲ್ಲಿ ಕೇವಲ 3 ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಿದ್ದೆ. ಆ ಅವಧಿಯಲ್ಲೂ ಎಷ್ಟೋ ಸಲ ಎಚ್ಚೆತ್ತು ಪ್ಯಾಕಿಂಗ್ ಬಗ್ಗೆ ಯೋಚಿಸುತ್ತಿದ್ದೆ. ನಂತ್ರ ನಾನು ಕರ್ಮಶ್ಯದ ಮೊದಲ ಉದ್ಯೋಗಿಯಾಗಿ 10ನೇ ತರಗತಿ ಪಾಸ್ ಆಗಿದ್ದ ನವ್ಯಾ ಎಂಬಾಕೆಯನ್ನ ಸೇರಿಸಿಕೊಂಡೆ. ಕಠಿಣ ಪರಿಶ್ರಮಿಯಾಗಿದ್ದ ಆಕೆ ಇವತ್ತು ಕಂಪೆನಿಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾಳೆ” ಅಂತ ತಮ್ಮ ಕಂಪೆನಿಯ ಮೊದಲ ಉದ್ಯೋಗಿಯನ್ನ ನೆನಪಿಸಿಕೊಳ್ಳುತ್ತಾರೆ ಸಿಯಾ. ಕೇವಲ ತಮ್ಮ ಕಂಪೆನಿ ಬಗ್ಗೆ ಮಾತ್ರ ಸಿಯಾ ಯೋಚಿಸಿಲ್ಲ. ಭಾರತದಂತಹ ದೇಶದಲ್ಲಿ ಆರ್ಥಿಕ ಮುಗ್ಗಟ್ಟಿನ ನಡುವೆ ನೀಡಲಾಗುವ ಸಾಂಪ್ರದಾಯಿಕ ಶಿಕ್ಷಣದಿಂದ ಯಾವ ಪ್ರಯೋಜನವೂ ಇಲ್ಲ. ಯೂನಿವರ್ಸಿಟಿ ಡಿಗ್ರಿಗಳಿಂದ ಯಾವ ವ್ಯಕ್ತಿಗಳೂ ಮುಂದುವರಿಯಲು ಸಾಧ್ಯವಿಲ್ಲ ಅನ್ನೋದು ಅವರ ಅಭಿಪ್ರಾಯ. ಹೀಗಾಗಿ ತನ್ನ ಕಂಪನಿ ಕರ್ಮಶ್ಯದಲ್ಲಿ ದುಡಿಯುತ್ತಿರುವ 10ಕ್ಕೂ ಹೆಚ್ಚು ಹಿಂದುಳಿದ ಮಹಿಳಾ ಉದ್ಯೋಗಿಗಳಿಗೆ ಹೆಚ್ಚುವರಿ ತರಬೇತಿ ನೀಡುತ್ತಿದ್ದಾರೆ. ಅವರ ಕೌಶಲ್ಯ ಹೆಚ್ಚಿಸಲು ಒತ್ತು ಕೊಟ್ಟಿದ್ದಾರೆ.. .

ಸಿಯಾ ಒಂದು ಹಂತಕ್ಕೆ ತಲುಪುವ ಮೊದಲೇ ತನ್ನ ತಾಯಿಯನ್ನ ಕಳೆದುಕೊಂಡರೂ ಧೃತಿಗೆಡಲಿಲ್ಲ.. ಸತತ ಪರಿಶ್ರಮದ ಫಲವಾಗಿ ಪ್ರತಿಷ್ಠಿತ ಇ ಕಾಮರ್ಸ್ ಕಂಪನಿ ಇಬೇ ನಡೆಸಿದ ಶಿಮೆನ್ಸ್ ಬ್ಯುಸಿನೆಸ್ ಸ್ಪರ್ಧೆಯಲ್ಲಿ 6ನೇ ಸ್ಥಾನಗಳಿಸಿ ಗಮನ ಸೆಳೆಸಿದ್ದಾರೆ. ಅಲ್ಲದೆ ಕರ್ಮಶ್ಯದ ಉತ್ಪನ್ನಗಳಿಗೆ ಇಬೇ ಮಾರುಕಟ್ಟೆ ಒದಗಿಸಿದೆ. ಹೀಗೆ ಹಲವು ಸವಾಲುಗಳ ನಡುವೆ ಕೇವಲ 1500 ಚದರ ಅಡಿಯಲ್ಲಿ ತನ್ನದೇ ಕಂಪೆನಿ ಸ್ಥಾಪಿಸಿ ಸ್ವಂತ ವೆಬ್ ಸೈಟ್ ಮೂಲಕ ಇ ಕಾಮರ್ಸ್ ನಲ್ಲಿ ಕ್ರಾಂತಿ ಮಾಡಲು ಹೊರಟಿರುವ ಸಿಯಾ ಉಮೇಶ್, ಯುವ ಉದ್ದಿಮೆದಾರರಿಗೆ ನಿಜವಾದ ಸ್ಫೂರ್ತಿ.

ಲೇಖಕರು: ಪೂರ್ಣಿಮಾ ಮಕರಮ್​​
ಅನುವಾದಕರು: ಬಿಆರ್​​ಪಿ

Related Stories