ವೈಫೈ ಲೋಕದಲ್ಲಿ ಹೊಸ ಸಂಚಲನ

ಟೀಮ್​​ ವೈ.ಎಸ್​​.

0

ಇವತ್ತು ಮೊಬೈಲ್ ಅನ್ನೋದು ಮನುಷ್ಯನ ಪಾಲಿಗೆ ಒಂದು ಅವಿಭಾಜ್ಯ ಅಂಗದಂತಾಗಿದೆ. ಏನಿರಲಿ ಬಿಡಲಿ ಆದರೆ ಎಲ್ಲರ ಕೈಯಲ್ಲೂ ಒಂದು ಮೊಬೈಲ್ ಅಂತೂ ಇದ್ದೇ ಇರುತ್ತೆ. ಇನ್ನು ಮೊಬೈಲ್ ಇದ್ದು ಅದರಲ್ಲಿ ಇಂಟರ್​​ನೆಟ್​ ಇಲ್ಲದಿದ್ದರೆ ಹೇಗೆ ಹೇಳಿ? ಹೌದು, ಮೊಬೈಲ್ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಇಂಟರ್​ನೆಟ್​​ ಬಳಸುತ್ತಿದ್ದಾರೆ. ಹೀಗಾಗಿಯೇ ನಾನಾ ರೀತಿಯ 2ಜಿ, 3ಜಿ, 4ಜಿ ಪ್ಯಾಕೇಜ್​ಗಳು ಮಾತ್ರವಲ್ಲ ವೈಫೈ ಸೌಲಭ್ಯಗಳನ್ನೂ ಕಂಪನಿಗಳು ಕಲ್ಪಿಸಿಕೊಡುತ್ತಿವೆ.

ಈಗ ಇದೇ ವೈಫೈ ಸೌಲಭ್ಯವನ್ನು ವಿಶೇಷವಾಗಿ ನೀಡುವ ಮೂಲಕ ವಿಂಗೇಜ್ ಎಂಬ ಸಂಸ್ಥೆಯೊಂದು ಇಂಟರ್​ನೆಟ್​​ ಲೋಕದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ. ಹೌದು, ಸಾಮಾನ್ಯವಾಗಿ ರೆಸ್ಟೋರೆಂಟ್, ಹೋಟೆಲ್, ಜಿಮ್ ಹಾಗೂ ಕೆಫೆಟೀರಿಯಾಗಳಲ್ಲಿ ಉಚಿತ ವೈಫೈ ಸೌಲಭ್ಯಗಳನ್ನು ನೀಡಲಾಗುತ್ತೆ. ಆದ್ರೆ ಹೆಚ್ಚು ಬೆಲೆ ನೀಡಬೇಕಾದ ಕಾರಣ ಹಾಗೂ ದುಬಾರಿ ನಿರ್ವಹಣೆಗಳಿಂದಾಗಿ ಮಾಲೀಕರು ವೈಫೈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗೇ ಗ್ರಾಹಕರೂ ಅತ್ತ ಗಮನ ಹರಿಸುವುದಿಲ್ಲ. ಹೀಗಾಗಿಯೇ ವಿಂಗೇಜ್ ತಂಡ ಗ್ರಾಹಕರು ಹಾಗೂ ಮಾಲೀಕರು ಇಬ್ಬರಿಗೂ ಲಾಭವಾಗುವಂತಹ ಒಂದು ಯೋಜನೆ ಮಾಡಿದೆ. ಅದರಂತೆ ರೆಸ್ಟೋರೆಂಟ್​​ಗೆ ಹೋಗುವ ಗ್ರಾಹಕರು ಅಲ್ಲಿನ ವೈಫೈ ಸೌಲಭ್ಯ ಪಡೆಯಬೇಕೆಂದರೆ, ಮೊದಲು ಆ ರೆಸ್ಟೋರೆಂಟ್​​ನ ವೆಬ್​ಸೈಟ್ಅನ್ನು ಲೈಕ್ ಮಾಡಬೇಕು. ಇದರಿಂದ ಅಂತರ್ಜಾಲದ ಮೂಲಕ ಆ ರೆಸ್ಟೋರೆಂಟ್​​ನ ಪ್ರಚಾರವೂ ಆಗುತ್ತೆ, ಇತ್ತ ಗ್ರಾಹಕರಿಗೂ ಉಚಿತ ವೈಫೈ ಸೌಲಭ್ಯ ಸಿಗುತ್ತದೆ. ಹೆಚ್ಚು ಗ್ರಾಹಕರು ಬಂದು ಹೆಚ್ಚು ವೈಫೈ ಬಳಕೆಯಾದರೆ, ಮತ್ತೊಂದೆಡೆ ರೆಸ್ಟೋರೆಂಟ್ ವೆಬ್​ಸೈಟ್​​ನ ಪ್ರಸಿದ್ಧಿಯೂ ಹೆಚ್ಚಾಗುತ್ತದೆ. ಅತ್ತ ಗ್ರಾಹಕರಿಗೂ ಲಾಭ ಇತ್ತ ರೆಸ್ಟೋರೆಂಟ್ ಮಾಲೀಕರಿಗೂ ಲಾಭ.

ಅಂದ್ಹಾಗೆ, ಈ ವಿಂಗೇಜ್ ಕಂಪನಿ ಪ್ರಾರಂಭವಾಗಲು ಕಾರಣ ವಿಶಾಲ್ ಚೌಧರಿ ಹಗೂ ಅನುರಾಗ್ ಶಿವಿಲ್ಕರ್. ವೈಫೈ ಸೌಲಭ್ಯವನ್ನು ವಿನೂತನವಾಗಿ ಜನರಿಗೆ ನೀಡುವ ವಿಂಗೇಜ್ ವ್ಯವಸ್ಥೆ ಬೇರೆ ವೈಫೈ ಸೌಲಭ್ಯಗಳಿಗಿಂತಲೂ ಕಡಿಮೆ ದರದಲ್ಲಿ ಲಭ್ಯವಿದೆ. ಹಾಗೇ ಭಾರತೀಯ ಸರ್ಕಾರ ಹಾಕಿರುವ ಎಲ್ಲಾ ಮಾನದಂಡಗಳನ್ನೂ ಇಲ್ಲಿ ಅನುಸರಿಸಲಾಗುತ್ತಿದೆ. ಹೀಗಾಗಿಯೇ ರೆಸ್ಟೋರೆಂಟ್, ಕೆಫೆಟೇರಿಯಾ, ಜಿಮ್ ಅಥವಾ ಇತರೆ ಸಣ್ಣ ಉದ್ಯಮಗಳಿಗೆ ವಿಂಗೇಜ್ ಹೇಳಿ ಮಾಡಿಸಿದಂತಿದೆ.

ಟೀಮ್​​ ವಿಂಗೇಜ್​​​
ಟೀಮ್​​ ವಿಂಗೇಜ್​​​

ಈ ಹಿಂದೆ ಅರ್ಥಾತ್ 2013ರ ಡಿಸೆಂಬರ್​ನಲ್ಲಿ ವಿಶಾಲ್ ಮತ್ತು ಅನುರಾಗ್ ಜೋಡಿ ಜಾಹೀರಾತು ಪ್ರಾಯೋಜಿತ ವೈಫೈ ಸೌಲಭ್ಯಗಳನ್ನು ಬಿಡುಗಡೆ ಮಾಡಿದ್ದರು. ಇಲ್ಲಿ ಗ್ರಾಹಕರು ಜಾಹೀರಾತುಗಳ ವೀಡಿಯೋ ನೋಡಿದ್ರೆ, ಅವರಿಗೆ ಉಚಿತ ವೈಫೈ ದೊರೆಯುತ್ತಿತ್ತು. ಆದರೆ ಜಾಹೀರಾತುಗಳಿಂದ ಬರುತ್ತಿದ್ದ ಆದಾಯ ಕಡಿಮೆಯಿದ್ದ ಕಾರಣ ಅದನ್ನು ಕೆಲವೇ ದಿನಗಳಲ್ಲಿ ಸ್ಥಗಿತಗೊಳಿಸಿದರು. ಈಗ ಅದಾಗಿ ಒಂದು ವರ್ಷದ ಬಳಿಕ 2015ರ ಜನವರಿಲ್ಲಿ ವಿಂಗೇಜ್ಅನ್ನು ಹುಟ್ಟುಹಾಕಿದ್ದಾರೆ. ಕೇವಲ 5 ಲಕ್ಷ ರೂಪಾಯಿ ಹೂಡಿಕೆಯಲ್ಲಿ ಪ್ರಾರಂಭವಾಗಿರುವ ವಿಂಗೇಜ್ ಮೂಲಕ ಪ್ರತಿ ತಿಂಗಳು ಇಂತಿಷ್ಟು ಆದಾಯವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲು ಸಿಸ್ಕೋ, ಏರ್ಲ್​ಟೆಲ್​​, ರಿಲಯನ್ಸ್, ಜಿಯೋ... ಹೀಗೆ ದೊಡ್ಡ ದೊಡ್ಡ ಸಂಸ್ಥೆಗಳು ಈ ವಲಯವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದವು. ಕ್ರಮೇಣ ಭಾಯಿಫಿ, ವ್ಹಿಜ್ ಮತ್ತು ವಿಂಗೇಜ್​ನಂತಹ ಚಿಕ್ಕ ಕಂಪನಿಗಳು ಹೊಸ ಹೊಸ ಯೋಜನೆಗಳು, ಕಡಿಮೆ ದರ ಹಾಗೂ ವಿನೂತನ ಸೌಲಭ್ಯಗಳೊಂದಿಗೆ ಈ ವಿಭಾಗಕ್ಕೆ ಪದಾರ್ಪಣೆ ಮಾಡಿದವು. ಅದರಲ್ಲಂತೂ ವಿಂಗೇಜ್ ಈಗಾಗಲೇ ಮುಂಬೈನ 20 ಸ್ಥಳಗಳಲ್ಲಿ ಡಿಬೆಲ್ಲಾ ಕಾಫೀ, ಮೋಷಸ್ ಕೆಫೆ, ಟೀ ಟ್ರೇಲ್ಸ್, ಐಥಿಂಕ್ ಫಿಟ್ನೆಸ್ ಸೇರಿದಂತೆ 11 ಕಡೆಗಳಲ್ಲಿ ಸೇವೆ ನೀಡುತ್ತಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಬೇರೆ ಕಂಪನಿಗಳಿಗೆ ಹೋಲಿಸಿದರೆ, ವಿಂಗೇಜ್ ಬೆಳವಣಿಗೆ ಹಲವು ಪಟ್ಟು ಹೆಚ್ಚಿದೆ.

ಇಷ್ಟು ಮಾತ್ರವಲ್ಲ ಅಪ್ಲಿಕೇಶನ್ ಸಂಯೋಜಿತ ಸಾರ್ವಜನಿಕ ವೈಫೈ ವ್ಯವಸ್ಥೆ, ಇನ್- ಸ್ಟೋರ್ ವೈಫೈ ಲೊಕೇಶನ್ ಟ್ರ್ಯಾಕಿಂಗ್, ಔಟ್​ಡೋರ್​​ ಮೆಶ್ ವೈಫೈ ವ್ಯವಸ್ಥೆ, ಮನರಂಜನೆ ಹಾಗೂ ಇ-ಶಿಕ್ಷಣಕ್ಕಾಗಿ ಆಫ್​​​ಲೈನ್​​ ವೈಫೈ... ಹೀಗೆ ಹೊಸ ಯೋಜನೆ ಹಾಗೂ ಸಾಫ್ಟ್​​ವೇರ್​​ ಅಭಿವೃದ್ಧಿ ಮಾಡುವ ಮೂಲಕ ಈ ವಿಭಾಗದಲ್ಲಿ ಹೊಸ ಆಯಾಮ ಸೃಷ್ಟಿಸುತ್ತೇವೆ ಅಂತ ಭರವಸೆ ವ್ಯಕ್ತಪಡಿಸುತ್ತಾರೆ ವಿಶಾಲ್.