ಬಳಸಿದ ಕಾಗದ ನೀಡಿ, ಪುಸ್ತಕ ಪಡೆಯಿರಿ - ಅರಣ್ಯ ಸಂಪತ್ತು ರಕ್ಷಣೆಗೆ ಟೊಂಕಕಟ್ಟಿದೆ Used2Useful..!

ಟೀಮ್​ ವೈ.ಎಸ್​. ಕನ್ನಡ

ಬಳಸಿದ ಕಾಗದ ನೀಡಿ, ಪುಸ್ತಕ ಪಡೆಯಿರಿ - ಅರಣ್ಯ ಸಂಪತ್ತು ರಕ್ಷಣೆಗೆ ಟೊಂಕಕಟ್ಟಿದೆ Used2Useful..!

Thursday December 24, 2015,

3 min Read

ಬಳಸಿದ ಕಾಗದವನ್ನು ಆತನಿಗೆ ನೀಡಿ.. ಅದನ್ನು ಪಡೆದುಕೊಳ್ಳುವ ಆತ ಖಂಡಿತವಾಗಿಯೂ ನಿಮ್ಮನ್ನು ನಿರಾಶೆ ಮಾಡಲ್ಲ. ಬಳಸಿದ ಕಾಗದದ ಬದಲಿಗೆ ಆತ ಪುಸ್ತಕವನ್ನು ನಿಮಗೆ ನೀಡುತ್ತಾನೆ. ಅಚ್ಚರಿಪಡಬೇಕಾಗಿಲ್ಲ. ಇದು ಸತ್ಯ.used2useful ಈ ಕಲ್ಪನೆ ಮೊಳಕೆಯೊಡೆದ್ದದ್ದು 2014, ಮಾರ್ಚ್ 26ರಂದು. ನಿಮ್ಮಲ್ಲಿ ಬಳಸಿದ ಕಾಗದಗಳಿದ್ದರೆ ಅದನ್ನು ನಮಗೆ ನೀಡಿ. ಬದಲಾಗಿ ಪುಸ್ತಕ ಪಡೆಯಿರಿ. ಇದು ಮುಖ್ಯವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಆರಂಭಿಸಿದ ವಿನೂತನ ಪ್ರಯತ್ನ. ನಿಮ್ಮ ಆಯ್ಕೆಯ ಪುಸ್ತಕ ಸಿಗದಿದ್ದರೆ ಈ ಸಂಬಂಧ ಬೇಡಿಕೆ ನೀಡಿ. ಅದನ್ನು ಪೂರೈಸುವ ವ್ಯವಸ್ಥೆಯನ್ನು used2useful ಮಾಡುತ್ತದೆ.

image


ಸಣ್ಣ ನಗರದಿಂದ ದೊಡ್ಡ ಯಾತ್ರೆ

used2useful ಇದರ ಸಂಸ್ಥಾಪಕ ಗಿರೀಶ್ ರೆಡ್ಡಿ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಸಣ್ಣ ಪಟ್ಟಣ ಕೋಟ ನಿವಾಸಿ. ಸರಳ ಜೀವಿ. ನಗರದ ಥಳುಕು ಬಳುಕು ಜೀವನಕ್ಕೆ ಮಾರು ಹೋಗದ ಸರಳ ಜೀವಿ. ದೇಶದ ಅಭಿವೃದ್ಧಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಅದಮ್ಯ ಬಯಕೆ. ಹೆಚ್ಚುತ್ತಿರುವ ಅರಣ್ಯ ನಾಶದ ಚಿಂತೆ ಆತನನ್ನು ಬಹುವಾಗಿ ಕಾಡಿತ್ತು. ಕಾಗದ ಉಳಿಸಿದರೆ ಮರಗಳನ್ನು ರಕ್ಷಿಸಬಹುದು. ಮರಗಳು ಇದ್ದರೆ ಪ್ರಕೃತಿ ಉಳಿಯುತ್ತದೆ. ಈ ನಂಬಿಕೆ ಬಲವಾಗಿತ್ತು. ಇದಕ್ಕೆ ತಾನೇನು ಮಾಡಲು ಸಾಧ್ಯ ಎಂಬುದನ್ನು ಚಿಂತಿಸಿದ. ಈ ಸಂದರ್ಭದಲ್ಲಿ ಹೊಳೆದ್ದದ್ದೇ used2useful ಕಲ್ಪನೆ. ಕಾಗದಗಳನ್ನು ಮರು ಬಳಕೆ ಮಾಡಿದರೆ ಒಂದು ಹಂತದ ವರೆಗೆ ಅರಣ್ಯಗಳನ್ನು ರಕ್ಷಿಸಲು ಸಾಧ್ಯ ಎಂದು ಗಿರೀಶ್ ರೆಡ್ಡಿಗೆ ಮನವರಿಕೆಯಾಯಿತು.

ಅಪಾಯಕಾರಿ ಮಾಹಿತಿ

ಭಾರತದಲ್ಲಿ ಕಾಗದಗಳಿಗೆ ವಿಪರೀತ ಬೇಡಿಕೆ ಇದೆ. ಪ್ರತಿ ವರ್ಷ 13 ಮಿಲಿಯನ್ ಟನ್ ಪೇಪರ್ ಗಳನ್ನು ಭಾರತ ಉತ್ಪಾದಿಸುತ್ತದೆ. ಆದರೆ ಮರು ಬಳಕೆ ಮಾತ್ರ ತೀರಾ ನಗಣ್ಯ. ಶೇಕಡಾ 26 ರಷ್ಟು ಮಾತ್ರ ಎಂಬ ಸತ್ಯ ತಿಳಿದು ಬಂತು. ಈ ನಿಟ್ಟಿನಲ್ಲಿ ಇನ್ನಷ್ಟು ಪರಿಶ್ರಮ ವಹಿಸಬೇಕಾದ ಅಗತ್ಯ ಇದೆ ಅಂತ ಗಿರೀಶ್ ರೆಡ್ಡಿಗೆ ಅನಿಸಿತು.

ಮುಂದಿನ ದಿನಗಳಲ್ಲಿ ಕಾಗದದ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 2025ರ ಹೊತ್ತಿಗೆ ಕಾಗದದ ಬೇಡಿಕೆ 26 ಮಿಲಿಯನ್ ಟನ್ ತಲುಪುವ ಸಾಧ್ಯತೆ ಇದೆ. ಸಹಜವಾಗಿಯೇ ಇನ್ನಷ್ಚು ಮರಗಳಿಗೆ ಕೊಡಲಿಯೇಟು ಬೀಳಲಿದೆ. 300 ಮಿಲಿಯನ್ ಮರಗಳು ನೆಲಕ್ಕೆ ಉರುಳಲಿವೆ. ಅದೇ ರೀತಿ 100 ಬಿಲಿಯನ್ ಗ್ಯಾಲನ್ ನೀರು ಇದಕ್ಕೆ ಬಳಕೆಯಾಗಲಿದೆ. ಇದು ಗಿರೀಶ್ ರೆಡ್ಡಿ ಹೇಳುವ ಆತಂಕ ಭರಿತ ಮಾತು. ದೇಶದಲ್ಲಿ 2025ರ ಹೊತ್ತಿಗೆ ನೀರಿನ ಕೊರತೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಲಿದೆ ಎಂಬ ಎಚ್ಚರಿಕೆಯನ್ನು ಗಿರೀಶ್ ರೆಡ್ಡಿ ನೀಡುತ್ತಾರೆ.

image


ಮರು ಬಳಕೆ ಮತ್ತು ಸಾಹಿತ್ಯ ಅಭಿರುಚಿ ಅಭಿಯಾನ

ಈ ಗಂಭೀರ ಪರಿಸ್ಥಿತಿಯಲ್ಲಿ ಮರ ಬೆಳೆಸುವ ಅಭಿಯಾನಕ್ಕೆ ಚಾಲನೆ ನೀಡಿದರೆ ಅದು ಯಶಸ್ವಿಯಾಗಲು ಸಾಧ್ಯವೇ.. ಎಂಬ ಪ್ರಶ್ನೆ ಎದುರಾಗುತ್ತಿದೆ. ನಮ್ಮ ನಗರಗಳು ಜನರಿಂದ ತುಂಬಿ ತುಳುಕುತ್ತಿವೆ. ಮರ ಗಿಡ ನೆಡಲು ಜಾಗ ಎಲ್ಲಿದೆ..? ಇದರ ಜೊತೆಗೆ ಹತ್ತು ಹಲವು ಪ್ರಶ್ನೆಗಳು ಇವೆ. ಇದನ್ನು ಗಮನದಲ್ಲಿರಿಸಿ ಕಾಗದದ ಮರು ಬಳಕೆಯೇ ಸೂಕ್ತ ಎಂಬ ಮಾತನ್ನು ಗಿರೀಶ್ ರೆಡ್ಡಿ ಹೇಳುತ್ತಾರೆ.

ಹೆಚ್ಚು ಓದು ಹೆಚ್ಚು ಮರು ಬಳಕೆ ಮಾಡು. ಇದು used2useful ಇದರ ಧ್ಯೇಯ ವಾಕ್ಯ. ಘೋಷಣೆ. ಶಾಲೆ ಮತ್ತು ಕಾಲೇಜಿನಲ್ಲಿ ಜಾಗೃತಿ ಅಭಿಯಾನ ಮಾಡುವ ಗಿರೀಶ್ ರೆಡ್ಡಿ, ಹಳೆ ಕಾಗದ ಪತ್ರಗಳನ್ನು ಸಂಗ್ರಹಿಸುತ್ತಾರೆ. ಅದರ ಮರು ಬಳಕೆ ಮಾಡುತ್ತಾರೆ. ಮಹತ್ವ ವಿವರಿಸುತ್ತಾರೆ.ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವ ಗಿರೀಶ್, ಶೈಕ್ಷಣಿಕ ವಿದ್ಯಾಭ್ಯಾಸದ ಮಹತ್ವ ಸಾರಿ ಹೇಳುತ್ತಾರೆ. ಹಳೆ ಕಾಗದದ ಮೌಲ್ಯವನ್ನು ತೂಕ ಮಾಡಿ ನಿರ್ಧರಿಸಲಾಗುತ್ತದೆ . ಹೀಗೆ ಸಂಗ್ರಹಿಸಲಾದ ಕಾಗದಗಳನ್ನು ಹತ್ತಿರದಲ್ಲಿರುವ ಮರು ಬಳಕೆ ಸಂಸ್ಕರಣಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಒಂದು ಟನ್ ಕಾಗದವನ್ನು ಉಳಿಸುವ ಮೂಲಕ 17 ಮರಗಳನ್ನು ಸಂರಕ್ಷಿಸಲು ಸಾಧ್ಯ ಎನ್ನುತ್ತಾರೆ ಗಿರೀಶ್.

ಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಯಮಯವಾದ ಪುಸಕ್ತ ಭಂಡಾರಾವನ್ನು used2useful ಹೊಂದಿದೆ. ಇದರಲ್ಲಿ ಎಲ್ಲ ವಿಷಯಗಳ ಸಂಗ್ರಹವಿದೆ. ತೆಲುಗು, ಮಲೆಯಾಳ, ಕನ್ನಡ, ತಮಿಳು ಹೀಗೆ ಎಲ್ಲ ಭಾಷೆಯ ಪುಸಕ್ತ ದೊರೆಯುತ್ತದೆ. ವಿಷಯ ವೈವಿಧ್ಯ ಕೂಡ ಚೆನ್ನಾಗಿದೆ. ಸಾಹಿತ್ಯ, ಇತಿಹಾಸ, ಸಂಶೋಧನೆ ಹೀಗೆ ಹತ್ತು ಹಲವು ಆಯ್ಕೆಗಳಿವೆ. ಕಾಗದದ ಮರು ಬಳಕೆಗೆ ಇದೀಗ ಮೊದಲ ಆದ್ಯತೆ ನೀಡಲಾಗುತ್ತದೆ. ಮರ ಉಳಿಸುವದಕ್ಕೆ ಪ್ರಾಶಸ್ತ್ರ್ಯ ನೀಡಲಾಗುತ್ತದೆ.

image


ಗ್ರಂಥಾಲಯದ ಅಭಿವೃದ್ಧಿ

ಇದೀಗ ಯಾರೂ ಕೂಡ ಗ್ರಂಥಾಲಯದ ಸೇವೆ ಪಡೆದುಕೊಳ್ಳಬಹುದು. ಬದಲಾಗಿ ಹಳೆಯ ಕಾಗದ ನೀಡಬೇಕು. ಇದು ಸಾಕಷ್ಟು ಯಶಸ್ವಿ ಕೂಡ ಆಗಿದೆ. ಇದೀಗ ಈ ಗ್ರಂಥಾಲಯ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಂಪನ್ಮೂಲದ ನಿರೀಕ್ಷೆಯಲ್ಲಿದ್ದಾರೆ ಗಿರೀಶ್. ಮಿಲಾಫ್ ವೇದಿಕೆಯ ಮೂಲಕ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಹೆಚ್ಚಿನ ಪುಸ್ತಕ ಖರೀದಿ ಮತ್ತು ಬೈಕ್ ಮೂಲಕ ಪುಸ್ತಕ ವಿತರಣೆಯ ಕನಸು ಹೊಂದಿದ್ದಾರೆ ಗಿರೀಶ್.

ಐಸಿಡಬ್ಯ್ಲೂ ಪದವೀಧರರಾಗಿರುವ ಗಿರೀಶ್, ಲೆಕ್ಕ ಪತ್ರ ಸಹಾಯಕರಾಗಿಯೂ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ತಮ್ಮ ಸಾಧನೆ ಸಂತೃಪ್ತಿ ತಂದ ಭಾವನೆಯೂ ಗಿರೀಶ್ ಅವರಲ್ಲಿ ಮನೆ ಮಾಡಿದೆ. ತಮ್ಮ ಸಾಧನೆ ಮತ್ತು ಪರಿಶ್ರಮದ ಕುರಿತು ಗಿರೀಶ್ ವಿನೀತರಾಗಿ ಈ ರೀತಿ ಹೇಳುತ್ತಾರೆ. ನಾನು ಹಲವಾರು ಕೆಲಸ ಮಾಡಿದ್ದೇನೆ. ವ್ಯಾಪಾರ ಮಾಡಿದ್ದೇನೆ. ಆದರೆ ಯಾವುದೂ ಕೂಡ ಈ ರೀತಿಯ ತೃಪ್ತಿ ನೀಡಿಲ್ಲ. ಯಾಕೆಂದರೆ ಇದು ಅಷ್ಟು ಪ್ರೀತಿ ಮೂಡಿಸಿದೆ. ನನ್ನ ಪರಿಶ್ರಮದ ಮೂಲಕ ಮರು ಬಳಕೆ ಶೇಕಡಾ 1ರಷ್ಟು ಹೆಚ್ಚಾದರೂ ನನ್ನ ಶ್ರಮ ಸಾರ್ಥಕ ಎನ್ನುತ್ತಾರೆ ಗಿರೀಶ್ ರೆಡ್ಡಿ.

ಲೇಖಕರು : ಸ್ನಿಗ್ಧಾ ಸಿನ್ಹಾ

ಅನುವಾದಕರು : ಎಸ್​.ಡಿ

    Share on
    close