ಐಬಿಎಂ ಕೆಲಸ ಬಿಟ್ಟು ಬ್ರಶ್ ಹಿಂದೆ ಹೊರಟು ಯಶಸ್ವಿಯಾದ ಕಲಾವಿದ

ಉಷಾ ಹರೀಶ್

ಐಬಿಎಂ ಕೆಲಸ ಬಿಟ್ಟು ಬ್ರಶ್ ಹಿಂದೆ ಹೊರಟು ಯಶಸ್ವಿಯಾದ ಕಲಾವಿದ

Sunday November 08, 2015,

3 min Read

ವಿಲಾಸ್ ನಾಯಕ್ ಎಂದಾಕ್ಷಣ ನಮ್ಮ ಕಣ್ಣಿಗೆ ಬರುವುದು ಅವರು ರಚಿಸುವ ವೇಗದ ಚಿತ್ರಗಳು. ಕಣ್ಮುಚ್ಚಿ ಕಣ್ಣು ಬಿಡುವುದರೊಳಗಾಗಿ ವೇದಿಕೆಯಲ್ಲಿರುವವ ಗಣ್ಯರ ಚಿತ್ರಗಳನ್ನು ಬರೆದು ಬಿಡುತ್ತಾರೆ. ಯಾವುದೇ ಫೈನ್ ಆರ್ಟ್ಸ್ ತರಬೇತಿ ಪಡೆಯದ ವಿಲಾಸ್ ನಾಯಕ್ ಅವರು ಪ್ರಪಂಚದ ಸಾಕಷ್ಟು ದೇಶಗಳಲ್ಲಿ ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದಾರೆ.

image


ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಚಿತ್ರ ಬಿಡಿಸಲು ದಿನಗಟ್ಟಲೆ ತೆಗೆದುಕೊಳ್ಳುತ್ತಾರೆ. ಆದರೆ ವಿಲಾಸ್ ನಾಯಕ್ ಅವರದು ಬಣ್ಣಗಳೊಂದಿಗೆ ನಿಮಿಷಗಳ ಆಟ. ಭಾರತದ ಕೆಲವೇ ಕೆಲವು ‘ವೇಗದ ಚಿತ್ರಕಾರರಲ್ಲಿ ಇವರು ಒಬ್ಬರು. ವೇಗವಾಗಿ ಚಿತ್ರ ಬಿಡಿಸುವುದ ಬಹಳ ಕಷ್ಟ. ಕೆಲವೊಮ್ಮೆ 2 ನಿಮಿಷದಲ್ಲಿ ಚಿತ್ರ ಬಿಡಿಸಬೇಕಾಗಿರುತ್ತದೆ. ಅದಕ್ಕಾಗಿ ಇವರು ಮನೆಯಲ್ಲಿ ಅಭ್ಯಾಸ ಮಾಡಿರುತ್ತೇನೆ ಅಂತ ಹೇಳುತ್ತಾರೆ. ಕೆಲವೊಮ್ಮೆ ಗಾಯಕರು ಹಾಡನ್ನು ಹಾಡುತ್ತಿದ್ದರೆ ಆ ಹಾಡು ಮುಗಿಯುವುದರೊಳಗಾಗಿ ಚಿತ್ರ ಬಿಡಿಸಿದ್ದಾರೆ. ಅವರಿಗೆ ಇಷ್ಟವಾಗುವ ಹಾಗೇ ಚಿತ್ರಗಳನ್ನು ಬರೆದುಕೊಟ್ಟ ಖ್ಯಾತಿ ವಿಲಾಸ್​​ ನಾಯಕ್​ದು.

image


ಸುಮಾರು 3 ವರ್ಷದವನಿದ್ದಾಗಿನಿಂದಲೆ ಬ್ರೆಶ್ ಎತ್ತಿಕೊಂಡ ವಿಲಾಸ್ ನಾಯಕ್ ಇಲ್ಲಿಯವರೆಗೂ ಹಿಂತಿರುಗಿ ನೋಡೆ ಇಲ್ಲ. ಒಂದು ರೀತಿಯಲ್ಲಿ ಚಿಕ್ಕ ವಯಸ್ಸಿನಿಂದ ನನಗೆ ಈ ಕಲೆ ಒಲಿದಿದೆ.

ಯಾವುದೇ ಫೈನ್ ಆರ್ಟ್ಸ್ ಶಾಲೆಯಿಂದ ತರಬೇತಿ ಪಡೆಯದೆ ವಿಲಾಸ್ ನಾಯಕ್ ಈ ಮಟ್ಟಕ್ಕೇರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯಲ್ಲಿ Rank ಪಡೆದ ಇವರು, MSWನಲ್ಲೂ ಚಿನ್ನದ ಪದಕವನ್ನು ಮೈಸೂರು ವಿವಿಯಿಂದ ಪಡೆದಿದ್ದಾರೆ.

image


ಆರಂಭದಲ್ಲಿ ಜೀವನ ಭದ್ರತೆಗಾಗಿ ಐಬಿಎಂನಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ನಿರ್ವಹಿಸಿದರು. ಐದು ವರ್ಷಗಳ ಐಬಿಎಂನಲ್ಲಿ ಕೆಲಸ ಮಾಡುತ್ತಲೇ ಕುಂಚ ಗಳೊಂದಿಗಿನ ಸಂಬಂಧವನ್ನು ಮುಂದುವರೆಸುತ್ತಿದ್ದರು. ಆದರೆ ಒಂದು ಹಂತದಲ್ಲಿ ವೃತ್ತಿಗೆ ತಿಲಾಂಜಲಿ ನೀಡಿ ಸಂಪೂರ್ಣ ಕಲೆಗೆ ಸೀಮಿತವಾಗಿಬಿಟ್ಟರು.

ಕೈಬಿಡದ ಕುಂಚ

ಸಾವಿರಾರು ರೂಪಾಯಿಯ ಸಂಬಳದ ಕೆಲಸ ಬಿಟ್ಟು ಐಬಿಎಂನಿಂದ ಹೊರಬಿದ್ದ ವಿಲಾಸ್ ನಾಯಕ್​ಗೆ ಬ್ರಶ್ ಕೈಹಿಡಿಯಿತು. ಅದರ ಪರಿಣಾಮವಾಗಿ ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ತಮ್ಮ ಚಿತ್ರಕಲೆಯನ್ನು ಅನಾವರಣಗೊಳಿಸಿದ್ದಾರೆ. ಖಾಸಗಿ ವಾಹಿನಿಯ ಸೂಪರ್ ಸ್ಟಾರ್ ಆಫ್ ಕರ್ನಾಟಕ ಎಂಬ ರಿಯಾಲಿಟಿ ಶೋ ವಿಲಾಸ್ ಅವರನ್ನು ವೇದಿಕೆಗೆ ಪರಿಚಯಿಸಿದ್ದು, ಅಲ್ಲಿಂದ ಇಲ್ಲಿಯವರಗೂ ಕನ್ನಡ, ಹಿಂದಿ, ಬೆಂಗಾಲಿ, ತೆಲುಗು, ಹಿಂದಿ, ಇಂಗ್ಲೀಷ್​​ನ ಎಎಕ್ಸ್ಎನ್ ಚಾನೆಲ್​​ಗಳಲ್ಲಿ ಪ್ರದರ್ಶನ ನೀಡಿದ್ದಾರೆ. ವಿಲಾಸ್​​ ಅವರ ಚಿತ್ರಕಲೆಯ ವಿಶೇಷವೆಂದರೆ ಕೇವಲ ಎರಡು ಮೂರು ನಿಮಿಷಗಳಲ್ಲಿ ಚಿತ್ರ ಬಿಡಿಸುವುದು.

ದಿಗ್ಗಜರಿಂದ ಅಭಿನಂದನೆ

ಅಬ್ದುಲ್ ಕಲಾಂ, ಸಚಿನ್​​ ತೆಂಡೂಲ್ಕರ್, ಫುಟ್ಬಾಲ್ ದಂತಕಥೆ ಪೀಲೆ ಅವರ ಚಿತ್ರಗಳನ್ನು ಅವರ ಮುಂದೆಯೇ ಅತಿ ವೇಗವಾಗಿ ಚಿತ್ರಿಸಿ ಅವರುಗಳಿಂದ ಮೆಚ್ಚುಗೆ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಬಾಲಿವುಡ್ ಬಾದ್​ಷಾ ಶಾರೂಕ್ ಖಾನ್ ಆಯೋಜಿಸಿದ್ದ ಇಂಡಿಯಾ ಗಾಟ್ ಟ್ಯಾಲೆಂಟ್ (India Got Talent) ಎಂಬ ಕಾರ್ಯಕ್ರಮದಲ್ಲಿ ಕಿಂಗ್ ಖಾನ್ ಅವರಿಂದ ಶಹಬ್ಬಾಸ್​​​ಗಿರಿ ಪಡೆದಿದ್ದಾರೆ.

ಚಾರಿಟಿಗಾಗಿ ಪ್ರದರ್ಶನ

ವಿಲಾಸ್ ನಾಯಕ್ ಚಿತ್ರಗಳನ್ನು ರಚಿಸಿ ಅವುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಮಾಜದದಲ್ಲಿ ನೊಂದವರಿಗಾಗಿ ನೀಡಿದ್ದಾರೆ. ಉತ್ತರಾಖಂಡ್ ಪ್ರವಾಹಕ್ಕಾಗಿ ಕೇವಲ ಎರಡೂವರೆ ನಿಮಿಷದಲ್ಲಿ ಚಿತ್ರ ಬಿಡಿಸಿ ಅದನ್ನು ಮಾರಾಟ ಮಾಡಿದ್ದಾರೆ. ಸುಮಾರು 20 ಮಿಲಿಯನ್ ಅಮೆರಿಕನ್ ಡಾಲರ್​​ನಷ್ಟು ಹಣ ಇವರ ಚಿತ್ರಕಲೆಗಳಿಂದ ಸಂಗ್ರಹಿತವಾಗಿ ಸಮಾಜ ಸೇವೆಗೆ ಬಳಕೆಯಾಗಿದೆ. ಅತ್ಯಾಚಾರವನ್ನು ಖಂಡಿಸಿ ಅದರ ಕುರಿತು ರಚಿಸಿದ ಒಂದು ಚಿತ್ರ ಬಿಡಿಸಿ ವಿಡಿಯೋ ಮಾಡಿ ಅದನ್ನು ಯೂಟ್ಯೂಬ್​​ನಲ್ಲಿ ಹಾಕಿದ್ದಾರೆ. ಈ ರೀತಿ ತಮ್ಮ ಕಲೆಯ ಮೂಲಕ ಸಮಾಜದ ವಿವಿಧ ಸಮಸ್ಯೆಗಳಿಗೆ ವಿನೂತನ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

ವಿಲಾಸ್ ನಾಯಕ್ ಯಾವುದೇ ವೇದಿಕೆಯಲ್ಲಿ ಚಿತ್ರ ಬಿಡಿಸುತ್ತಾರೋ, ಅಲ್ಲೆಲ್ಲಾ ಗೌರವಗಳು, ಮೆಚ್ಚುಗೆಗಳು ಸಂದಿವೆ. ಮಧುರೈನ ಜೆಸಿಐ ‘ಔಟ್​​ಸ್ಟ್ಯಾಂಡಿಂಗ್ ಯಂಗ್ ಪರ್ಸನ್ ಆಫ್ ಇಂಡಿಯಾ’ ಪ್ರಶಸ್ತಿ, ಕರ್ನಾಟಕ ಸರಕಾರ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಯುವ ಪುರಸ್ಕಾರ’, ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಪ್ರಶಸ್ತಿ ಹೀಗೆ ಸಾಕಷ್ಟು ಪುರಸ್ಕಾರಗಳು ವಿಲಾಸ್ ನಾಯಕ್ ಅವರ ಪ್ರತಿಭೆ ಸಂದಿವೆ.

ಕಲೆಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳುತ್ತೇನೆ ಎಂದಾಗ ಸ್ವಲ್ಪ ಹಿಂಜರಿಕೆ ವ್ಯಕ್ತಪಡಿಸಿದ್ದ ಇವರ ಪೋಷಕರು, ಮಗನ ಇವತ್ತಿನ ಸಾಧನೆ ನೋಡಿ ಖುಷಿ ಪಟ್ಟಿದ್ದಾರೆ. ಬೇರೆಯವರಿಗೂ ನಿಮ್ಮ ಮಕ್ಕಳ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಸಲಹೆ ನೀಡುತ್ತಾರೆ.

ಪ್ರತಿಯೊಬ್ಬರು ಚಿತ್ರ ಬಿಡಿಸುತ್ತಾರೆ. ಪ್ರತಿಯೊಬ್ಬರಲ್ಲೂ ಒಂದು ವಿಶೇಷವಾದ ಪ್ರತಿಭೆ ಇರುತ್ತದೆ. ಅದನ್ನು ಹೊರ ಪ್ರಪಂಚಕ್ಕೆ ಗೊತ್ತಾಗುವ ಹಾಗೆ ಮಾಡುವುದು ಮತ್ತು ಸಧ್ಯದಲ್ಲಿರುವ ಟ್ರೆಂಡ್​​ಗೆ ತಕ್ಕಂತೆ ಚಿತ್ರ ಬಿಡಿಸಿದರೆ ಹೆಚ್ಚು ಗುರುತಿಸಿಕೊಳ್ಳಬಹುದು ಎಂದು ಹೊಸ ಕಲಾವಿದರಿಗೆ ವಿಲಾಸ್ ಸಲಹೆ ನೀಡುತ್ತಾರೆ.

image


ಕಲೆಯ ಮೂಲಕ ನೊಂದವರಿಗೆ ಕೈಲಾದ ಸಹಾಯ ಮಾಡುವ ಇರಾದೆ ಇದೆ. ವಿಲಾಸ್​​ ನಾಯಕ್ ಎಂದರೆ ವೇಗವಾಗಿ ಚಿತ್ರ ಬಿಡಿಸುವ ಕಲಾವಿದ ಅಷ್ಟೇ ಅಲ್ಲ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಒಬ್ಬ ಕಲಾವಿದ ಎನ್ನುಂತಾಗಬೇಕು ಅನ್ನೋದು ವಿಲಾಸ್​ ಮನದ ಮಾತು.