ಟಿನಿಓಲ್ ಸಂಸ್ಥೆಯ ಪುಣೆ ಶಾಖೆಯ ನೌಕರರಿಗೆ ಅಂತೂ ಸಂದಾಯವಾಯ್ತು ಹಣ: ಇನ್ನುಳಿದ ಶಾಖೆಗಳ ನೌಕರರಿಗೆ ಇನ್ನೂ ಆಗಿಲ್ಲ ಪಾವತಿ

ಟೀಮ್​​ ವೈ.ಎಸ್​​. ಕನ್ನಡ

ಟಿನಿಓಲ್ ಸಂಸ್ಥೆಯ ಪುಣೆ ಶಾಖೆಯ ನೌಕರರಿಗೆ ಅಂತೂ ಸಂದಾಯವಾಯ್ತು ಹಣ: ಇನ್ನುಳಿದ ಶಾಖೆಗಳ ನೌಕರರಿಗೆ ಇನ್ನೂ ಆಗಿಲ್ಲ ಪಾವತಿ

Wednesday November 18, 2015,

4 min Read

ಟಿನಿಓಲ್ ಸಂಸ್ಥೆ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಂಸ್ಥೆ ಇದ್ದಕ್ಕಿದ್ದಂತೆ ತನ್ನ ನೌಕರರನ್ನು ಸಂಸ್ಥೆಯಿಂದ ಹೊರಹಾಕುವಂತಹ ಸಮಸ್ಯೆ ನಿಜಕ್ಕೂ ಎದುರಾಗಿತ್ತು. ಸಂಸ್ಥೆ ನಷ್ಟದಲ್ಲಿ ನಡೆಯುತ್ತಿತ್ತು. ಅಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನೌಕರರ, ಹೂಡಿಕೆದಾರರ ದೃಷ್ಟಿಕೋನ ಏನು?, ಅಲ್ಲಿನ ಸಮಸ್ಯೆ ಏನು ಎಂಬುದಕ್ಕೆ ಇಲ್ಲಿದೆ ಉತ್ತರ.

“ನಾವು ಕೇಳಿದ್ದು ಇಷ್ಟೇ, ನಮ್ಮ ನೋಟಿಸ್ ಪಿರಿಯಡ್ ಅನ್ನು ಎರಡರಷ್ಟು ಹೆಚ್ಚಿಸಿ ಮತ್ತು ನಮ್ಮ ಬ್ಯಾಂಕ್ ಅಕೌಂಟ್‌ಗಳಿಗೆ ನಮಗೆ ಬರಬೇಕಾಗಿರುವ ಹಣವನ್ನು ಸಂಪೂರ್ಣವಾಗಿ ಹಾಗೂ ಅಂತಿಮವಾಗಿ ಪಾವತಿಸಿ. ನಾವು ಕೈಯಲ್ಲಿ ಏನೂ ಹಣವನ್ನು ಪಡೆದುಕೊಳ್ಳದೇ ಸುಮ್ಮನೆ ಅಲ್ಲಿಂದ ಹಿಂತಿರುಗುವಷ್ಟು ನಂಬಿಕೆಯನ್ನು ಟಿನಿಓಲ್ ಸಂಸ್ಥೆ ಉಳಿಸಿಕೊಂಡಿರಲಿಲ್ಲ. ನಮ್ಮ ಬೇಡಿಕೆಗಳು ತುಂಬಾ ಸರಳವಾಗಿದ್ದವು” ಇದು ಪುಣೆಯ ಟಿನಿಓಲ್ ಸಂಸ್ಥೆಯ ಆವರಣದಲ್ಲಿ ತಮಗೆ ಬೇಕಾದದ್ದನ್ನು ಪಡೆಯಲು ಎರಡು ದಿನಕ್ಕೂ ಹೆಚ್ಚು ಕಾಲ ವ್ಯಯಿಸಿದ ಟಿನಿಓಲ್ ಅದೇ ಸಂಸ್ಥೆಯ ನೌಕರರು ಹೇಳಿದ ಮಾತು.

image


ಹಲವು ಮಾಧ್ಯಮಗಳು ಟಿನಿಓಲ್ ಸಂಸ್ಥೆಯ ಘಟನೆಯನ್ನು ಒಂದು ಅಹಿತಕರ ಘಟನೆಯಾಗಿಯೇ ವರದಿ ಮಾಡಿವೆ. ಆದರೆ ಟಿನಿಓಲ್ ಸಂಸ್ಥೆಯ ನೌಕರರು ಹೇಳುವುದೇ ಬೇರೆ.

“ನಾವು ಗೌರವ್ ಅವರ ಬಳಿ ಮಾತನಾಡಿದೆವು ಮತ್ತು ನಮ್ಮ ಬೇಡಿಕೆಗಳನ್ನು ಅವರ ಮುಂದಿಟ್ಟೆವು. ಗೌರವ್‌ ಕೂಡ ಸ್ನೇಹಪೂರ್ವಕವಾಗಿಯೇ ವರ್ತಿಸಿದರು. ಅವರು ಪೊಲೀಸರೊಂದಿಗೆ ಮಾತನಾಡುವಾಗಲೂ ನಮ್ಮ ಪರವಾಗಿಯೇ ಮಾತನಾಡಿದರು. ಪೊಲೀಸರಿಗೆ ಅವರು ಕಛೇರಿಯಲ್ಲಿದ್ದದ್ದು ಅವರ ಆಯ್ಕೆಯಾಗಿತ್ತೇ ಹೊರತು ಅದರಲ್ಲಿ ಯಾವುದೇ ಒತ್ತಡವಿರಲಿಲ್ಲ ಎಂದು ತಿಳಿಸಿದ್ದರು. ಸಹಜವಾಗಿಯೇ ನಾವೂ ಅಷ್ಟೇ ಅವರನ್ನು ಆಫೀಸಿನಲ್ಲಿ ಹಿಡಿದಿಡುವ ಯಾವುದೇ ಪ್ರಯತ್ನವನ್ನೂ ಮಾಡಿರಲಿಲ್ಲ. ನಾವು ಆಫೀಸ್‌ ಬಿಟ್ಟು ಹೋಗಲಿಲ್ಲ ಅಷ್ಟೇ” ಎನ್ನುತ್ತಾರೆ ನೌಕರರು.

ಅದು 48 ಗಂಟೆಗಳ ಕಾಲ ಅನುಭವಿಸಿದ ವಿಚಿತ್ರ ಸ್ಥಿತಿ. ಅಲ್ಲಿ ಬಹಳಷ್ಟು ನಾಟಕಗಳು ನಡೆದವು. ಆಫೀಸಿನ ಸುತ್ತ ಪೊಲೀಸರಿದ್ದರು ಮತ್ತು ಸ್ಥಳೀಯ ರಾಜಕೀಯ ನಾಯಕರು ಬಂದು ಮಧ್ಯಸ್ಥಿಕೆ ನಡೆಸುತ್ತಿದ್ದರು. ಮಹಿಳಾ ಉದ್ಯೋಗಿಗಳು ತಮ್ಮ ಮನಸ್ಥಿತಿಯನ್ನು ಕಳೆದುಕೊಳ್ಳುತ್ತಿದ್ದರು. ಏನೇ ಆದರೂ ಗೆಲುವು ಮಾತ್ರ ಈ ನೌಕರರದ್ದೇ ಆಯಿತು.

ಸಂಸ್ಥೆಯ ಸಂಸ್ಥಾಪಕರುಗಳು ನೌಕರರೊಂದಿಗೆ ಮಾಡಿಕೊಂಡ ಕಾಂಟ್ರಾಕ್ಟ್ ನಿಯಮಾವಳಿಗಳ ಪ್ರಕಾರವೇ ನಡೆದುಕೊಳ್ಳುತ್ತಿದ್ದರು. ನೌಕರರಿಗೆ ಹಣಕಾಸಿನ ಸಂಪೂರ್ಣ ಮತ್ತು ಅಂತಿಮ ಪಾವತಿಯನ್ನು ಮಾಡಲಾಯಿತು.

“ನಮ್ಮಲ್ಲಿ ಬಹುತೇಕ ಮಂದಿಗೆ ಸಂಪೂರ್ಣ ಮತ್ತು ಅಂತಿಮ ಪಾವತಿಯಾಗಿತ್ತು. ಆದರೆ ಕೆಲವರಿಗೆ ಪಾವತಿಯಾಗಿರಲಿಲ್ಲ. ಏಕೆಂದರೆ ಅವರ ಅಕೌಂಟ್‌ಗಳು ಬೇರೆ ಬೇರೆ ಬ್ಯಾಂಕ್‌ಗಳಲ್ಲಿತ್ತು. ಆದರೆ ಅವರು ನಮ್ಮ ಹಣವನ್ನು ಪಾವತಿಸಿರುವುದಾಗಿ ಹೇಳಿದಾಗ ನಾವು ಅವರನ್ನು ನಂಬಿದೆವು. ಏಕೆಂದರೆ ಅವರು ನಮಗೆ ತೀರಾ ಸುಳ್ಳುಹೇಳುವುದು ಸಾಧ್ಯವಿರಲಿಲ್ಲ.” ಎನ್ನುತ್ತಾರೆ ನೌಕರರು. ಸಂಸ್ಥೆಯ ಕಾರ್ಯವಿಧಾನವನ್ನು ಒಪ್ಪಿಕೊಂಡ ನಂತರವಷ್ಟೇ ನೌಕರರು ಆಫೀಸ್ ಬಿಟ್ಟು ಹೊರಟಿದ್ದು. ಅದೇ ದಿನ ಮಧ್ಯಾಹ್ನ 3 ಗಂಟೆಯ ವೇಳೆಗೆ ಗೌರವ್ ಮುಂಬೈಗೆ ತೆರಳಿದರು.

“ಪುಣೆಯಲ್ಲಿ ವಿಪರೀತ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ನೌಕರರ ಸಮಸ್ಯೆಗಳನ್ನು ಪರಿಹರಿಸಲು ನಮಗೆ 48 ಗಂಟೆಗಳಿಗೂ ಹೆಚ್ಚು ಕಾಲ ಬೇಕಾಯಿತು. ನಮ್ಮ ನೌಕರರಲ್ಲಿ ಇಬ್ಬರು ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣರಾಗಿದ್ದರು. ನೌಕರರ ಸಮಸ್ಯೆಯನ್ನು ಪರಿಹರಿಸಲು ಕಾಂಟ್ರ್ಯಾಕ್ಟ್ ಅನ್ನೂ ಮೀರಿ ಕೆಲಸ ಮಾಡಿದೆವು. ಸಮಸ್ಯೆಗಳನ್ನು ಪರಿಹರಿಸಲು ಕೆಲ ಸಮಯ ಕಾಲಾವಕಾಶ ನೀಡಿ. ನಂತರದಲ್ಲಿ ಎಲ್ಲಾ ಪ್ರಶ್ನೆಗಳಿಗೂ ನಾವು ಉತ್ತರಿಸುತ್ತೇವೆ.” ಎನ್ನುತ್ತಾರೆ ಟಿನಿಓಲ್ ಸಂಸ್ಥೆಯ ಸಹಸಂಸ್ಥಾಪಕ ಮತ್ತು ಸಿಇಓ ಹರ್ಷವರ್ಧನ್ ಮಂಡಾಡ್.

ನೌಕರರು ತಮ್ಮ ತಾಳ್ಮೆ ಕಳೆದುಕೊಳ್ಳಲು ಕಾರಣವೇನು?

ತಮ್ಮ ಸಂಸ್ಥೆಯ ಮುಖ್ಯಸ್ಥರು ಬಹಳಷ್ಟು ಹಣ ಖರ್ಚು ಮಾಡಿದ್ದನ್ನು ನೌಕರರು ನೋಡಿದ್ದರು. ಅವರು ಸಂಸ್ಥೆಯ ಸಂಸ್ಥಾಪಕರುಗಳು 8 ತಿಂಗಳಲ್ಲಿ ಮಾಡಿದ 120 ಕೋಟಿ ಖರ್ಚು ಮಾಡಿದ್ದಕ್ಕೆ ಸಮರ್ಥನೆ ಕೇಳಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ಈ ಬಗ್ಗೆ ನೌಕರರು ಏನು ಹೇಳುತ್ತಾರೆ ಎಂದು ನೋಡೋಣ.

ನೇಮಕಾತಿಗೆ ಸಂಬಂಧಿಸಿದಂತೆ- ಟಿನಿಓಲ್ ಸಂಸ್ಥೆಯಲ್ಲಿ ಎಲ್ಲರಿಗೂ ಮೇಲ್ಮಟ್ಟದ ಉದ್ಯೋಗವನ್ನೇ ನೀಡಲಾಗಿತ್ತು ಎಂಬ ಮಾತಿದೆ. ಉದಾಹರಣೆಗೆ ಒಂದು ಸಂಸ್ಥೆಗೆ ಎಷ್ಟು ಮಂದಿ ಮಾರ್ಕೆಟಿಂಗ್ ಮಂದಿ ಬೇಕಾಗಬಹುದೋ ಅದಕ್ಕಿಂತ ಹೆಚ್ಚು ಮಂದಿ ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿದ್ದರು. ಅಲ್ಲದೇ ಒಬ್ಬನ ಕೆಲಸ ಮಾಡಲು 7 ಮಂದಿಯನ್ನು ನೇಮಿಸಿಕೊಳ್ಳಲಾಗಿತ್ತು. ಎನ್ನುತ್ತಾರೆ ಪುಣೆಯ ಒಬ್ಬ ಹಿರಿಯ ಮಾರಾಟ ಕಾರ್ಯನಿರ್ವಾಹಕ.

ದುಂದುಗಾರಿಕೆ- 25 ಜನಕ್ಕಾಗಿ 2 ಪ್ರಿಂಟರ್‌ಗಳು, 2 ಕೆಫೆ ಕಾಫಿ ಡೇ ವೆಂಡಿಂಗ್ ಮಿಷನ್ ಮತ್ತು ಬಹಳಷ್ಟು ಇತರ ವಸ್ತುಗಳನ್ನು ಹೊಂದಿದ್ದೆವು. 100 ಮಂದಿ ಕುಳಿತು ಕೆಲಸ ಮಾಡಬಹುದಾದ ಎರಡು ಆಫೀಸ್‌ ಗಳಿದ್ದವು. ಆದರೆ ಸಂಸ್ಥೆಯ ಸಂಸ್ಥಾಪಕರುಗಳಿಗೆ ಅವರು ಮಾಡುತ್ತಿರುವ ದುಂದುವೆಚ್ಚ ಗಮನಕ್ಕೆ ಬಂದಿರಲಿಲ್ಲ.

ಗ್ರಾಹಕರ ಸ್ವಾಧೀನಕ್ಕಾಗಿ ಅಸಮರ್ಪಕ ಆರ್ಥಿಕತೆ- ಈ ಹಿಂದೆ ಆರ್ಥಿಕ ವಿಭಾಗದ ನೌಕರರೊಂದಿಗೆ ಮಾತನಾಡಿದಾಗ ತಿಳಿದ ಪ್ರಕಾರ, ಅವರ ಗ್ರಾಹಕರ ಸ್ವಾಧೀನ ಆರ್ಥಿಕತೆ ಬಹಳ ಹಿಂದೆಯೇ ಹಳ್ಳಹಿಡಿದಿತ್ತು.

ಅವರು ಪಡೆದುಕೊಳ್ಳುವುದಕ್ಕಿಂತ 200 ಪಾಲು ಹೆಚ್ಚು ಹಣವನ್ನು ಅವರು ವ್ಯಯಿಸುತ್ತಿದ್ದರು. ಬೇರೆ ನಗರಗಳ ಆರ್ಥಿಕತೆಯ ಜೊತೆ ಅವರು ಸ್ಪರ್ಧೆಗಿಳಿಯುತ್ತಿದ್ದರು. ಪುಣೆಗಾಗಿ ಇನ್ನಷ್ಟು ಹೆಚ್ಚಿನ ಹಣ ಹಂಚುತ್ತಿದ್ದರು. ಇದು ಖಂಡಿತಾ ಸರಿಯಾದ ವಿಧಾನವಾಗಿರಲಿಲ್ಲ. ಇದೆಲ್ಲಾ ಅನಾವಶ್ಯಕವಾಗಿ ಖರ್ಚು ಎನ್ನುತ್ತಾರೆ ಟಿನಿಓಲ್ ಸಂಸ್ಥೆಯಿಂದ ವಜಾಗೊಂಡು ಈಗ ಮತ್ತೊಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓರ್ವ ಉದ್ಯೋಗಿ.

ಅನೇಕ ಭಾರತೀಯ ಆರ್ಥಿಕ ವಿಶ್ಲೇಷಕರು ತಮ್ಮದೇ ಆದ ರೀತಿಯಲ್ಲಿ ಟಿನಿಓಲ್ ಸಂಸ್ಥೆಯ ದುರಂತಕ್ಕೆ ಸಂಬಂಧಿಸಿದಂತೆ ವಿಶ್ಲೇಷಣೆ ನಡೆಸಿದ್ದಾರೆ. ವಿಭಿನ್ನ ದೃಷ್ಟಿಕೋನದಲ್ಲಿ ತಮ್ಮ ವಿಚಾರಗಳನ್ನು ತಿಳಿಸಿದ್ದಾರೆ.

“ಇದೊಂದು ದುರದೃಷ್ಟಕರ ಮತ್ತು ವಿಷಾದನೀಯ ಘಟನೆ. ಇದು ಎಲ್ಲಾ ಸಂಸ್ಥೆಗಳ ಅಗತ್ಯಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಕಸ್ಮಾತ್ ಸಂಸ್ಥೆ ಮುಚ್ಚುವ ಸ್ಥಿತಿಗೆ ಬಂದರೆ ನೌಕರರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕು” ಎನ್ನುತ್ತಾರೆ ಐಡಿಸಿಯ ಭಾರತ ಮತ್ತು ಸೌತ್ ಏಷಿಯಾ ವಿಭಾಗದ ಮ್ಯಾನೇಜಿಂಗ್ ಡೈರೆಕ್ಟರ್ ಜಯದೀಪ್ ಮೆಹ್ತಾ.

ಹೆಚ್ ಆರ್ ವಿಭಾಗ ಸೇರಿದಂತೆ ಅನೇಕ ವಿಭಾಗಗಳನ್ನು ನಿರ್ವಹಿಸಲು ಟಿನಿಓಲ್ ನಂತಹ ಆರಂಭಿಕ ಹಂತದ ಉದ್ಯಮಗಳಿಗೆ ನಿಜವಾಗಲೂ ಅನುಭವ ಇರುವುದಿಲ್ಲ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಒಬ್ಬರೇ ಬಗೆಹರಿಸಲು ಅಸಾಧ್ಯ ಎಂಬುದೇ ಹಿನ್ನಡೆಯಾಗುವುದಿಲ್ಲ. ಅವರ ಮುಂದಿನ ಯೋಜನೆಯನ್ನು ಅವರು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬುದೇ ಅತ್ಯಂತ ಮುಖ್ಯವಾದ ಅಂಶ. ಟಿನಿಓಲ್ ಸಂಸ್ಥೆ ಎಲ್ಲದನ್ನೂ ಮಾಡಲು ಇಚ್ಛಿಸಿತ್ತು, ದೊಡ್ಡ ಮಾರುಕಟ್ಟೆಯ ಭಾಗವಾಗಲು ಬಯಸಿತ್ತು. ಆಂತರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೊದಲೇ ಅತೀ ಶೀಘ್ರದಲ್ಲೇ ಬೆಳವಣಿಗೆ ಹೊಂದಲು ಸಂಸ್ಥೆ ಇಚ್ಛಿಸಿತ್ತು. ಈ ವಿಚಾರಗಳ ಕುರಿತು ಅವರು ಸಂಶೋಧಿಸಬೇಕಿತ್ತು, ಗಮನಹರಿಸಬೇಕಿತ್ತು ಮತ್ತು ರಿಯಾಯಿತಿ ಚಾಲಿತ ಬೆಳವಣಿಗೆ ಸಾಧಿಸುವ ಮೊದಲು ಮತ್ತೊಮ್ಮೆ ಸಂಪನ್ಮೂಲ ಕ್ರೋಢೀಕರಿಸುವತ್ತ ಗಮನಹರಿಸಬೇಕಿತ್ತು. ಅದಕ್ಕಾಗಿ ಅವರಿಗೆ ತಮ್ಮ ಹೂಡಿಕೆದಾರರ ಬೆಂಬಲವಿತ್ತು ಎನ್ನುತ್ತಾರೆ ಓರ್ವ ಅತ್ಯುನ್ನತ ಮಟ್ಟದ ಹೂಡಿಕೆದಾರರು.

ಅನೇಕ ಆಹಾರೋದ್ಯಮ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ, ಅವುಗಳೆಲ್ಲಾ ತಮ್ಮ ಯಾವುದೇ ರಿಯಾಯಿತಿಗಳನ್ನು ನೀಡದೇ ತಮ್ಮ ಕಾರ್ಯವಿಧಾನದ ಮೂಲಕವೇ ಮನೆಮಾತಾಗಿವೆ. ಸ್ವಿಗ್ಗೀ, ಫಾಸೂಸ್ ಮತ್ತು ಹೋಲಾಚೆಫ್ ಮತ್ತಿತರ ಸಂಸ್ಥೆಗಳು ಡಾಮಿನೋಸ್ ಗಳಿಸಿದ್ದ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವತ್ತ ಸಾಗುತ್ತಿವೆ. ಹೀಗಾಗಿ ಟಿನೀಓಲ್ ಸಂಸ್ಥೆಯೂ ಶೀಘ್ರದಲ್ಲೇ ಚೇತರಿಕೆ ಕಾಣುವಂತಾಗಬೇಕು ಎಂಬುದು ಹೂಡಿಕೆದಾರರಿಂದ ಕೇಳಿಬರುತ್ತಿರುವ ಮಾತುಗಳು.

ಪುಣೆ ಹೊರತುಪಡಿಸಿದಂತೆ ದೆಹಲಿ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಟನಿಓಲ್ ಸಂಸ್ಥೆ ಇದೆ. ಆದರೆ ಪುಣೆಯ ಶಾಖೆ ಮುಚ್ಚಲ್ಪಟ್ಟಿದೆ. ಆದರೆ ಎಲ್ಲೂ ಟಿನಿಓಲ್ ಸಂಸ್ಥೆ ಯಶಸ್ಸು ಸಾಧಿಸಿಲ್ಲ. ಟಿನಿಓಲ್ ಸಂಸ್ಥೆಯವರು ತಮ್ಮ ಆಫೀಸ್ ಅನ್ನು ಕೆಲ ದಿನಗಳ ಹಿಂದೆಯೇ ಮುಚ್ಚಿದ್ದಾರೆ. ಇದು ಟಿನಿಓಲ್ ಸಂಸ್ಥೆಯ ದುರಂತ. ಇದೇ ನೌಕರರ ಅಸಮಾಧಾನಕ್ಕೆ ಕಾರಣವಾಗಿರುವ ಘಟನೆ. ಟಿನಿಓಲ್ ಸಂಸ್ಥೆಯ ಸಮಸ್ಯೆಗಳು ಪರಿಹಾರವಾಗಿ ಸಂಸ್ಥೆ ಮತ್ತೆ ಚೇತರಿಕೆ ಕಾಣುವಂತಾಗಲಿ ಎಂಬುದೇ ಎಲ್ಲರ ಹಾರೈಕೆ.

ಲೇಖಕರು: ಅರ್ಪಣಾ ಘೋಷ್​​​

ಅನುವಾದಕರು: ವಿಶ್ವಾಸ್​​​​