ಧೈರ್ಯಗೆಡಲಿಲ್ಲ ಬಲಾತ್ಕಾರಕ್ಕೊಳಗಾದ ಮಹಿಳೆ – ತನ್ನ ಅನುಭವಕ್ಕೆ ನೀಡಿದಳು ಪುಸ್ತಕದ ರೂಪ

ಟೀಮ್​​ ವೈ.ಎಸ್​​. ಕನ್ನಡ

ಧೈರ್ಯಗೆಡಲಿಲ್ಲ ಬಲಾತ್ಕಾರಕ್ಕೊಳಗಾದ ಮಹಿಳೆ – ತನ್ನ ಅನುಭವಕ್ಕೆ ನೀಡಿದಳು ಪುಸ್ತಕದ ರೂಪ

Saturday November 28, 2015,

2 min Read

ಅಮಾಯಕ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು ಬರುವ ಅದೆಷ್ಟೋ ಮಹಿಳೆಯರು ದುಷ್ಟರ ಪಾಲಾಗುತ್ತಿದ್ದಾರೆ. ಕೆಲಸದ ಆಸೆಗೆ, ನಂಬಿಸಿದವರ ಹಿಂದೆ ಹೋಗಿ ವೇಶ್ಯಾವಾಟಿಕೆಯಂತ ದಂಧೆಯಲ್ಲಿ ಸಿಲುಕಿ ನರಕ ಯಾತನೆ ಅನುಭವಿಸುತ್ತಿದ್ದಾರೆ.

ದೇಶದಲ್ಲಿ ಅತ್ಯಾಚಾರ, ಮೋಸ ಜಾಸ್ತಿಯಾಗುತ್ತಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ದೈಹಿಕ ಯಾತನೆ ಹಾಗೂ ಮಾನಸಿಕ ಆಘಾತಕ್ಕೊಳಗಾಗುತ್ತಾಳೆ. ಆ ಭಯಾನಕ ಅನುಭವವನ್ನು ಮರೆತು ಮೊದಲಿನಂತೆ ಜೀವನ ನಡೆಸುವುದು ನೊಂದ ಮಹಿಳೆಯರಿಗೆ ಅಸಾಧ್ಯ. ಅನೇಕರು ಅದೇ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಕೆಲ ಮಹಿಳೆಯರು ಜೀವನ ಪೂರ್ತಿ ನರಳಾಡುತ್ತಾರೆ. ನೋವು ನುಂಗಲಾಗದೆ ಹುಚ್ಚಾಸ್ಪತ್ರೆ ಸೇರುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಅವರೆಲ್ಲರ ಮಧ್ಯೆ ಈ ಮಹಿಳೆ ಭಿನ್ನವಾಗಿ ನಿಲ್ಲುತ್ತಾಳೆ. ಧೈರ್ಯಗೆಡದೆ ತನಗಾದ ಕೆಟ್ಟ ಅನುಭವಕ್ಕೆ ಅಕ್ಷರ ಹಾಗೂ ಬಣ್ಣದ ರೂಪ ನೀಡಿದ್ದಾಳೆ. ಕೆಟ್ಟ ಸಮಾಜದಲ್ಲಿ ತಾನು ಅನುಭವಿಸಿದ ಯಾತನೆಯನ್ನು ಪುಸ್ತಕದ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾಳೆ.

image


ಮೂರು ಮಕ್ಕಳ ತಾಯಿ ಅವಳು. ವಯಸ್ಸು 34. ಹೊಟ್ಟೆ ಪಾಡಿಗಾಗಿ, ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ಕನಸನ್ನು ಹೊತ್ತು ಬಾಂಗ್ಲಾ ದೇಶದಿಂದ ಕೇರಳಕ್ಕೆ ಬಂದಳು. ಆಕೆ ಬಯಸಿದ್ದು ಒಂದು,ವಿಧಿ ಬರೆದಿದ್ದು ಇನ್ನೊಂದು. ಅವಳ ಅದೃಷ್ಟ ಕೆಟ್ಟಿತ್ತು. ಕೋಯಿಕ್ಕೋಡ್ ನಲ್ಲಿ ಕೆಲಸ ಕೊಡುವುದಾಗಿ ನಂಬಿಸಿದ ಕೆಲವರು ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದರು.

ಮೋಸದ ಜಾಲಕ್ಕೆ ಸಿಲುಕಿ ಅತ್ಯಾಚಾರಕ್ಕೊಳಗಾದ 34 ವರ್ಷದ ಮಹಿಳೆ ಧೈರ್ಯಗೆಡಲಿಲ್ಲ. ತನ್ನ ಬುದ್ದಿಶಕ್ತಿ ಉಪಯೋಗಿಸಿ ದುಷ್ಟರ ಕೈನಿಂದ ತಪ್ಪಿಸಿಕೊಂಡು, ನರಕದಿಂದ ಹೊರಬಂದ್ಲು. ಆಕೆಯನ್ನು ಸ್ಥಳೀಯರು ಪೊಲೀಸರಿಗೊಪ್ಪಿಸಿದರು. ನಾಲ್ಕೈದು ದಿನ ಪೊಲೀಸರ ನೆರವಿನಿಂದ ಗುಪ್ತ ಸ್ಥಳದಲ್ಲಿದ್ದ ಮಹಿಳೆ ವೇಶ್ಯಾವಾಟಿಗೆ ಜಾಲದ ಬಗ್ಗೆ ಮಾಹಿತಿ ನೀಡಿದಳು. ಆಕೆಯ ನೆರವಿನಿಂದ ಪೊಲೀಸರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಲು ಯಶಸ್ವಿಯಾದ್ರು.

ನಂತರ ಆಕೆಗೆ ಆಶ್ರಯ ನೀಡಿದ್ದು ಒಂದು ಸರ್ಕಾರಿ ಆಶ್ರಮ. ಅಲ್ಲಿ ತಂಗಿದ್ದ ಮಹಿಳೆ ತನ್ನ ನೋವು, ತಾನು ಅನುಭವಿಸಿದ ಭಯಾನಕ ಹಿಂಸೆಯನ್ನು, ಮಾತಿನಲ್ಲಿ ಹೇಳಲಾಗದ ಸಂಟವನ್ನು ಕವನ,ಚಿತ್ರಗಳ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಳು. ಅವಳ ಈ ಕವನ, ಚಿತ್ರಗಳ ಪ್ರತಿ ಕೋಯಿಕ್ಕೋಡ್ ನ ಎನ್ ಜಿಓ ಒಂದರ ಸದಸ್ಯರಿಗೆ ಸಿಗ್ತು. ಆಗಲೇ ಮಹಿಳೆಯ ನೋವಿನ ಭಾವನೆ ಪುಸ್ತಕ ರೂಪ ತಳೆಯಲು ಮುನ್ನುಡಿಯಾಗಿದ್ದು.

ಎನ್ ಜಿಓ ಮಹಿಳೆಯ ನೋವಿನ ಚಿತ್ರಕ್ಕೆ ಒಂದು ರೂಪ ನೀಡಲು ನಿರ್ಧರಿಸಿದರು. ಎಲ್ಲವನ್ನು ಒಟ್ಟುಗೂಡಿಸಿ ಪುಸ್ತಕ ಹೊರತರಲು ಮುಂದಾದರೆ. ಅನೂಫ್ ಎಂಬುವವರು ಮಹಿಳೆ ಬರೆದ ಸಣ್ಣ ಕಥೆ ಹಾಗೂ ಕವನಗಳನ್ನು ಅನುವಾದಿಸಲು ನಿರ್ಧರಿಸಿದರು. ನೊಂದ ಬಾಂಗ್ಲಾ ಮಹಿಳೆ ಕವನ ಹಾಗೂ ಕಥೆಗಳನ್ನು ಮಾತೃ ಭಾಷೆ ಬೆಂಗಾಲಿಯಲ್ಲಿ ಬರೆದಿದ್ದಳು. ಅದನ್ನು ಮೊದಲು ಇಂಗ್ಲೀಷ್ ಗೆ ನಂತರ ಮಲೆಯಾಳಂಗೆ ಅನುವಾದಿಸಲಾಯ್ತು. ಬಾಂಗ್ಲಾ ದೇಶದಲ್ಲಿರುವ ಅನೂಪ್ ಸ್ನೇಹಿತರೊಬ್ಬರು ಇದಕ್ಕೆ ಸಾಥ್ ನೀಡಿದರು.ನೊಂದ ಮಹಿಳೆ ಬರೆದ ಸಣ್ಣ ಕಥೆ ಹಾಗೂ ಕವನವನ್ನು ಇಂಗ್ಲೀಷ್ ಗೆ ಅನುವಾದಿಸಿಕೊಟ್ಟರು. ನಂತರ ಇಂಗ್ಲೀಷ್ ಗೆ ಅನುವಾದಗೊಂಡ ಸಣ್ಣಕಥೆಯನ್ನು ಮಲೆಯಾಳಂಗೆ ಅನೂಪ್ ಅನುವಾದಿಸಿದರು. ಕವನವನ್ನು ಪತ್ರಕರ್ತೆ ಅನುಪಮಾ ಮಾಲಿ ಅವರಿಂದ ಅನುವಾದ ಮಾಡಿಸಲಾಯ್ತು.

`Njan Enna Murivu’ ಶೀರ್ಷಿಕೆ ಅಡಿ ಪುಸ್ತಕ ಹೊರ ಬಂತು. ಪುಸ್ತಕ 80 ಪುಟಗಳನ್ನು ಹೊಂದಿದೆ. 18 ಕವಿತೆಗಳು, 20ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಸೆಕ್ಸ್ ಮಾಫಿಯಾ ಜೊತೆಗೆ ತನಗಾದ ಭಯಾನಕ ನೋವು, ನರಕಯಾತನೆಯನ್ನು ಇದರಲ್ಲಿ ವ್ಯಕ್ತಪಡಿಸುವದರ ಜೊತೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಆಶ್ರಮದಲ್ಲಿ ವಾಸಿಸುತ್ತಿರುವ ಆಕೆಯ ಜೀವನದ ಸಂಪೂರ್ಣ ಚಿತ್ರಣ ಈ ಪುಸ್ತಕದಲ್ಲಿದೆ.

ಮಹಿಳೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಮತ್ತಷ್ಟು ಕವನ, ಚಿತ್ರಗಳನ್ನು ರಚಿಸುವಂತೆ ಪ್ರೇರಣೆ ನೀಡಿ ಒಂದು ಪುಸ್ತಕವನ್ನು ಹೊರ ತರಲಾಗಿದೆ. ನೊಂದ ಮಹಿಳೆ ಕೇವಲ ಏಳನೇ ತರಗತಿಯವರೆಗೆ ಮಾತ್ರ ಓದಿದ್ದಾಳೆ. ಆದರೆ ಆಕೆಗೆ ತನ್ನ ಭಾವನೆಗಳನ್ನು ಮನಕಲಕುವಂತೆ ವ್ಯಕ್ತಪಡಿಸುವ ಸಾಮರ್ಥ್ಯವಿದ್ದು, ಇದು ನಂಬಲಸಾಧ್ಯ ಎನ್ನುತ್ತಾರೆ ಅನೂಪ್.

ಕೆಲ ದಿನಗಳ ಹಿಂದೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ ಅಜಿತಾ, ಪುರಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಬರಹಗಾರ ಎಂ ಎನ್ ಕಾರಸೇರಿ ಅವರಿಗೆ ಪುಸ್ತಕ ನೀಡುವ ಮೂಲಕ ಪುಸ್ತಕ ಹೊರತಂದಿದ್ದಾರೆ. ಅಲ್ಲದೆ ಕೇರಳದ ಪ್ರಸಿದ್ಧ ಲಲಿತಕಲಾ ಆರ್ಟ್ ಗ್ಯಾಲರಿಯಲ್ಲಿ ನೊಂದ ಮಹಿಳೆ ಬಿಡಿಸಿದ ಎಲ್ಲ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಮೊದಲು ಆತ್ಮಹತ್ಯೆಗೆ ಯತ್ನಿಸಿ,ನಂತರ ಧೈರ್ಯದಿಂದ ಮುನ್ನುಗುತ್ತಿರುವ ಮಹಿಳೆ ತನ್ನ ತಾಯ್ನಾಡಿಗೆ ಹೋಗಿ ತನ್ನ ಮಕ್ಕಳನ್ನು ನೋಡುವ ನಿರೀಕ್ಷೆಯಲ್ಲಿದ್ದಾಳೆ.ಅವರಿಗಾಗಿಯೇ ಈ ಪುಸ್ತಕವನ್ನು ಸಮರ್ಪಣೆ ಮಾಡಿದ್ದಾಳೆ.

ಅನುವಾದಕರು: ರೂಪಾ ಹೆಗಡೆ