ಕೊಳಗೇರಿ ಮಕ್ಕಳಿಗಾಗಿ ಸ್ಲಂ ಕ್ರಿಕೆಟ್ ಲೀಗ್

ಟೀಮ್​​ ವೈ.ಎಸ್​​. ಕನ್ನಡ

0

ಕ್ರಿಕೆಟ್ ಅಂದರೆ ಅದೊಂದು ಆಟವಲ್ಲ. ಅದು ಭಾರತ ದೇಶದ ಧರ್ಮವೇ ಆಗಿ ಹೋಗಿದೆ. ಒಂದು ಆಟಕ್ಕಿಂತ ಹೆಚ್ಚಾಗಿ ಒಂದು ಧರ್ಮವನ್ನಾಗಿ ದೇಶದ ಜನರು ಕ್ರಿಕೆಟ್ ಆಟವನ್ನು ಪ್ರೀತಿಸುತ್ತಾರೆ. ಐರೋಪ್ಯ ದೇಶಗಳಲ್ಲಿ ಪುಟ್ಭಾಲ್ ಹೇಗೆ ಜನಪ್ರಿಯವೋ, ಹಾಗೆ ಭಾರತದಲ್ಲೂ ಕ್ರಿಕೆಟ್ ಅತ್ಯಂತ ಜನಪ್ರಿಯವಾಗಿ ಬಿಟ್ಟಿದೆ.

ಕ್ರಿಕೆಟ್‌ನಿಂದ ಹೆಸರು, ಹಣ, ಜನಪ್ರಿಯತೆ ಎಲ್ಲವೂ ಸುಲಭವಾಗಿ ಬಿಟ್ಟಿದೆ. ಹೀಗಾಗಿ, ಕ್ರಿಕೆಟ್ ತರಬೇತಿ ನೀಡುವ ಸಂಸ್ಥೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಅಕಾಡೆಮಿಗಳು, ಶಾಲೆಗಳು, ಮೈದಾನಗಳು, ಸಣ್ಣ ಸಣ್ಣ ಗಲ್ಲಿಗಳಲ್ಲೂ ಕ್ರಿಕೆಟ್ ಆಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ.

ಶ್ರೀಮಂತರು, ಮಧ್ಯಮ ವರ್ಗದವರೇನೋ ತಮ್ಮ ಮಕ್ಕಳು ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ನಂತೆ ಇರಬೇಕು ಅಂತ ಕನಸು ಕಾಣುತ್ತಾರೆ. ಅದಕ್ಕಾಗಿ ಮಾಜಿ ಆಟಗಾರರೋ, ಕ್ರಿಕೆಟ್ ಬಲ್ಲವರಿಂದ ಹೆಚ್ಚು ಹೆಚ್ಚು ಹಣ ಕೊಟ್ಟು ತರಬೇತಿ ಕೂಡ ಕೊಡಿಸುತ್ತಾರೆ. ಆದರೆ, ದೇಶದ ಧರ್ಮವೇ ಆಗಿರುವ ಕ್ರಿಕೆಟ್ ಆಟವನ್ನು ಆಹ್ವಾದಿಸಲು ಸಾಧ್ಯವಿಲ್ಲದ ಬಹಳಷ್ಟು ನತದೃಷ್ಠರೂ ಇದ್ದಾರೆ.

ಕ್ರಿಕೆಟ್ ಕಿಟ್, ತರಬೇತಿ ಮೈದಾನಗಳು ಹಾಗೂ ವೃತ್ತಿಪರ ಕೋಚ್‌ಗಳಿಲ್ಲದೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದ ಬಹಳಷ್ಟು ನತದೃಷ್ಟರು ಇವತ್ತು ಕೊಳಗೇರಿ, ಸಣ್ಣ ಪಟ್ಟಣಗಳು ಹಾಗೂ ಕುಗ್ರಾಮಗಳಲ್ಲಿ ವಾಸವಾಗಿದ್ದಾರೆ. ತಮ್ಮ ಬಯಕೆಯನ್ನು ಈಡೇರಿಸಿಕೊಳ್ಲುವ ಸಲುವಾಗಿ ರಸ್ತೆಗಳಲ್ಲಿ ಇಟ್ಟಿಗೆ ರೂಪದಲ್ಲಿ ವಿಕೆಟ್, ಪ್ಲಾಸ್ಟಿಕ್ ಬ್ಯಾಟ್‌ಗಳನ್ನು ಹಿಡಿದು ಸಚಿನೋ, ಸೆಹ್ವಾಗ್ ನೆನಪಿಸಿಕೊಂಡು ಆಟ ಆಡುತ್ತಾರೆ.

ಕೊಳಗೇರಿಯಲ್ಲಿರುವ ಪ್ರತಿಭಾವಂತರ ಅನ್ವೇಷಣೆಗೆ ನೆರವಾಗಲು ದೆಹಲಿಯಲ್ಲಿ ಸ್ಲಂ ಕ್ರಿಕೆಟ್ ಲೀಗ್ ಆರಂಭಿಸಲಾಗಿದೆ. ಇದು, ವೃತ್ತಿಪರರೊಂದಿಗೆ ಸ್ಪರ್ಧಿಸಲು ಹಾಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಹಕಾರಿಯಾಗಿದೆ.

ದೆಹಲಿ ಸ್ಲಂ ಕ್ರಿಕೆಟ್ ಲೀಗ್‌ನ ರೂವಾರಿ ಬಿ.ಎಸ್. ಪುನ್ ದೀರ್. ಮೂಲತಃ ಎನ್‌ಜಿಓ ಆಗಿರುವ ಪುನ್ ದೀರ್, ಸಿಎಫ್‌ಸಿಟಿಯ ಅಧ್ಯಕ್ಷರೂ ಆಗಿದ್ದಾರೆ. ನಿರ್ಗತಿಕ ಪುರುಷರು, ಮಹಿಳೆಯರು ಮತ್ತು ಮಕ್ಕಳು, ಕುಷ್ಠರೋಗಿಗಳು, ಅನಾಥರು ಮತ್ತು ಬಡವರಿಗಾಗಿ ಎನ್‌ಜಿಓ ಸ್ಥಾಪಿಸಿದ್ದ ಪುನ್ ದೀರ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ನಿರ್ಗತಿಕರಿಗಾಗಿ ಸ್ಲಂಗಳಲ್ಲಿ ಶಾಲೆ, ಕಂಪ್ಯೂಟರ್ ತರಬೇತಿ ಕೇಂದ್ರಗಳು ಹಾಗೂ ಸಮೂದಾಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿರಂತರ ಸಂಪರ್ಕದಲ್ಲಿ ಕೂಡ ಇದ್ದರು. ಕೊಳಗೇರಿಯಲ್ಲೇ ಹೆಚ್ಚಿನ ಕಾಲ ಕಳೆಯುತ್ತಿದ್ದ ಪುನ್ ದೀರ್, ಅವರೊಂದಿಗೆ ಮಾತುಕತೆಯಲ್ಲಿ ನಿರತವಾಗಿದ್ದ ವೇಳೆ, ಹಲವಾರು ಅಂಶಗಳನ್ನು ಮನಗಂಡಿದ್ದಾರೆ. ಅವರಲ್ಲಿರುವ ಪ್ರತಿಭೆ ಹಾಗೂ ಕ್ರೀಡೆ ಮೇಲಿನ ಆಸಕ್ತಿಯ ಅಂಶವೂ ಅವರ ಗಮನಕ್ಕೆ ಬಂದಿದೆ.

ಪ್ರತಿಭೆಯಲ್ಲಿ ಯಾವ ಶ್ರೀಮಂತ ಮಕ್ಕಳಿಗಿಂತಲೂ ಕಡಿಮೆ ಇಲ್ಲದ ಈ ನಿರ್ಗತಿಕ ಮಕ್ಕಳು ಕ್ರೀಡೆ ವಿಚಾರ ಬಂದಾಗ ಅತ್ಯಂತ ರ್ದೌಭಾಗಿಗಳು. ಉತ್ತಮ ಬ್ಯಾಟ್ ಅಥವಾ ಚೆಂಡು ಇಲ್ಲದಿದ್ದರೂ, ಬೆಟ್ಟದಷ್ಟು ಕನನಸು ಹೊತ್ತಿಕೊಂಡವರು. ಶ್ರೀಮಂತ ಮಕ್ಕಳು ಬೀದಿಯಲ್ಲಿ ಆಟವಾಡುವಾಗ ನಾವು ಒಂದು ದಿನ ಕಿಟ್, ಬ್ಯಾಟ್, ಬಾಲ್‌ನೊಂದಿಗೆ ಆಟವಾಡಬಹುದೇನೋ? ಅಂತ ಬಿ.ಎಸ್. ಪುನ್ ದೀರ್ ಅವರೊಂದಿಗೆ ಹೇಳಿಕೊಂಡಾಗ ಅವರ ಕರುಳು ಚುರುಕ್ ಅಂದಿದ್ದು ಸುಳ್ಳಲ್ಲ.

ಮಕ್ಕಳ ಆಸೆ ಆಕಾಂಕ್ಷೆಗಳ ಬಗ್ಗೆ ಮಗ ರಾಜೇಶ್ ಪುನ್ ದೀರ್ ಹಾಗೂ ಸ್ನೇಹಿತ, ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ಎಂ.ಪಿ. ನಾರಂಗ್ ಅವರೊಂದಿಗೆ ಚರ್ಚೆ ನಡೆಸಿದರು. ಮಕ್ಕಳ ಭಾವನೆ, ಆಸೆ ಆಕಾಂಕ್ಷೆಗಳ ಬಗ್ಗೆ ಸಮಾಲೋಚಿಸಿದರು. ಮೊದ ಮೊದಲು ಮಕ್ಕಳಿಗೆ ಉಚಿತವಾಗಿ ಕ್ರಿಕೆಟ್ ಕಿಟ್ ಗಳನ್ನು ವಿತರಿಸಲಾಯಿತು. ಆದರೆ, ಅವರ ಆಸೆ-ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಾಗಲೇ ಇಲ್ಲ. ವೃತ್ತಿಪರ ಆಟ, ಕೌಶಲ್ಯ, ಪ್ರತಿಭೆಯನ್ನು ಹೊರ ತರುವ ಸಲುವಾಗಿ ಮಕ್ಕಳ ಕ್ರಿಕೆಟ್ ಲೀಗ್ ಆಯೋಜಿಸಲು ಆಲೋಚನೆ ನಡೆಸಲಾಯಿತು. ಆಗ ಜನ್ಮ ತಾಳಿದ ಕ್ರಿಕೆಟ್ ಲೀಗೆ ಸ್ಲಂ ಕ್ರಿಕೆಟ್ ಲೀಗ್.

ಮೊದ ಮೊದಲು ದಕ್ಷಿಣ ದೆಹಲಿಯ ಕೊಳಗೇರಿಯಲ್ಲಿ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಕೊಳಗೇರಿಯಲ್ಲಿನ ಪೋಷಕರೊಂದಿಗೆ ಚರ್ಚಿಸಲಾಯಿತು. ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುವುದರ ಮೂಲಕ ಪ್ರೇರೇಪಿಸಿದರು. ಸುಮಾರು 10 ಕೊಳಗೇರಿಯ 120ಕ್ಕೂ ಹೆಚ್ಚು ಮಕ್ಕಳು ಟೂರ್ನಿಯಲ್ಲಿ ಪಾಲ್ಗೊಂಡರು. ಕಳೆದ ಅಕ್ಟೋಬರ್ ನಲ್ಲಿ ಮೊಟ್ಟ ಮೊದಲ ಸ್ಲಂ ಕ್ರಿಕೆಟ್ ಲೀಗ್ ಆಯೋಜಿಸಲಾಯಿತು. ಮಕ್ಕಳು ತಲೆಗೆ ಹೆಲ್ಮೆಟ್, ಕೈಗೆ ಗ್ಲೌಸ್ ತೊಟ್ಟು ಆನಂದಿಸಿದರು ಅನ್ನುತ್ತಾರೆ ಈ ಟೂರ್ನಿಯ ಆಯೋಜಕ ರಾಜೇಶ್ ಪುನ್ದಾರ್.

ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ಎಂ.ಪಿ. ನಾರಂಗ್ ಕನಸಿನ ಪ್ರಕಾರ, ಮುಂದಿನ ಡಿಸೆಂಬರ್‌ನಲ್ಲಿ ಉತ್ತರ ದೆಹಲಿಯಲ್ಲಿ ಇದೇ ರೀತಿಯ ಟೂರ್ನಿ ಆಯೋಜಿಸಲು ತೀರ್ಮಾನಿಸಲಾಗಿದೆ. ದೆಹಲಿ ಕೇಂದ್ರ, ಈಶಾನ್ಯ ಹಾಗೂ ನೈರುತ್ಯ ಭಾಗಗಳ ಕೊಳಗೇರಿ ಮಕ್ಕಳಿಗೆ ಈ ಟೂರ್ನಿ ಏರ್ಪಾಡು ಮಾಡಲಾಗಿದೆ. ಇದಾದ ನಂತರ ಅಂತಾರಾಜ್ಯ, ರಾಷ್ಟ್ರೀಯ ಮಟ್ಟದಲ್ಲೂ ಸ್ಲಂ ಕ್ರಿಕೆಟ್ ಲೀಗ್ ನಡೆಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಪ್ರಾಯೋಜಕರು ಹಾಗೂ ಕೆಲವೊಂದು ಕಂಪನಿಗಳು ಸಹಭಾಗಿತ್ವಕ್ಕೆ ಮುಂದಾಗಿವೆ.

ಕೊಳೆಗೇರಿ ಮಕ್ಕಳಿಗೆ ಅನುಕೂಲವಾಗುವ ಸಲುವಾಗಿ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಸ್ಲಂ ಕ್ರಿಕೆಟ್ ಅಕಾಡೆಮಿಯನ್ನೂ ಕೂಡ ತೆರೆದಿದೆ. ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ತರಬೇತಿಯನ್ನು ಈ ಅಕಾಡೆಮಿ ಮೂಲಕ ನೀಡಲಾಗುತ್ತದೆ ವೃತ್ತಿ ಬದುಕನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಈ ಅಕಾಡೆಮಿ ನೆರವು ನೀಡಲಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಕನಸು ಕಾಣುತ್ತಿರುವ ಮಕ್ಕಳಿಗೆ ಇದರಿಂದ ಹೆಚ್ಚು ಸಹಾಯವಾಗಲಿದೆ.

ಲೇಖಕರು: ಸೌರವ್​​ ರಾಯ್​​
ಅನುವಾದಕರು: ಶ್ರುತಿ