ಮೋದಿ ಅವರ ಕನಸಿನ ಭಾರತದ ಹೆಮ್ಮೆಯ ಪುತ್ರ...

ಟೀಮ್​​​ ವೈ.ಎಸ್​​.ಕನ್ನಡ

0

ರಾಜಸ್ಥಾನದ ಅಲ್ವಾರ್‍ನ ಪ್ರಾಥಮಿಕ ಶಾಲಾ ಶಿಕ್ಷಕ ಇಮ್ರಾನ್ ಖಾನ್ ಭಾರತ ಬಿಟ್ಟು ಬೇರೆಡೆಗೆ ಹೋದವರೇ ಅಲ್ಲ. ಹೀಗೆ ಒಂದು ದಿನ ಏಳು ಸಮುದ್ರಗಳಾಚೆಯಿಂದ ತಮ್ಮ ಹೆಸರು ಕೇಳಿ ಬರಬಹುದೆಂಬ ಕಲ್ಪನೆಯೂ ಅವರಿಗಿರ್ಲಿಲ್ಲ. ಬ್ರಿಟನ್‍ನ ವೆಂಬ್ಲೆ ಮೈದಾನದಲ್ಲಿ ಸಾವಿರಾರು ಪ್ರೇಕ್ಷಕರೆದುರು ಮಾತನಾಡ್ತಾ ಪ್ರಧಾನಿ ನರೇಂದ್ರ ಮೋದಿ, ಇಮ್ರಾನ್ ಖಾನ್ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡ್ರು. ನಮ್ಮ ಹೆಮ್ಮೆಯ ಭಾರತದಲ್ಲಿ ಇಮ್ರಾನ್ ಖಾನ್‍ರಂತವರು ವಾಸಿಸುತ್ತಿದ್ದಾರೆ ಅಂತಾ ಎದೆತಟ್ಟಿ ಹೇಳಿಕೊಂಡ್ರು. ಆ ಕ್ಷಣದಿಂದ ಜನಪ್ರಿಯತೆ ಇಮ್ರಾನ್ ಖಾನ್‍ರನ್ನು ಅರಸಿ ಬಂದಿದೆ. ನಿಜವಾದ ಭಾರತೀಯ ಅನ್ನೋದಕ್ಕೆ ತಮ್ಮ ಹೆಸರನ್ನು ಪ್ರಧಾನಿ ಮೋದಿ ಉದಾಹರಿಸಿದ್ದಕ್ಕೆ ಇಮ್ರಾನ್ ಖಾನ್ ಸಂತಸ ವ್ಯಕ್ತಪಡಿಸ್ತಾರೆ. ತಾವು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ ಎನ್ನುತ್ತಾರೆ. ತಮ್ಮ ಮನೆ ಮುಂದೆ ಹತ್ತಾರು ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು ಜಮಾಯಿಸಿದ್ದನ್ನು ನೋಡಿ ಇಮ್ರಾನ್ ಖಾನ್ ಅಚ್ಚರಿಗೊಂಡಿದ್ರು. ತನ್ನ ಮಗ ಅಂಥದ್ದೇನು ಮಾಡಿದ್ದಾನೆ ಅಂತಾ ಇಮ್ರಾನ್ ಅವರ ಪೋಷಕರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ರು.

ಏನ್ಮಾಡ್ತಾರೆ ಇಮ್ರಾನ್ ಖಾನ್..?

ರಾಜಸ್ತಾನದ ಅಲ್ವಾರ್‍ನಲ್ಲಿರುವ ಸರ್ಕಾರಿ ಸಂಸ್ಕೃತ ಶಾಲೆಯಲ್ಲಿ, 34 ವರ್ಷದ ಇಮ್ರಾನ್ ಖಾನ್ ಶಿಕ್ಷಕರಾಗಿ ಸೇವೆ ಸಲ್ಲಿಸ್ತಿದ್ದಾರೆ. 2012ರಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಮ್ರಾನ್ ಖಾನ್ ನೀಡಿದ್ದ ಉತ್ತರಗಳನ್ನು ನೋಡಿ ಕಲೆಕ್ಟರ್ ಆಶುತೋಷ್ ಪಡ್ನೆಕರ್ ಖುಷಿಯಾಗಿದ್ರು. ಅಪ್ಲಿಕೇಷನ್‍ಗಳನ್ನು ಅಭಿವೃದ್ಧಿಪಡಿಸುವಂತೆ ಇಮ್ರಾನ್ ಅವರಿಗೆ ಸೂಚಿಸಿದ್ರು. ಆದ್ರೆ ಆ್ಯಪ್ ಅಂದ್ರೇನೂ ಅನ್ನೋದೇ ಇಮ್ರಾನ್ ಖಾನ್‍ಗೆ ಗೊತ್ತಿರಲಿಲ್ಲ, ಅವರ ಬಳಿ ಇದ್ದಿದ್ದು ಬೇಸಿಕ್ ಹ್ಯಾಂಡ್‍ಸೆಟ್. ಆಗ ಕಲೆಕ್ಟರ್ ಆಶುತೋಷ್ ಅವರೇ ತಮ್ಮ ಬಳಿಯಿದ್ದ ಸ್ಮಾರ್ಟ್‍ಫೋನನ್ನು ಇಮ್ರಾನ್ ಅವರಿಗೆ ತೋರಿಸಿದ್ರು. ಅಗೋಚರವಾಗಿದ್ದ ಅವರ ಜನಪ್ರಿಯತೆಯ ಪಯಣ ಆರಂಭವಾಗಿದ್ದು ಹೀಗೆ.

ಪುಸ್ತಕಗಳನ್ನು ಓದಿ, ಆನ್‍ಲೈನ್‍ನಲ್ಲಿ ಹುಡುಕಿ, ಸಹೋದರನ ಕಂಪ್ಯೂಟರ್ ಸೈನ್ಸ್ ಬುಕ್‍ಗಳನ್ನೆಲ್ಲ ತಡಕಾಡಿ ಇಮ್ರಾನ್ ಅಪ್ಲಿಕೇಷನ್ ಅಭಿವೃದ್ಧಿಪಡಿಸುವುದು ಹೇಗೆ ಅನ್ನೋದನ್ನು ಕಲಿತ್ರು. 2012ರಲ್ಲಿ NCERTಗಾಗಿ ಸೈನ್ಸ್ ಆ್ಯಪ್ ಒಂದನ್ನ ಅಭಿವೃದ್ಧಿಪಡಿಸಿದ್ರು. ಅಂದಿನಿಂದ ಇಂದಿನವರೆಗೂ ಇಮ್ರಾನ್ ಹಿಂತಿರುಗಿ ನೋಡಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಭೂಗೋಳಶಾಸ್ತ್ರ, ವಿಜ್ಞಾನ, ಗಣಿತ, ಇತಿಹಾಸ ವಿಷಯಗಳಿಗೆ ಸಂಬಂಧಿಸಿದ ಆ್ಯಪ್‍ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಬ್ಯರ್ಥಿಗಳಿಗಾಗಿಯೂ ಆ್ಯಪ್ ತಯಾರಿಸಿದ್ದಾರೆ. ಈ ವರ್ಷ ಆ್ಯಪ್‍ಗಳನ್ನು ಸಚಿವಾಲಯದಲ್ಲಿ ಪ್ರದರ್ಶಿಸಲು ಮಾನವ ಸಂಪನ್ಮೂಲ ಸಚಿವೆ ಸೃತಿ ಇರಾನಿ, ಇಮ್ರಾನ್ ಖಾನ್ ಅವರನ್ನು ಆಹ್ವಾನಿಸಿದ್ರು. ದೇಶಕ್ಕಾಗಿ ಅವರು ತಾವು ತಯಾರಿಸಿದ ಎಲ್ಲ ಆ್ಯಪ್‍ಗಳನ್ನು ಉಚಿತವಾಗಿ ದಾನ ಮಾಡಿದ್ದಾರೆ. ಮೋದಿ ಅವರ ಡಿಜಿಟಲ್ ಇಂಡಿಯಾ ಕನಸನ್ನು ನನಸಾಗಿಸುವ ಮೊದಲ ಹೆಜ್ಜೆ ಇದು ಅಂದ್ರೂ ತಪ್ಪೇನಿಲ್ಲ.

ವಿಜ್ಞಾನಿಯಾಗಲು ಬಯಸಿದ್ದ ಶಿಕ್ಷಕ...

ಇಮ್ರಾನ್ ಅವರ ತಂದೆ ಒಬ್ಬ ಕೃಷಿಕ. ನಾಲ್ವರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣುಮಕ್ಕಳ ದೊಡ್ಡ ಕುಟುಂಬ ಅವರದ್ದು. ಚಿಕ್ಕಂದಿನಿಂದ್ಲೂ ಇಮ್ರಾನ್ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಜಾಣರಾಗಿದ್ರು. ಆದ್ರೆ ಅವರಿಗೆ ಅದರ ಮೌಲ್ಯ ತಿಳಿದಿರಲಿಲ್ಲ. ಎಲ್ರೂ ಆದಷ್ಟು ಬೇಗ ಸರ್ಕಾರಿ ನೌಕರಿ ಸೇರುವಂತೆ ಸಲಹೆ ಕೊಡ್ತಾ ಇದ್ರು. ಸರಿಸ್ಕಾ ಟೈಗರ್ ರಿಸರ್ವ್ ಫಾರೆಸ್ಟ್ ಸಮೀಪದಲ್ಲೇ ಇದ್ದ ಖರೇದಾ, ಸಲ್ಮಾನ್ ಅವರ ಹುಟ್ಟೂರು. ಶಾಲೆ ಮನೆಯಿಂದ 10 ಕಿಲೋ ಮೀಟರ್ ದೂರದಲ್ಲಿತ್ತು. ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇಮ್ರಾನ್‍ಗೆ ವಿಜ್ಞಾನಿ ಅಗಬೇಕೆಂಬ ಕನಸಿತ್ತು. ಆದ್ರೆ ಅವರಿಗೆ ಸೂಕ್ತ ಬೆಂಬಲ ಹಾಗೂ ಪ್ರೋತ್ಸಾಹ ಸಿಗಲೇ ಇಲ್ಲ. ನಮ್ಮ ದೇಶದಲ್ಲಿ ಸರ್ಕಾರಿ ಕೆಲಸ ಸಿಕ್ತು ಅಂದ್ರೆ ಲೈಫ್ ಸೆಟಲ್ ಆಯ್ತು ಅಂತಾನೇ ಲೆಕ್ಕ ಎನ್ನುತ್ತಾರೆ ಅವರು. ಶಿಕ್ಷಕ ವೃತ್ತಿ ಆರಂಭಿಸಿದ ಮೇಲೆ ಇಮ್ರಾನ್, ಇಂಗ್ಲಿಷ್ ಹಾಗೂ ಅರ್ಥಶಾಸ್ತ್ರದಲ್ಲಿ ಎಂ.ಎ ಮಾಡಿದ್ದಾರೆ.

ಇಮ್ರಾನ್ ಖಾನ್ ತಮ್ಮ ಮನೆಯ ಅಬ್ದುಲ್ ಕಲಾಮ್ ಅಂತಾ ಅವರ ಸಹೋದರ ಇದ್ರೀಸ್ ಹೆಮ್ಮೆಯಿಂದ ಹೇಳಿಕೊಳ್ತಾರೆ. ಸಹೋದರನ ಪ್ರೇರಣೆಯಿಂದ್ಲೇ ತಾವು ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದು ಎನ್ನುತ್ತಾರೆ ಅವರು. ಇಮ್ರಾನ್ ಅವರ ಬದುಕು ನಮಗೆಲ್ಲಾ ಆದರ್ಶಮಯ, ಅವರಂತೆ ನಮ್ಮ ಕುಟುಂಬ ಹಾಗೂ ದೇಶದ ಹೆಸರನ್ನು ಜನಪ್ರಿಯಗೊಳಿಸುವ ಬಯಕೆ ನಮಗೂ ಇದೆ ಅನ್ನೋದು ಇದ್ರೀಸ್ ಅವರ ಹೆಮ್ಮೆಯ ನುಡಿ.

ಇಮ್ರಾನ್ ಅವರ ಆ್ಯಪ್ ಜಗತ್ತು...

ಹಿಂದಿಯಲ್ಲಿರುವ ಸಾಮಾನ್ಯ ವಿಜ್ಞಾನ, ಇಮ್ರಾನ್ ಅವರ ಅತ್ಯಂತ ಜನಪ್ರಿಯ ಆ್ಯಪ್. 500,000 ಮಂದಿ ಇದನ್ನು ಡೌನ್‍ಲೋಡ್ ಮಾಡಿದ್ದಾರೆ. ಲೈಪ್ ಸೈನ್ಸ್‍ಗೆ ಸಂಬಂಧಿಸಿದ 300 ಪ್ರಶ್ನೆ ಮತ್ತು ಉತ್ತರ ಇದರಲ್ಲಿದೆ. ಈ ಆ್ಯಪ್ ಕಾರ್ಯನಿರ್ವಹಿಸಲು ಇಂಟರ್ನೆಟ್ ಕೂಡ ಬೇಕಾಗಿಲ್ಲ. ಐಬಿಪಿಎಸ್, ಐಎಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ನಿಜಕ್ಕೂ ಇದು ವರದಾನವಾಗಿದೆ. ಇತಿಹಾಸ, ಹಿಂದಿ ವ್ಯಾಕರಣ, ಭೂಗೋಳ, ಇಂಡಿಯನ್ ಪೊಲಿಟಿಕಲ್ ಹೀಗೆ ಎಲ್ಲ ವಿಷಯಗಳಲ್ಲೂ ಇಮ್ರಾನ್ ಅವರು ಅಭಿವೃದ್ಧಿಪಡಿಸಿದ ಆ್ಯಪ್‍ಗಳನ್ನು 100,000 ಅಧಿಕ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಅದರ ಗುಣಮಟ್ಟ, ಕಾರ್ಯವೈಖರಿ ಮತ್ತು ಸರಳ ವಿನ್ಯಾಸವನ್ನು ಬಳಕೆದಾರರು ಕೊಂಡಾಡುತ್ತಿದ್ದಾರೆ. ಇದಲ್ಲದೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಸೌರಶಕ್ತಿ, ಪ್ರಬಂಧ, ಕಂಪ್ಯೂಟರ್ ಶಿಕ್ಷಣ, ಮಾನವನ ದೇಹ ವಿನ್ಯಾಸ, ಮೊಘಲ್ ಆಡಳಿತ ಸೇರಿದಂತೆ ಹಲವು ವಿಷಯಗಳ ಮೇಲೆ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ.

ಒಲವು ಹಾಗೂ ಅವಿರತ ಯತ್ನ...

ನಿಮಗೆ ಯಾವುದರ ಮೇಲೆ ಒಲವಿದ್ಯೋ ಪ್ರಾಮಾಣಿಕತೆಯಿಂದ ಆ ಕೆಲಸವನ್ನು ಮಾಡಿ. ತಕ್ಷಣಕ್ಕೆ ಫಲಿತಾಂಶ ಸಿಗದೇ ಇದ್ರೂ ಒಂದಲ್ಲ ಒಂದು ದಿನ ಅಮೂಲ್ಯವಾದದ್ದು ನಿಮಗೆ ಸಿಕ್ಕೇ ಸಿಗುತ್ತೆ ಅನ್ನೋದು ಇಮ್ರಾನ್ ಅವರ ಅನುಭವದ ನುಡಿ.

ಲೇಖಕರು: ದೀಪ್ತಿ ನಾಯರ್​​
ಅನುವಾದಕರು: ಭಾರತಿ ಭಟ್​​​

Related Stories