"ಬೆಂಗಳೂರು"ನ್ನ ಅಂದಗಾಣಿಸಿದವರು..!

ಪಿ.ಅಭಿನಾಷ್​​

0

ಬೆಂಗಳೂರಿನ ಫ್ಲೈಓವರ್ ಕಂಬಗಳು ಬಣ್ಣಗಟ್ಟಿವೆ. ಮೆಟ್ರೋ ಪಿಲ್ಲರ್‍ಗಳಲ್ಲಿ ಚಿತ್ತಾರಗಳು ಅರಳಿವೆ. ಕಲರ್‍ಫುಲ್ ಪೈಂಟ್ಸ್ ಮಾತ್ರವಲ್ಲ ಪ್ರತಿಯೊಂದು ಕಂಬವೂ ಈಗ ಒಂದೊಂದು ಕಥೆಯನ್ನ ಸಾರಿ ಹೇಳ್ತಾ ಇವೆ. ಅದೆಷ್ಟೋ ಕಸ ಹಾಕುವ ಜಾಗಗಳಲ್ಲಿ, ಅಚ್ಚರಿಯೆಂಬಂತ ಬದಲಾವಣೆ ಆಗಿದೆ. ರಾತ್ರಿಯ ಲೈಟ್ ನಲ್ಲಿ ಕಂಬಗಳ ಮೇಲಿರುವ ಆಕೃತಿಗಳು ಎದ್ದುಬಂದಂತಿವೆ. ಹರಿದ ಚಪ್ಪಲಿಗಳು, ಎಸೆದ ಕಸಪೊರಕೆಗಳು, ಸೇದಿ ಬಿಸಾಡಿದ ಸಿಗರೆಟ್ ತುಂಡುಗಳು, ಕಸದಿಂದ ರಸ ಎನ್ನುವಂತೆ ವೇಸ್ಟ್ ಆಗಿದ್ದೂ ಇಲ್ಲಿ ಉಪಯೋಗಕ್ಕೆ ಬಂದಿದೆ. ಹೀಗೆ ಬೆಂಗಳೂರು ನಗರವನ್ನ ಅಂದಗಾಣಿಸುತ್ತಿರುವುದು 'ಬೆಂಗಳೂರು ರೈಸಿಂಗ್ ತಂಡ'

ಹೌದು, ದೇಶಾದ್ಯಂತ ಹೆಸರುವಾಸಿಯಾಗಿರುವ 'ಅಗ್ಲಿ ಇಂಡಿಯನ್' ನ ಒಂದು ಭಾಗವೇ ಈ ಬೆಂಗಳೂರು ರೈಸಿಂಗ್. ಹಣಕ್ಕಾಗಿ ಈ ತಂಡದ ಸದಸ್ಯರು ಹಪಹಪಿಸುವುದಿಲ್ಲ. ತಮ್ಮ ಹೆಸರನ್ನ ಹೇಳಲು ಇಚ್ಚಿಸುವುದಿಲ್ಲ. ನಾವು ಫೇಮಸ್ ಆಗಬೇಕು ಅನ್ನೋ ಉದ್ದೇಶವಂತೂ ಇಲ್ಲವೇ ಇಲ್ಲ. ಅವರ ಉದ್ದೇಶ ಒಂದೇ ಬೆಂಗಳೂರನ್ನ ಅಂದಗಾಣಿಸುವುದು..!

ಭಿತ್ತಿಪತ್ರಗಳಿಂದ ಮುಕ್ತಿ

ನಗರದ ಅಂದಗೆಡಿಸುವ ಭಿತ್ತಿ ಪತ್ರಗಳಿಗೆ ಮುಕ್ತಿ ಹಾಡಲಾಗಿದೆ. ಎಲ್ಲೆಂದರಲ್ಲಿ ಅಂಟಿಸಲಾಗ್ತಿದ್ದ ಸಿನಿಮಾ ಪೋಸ್ಟರ್‍ಗಳಿಗೂ ಕೂಡ ಬ್ರೇಕ್ ಬಿದ್ದಿದೆ. ಕೊಳೆಗಟ್ಟಿದ ಕಂಬಗಳನ್ನ ತಿಕ್ಕಿತೊಳೆದು, ಬಣ್ಣ ಬಳಿಯಲಾಗುತ್ತಿದೆ. ಒಂದೊಂದು ಕಂಬಕ್ಕೆ ಒಂದೊಂದು ಡಿಸೈನ್, ಅದು ಹೂವುಗಳಾಗಿರಬಹುದು, ಬಣ್ಣಬಣ್ಣದ ಸೊನ್ನೆಗಳಾಗಿರಬಹುದು, ತ್ರಿಕೋನಾಕೃತಿಗಳು, ಮಿಶ್ರಬಣ್ಣಗಳಲ್ಲಿ ರೂಪುಗೊಂಡ ಮತ್ತೊಂದು ಚಿತ್ರ ಹೀಗೆ, ಒಟ್ಟಿನಲ್ಲಿ ನೋಡೋಕೆ ಚೆಂದವಾಗಿ ಕಾಣುವ ಬಣ್ಣಗಳು ನೋಡುವ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗ್ತಾ ಇದೆ.

ಕಲರ್‍ಫುಲ್ ಕಂಬಗಳು

ಬಿಬಿಎಂಪಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಇವರು ನಗರದ ಒಂದೊಂದೇ ಮೇಲ್ಸೇತುವೆಗಳ ಕಂಬಗಳಲ್ಲಿ ಚಿತ್ತಾರ ಬಿಡಿಸ್ತಾ ಇದ್ದಾರೆ. ರಿಚ್‍ಮಂಡ್ ಸರ್ಕಲ್ ಫ್ಲೈಓವರ್, ಡೈರಿ ಸರ್ಕಲ್ ಫ್ಲೈ ಓವರ್, ಕೆ.ಆರ್.ಪುರಂ ಫ್ಲೈ ಓವರ್, ದೇವರಬೀಸನಹಳ್ಳಿ ಮೇಲ್ಸೇತುವೆ. ಔಟರ್ ರಿಂಗ್ ರೋಡ್, ಹೆಚ್ ಎಸ್ ಆರ್ ಲೇಔಟ್ ಮೇಲ್ಸೇತುವೆ ಈಗಾಗ್ಲೇ ಕಲರ್‍ಫುಲ್ ಆಗಿವೆ. ಮೆಟ್ರೋ ನಿಗಮವೂ ಇವರ ಆಸಕ್ತಿಗೆ ಮನಸೋತು ಕಂಬಗಳನ್ನ ಬಿಟ್ಟುಕೊಟ್ಟಿದೆ. ಕೇವಲ ಮೇಲ್ಸೇತುವೆ ಮೆಟ್ರೋ ಕಂಬಗಳು ಮಾತ್ರವಲ್ಲ, ಅಲ್ಲಲ್ಲಿ ಕಸ ತುಂಬಿ ನಗರದ ಅಂದಗೆಡಿಸುತ್ತಿದ್ದ ಜಾಗಗಳೂ ಶುಚಿತ್ವ ಪಡೆದುಕೊಂಡಿವೆ . ಮಿನಿ ಡಂಪಿಂಗ್ ಯಾರ್ಡ್ ಅನಿಸಿಕೊಂಡು ಪಾದಾಚಾರಿಗಳಿಗೆ ನರಕವಾಗಿದ್ದ ಹೆಚ್‍ಆರ್‍ಬಿಆರ್ ಲೇಔಟ್‍ನ ಫಸ್ಟ್ ಬ್ಲಾಕ್ ಕಾಂಪೌಂಡ್ ವಾಹ್ ಎನ್ನುವಂತಾಗಿದೆ. ಕಸದ ಕಿರಿಕಿರಿಯಿಂದ ಬೇಸತ್ತಿದ್ದ ಇಂದಿರಾನಗರದ 12ನೇ ಮುಖ್ಯ ರಸ್ತೆಯೂ ಈಗ ಜಗಮಗಿಸ್ತಾ ಇದೆ. ಹೀಗೆ ನಗರದಾದ್ಯಂತ ಇರುವ ಮೇಲ್ಸೇತುವೆ ಕಂಬಗಳು, ಮಿನಿ ಡಂಪಿಂಗ್ ಯಾರ್ಡ್‍ಗಳು ಅಚ್ಚರಿ ಮೂಡಿಸುವಂತೆ ಬದಲಾಗಿವೆ.

ಸಾರ್ವಜನಿಕರ ಸಪೋರ್ಟ್

ಬಿಬಿಎಂಪಿಯಿಂದ ಪೈಂಟಿಂಗ್ ಮಾಡಲು ಪರ್ಮಿಶನ್ ಪಡೆಯಲಾಗಿದೆ. ಹಾಗಂತ ಬಿಬಿಎಂಪಿ ಇವ್ರಿಗೆ ಹಣ ನೀಡಲ್ಲ. ಬದಲಾಗಿ ತಮ್ಮ ಸ್ವಇಚ್ಚೆಯಿಂದ ಹಣವನ್ನೂ ಸಂಗ್ರಹಿಸುತ್ತಾರೆ. ಅಂದಿಗೆ ಬೇಕಾಗಿರುವ ಪೈಂಟ್‍ಗೆ ಅಗತ್ಯವಿರುವಷ್ಟು ಹಣವನ್ನ ಅಂದು ಸೇರುವವರೆ ನೀಡ್ತಾರೆ. ಬೆಂಗಳೂರು ರೈಸಿಂಗ್ ಅನ್ನೋದು ಯಾರ ನಾಯಕತ್ವೂ ಇಲ್ಲದ, ಖಾಯಂ ಸದಸ್ಯರೂ ಇಲ್ಲದ ಅನಾಮಿಕ ತಂಡ ಇಂತಾ ದಿನ ಇಂತಾ ಒಂದು ಈವೆಂಟ್ ನಡೆಯತ್ತೆ. ಆಸಕ್ತರು ಭಾಗವಹಸಿಬಹುದು ಅಂತಾ, ಫೇಸ್‍ಬುಕ್ ಪೇಜ್‍ನಲ್ಲಿ ಅಥವಾ ವಾಟ್ಸಾಪ್‍ನಲ್ಲಿ ಒಂದು ಕರೆ ಕೊಟ್ರೆ ಸಾಕು ಕನಿಷ್ಟ ಐವತ್ತು ಮಂದಿ ಅಲ್ಲಿ ಹಾಜರಿರ್ತಾರೆ. ಬೆಂಗಳೂರು ರೈಸಿಂಗ್ ಎಷ್ಟರ ಮಟ್ಟಿಗೆ ಸಾರ್ವಜನಿಕರ ಮೇಲೆ ಪರಿಣಾಮ ಬೀರಿದೆ ಅಂದ್ರೆ, ಇವರು ಹೋಗುವ ಕಡೆಗಳಲ್ಲೆಲ್ಲಾ ಸ್ಥಳೀಯರು ಇವ್ರಿಗೆ ಸಾಥ್ ನೀಡ್ತಿದ್ದಾರೆ. ಮತ್ಯಾರೋ ಬಂದು, ನಮ್ಮ ಏರಿಯಾವನ್ನ ಇಷ್ಟು ಕ್ಲೀನ್ ಮಾಡ್ತಿರುವಾಗ ನಾವ್ಯಾಕೆ ಅವರೊಂದಿಗೆ ಕೈಜೋಡಿಸಬಾರದು ಅನ್ನೋ ಮನೋಭಾವ ಸ್ಥಳೀಯರಲ್ಲಿ ಮೂಡುತ್ತಿದೆ. ಹೀಗಾಗಿ, ಬೆಂಗಳೂರು ರೈಸಿಂಗ್ ಕೆಲಸ ಆರಂಭಿಸಿದ್ರೆ ಅಲ್ಲಿ ಸ್ಥಳೀಯರು ಸೇರಿ ನೂರಕ್ಕೂ ಹೆಚ್ಚು ಮಂದಿ ಒಟ್ಟಾಗಿ ಕೆಲಸ ಮಾಡ್ತಾರೆ. ಇದ್ರಿಂದ ಕೆಲಸವೂ ಬೇಗ ಆಗತ್ತೆ. ನಗರವೂ ಚೆಂದ ಕಾಣತ್ತೆ.

ಸುಂದರವಾಗಿರಬೇಕು ನಮ್ಮ ಊರು

‘ನಮ್ಮ ನಗರವನ್ನ ನಾವು ಸುಂದರವಾಗಿಡಲು ಪ್ರಯತ್ನಿಸಬೇಕು ಅದಕ್ಕಾಗಿ ನಮ್ಮ ಏರಿಯಾದಲ್ಲಿ ಮೊದಲು ಕೆಲಸ ಮಾಡಬೇಕು, ಇನ್ನೊಬ್ಬರ ನೆರವನ್ನ ಅಪೇಕ್ಷಿಸದೆ, ನಾವು ಮೊದಲು ಕೆಲಸ ಆರಂಭಿಸಿದ್ರೆ ಆ ನಂತ್ರ ಎಲ್ಲರೂ ನಮ್ಮ ಜೊತೆ ಕೈಜೋಡಿಸುತ್ತಾರೆ, ಈಗಾಗ್ಲೇ ನಾವು ಇಮದಿರಾನಗರದ ಹಲವು ಭಾಗಗಳಲ್ಲಿ ಕೆಲಸ ಮಾಡಿದ್ದೇವೆ, ನಮ್ಮ ಪ್ರದೇಶವನ್ನ ಸ್ವಚ್ಛವಾಗಿ ನೋಡೋಕೆ ನಮಗೂ ಖುಷಿಯಾಗತ್ತೆ’ ಅಂತಾರೆ ಹೆಸರೇಳಲು ಇಚ್ಚಿಸದ ಬೆಂಗಳೂರು ರೈಸರ್.

ಅಗ್ಲೀ ಇಂಡಿಯನ್ ಎನ್ನುವ ಅನಾಮಿಕ ತಂಡದಿಂದ ಸ್ಪೂರ್ತಿಪಡೆದು ಬೆಂಗಳೂರು ರೈಸಿಂಗ್ ಹುಟ್ಟಿಕೊಂಡಿದೆ. ಕಳೆದ ಐದು ವರ್ಷಗಳ ಹಿಂದೆ ಆರಂಭವಾದ ಅಗ್ಲಿ ಇಂಡಿಯನ್ ದೇಶದಾದ್ಯಂತ ಹೆಸರು ಪಡೆದುಕೊಂಡಿದ್ರೆ, ಕಳೆದ ಒಂದೂವರೆ ವರ್ಷಗಳಿಂದಷ್ಟೇ ಕೆಲಸ ಮಾಡ್ತಿರುವ ಬೆಂಗಳೂರು ರೈಸಿಂಗ್ ಹೆಚ್ಚಾಗಿ ಯುವಜನತೆಯನ್ನ ತನ್ನತ್ತ ಸೆಳೆಯುತ್ತಿದೆ.