ಹೊಟೇಲ್​ ಉದ್ಯಮದಲ್ಲಿ ಕ್ರಾಂತಿ- ತಾಜ್​​ಗ್ರೂಪ್​​ ಮಾಜಿ ಉದ್ಯಮಿಯ ಕೀಸ್ ಗ್ರೂಪ್ ಆಫ್ ಹೋಟೆಲ್ಸ್ ..!

ಟೀಮ್​​ ವೈ.ಎಸ್​​​.

0

ಉದ್ಯಮಶೀಲತೆ ಎಂದರೆ ಸವಾಲುಗಳತ್ತ ಮುನ್ನುಗ್ಗುವುದು ಎಂದರ್ಥ. ನಾವು ಈವರೆಗೆ ಕೇಳಿರುವ ಹಾಗೂ ಓದಿರುವ ಎಲ್ಲಾ ಉದ್ಯಮಗಳ ಯಶೋಗಾಥೆಯೂ ಇಂಥದ್ದೇ ಸವಾಲುಗಳನ್ನು ಎದುರಿಸಿ ಬೆಳೆದ ಕಥೆ. ಇತ್ತೀಚಿನ ಬಹುತೇಕ ಔದ್ಯಮಿಕ ಕ್ಷೇತ್ರಗಳಲ್ಲಿ ಅಂತರ್ಜಾಲ ಮಹತ್ವದ ಪಾತ್ರವಹಿಸುತ್ತಿದೆ. ಏಕೆಂದರೆ ಅಂತರ್ಜಾಲದ ಮುಖೇನ ವ್ಯಾವಹಾರಿಕ ಕ್ಷೇತ್ರದಲ್ಲಿ ಪರಿಚಯಿಸಕೊಳ್ಳುವುದು ಅತ್ಯಂತ ಕಡಿಮೆಯ ಹಾಗೂ ಪರಿಣಾಮಕಾರಿ ವಿಧಾನ.

ಅಂಥದ್ದೇ ಒಂದು ಉದ್ಯಮಿಯ ಕಥೆ ಇದು. ಸಂಜಯ್ ಸೇಥಿ, ಬರ್ಗ್‌ಗ್ರ್ಯೂನ್ ಹೋಲ್ಡಿಂಗ್ಸ್​​​ನ ಕೀಸ್ ಹೋಟೆಲ್‌ನ ಕಾರ್ಯಕಾರಿ ನಿರ್ದೇಶಕ ಹಾಗೂ ಸಿಇಓ. ಭಾರತದ ಬೆಳವಣಿಗೆಯಲ್ಲಿರುವ ಹೋಟೆಲ್ ಚೈನ್ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬ್ರಾಂಡ್ ಈ ಬರ್ಗ್‌ಗ್ರ್ಯೂನ್ ಹೋಟೆಲ್. ಈ ಹೋಟೆಲ್‌ನ ಇಲ್ಲಿಯವರೆಗಿನ ಕಾರ್ಯಾಚರಣೆಯನ್ನು ಗಮನಿಸುವುದಾದರೆ, ಭಾರತದಾದ್ಯಂತ ಸುಮಾರು 35 ಅಭಿವೃದ್ಧಿಶೀಲ ಆಸ್ತಿಗಳನ್ನು ಇದು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಈ ಕೀಸ್ ಹೋಟೆಲ್‌ನ ಪೋರ್ಟ್‌ಫೋಲಿಯೋದಲ್ಲಿ 6 ಸ್ವಂತ ಕಟ್ಟಡಗಳು, 8 ನಿರ್ವಹಣೆಯಲ್ಲಿರುವ ಆಸ್ತಿ ಹಾಗೂ 14 ಕಾರ್ಯಾಚರಣೆಯಲ್ಲಿರುವ ಕಟ್ಟಡಗಳಿವೆ. ಈ ಎಲ್ಲಾ ಹೋಟೆಲ್ ಕಟ್ಟಡಗಳಲ್ಲಿ ಸುಮಾರು 1300ಕ್ಕೂ ಅಧಿಕ ರೂಂಗಳಿವೆ. ಮುಂಬರುವ ದಿನಗಳಲ್ಲಿ ಇನ್ನೂ 21 ಕಟ್ಟಡಗಳನ್ನು ಪೂರ್ಣಗೊಳಿಸುವ ಯೋಜನೆ ಇದರದ್ದಾಗಿದೆ. ಔರಂಗಾಬಾದ್, ಬೆಂಗಳೂರು, ಚೆನ್ನೈ, ಲೂಧಿಯಾನ, ಪೂನಾದಲ್ಲಿ ಹಾಗೂ ತಿರುವನಂತಪುರಂನಲ್ಲಿ ಈ ಕೀಸ್ ಹೋಟೆಲ್‌ಗಳು ವ್ಯವಹಾರ ನಡೆಸುತ್ತಿದೆ. ಜೊತೆಗೆ ಮಹಾಬಲೇಶ್ವರ, ಗೋವಾ ಹಾಗೂ ದೆಹಲಿಯಲ್ಲಿ ಅತ್ಯುನ್ನತ ರೆಸಾರ್ಟ್‌ಗಳು ಹಾಗೂ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ನಿರಂತರ ಸರ್ವೀಸ್​​​​ ಲಭ್ಯವಿರುವ ಅಪಾರ್ಟ್‌ಮೆಂಟ್ ಸಹ ಹೊಂದಿದೆ.

ಬ್ರಾಂಡ್ ರೂಪಿಸಿದ ಹಿನ್ನೆಲೆ

ಸಂಜಯ್ ಈ ಉದ್ಯಮವನ್ನು ಆರಂಭಿಸುವ ಮುನ್ನ ಹಲವು ವರ್ಷಗಳ ಕಾಲ ತಾಜ್ ಗ್ರೂಪ್‌ನ ಹೋಟೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದರು. ತಮ್ಮ ಸ್ವಂತ ಸಂಸ್ಥೆಯನ್ನು ಆರಂಭಿಸುವ ಕೆಲವು ಕಾಲ ಮುನ್ನವಷ್ಟೇ ಅವರು ಹೈದ್ರಾಬಾದ್​​ನ ತಾಜ್‌ ಗ್ರೂಪ್ ಹೋಟೆಲ್‌ನಲ್ಲಿ ಕ್ಷೇತ್ರೀಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು. ಫಲಕ್ನುಮಾ ಪ್ಯಾಲೇಸ್‌ನ ಐಶಾರಾಮಿ ಹೋಟೆಲ್‌ನಲ್ಲಿ ಡೆವಲಪ್ ಮೆಂಟ್ ಉಸ್ತುವಾರಿಯನ್ನು ಹೊತ್ತಿದ್ದರು. ಫಲಕ್ನುಮಾ ಪ್ಯಾಲೇಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಅವರು ಭಾರತದಾದ್ಯಂತ ಹೋಟೆಲ್ ಸರಣಿ ಆರಂಭಿಸಲು ಯೋಜನೆ ಹಾಕಿಕೊಂಡಿದ್ದ ಬರ್ಗ್‌ಗ್ರ್ಯೂನ್ ಹೋಲ್ಡಿಂಗ್ಸ್​​​ನವರ ಸಂಪರ್ಕಕ್ಕೆ ಬಂದರು. ಈ ಭೇಟಿ ಸಂಜಯ್ ಮನಸ್ಸಿನಲ್ಲಿದ್ದ ಉದ್ಯಮಿಯಾಗುವ ಆಸೆಗೆ ಪೂರಕವಾಯಿತು. ಹೊಸತಾಗಿ ಹೋಟೆಲ್ ಒಂದನ್ನು ಆರಂಭಿಸುವುದು ಬಂಡವಾಳ ಹೂಡಿಕೆ ವಿಚಾರದಲ್ಲಿ ಸಾಕಷ್ಟು ಸವಾಲಿನ ನಿರ್ಧಾರ. ಕೈಯಲ್ಲಿ ಉದ್ಯಮಕ್ಕೆ ಬೇಕಾದಷ್ಟು ಬಂಡವಾಳವಿಲ್ಲದಿದ್ದರೆ ಅದೆಷ್ಟೇ ಉತ್ತಮ ಯೋಜನೆಯಾಗಿದ್ದರೂ ಕಾರ್ಯಗತಗೊಳಿಸಲು ಅಸಾಧ್ಯ. ಆದರೂ ನನ್ನ ಪ್ರಯತ್ನ ದೃಢವಾಗಿತ್ತು. ಹಾಗಾಗಿ ಬರ್ಗ್‌ಗ್ರ್ಯೂನ್ ಹೋಲ್ಡಿಂಗ್ಸ್ ಸಂಸ್ಥೆಯ ಮನವೊಲಿಸಿ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಯಿತು. ಇದಕ್ಕಾಗಿ ನನ್ನ ದಶಕಗಳ ಅನುಭವ ಹಾಗೂ ಕಲಿಕೆಯನ್ನು ವಿನಿಯೋಗಿಸಬೇಕಾಯಿತು ಎಂದಿದ್ದಾರೆ ಸಂಜಯ್.

ಸಂಜಯ್​​ ಮಾಡಿದ ಮೊದಲ ಕೆಲಸವೆಂದರೆ ತಮ್ಮೊಂದಿಗೆ ಪರಿಣಿತರನ್ನು ಸೇರಿಸಿಕೊಂಡಿದ್ದು. ಬಹುತೇಕ ಉದ್ಯಮಿಗಳು ಹಾಗೂ ವ್ಯವಹಾರಸ್ಥರನ್ನು ಸಂಪರ್ಕಿಸಿ ಸೂಕ್ತ ಯೋಜನೆಯ ಪೂರ್ವಭಾವಿ ತಯಾರಿಯೊಂದಿಗೆ ಸಂಜಯ್ ಉದ್ಯಮ ರಣಾಂಗಣಕ್ಕೆ ಕಾಲಿಟ್ಟಿದ್ದರು. ಪಕ್ಕಾ ಪರಿಣಿತರ ತಂಡ ಹಾಗೂ ಅತ್ಯುತ್ತಮ ಕಾರ್ಯವಿಧಾನ ಇವೆರಡೇ ಅವರ ವ್ಯವಹಾರದ ಬೆಳವಣಿಗೆಯ ಮಾಪನವಾಗಿತ್ತು. ಸರಿಯಾದ ಸ್ಥಳ, ಸಮರ್ಪಕ ಸೌಕರ್ಯ, ಸೂಕ್ತ ಉತ್ಪನ್ನ ಇದು ಸಂಜಯ್ ಹಾಕಿಕೊಂಡ ಸಮೀಕರಣ. ಹೀಗಾಗಿ ಔರಂಗಾಬಾದ್ ಅಥವಾ ತಿರುವನಂತಪುರಂನಂತಹ ಸಾಂಪ್ರದಾಯಿಕ ಪಟ್ಟಣಗಳಲ್ಲೂ ಅವರ ಕೀಸ್ ಹೋಟೆಲ್‌ಗಳು ತಲೆಎತ್ತಿದವು.

ಪ್ರತಿಯೊಂದು ಹೊಸ ಉತ್ಪನ್ನವನ್ನು ವಿನ್ಯಾಸಗೊಳಿಸಿ ಬಿಡುಗಡೆಗೊಳಿಸುವ ಮುನ್ನ ಅವರು ತಮ್ಮ ಗ್ರಾಹಕರೊಂದಿಗೆ ಸಂವಾದಿಸುತ್ತಾರೆ. ಹಲವು ಸುತ್ತಿನ ಚರ್ಚೆಗಳು, ವಿವಿಧ ಭಾಗಗಳಲ್ಲಿ ಗ್ರಾಹಕರನ್ನು ಮಾತನಾಡಿಸುವುದು, ಅದರಲ್ಲೂ ಮಹಿಳೆಯರೊಂದಿಗೆ ಸಂವಾದಿಸಿ ಅಭಿಪ್ರಾಯ ಪಡೆದುಕೊಳ್ಳುವುದು ಇಂತಹ ಅಗತ್ಯ ಇನ್‌ಪುಟ್‌ಗಳನ್ನು ಪಡೆದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ಇದಕ್ಕಾಗಿಯೇ 3 ನಗರಗಳಲ್ಲಿ 5 ಕ್ರಿಯಾಶೀಲ ಗ್ರೂಪ್‌ಗಳಿವೆ. ಗ್ರಾಹಕರ ಪ್ರತಿಕ್ರಿಯೆ ಪಡೆದುಕೊಂಡು ತನ್ಮೂಲಕ ಹೊಸ ಉತ್ಪನ್ನ ಅಭಿವೃದ್ಧಿ ಅವರ ಇಲ್ಲಿಯವರೆಗಿನ ಯಶಸ್ಸಿಗೆ ಅತೀ ಮುಖ್ಯ ಕಾರಣ. ಸಂಜಯ್ ಹೇಳುವಂತೆ ಗ್ರಾಹಕರ ಅಭಿರುಚಿ ಹಾಗೂ ಅಭಿಮತ ಎರಡೂ ಪ್ರತಿಯೊಂದು ಉದ್ಯಮಕ್ಕೂ ಅತ್ಯಗತ್ಯ. ಇವುಗಳ ಬಗ್ಗೆ ಸೂಕ್ತ ಮಾಹಿತಿ ಇದ್ದರೆ ಗ್ರಾಹಕರ ಬೇಡಿಕೆಗಳನ್ನು ಅರಿತು ಒದಗಿಸಲು ಸಾಧ್ಯ.

ತಮ್ಮ ಸ್ವಂತ ನಿರ್ವಹಣೆಯ ಕಟ್ಟಡಗಳ ಜೊತೆ ಸಂಜಯ್, ವ್ಯಾವಹಾರಿಕ ಒಪ್ಪಂದಗಳಡಿ ನಿರ್ವಹಿಸುತ್ತಿರುವ ಕೀಸ್ ಹೋಟೆಲ್‌ಗಳನ್ನೂ ಅಷ್ಟೇ ಆಸ್ಥೆಯಿಂದ ಬೆಳಸುತ್ತಿದ್ದಾರೆ. 2009ರಲ್ಲಿ ಅಸೆಟ್ ಲೈಟ್ ಮಾಡೆಲ್ ಅನ್ನುವ ಹೊಸ ಮಾದರಿಯನ್ನು ಅವರು ಪರಿಚಯಿಸಿದರು. 2011ರಲ್ಲಿ ತಮ್ಮ ಕೀಸ್ ಹೋಟೆಲ್ ಜೊತೆಗೆ ಕೀಸ್ ರೆಸಾರ್ಟ್ ಯೋಜನೆ ಜಾರಿಗೆ ತಂದರು. ಕಳೆದ ತಿಂಗಳು ಕೀಸ್​​​ ಕ್ಲಬ್ ಅನ್ನುವ ಮತ್ತೊಂದು ವಿಭಿನ್ನ ಯೋಜನೆಯ ಘೋಷಣೆ ಮಾಡಿದ್ದಾರೆ. ವ್ಯಾವಹಾರಿಕ ಕಾರಣಗಳಿಗೆ ಊರೂರು ಸುತ್ತುವ ಬಿಸಿನೆಸ್‌ಮೆನ್‌ಗಳಿಗೆ ಪಂಚತಾರಾ ಸೌಲಭ್ಯ ಹೊಂದಿರುವ ಕೀಸ್ ಕ್ಲಬ್‌ಗಳನ್ನು ಮುಖ್ಯ ಪಟ್ಟಣಗಳಲ್ಲಿ ಸ್ಥಾಪಿಸುವ ಯೋಜನೆ ಅವರಲ್ಲಿದೆ. ಕೀಸ್‌ ಹೋಟೆಲ್‌ನಲ್ಲಿ ರೂಂ ಸೌಲಭ್ಯಗಳು ನಿಗದಿತವಾಗಿರುವ ಕಾರಣ, ಕೀಸ್ ಕ್ಲಬ್‌ನಲ್ಲಿ 24/7 ರೂಂ, ಎಲ್ಲಾ ಸಂದರ್ಭಗಳಲ್ಲೂ ಸಿಗುವ ಜಾಗತಿಕ ರೆಸ್ಟೋರೆಂಟ್ ಸೌಕರ್ಯ, ಬೇರೆ ಬೇರೆ ದೇಶಗಳ ಖಾದ್ಯ, ಬಾರ್ ಲಾಂಜ್, ಸಭಾಂಗಣ ಮುಂತಾದ ವ್ಯವಸ್ಥೆ ಇದೆ.

ಸಂಜಯ್ ಪರಿಚಯಿಸಿರುವ ಕೀಸ್ ಹೋಟೆಲ್, ಕೀಸ್ ರೆಸಾರ್ಟ್, ಕೀಸ್ ಅಪಾರ್ಟ್‌ಮೆಂಟ್ ಮತ್ತು ಕೀಸ್ ಕ್ಲಬ್‌ಗಳು ಇದೀಗ ಪ್ರತ್ಯೇಕ ಬ್ರಾಂಡ್ ಆಗಿ ಗುರುತಿಸಿಕೊಳ್ಳುತ್ತಿದೆ. ನಗರದ ಪ್ಯಾಶನ್, ಜೀವನಶೈಲಿ, ಅಂತಸ್ತು, ವ್ಯಾವಹಾರಿಕ ಗುಣಮಟ್ಟ ಹಾಗೂ ಅಂತರಾಷ್ಟ್ರೀಯತೆಯ ಸ್ಪರ್ಶದೊಂದಿಗೆ ಸಂಜಯ್ ಸೇಥಿಯವರ ಉದ್ಯಮ ಆಕರ್ಷಣೀಯವಾಗಿ ಅಭಿವೃದ್ಧಿ ಹೊಂದುತ್ತಿದೆ.

ಕೀಸ್​​ ಕೆಫೆ
ಕೀಸ್​​ ಕೆಫೆ

ವ್ಯಾವಹಾರಿಕ ಆಯಾಮ

ಸಂಜಯ್ ಅವರ ಕೀಸ್ ಹೋಟೆಲ್ ತಂಡದಲ್ಲಿ 75 ಸದಸ್ಯರಿದ್ದು, ದೇಶಾದ್ಯಂತ ಸುಮಾರು 13 ಸೇಲ್ಸ್ ಆಫೀಸ್‌ ಶಾಖೆಗಳಿವೆ. 2008-09 ಜಾಗತಿಕ ಏರಿಳಿತದ ಕಾರಣ ಅವರ ವ್ಯವಹಾರ ಸಾಕಷ್ಟು ಬಿಕ್ಕಟ್ಟು ಅನುಭವಿಸಿತ್ತು. ಆ ಸಂದರ್ಭದಲ್ಲಿ ಸಹ ಸಂಜಯ್ ತಮ್ಮ ಸ್ಟ್ರಾಟೆಜಿಕ್ ಆಲೋಚನೆಗಳು ಹಾಗೂ ವಿಶ್ವಾಸಾರ್ಹತೆಯ ಕಾರಣ ಮಾರುಕಟ್ಟೆಯ ನಂಬಿಕೆ ಹಾಗೂ ಷೇರುಗಳನ್ನು ಕಳೆದುಕೊಳ್ಳಲಿಲ್ಲ.

ಕೀಸ್ ಹೋಟೆಲ್‌ನ ಬಹುತೇಕ ಗ್ರಾಹಕರು ವ್ಯವಹಾರ ನಿಮಿತ್ತ ಸಂಚರಿಸುವ ಬಿಸಿನೆಸ್‌ಮೆನ್‌ಗಳಾಗಿರುತ್ತಾರೆ. ಸುಮಾರು ಶೇ.75ರಷ್ಟು ಆದಾಯ ಕಾರ್ಪೋರೇಟ್ ಟೈ-ಅಪ್‌ ಗಳಿಂದ ಬರುತ್ತಿದೆ. ಜೊತೆಗೆ ಸತತವಾಗಿ ಉತ್ತಮ ಸೇವಾ ಸೌಕರ್ಯದ ಕಾರಣ ಸಂಜಯ್‌ರ ಕೀಸ್ ಹೋಟೆಲ್ ಪ್ರಶಸ್ತಿ ಕೂಡ ಗಿಟ್ಟಿಸಿಕೊಂಡಿದೆ. 2012ರಲ್ಲಿ ತಿರುವನಂತಪುರಂನ ಕೀಸ್ ಹೋಟೆಲ್ ಭಾರತದ 10ನೆಯ ಟ್ರೆಂಡಿಯೆಸ್ಟ್ ಹೋಟೆಲ್‌ ಅನ್ನುವ ಶ್ಲಾಘನೆಯ ಜೊತೆ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಬರ್ಗ್‌ಗ್ರ್ಯೂನ್ ಹೋಲ್ಡಿಂಗ್ಸ್​​​ನಿಂದ ಸಂಜಯ್ ಸಂಸ್ಥೆ ಸುಮಾರು 62 ಮಿಲಿಯನ್ ಯುಎಸ್ ಡಾಲರ್ ಹೆಚ್ಚುವರಿ ಬಂಡವಾಳ ಪಡೆದುಕೊಂಡಿದ್ದು, 183 ಕೋಟಿಯಷ್ಟು ವಹಿವಾಟು ನಡೆಸುವ ಯೋಜನೆ ಹೊಂದಿದೆ. ಸಂಸ್ಥೆಯ 21 ಕೀ ಹೋಟೆಲ್ಸ್ ಅಭಿವೃದ್ಧಿಗೆ ಯೋಜಿಸಲಾಗಿದೆ.

ಭವಿಷ್ಯದ ಯೋಜನೆಗಳು

ಕೀಸ್ ಹೋಟೆಲ್ ತನ್ನ ಶಾಖೆಗಳನ್ನು ಕೊಚ್ಚಿ, ವಿಶಾಖಪಟ್ಟಣಂ, ಶಿರಡಿ, ಅಮೃತಸರ, ವೃಂದಾವನ ಹಾಗೂ ಹರಿದ್ವಾರಗಳಂತಹ ಪ್ರವಾಸೋದ್ಯಮ ಸ್ಥಳಗಳಲ್ಲೂ ವಿಸ್ತರಿಸುವ ಯೋಜನೆ ಹೊಂದಿದೆ. ಸಂಜಯ್‌ರ ಎಲ್ಲಾ ಆಸ್ತಿಗಳು ನಿರೀಕ್ಷೆಯಂತೆ ಕೆಲಸ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ನೂರು ಪ್ರತಿಶತ ಬೆಳವಣಿಗೆ ಸಾಧಿಸುವ ಮೂಲಕ ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು 170 ಕೋಟಿ ರೂ.ಗಳ ವಹಿವಾಟು ನಡೆಸುವ ಗುರಿಯನ್ನು ಸಂಜಯ್ ಹೊಂದಿದ್ದಾರೆ. ಈಗ ಅವರ ಸಂಸ್ಥೆ ಶೇ.72ರಷ್ಟು ಮಾರುಕಟ್ಟೆ ಷೇರು ಆಕ್ರಮಿಸಿಕೊಂಡಿದೆ.

ಸ್ವಂತ ಆಸ್ತಿ ಕಟ್ಟಡಗಳು, ಬ್ರಾಂಡ್ ಮೌಲ್ಯ, ಪ್ರಭಾವಿ ಪ್ರಾವೀಣ್ಯ ಹೊಂದಿದ ತಂಡ, ಸೂಕ್ತ ಯೋಜನೆಯೊಂದಿಗೆ ಸೇವೆ ಒದಗಿಸುತ್ತಿರುವುದು ಇವೇ ಮುಂತಾದ ನಿಖರತೆಗಳಿಂದ ಸಂಜಯ್‌ರ ಕೀಸ್ ಹೋಟೆಲ್ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿದೆ. ಜೊತೆಗೆ ತಂತ್ರಜ್ಞಾನದ ಸಹಾಯ, ಅತ್ಯುತ್ತಮ ಸೇವಾ ಸೌಕರ್ಯದ ಗುಣಮಟ್ಟ ಹೆಚ್ಚಿಸುವುದು, ಮಾನವಸಂಪನ್ಮೂಲಗಳ ಸಾಮರ್ಥ್ಯ ಮುಂತಾದ ಹೆಚ್ಚುವರಿ ಆದ್ಯತೆಯನ್ನೂ ಸಹ ಸಂಜಯ್ ನೀಡುತ್ತಿದ್ದಾರೆ. ಈ ಕೀಸ್ ಹೋಟೆಲ್‌ನ ಸೇವೆಗಳನ್ನು ಮೊಬೈಲ್ ಮಾದರಿಯಲ್ಲಿ ಅಥವಾ ಗ್ರಾಹಕರಿದ್ದಲ್ಲೇ ತಲುಪಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ.

ಈಗಾಗಲೇ ಭಾರತದಾದ್ಯಂತ ವಿಸ್ತರಣೆ ಹೊಂದಿರುವ ಕೀಸ್ ಹೋಟೆಲ್ ಸೇವೆಗಳ ಗುಣಮಟ್ಟ ಹಾಗೂ ಚಿಕಿತ್ಸೆ ಕುರಿತಾಗಿ ಕೆಲವು ದೇಶಗಳು ವಿಚಾರಣೆ ನಡೆಸಿವೆ. ಅವುಗಳಲ್ಲಿ ಮಾಲ್ಡೀವ್ಸ್, ಶ್ರೀಲಂಕಾ, ಆಫ್ರಿಕಾ ಹಾಗೂ ಬಾಂಗ್ಲಾದೇಶದ ಜೊತೆ ಮಧ್ಯಪ್ರಾಚ್ಯ ರಾಷ್ಟ್ರಗಳ ಹೋಟೆಲ್ ಉದ್ಯಮಿಗಳು ಕೀಸ್ ಹೋಟೆಲ್‌ನಿಂದ ಸೂಚನೆ , ಮಾರ್ಗದರ್ಶನ ಪಡೆಯುವ ದಾರಿಯಲ್ಲಿದೆ. ಬರ್ಗ್‌ಗ್ರ್ಯೂನ್ ಹೋಲ್ಡಿಂಗ್ಸ್‌ನ ಕೀಸ್ ಹೋಟೆಲ್ ಗ್ರೂಪ್‌ನಲ್ಲಿ ಈವರೆಗೆ ಸುಮಾರು 1770 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಭವಿಷ್ಯದ ವಿಸ್ತರಣಾ ಯೋಜನೆಯನ್ವಯ 2016ರ ವೇಳೆಗೆ ಉದ್ಯೋಗಿಗಳ ಸಂಖ್ಯೆ 4000 ದಾಟಬಹುದು ಎಂಬ ಅಂದಾಜಿದೆ.

ಉದ್ಯಮಿ ಸಂಜಯ್ ಸೇಥಿಯವರ ಎಲ್ಲಾ ಮಹತ್ವಕಾಂಕ್ಷಿ ಯೋಜನೆಗಳು ಸಮರ್ಪಕವಾಗಿ ಮುಂದುವರೆಯಲಿ ಅನ್ನೋದು ಎಲ್ಲರ ಹಾರೈಕೆ.