ಹೆತ್ತವರಿಂದ್ಲೇ ತಿರಸ್ಕೃತಳಾದ ಮಂಗಳಮುಖಿ – ಕೀಳರಿಮೆ ಮೆಟ್ಟಿ ನಿಂತು ಮುನ್ನಡೆದ ಸಾಧಕಿ  

ಟೀಮ್ ವೈ.ಎಸ್.ಕನ್ನಡ 

1

22 ವರ್ಷದ ತಾರಿಕಾ ಬಾನು ಒಬ್ಬ ಮಂಗಳಮುಖಿ. ತಮಿಳುನಾಡಿನಲ್ಲಿ 12ನೇ ತರಗತಿ ಪಾಸು ಮಾಡಿದ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ತಾರಿಕಾ ಪಾತ್ರಳಾಗಿದ್ದಾಳೆ. ಭಾರತದಲ್ಲಿ ಮಂಗಳಮುಖಿಯಾಗಿ ಹುಟ್ಟೋದೇ ಬಹುದೊಡ್ಡ ಶಾಪವಿದ್ದಂತೆ. ಸಮಾಜದಲ್ಲಿ ಮಂಗಳಮುಖಿಯರಿಗೆ ತಾರತಮ್ಯ ಮಾಡಲಾಗುತ್ತದೆ. ಅವರನ್ನು ಕೀಳಾಗಿ ನೋಡಲಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರು ಮಂಗಳಮುಖಿಯರ ಬಗೆಗಿದ್ದ ಅಪಾರ್ಥ ಭಾವನೆಯನ್ನು ಬದಲಾಯಿಸಿಕೊಂಡಿದ್ದಾರೆ. ಮಂಗಳಮುಖಿಯರು ಕೂಡ ತಮ್ಮಲ್ಲಿರುವ ಕೀಳರಿಮೆಯನ್ನು ಮೆಟ್ಟಿನಿಂತು ಸಾಧನೆಯ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಇದಕ್ಕೆ ತಾಜಾ ನಿದರ್ಶನ ತಾರಿಕಾ.

ತಾರಿಕಾ ಆ ಕುಟುಂಬದ ನಾಲ್ಕನೇ ಮಗುವಾಗಿ ಜನಿಸಿದ್ಲು. ತೂತುಕುಡಿ ಜಿಲ್ಲೆಯಲ್ಲಿ ಅವಳ ಮನೆಯಿದೆ. 18 ವರ್ಷವಾಗುವವರೆಗೂ ತಾರಿಕಾ ಮನೆಯಲ್ಲೇ ಇದ್ಲು. ಆದ್ರೆ ತನ್ನದಲ್ಲದ ತಪ್ಪಿಗೆ ಮನೆಯವರಿಂದ ತಿರಸ್ಕರಿಸಲ್ಪಟ್ಟ ತಾರಿಕಾ ಬದುಕು ಅರಸಿ ಅಲ್ಲಿಂದ ಹೊರನಡೆದಿದ್ಲು. ಮನೆ ಬಿಟ್ಟು ಓಡಿ ಬಂದ ತಾರಿಕಾ ಚೆನ್ನೈ ಸೇರಿಕೊಂಡ್ಲು. ''ಮನೆ ಬಿಟ್ಟು ಚೆನ್ನೈಗೆ ಓಡಿ ಬಂದಾಗ ನನ್ನ ಬದುಕು ಈ ರೀತಿಯ ತಿರುವು ಪಡೆಯಬಹುದೆಂದು ನಾನು ಯೋಚಿಸಿಯೇ ಇರಲಿಲ್ಲ. ನನ್ನ ತಾಯಿಯ ಆಶೀರ್ವಾದದಿಂದ್ಲೇ ಇದೆಲ್ಲವೂ ಸಾಧ್ಯವಾಗಿದೆ'' ಎನ್ನುತ್ತಾಳೆ ತಾರಿಕಾ.

ತಾಯಿ ಅಂದಾಕ್ಷಣ ತಾರಿಕಾ ತನ್ನ ಹೆತ್ತಮ್ಮನನ್ನು ನೆನೆದಿದ್ದಾಳೆ ಎಂದುಕೊಳ್ಳಬೇಡಿ. ಆಕೆ ಕೃತಜ್ಞತೆ ಅರ್ಪಿಸಿರುವುದು ಮಂಗಳಮುಖಿಯರ ಕಾರ್ಯಕರ್ತೆ ಗ್ರೇಸ್ ಬಾನು ಅವರಿಗೆ. 29 ವರ್ಷದ ಗ್ರೇಸ್ ಬಾನು ಕೂಡ ಒಬ್ಬ ಮಂಗಳಮುಖಿ. ಆಕೆ ಬದುಕಿನಲ್ಲಿ ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ತನ್ನಂತೆ ಇತರ ಮಂಗಳಮುಖಿಯರು ಕೂಡ ಜೀವನದಲ್ಲಿ ನೋವು ಅನುಭವಿಸಬಾರದು ಅನ್ನೋದು ಅವಳ ಉದ್ದೇಶ.

ತಾರಿಕಾ ಸೇರಿದಂತೆ ಇತರ ಕೆಲವು ಮಂಗಳಮುಖಿಯರನ್ನು ಗ್ರೇಸ್ ಬಾನು ದತ್ತು ಪಡೆದಿದ್ದಾರೆ. ಅವರಿಗೆ ಆಸರೆ ನೀಡಿ, ಆರೈಕೆ ಮಾಡುತ್ತಿದ್ದಾರೆ. ಮಂಗಳಮುಖಿಯರಿಗೆ ಸಾಮಾಜಿಕ ಭದ್ರತೆಯನ್ನೂ ಕೊಡಿಸುವ ಪ್ರಯತ್ನ ಅವರದ್ದು. ಅಂಬತ್ತೂರ್ ನಲ್ಲಿರುವ ಪೆರುಂಥಲೈವರ್ ಕಾಮರಾಜರ್ ಸರ್ಕಾರಿ ಹೆಣ್ಣುಮಕ್ಕಳ ಹೈಸ್ಕೂಲ್ ನಲ್ಲಿ ತಾರಿಕಾ ಶಿಕ್ಷಣ ಪಡೆದಿದ್ದಾಳೆ. 12ನೇ ತರಗತಿಯಲ್ಲಿ ಉತ್ತೀರ್ಣಳಾಗಿರುವ ತಾರಿಕಾ ಬದುಕಿನಲ್ಲಿ ಈಗ ಹೊಸ ಭರವಸೆ ಮೂಡಿದೆ. ತಾರಿಕಾ ಮುಂದೊಂದು ದಿನ ಡಾಕ್ಟರ್ ಆಗ್ತಾಳೆ ಅನ್ನೋ ವಿಶ್ವಾಸ ಗ್ರೇಸ್ ಬಾನುಗಿದೆ. ತಮಿಳುನಾಡು ಸರ್ಕಾರ ಕೂಡ ಇಂತಹ ಪ್ರತಿಭಾವಂತ ಮಂಗಳಮುಖಿಯರಿಗೆ ಪ್ರೋತ್ಸಾಹ ನೀಡಿದ್ರೆ ಅವರ ಬಾಳು ಹಸನಾಗಲಿದೆ. 

ಇದನ್ನೂ ಓದಿ...

ಬಡ ಕುಟುಂಬದ ಕುಡಿಗಳಿಗೆ ಇವರೇ ಆಶಾಕಿರಣ – 74ರ ಹರೆಯದಲ್ಲೂ ಫ್ರೀಯಾಗಿ ನೀಡ್ತಿದ್ದಾರೆ 500 ಮಕ್ಕಳಿಗೆ ಶಿಕ್ಷಣ 

ಟ್ರಾಫಿಕ್ ಬಗ್ಗೆ ಟೆನ್ಷನ್ ಬಿಟ್ಟುಬಿಡಿ- ಹೊಸ ಸಾರಿಗೆ ವ್ಯವಸ್ಥೆಗೆ ಯೋಜನೆ ರೂಪಿಸಿದೆ ಬಿಬಿಎಂಪಿ

Related Stories

Stories by YourStory Kannada