ಬಡತನದಲ್ಲೂ ಅರಳಿದ ಪ್ರತಿಭೆ- ಉದ್ಯಮದಲ್ಲಿ ಸೈ ಎನಿಸಿಕೊಂಡ ಸಚಿನ್

ಟೀಮ್​​ ವೈ.ಎಸ್​​.

ಬಡತನದಲ್ಲೂ ಅರಳಿದ ಪ್ರತಿಭೆ- ಉದ್ಯಮದಲ್ಲಿ ಸೈ ಎನಿಸಿಕೊಂಡ ಸಚಿನ್

Friday October 30, 2015,

3 min Read

ಮಹಾರಾಷ್ಟ್ರ ಮೂಲದ ಸಚಿನ್ ಕೇಟ್ ಒಬ್ಬ ಯಶಸ್ವಿ ಉದ್ಯಮಿ. ಆದ್ರೆ ಈ ಯಶಸ್ಸಿನ ಹಿಂದಿರುವ ಪರಿಶ್ರಮ ಮಾತ್ರ ಎಲ್ಲರಿಗೂ ಮಾದರಿಯಾಗುವಂಥದ್ದು. ಬಡತನದಲ್ಲೇ ಹುಟ್ಟಿ ಬೆಳೆದ ಸಚಿನ್ ಒಂದೊಂದಾಗೇ ಯಶಸ್ಸಿನ ಮೆಟ್ಟಿಲು ಏರಿದ್ದಾರೆ.

ಸಚಿನ್ ಕೇಟ್ ಬದುಕಿನ ಯಶೋಗಾಥೆ...

ಮಹಾರಾಷ್ಟ್ರದ ಔರಾಂಗಾಬಾದ್‍ನ ಪುಟ್ಟ ಹಳ್ಳಿ ಸಚಿನ್ ಕೇಟ್ ಅವರ ತವರು. ಅಲ್ಲಿ ಉದ್ಯಮ ಆರಂಭಿಸುವುದು ನಿಜಕ್ಕೂ ಕನಸೇ ಸರಿ. ಯಾಕಂದ್ರೆ ಆ ಗ್ರಾಮದಲ್ಲಿ ಶಿಕ್ಷಣದ ವ್ಯವಸ್ಥೆಯೇ ಇಲ್ಲ. ನಾಲ್ಕನೇ ತರಗತಿ ನಂತರದ ಶಿಕ್ಷಣಕ್ಕೆ ಬೇರೆಡೆಗೆ ಹೋಗಬೇಕಾದಂಥ ಪರಿಸ್ಥಿತಿ ಇದೆ. ಹಾಗಾಗಿ ಸಚಿನ್ ಕೇಟ್ ಕೂಡ ಶಿಕ್ಷಣ ಮುಂದುವರಿಸಲು ಪಕ್ಕದ ಊರಿಗೆ ತೆರಳಿದ್ರು. ಬಡತನ ಇದ್ದಿದ್ರಿಂದ ಸಚಿನ್ ದಿನಪತ್ರಿಕೆಗಳನ್ನು ಮಾರಾಟ ಮಾಡ್ತಾ ಇದ್ರು. ಪ್ರಥಮ ಪಿಯುಸಿಯಲ್ಲಿ ಓದ್ತಾ ಇದ್ದಾಗ ಸಚಿನ್ ಅವರಿಗೆ ಕಂಪ್ಯೂಟರ್ ಇನ್ಸ್​​ಟಿಟ್ಯೂಟ್ ಒಂದ್ರಲ್ಲಿ ಆಫೀಸ್ ಬಾಯ್ ಕೆಲಸ ಸಿಕ್ಕಿತ್ತು.

image


ಕಂಪ್ಯೂಟರ್ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದ್ದಿದ್ರಿಂದ ಸಚಿನ್ ಕೇಟ್ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ್ರು. ಒಂದೇ ವರ್ಷದಲ್ಲಿ ಸಚಿನ್ ಕಂಪ್ಯೂಟರ್ ಇನ್‍ಸ್ಟ್ರಕ್ಟರ್ ಆಗಿ ಬದಲಾದ್ರು. ದ್ವಿತೀಯ ಪಿಯುಸಿ ಬಳಿಕ ಉನ್ನತ ವ್ಯಾಸಂಗಕ್ಕಾಗಿ ಸಚಿನ್ ಔರಂಗಾಬಾದ್‍ಗೆ ಶಿಫ್ಟ್ ಆದ್ರು. ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಕೂಡ ಮಾಡ್ತಾ ಇದ್ರು. ಅವರ ಟ್ರಾವೆಲ್ ಉದ್ಯಮಕ್ಕೆ ಅಡಿಗಲ್ಲು ಹಾಕಿದ್ದು ಇದೇ ಉದ್ಯೋಗ. ತಮ್ಮ ಕಂಪ್ಯೂಟರ್ ಕೌಶಲ್ಯದ ಬಗ್ಗೆ ವಿಶ್ವಾಸವಿಟ್ಟಿದ್ದ ಸಚಿನ್, ಫುಲ್ ಟೈಮ್ ಕೆಲಸ ಮಾಡಲು ಆರಂಭಿಸಿದ್ರು. ಅದೇ ಸಮಯದಲ್ಲಿ ಸಚಿನ್ ಕಂಪ್ಯೂಟರ್ ವಿಷಯದ ಮೇಲೆ ಬಿಎಸ್‍ಸಿ ಪದವಿಯನ್ನೂ ಪಡೆದ್ರು.

ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಸಚಿನ್ ಬೇರೆ ಕಡೆ ಶಿಫ್ಟ್ ಆಗಲು ಮುಂದಾದ್ರು. ಆದ್ರೆ ಕುಟುಂಬಸ್ಥರ ಸಮ್ಮತಿ ಸಿಗದ ಕಾರಣ ಆ ಯೋಜನೆಯನ್ನು ಅಲ್ಲಿಗೇ ಕೈಬಿಟ್ಟು ವೆಬ್ ಡೆವಲಪ್‍ಮೆಂಟ್ ಅಸೈನ್‍ಮೆಂಟ್‍ಗಳನ್ನು ಮಾಡಲು ನಿರ್ಧರಿಸಿದ್ರು. ಸುಮಾರು 600 ವೆಬ್‍ಸೈಟ್‍ಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಚಿನ್ ಕೇಟ್ ಯಶಸ್ವಿಯಾದ್ರು. ಇದರ ಫಲವಾಗಿಯೇ ಇನ್ಫೋಗ್ರಿಡ್ ಹಾಗೂ ನೆಟ್‍ಮಂಟಲ್ ಅಸ್ಥಿತ್ವಕ್ಕೆ ಬಂತು.

ಮೊದಲಿನಿಂದ್ಲೂ ಪ್ರಯಾಣ ಮತ್ತು ಮನರಂಜನಾ ಕೈಗಾರಿಕೆ ಬಗ್ಗೆ ಸಚಿನ್ ಕೇಟ್ ಅವರ ಗಮನವಿತ್ತು. ವಿಮಾನಯಾನ, ಹೋಟೆಲ್ ಬುಕ್ಕಿಂಗ್ ಕ್ಷೇತ್ರಗಳು ಅಭಿವೃದ್ಧಿಯಾಗಿವೆ. ಆದ್ರೆ ರಸ್ತೆ ಸಂಚಾರ ವಿಭಾಗವನ್ನು ಕಡೆಗಣಿಸಲಾಗ್ತಿದೆ ಎಂಬ ನೋವು ಸಚಿನ್ ಅವರಿಗಿತ್ತು. 2010ರ ಜುಲೈನಲ್ಲಿ ಸಚಿನ್ ಕೇಟ್ `ಕ್ಲಿಯರ್ ಕಾರ್ ರೆಂಟಲ್' ಏಜೆನ್ಸಿಯನ್ನು ಆರಂಭಿಸಿದ್ರು. ಅಷ್ಟರಲ್ಲಾಗ್ಲೇ ಮೇರು ಕ್ಯಾಬ್ ತನ್ನ ಸೇವೆಯನ್ನು ವಿಸ್ತರಿಸಿತ್ತು. ಕ್ಲಿಯರ್ ಕಾರ್ ರೆಂಟಲ್ ಸಂಸ್ಥೆ ಸ್ಥಳೀಯ ಹಾಗೂ ದೂರದ ಶಾಖೆಗಳಲ್ಲೂ ಸೇವೆ ಒದಗಿಸ್ತಾ ಇದೆ. ಇಡೀದಿನ ಹಾಗೂ ಅರ್ಧದಿನದ ಪ್ಯಾಕೇಜನ್ನು ಗ್ರಾಹಕರು ಪಡೆಯಬಹುದು. ರೌಂಡ್ ಟ್ರಿಪ್, ಒನ್ ವೇ ಟ್ರಿಪ್, ಮಲ್ಟಿ ಸಿಟಿ ಟ್ರಾವೆಲ್ ಕೂಡ ಇದೆ. ಭಾರತದ 150 ನಗರಗಳಲ್ಲಿ ಕ್ಲಿಯರ್ ಕಾರ್ ರೆಂಟಲ್ ಸೇವೆಯಿದ್ದು, ನೂರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸ್ತಿದ್ದಾರೆ.

ಹಣ ಪಡೆಯದೇ ಆರಂಭಿಸಿದ ಉದ್ಯಮ...

ಇಂತಹ ಉದ್ಯಮಗಳಿಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಬೇಕು. ಆದ್ರೆ ಯಾವುದೇ ಸಂಘ ಸಂಸ್ಥೆಯಿಂದ ಸಚಿನ್ ಕೇಟ್ ನಯಾಪೈಸೆ ಹಣ ಪಡೆದಿಲ್ಲ. ಯಾರ ಸಹಾಯವೂ ಇಲ್ಲದೆ ಸ್ವಂತ ಪರಿಶ್ರಮದಿಂದ 150 ನಗರಗಳಲ್ಲಿ ಕಾರ್ ರೆಂಟಲ್ ಸೇವೆ ಒದಗಿಸ್ತಿದ್ದಾರೆ. ಕ್ಲಿಯರ್ ಕಾರ್ ರೆಂಟಲ್ ಸಧ್ಯ 1400 ಕಾರ್‍ಗಳನ್ನು ಹೊಂದಿದೆ. ಸಾವಿರಕ್ಕೂ ಹೆಚ್ಚು ವೆಂಡರ್‍ಗಳು ಕೂಡ ಇದ್ದಾರೆ. ಮೇಕ್ ಮೈ ಟ್ರಿಪ್, ಕಾಕ್ಸ್ & ಕಿಂಗ್ಸ್ ಹಾಗೂ ಥಾಮಸ್ ಕುಕ್‍ನಂತಹ ಖ್ಯಾತ ಕಂಪನಿಗಳು ಕೂಡ ಕ್ಲಿಯರ್ ಕಾರ್ ರೆಂಟಲ್ ಸಂಸ್ಥೆಯೊಂದಿಗೆ ಪಾಲುದಾರರಾಗಿವೆ. ಬರೀ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಮಾತ್ರವಲ್ಲದೆ, ಚಿಕ್ಕ ಚಿಕ್ಕ ನಗರಗಳ ಗ್ರಾಹಕರು ಕೂಡ ಸಂಸ್ಥೆಯ ಕಾರ್‍ಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಇದು ಸಚಿನ್ ಅವರಿಗೆ ಖುಷಿ ಕೊಟ್ಟಿದೆ.

ಔರಂಗಾಬಾದ್‍ನಿಂದ ಸಂಸ್ಥೆ ಕಟ್ಟಿದ ಸಚಿನ್...

ಎಲ್ರೂ ಸಾಮಾನ್ಯವಾಗಿ ಸಣ್ಣ ನಗರಗಳಲ್ಲಿ ಉದ್ಯಮ ಆರಂಭಿಸ್ತಾರೆ. ಧರ್ಮಶಾಲಾ ಅಥವಾ ಭುವನೇಶ್ವರವನ್ನು ಸಚಿನ್ ಆಯ್ಕೆ ಮಾಡಿಕೊಂಡಿದ್ರೆ ಅದರಲ್ಲಿ ಆಶ್ಚರ್ಯವಿರಲಿಲ್ಲ. ಆದ್ರೆ ಔರಂಗಾಬಾದ್‍ನಲ್ಲೇ ಸಚಿನ್ ಕೇಟ್ ತಮ್ಮ ಉದ್ಯಮ ನಡೆಸ್ತಾ ಇರೋದು ವಿಶೇಷ. ತಮ್ಮ ಕೆಲಸ ಹಾಗೂ ಪರಿಶ್ರಮದ ಮೇಲೆ ಸಚಿನ್ ನಂಬಿಕೆ ಇಟ್ಟಿದ್ದಾರೆ. ಔರಂಗಾಬಾದ್ ಕಾಲಿಂಗ್ ಎಂಬ ಬ್ಲಾಗ್ ಒಂದನ್ನು ಕೂಡ ಸಚಿನ್ ಬರೆಯುತ್ತಿದ್ದಾರೆ. ಇದು ಸಾಕಷ್ಟು ಯುವಕರಿಗೆ ಪ್ರೇರಣೆಯಾಗಿದೆ. ಸಚಿನ್ ಅವರ ಬ್ಲಾಗ್ ಬಗ್ಗೆ ದಿನಪತ್ರಿಕೆಯೊಂದರಲ್ಲಿ ವರದಿ ಕೂಡ ಪ್ರಕಟವಾಗಿತ್ತು. ಔರಂಗಾಬಾದ್‍ನ ಲೋಕಲ್ ಹೀರೋ ಸಚಿನ್ ಕೇಟ್, ಮತ್ತಷ್ಟು ಸಾಧನೆಯ ಹುಮ್ಮಸ್ಸಿನಲ್ಲಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗ್ಲಿ ಅನ್ನೋದೇ ಎಲ್ಲರ ಹಾರೈಕೆ.