ಮಹಿಳೆಯರ ದೇಗುಲ ಪ್ರವೇಶಕ್ಕಾಗಿ ತೃಪ್ತಿ ದೇಸಾಯಿ ಹೋರಾಟ..! 

ಟೀಮ್​ ವೈ.ಎಸ್​. ಕನ್ನಡ

0

ಅದೆಷ್ಟೋ ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಅದರಲ್ಲೂ ಶಬರಿಮಲೆಯ ಅಯ್ಯಪ್ಪನ ಸನ್ನಿಧಿಯಲ್ಲಿ ಸ್ತ್ರೀಯರು ದೇಗುಲ ಪ್ರವೇಶಿಸದಂತೆ ನಿರ್ಬಂಧವಿದೆ. ಇದೀಗ ಸಾಮಾಜಿಕ ಕಾರ್ಯಕರ್ತೆಯರೆಲ್ಲ ಮಹಿಳೆಯರ ದೇವಸ್ಥಾನ ಪ್ರವೇಶದ ಹಕ್ಕಿಗಾಗಿ ಹೋರಾಟ ತೀವ್ರಗೊಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಖ್ಯಾತ ದೇವಾಲಯ ಶನಿ ಶಿಂಗನಪುರ್‍ನಲ್ಲಿ ಪ್ರತಿಭಟನೆ ಮೂಲಕ ಸದ್ದು ಮಾಡಿದ್ದ ತೃಪ್ತಿ ದೇಸಾಯಿ, ಇದೀಗ ಬಲವಂತವಾಗಿ ಮಹಾಲಕ್ಷ್ಮಿ ದೇಗುಲ ಪ್ರವೇಶಿಸಿದ್ದಾರೆ. ಎಲ್ಲ ದೇವಸ್ಥಾನಗಳಲ್ಲೂ ಮಹಿಳೆಯರಿಗೆ ಪ್ರವೇಶದ ಹಕ್ಕು ಸಿಗಬೇಕು ಅನ್ನೋದು `ಭೂಮಾತಾ ರನ್ರಾಗಿಣಿ ಬ್ರಿಗೇಡ್'ನ ಸಂಸ್ಥಾಪಕಿ ತೃಪ್ತಿ ದೇಸಾಯಿ ಅವರ ಆಗ್ರಹ. ದೇವಸ್ಥಾನ ಪ್ರವೇಶ ಮಹಿಳೆಯರ ಹಕ್ಕು ಎಂಬ ಬಾಂಬೆ ಹೈಕೋರ್ಟ್ ತೀರ್ಪನ್ನಿಟ್ಟುಕೊಂಡು ಹೋರಾಟ ನಡೆಸಲು ಅವರು ಮುಂದಾಗಿದ್ದಾರೆ.

ಇದಕ್ಕೆ ಕಾರಣವೂ ಇದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಪ್ರಸಿದ್ಧ ಮಹಾಲಕ್ಷ್ಮಿ ದೇವಸ್ಥಾನ ಪ್ರವೇಶಿಸದಂತೆ ತೃಪ್ತಿ ಅವರಿಗೆ ಅಡ್ಡಿಪಡಿಸಲಾಯ್ತು. ಕಾರಣ ತೃಪ್ತಿ ಸಲ್ವಾರ್ ಕಮೀಜ್ ಧರಿಸಿದ್ದರು. ಸೀರೆ ಉಟ್ಟ ಮಹಿಳೆಯರಿಗೆ ಮಾತ್ರ ದೇವಸ್ಥಾನದೊಳಕ್ಕೆ ಪ್ರವೇಶ ಎಂಬ ನಿಯಮವನ್ನು ಆಡಳಿತ ಮಂಡಳಿ ಮಾಡಿದೆ. ಡ್ರೆಸ್ ಕೋಡ್ ಸರಿಯಿಲ್ಲ ಎಂಬ ಕಾರಣಕ್ಕೆ ತೃಪ್ತಿ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸಲಾಗಿತ್ತು. ಅಷ್ಟೇ ಅಲ್ಲ ತಮ್ಮ ಮೇಲೆ ಹಲ್ಲೆ ಕೂಡ ನಡೆದಿರುವುದಾಗಿ ತೃಪ್ತಿ ದೇಸಾಯಿ ಆರೋಪ ಮಾಡಿದ್ದಾರೆ. 

ಇದನ್ನು ಓದಿ: ಸಿನಿಮಾ ನಿರ್ಮಾಣ ಮಾಡೋದಷ್ಟೆ ನಮ್ಮ ಕೆಲಸ ಅಲ್ಲ...

"ಅವರೆಲ್ಲ ಮೊದಲೇ ಸಿದ್ಧತೆ ಮಾಡಿಕೊಂಡಿದ್ದರು. ನನ್ನ ಕೂದಲನ್ನು ಎಳೆದಾಡಿದರು, ಅಸಭ್ಯ ಶಬ್ದಗಳಿಂದ ನಿಂದಿಸಿದರು ಮತ್ತು ನನ್ನ ಹೊಟ್ಟೆ ಮೇಲೆ ಒದ್ದಿದ್ದಾರೆ. ಒಬ್ಬ ಅರ್ಚಕ ನನ್ನ ಕತ್ತು ಕೂಡ ಹಿಸುಕಿದ್ದಾನೆ'' ಅಂತಾ ತೃಪ್ತಿ ದೇಸಾಯಿ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.

ಹೈಕೋರ್ಟ್ ಮಹಿಳೆಯರ ಪರವಾಗಿ ತೀರ್ಪು ನೀಡಿದೆ. ಹಾಗಾಗಿ ಹೈಕೋರ್ಟ್ ಆದೇಶದಂತೆ ಮಹಿಳೆಯರೆಲ್ಲ ದೇವಾಲಯದೊಳಕ್ಕೆ ಯಾವುದೇ ಅಂಜಿಕೆಯಿಲ್ಲದೆ ಪ್ರವೇಶಿಸಬಹುದು. ಕೋರ್ಟ್ ಆದೇಶವೇ ಇರುವುದರಿಂದ ಪೊಲಿಸರು ಕೂಡ ನಮ್ಮನ್ನು ತಡೆಯುವುದಿಲ್ಲ ಎಂಬ ವಿಶ್ವಾಸವಿದೆ ಅಂತಾ ತೃಪ್ತಿ ದೇಸಾಯಿ ಹೇಳಿದ್ದಾರೆ.

ಕೊಲ್ಹಾಪುರದ ಮಹಾಲಕ್ಷ್ಮಿ ದೇಗುಲದಲ್ಲಿ ನಡೆದ ಮಾರಾಮಾರಿ ಬಳಿಕ ತೃಪ್ತಿ ತೀವ್ರ ಅಸ್ವಸ್ಥರಾಗಿದ್ದರು. ದೇವಸ್ಥಾನದಲ್ಲೇ ಕುಸಿದು ಬಿದ್ದಿದ್ದರು. ನಿರ್ಜಲೀಕರಣ ಮತ್ತು ಆಮ್ಲಜನಕ ಕೊರತೆಯಿಂದ ಬಳಲುತ್ತಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ತಮ್ಮ ಮೇಲೆ ಹಲ್ಲೆ ನಡೆಯುವ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲೇ ಇದ್ದರೂ ಮೂಕಪ್ರೇಕ್ಷಕರಾಗಿದ್ದರು. ಪೊಲೀಸರು ತಮ್ಮ ರಕ್ಷಣೆಗೆ ಬರಲಿಲ್ಲ ಅಂತಾ ತೃಪ್ತಿ ಆರೋಪಿಸಿದ್ದಾರೆ. ದೇವಸ್ಥಾನದಲ್ಲಿ ನಡೆದ ಮಾರಾಮಾರಿಯನ್ನು ಪೊಲೀಸರು ವೀಕ್ಷಿಸುತ್ತ ನಿಂತಿದ್ದರು. ಅಂದಮೇಲೆ ದೇಗುಲ ಪ್ರವೇಶ ತಾರತಮ್ಯದ ವಿರುದ್ಧ ಹೈಕೋರ್ಟ್ ಆದೇಶ ಬಂದ ಬಳಿಕ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಯಾವ ರೀತಿ ರಕ್ಷಣೆ ಸಿಗುತ್ತಿದೆ ಅಂತಾ ತೃಪ್ತಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಪ್ರಶ್ನಿಸಿದ್ದಾರೆ.

ಈ ವಿಷಯವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅನ್ನೋದು ತೃಪ್ತಿ ದೇಸಾಯಿ ಅವರ ಒತ್ತಾಯ. ಕಳೆದ ಹಲವು ವರ್ಷಗಳಿಂದ ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಒಳಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲ. ಈ ಸಂಪ್ರದಾಯದ ವಿರುದ್ಧ ನಡೆದ ಕೋರ್ಟ್ ಸಮರದಲ್ಲಿ ಮಹಿಳೆಯರಿಗೆ ಗೆಲುವಾಗಿತ್ತು. ಮಹಿಳೆಯರು ದೇಗುಲ ಪ್ರವೇಶಿಸಬಹುದೆಂದು ಬಾಂಬೆ ಹೈಕೋರ್ಟ್ ಆದೇಶಿಸಿತ್ತು. ಈ ಗೆಲುವಿನ ಬೆನ್ನಲ್ಲೇ ತೃಪ್ತಿ ದೇಸಾಯಿ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತೆಯರು ವಿಜಯ್ ರ್ಯಾಲಿ ಆಯೋಜಿಸಿದ್ದರು. ಕೊಲ್ಹಾಪುರದ ಮಹಾಲಕ್ಷ್ಮಿ ದೇವಾಲಯವನ್ನು ಬಲವಂತವಾಗಿ ಪ್ರವೇಶಿಸಲು ಮುಂದಾದಾಗ ಘರ್ಷಣೆ ನಡೆದಿದೆ. ಈ ವೇಳೆ ತೃಪ್ತಿ ಮತ್ತವರ ಬೆಂಬಲಿಗರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದಾರೆ. ಮಧ್ಯಾಹ್ನ ಪ್ರತಿಭಟನೆ ನಡೆದರೆ ಅದೇ ದಿನ ಸಂಜೆ ತೃಪ್ತಿ ಬಲವಂತವಾಗಿ ದೇವಾಲಯ ಪ್ರವೇಶಿಸಿದ್ದಾರೆ. ಈ ವೇಳೆ ತಮ್ಮ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪ ಮಾಡಿದ್ದಾರೆ. 

ಇದನ್ನು ಓದಿ:

1. ಕ್ಯಾನ್ಸರ್ ರೋಗದ ಬಗ್ಗೆ ರೋಗದಿಂದ ಬಳಲಿದವನಿಂದ ಜಾಗೃತಿ

2. ನೀರು, ಆಹಾರವಿಲ್ಲದೆ 65 ವರ್ಷಗಳಿಂದ ಬದುಕಿರುವ ಸನ್ಯಾಸಿ!

3. ವಾಟ್ಸ್​​ಆ್ಯಪ್ ಗೂಢಲಿಪೀಕರಣ ನಿಮಗೆಷ್ಟು ಗೊತ್ತು..?

Related Stories