ಹೋಟೆಲ್ ಚಿಕ್ಕದಾದ್ರೂ.. ಹೆಸರು ದೊಡ್ಡದು...!

ವಿಸ್ಮಯ

0

ಒಂದೊಂದು ಹೋಟೆಲ್‍ನಲ್ಲಿ ಒಂದೊಂದು ರುಚಿ. ಒಮ್ಮೆ ತಿಂದ್ರೆ ಮತ್ತೆ ತಿನ್ನಬೇಕು ಎಂಬ ಖುಷಿ. ಅದೇ ಕಾರಣಕ್ಕೆ ಬೆಂಗಳೂರಿನಲ್ಲಿ ಕೆಲ ಹೋಟೆಲ್‍ಗಳ ಎದುರು ಮಾತ್ರ ಜನಸಾಗರವಿರುತ್ತೆ. ನೂಕು ನುಗ್ಗಲು ಎಷ್ಟೇ ಇದ್ದರೂ ಅಲ್ಲಿಯ ತಿನಿಸೇ ಬೇಕು ಎಂಬಂತೆ ಪಟ್ಟು ಹಿಡಿಯುವ ಮಂದಿಗೂ ನಗರದಲ್ಲಿ ಕೊರತೆಯಿಲ್ಲ. ಇದಕ್ಕೆ ಸಾಕ್ಷಿಯಾಗಿರೋದು ಗಾಂಧಿನಗರದ ಭರಣಿ ಕೆಫೆ.

ಇದನ್ನು ಓದಿ: ನಿಮ್ಮ ಮುದ್ದು ಮುದ್ದಾದ ಸಾಕು ಪ್ರಾಣಿಗೆ ಇಲ್ಲಿ ಸಿಗುತ್ತೆ ನ್ಯೂ ಗೆಟಪ್

ಹೆಸರು ಭರಣಿ ಕೆಫೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಹೋಟೆಲ್ ಚಿಕ್ಕದಾಗಿ ಚೊಕ್ಕದಾಗಿದೆ. ದೊಡ್ಡ ಅಭಿಮಾನಿಗಳ ಬಳಗ ಹೊಂದಿದೆ. ಮೆಜೆಸ್ಟಿಕ್ ಕಡೆ ಹಾದು ಹೋಗುವಾಗ ಮರೆಯದೆ ಒಂದು ವಿಸಿಟ್ ಕೊಡುವ ಜನರು ಹೆಚ್ಚು. ಒಮ್ಮೆ ಟೇಸ್ಟ್ ಮಾಡಿದವರು ಮತ್ತೆ ಮತ್ತೆ ಈ ಹೋಟೆಲ್‍ಗೆ ಬರದೇ ಇರೋಲ್ಲ. ರಾಜಧಾನಿಯಲ್ಲಿ ಅಕ್ಕಿ ರೊಟ್ಟಿಗೆ ಹಸಿಮೆಣಸಿನ ಕಾಯಿ ಚಟ್ನಿ ಕಾಂಬಿನೇಷನ್‍ಗೆ ಇಲ್ಲಿ ಸದಾ ಸಿದ್ಧ. ಜೊತೆಗೆ ಸಿಕ್ಕಪಟ್ಟೆ ಫೇಮಸ್. ಗಾಂಧಿನಗರದ ಭರಣಿ ಕೆಫೆಯ ಬಾಯಲ್ಲಿ ನೀರುರಿಸುವ ಅಕ್ಕಿ ಮತ್ತು ರಾಗಿ ರೊಟ್ಟಿ ಸುವಾಸನೆ ದೂರದ ಜಯನಗರ, ವಿಜಯನಗರ, ಕೋರಮಂಗಲ, ಇಂದಿರಾನಗರ, ಬನಶಂಕರಿ, ಡಾಲರ್ಸ್ ಕಾಲೋನಿ ಮುಂತಾದ ಭಾಗಗಳ ತಿಂಡಿ ಪ್ರಿಯರನ್ನು ಆಕರ್ಷಿಸುತ್ತಿದೆ..

ಕಾನಿಷ್ಕಾ ಹೋಟೆಲ್ ಎದುರಿಗೆ ನಿಂತರೆ ಕಾಣುವುದು ಭರಣಿ ಕೆಫೆ.. ಪುಟ್ಟ ಹೋಟೆಲ್ ಎಂದು ಉದಾಸೀನ ಮಾಡುವಂತಿಲ್ಲ ಯಾಕೆಂದರೆ ಹೋಟೆಲ್ ಚಿಕ್ಕದಾದರೂ ಇಲ್ಲಿನ ರೊಟ್ಟಿ ಚಟ್ನಿ ಜೊತೆಗೆ ವೆಜಿಟೆಬಲ್ ಪಲಾವ್, ಬನ್ಸ್ ತಿನ್ನಲು ಭೋಜನ ಪ್ರಿಯರು ಕ್ಯೂನಲ್ಲಿ ನಿಲ್ಲುತ್ತಾರೆ. ಜೊತೆಗೆ ಮಲ್ನಾಡ್ ಕಷಾಯ ಮತ್ತು ಕಾಫಿಗೂ ಈ ಹೋಟೆಲ್ ಜನಪ್ರಿಯ. ಮಿಕ್ಕಂತೆ ಮಧ್ಯಾಹ್ನದಂದು ಅನ್ನ- ಸಂಬಾರ್, ಮಿನಿ ಮೀಲ್ಸ್ ಸೇರಿದಂತೆ ಸಾಕಷ್ಟು ತಿಂಡಿ- ತಿನಿಸುಗಳು ಸಿಗುತ್ತವೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದಂತಿರುವ ಈ ಹೋಟೆಲ್‍ನಿಂದ ದೂರದೂರದ ಪ್ರದೇಶಗಳಿಗೆ ಜನ ಪಾರ್ಸಲ್ ಕೊಂಡ್ಯುತ್ತಾರೆ. ಅಷ್ಟೇ ಅಲ್ಲದೇ ಅಕ್ಕ ಪಕ್ಕದಲ್ಲಿನ ಕಾಲೇಜು ವಿದ್ಯಾರ್ಥಿಗಳು ಕೂಡ ಇಲ್ಲಿಗೆ ಬಂದು ಊಟವನ್ನು ಟೇಸ್ಟ್ ಮಾಡುತ್ತಾರೆ..ಇಲ್ಲಿನ ರುಚಿಗೆ ಸ್ಟಾರ್ ನಟರು ಕೂಡ ಭೇಟಿ ನೀಡಿದ್ದಾರೆ. ಡಾ. ರಾಜ್‍ಕುಮಾರ್, ಸಿಹಿಕಹಿ ಚಂದ್ರು ಸೇರಿದಂತೆ ಇತರರು ಇಲ್ಲಿಗೆ ಭೇಟಿ ನೀಡಿದ್ದಾರೆ ಅಂತಾರೆ ಮಾಲೀಕ ಸತ್ಯ ಮೂರ್ತಿ.

ಸುಮಾರು 20 ವರ್ಷಗಳ ಇತಿಹಾಸಿರೋ ಈ ಹೋಟೆಲ್ ಸಸ್ಯಹಾರಿಗಳಿಗೆ ಈ ಭರಣಿ ಕೆಫೆ ಹೇಳಿ ಮಾಡಿಸಿದ್ದಂತೆ. ಯಾವುದೇ ಫೈವ್‍ಸ್ಟಾರ್ ಹೋಟೆಲ್‍ಗಳಿಗೂ ಕಡಿಮೆ ಇಲ್ಲ. ಶುಚಿತ್ವದಿಂದ ರುಚಿಯವರೆಗೂ ಎಲ್ಲವೂ ಫರ್ಫೆಕ್ಟ್ ಆಗಿದೆ. ನಮ್ಮೂರ ಹೋಟೆಲ್ ಅಂದ್ರೆ ಜೇಬಿಗೂ ಹೆಚ್ಚು ಭಾರ ಆಗುವುದಿಲ್ಲ ಅಂತಾರೆ ಆಹಾರ ಪ್ರಿಯರು. ದಿನನಿತ್ಯ ಇಲ್ಲಿಗೆ ಭೇಟಿ ನೀಡುವ ರವಿಯವ್ರು ಹೇಳುವುದು ಹೀಗೆ. ನಮ್ಮ ಮನೆ ಇರೋದು ವಿಜಯನಗರದಲ್ಲಿ ಇಲ್ಲಿ ಸಿಗುವ ರೊಟ್ಟಿ ತುಂಬಾನೇ ಇಷ್ಟವಾಗುತ್ತೆ.. ಜೊತೆಗೆ 3 ರೀತಿಯ ಚಿಟ್ನಿಗಳು ಸಖತ್ ಮಜಾ ಕೊಡುತ್ತೆ ಅಂತಾರೆ ರವಿಯವರು.

ಕಾಲೇಜು ವಿದ್ಯಾರ್ಥಿಗಳಿಗೂ ಭರಣಿ ಕೆಫೆ ಅಂದ್ರೆ ಅಚ್ಚುಮೆಚ್ಚು.. ತಮ್ಮ ಫ್ರೆಂಡ್ಸ್​​ಗಳೊಂದಿಗೆ ಬಂದರೆ ಎಲ್ಲರೂ ಸೇರಿ ಮಜಾ ಮಾಡುತ್ತೇವೆ ಅಂತಾರೆ ತಿಲಕ್ ಕುಮಾರ್. ಇಲ್ಲಿ ಸಿಗುವ ಕಷಾಯ ತುಂಬಾ ಚೆನ್ನಾಗಿ ಇರುತ್ತೆ. ನಾನು ಮಂಗಳೂರಿನಿಂದ ಬಂದಿರೋದು ಇಲ್ಲಿ ಮಾಡೋ ತಿಂಡಿ ತಿನಿಸುಗಳು ಮನೆಯ ತಿಂಡಿ ತಿನ್ನುವಂತೆ ಆಗುತ್ತೆ ಅಂತಾರೆ ರವಿ. ಈ ಪ್ರದೇಶದಲ್ಲಿ ನಿರಂತರವಾಗಿ ಊಟ, ತಿಂಡಿಗಳನ್ನು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಅನೇಕ ವರ್ಷಗಳಿಂದ ತಿನಿಸುತ್ತಲೇ ಬಂದಿದೆ. ಒಟ್ಟಾರೆ.. ಹೋಟೆಲ್ ಚಿಕ್ಕಾದ್ರೂ ದೊಡ್ಡ ಮಟ್ಟದ ರುಚಿ ನೀಡುತ್ತಾ ಬಂದಿದೆ. ಯಾವುದೇ ಫೈವ್ ಸ್ಟಾರ್ ಹೋಟೆಲ್‍ಗಳಿಗೂ ಸೆಡ್ಡು ಹೊಡೆಯುವಂತಿದೆ ಭರಣಿ ಕೆಫೆ ಹೋಟೆಲ್. 

ಇದನ್ನು ಓದಿ

1. ಉರ್ದು ಭಾಷೆಯ ಸೌಂದರ್ಯ – ಶ್ರೀಮಂತಿಕೆ ಹೆಚ್ಚಿಸಿದ ರೆಹ್ಕ್ತಾ ಫೌಂಡೇಷನ್.

2. ಚೆನ್ನೈ ಪ್ರವಾಹ ಪೀಡಿತರಿಗಾಗಿ ಅಮರಿಕದಿಂದ ಹರಿದು ಬಂತು ನೆರವು - ಕಸ್ಟಮ್ಸ್ ಕಿರಿಕಿರಿಯಿಂದ ಸಂತ್ರಸ್ಥರನ್ನು ಇನ್ನೂ ತಲುಪಿಲ್ಲ..!

3. ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!

Related Stories

Stories by YourStory Kannada