ಬೆಂಗಳೂರಿನಲ್ಲೊಂದು ತೇಲುವ ರೆಸ್ಟೋರೆಂಟ್

ಉಷಾ ಹರೀಶ್​​

0

ಕೇರಳದ ಬೋಟ್​​ಹೌಸ್ ಮಾದರಿಯ ತೇಲುವ ರೆಸ್ಟೋರೆಂಟ್ ನಮ್ಮ ಬೆಂಗಳೂರಿನಲ್ಲಿದ್ದರೆ ಎಷ್ಟು ಚೆಂದವಲ್ಲ. ಹಾಗೇ ಯೋಚಿಸುತ್ತಿರುವಾಗಲೇ ಉದ್ಯಾನನಗರಿಯ ಹೆಬ್ಬಾಳದ ಲುಂಬಿನಿ ಗಾರ್ಡನ್​​ನಲ್ಲಿ ಸಂಪೂರ್ಣವಾಗಿ ನೀರಿನ ಮೇಲೆ ತೇಲುವ ರೆಸ್ಟೋರೆಂಟ್ ಒಂದು ನಿರ್ಮಾಣವಾಗಿದೆ.

ತಂಪಾದ ಸಂಜೆ, ಸುತ್ತಲೂ ನೀರು, ನೀರಿನ ಮಧ್ಯೆ ಇರುವ ಪುಟ್ಟ ಗಿಡಮರಗಳ ಗುಡ್ಡ, ಅವುಗಳ ಮೇಲೆ ಕುಳಿತಿರುವ ಹಕ್ಕಿಗಳ ಕಲರವ. ಇದನ್ನೆಲ್ಲಾ ಕಣ್ತುಂಬಿಕೊಂಡು ಮನಸ್ಸಿಗೆ ಇಷ್ಟವಾದ ತಿನಸುಗಳನ್ನು ಸವಿಯುತ್ತಿದ್ದರೆ... ಕಲ್ಪನೆಯೇ ಖುಷಿ ಅಲ್ಲವೇ? ಅದೀಗ ಸಾಕಾರಗೊಂಡಿದೆ.

ಒಂದು ಹೊಸ ಅನುಭವ ಕೊಡುವ ರೆಸ್ಟೋರೆಂಟ್ ಈಗಾಗಲೇ ಕಾರ್ಯಾರಂಭ ಮಾಡಿದ್ದು, ವಾರದ ದಿನಗಳಲ್ಲಿ ಸಭೆ ಸಮಾರಂಭಗಳಿಗೆ ಮೀಸಲಾಗಿರುವ ಇದು ವಾರಾಂತ್ಯದಲ್ಲಿ ಮಾತ್ರ ಸಾರ್ವಜನಿಕರಿಗೆ ಲಭ್ಯ.

ಸಂಪೂರ್ಣವಾಗಿ ನೀರಿನಲ್ಲಿ ತೇಲುವ ಮತ್ತು ನೀರಿನ ಮೇಲೆ ಸಂಚರಿಸುವ ಕ್ರೂಸ್ ಮಾದರಿಯ ರೆಸ್ಟೋರೆಂಟ್ ಗೋಲ್ಡನ್ ಪರ್ಲ್ ಹೊಟೇಲ್​​ಗೆ ಸೇರಿದ್ದು. ನಗರದ ಹೆಬ್ಬಾಳದಲ್ಲಿರುವ ಲುಂಬಿನಿ ಗಾರ್ಡನ್​​ನಲ್ಲಿ ಆರಂಭವಾಗಿದೆ.

ಪರಿಸರ ಸ್ನೇಹಿ,ಸೋಲಾರ್ ಬಳಕೆ

ಈ ತೇಲುವ ರೆಸ್ಟೋರೆಂಟ್​​ನ್ನು ಕೊಚ್ಚಿಯ ಎಂಜಿನಿಯರ್ ಒಬ್ಬರ ಸಹಾಯದಿಂದ ನಿರ್ಮಾಣ ಮಾಡಲಾಗಿದೆ. ಇದೊಂದು ಪರಿಸರ ಸ್ನೇಹಿಯಾಗಿದ್ದು ಮರೈನ್ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿಸಲಾಗಿದೆ. ನೂರೈವತ್ತು ಮಂದಿ ಕುಳಿತುಕೊಳ್ಳಬಹುದಾದ ಈ ತೇಲುವ ಹೊಟೇಲ್​​ನಲ್ಲಿ ಬಳಕೆಯಾಗುವ ಶೇ 90ರಷ್ಟು ವಿದ್ಯುತ್​ಗೆ ಸೋಲಾರ್ ಶಕ್ತಿ ಬಳಸಲಾಗುತ್ತಿದೆ. ಅದಕ್ಕಾಗಿ

ಹೋಟೆಲ್​​ನ ಮೇಲ್ಭಾಗದಲ್ಲಿ 8 ಸೋಲಾರ್ ಪ್ಯಾನಲ್​​ಗಳನ್ನು ಅಳವಡಿಸಲಾಗಿದೆ. ಅದರಿಂದ ಉತ್ಪತ್ತಿಯಾಗುವ ವಿದ್ಯುತ್​​ನ್ನು 8 ಇಂಡಕ್ಷನ್ ಒಲೆ, ಲೈಟಿಂಗ್, ಪ್ರೊಜೆಕ್ಟರ್, ಮ್ಯೂಸಿಕ್ ಸಿಸ್ಟಮ್ ಹಾಗೂ ಎಸಿಗೆ ಬಳಸಲಾಗುತ್ತಿದೆ.

ಕೆರೆ ಸ್ವಚ್ಛತೆಗೆ ಹಾನಿಯಿಲ್ಲ

ಈ ರೆಸ್ಟೋರೆಂಟ್​​ಗೆ ಯಾವುದೇ ಮೋಟಾರ್ ಅಳವಡಿಸಿಲ್ಲ. ಯಾವುದೇ ಶೌಚಾಲಯವಾಗಲಿ, ವಾಷ್​​ಬೆಸಿನ್​​​​ ಆಗಲಿ ಇಲ್ಲ. ಗ್ರಾಹಕರಿಗೆ ಕೈತೊಳೆಯಲು ಫಿಂಗರ್ ಬೌಲ್ ನೀಡಲಾಗುತ್ತದೆ. ಹೊರಗಡೆಯಿಂದ ಅಡುಗೆ ಮಾಡಿ ತಂದು ಇಲ್ಲಿ ಬಿಸಿ ಮಾಡಿ ಗ್ರಾಹಕರಿಗೆ ನೀಡಲಾಗುತ್ತದೆ. ಇದೆಲ್ಲವೂ ಕೆರೆಯ ಸ್ವಚ್ಛತಾ ದೃಷ್ಟಿಯಿಂದ ಮಾಡಲಾಗಿದೆ.

ಕೇವಲ ಪಿಲ್ಲರ್​​ಗಳ ಸಹಾಯದಿಂದ ನೀರಿನ ಮೇಲೆ ತೇಲುತ್ತಿರುವ ಈ ರೆಸ್ಟೋರೆಂಟ್​​ನ ತ್ಯಾಜ್ಯ ವಿಲೇವಾರಿಗೆ ಯಾವುದೇ ಸ್ವಯಂಚಾಲಿತ ವ್ಯವಸ್ಥೆ ಇಲ್ಲ. ಇಲ್ಲಿನ ಸಿಬ್ಬಂದಿಯೇ ತ್ಯಾಜ್ಯವನ್ನು ಶುಚಿಗೊಳಿಸುತ್ತಾರೆ.

ರೆಸ್ಟೋರೆಂಟ್​​ನ ತಳಪಾಯ ಕೇವಲ 8 ಇಂಚುಗಳಷ್ಟು ಮಾತ್ರ ನೀರಿನ ಒಳಗಿದ್ದು, ಅದಕ್ಕೆ 6ಎಂಎಂ ಮರೇನ್​​ಗ್ರೇಡ್ ಉಕ್ಕನ್ನು ಬಳಸಲಾಗಿದೆ. ಹೋಟೆಲ್​​ನ ಹೊರಾಂಗಣವನ್ನು 20 ಟನ್ ಉಕ್ಕು ಹಾಗೂ ಒಳಾಂಗಣವನ್ನು ತೇಗದ ಮರದಿಂದ ವಿನ್ಯಾಸ ಮಾಡಲಾಗಿದೆ. ನಾವು ಬಳಸಿರುವ ಉಕ್ಕಿನಿಂದ ಕೆರೆಯ ನೀರಿಗೆ ಹಾಗೂ ಅದರಲ್ಲಿನ ಜಲಚರಗಳಿಗೆ ಯಾವುದೇ ಅಪಾಯವಿಲ್ಲ.

ಐಟಿ ಬಿಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟಿಕೊಂಡು ಬರೀ ಪಾರ್ಟಿ ಹಾಲ್ ಮಾಡುವ ಯೋಚನೆ ಮಾಲೀಕರಿಗಿತ್ತು. ನಂತರದ ದಿನಗಳಲ್ಲಿ ರೆಸ್ಟೋರೆಂಟ್ ಮಾಡುವ ಯೋಚನೆ ಹೊಳೆದು ನಿರ್ಮಾಣ ಮಾಡಲಾಗಿದೆ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ತಯಾರಾಗಿರುವ ಇದಕ್ಕೆ ಈಗಾಗಲೇ ಎರಡು ಅಂತಸ್ತಿನಲ್ಲಿ ರೆಸ್ಟೋರೆಂಟ್ ನಿರ್ಮಿಸಲು ಅನುಮತಿ ಸಿಕ್ಕಿದೆ. ಆದ್ದರಿಂದಲೇ ಇದರ ತಳಪಾಯವನ್ನು ಎರಡು ಅಂತಸ್ತಿಗೆ ಬೇಕಾದಂತೆ ನಿರ್ಮಿಸಲಾಗಿದೆ. ಹೀಗಾಗಿಯೇ ಇಲ್ಲಿ 500 ಜನರು ಒಮ್ಮೆ ಬಂದರೂ ರೆಸ್ಟೋರೆಂಟ್ ಅಲುಗಾಡುವುದಿಲ್ಲ. ಒಟ್ಟಾರೆ 50 ಟನ್ ತೂಕ ತಡೆದುಕೊಳ್ಳುವ ಸಾಮರ್ಥ್ಯವಿದೆ.

ಸದ್ಯಕ್ಕೆ ಐಟಿ ಕಂಪೆನಿಗಳು ಹಾಗೂ ಇತರೆ ಕಂಪೆನಿಗಳ ಸಭೆ, ಸಮಾರಂಭ, ಸಮ್ಮೇಳನ ಹಾಗೂ ಪ್ರಸೆಂಟೇಷನ್​​ಗಳಿಗೆ ಹಾಗೂ ಕಿಟ್ಟಿ ಪಾರ್ಟಿ, ಹುಟ್ಟಿದ ಹಬ್ಬದ ಸಮಾರಂಭ ಸೇರಿದಂತೆ 150 ಮಂದಿ ಬರುವ ಸಮಾರಂಭಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಖಾಸಗಿ ಸಂಸ್ಥೆಗಳ ಸಭೆಗಳಿಗಾಗಿ ಪ್ರೊಜೆಕ್ಟರ್, ಮೈಕ್, ಸೌಂಡ್ಸಿಸ್ಟಮ್ ಎಲ್ಲ ವ್ಯವಸ್ಥೆ ಇದೆ.

ಸಭೆ ಸಮಾರಂಭಗಳಿಗೆ 25 ರಿಂದ 30 ಸಾವಿರ ರೂಪಾಯಿಗಳನ್ನು ಚಾರ್ಜ್ ಮಾಡಲಾಗುವುದು ಸಭೆ ಸಮಾರಂಭಗಳನ್ನು ಬೆಳಿಗ್ಗೆ 9.30ರಿಂದ ಸಂಜೆ 5.30ರ ವರೆಗೆ ನಡೆಸಬಹುದು.

ವಿಕೇಂಡ್​​ಗಳಲ್ಲಿ ಲುಂಬಿನಿ ಗಾರ್ಡನ್​​​ಗೆ ಬರುವ ಜನರಿಗೆ ಮಾತ್ರ ಈ ರೆಸ್ಟೋರೆಂಟ್ ಮೀಸಲು. ಸಂಜೆ 7.30ರಿಂದ 10.30ರವರೆಗೆ ಸಸ್ಯಾಹಾರ ಹಾಗೂ ಮಾಂಸಾಹಾರದ ಬಫೆ ದೊರೆಯುತ್ತದೆ. ಒಂದೊಂದು ವಾರ ಒಂದೊಂದು ರೀತಿಯ ಬಫೆ ಇಲ್ಲಿ ಲಭ್ಯವಿರುತ್ತದೆ. ಬೆಳಿಗ್ಗೆ 11ರಿಂದ 5.30ರವರೆಗೆ ಸ್ನ್ಯಾಕ್ಸ್, ಕಾಫಿ, ಬಿರಿಯಾನಿ ಹೀಗೆ ಮಿನಿ ಕಾಫಿ ಶಾಪ್ ಇರುತ್ತದೆ. ಜನರ ಪ್ರತಿಕ್ರಿಯೆಯ ಆಧಾರದ ಮೇಲೆ ಬರುವ ಎಲ್ಲ ರಜಾ ದಿನಗಳಲ್ಲೂ ಬಫೆ ವ್ಯವಸ್ಥೆಯನ್ನು ವಿಸ್ತರಿಸುವ ಆಲೋಚನೆ ಮಾಲೀಕರಿಗೆ ಇದೆ.


Related Stories